by Du Gu Lakshman
ರಾಜಕಾರಣಿಗಳ, ಪ್ರಭಾವೀ ವ್ಯಕ್ತಿಗಳ, ಅಧಿಕಾರಸ್ಥರ ಹುಳುಕುಗಳನ್ನು ‘ಕುಟುಕು ಕಾರ್ಯಾಚರಣೆ’ ಮೂಲಕ ಬಯಲಿಗೆಳೆದು ಪ್ರಸಿದ್ಧಿಗೆ ಬಂದಿದ್ದ ‘ತೆಹಲ್ಕಾ’ ಇಂಗ್ಲಿಷ್ ವಾರಪತ್ರಿಕೆ ಇದೀಗ ತಾನೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿದೆ. ಎಂಥೆಂಥ ಜಗಜಟ್ಟಿಗಳನ್ನೇ ಬಯಲಿಗೆಳೆದು ಮಣ್ಣು ಮುಕ್ಕಿಸಿzವೆ ಎಂದು ಬೀಗುತ್ತಿದ್ದ ಆ ಪತ್ರಿಕೆಯ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ತಾನೇ ನೆಲಕ್ಕೆ ಬಿದ್ದು ಮಣ್ಣು ಮುಕ್ಕಬೇಕಾದ ಪರಿಸ್ಥಿತಿ ಉಂಟಾಗಿದೆ. ಆದರೆ ಅದೊಂದು ಸ್ವಯಂಕೃತ ಅಪರಾಧ.
ಗೋವಾದಲ್ಲಿ ಇದೇ ನವೆಂಬರ್ ತಿಂಗಳಿನಲ್ಲಿ ತೆಹಲ್ಕಾ ಪತ್ರಿಕೆ ಏರ್ಪಡಿಸಿದ್ದ ‘ಥಿಂಕ್ಫೆಸ್ಟ್’ ಕಾರ್ಯಕ್ರಮದ ಸಂದರ್ಭದಲ್ಲಿ ತೇಜ್ಪಾಲ್ ತನ್ನ ಕಿರಿಯ ಸಹೋದ್ಯೋಗಿಯ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿ, ಅನಂತರ ತನ್ನದು ತಪ್ಪಾಗಿದೆ ಎಂದು ಒಪ್ಪಿಕೊಂಡು, ಪತ್ರಿಕೆಯ ಪ್ರಧಾನ ಸಂಪಾದಕ ಹುದ್ದೆಯಿಂದ ೬ ತಿಂಗಳು ಕೆಳಗಿಳಿದಿರುವುದಾಗಿ ತಪ್ಪೊಪ್ಪಿಗೆಯ ಇ-ಮೇಲ್ಅನ್ನು ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿಯವರಿಗೆ ಕಳಿಸಿದ್ದರು. ಶೋಮಾ ಚೌಧರಿ ದೌರ್ಜನ್ಯಕ್ಕೀಡಾದ ಪತ್ರಿಕೆಯ ಕಿರಿಯ ಪತ್ರಕರ್ತೆಯ ಅಹವಾಲನ್ನು ಆಲಿಸದೆಯೇ ತೇಜ್ಪಾಲ್ ನಿರ್ಧಾರಕ್ಕೆ ಸಮ್ಮತಿ ಸೂಚಿಸಿರುವುದು ಈಗ ದೇಶಾದ್ಯಂತ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ‘ತೇಜ್ಪಾಲ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪತ್ರಿಕೆಯ ಜವಾಬ್ದಾರಿಯಿಂದ ೬ ತಿಂಗಳು ಹೊರಗಿದ್ದು ಅವರಾಗಿಯೇ ಶಿಕ್ಷೆಯನ್ನೂ ವಿಧಿಸಿಕೊಂಡಿದ್ದಾರೆ. ಹೀಗಿರುವಾಗ ಈ ಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸುವುದು ಸೂಕ್ತ. ಅಷ್ಟೇ ಅಲ್ಲದೆ, ಇದೊಂದು ಪತ್ರಿಕೆಯ ಆಂತರಿಕ ವಿಚಾರ. ಇದನ್ನು ಸಾರ್ವಜನಿಕಗೊಳಿಸುವ ಅಗತ್ಯವಿಲ್ಲ’ – ಇದು ಶೋಮಾ ಚೌಧರಿಯ ಸಮರ್ಥನೆ. ಶೋಮಾ ಚೌಧರಿ ಸ್ವತಃ ಮಹಿಳೆ, ಸ್ತ್ರೀಪರ ಹೋರಾಡುವ ಕಾರ್ಯಕರ್ತೆ ಆಗಿರುವಾಗ ಹೀಗೆ ನಿರ್ಧಾರ ತೆಗೆದುಕೊಂಡಿರುವುದು ಎಷ್ಟರಮಟ್ಟಿಗೆ ಸಮಂಜಸವೆಂದು ಮಹಿಳಾಪರ ಹೋರಾಟಗಾರರೆಲ್ಲ ತೋಳೇರಿಸಿ ಗುಡುಗಿದ್ದಾರೆ. ಶೋಮಾ ಚೌಧರಿಗೆ ಛೀಮಾರಿ ಹಾಕಿದ್ದಾರೆ.
ಲೈಂಗಿಕ ದೌರ್ಜನ್ಯ ನಡೆಸಿದ ತರುಣ್ ತೇಜ್ಪಾಲ್ ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಗೋವಾ ಹೊಟೇಲ್ನ ಸಿಸಿ ಟಿವಿ ದೃಶ್ಯಗಳನ್ನು ಬಹಿರಂಗಪಡಿಸಬೇಕೆಂದೂ ಘೋಷಿಸಿದ್ದಾರೆ. ಗೋವಾ ಪೊಲೀಸರು ಈಗಾಗಲೇ ಪ್ರಕರಣ ನಡೆದ ಹೊಟೇಲ್ನ ಸಿಸಿ ಟಿವಿ ದೃಶ್ಯಗಳ ಸಿಡಿಯನ್ನು ಪರಿಶೀಲಿಸಿಯೂ ಇದ್ದಾರೆ. ಆದರೆ ವಿಚಾರಣೆಯ ದೃಷ್ಟಿಯಿಂದ ಅದನ್ನು ಬಹಿರಂಗಪಡಿಸಿಲ್ಲ.
ಎಲ್ಲರ ಹುಳುಕುಗಳನ್ನು ಬಯಲಿಗೆಳೆದು ಜನ್ಮ ಜಾಲಾಡುವ, ಗಣ್ಯರ ಮಾನವನ್ನು ಹರಾಜು ಹಾಕುವ ಮಾಧ್ಯಮರಂಗ ಮಾತ್ರ ಈಗ ತಾನೇ ಬೆತ್ತಲಾಗಿ ಬಟಾಬಯಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ತೇಜ್ಪಾಲ್ ಪ್ರಕರಣದಿಂದ ಉಂಟಾಗಿರುವುದು ಈ ರಂಗದ ವೈರುಧ್ಯ. ಮಾಧ್ಯಮರಂಗ ಮಾತ್ರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತೇಜ್ಪಾಲ್ ವಿರುದ್ಧ ಉಗ್ರ ಕ್ರಮಕೈಗೊಳ್ಳುವಂತೆ ಒಕ್ಕೊರಲ ಧ್ವನಿ ಎತ್ತಿರುವುದು ಕಳೆದ ೨-೩ ದಿನಗಳ ವರ್ತಮಾನ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳನ್ನು ವೀಕ್ಷಿಸಿದವರಿಗೆ ವೇದ್ಯವಾಗಿರಬಹುದು. ತೇಜ್ಪಾಲ್ ತನ್ನ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟು ತಾನೇ ಶಿಕ್ಷೆ ವಿಧಿಸಿಕೊಂಡಿರುವಾಗ ಇನ್ನು ಈ ಹಗರಣವನ್ನು ಬೆಳೆಸುವುದೇಕೆ ಎಂದು ಯಾವ ಮಾಧ್ಯಮಗಳೂ ವಾದಿಸಿಲ್ಲ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ತೇಜ್ಪಾಲ್ ತನ್ನ ಕೃತ್ಯಕ್ಕೆ ತಾನೇ ಶಿಕ್ಷೆ ವಿಧಿಸಿಕೊಳ್ಳುವುದಕ್ಕೆ ಅವರಿಗೆ ಅಧಿಕಾರ ಕೊಟ್ಟವರಾರು? ತಪ್ಪನ್ನು ಒಪ್ಪಿಕೊಂಡರೆ ಕಾನೂನಿನಂತೆ ಅಪರಾಧ ಅಳಿಸಿ ಹೋಗುವುದಿಲ್ಲ. ಅಪರಾಧದ ತನಿಖೆಗೆ ಪೊಲೀಸರಿದ್ದಾರೆ. ನ್ಯಾಯ ನಿರ್ಣಯಕ್ಕೆ ನ್ಯಾಯಾಂಗವಿದೆ. ಪೊಲೀಸರ ತನಿಖೆ ಹಾಗೂ ನ್ಯಾಯಾಂಗದ ತೀರ್ಪು ಏನು ಹೇಳುತ್ತದೆ ಎಂಬುದು ಮುಖ್ಯವೇ ಹೊರತು ತೇಜ್ಪಾಲ್ ತಪ್ಪೊಪ್ಪಿಗೆ ಅಥವಾ ಪಶ್ಚಾತ್ತಾಪ ಇಲ್ಲಿ ಮುಖ್ಯವಾಗುವುದಿಲ್ಲ. ತೇಜ್ಪಾಲ್ ವಾದವನ್ನೇ ಇತರ ಪ್ರಕರಣಗಳಿಗೂ ಅನ್ವಯಿಸಿದರೆ ಏನಾಗಬಹುದು? ತೆಹಲ್ಕಾ ಪತ್ರಿಕೆ ಬಯಲಿಗೆಳೆದ ಗಣ್ಯ ಭ್ರಷ್ಟಾಚಾರಿಗಳು ತಪ್ಪೊಪ್ಪಿಗೆ ಕೇಳಿ, ತಮ್ಮ ಅಧಿಕಾರ ಸ್ಥಾನಕ್ಕೆ ರಾಜೀನಾಮೆ ನೀಡಿಬಿಟ್ಟರೆ ಅಲ್ಲಿಗೆ ಆ ಪ್ರಕರಣಕ್ಕೆ ತೆರೆ ಎಳೆಯಬಹುದು ಎಂದಾಗುವುದಿಲ್ಲವೆ? ಆಗ ಪೊಲೀಸರಿಗೆ ಹಾಗೂ ಕೋರ್ಟುಗಳಿಗೆ ಏನು ಕೆಲಸ? ಪೊಲೀಸರು ಹಾಗೂ ಕೋರ್ಟುಗಳು ಇರುವುದಾದರೂ ಏತಕ್ಕೆ? ಈ ಪ್ರಶ್ನೆಗಳಿಗೆ ತೇಜ್ಪಾಲ್ ಉತ್ತರಿಸಬಲ್ಲರೆ?
ಅಷ್ಟಕ್ಕೂ ತೇಜ್ಪಾಲ್ ಪ್ರಕರಣವನ್ನು ಮಾಧ್ಯಮಗಳು ಮುಚ್ಚಿ ಹಾಕುವ ಸ್ಥಿತಿಯಲ್ಲೇ ಇರಲಿಲ್ಲ. ಏಕೆಂದರೆ ಅಷ್ಟರೊಳಗೇ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗಿಂತ ಅತಿ ಪ್ರಭಾವಿಯಾಗಿರುವ ಸೋಶಿಯಲ್ ಮೀಡಿಯಾ ಈ ಪ್ರಕರಣದ ಪ್ರತಿಯೊಂದು ಎಳೆಯನ್ನೂ ಬಿಡಿಬಿಡಿಯಾಗಿ ಬಯಲಿಗೆಳೆದಿತ್ತು. ಅಷ್ಟೇ ಅಲ್ಲ, ಯುವತಿ ಮೇಲೆ ದೌರ್ಜನ್ಯ ನಡೆಸಿದ ತೇಜ್ಪಾಲ್ ವಿರುದ್ಧ ಭಾರೀ ಆಕ್ರೋಶವನ್ನೇ ವ್ಯಕ್ತಪಡಿಸಿತ್ತು. ಸೋಶಿಯಲ್ ಮೀಡಿಯಾದ ಈ ಆಕ್ರೋಶವನ್ನು ಮಾಧ್ಯಮಗಳಿಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ತರುಣ್ ತೇಜ್ಪಾಲ್ ಪ್ರಕರಣದ ಬಗ್ಗೆ ಖ್ಯಾತ ಕವಿ ಜಾವೇದ್ ಅಖ್ತರ್ ಹಗುರವಾಗಿ ಪ್ರತಿಕ್ರಿಯಿಸಿದ್ದಕ್ಕೆ ಸೋಶಿಯಲ್ ಮೀಡಿಯಾ ತಿರುಗಿ ಬಿದ್ದಿತ್ತು. ಜಾವೇದ್ ಅಖ್ತರ್ `It is a shame that someone with such impeccable values has committed such an act but unlike some, he has the guts to accept and repent’ ’ ಎಂದು ಘಟನೆ ಕುರಿತು ಟ್ವೀಟ್ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ವಿರುದ್ಧ ಕೆಂಡಾಮಂಡಲ ಆಕ್ರೋಶ ಹೊರಹೊಮ್ಮಿತ್ತು. ಒಂದು ಟ್ವೀಟ್ ಹೀಗಿತ್ತು: Molest a girl your daughter’s age, admit when cornered and (Akthar’s Twitter handle) will applaud’. ’. ಈ ಟ್ವೀಟ್ ಓದಿದ ಅಖ್ತರ್ ತಾನು ಯಾಕಾದರೂ ತೇಜ್ಪಾಲ್ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದೆನೋ ಎಂದು ಹಳಹಳಿಸಿದ್ದರು. ತಕ್ಷಣ ತನ್ನ ಟ್ವೀಟನ್ನು ಹಿಂದೆ ಪಡೆದು ಕ್ಷಮೆ ಯಾಚಿಸಿದ ಪ್ರಸಂಗವೂ ನಡೆದಿದೆ. ಮಾಧ್ಯಮಗಳಲ್ಲಿ ವ್ಯಂಗ್ಯ ಚಿತ್ರಕಾರರಂತೂ ತರುಣ್ ತೇಜ್ಪಾಲ್ ವಿರುದ್ಧ ಹರಿಹಾಯ್ದಿದ್ದಾರೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗುವ ಜಗ್ ಸುರಯ್ಯಾ ಮತ್ತು ನೀಲಭ್ ಅವರ ‘ದುನಿಯಾ ಕೆ ನೇತಾ’ ಎಂಬ ವ್ಯಂಗ್ಯ ಚಿತ್ರದಲ್ಲಿ ‘ತೆಹಲ್ಕಾ ಆರಂಭದಿಂದಲೂ ಎಲ್ಲರ ಹುಳುಕುಗಳನ್ನು ಬಯಲಿಗೆಳೆಯುವುದರಲ್ಲಿ ಪ್ರಸಿದ್ಧವಾಗಿತ್ತು. ಇದೀಗ ಅದರ ಸಂಪಾದಕನೇ ಎಲ್ಲರ ಮುಂದೆ ಬಯಲಾಗಿದ್ದಾನೆ…’ ಎಂದು ಚುಚ್ಚಿದ್ದಾರೆ. ಕರ್ನಾಟಕದ ಖ್ಯಾತ ವ್ಯಂಗ್ಯ ಚಿತ್ರಕಾರ ರಾಮಧ್ಯಾನಿ ತೇಜ್ಪಾಲ್ ಕುರಿತು ‘ವಿಕ್ರಮ’ ಪತ್ರಿಕೆಯಲ್ಲಿ (ಡಿ.೧, ೨೦೧೩) ರಚಿಸಿದ ವ್ಯಂಗ್ಯ ಚಿತ್ರವಂತೂ ಮುಟ್ಟಿ ನೋಡಿಕೊಳ್ಳುವಂತಿದೆ (ವ್ಯಂಗ್ಯಚಿತ್ರ ನೋಡಿ). ಬಹುತೇಕ ಪತ್ರಿಕೆಗಳಲ್ಲಿ ತೇಜ್ಪಾಲ್ ಪ್ರಕರಣದ ಕುರಿತು ಮೊನಚಾದ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ಮಾಧ್ಯಮರಂಗ ತನ್ನ ಕ್ಷೇತ್ರದ ಒಬ್ಬ ಸೆಲೆಬ್ರಿಟಿ ಪತ್ರಕರ್ತ ತಪ್ಪು ಮಾಡಿದಾಗ ಅದನ್ನು ಮುಚ್ಚಿಡದೆ ಆತನನ್ನು ಬಯಲಿಗೆಳೆಯುವ ಕೆಲಸ ಮಾಡಿದ್ದು ಮಾತ್ರ ಯಾರಾದರೂ ಮೆಚ್ಚುವಂತಹದೇ. ಮಾಧ್ಯಮರಂಗದವರೇನೂ ಆಕಾಶದಿಂದ ಇಳಿದು ಬಂದವರಲ್ಲ. ತಪ್ಪು ಮಾಡಿದಾಗ ಅವರಿಗೂ ಕಾನೂನು, ಶಿಕ್ಷೆ ಉಳಿದವರಿಗಿರುವಂತೆಯೇ ಅನ್ವಯಿಸುತ್ತದೆ ಎಂಬ ಸಂದೇಶವನ್ನು ಮಾಧ್ಯಮರಂಗ ವ್ಯಕ್ತಪಡಿಸಿರುವುದು ಸ್ವಾಗತಾರ್ಹ.
‘ಪ್ರತಿಷ್ಠಿತ ಪತ್ರಕರ್ತ’ ತರುಣ್ ತೇಜ್ಪಾಲ್ ನಾನುಂಟೋ ಮೂರು ಲೋಕವುಂಟೋ ಎಂದು ಬೀಗುತ್ತಿದ್ದ ವ್ಯಕ್ತಿ. ಅದಕ್ಕೆ ಕಾರಣಗಳೂ ಇದ್ದವು. ರಕ್ಷಣಾ ಇಲಾಖೆಯ ಗೋಟಾಳೆಗಳು, ಕ್ರಿಕೆಟ್ ಲೋಕದ ಮ್ಯಾಚ್ಫಿಕ್ಸಿಂಗ್ ಪ್ರಕರಣಗಳನ್ನು ಬಯಲಿಗೆಳೆದಾಗ ಯಾರಿಗೂ ಅಷ್ಟಾಗಿ ಗೊತ್ತಿರದಿದ್ದ ತೆಹಲ್ಕಾ ಪತ್ರಿಕೆ ಭಾರೀ ಜನಪ್ರಿಯತೆ ಪಡೆಯಿತು. ಪ್ರಸಿದ್ಧಿಯ ಉತ್ತುಂಗಕ್ಕೆ ದಿಢೀರನೆ ಏರಿತು. ಆದರೆ ಇದರೊಂದಿಗೆ ಅದರ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಅವರ ದುರಹಂಕಾರ, ದರ್ಪಗಳೂ ಉತ್ತುಂಗಕ್ಕೇರಿದ್ದು ಬೇರೆಯವರ ಗಮನಕ್ಕೆ ಬಂದರೂ ಅವರಿಗೆ ಮಾತ್ರ ಗೊತ್ತಾಗದಿದ್ದುದು ದೌರ್ಭಾಗ್ಯವೆನ್ನಬೇಕು. ಗೋವಾದ ‘ಥಿಂಕ್ಫೆಸ್ಟ್’ ಕಾರ್ಪೊರೇಟ್ ಜಗತ್ತಿನ ಒಂದು ವಿಲಾಸೀ ಕಾರ್ಯಕ್ರಮ. ಪ್ರತೀ ವರ್ಷ ನಡೆಯುವ ಕಾರ್ಪೊರೇಟ್ ವ್ಯಕ್ತಿಗಳ ಈ ವಿಲಾಸೀ ಸಮಾರಂಭಕ್ಕೆ ಗೋವಾದ ಹಲವು ಪ್ರಜ್ಞಾವಂತ ನಾಗರಿಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ೨೦೧೧ರಲ್ಲಿ ಗೋವಾದಲ್ಲಿ ‘ಥಿಂಕ್ಫೆಸ್ಟ್’ ನಡೆದಾಗ ಇದೇ ತೇಜ್ಪಾಲ್ ಅತಿಥಿಗಳಿಗೆ ಹೇಳಿದ್ದರಂತೆ: ‘ನೀವೀಗ ಗೋವಾದಲ್ಲಿದ್ದೀರಿ. ಎಷ್ಟು ಬೇಕಾದರೂ ಕುಡಿಯಿರಿ, ತಿನ್ನಿರಿ. ನಿಮಗೆ ಇಷ್ಟವಿರುವ ಯಾರ ಜೊತೆ ಬೇಕಾದರೂ ಮಲಗಿ, ಆನಂದಿಸಿ. ಆದರೆ ಬೆಳಗ್ಗೆ ಮಾತ್ರ ಬೇಗನೆ ಎzಳಿ.’ ತೇಜ್ಪಾಲ್ ಅವರ ಈ ಉದ್ಗಾರಕ್ಕೆ ಏನರ್ಥ? ‘ಥಿಂಕ್ಫೆಸ್ಟ್’ ಎನ್ನುವುದು ಮಜಾ ಉಡಾಯಿಸುವ ವಿಲಾಸೀ ಕಾರ್ಯಕ್ರಮವೇ? ಈ ವರ್ಷ ‘ಥಿಂಕ್ಫೆಸ್ಟ್ – ೨೦೧೩’ ಆರಂಭವಾಗುವ ಮುನ್ನವೇ ಗೋವಾದ ‘ಗೋವನ್ ಸೊಸೈಟಿ’ ಸದಸ್ಯರು ಕಾರ್ಯಕ್ರಮ ನಡೆಯುವ ಹೊಟೇಲ್ ಎದುರು ಭಾರೀ ಪ್ರತಿಭಟನೆ ನಡೆಸಿದ್ದರು. ಇದು ‘ಥಿಂಕ್ಫೆಸ್ಟ್’ ಅಲ್ಲ, ಆದರೆ ಇದು ‘ಸ್ಟಿಂಕ್ಫೆಸ್ಟ್’ ಎಂದು ಲೇವಡಿ ಮಾಡಿದ್ದರು. ‘ಥಿಂಕ್ಫೆಸ್ಟ್’ ಬುದ್ಧಿಜೀವಿಗಳ ಒಂದು ಘನಗಂಭೀರ ಕಾರ್ಯಕ್ರಮವೆಂದು ಬಿಂಬಿಸಲು ಆ ಕಾರ್ಯಕ್ರಮಕ್ಕೆ ಅಣ್ಣಾ ಹಜಾರೆಯವರನ್ನೋ ಅಥವಾ ಮೇಧಾಪಾಟ್ಕರ್ ಅವರನ್ನೋ ಅತಿಥಿಗಳಾಗಿ ಆಮಂತ್ರಿಸಲಾಗುತ್ತಿತ್ತು. ಆದರೆ ಅಲ್ಲಿ ನಡೆಯುತ್ತಿದ್ದುದೆಲ್ಲ ಬರೀ ಆಮೋದ ಪ್ರಮೋದಗಳೇ!
ಗೋವಾದ ‘ಥಿಂಕ್ಫೆಸ್ಟ್’ ಕಾರ್ಯಕ್ರಮ ಮೊದಲೇ ಹೇಳಿದಂತೆ ವಿಲಾಸೀ ಹಾಗೂ ದುಂದುವೆಚ್ಚದ ಬಾಬತ್ತು ಆಗಿರುವುದರಿಂದ ಅದಕ್ಕೆ ಪ್ರಾಯೋಜಕರಂತೂ ಬೇಕೇ ಬೇಕು. ಎರಡು ವರ್ಷದ ಹಿಂದೆ, ೨೦೧೧ರಲ್ಲಿ ತೆಹಲ್ಕಾ ಪತ್ರಿಕೆಯ ವರದಿಗಾರ ರಮಣ್ ಕೃಪಾಲ್ ಗೋವಾದ ಪ್ರಭಾವೀ ಗಣಿ ಲಾಬಿ ಕುರಿತು ತನಿಖಾ ವರದಿಯೊಂದನ್ನು ಪತ್ರಿಕೆಗೆ ಕಳಿಸಿದ್ದರು. ಆದರೆ ಅದು ತಿರಸ್ಕೃತವಾಯಿತು. ಸಂಪಾದಕ ತೇಜ್ಪಾಲ್ ಅದನ್ನು ಪ್ರಕಟಿಸುವ ಗೋಜಿಗೇ ಹೋಗಲಿಲ್ಲ. ಏಕೆಂದರೆ ‘ಥಿಂಕ್ಫೆಸ್ಟ್’ಗೆ ಆಗ ಅಧಿಕಾರದಲ್ಲಿದ್ದ ಗೋವಾದ ಕಾಂಗ್ರೆಸ್ ಸರ್ಕಾರದ ಬೆಂಬಲ ಅಗತ್ಯವಾಗಿತ್ತು. ಆ ವರದಿಯನ್ನು ತಾನೇಕೆ ಪ್ರಕಟಿಸಲಿಲ್ಲ ಎಂಬುದಕ್ಕೂ ತೇಜ್ಪಾಲ್ ಸಮರ್ಥನೆ ನೀಡಿದ್ದರು. ಆ ವರದಿಗಾರನ ಸಾಮರ್ಥ್ಯ ಅತ್ಯಂತ ಕಳಪೆ ದರ್ಜೆಯದು. ಅದೂ ಅಲ್ಲದೆ ಗೋವಾದ ಗಣಿಗಾರಿಕೆ ಕಂಪೆನಿಗಳಿಂದ ನಾವೆಂದೂ ಪ್ರಾಯೋಜಕತ್ವ ಪಡೆಯುವುದಿಲ್ಲ ಎಂದೂ ಕೊಚ್ಚಿಕೊಂಡಿದ್ದರು. ಈ ಬಾರಿ ‘ಥಿಂಕ್ಫೆಸ್ಟ್’ ನಡೆದಾಗ ಆಗಬಾರz ಆಗಿ ಹೋಗಿದೆ. ತನ್ನ ಕಚೇರಿಯ ಕಿರಿಯ ಸಹೋದ್ಯೋಗಿಯ ಮೇಲೆಯೇ ತರುಣ್ ತೇಜ್ಪಾಲ್ ಅವರು ಬಲವಂತದ ಲೈಂಗಿಕ ದೌರ್ಜನ್ಯ ನಡೆಸಿ ಮುಖಕ್ಕೆ ಮಸಿ ಬಳಿದುಕೊಂಡಿದ್ದಾರೆ. ಮುಂದಿನ ವರ್ಷ ‘ಥಿಂಕ್ಫೆಸ್ಟ್’ ನಡೆದಾಗ ಇನ್ನೇನು ಅನಾಹುತ ಆಗಲಿದೆಯೋ ಅಥವಾ ಆ ಕಾರ್ಯಕ್ರಮವೇ ರದ್ದಾಗಲಿದೆಯೋ (ಹಾಗೇನಾದರೂ ಆದರೆ ಗೋವಾದ ಪ್ರಜ್ಞಾವಂತ ನಾಗರಿಕರಿಗೆ ಸಾಕಷ್ಟು ಸಂತೋಷವಾಗಬಹುದು!) ಕಾದು ನೋಡಬೇಕು.
ದೆಹಲಿಯ ನಿರ್ಭಯ ಎಂಬ ಅಮಾಯಕ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದು ಆಕೆ ಸಾವಿಗೀಡಾದ ಬಳಿಕ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಒಂದೊಂದಾಗಿ ಬಯಲಿಗೆ ಬರತೊಡಗಿವೆ. ಆಧುನಿಕ ಯುಗದಲ್ಲಿ ಕಚೇರಿ, ಕಾರ್ಖಾನೆಗಳಲ್ಲಿ ವೃತ್ತಿಗಳಲ್ಲಿರುವ ಸ್ತ್ರೀಪುರುಷರು ಒಟ್ಟಿಗೇ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇರುವುದು ಸ್ವಾಭಾವಿಕ. ಆದರೆ ಅಂತಹ ಅವಕಾಶಗಳನ್ನು ತಮ್ಮ ಕೀಳು ದರ್ಜೆಯ ಕಾಮನೆಗಳ ಪೂರೈಕೆಗಾಗಿ ಬಳಸುವ ಪುರುಷರಿಗೆ ಏನೆನ್ನಬೇಕು? ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸಿದವರು ತಮ್ಮ ಅಧೀನರಾಗಿ ಕೆಲಸ ಮಾಡುವ ಅಥವಾ ತರಬೇತಿ ಪಡೆಯಲು ಬಂದಿರುವ ಯುವತಿಯರನ್ನು ಲೈಂಗಿಕವಾಗಿ ಪೀಡಿಸುವ ಹವ್ಯಾಸಕ್ಕಿಳಿದರೆ ಸಮಾಜದ ಒಟ್ಟಾರೆ ಸ್ವಾಸ್ಥ್ಯ ಕೆಡದೆ ಇದ್ದೀತೆ?
ಈಗ ದೆಹಲಿಯಲ್ಲಿ ಸುಪ್ರೀಂಕೋರ್ಟ್ನ ನ್ಯಾಯಾಧೀಶರಾಗಿದ್ದವರೊಬ್ಬರು ತಮ್ಮ ಬಳಿ ವೃತ್ತಿ ಕಲಿಯಲು ಬಂದ ಕೋಲ್ಕತ್ತಾದ ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಲೈಂಗಿಕ ಕಿರುಕುಳ ಕೊಟ್ಟು ಹಿಂಸಿಸಿದ್ದ ಆರೋಪವನ್ನು ಆ ಯುವತಿ ತಡವಾಗಿ ತನ್ನ ಬ್ಲಾಗ್ನಲ್ಲಿ ಹೊರಗೆಡವಿದ್ದಾರೆ. ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯ ಮೇಲೆ ಆರೋಪದ ತೂಗುಕತ್ತಿ ಇಳಿಬಿದ್ದಿರುವುದರಿಂದ ಸ್ವತಃ ಸುಪ್ರೀಂಕೋರ್ಟೇ ಮೂವರು ನ್ಯಾಯಾಧೀಶರ ಸಮಿತಿಯೊಂದನ್ನು ವಿಚಾರಣೆಗಾಗಿ ನೇಮಿಸಿದೆ. ಆ ನ್ಯಾಯಮೂರ್ತಿಯ (ಈಗ ನಿವೃತ್ತರು) ವರ್ತನೆಯನ್ನು ಸಾರ್ವಜನಿಕ ಜೀವನದ ಎಲ್ಲಾ ಪ್ರತಿಷ್ಠಿತರೂ ಖಂಡಿಸಿದ್ದಾರೆ. ಯಾವುದೇ ಕಾರಣಕ್ಕೆ ಇಂತಹ ಪ್ರಕರಣಗಳಲ್ಲಿ ಆರೋಪ ರುಜುವಾತಾದರೆ, ಅವರಿಗೆ ಶಿಕ್ಷೆಯಾಗಲೇಬೇಕು. ನಿವೃತ್ತ ನ್ಯಾಯಮೂರ್ತಿ, ಪ್ರಗತಿಶೀಲ ವಿಚಾರವಂತ ವಿ.ಆರ್.ಕೃಷ್ಣ ಅಯ್ಯರ್ ಅವರು ಕೂಡ ಇಲ್ಲಿ ಗೌಪ್ಯತೆಯ ರಕ್ಷಣೆಯ ಹೆಸರಲ್ಲಿ ಅಪರಾಧಿಗಳನ್ನು ರಕ್ಷಿಸಬಾರದು ಎಂದಿದ್ದಾರೆ. ಸುಪ್ರೀಂಕೋರ್ಟ್ನ ಆವರಣದಲ್ಲೆದ್ದಿರುವ ಈ ಪ್ರಕರಣದ ಬಿಸಿ ಆರುವ ಮೊದಲೇ ಗೋವಾದಲ್ಲಿ, ತೆಹಲ್ಕಾದ ‘ವಿಖ್ಯಾತ’ ಸಂಪಾದಕ ತರುಣ್ ತೇಜ್ಪಾಲ್ ಯುವಪತ್ರಕರ್ತೆಯ ಶೀಲಹರಣಕ್ಕೆ ಮುಂದಾಗಿದ್ದ ಪ್ರಕರಣ ದೇಶದ ಮಾಧ್ಯಮ ಜಗತ್ತಿನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. ತೇಜ್ಪಾಲ್ ಥರದ ಇನ್ನಷ್ಟು ಅಂತಹ ಮುಖವಾಡ ತೊಟ್ಟ ಪತ್ರಕರ್ತರಿಗೆ, ಪತ್ರಿಕಾ ಸಂಪಾದಕರಿಗೆ ಈ ಪ್ರಕರಣ ದಿಗಿಲುಂಟುಮಾಡಿದೆ. ಸಮಾಜದ ಗಣ್ಯರ, ರಾಜಕಾರಣಿಗಳ, ಸ್ವಾಮೀಜಿಗಳ ಹುಳುಕುಗಳನ್ನು ಆಧಾರವಿಲ್ಲದಿದ್ದರೂ ಬಯಲು ಮಾಡಿ, ತಾವೇ ನ್ಯಾಯಾಧೀಶರಾಗಿ ಅಂಥವರಿಗೆ ಶಿಕ್ಷೆ ವಿಧಿಸುತ್ತಿದ್ದ ಈ ಮುಖವಾಡದ ಪತ್ರಕರ್ತರಿಗೆ ಇನ್ನು ಮುಂದೆಯಾದರೂ ಎಚ್ಚರಿಕೆಯಿಂದ ವರ್ತಿಸಬೇಕು ಎಂಬ ಸಂದೇಶ ಸಿಕ್ಕಿದೆಯೆ? ದೊಡ್ಡ ಪತ್ರಿಕೆಗಳಷ್ಟೇ ಅಲ್ಲ, ರಾಜ್ಯಮಟ್ಟದ, ಜಿಲ್ಲಾಮಟ್ಟದ, ತಾಲ್ಲೂಕುಮಟ್ಟದ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸುವ ಕೆಲವು ಪತ್ರಕರ್ತರಲ್ಲೂ ತೇಜ್ಪಾಲ್ ಥರದವರಿದ್ದಾರೆ. ಸಮಾಜಕ್ಕೆ ನೀತಿಪಾಠ ಉಪದೇಶಿಸುವ ‘ಸಾಮಾಜಿಕ ಪೊಲೀಸ್ಗಿರಿ’ ತಮ್ಮದೆಂಬುದು ಈ ಮಂದಿಯ ಭ್ರಮೆ. ಆದರೆ ತಾವು ಮಾತ್ರ ಹೇಗೆ ಬೇಕಾದರೂ ಇರಬಹುದು ಎಂಬ ಉದ್ಧಟತನ. ಆದರೆ ಇಂತಹ ಉದ್ಧಟತನ ಎಲ್ಲ ಕಾಲಕ್ಕೂ ನಡೆಯದು. ಒಂದಲ್ಲ ಒಂದು ದಿನ ನೆತ್ತಿಯ ನೀರು ಕಾಲಿಗೆ ಹರಿದಂತೆ, ಬಯಲಿಗೆ ಬಂದೇ ಬರುತ್ತದೆ. ಅದಕ್ಕೆ ತರುಣ್ ತೇಜ್ಪಾಲ್ ಪ್ರಕರಣವೇ ದಿವ್ಯ ನಿದರ್ಶನ.
ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಅರವಿಂದ್ ಕೇಜ್ರಿವಾಲ್ ಈಗ ಆಮ್ ಆದ್ಮಿ ಪಕ್ಷ ಸ್ಥಾಪಿಸಿದ ಬಳಿಕ ಬಣ್ಣ ಬದಲಾಯಿಸಿರುವುದೂ ತೇಜ್ಪಾಲ್ ತರz ಇನ್ನೊಂದು ಪ್ರಕರಣ. ಈಗ ದೆಹಲಿಯಲ್ಲಿ ಚುನಾವಣೆಗೆ ಸ್ಫರ್ಧಿಸಿರುವ ಕೇಜ್ರಿವಾಲರ ಪಕ್ಷಕ್ಕೆ ನಗದು ರೂಪದಲ್ಲಿ ಭೂಗಳ್ಳರ, ಭೂಗತ ಪಾತಕಿಗಳ ಕಳ್ಳಹಣ ದೇಣಿಗೆಯಾಗಿ ಹರಿದುಬರುತ್ತಿರುವುದು ಕುಟುಕು ಕಾರ್ಯಾಚರಣೆಯಿಂದ ಬಯಲಾಗಿದೆ. ಭ್ರಷ್ಟಾಚಾರಿಗಳ ವಿರುದ್ಧ ಸಮರ ಸಾರಿದ್ದ ಕೇಜ್ರಿವಾಲ್ ಈ ಪರಿ ಅಕ್ರಮ ಹಣ ಸಂಗ್ರಹಿಸಿರುವುದು ಭ್ರಷ್ಟಾಚಾರದ ಮತ್ತೊಂದು ಮುಖವಲ್ಲದೆ ಮತ್ತೇನು?
ಸಾರ್ವಜನಿಕರಿಗಂತೂ, ಪ್ರತಿನಿತ್ಯ ವರದಿಯಾಗುವ ಪ್ರತಿಷ್ಠಿತರ ಇಂತಹ ಬಾನಗಡಿ ಪ್ರಕರಣಗಳನ್ನು ಓದಿ, ಕೇಳಿ ತಲೆಚಿಟ್ಟು ಹಿಡಿದು ಹೋಗಿದೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದೇ ಅವರಿಗೆ ತಿಳಿಯದಾಗಿದೆ. ಎಲ್ಲರ ಹಗರಣಗಳಿಗೆ ಕನ್ನಡಿ ಹಿಡಿಯುವ ಪತ್ರಕರ್ತರೂ ಹಗರಣಗಳ ಪ್ರಮುಖ ಪಾತ್ರಧಾರಿ ಎನಿಸಿಕೊಂಡರೆ ಜನರ ನಂಬಿಕೆಯ ಕನ್ನಡಿ ಒಡೆದು ಛಿದ್ರ ಚೂರಾಗದೆ ಇದ್ದೀತೆ? ಗಾಜಿನ ಮನೆಯಲ್ಲಿರುವವರು ಇತರರ ಮೇಲೆ ಕಲ್ಲೆಸೆಯಬಾರದು ಎಂಬ ಕನಿಷ್ಠ ತಿಳಿವಳಿಕೆಯನ್ನು ಮಾಧ್ಯಮರಂಗ ಅರಿತುಕೊಳ್ಳುವುದು ಯಾವಾಗ?
ರಾಜಕಾರಣಿಗಳ, ಪ್ರಭಾವೀ ವ್ಯಕ್ತಿಗಳ ಹುಳುಕುಗಳನ್ನು ಕುಟುಕು ಕಾರ್ಯಾಚರಣೆ ಮೂಲಕ ಬಯಲಿಗೆಳೆದು ಪ್ರಸಿದ್ಧಿಗೆ ಬಂದಿದ್ದ ‘ತೆಹಲ್ಕಾ’ ಸಂಪಾದಕ ಈಗ ತಾನೇ ಅಪರಾಧೀ ಸ್ಥಾನದಲ್ಲಿ ನಿಲ್ಲಬೇಕಾಗಿದೆ. ಬೇರೆಯವರ ಹಗರಣಗಳಿಗೆ ಕನ್ನಡಿ ಹಿಡಿಯುವ ಪತ್ರಕರ್ತರೇ ಹಗರಣಗಳ ಪ್ರಮುಖ ಪಾತ್ರಧಾರಿ ಎನಿಸಿಕೊಂಡರೆ ಜನರ ನಂಬಿಕೆಯ ಕನ್ನಡಿ ಒಡೆದು ಛಿದ್ರ ಚೂರಾಗದೆ ಇದ್ದೀತೆ? ಗಾಜಿನ ಮನೆಯಲ್ಲಿರುವವರು ಇತರರ ಮೇಲೆ ಕಲ್ಲೆಸೆಯಬಾರದು ಎಂಬ ಕನಿಷ್ಠ ತಿಳಿವಳಿಕೆಯನ್ನು ಮಾಧ್ಯಮರಂಗ ಅರಿತುಕೊಳ್ಳುವುದು ಯಾವಾಗ?