ಇಂದು ಜಯಂತಿ
ಚಂದನವನದಲ್ಲಿ ಹಾಸ್ಯ ಚಕ್ರವರ್ತಿ ಎಂದೇ ಗುರುತಿಸಿಕೊಂಡಿದ್ದ ನರಸಿಂಹ ರಾಜು ಅದ್ಭುತ ಹಾಸ್ಯಕಲಾವಿದರು ಮತ್ತು ನಿರ್ಮಾಪಕರು . ಇವರು ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಗೆ ನೀಡಿರುವ ಕೊಡುಗೆ ಅಪಾರ. ನರಸಿಂಹ ರಾಜು ಅವರು ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರಿಂದ ಸೈ ಎನಿಸಿಕೊಂಡಿದ್ದಾರೆ. ಇಂದು ಅವರ ಜಯಂತಿ.


ಪರಿಚಯ
ನರಸಿಂಹ ರಾಜು ಅವರು ಜುಲೈ 24, 1923 ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು. ಇವರ ತಂದೆ ರಾಮರಾಜು ಹಾಗೂ ತಾಯಿ ವೆಂಕಟಲಕ್ಷ್ಮಮ್ಮ. ನರಸಿಂಹರಾಜು ಅವರು ಬಾಲ್ಯದಲ್ಲೇ ಅಭಿನಯಕ್ಕೆ ಬಂದವರು. ಕೊನೆಗೆ ಇವರ ಜೀವನವೇ ಕಲೆಗಾಗಿ‌ ಎನ್ನುವಷ್ಟರ ಮಟ್ಟಿಗೆ ಮಾರ್ಪಟ್ಟಿತ್ತು.


ವೃತ್ತಿ ಜೀವನ
ನರಸಿಂಹ ರಾಜು ಅವರು ನಾಲ್ಕು ವರ್ಷವಿದ್ದಾಗಲೇ ರಂಗಭೂಮಿಗೆ ಪ್ರವೇಶ ನೀಡಿದರು. ಅವರು ಕಡುಬಡತನವಿದ್ದ ಕಾರಣ ಚಿಕ್ಕಪ್ಪ ಲಕ್ಷ್ಮೀಪತಿರಾಜು ಅವರು ತಿಪಟೂರಿಗೆ ಪ್ರವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಸಿ.ಬಿ ಮಲ್ಲಪ್ಪನವರು ನಡೆಸುತ್ತಿದ್ದ ಚಂದ್ರಮೌಳೇಶ್ವರ ನಾಟಕದ ಕಂಪನಿಗೆ ಸೇರಿಸಿದರು. ಈ ವೇಳೆ ಅವರು ನರಸಿಂಹರಾಜು ಅವರಿಗೆ ಪ್ರಹ್ಲಾದ, ಲೋಹಿತಾಶ್ವ, ಕೃಷ್ಣ ಎಂಬ ಪಾತ್ರಗಳ ಬಗ್ಗೆ ವಿವರಿಸಿದರು. ನಟನೆಯನ್ನು ಆಸಕ್ತಿಯಿಂದ ಕಲಿತ ನರಸಿಂಹರಾಜು ಅವರು ಮುಂದೆ ತಮ್ಮದೇಯಾದ ನಾಟಕ ತಂಡವೊಂದನ್ನು ರಚಿಸಿದರು. ಹಲವು ಪೌರಾಣಿಕ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಮುಂದೆ ಹೋಗುತ್ತಿದ್ದಂತೆ ಅವರಿಗೆ ತುಂಬಾ ನಷ್ಟ ಉಂಟಾಗಿದ್ದರಿಂದ ತಮ್ಮ ನಾಟಕ ತಂಡವನ್ನು ನಡೆಸುವುದಕ್ಕಾಗದೆ ಎಡಥೋರಿ ಡ್ರಾಮಾ ಕಂಪನಿಗೆ ಸೇರಿದರು. ಅವರು ನಾಟಕದ ಮೂಲಕ ಪೌರಾಣಿಕ ವಿಶ್ವಾಮಿತ್ರ, ರಾಮ, ರಾವಣ ಮತ್ತು ಭರತ ಸೇರಿದಂತೆ  ಸ್ತ್ರೀವೇಷವನ್ನೂ ಧರಿಸಿ ನಟಿಸಿದ್ದರು. ಅವರು ತಮ್ಮ 27ವರ್ಷ ವೃತ್ತಿಜೀವನವನ್ನು ನಾಟಕ ಕಂಪನಿಗಳಲ್ಲಿ ಕಳೆದರು.“ಶ್ರೀ ಚಂದ್ರಮೌಳೇಶ್ವರ ನಾಟಕ ಸಭಾ”, “ಹಿರಣ್ಣಯ್ಯ ಮಿತ್ರ ಮಂಡಳಿ”,“ಭರತ ಲಲಿತ ಕಲಾ ಸಂಘ”, ಬೇಲೂರಿನ ಗುಂಡ ಜೋಯಿಸರ ಕಂಪನಿ, ಗುಬ್ಬಿ “ಚನ್ನಬಸವೇಶ್ವರ ನಾಟಕ ಕಂಪನಿ” ಹೀಗೆ ಬೇರೆ ಬೇರೆ ಕಂಪನಿಗಳ ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ಅಭಿನಯಿಸುವುದರ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ನಂತರ ಚಲನಚಿತ್ರಗಳಲ್ಲಿ ಭಾರೀ ಮನ್ನಣೆ ಸಿಕ್ಕಿದ್ದ ಹಿನ್ನೆಲೆಯಲ್ಲಿ ನರಸಿಂಹ ರಾಜು ಅವರು ನಾಟಕ ಕಂಪನಿ ಬಿಟ್ಟು ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.


ಚಂದನವನಕ್ಕೆ ಪ್ರವೇಶ
ನರಸಿಂಹರಾಜು ಅವರು 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ರಾಜ್‌ ಕುಮಾರ್‌ ಜೊತೆಗೆ ದೇವಸ್ಥಾನದ ಅರ್ಚಕರ ಮಗ ‘ಕಾಶಿ’ ಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿದ್ದ ಕಾಲದಿಂದಲೂ ಅವರು ಚಾರ್ಲಿ ಚಾಪ್ಲಿನ್‌ ಅವರಿಂದ ಸ್ಫೂರ್ತಿ ಪಡೆದಿದ್ದರು. ಅಂದಿನ ದಿನಗಳಲ್ಲಿ ನರಸಿಂಹರಾಜು ಮತ್ತು ಬಾಲಕೃಷ್ಣ ಜೋಡಿ ಕನ್ನಡ ಚಿತ್ರಗಳಲ್ಲಿ ಹಾಸ್ಯ ಧಾರೆಯನ್ನೇ ಸೃಷ್ಟಿಸಿದೆ. ನಂತರ ಅವರು ಪ್ರೊಫೆಸರ್ ಹುಚ್ಚುರಾಯ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ನಟಿಸಿದ್ದರು. 1979ರವರೆಗೆ ನರಸಿಂಹರಾಜು ಅವರು ತಮ್ಮ 25 ವರ್ಷಗಳಲ್ಲಿ 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯನಟರಾಗಿ ನಟಿಸಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು.

ಬೇಡರ ಕಣ್ಣಪ್ಪ ಚಿತ್ರದ ಮೂಲಕ ಸಿನೆಮಾದಲ್ಲಿ ನಟಿಸಿದ ಮೊದಲ ಪಾತ್ರದಲ್ಲೇ (ಅರ್ಚಕರ ಮಗ ‘ಕಾಶಿ’) ಜನಮನವನ್ನು ಗೆದ್ದಿದ್ದರು ನರಸಿಂಹರಾಜು ಅವರು. ಕೃಷ್ಣದೇವರಾಯ ಚಿತ್ರದಲ್ಲಿ ‘ತೆನಾಲಿ ರಾಮಕೃಷ್ಣ’, ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ‘ನಕ್ಷತ್ರಿಕನ’ ಪಾತ್ರ , ನಕ್ಕರೆ ಅದೇ ಸ್ವರ್ಗ ಚಿತ್ರ ಸೇರಿದಂತೆ ಹಲವು ಪಾತ್ರಗಳು ಇಂದಿಗೂ ಸಿನಿಪ್ರಿಯರಲ್ಲಿ ಅಚ್ಚಳಿಯದೇ ಉಳಿದಿದೆ.

ಇವರ ಪುತ್ರಿ ಸುಧಾ ನರಸಿಂಹರಾಜು ಮತ್ತು ಮೊಮ್ಮಗ ಅವಿನಾಶ್ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ನರಸಿಂಹರಾಜು ಅವರಿಗೆ ಮಗ ಅಪಘಾತದಲ್ಲಿ ನಿಧನರಾಗಿದ್ದರಿಂದ ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು. ನರಸಿಂಹರಾಜು ಅವರು ಜುಲೈ 11, 1979ರಂದು ಹೃದಯಾಘಾತದಿಂದ ತಮ್ಮ 56ನೇ ವಯಸ್ಸಿನಲ್ಲಿ ನಿಧನರಾದರು. ನರಸಿಂಹರಾಜು ಮರಣದ ನಂತರ ಅವರ ನೆನಪಿಗಾಗಿ ಸಿನಿಮಾರಂಗದಲ್ಲಿ ನರಸಿಂಹರಾಜು ಪ್ರಶಸ್ತಿ ನೀಡಲಾಗುತ್ತಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.