ದಾನೇಶ್ವರಿ ಬ ಸರ್ಜಾಪೂರ, ವಿಜಯಪುರ
ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ 1930ರ ಮಾರ್ಚ್ 12 ರಿಂದ ಏಪ್ರಿಲ್ 6 ರವರೆಗೆ ನಡೆದ ಅಹಿಂಸಾತ್ಮಕ ಚಳವಳಿ ದಂಡಿ ಸತ್ಯಾಗ್ರಹ. ಕ್ರೂರಿ ಬ್ರಿಟಿಷ್ ಸರಕಾರದ ದೌರ್ಜನ್ಯವನ್ನು ವಿರೋಧಿಸಿ ಮಹಾತ್ಮ ಗಾಂಧೀಜಿಯವರು ನೀಡಿದ 11 ಬೇಡಿಕೆಗಳನ್ನು ವೈಸರಾಯ್ ಇರ್ವಿನ್ ತಿರಸ್ಕರಿಸಿದ್ದರಿಂದ ಈ ಸತ್ಯಗ್ರಹವು ಪ್ರಾರಂಭವಾಯಿತು.
ಬ್ರಿಟಿಷ್ ಸರ್ಕಾರವು ಭಾರತೀಯರ ಮೇಲೆ ಉಪ್ಪಿನ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಿ ಹೆಚ್ಚಿನ ತೆರಿಗೆ ವಿಧಿಸಿತ್ತು. ಗಾಂಧೀಜಿ ಅವರು 78 ಅನುಯಾಯಿಗಳೊಂದಿಗೆ ಅಹ್ಮದಾಬಾದ್ ನ ಸಬರಮತಿ ಆಶ್ರಮದಿಂದ ಮಾರ್ಚ್ 12, 1930 ರಂದು ಪಾದಯಾತ್ರೆ ಆರಂಭಿಸಿದರು. ಒಂದು ದಿನಕ್ಕೆ 10 ಮೈಲಿಗಳಂತೆ 24 ದಿನ 240 ಮೈಲಿ ಸಂಚರಿಸಿ ನಂತರ ಏಪ್ರಿಲ್ 6, 1930 ರಂದು ಗುಜರಾತಿನ ದಂಡಿ ಕರಾವಳಿಯನ್ನು ತಲುಪಿದ ಗಾಂಧೀಜಿ ಅವರು ಸ್ವತಃ ಒಂದು ಹಿಡಿ ಉಪ್ಪನ್ನು ತಯಾರಿಸುವ ಮೂಲಕ ಬ್ರಿಟಿಷ್ ಕಾನೂನನ್ನು ಮುರಿದ
ಈ ಚಳುವಳಿಯು ದೇಶಾದ್ಯಂತ ಹರಡಿತು. ಈ ಚಳುವಳಿಯಲ್ಲಿ ಮಹಿಳೆಯರು, ರೈತರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸರೋಜಿನಿ ನಾಯ್ಡು, ಸ್ವರೂಪರಾಣಿ, ವಿಜಯಲಕ್ಷ್ಮಿ ಪಂಡಿತ್ ಸೇರಿದಂತೆ ಅನೇಕ ಮಂದಿ ಮಹಿಳಾ ನಾಯಕಿಯರೂ ಈ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಈ ಸತ್ಯಾಗ್ರಹವು ಬ್ರಿಟಿಷ್ ಸರ್ಕಾರವನ್ನು ಆತಂಕಕ್ಕೀಡು ಮಾಡಿತು ಮತ್ತು ಜಾಗತಿಕ ಗಮನವನ್ನು ಸೆಳೆಯಿತು.
ಕರ್ನಾಟಕದಲ್ಲೂ ಸತ್ಯಾಗ್ರಹ: ಈ ದಂಡಿ ಸತ್ಯಾಗ್ರಹವು ಕರ್ನಾಟಕದಲ್ಲಿಯೂ ನಡೆಯಿತು. ಕರ್ನಾಟಕದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಪ್ರಮುಖ ಕೇಂದ್ರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಸಾಣೆಕಟ್ಟೆ. ಕರ್ನಾಟಕದ ಅಂಕೋಲಾದಲ್ಲಿ ನಡೆದ ಈ ಚಳುವಳಿಯಲ್ಲಿ ಎಂ.ಟಿ.ನಾಡಕರ್ಣಿ ಪ್ರಮುಖ ಪಾತ್ರ ವಹಿಸಿದ್ದರು. ಎಂ.ಟಿ. ನಾಡಕರ್ಣಿ ಅವರ ನೇತೃತ್ವದಲ್ಲಿ ನಡೆದ ದಂಡಿ ಸತ್ಯಾಗ್ರಹ ಚಳುವಳಿಯು “ಕರ್ನಾಟಕದ ಬಾರ್ದೋಲಿ” ಎಂದೇ ಪ್ರಸಿದ್ಧವಾಯಿತು. ಅಂಕೋಲಾದ ಪೂಜಗೇರಿ ಗ್ರಾಮದಲ್ಲಿ ಉಪ್ಪು ತಯಾರಿಸಿ ಕಾಯ್ದೆಯನ್ನು ಉಲ್ಲಂಘಿಸಲಾಯಿತು. ಅಂಕೋಲಾದಲ್ಲಿ 40,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಎಂ ಪಿ ನಾಡಕರ್ಣಿ, ಸದಾಶಿವ, ಗಂಗಾಧರರಾವ್ ಮತ್ತು ಹರ್ಡೀಕರ್ ಮಂಜಪ್ಪ ಮುಖಂಡರಾಗಿ ಭಾಗವಹಿಸಿದ್ದರು.
ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ಕನ್ನಡಿಗ ಮೈಲಾರ ಮಹದೇವಪ್ಪ. ಗಾಂಧೀಜಿಯವರೊಂದಿಗೆ ಸಬರಮತಿಯಿಂದ ದಂಡಿವರೆಗೆ 240 ಮೈಲುಗಳ ಐತಿಹಾಸಿಕ ಪಾತೆಯಾತ್ರೆಯಲ್ಲಿ ಭಾಗವಹಿಸಿದ ಅತಿ ಕಿರಿಯ ಚಳುವಳಿಗಾರರಲ್ಲಿ ಒಬ್ಬರಾಗಿದ್ದ ಅವರು, ಕರ್ನಾಟಕದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಕರ್ನಾಟಕದ ಅಂಕೋಲಾದಲ್ಲಿ ಎಂ ಪಿ ನಾಡಕರ್ಣಿ ಹಾಗೂ ಆಂಧ್ರದ ಮಚಲಿಪಟ್ಟಣದಲ್ಲಿ ಬಾ ಹನುಮಂತರಾವ್ ಹಾಗೂ ತಮಿಳುನಾಡಿನಲ್ಲಿ ರಾಜಗೋಪಾಲಚಾರಿ (ರಾಜಾಜಿ)ಹಾಗೂ ಕೇರಳದ ತಿರುವನ್ಕೂರಿನಲ್ಲಿ ಕೇಳಪ್ಪನ್ ಎಂಬುವವರು ಪ್ರಮುಖ ಪಾತ್ರ ವಹಿಸಿದ್ದರು. ಈ ಸತ್ಯಗ್ರಹವು 45 ದಿನಗಳ ಕಾಲ ನಡೆದು ಬ್ರಿಟಿಷ್ ಸರ್ಕಾರಕ್ಕೆ ಭಾರಿ ಒತ್ತಡವನ್ನು ತಂದಿತ್ತು. ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರೂ ಹೆಚ್ಚು ಪಾಲ್ಗೊಳ್ಳುವಂತೆ ಮಾಡಿದ ಒಂದು ಮಹತ್ವದ ತಿರುವಾಗಿ ಪರಿಣಮಿಸಿತು.