– ಜಯಶ್ರೀ ಆರ್ಯಾಪು
ಬಾಲ್ಯದಲ್ಲಿ ಓದಲಾರಂಭಿಸಿದ ಪರಿಸರ ಅಧ್ಯಯನ ಪಠ್ಯ ಪುಸ್ತಕದಿಂದ ಹಿಡಿದು ಪದವಿಯ ನಂತರದ ಸಮಾಜಶಾಸ್ತ್ರದ ಅಧ್ಯಯನ ಸೇರಿದಂತೆ ಇನ್ನೂ ಅನೇಕ ಪುಸ್ತಕಗಳಲ್ಲಿ ಮನುಷ್ಯ ಸಂಘ ಜೀವಿ ಎನ್ನುವ ವಿವರಣೆಯನ್ನು ನಾವು ಇಂದಿಗೂ ನೋಡಬಹುದು. ಈ ಮಾತು ಅಕ್ಷರಶಃ ಸತ್ಯ ಕೂಡ. ಆದ್ರೆ ಪ್ರಚಲಿತ ವಿದ್ಯಮಾನದಲ್ಲಿ ತಾಂತ್ರಿಕತೆ ಹಾಗೂ ಬುದ್ದಿಮತ್ತೆ ಹೆಚ್ಚಾಗಿ ಮನುಷ್ಯ ಒಬ್ಬಂಟಿಯಾಗಿ ಬಿಟ್ಟಿದ್ದಾನೆ.
ಹಿಂದೆ ಗಂಟೆಗಟ್ಟಲೆ ಮಾತನಾಡುತ್ತಿದ್ದ ವ್ಯಕ್ತಿ ಇಂದಿನ ದಿನ ಅನ್ಲಿಮಿಟೆಡ್ ಡೇಟಾ ಸಿಕ್ಕಿದರೂ ಕೂಡ ಮೌಖಿಕ ಸಂವಹನ ಮಾಯವಾಗಿಸಿ ಸಂದೇಶ ರವಾನೆಗೆ ಸೀಮಿತವಾಗಿದ್ದಾನೆ. ಇದೇ ಕಾರಣದಿಂದ ಇವತ್ತು ಎಲ್ಲರೂ ಹೊಸ ಜನರನ್ನು ಭೇಟಿಯದಾಗ, ಅವರನ್ನು ಮಾತನಾಡಿಸಲು ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಒಬ್ಬಂಟಿ ಎಂದೆನಿಸುವುದು ಸಹಜವೇ. ಈ ಸಮಯ ಮನೆಯಲ್ಲಿ ಮಾತನಾಡಿಸಲು ಸಿಗುವುದು ಮನೆಯಲ್ಲಿರುವ ಮುದ್ದಾದ ಸಾಕು ಪ್ರಾಣಿಗಳು. ತಾನು ಒಳ್ಳೆಯದಾದರೆ ಸಾಕು ಇನ್ನೊಬ್ಬ ಏನಾದರೂ ಆಗಲಿ ಎನ್ನುವ ಜಗದಲಿ ಸಾಕುಪ್ರಾಣಿಗಳು ನೀಡುವ ಪ್ರೀತಿ ಅಮೃತದಂತಿದ್ದು ನಿಸ್ವಾರ್ಥ ಭಾವನೆಯನ್ನು ತೋರುತ್ತದೆ.
ಅದು ಹೇಗೆ ಅಂತ ಕೇಳಿದ್ರೆ, ನಾಯಿಮರಿ ತೋರಿಸುವ ಪುಟ್ಟ ಕಣ್ಣುಗಳಲ್ಲಿ ನೀರಾ ನಡುವೆ ಹೊಳೆಯುವ ಭಾವನೆ, ಅರ್ಥ ಮಾಡಿಕೊಂಡವರಿಗೆ ಮಾತ್ರ ಅರಿವಾಗುತ್ತದೆ. ಎಲ್ಲರೂ ಕೈ ಬಿಟ್ಟರು ಅನ್ನುವ ಹೊತ್ತಿಗೆ ತನ್ನ ಮಾಲೀಕ ಮನೆಗೆ ಬಂದರೆ ಅತಿ ಖುಷಿಯಿಂದ ತನ್ನತ್ತ ಕರೆಸಿಕೊಳ್ಳುತ್ತದೆ. ಯಾವುದೇ ಕೆಲಸದ ಒತ್ತಡ ಇರಲಿ, ಅನ್ಯ ಕಾರಣವೇ ಇರಲಿ, ಅದರ ಸಮಯಕ್ಕಾಗುವ ಆಟ ಆಡಿಸಲು, ಸುತ್ತಾಡಿಸಲು ಕರೆದೊಯ್ಯಬೇಕು. ದಿನಪೂರ್ತಿ ವಾಹನದಲ್ಲೇ ಸಂಚರಿಸುವರು ಹೀಗೆ ನಾಯಿ ಜೊತೆ ಸ್ವಲ್ಪ ಹೊತ್ತು ಸುತ್ತಾಡುವುದರಿಂದ ಅವರ ಆರೋಗ್ಯವು ಉತ್ತಮವಾಗುತ್ತದೆ.
ಇನ್ನು ಹೇಳುವುದಾದರೆ, ಮನೆಯಲ್ಲೊಂದು ಬೆಕ್ಕಿದ್ದರೆ ಸಾಕು. ಆ ಮನೆಗೆ ಜೀವಂತಿಕೆ ಇದ್ದ ಹಾಗೆ. ತುಂಬಾ ಹೊತ್ತು ನಿದ್ದೆ ಮಾಡಿದರೂ ಕೂಡ ಏನಾದರೂ ಪುಟ್ಟ ಸದ್ದಾದರೂ ಎದ್ದು ಕುಳಿತುಬಿಡುತ್ತದೆ. ಕಳ್ಳನಂತೆ ನಡೆದರೂ ತಟ್ಟನೆ ಗುರುತು ಹಿಡಿಯುವಷ್ಟು ಸೂಕ್ಷ್ಮ ಅದರ ಕಿವಿ. ಇನ್ನು ಬೆಕ್ಕು ತನ್ನ ಮೃದುವಾದ ಮೈಯನ್ನು ನಮ್ಮ ಕೈ ಅಥವಾ ಕಾಲಿಗೆ ಒರಸುತ್ತಾ ಸುತ್ತ ಬರುವಾಗ ನಮ್ಮೊಳಗಿದ್ದ ಯಾವುದೇ ನೋವು ತಕ್ಷಣ ಮಾಯವಾಗುತ್ತದೆ. ಕೆಲವೊಂದು ಸಲ ತನ್ನ ಜೊತೆ ಯಾರು ಕೂಡ ಇಲ್ಲ ಎನ್ನುವ ಭಾವನೆ ಹತ್ತಿರ ಸುಳಿಯುವ ಮೊದಲೇ ಬೆಕ್ಕಿನ ಪ್ರೀತಿ ಹತ್ತಿರ ಸುಳಿದಿರುತ್ತದೆ. ಈ ಬೆಕ್ಕಿನ ಮೈ ಬಿಸಿ ನಮ್ಮ ಮನಸ್ಸಿನಲ್ಲಿರುವ ತಣ್ಣಗಿನ ಬೇಸರದ ಭಾವನೆಯನ್ನು ಹೊರಹಾಕುತ್ತದೆ.
ಇದೆಲ್ಲ ಹೇಳುವಾಗ ಕೆಲವೇ ದಿನಗಳ ಹಿಂದೆ ನಡೆದ ಘಟನೆ ನೆನಪು ಬರುತ್ತದೆ. ನಮ್ಮ ಮನೆಯಲ್ಲಿ ಎರಡು ದನ, ಎರಡು ನಾಯಿ ಮತ್ತು ಒಂದು ಬೆಕ್ಕು ಇದೆ. ಸಾಮಾನ್ಯವಾಗಿ ಹೀಗೆ ಮನೆಯಲ್ಲಿ ಅತ್ತಿತ್ತ ಹೋಗುವಾಗ ದನ ಕಂಡರೆ ‘ಹಾಯ್’ ಎನ್ನುವುದು ರೂಢಿಯಾಗಿ ಬಿಟ್ಟಿದೆ. ಇನ್ನು ನಾಯಿ ಮತ್ತು ಇನ್ನೊಂದು ನಾಯಿ ಮರಿ. ದಿನಪೂರ್ತಿ ಒಂದಕ್ಕೊಂದು ಉಪದ್ರವ ಮಾಡುತ್ತಿರುತ್ತದೆ. ಕಟ್ಟಿದ ಸಂಕೋಲೆಯನ್ನು ಬಿಟ್ಟ ಕೂಡಲೇ ನಮ್ಮಲ್ಲಿಗೆ ಬಂದು ಹಲ್ಲು ಬಿಟ್ಟು ನಗುತ್ತಿರುತ್ತದೆ. ಈ ವಿಷಯದ ನಡುವೆ ಹೇಳುವ ವಿಷಯ ಮರೆತು ಹೋಯಿತು ನೋಡಿ.
ನಮ್ಮ ಮನೆಯಲ್ಲಿ ಕೊಳವೆಬಾವಿಯ ನೀರು ಮನೆಯೊಳಗೆ ಬಂದರೂ ಕೂಡ ನಾವು ಬಾವಿಯ ನೀರನ್ನು ಕುಡಿಯಲು ಬಳಸುವುದು. ಹೀಗೆ ಸಂಜೆ ಹೊತ್ತು ಯಾವಾಗಲೂ ಬಾವಿಯಿಂದ ನೀರು ಸೇದಲು ಹೋಗುವಾಗ ನಾಯಿ ಮತ್ತೆ ಬೆಕ್ಕು ಜೊತೆಗೆ ಬರುವುದು ಕೂಡ ಅಭ್ಯಾಸವಾಗಿತ್ತು. ಈ ದಿನ ನಾಯಿಯನ್ನು ಕಟ್ಟಿ ಹಾಕಿದ್ದರಿಂದ ಬೆಕ್ಕು ಮಾತ್ರ ಜೊತೆಗೆ ಬಂದಿತ್ತು. ನಾನು ಒಂದು ಕೊಡದಲ್ಲಿ ನೀರು ಸೇದಿ ಇಟ್ಟದನ್ನು ಅಪ್ಪ ಕೊಂಡೊಯ್ದರು. ಇದೆ ಹೊತ್ತಿಗೆ ಬೆಕ್ಕು ಕೂಡ ಅಪ್ಪನ ಜೊತೆ ಹೊರಟಿತ್ತು. ಬೆಕ್ಕಿನ್ನು ಕರೆದು ‘ನೀನು ನನ್ನನ್ನು ಬಿಟ್ಟು ಹೋಗುವುದಾ!!’ ಅಂತ ಕೇಳಿದಾಗ ಅದು ತಿರುಗಿ ‘ಮಿಯಾಂವ್ ಮಿಯಾಂವ್’ ಎಂದು ಮತ್ತೆ ತಿರುಗಿ ಬಂದಿತ್ತು.
ಈ ಘಟನೆ ನಂತರ ಬೆಕ್ಕಿನ ಬಗ್ಗೆ ಜನರು ಹೇಳಿದ್ದ ಕೆಟ್ಟ ಮಾತುಗಳು ಸುಳ್ಳು ಎಂದು ಅನಿಸಿತು. ಸಾಮಾನ್ಯವಾಗಿ ಜನರು ಹೇಳುವುದು ಏನೆಂದರೆ ನಾಯಿ ನಿಯತ್ತಿನ ಪ್ರಾಣಿ. ಕರೆದರೆ ಎಲ್ಲಿಗೂ ಕೂಡ ಬರುತ್ತದೆ ಎಂದು. ಅದೇ ಬೆಕ್ಕು ಅದಕ್ಕೆ ತದ್ವಿರುದ್ಧ. ಮನೆಯಲ್ಲಿ ಸಿಕ್ಕಿದ್ದನ್ನು ತಿಂದು ಗಡದ್ದಾಗಿ ನಿದ್ದೆ ಮಾಡುತ್ತಿರುತ್ತದೆ. ಕರೆದರೂ ಕಿವಿ ಕೇಳುವುದಿಲ್ಲ ಎಂದು. ನನ್ನ ಪ್ರಕಾರ ಈ ಆರೋಪ ತಪ್ಪು. ಯಾಕಂದ್ರೆ ಕೆಲವೊಮ್ಮೆ ನಾವು ಬೆಕ್ಕಿಗೆ ನೀಡುವ ಪ್ರೀತಿ ಕಡಿಮೆ ಇರುತ್ತದೇನೋ. ಅದಕ್ಕಾಗಿ ಬೆಕ್ಕು ನಮ್ಮನ್ನು ನಿರ್ಲಕ್ಷಿಸಿರಬಹುದು.
ಮನುಷ್ಯ ಜಾತಿ ಕೂಡ ಹೀಗೆ ಅಲ್ವಾ. ನಮಗೆ ಎಲ್ಲಿ ಪ್ರೀತಿ ಗೌರವ ಸಿಗುತ್ತೋ ಅಲ್ಲಿ ಮಾತ್ರ ನಾವು ನಿಲ್ಲುವುದು ಅಲ್ವೇ!! ಎಲ್ಲಿ ಗೌರವ – ಮರ್ಯಾದೆ ಇಲ್ಲ, ಅಲ್ಲಿಂದ ಕಾಲು ಕೀಳುವ ಪ್ರಯತ್ನ ನಾವು ಮಾಡುತ್ತೇವೆ. ಬಹುಶಃ ಇದೇ ರೀತಿಯ ಆಲೋಚನೆಗಳು ಸಾಕು ಪ್ರಾಣಿಗಳ ಮನದಲ್ಲಿರಬಹುದೂ. ಕೆಲವೊಂದು ಸಲ ನಾವು ಪ್ರಾಣಿಗಳಿಂದ ಕಲಿಯುವ ವಿಚಾರಗಳು ಹಲವಿದೆ. ಅದು ಸಾಕು ಪ್ರಾಣಿ ಮಾತ್ರವಲ್ಲ, ಕಾಡು ಪ್ರಾಣಿಗಳಿಂದ ಕೂಡ.