ಭಾರತ ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಮಹಾನ್ ವಿಜ್ಞಾನಿಗಳು ತಮ್ಮ ವೈಜ್ಞಾನಿಕ ಆವಿಷ್ಕಾರಗಳ ಮೂಲಕ ಭಾರತವನ್ನು ವಿಶ್ವವಂದ್ಯ ರಾಷ್ಟ್ರವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ವೈಜ್ಞಾನಿಕ ಕೊಡುಗೆಗಳ ಪ್ರಾಮುಖ್ಯತೆಗಳನ್ನು  ತಿಳಿದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ದೃಷ್ಟಿಯಿಂದ ಜನಸಾಮಾನ್ಯರಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 2024ರ ರಾಷ್ಟ್ರೀಯ ವಿಜ್ಞಾನ ದಿನದ ವಿಷಯವು ‘ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು’ ಎಂಬುದಾಗಿದೆ.

ಫೆಬ್ರವರಿ 28 ರಂದೇ ಯಾಕೆ ಆಚರಿಸಲಾಗುತ್ತದೆ?

ಈ ದಿನ 1928 ರಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಸಿ.ವಿ ರಾಮನ್ ಅವರು ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದಲ್ಲಿ ಒಂದು ಆವಿಷ್ಕಾರ ಮಾಡಿದರು. ಕೋಲ್ಕತ್ತಾದ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್ ನ ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ಸಿ.ವಿ. ರಾಮನ್ ಅವರು ರಾಮನ್ ಪರಿಣಾಮವನ್ನು ಕಂಡುಹಿಡಿದರು. ಇವರ ಸಾಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಇದು ಭಾರತಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ದೊರೆತ ಮೊದಲ ನೊಬೆಲ್ ಪ್ರಶಸ್ತಿ ಆಗಿದೆ. ಹೀಗಾಗಿ ಇದರ ಸ್ಮರಣಾರ್ಥವಾಗಿ ಪ್ರತಿವರ್ಷ ಫೆ. 28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು   ಆಚರಿಸಲಾಗುತ್ತದೆ.

ಇತಿಹಾಸ
1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ ( ಎನ್ ಸಿಎಸ್ ಟಿಸಿ)ಭಾರತ ಸರ್ಕಾರಕ್ಕೆ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಮನವಿ ಸಲ್ಲಿಸಿತ್ತು. ನಂತರ ಈ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಿಸಿತು. ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28, 1987 ರಂದು ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ದೇಶದ ಅಭಿವೃದ್ಧಿಗೆ ವಿಜ್ಞಾನಿಗಳು ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಆಚರಿಸಲಾಗುತ್ತಿದೆ.


ಮಹತ್ವ
ನಮ್ಮ ರಾಷ್ಟ್ರದ ಅಭಿವೃದ್ಧಿಗೆ ನಮ್ಮ ವೈಜ್ಞಾನಿಕ ಸಮುದಾಯದ ಕೊಡುಗೆಗಳನ್ನು ಪ್ರಶಂಸಿಸಲು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವುದು, ಪ್ರತಿ ನಾಗರಿಕನಲ್ಲೂ ವೈಜ್ಞಾನಿಕ ಮನೋಭಾವ ಸೃಜಿಸಿವಂತೆ  ಪ್ರೇರೇಪಿಸಲು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿಯನ್ನು ಬೆಳೆಸಲು, ಹೊಸ ಹೊಸ ಅವಿಷ್ಕಾರಗಳಿಗೆ ಪ್ರೋತ್ಸಾಹಿಸಲು, ಸಂಶೋಧನೆಗಳಿಗೆ ಪ್ರಾಶಸ್ತ್ಯ ನೀಡಲು ರಾಷ್ಟ್ರೀಯ ವಿಜ್ಞಾನ ದಿನ ಪ್ರೇರಣೆಯನ್ನೊದಗಿಸುತ್ತದೆ. ವಿಜ್ಞಾನದಲ್ಲಿ ಸಾರ್ವಜನಿಕ ಆಸಕ್ತಿಯನ್ನು ಪ್ರಚೋದಿಸಲು ಮತ್ತು ದೈನಂದಿನ ಜೀವನದಲ್ಲಿ ವಿಜ್ಞಾನದ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕ ತಿಳುವಳಿಕೆಯನ್ನು ಹೆಚ್ಚಿಸಲು ರಾಷ್ಟ್ರೀಯ ವಿಜ್ಞಾನ ದಿನ ಸಹಕಾರಿ.

ಸಿ.ವಿ ರಾಮನ್ ಪರಿಚಯ
ಚಂದ್ರಶೇಖರ್ ವೆಂಕಟರಾಮನ್ ಅವರು ನವೆಂಬರ್ 7, 1888ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ‘ತಿರುವನೈಕಾವಲ್’ ಎಂಬಲ್ಲಿ ಜನಿಸಿದರು.ಇವರ ತಂದೆ ಚಂದ್ರಶೇಖರ್ ಅಯ್ಯರ್, ತಾಯಿ ಪಾರ್ವತಿ. ಇವರು ಆರಂಭಿಕ ಶಿಕ್ಷಣವನ್ನು ವಿಶಾಖಪಟ್ಟಣದಲ್ಲಿ ಮುಗಿಸಿದರು. ನಂತರ ಅವರು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಿ ವಿ ರಾಮನ್ ಅವರು 1934ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ನಿರ್ದೇಶಕರಾಗಿದ್ದವರು.

ಪ್ರಶಸ್ತಿ
ಸಿ.ವಿ ರಾಮನ್ ಅವರಿಗೆ 1930 ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಹಾಗೂ 1954 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ‌

ಸಿ.ವಿ ರಾಮನ್ ಅವರು ಹೃದಯಾಘಾತದಿಂದ ನವೆಂಬರ್ 21, 1970 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.