ಕ್ರೀಡೆ ಮನೋರಂಜನೆಯೊಂದಿಗೆ, ಮನೋವಿಕಾಸವನ್ನೂ ಹೆಚ್ಚಿಸುವ ಕ್ಷೇತ್ರ. ಮನುಷ್ಯನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವಂತೆ ಮಾಡುವಲ್ಲಿ ಕ್ರೀಡೆಯ ಪಾತ್ರ ಪ್ರಧಾನವಾದದ್ದು. ನಮ್ಮನ್ನು ಕ್ರಿಯಾಶೀಲರನ್ನಾಗಿಸುವಲ್ಲಿ, ಶಿಕ್ಷಣ, ಮಾನವ ಅಭಿವೃದ್ಧಿ, ಆರೋಗ್ಯಕರ ಜೀವನಶೈಲಿ ಮತ್ತು ಶಾಂತಿಯುತ ಜಗತ್ತಿಗೆ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳ ಕೊಡುಗೆ ಅಪಾರವಾದದ್ದು. ಹಾಗಾಗಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಪ್ರತಿ ವರ್ಷ ದೇಶದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಣೆ ಮಾಡಲಾಗುತ್ತದೆ.

ಭಾರತದಲ್ಲಿ ಆಗಸ್ಟ್‌ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಮೇಜರ್‌ ಧ್ಯಾನ್‌ ಚಂದ್‌ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಕ್ರೀಡಾಪಟುಗಳ ಗಮನಾರ್ಹ ಸಾಧನೆಗಳು ಮತ್ತು ಸಮಾಜದ ಮೇಲೆ ಅವರ ಆಳವಾದ ಪ್ರಭಾವವನ್ನು ಪ್ರತಿಬಿಂಬಿಸಲು, ಅವರ ಸಮರ್ಪಣೆ ಮತ್ತು ಅತ್ಯುತ್ತಮ ಸಾಧನೆಗಳನ್ನು ಗೌರವಿಸಲಾಗುತ್ತದೆ. ಹರಿಯಾಣ, ಪಂಜಾಬ್ ಮತ್ತು ಕರ್ನಾಟಕ ಇತರ ರಾಜ್ಯಗಳಲ್ಲಿ ದೈಹಿಕ ಚಟುವಟಿಕೆಗಳು ಮತ್ತು ಜೀವನದಲ್ಲಿ ಕ್ರೀಡೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ವರ್ಷದ ರಾಷ್ಟ್ರೀಯ ಕ್ರೀಡಾ ದಿನದ ಥೀಮ್‌ Sport for the Promotion and Peaceful and Inclusive Societies”.

ಇತಿಹಾಸ

ಸಾರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರರಲ್ಲಿ ಒಬ್ಬರಾದ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 29 ರಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಮೇಜರ್‌ ಧ್ಯಾನಚಂದ್‌ ಅವರು ಆಗಸ್ಟ್‌ 29, 1905 ರಂದು ಅಲಹಬಾದ್ ನಲ್ಲಿ ಜನಿಸಿದರು. ಭಾರತೀಯ ಫೀಲ್ಡ್ ಹಾಕಿ ಆಟಗಾರ, ಮತ್ತು ಸಾರ್ವಕಾಲಿಕ ಶ್ರೇಷ್ಠ ಫೀಲ್ಡ್ ಹಾಕಿ ಆಟಗಾರರಲ್ಲಿ ಒಬ್ಬರು. ಅವರು ಪ್ರಾಥಮಿಕ ಶಿಕ್ಷಣ ಮುಗಿಸಿ 1922ರಲ್ಲಿ ಬ್ರಿಟೀಷ್ ಇಂಡಿಯನ್ ಆರ್ಮಿ ರೆಜಿಮೆಂಟಲ್ ಸ್ಕ್ವಾಡ್ ಗೆ ಸೇರಿದ್ದರು. 1928 ರಲ್ಲಿ ಭಾರತವು ತನ್ನ ಮೊದಲ ಒಪಿಂಲಿಕ್ ನಲ್ಲಿ ಭಾಗವಹಿಸಿದ್ದರು. ನಂತರ ಅವರಿಗೆ ಮೊದಲ ಬಾರಿಗೆ ಚಿನ್ನದ ಪದಕವನ್ನು ಗೆದ್ದುಕೊಂಡರು. ಧ್ಯಾನ್ ಚಂದ್ 1926 ರಿಂದ 1949 ರ ವರೆಗೆ ಭಾರತಕ್ಕಾಗಿ ಹಾಕಿ ಆಡಿದರು. ಅವರ ವೃತ್ತಿ ಜೀವನದ ಅವಧಿಯಲ್ಲಿ 1928, 1932, 1936 ರಲ್ಲಿ ಭಾರತಕ್ಕೆ ಒಲಿಂಪಿಕ್ ಪದಕವನ್ನು ತಂದುಕೊಟ್ಟಿದ್ದಾರೆ. ಅವರು 1956ರಲ್ಲಿ ಭಾರತೀಯ ಸೇನೆಯ ಪಂಜಾಬ್ ರೆಜಿಮೆಂಟ್ ನಿಂದ ನಿವೃತ್ತಿ ಪಡೆದರು. ನಂತರ ಅವರಿಗೆ ಭಾರತ ಸರ್ಕಾರವು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಧ್ಯಾನ್ ಚಂದ್ ಡಿಸೆಂಬರ್ 3, 1979 ರಂದು ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು.

ಮೇಜರ್ ಧ್ಯಾನ್ ಚಂದ್ ಅವರು ಭಾರತೀಯ ಕ್ರೀಡೆಗೆ ನೀಡಿದ ಕೊಡುಗೆಯನ್ನು ಗೌರವಿಸಲು ಭಾರತ ಸರ್ಕಾರವು 1982 ರಲ್ಲಿ ಆಗಸ್ಟ್ 29 ಅನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್‌ 29ಕ್ಕೆ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ. ಈ ದಿನದಂದು ದೇಶಾದ್ಯಂತ ವಿವಿಧ ಕ್ರೀಡಾಕೂಟಗಳು ನಡೆಯುತ್ತವೆ. ಭಾರತದ ರಾಷ್ಟ್ರಪತಿಗಳು ಕ್ರೀಡೆಗೆ ಅತ್ಯುತ್ತಮ ಕೊಡುಗೆ ನೀಡಿದ ಕ್ರೀಡಾಪಟುಗಳಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ, ದ್ರೋಣಾಚಾರ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಸೇರಿದಂತೆ ಇತರೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.


ಮಹತ್ವ
• ರಾಷ್ಟ್ರೀಯ ಕ್ರೀಡಾ ದಿನವು ಭಾರತೀಯ ಕ್ರೀಡಾಪಟುಗಳ ಸಾಧನೆಗಳನ್ನು ಸ್ಮರಿಸುವ ಮತ್ತು ಸಮಾಜದಲ್ಲಿ ಕ್ರೀಡೆಯ ಮಹತ್ವವನ್ನು ಉತ್ತೇಜಿಸುವ ದಿನವಾಗಿದೆ.
• ಇದು ಮೇಜರ್ ಧ್ಯಾನ್ ಚಂದ್ ಅವರ ಉತ್ಕಟ ಕ್ರೀಡಾಸಕ್ತಿ ಮತ್ತು ಭಾರತೀಯ ಕ್ರೀಡೆಗೆ ಅವರ ಕೊಡುಗೆಯನ್ನು ಎತ್ತಿ ತೋರಿಸಲು ಈ ದಿನ ಸಹಾಯಕವಾಗಿದೆ.
• ಕ್ರೀಡಾಕೂಟಗಳಲ್ಲಿ ವಯಸ್ಸು, ಲಿಂಗ ಅಥವಾ ಕೌಶಲ್ಯದ ಮಟ್ಟವನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿ ಭಾಗವಹಿಸುವಂತೆ ಒತ್ತಾಯಿಸಲಾಗಿದೆ.
• ಕ್ರೀಡೆಗಳಲ್ಲಿ ಭಾಗವಹಿಸಲು ಜನರನ್ನು ಪ್ರೋತ್ಸಾಹಿಸುವುದು ಮತ್ತು ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ.
• ಈ ದಿನವು ಭಾರತದಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳನ್ನು ದೈನಂದಿನ ಜೀವನಶೈಲಿಯಾಗಿಸುವ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.