
– ಡಾ. ಮೈತ್ರಿ ಭಟ್, ವಿಟ್ಲ, ದಕ್ಷಿಣ ಕನ್ನಡ ಜಿಲ್ಲೆ.
ಭಾರತದ ಕೇಂದ್ರವಿರುವುದು ಧಾರ್ಮಿಕತೆಯಲ್ಲಿಯೇ. ಈ ಎಳೆಯೇ ನೂರಾರು ವೈವಿಧ್ಯಗಳನ್ನು ಒಂದು ಸೂತ್ರವಾಗಿ ಬೆಸೆದಿಟ್ಟಿರುವುದು. ಅದಕ್ಕೆ ಪೂರಕವೆಂಬಂತೆ ಇಲ್ಲಿ ಆಗಿ ಹೋದ ಸಂತರು ಸಮಾಜ ಸುಧಾರಣೆಯ ಹರಿಕಾರರಾಗಿ ಹೊಸ ಭಾಷ್ಯವನ್ನು ಬರೆದಿದ್ದಾರೆ. ತಾವು ವಾಸಿಸುತ್ತಿದ್ದ ಸಾಮಾಜಿಕ ಪರಿಸ್ಥಿತಿಗಳಿಂದ ಪ್ರಭಾವಿತರಾಗಿ, ತಮ್ಮ ಬದುಕಿನ, ಜೀವಿತದ ಉದ್ದೇಶವನ್ನು ಅರಿತುಕೊಂಡು ಆ ಉದ್ದೇಶದ ಸಾಕಾರಕ್ಕಾಗಿಯೇ ತಮ್ಮ ಜೀವಿತವನ್ನು ಮುಡಿಪಾಗಿಟ್ಟು, ತಮ್ಮ ಚಿಂತನೆ, ಪ್ರತಿಭೆ, ಸಾಧನೆಗಳ ಮೂಲಕ ಪರಿವರ್ತನೆಯ ಪರ್ವವೊಂದಕ್ಕೆ ಕಾರಣರಾಗಿ ಆದರ್ಶರಾಗಿದ್ದಾರೆ. ಧರ್ಮದ ಪುನರ್ ಸ್ಥಾಪನೆಗಾಗಿ, ನೈತಿಕತೆಯ ಪುನರುತ್ಥಾನಕ್ಕಾಗಿ ಮಾನವತೆಯ ಮೂಲಕ ಸಮಾಜದ ಓರೆಕೋರೆಗಳನ್ನು ಪರಿಹರಿಸುವುದಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಹೀಗೆ ಸಮಕಾಲೀನ ಸಂದರ್ಭಗಳಲ್ಲಿ ಜಡ್ಡುಗಟ್ಟಿ ಜಡವಾಗಿದ್ದ ಸಮಾಜದಲ್ಲಿ ನವ ಚೈತನ್ಯದ ಹೊನಲು ಹರಿಯುವಂತೆ ಮಾಡಿದ, ಮಡುಗಟ್ಟಿದ್ದ ಕಂದಾಚಾರಗಳನ್ನು, ಅರ್ಥರಹಿತ ಕುರುಡು ನಂಬಿಕೆಗಳನ್ನು, ಅಸ್ಪೃಶ್ಯತೆ ಮೊದಲಾಗಿ ಎಲ್ಲಾ ಬಗೆಯ ತಾರತಮ್ಯಗಳನ್ನು ಖಂಡಿಸಿ ಜನಜಾಗೃತಿಯನ್ನು ಮೂಡಿಸುವ ಮೂಲಕ ಸಮಾಜದ ಮುಂಚಲನೆಗೆ, ಸುಧಾರಣೆಗೆ ಕಾರಣರಾದ ಸಂತ ಪರಂಪರೆಯ ಪ್ರಮುಖರಲ್ಲಿ ಶ್ರೀ ನಾರಾಯಣ ಗುರುಗಳೂ ಒಬ್ಬರು. ಮಾತ್ರವಲ್ಲ; ಎಲ್ಲರಿಂದ ವಿಶಿಷ್ಠವಾಗಿ ಗುರುತಿಸಲ್ಟಟ್ಟವರು ಕೂಡಾ.
ಹುಟ್ಟು, ಬಾಲ್ಯ ಮತ್ತು ಜೀವನ
ಹದಿನೆಂಟು-ಹತ್ತೊಂಭತ್ತನೇ ಶತಮಾನದ ವೇಳೆಗೆ ಸಮಾಜದಲ್ಲಿ ಜಾತಿ ತಾರತಮ್ಯ, ಅಸ್ಪೃಶ್ಯತೆ, ಮೌಢ್ಯ, ಶೋಷಣೆಗಳು ತುಂಬಿ ತುಳುಕಾಡುತ್ತಿದ್ದವು. ಆ ಕಾಲಘಟ್ಟದಲ್ಲಿ ಕೇರಳದ ತಿರುವನಂತಪುರದ ಚೆಂಬಳಂತಿಯಲ್ಲಿ ಮಾದನ್ ಆಶಾನ್ ಮತ್ತು ಕುಟ್ಟಿಯಮ್ಮ ದಂಪತಿಗಳ ಮಗನಾಗಿ 1856 ರಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದಿಂದಲೇ ತಮ್ಮ ವಿಭಿನ್ನ ಚಿಂತನಾ ಪ್ರವೃತ್ತಿಯ ಮೂಲಕ ಎಲ್ಲರ ಮನಸೆಳೆಯುತ್ತಿದ್ದ ಮಗುವಿಗೆ ‘ನಾರಾಯಣ’ ಎಂದು ಹೆಸರಿಟ್ಟು ‘ನಾಣು’ ಎಂದು ಕರೆಯತೊಡಗಿದರು. ಬಾಲ್ಯದಿಂದಲೇ ದೀನರ ಬಗೆಗೆ ಅನುಕಂಪ ತೋರುವ ಹೃದಯದೊಂದಿಗೆ, ಹುಟ್ಟು-ಸಾವಿನ ಬಗ್ಗೆಗೆ ಗಂಭೀರವಾಗಿ ಆಲೋಚಿಸುತ್ತಾ, ಏಕಾಂತಪ್ರಿಯನೂ, ಧ್ಯಾನಾಸಕ್ತನೂ, ದಯಾಪರನೂ ಆಗಿ ಬೆಳೆಯತೊಡಗಿದರು. ಅವರ ಮನೆಯ ವಾತಾವರಣ ಅವರ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಿತು. ತಂದೆಗೆ ತಿಳಿದಿದ್ದ ಆಯುರ್ವೇದ ವಿದ್ಯೆ, ಸಂಸ್ಕೃತ ಜ್ಞಾನ, ಜ್ಯೋತಿಷ್ಯಗಳು ಹಾಗೂ ಕಾರುಣ್ಯಮಯಿ ಹಾಗೂ ಬುದ್ಧಿವಂತಳಾಗಿದ್ದ ತಾಯಿಯ ಗುಣಗಳು ನಾರಾಯಣ ಗುರುಗಳಲ್ಲೂ ಕಾಣಿಸಿಕೊಂಡದ್ದು ಸಹಜವೇ ಆಗಿತ್ತು.
ಸಾಮಾಜಿಕ ಪರಿವರ್ತನೆಯ ಪಥ
‘ಹುಟ್ಟುತ್ತಲೇ ಇನ್ನೊಬ್ಬರನ್ನು ಚರ್ಮದ ಬಣ್ಣಕ್ಕಾಗಿಯೋ, ಧರ್ಮಕ್ಕಾಗಿಯೋ ಸಮಾಜದಲ್ಲಿ ದ್ವೇಷಿಸಲು ಕಲಿಸುವುದು ಸಾಧ್ಯವಾಗುವುದಾದರೆ ಪ್ರೀತಿಸಲು, ಪೂಜಿಸಲು, ಸಹೋದರತ್ವದಿಂದಲೂ ಬಾಳುವುದನ್ನು ಕಲಿಸುವುದು ಸಾಧ್ಯವಿದೆ. ಏಕೆಂದರೆ ಮನುಷ್ಯನ ಮನಸ್ಸಿಗೆ ದ್ವೇಷಕ್ಕಿಂತಲೂ ಪ್ರೀತಿ ಸ್ವಾಭಾವಿಕವಾದದ್ದು ಮತ್ತು ಶಕ್ತಿಯುತವಾದುದು. ಇದನ್ನು ಅರಿತಾಗ ಬಾಳು ಬೆಳಗುವುದು’ ಎಂಬುದನ್ನು ಗುರುಗಳು ಕಂಡುಕೊಂಡರು.
ದೇವಸ್ಥಾನ ನಿರ್ಮಾಣ
ಯಾವ ಜನರಿಗೆ ದೇವಸ್ಥಾನಕ್ಕೆ ಪ್ರವೇಶ ಇರಲಿಲ್ಲವೋ ಅಂತಹ ಜನರಿಗಾಗಿ ಅವರೇ ದೇವಸ್ಥಾನವನ್ನು ನಿರ್ಮಿಸಿದರು. ‘ದೇವರು, ದೇವಸ್ಥಾನ ಯಾರೊಬ್ಬರ ಸೊತ್ತು ಕೂಡಾ ಅಲ್ಲ. ಭಕ್ತಿಯಿಂದ ಯಾರೇ ಪೂಜಿಸಿದರೂ ದೇವರ ಸಾಕ್ಷಾತ್ಕಾರವಾಗುತ್ತದೆ’ ಎಂದು ನುಡಿದರು. ‘ನಾವು ಬದಲಾಗಲು ಸಿದ್ಧವಾಗುವ ಕ್ಷಣದವರೆಗೆ ಇತರರಿಂದ ಅಪೇಕ್ಷೆ ಸಲ್ಲದು. ನಾವು ಪರಿಶುದ್ಧರಾದಾಗ ಜಗತ್ತು ಪರಿಶುದ್ಧವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಸಾರಿದರು. ಸಂತನ ಉಡುಪನ್ನು ಧರಿಸದೆ, ಶಿಷ್ಯರಿಗೆ ದೀಕ್ಷೆಯನ್ನೂ ನೀಡದೆ, ಜ್ಞಾನ ಪ್ರದರ್ಶನದ ಕಠಿಣ ಗ್ರಂಥಗಳನ್ನೂ ಬರೆಯದೆ, ಪವಾಡ ಮಾಡದೆ ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕವೇ ಎಲ್ಲರ ಮನಸ್ಸನ್ನೂ ಸೆಳೆದರು.
‘ಗರ್ಭಗುಡಿಯಲ್ಲಿ ಮೂರ್ತಿ ಇರಲೇಬೇಕೆ? ಮೂರ್ತಿಯ ಬದಲು ಒಂದು ದೀಪವನ್ನಿಡಿ. ಬೆಳಕನ್ನು ಕೊಡುವ ದೀಪದಲ್ಲಿ ದೇವರನ್ನು ಕಾಣಬಹುದು. ಕತ್ತಲೆಯಿಂದ ಬೆಳಕಿನತ್ತ ಸಾಗೋಣ’ ಎಂಬ ತತ್ವ ಸಂದೇಶ ಸಾರುವ ‘ದೀಪಂ’ ದೇವಸ್ಥಾನಗಳನ್ನು ಮತ್ತು ‘ಓಂ’ ಎನ್ನುವ ಓಂಕಾರ ಮಂತ್ರ ಸಾರುವ ದೇವಸ್ಥಾನವನ್ನು ಕಟ್ಟಿಸಿದರು. ಇಂತಹ ದೇವಾಲಯಗಳು ಸಮಾಜ ಸುಧಾರಣಾ ಮಂದಿರ, ಪುನರುತ್ಥಾನ ಶಕ್ತಿ ಕೇಂದ್ರ, ಜ್ಞಾನ ಭಂಡಾರವೆನಿಸಿಕೊಂಡವು.
‘ದೇವಾಲಯವು ಉಸಿರುಗಟ್ಟಿಸುವ ವಾತಾವರಣವಾಗುವ ಬದಲು ಸುತ್ತ ಹೂಗಿಡಗಳು ಮತ್ತು ಫಲಬಿಡುವ ಮರಗಳಿಂದ ಕೂಡಿರಬೇಕು. ಪ್ರತಿಯೊಂದು ಮರಕ್ಕೂ ಕಟ್ಟೆಯಿದ್ದು ಜನ ಅದರ ಸುತ್ತಲೂ ಕುಳಿತು ಗಾಳಿ ಸೇವನೆ ಮಾಡಲು ಅವಕಾಶ ಇರಬೇಕು’ ಎಂದು ಹೇಳಿದರು. ಹೀಗೆ ದೇವಸ್ಥಾನ-ಪರಿಸರ ಮತ್ತು ಆರೋಗ್ಯದ ಮಧ್ಯೆ ಒಂದು ಉತ್ತಮ ಬಾಂಧವ್ಯ ಬೆಸೆಯಲು ಯತ್ನಿಸಿದರು.
ಎಲ್ಲರೂ ಒಂದೇ
‘ಜಾತಿ ಯಾವುದಾದರೇನು? ಮನುಷ್ಯ ಮಾತ್ರ ಒಳ್ಳೆಯವನಾಗಿದ್ದರೆ ಸಾಕು. ಮೇಲು-ಕೀಳುಗಳೆಂಬುದು ಇಲ್ಲ. ಹಾಗೇನಾದರೂ ಇದ್ದರೆ ಅದು ಭೇದ ಬಗೆಯುವ ಮನಸ್ಸು ಮಾತ್ರ’ ಎನ್ನುತ್ತಾ ಕಾಲಕ್ಕೆ ತಕ್ಕಂತೆ ಮನುಷ್ಯನ ಆಲೋಚನೆಗಳು ಬದಲಾಗಬೇಕಾದ ಸತ್ಯವನ್ನು ಮನಗಾಣಿಸಿದರು. ‘ಧರ್ಮವು ಯಾರೊಬ್ಬನ ಸ್ವತ್ತೂ ಅಲ್ಲ’ ಎಂದು ಹಿಂದೂ ಧರ್ಮ ಬಿಟ್ಟು ಹೊರಹೋದವರನ್ನು ಮರಳಿ ಹಿಂದೂಗಳಾಗಿ ಪರಿವರ್ತಿಸಿದರು. ‘ಯಾರು ಯಾವ ಮತದಲ್ಲಿ ನೆಮ್ಮದಿ ಕಾಣುತ್ತಾರೋ ಅ ಮತವನ್ನು ಸ್ವೀಕರಿಸುವುದರಲ್ಲಿ ಯಾವ ತಪ್ಪೂ ಇಲ್ಲ’ ಎಂದರು. ‘ಜಾತಿಯ ಬಗ್ಗೆ ಕೇಳದಿರು, ಹೇಳದಿರು, ಯೋಚಿಸದಿರು’ ಎಂದು ಉಪದೇಶಿಸಿದರು.
ಮದ್ಯ ನಿಷೇಧ
ದೇವರು-ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ, ದುಂದುವೆಚ್ಚ, ಕುಡಿತದ ಮತ್ತಿನ ಬಗ್ಗೆ ತಿಳಿದ ಗುರುಗಳು ‘ಮದ್ಯವೆಂಬ ವಿಷವನ್ನು ಉತ್ಪಾದಿಸಬೇಡಿ, ಮಾರಬೇಡಿ, ಕುಡಿಯಬೇಡಿ. ಕುಡಿತದಿಂದ ವಿವೇಚನಾ ಶಕ್ತಿ ಕುಂದಿ ಆರೋಗ್ಯ ಹದಗೆಟ್ಟು ಮನುಷ್ಯ ಪಶುವಾಗುವ ಕಾರಣ ಕುಡಿತದಿಂದ ಹೊರಬನ್ನಿ’ ಎಂದು ಸಾರಿದರು. ‘ನಮ್ಮ ಕೆಲಸ ಕಾರ್ಯಗಳು ನಮ್ಮಂತೆ ಇತರರಿಗೂ ಹಿತಕಾರಿಯಾಗಿರಬೇಕು. ತನ್ನಂತೆ ಇತರರಿಗೂ ಹಿತ ಬಯಸುವುದೇ ನಿಜವಾದ ಸಮಾಜಸೇವೆ’ ಎಂದರು.
ಸರಳ ವಿವಾಹ
ಮದುವೆಯ ದುಂದುವೆಚ್ಚದ ಆಡಂಬರಗಳನ್ನು ಬಿಟ್ಟು, ಸರಳ ಧಾರ್ಮಿಕ ವಿಧಿ ಮತ್ತು ವಿಧಾನಗಳಿಂದ ಆಚರಿಸಲು ಕರೆ ಕೊಟ್ಟರು. ಅಂತಃಧರ್ಮೀಯ ವಿವಾಹಕ್ಕೆ ಪ್ರೋತ್ಸಾಹವನ್ನು ನೀಡುತ್ತಾ, ಪುನರ್ ವಿವಾಹಕ್ಕೂ ಮನ್ನಣೆಯನ್ನಿತ್ತರು.
ಸಾಮೂಹಿಕ ಸಹಕಾರ ಮತ್ತು ಒಗ್ಗಟ್ಟಿನ ಮನೋಭಾವವನ್ನು ಮೂಡಿಸಿ ಸಂಘಟಿಸುವುದು ಹೇಗೆ ಎಂಬ ಅರಿವನ್ನು ಮೂಡಿಸಿದರು. ಅವರು ಎಂದಿಗೂ ಯಾವುದೇ ಮತವನ್ನಾಗಲಿ, ಮತದ ಗ್ರಂಥಗಳನ್ನಾಗಲೀ ಟೀಕಿಸಲಿಲ್ಲ. ಅವುಗಳ ಆಳ ಅಧ್ಯಯನದ ಮೂಲಕ ಮಾನವ ಒಳ್ಳೆಯವನಾಗಿ ಬದುಕಲಿ ಎಂದಷ್ಟೇ ಆಶಿಸಿದರು.
ತನ್ನ ಬದುಕು ಮತ್ತು ಬೋಧನೆಗಳ ಮೂಲಕ ಸಾಮಾಜಿಕ ಸುಧಾರಣೆಯನ್ನು ನಡೆಸಿದ ಅವರು, ಬದುಕಿಗೆ ದಾರಿದೀಪವಾದರು.
‘ಪ್ರತಿಯೊಬ್ಬರು ಸಮಾಜದಲ್ಲಿ ಬದುಕಲು ಸದಾ ಒಳ್ಳೆಯದನ್ನೇ ಮಾಡಿ. ಯಾರಿಗೂ ನೋಯಿಸಬೇಡಿ. ನಿಮ್ಮನ್ನು ನೀವು ಗೌರವಿಸಿಕೊಳ್ಳಿ, ಕ್ಷಮಿಸುವ ಗುಣ ಬೆಳೆಸಿಕೊಳ್ಳಿ. ಸಕಾರಾತ್ಮಕ ಯೋಚನೆ ಮಾಡಿರಿ’ ಎಂಬ ನಾರಾಯಣ ಗುರುಗಳ ಬದುಕು ನೀಡಿದ ಸಂದೇಶ ಇಂದಿಗೂ ಮೌಲ್ಯಯುತವಾಗಿದೆ.
ಯಾವಾಗಲೂ ದೀನರ, ಶೋಷಿತರ, ಹಿಂದುಳಿದವರ ಅಸ್ಪೃಶ್ಯರಿಗಾಗಿ ಮಿಡಿಯುವ ಹೃದಯವನ್ನು ಹೊಂದಿದ ಇವರು ಮೌನ ಕ್ರಾಂತಿಯನ್ನು ಮಾಡಿದರು. ಸಮಾಜದ ಆರ್ಥಿಕ ಮತ್ತು ನೈತಿಕ ಅಧಃಪತನಕ್ಕೆ ದಾರಿ ಮಾಡಿಕೊಟ್ಟಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿದರು. ಕೇರಳದ ಶೋಷಿತ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳ ಪುನರುತ್ಥಾನ ಮತ್ತು ಹಕ್ಕುಗಳಿಗಾಗಿ ಹೋರಾಟವನ್ನು ನಡೆಸಿ ಸಾಮಾಜಿಕ ಸುಧಾರಣೆಯ ಕ್ರಾಂತಿಯ ಕಹಳೆಯನ್ನು ಊದಿದರು.
ಶಿಕ್ಷಣಕ್ಕೆ ಆದ್ಯತೆ
ಯಾವುದೇ ಪವಾಡಗಳನ್ನು ನಡೆಸದೆ ಎಲ್ಲರೊಡನೆ ಒಂದಾಗಿ ಬೆರೆತು ಬಾಳಿದ ಗುರುಗಳು ‘ಮಾನವನನ್ನು ನವ ನಾಗರೀಕನನ್ನಾಗಿ ಮಾಡುವ ವಿಶಿಷ್ಟ ಸಾಧನ ಶಿಕ್ಷಣ. ಅದೊಂದೇ ಪ್ರಗತಿಯ ಅಡಿಗಲ್ಲು. ಶಿಕ್ಷಣದ ಮೂಲಕ ವಿನಯ, ವಿನಯದಿಂದ ಸಂಸ್ಕಾರ, ಸಂಸ್ಕಾರದಿಂದ ಸಮೃದ್ಧಿ, ಸಮೃದ್ಧಿಯಿಂದ ಸಹನೆ, ಸಹನೆಯಿಂದ ಸಹಬಾಳ್ವೆ ಬೆಳೆಯುವುದು. ಜ್ಞಾನ ವಿಕಾಸವಾದರೆ ಮಾತ್ರ ನಮ್ಮ ಸಮಾಜದಲ್ಲಿ ಬೇರು ಬಿಟ್ಟಿರುವ ಅನಿಷ್ಟಗಳ ನಿವಾರಣೆ ಸಾಧ್ಯ. ಆಗ ಭೀತಿ ನಾಶವಾಗಿ ಸಂತೋಷ ಮೂಡುವುದು. ಆದುದರಿಂದ ಜ್ಞಾನ ಸಂಪಾದನೆಯ ಹಾದಿಯಲ್ಲಿ ನಾವು ಸಾಗಬೇಕು’ ಎಂಬ ನಿಲುವನ್ನು ಸದಾ ಬೆಂಬಲಿಸಿದರು.
‘ಶಿಕ್ಷಣ ಎನ್ನುವುದು ಕೇವಲ ಓದು ಬರಹದ ಅರಿವಲ್ಲ. ಔದ್ಯೋಗಿಕ ಕ್ರಾಂತಿಯು ಕೂಡಾ ಶೈಕ್ಷಣಿಕ ರಂಗದ ಸಫಲತೆಗೆ ಕಾರಣವಾಗಬಲ್ಲುದು’ ಎಂಬುದನ್ನು ಅರಿತು ಗುಡಿ ಕೈಗಾರಿಕೆಗಳ ತರಬೇತಿಯನ್ನು ಆರಂಭಿಸಿದರು. ಇವೆಲ್ಲವನ್ನೂ ಗುರುಗಳು ವೈಚಾರಿಕ ಜಾಗೃತಿ, ಆರ್ಥಿಕ ಸ್ವಾವಲಂಬನೆ, ಧಾರ್ಮಿಕ ಸಹೃದಯತೆ ಮತ್ತು ಮಾನವ ಸಮಾನತೆಗಳ ಪರಿಕಲ್ಪನೆಗಳ ಅಡಿಯಲ್ಲಿ ಮಾಡಿದುದನ್ನು ಕಾಣಬಹುದು.
ತ್ರಿಭಾಷಾ ಸೂತ್ರವು ಗುರುಗಳ ಪ್ರಮುಖ ಸೂತ್ರವಾಗಿ ಮಾತೃಭಾಷೆಯಾಗಿ ಮಲಯಾಳಂ, ಧಾರ್ಮಿಕತೆಯ ಅರಿವಿಗಾಗಿ ಸಂಸ್ಕೃತ ಮತ್ತು ಸರಕಾರಿ ವ್ಯವಹಾರಗಳಿಗಾಗಿ ಇಂಗ್ಲೀಷನ್ನು ಕಲಿಯಬೇಕೆಂದು ಸಾರಿದರು. ಶಿಕ್ಷಣ ಕಲಿಯಲು ವಯಸ್ಸಿನ ಮಿತಿ ಇಲ್ಲ ಎನ್ನುತ್ತಾ ವಯಸ್ಕರಿಗಾಗಿ ರಾತ್ರಿ ಶಾಲೆಯನ್ನು ಆರಂಭ ಮಾಡಿದವರಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಇವರು ಮೊದಲಿಗರು ಎನ್ನುವುದು ಇವರು ಶಿಕ್ಷಣ ರಂಗದಲ್ಲಿ ಮಾಡಿದ ಕ್ರಾಂತಿಗೆ ಮಾದರಿ. ಎಲ್ಲರೂ ಒಂದೇ ಸೂರಿನಡಿ ಶಿಕ್ಷಣ ಪಡೆಯುವಂತಾದರೆ ಸಾಮಾಜಿಕ ಅಸಮಾನತೆ ದೂರಾಗುವುದು ಎನ್ನುವುದು ಇವರ ನಂಬಿಕೆ.
ಮಹಿಳೆಯರು ಸಮಾಜದಿಂದ ಕಡೆಗಣನೆಗೆ ಒಳಗಾಗುವುದನ್ನು ವಿರೋಧಿಸುತ್ತಾ, ಹೆಣ್ಣು ಮಕ್ಕಳ ಓದಿಗೂ ಗಮನಹರಿಸಬೇಕಾದ ಅವಶ್ಯಕತೆಯನ್ನು ಸಾರುತ್ತಾ, ‘ಶಿಕ್ಷಣದಿಂದ ಸ್ವತಂತ್ರರಾಗಿರಿ. ಶಿಕ್ಷಣದ ಮೂಲಕ ಮಾತ್ರ ನಮ್ಮ ಸಮಾಜದ ಸುಧಾರಣೆ ಸಾಧ್ಯ. ಜ್ಞಾನವಂತರಾಗಿ ಒಬ್ಬೊಬ್ಬರನ್ನು ಅರಿತು ಬಾಳಿ. ಶಿಕ್ಷಣ ನಮ್ಮ ಬದುಕನ್ನು ಬೆಳಗಬಲ್ಲದು; ಪ್ರಕಾಶಿಸಬಲ್ಲದು’ ಎಂಬ ಅರಿವನ್ನು ಮೂಡಿಸಿದರು.
ಸಮಾಜದ ವರ್ಗಗಳನ್ನೆಲ್ಲಾ ಒಂದೆಡೆ ಸೇರಿಸಿ, ‘ಮಿಶ್ರ ಭೋಜನ’ ಕಾರ್ಯಕ್ರಮವನ್ನು ತಂದರು. ‘ದೇವರ ಸೇವೆಮಾಡಿದರೆ, ತನ್ನದೊಬ್ಬನದೇ ಏಳಿಗೆ, ಉದ್ಧಾರವಾಗಬಹುದು; ಆದರೆ, ದೇಶ ಸೇವೆಮಾಡಿದರೆ, ಹಲವರ ಕಲ್ಯಾಣ ನಿಶ್ಚಯ. ಆದ್ದರಿಂದ ದೇಶಸೇವೆ ಮತ್ತು ಈಶಸೇವೆಗಳ ಸಮನ್ವಯವೇ ನಮ್ಮ ಗುರಿ’ಯಾಗಿರಬೇಕೆಂದು ತಮ್ಮ ಜೀವನದುದ್ದಕ್ಕೂ ಸಾರಿದರು. ಜನರ ನಡುವೆ ಸಹಕಾರ, ಒಗ್ಗಟ್ಟು, ಬೆಳೆಸಿ ಮನಸ್ಸು ಶುದ್ಧವಾಗಿರುವಂತೆ ಪ್ರೇರೇಪಿಸಿ, ಸಂಘಟನೆಯ ರೀತಿ, ಮಹತ್ವಗಳನ್ನು ಅರಿವಿಗೆ ತಂದು ನವಸಮಾಜದ ಹೊಸ ದಿಶೆಗೆ ಮುನ್ನುಡಿಯನ್ನು ಬರೆದರು.
ಹೀಗೆ ಧಾರ್ಮಿಕ ಸುಧಾರಣೆಯ ಮೂಲಕ ಪ್ರಾರಂಭಗೊಂಡ ನಾರಾಯಣ ಗುರುಗಳ ಚಳವಳಿ ಕಾಲ ಸರಿದಂತೆ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದುಕೊಂಡು ಬೆಳೆಯುತ್ತಾ ಹೋಗಿದ್ದು ಗುರುಗಳೇ ರೂಪಿಸಿದ ಕಾರ್ಯ ತಂತ್ರ.
ಒಬ್ಬ ವ್ಯಕ್ತಿಯ ತತ್ವ , ಸಿದ್ಧಾಂತ, ಆದರ್ಶಗಳು ನೆಲೆಯನ್ನು, ಬೆಲೆಯನ್ನು, ಮಹತ್ವವನ್ನು ಪಡೆದುಕೊಳ್ಳುವುದು ಆತನಿರುವ ಕಾಲಕ್ಕಿಂತಲೂ ಆತ ಸಾಗಿ ಹೋದ ಮೇಲೆ ಉಳಿದು ಬಂದಾಗ, ಅವು ಕಾರ್ಯೋನ್ಮುಖಗೊಂಡಾಗ ಮಾತ್ರ. ವ್ಯಕ್ತಿಯ ತತ್ವ, ಆದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದೆನಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ; ಸಾರ್ವಕಾಲಿಕ ಮೌಲ್ಯವಾಗಿ ಬದಲಾಗುತ್ತದೆ. ಕಾಲವು ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ಕಾಲಕ್ಕೆ ತಕ್ಕಂತೆ ತತ್ವಗಳು ಬದಲಾವಣೆಗೊಳ್ಳುವುದು ಸಹಜ. ಹೀಗಿರುವಾಗ, ನಾರಾಯಣ ಗುರುಗಳ ಮೂಲಕ ಆರಂಭಗೊಂಡ ಆಂದೋಲನ ಇಂದಿಗೂ ಮುಂದುವರಿಯುತ್ತಾ ಬಂದಿದೆ. ಮಾತ್ರವಲ್ಲ, ಇಡೀ ವಿಶ್ವವನ್ನೇ ಜಾತಿ, ಧರ್ಮ, ವ್ಯಕ್ತಿಕೇಂದ್ರಿತ ಚಿಂತನೆಗಳು ಕದಡುತ್ತಿರುವ ಈ ಹೊತ್ತಿನಲ್ಲಿ ಗುರುಗಳ ವಿಶ್ವಪ್ರಜ್ಞೆ ಅಗತ್ಯ ಎಚ್ಚರವೇ ಆಗಿದೆ.
(ರಾಷ್ಟ್ರ ಸೇವಿಕಾ ಸಮಿತಿಯ ‘ಸಮಿತಿ ಸಂವಾದ’ ದಲ್ಲಿ ಪ್ರಕಟಿತ ಲೇಖನ)