ಪ್ರಜಾಪ್ರಭುತ್ವದ ವ್ಯವಸ್ಥೆಯ ಆತ್ಮ ಮತದಾನ. ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡುವ ಮೂಲಭೂತ ಹಕ್ಕನ್ನು ನೀಡಲಾಗಿದೆ. ಹೀಗಾಗಿ ಯೋಗ್ಯವಾದ ಜನಪ್ರತಿನಿಧಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡುವುದು ದೇಶದ ಪ್ರತಿಪ್ರಜೆಯ ಕರ್ತವ್ಯ. ಹಾಗಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಹೊಸ ಮತದಾರರನ್ನು, ಯುವಕರನ್ನು ಮತದಾನ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜನವರಿ 25 ರಂದು ಪ್ರತಿವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ.
ಇತಿಹಾಸ
ಜನವರಿ 25, 1950ರಂದು ಭಾರತೀಯ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬರುತ್ತದೆ. ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಅಂಗವಾಗಿ 2011ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವು ಹೆಚ್ಚಿನ ಯುವಜನರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ. ಹಾಗಾಗಿ ಪ್ರತಿ ವರ್ಷ ಜನವರಿ 1 ರಂದು 18 ವರ್ಷ ತುಂಬುವ ಎಲ್ಲಾ ಅರ್ಹ ಮತದಾರರನ್ನು ಗುರುತಿಸಿ ತಮ್ಮ ಕರ್ತವ್ಯದ ಅರಿವನ್ನು ಮೂಡಿಸಲು ಭಾರತೀಯ ಚುನಾವಣಾ ಆಯೋಗ (ಇಸಿಐ) ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.
ರಾಷ್ಟ್ರೀಯ ಮತದಾರರ ದಿನದ ಮಹತ್ವ
ಗ್ರಾಮೀಣ ಪ್ರದೇಶಗಳಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತಿದೆ. ವಿದ್ಯಾವಂತರು ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನ ಆಗುತ್ತಿಲ್ಲ. ಮತದಾನ ಜವಾಬ್ದಾರಿಯ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರಿಗೆ ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಹೊಸ ಮತದಾರರನ್ನು ಸೆಳೆಯುವ, ಉತ್ತೇಜಿಸುವುದು ಹಾಗೂ ಮತದಾರರ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಮತದಾರರ ದಿನದಂದು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನತೆಯ ಪಾತ್ರ ಅಗಾಧವಾಗಿದೆ. ಹೀಗಾಗಿ ಈ ದಿನದಂದು ಹೊಸ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಹಸ್ತಾಂತರ ಮಾಡಲಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಯಾಕೆ ಮತದಾನ ಮಾಡಬೇಕು?
ಮತದಾನದ ಹಕ್ಕು ಒಬ್ಬ ಪೌರನನ್ನು ಪೂರ್ಣ ಪ್ರಮಾಣದ ಪೌರನೆಂದು ಗೌರವಿಸುತ್ತದೆ. ಮತದಾನ ಎಂಬುದು ಕೇವಲ ಸಂವಿಧಾನಾತ್ಮಕ ಹಕ್ಕಲ್ಲ. ಬದಲಾಗಿ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಹೌದು. ಕಾನೂನು ರೂಪಿಸುವ ಸರಕಾರವನ್ನು ಆರಿಸುವುದು ಎಲ್ಲಾ ನಾಗರಿಕರ ಜವಾಬ್ದಾರಿ.
ಪ್ರಶಸ್ತಿ: ಚುನಾವಣಾ ಪ್ರಕ್ರಿಯೆಯ ಮಹತ್ವವನ್ನು ಅರಿತು ಅದನ್ನು ಸುಸೂತ್ರವಾಗಿ ನಡೆಸಲು ಅಧಿಕಾರಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ವರ್ಷ ಚುನಾವಣಾ ಆಯೋಗದ ವತಿಯಿಂದ ಅತ್ಯುತ್ತಮ ಚುನಾವಣೆ ನಿರ್ವಹಣೆ ಮಾಡಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
2024ರ ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಕ್ಯ
ಪ್ರತಿ ವರ್ಷ ಒಂದೊಂದು ಧ್ಯೇಯದೊಂದಿಗೆ ಆಚರಿಸಲ್ಪಡುವ ರಾಷ್ಟ್ರೀಯ ಮತದಾರರ ದಿನದ ಈ ಬಾರಿಯ ಧ್ಯೇಯವಾಕ್ಯ ‘Nothing Like Voting, I Vote For sure’ (ಮತದಾನದ ಹಾಗೆ ಏನೂ ಇಲ್ಲ, ನಾನು ಖಚಿತವಾಗಿ ಮತ ಹಾಕುತ್ತೇನೆ).