by Du Gu Lakshman
ಹಣ ಗಳಿಸುವುದು ಅಥವಾ ಶ್ರೀಮಂತರಾಗುವುದು ಖಂಡಿತ ಅಪರಾಧವಲ್ಲ. ಆದರೆ ಹಣ ಗಳಿಕೆಗೆ ಹಿಡಿದ ಮಾರ್ಗ ಯಾವುದು ಎಂಬುದು ಬಲು ಮುಖ್ಯ. ಪ್ರಾಮಾಣಿಕ ದುಡಿಮೆ ಮೂಲಕ ಹಣ ಗಳಿಸಿದರೆ ಅದನ್ನು ಯಾರೂ ತಪ್ಪು ಎನ್ನಲಾರರು. ಅಡ್ಡ ಹಾದಿಯ ಮೂಲಕ ಹಣ ಗಳಿಸಿದರೆ ಅದು ಖಂಡಿತ ಅಪರಾಧವೇ. ಅದರಲ್ಲೂ ಸೇವೆಯ ಸೋಗಿನಲ್ಲಿ ಸತ್ತವರ ಹೆಸರಲ್ಲಿ ಹಣ ಸಂಗ್ರಹಿಸಿ ಅದನ್ನು ಸ್ವಂತದ ಖಾತೆಗೆ ವರ್ಗಾಯಿಸಿಕೊಂಡು ಮಜಾಮಾಡಿದರೆ ಅದಕ್ಕಿಂತ ದೊಡ್ಡ ಅಪರಾಧ ಇನ್ನೊಂದಿಲ್ಲ.
ಮಾನವಹಕ್ಕು ಹೋರಾಟಗಾರ್ತಿ ಎಂಬ ಸ್ವಯಂಘೋಷಿತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಣ ಗಳಿಕೆಗಾಗಿ ಮಾಡಿದ್ದು ಇಂತಹ ಮಹಾಪರಾಧವನ್ನು! ಇಸವಿ ೨೦೦೦ದಲ್ಲಿ ನಡೆದ ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಮಾನವಹಕ್ಕು ಕಾರ್ಯಕರ್ತೆಯಾಗಿ ದಿಢೀರನೆ ಎದ್ದು ಬಂದಾಕೆ ಈ ತೀಸ್ತಾ ಸೆಟಲ್ವಾಡ್. ಆ ಸಂದರ್ಭದಲ್ಲಿ ಆಕೆಗೆ ತನ್ನ ಬ್ಯಾಂಕ್ ಖಾತೆಗೆ ತುಂಬಲು ಕೈಯಲ್ಲಿ ನೆಟ್ಟಗೆ ೫೦೦ ರೂ. ಕೂಡ ಇರಲಿಲ್ಲ. ೨೦೦೧ ಜನವರಿಯಿಂದ ೨೦೦೨ ಡಿಸೆಂಬರ್ ತನಕ ಆಕೆಯ ಬ್ಯಾಂಕ್ ಖಾತೆಯಲ್ಲಿ ಹಣವೇ ಇರಲಿಲ್ಲ. ಆದರೆ ಗುಜರಾತ್ ಗಲಭೆಗಳ ಬಳಿಕ, ಅಂದರೆ ೨೦೦೩ ಜನವರಿ ೧ರಿಂದ ಆಕೆಯ ಬ್ಯಾಂಕ್ಖಾತೆಗೆ ಹಣ ಹರಿದುಬರತೊಡಗಿತು. ೨೦೦೩ ಜನವರಿ ೧ರಿಂದ ೨೦೧೩ ಮೇ ೩೧ರವರೆಗೆ ಆಕೆಯ ಬ್ಯಾಂಕ್ ಖಾತೆಗೆ ಜಮಾ ಆದದ್ದು ಬರೋಬ್ಬರಿ ೧,೪೯,೪೪,೮೫೧ ರೂ. ಇದು ಹೇಗೆ ಸಾಧ್ಯಎಂದು ನಿಮಗೆ ಅಚ್ಚರಿಯಾಗಬಹುದಲ್ಲವೆ? ಮುಂದೆ ಓದುತ್ತಾ ಹೋಗಿ – ಆಗ ನಿಮಗೇ ತಿಳಿಯುತ್ತದೆ ಇದೆಲ್ಲ ಹೇಗೆ ಸಾಧ್ಯವಾಯಿತೆಂದು.
ತನ್ನ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೆ ತೀಸ್ತಾ ಹುಟ್ಟು ಹಾಕಿದ ಸಂಸ್ಥೆ ಸಬರಂಗ್ ಟ್ರಸ್ಟ್. ಆ ಟ್ರಸ್ಟ್ಗೆ ಮೂವರು ಟ್ರಸ್ಟಿಗಳು. ಅವರೆಂದರೆ ತೀಸ್ತಾ ಸೆಟಲ್ವಾಡ್, ಜಾವೇದ್ ಆನಂದ್ (ಆಕೆಯ ಪತಿ) ಮತ್ತು ಅಮಿಲಿ ಸೆಟಲ್ವಾಡ್ (ಆಕೆಯ ಸೋದರಿ). ತೀಸ್ತಾ ಹಾಗೂ ಜಾವೇದ್ ಆನಂದ್ ಇಬ್ಬರೂ ಸಬರಂಗ್ ಟ್ರಸ್ಟ್ನಿಂದ ಪ್ರತೀ ತಿಂಗಳು ಪಡೆಯುವ ವೇತನ ತಲಾ ೪೦ ಸಾವಿರ ರೂ. ತೀಸ್ತಾಳ ಪುತ್ರಿ ತಮಾರಾ ಸೆಟಲ್ವಾಡ್ ಕೂಡ ಪ್ರತಿ ತಿಂಗಳು ಅದೇ ಟ್ರಸ್ಟ್ನಿಂದ ತನ್ನ ಪಾಕೆಟ್ ಮನಿಯಾಗಿ ೭,೫೦೦ ರೂ. ಪಡೆಯುತ್ತಾಳೆ. ಇದೊಂದು ಕುಟುಂಬz ಟ್ರಸ್ಟ್. ಆದರೆ ಸಾರ್ವಜನಿಕ ಉzಶಕ್ಕಾಗಿ ನೋಂದಾಯಿಸಲ್ಪಟ್ಟಿದ್ದು. ಸಾರ್ವಜನಿಕ ಟ್ರಸ್ಟ್ ಕಾಯ್ದೆ ಪ್ರಕಾರ, ಯಾವುದೇ ಟ್ರಸ್ಟಿಗಳು ತಮ್ಮ ಟ್ರಸ್ಟ್ನಿಂದ ವೇತನ ಪಡೆಯುವಂತಿಲ್ಲ. ಆದರೆ ತೀಸ್ತಾ ಮತ್ತು ಆಕೆಯ ಪತಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ತಮ್ಮ ವೇತನಕ್ಕಾಗಿ ಪಡೆದು ಹಣ ದುರುಪಯೋಗಪಡಿಸಿಕೊಂಡಿದ್ದಾರೆ.
ಆರ್ಟಿಐಗೆ ಅರ್ಜಿ ಹಾಕಿ ಪಡೆದಿರುವ ದಾಖಲೆಗಳ ಪ್ರಕಾರ, ತೀಸ್ತಾ ತನ್ನ ‘ಸಿಟಿಜನ್ ಫಾರ್ ಜಸ್ಟೀಸ್ ಆಂಡ್ ಪೀಸ್’ ಎಂಬ ಸಂಸ್ಥೆಗೆ ಪಡೆದಿರುವ ವಿದೇಶಿ ದೇಣಿಗೆಯ ಒಟ್ಟು ಮೊತ್ತ ೯೫,೧೯೫,೪೦. ಇದೆಲ್ಲವೂ ಐಡಿಬಿಐ ಬ್ಯಾಂಕ್ನ ಖಾರ್ ಶಾಖೆಯಲ್ಲಿ ಜಮೆಯಾಗಿದೆ (ಖಾತೆ ಸಂಖ್ಯೆ ೦೧೪೦೪೦೦೦೨೦೪೭೩೬). ಆದರೆ ಇಷ್ಟೂ ಮೊತ್ತ ತೀಸ್ತಾ ಸೆಟಲ್ವಾಡರ ಸಬ್ರಂಗ್ ಟ್ರಸ್ಟ್ಗೆ ವರ್ಗಾವಣೆಯಾಗಿದೆ. ತೀಸ್ತಾ ಅವರ ಉಳಿತಾಯ ಖಾತೆ ಇರುವುದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ. ೨೦೦೧ರಲ್ಲಿ ಈ ಖಾತೆಯಲ್ಲಿ ಒಂದು ಪೈಸೆ ಕೂಡ ಹಣ ಜಮೆ ಆಗಿರಲಿಲ್ಲ. ೨೦೦೨ರಲ್ಲೂ ಅಷ್ಟೆ. ಆದರೆ ೨೦೦೩ ಜನವರಿ ೧ರಿಂದ ೨೦೧೩ ಮೇ ೩೧ರವರೆಗೆ ಈ ಖಾತೆಗೆ ಹರಿದುಬಂದಿದ್ದು ೧,೪೯,೪೪,೮೫೧ ರೂ. ತೀಸ್ತಾಳ ಇನ್ನೊಂದು ಉಳಿತಾಯ ಖಾತೆ ಇರುವುದು ಐಡಿಬಿಐ ಬ್ಯಾಂಕ್ನಲ್ಲಿ. ಈ ಖಾತೆಯಲ್ಲೂ ೨೦೦೫ ಏ. ೩೦ರಿಂದ ಮೇ ೩೦ರವರೆಗೆ ೬೧,೪೮,೫೩೬ ರೂ. ಜಮೆ ಆಗಿದೆ. ಅದೇ ರೀತಿ ಆಕೆಯ ಪತಿ ಜಾವೇದ್ ಆನಂದ್ ಅವರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ೨೦೦೩ರ ಜ. ೧ರ ನಂತರ ಹರಿದುಬಂದಿದ್ದು ೯೨,೨೧,೧೯೧ ರೂ. ಜೊತೆಗೆ ಆತನ ಐಡಿಬಿಐ ಬ್ಯಾಂಕ್ನ ಉಳಿತಾಯ ಖಾತೆಗೂ ೩೬,೨೩,೯೮೧ ರೂ. ಹರಿದುಬಂದಿದೆ. ಅಷ್ಟೇ ಅಲ್ಲ ತೀಸ್ತಾಳ ಪುತ್ರಿ ತಮಾರಾಳ ಬ್ಯಾಂಕ್ ಖಾತೆಗೂ ೨೦೧೧ರ ಫೆಬ್ರವರಿಯಿಂದ ೨೦೧೩ರ ಮಾರ್ಚ್ವರೆಗೆ ಜಮೆ ಆಗಿದ್ದು ೩,೫೨,೨೧೩ ರೂ. ತೀಸ್ತಾ ಸೆಟಲ್ವಾಡರ ಐಡಿಬಿಐ ಮತ್ತು ಯೂನಿಯನ್ ಬ್ಯಾಂಕ್ನ ಉಳಿತಾಯ ಖಾತೆಗಳಿಗೆ ಒಟ್ಟು ಜಮಾ ಆಗಿದ್ದು ೨,೧೦,೯೩,೩೮೭ ರೂ. ಅದೇ ರೀತಿ ಆಕೆಯ ಪತಿ ಜಾವೇದ್ ಖಾತೆಗೆ ಜಮಾ ಆಗಿದ್ದು ೧,೨೮,೪೫,೧೭೨ ರೂ.
ಈ ಎಲ್ಲ ಅಂಕಿಸಂಖ್ಯೆಗಳು ಹೇಳುವ ಕಥೆಯಾದರೂ ಏನು? ಲಕ್ಷಾಂತರ, ಕೋಟ್ಯಂತರ ರೂ. ಸಮಾಜಸೇವಕಿಯೊಬ್ಬಳ ಬ್ಯಾಂಕ್ ಖಾತೆಗೆ ಇದ್ದಕ್ಕಿದ್ದಂತೆ ಜಮಾ ಆಗುತ್ತದೆ ಅಂದರೆ ಏನರ್ಥ? ಈ ಹಣ ಬಂದಿದ್ದಾದರೂ ಎಲ್ಲಿಂದ? ಅಲ್ಲೇ ಇರುವುದು ಸ್ವಾರಸ್ಯ! ಗುಜರಾತ್ನಲ್ಲಿ ಗಲಭೆಗಳು ಆರಂಭವಾದಾಗ ಸಂತ್ರಸ್ತ ಹಾಗೂ ಮೃತ ಮುಸ್ಲಿಮರ ಪರವಾಗಿ ಹೋರಾಡಲು ತೀಸ್ತಾ ಸಮಾಜ ಸೇವೆಯ ಮುಖವಾಡ ತೊಟ್ಟಳು. ಗೋಧ್ರೋತ್ತರ ಗಲಭೆಯಲ್ಲಿ ಹಿಂದುಗಳು ಹಾಗೂ ಮುಸ್ಲಿಮರು ಎರಡೂ ಕೋಮಿನವರು ಸಾಕಷ್ಟು ಸಂಖ್ಯೆಯಲ್ಲಿ ಸತ್ತಿದ್ದರು. ಆದರೆ ತೀಸ್ತಾ ಕಣ್ಣಿಗೆ ಕಂಡದ್ದು ಮುಸ್ಲಿಂ ಸಂತ್ರಸ್ತರು ಮಾತ್ರ! ಗೋಧ್ರೋತ್ತರ ಗಲಭೆಗೂ ಮುನ್ನ ನಡೆದ ಗೋಧ್ರಾ ರೈಲು ಅಗ್ನಿ ದುರಂತದಲ್ಲಿ ೬೨ಕ್ಕೂ ಹೆಚ್ಚು ರಾಮಭಕ್ತರು ಬೆಂದು ಕರಕಲಾಗಿದ್ದರು. ಅಯೋಧ್ಯೆಯಿಂದ ಬರುತ್ತಿದ್ದ ಆ ರೈಲಿಗೆ ಮುಸಲ್ಮಾನ್ ಕಿಡಿಕೇಡಿಗಳೇ ಬೆಂಕಿ ಹಚ್ಚಿ ರಾಮ ಭಕ್ತರನ್ನು ಕೊಂದಿದ್ದರೆನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ರಾಮಭಕ್ತರ ಆ ದಾರುಣ ಸಾವಿಗೆ ತೀಸ್ತಾ ಎಂಬ ಸಮಾಜ ಸೇವಕಿಯ ಮನಸ್ಸು ಮರುಗಲೇ ಇಲ್ಲ. ಅದೊಂದು ಮಾನವ ಹಕ್ಕು ಉಲ್ಲಂಘನೆಯ ಭೀಕರ ಘಟನೆಯೆಂದು ಆಕೆಗೆ ಅನಿಸಲೇ ಇಲ್ಲ. ಆದರೆ ರಾಮಭಕ್ತರ ಸಾವಿಗೆ ಹಿಂದುಗಳು ಪ್ರತೀಕಾರ ರೂಪವಾಗಿ ಕೆಲವು ಮುಸಲ್ಮಾನರನ್ನು ಕೊಂದಾಗ ಮಾತ್ರ ಅದೊಂದು ಮಾನವ ಹಕ್ಕು ಉಲ್ಲಂಘನೆಯ ದಾರುಣ ಘಟನೆ ಎಂದು ತೀಸ್ತಾ ಸೆಟಲ್ವಾಡ್ ಮಮ್ಮಲ ಮರುಗಿದರು. ತಕ್ಷಣ ಎದ್ದು ನಿಂತು ಸಂಘಟನೆ ಕಟ್ಟಿ , ಟ್ರಸ್ಟ್ ಸ್ಥಾಪಿಸಿ ಮುಸ್ಲಿಂ ಸಂತ್ರಸ್ತರಿಗಾಗಿ ಕೋರ್ಟು ಕಚೇರಿಗಳಿಗೆ ಎಡತಾಕಿದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಈ ದಾರುಣ ಘಟನೆಗೆ ಕಾರಣರೆಂದು ಆರೋಪಿಸಿ ಅವರ ವಿರುದ್ಧ ಪೊಲೀಸರಿಗೆ, ನ್ಯಾಯಾಲಯಕ್ಕೆ ದೂರು ದಾಖಲಿಸಿದರು. ಮುಸ್ಲಿಮರ ವಿರುದ್ಧ ತಿರುಗಿ ಬೀಳಲು ಹಿಂದುಗಳಿಗೆ ಆದೇಶ ಕೊಟ್ಟಿz ಮುಖ್ಯಮಂತ್ರಿ ಮೋದಿ ಎಂದು ಆಕೆ ಬೊಬ್ಬಿಟ್ಟಳು. ಆದರೆ ಮೋದಿ ಮಾತ್ರ ಆ ಸಮಯದಲ್ಲಿ ಗಲಭೆಪೀಡಿತ ಗುಜರಾತ್ನಲ್ಲಿ ಶಾಂತಿ ನೆಲೆಸಲು ಅಗತ್ಯವಾದ ಕ್ರಮ ಕೈಗೊಳ್ಳುವುದರಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದರು. ಮೋದಿಯನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಿ, ಜೈಲಿಗೆ ಕಳಿಸಬೇಕೆನ್ನುವುದು ತೀಸ್ತಾಳ ಷಡ್ಯಂತ್ರವಾಗಿತ್ತು. ಆಕೆಯ ಆಪ್ತರಾದ ರೈಸ್ಖಾನ್ ಪಠಾಣ್, ಝಹೀರಾ ಶೇಕ್, ಯಾಸ್ಮಿನ್ ಶೇಕ್ ಮೊದಲಾದವರನ್ನು ಬಳಸಿಕೊಂಡು ಮೋದಿಯನ್ನು ಹಣಿಯಲು ಶತಪ್ರಯತ್ನ ಮಾಡಿದಳು. ತನ್ನ ಆಪ್ತರ ಮೂಲಕ ಮೋದಿ ವಿರುದ್ಧ ಒಂದಾದ ಮೇಲೊಂದು ಗಂಭೀರ ಆರೋಪದ ದೂರುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದಳು. ಆದರೆ ತೀಸ್ತಾಳ ಆಪ್ತರೆನಿಸಿಕೊಂಡ ರೈಸ್ಖಾನ್ ಪಠಾಣ್, ಯಾಸ್ಮಿನ್ ಶೇಕ್, ಝಹೀರಾ ಶೇಕ್ ಮೊದಲಾದವರೇ ತೀಸ್ತಾ ವಿರುದ್ಧ ಅನಂತರ ತಿರುಗಿ ಬಿದ್ದರು. ಆಕೆಯ ಷಡ್ಯಂತ್ರವನ್ನು ಬಯಲಿಗೆಳೆದರು. ಮೋದಿ ವಿರುದ್ಧ ಆಕೆ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಗಳಿಗೆ ಸೂಕ್ತ ಸಾಕ್ಷ್ಯಾಧಾರಗಳೇ ಇರಲಿಲ್ಲ. ಅಲ್ಲಿದ್ದುದುದೆಲ್ಲ ಆಧಾರರಹಿತ ಆರೋಪಗಳು, ಸುಳ್ಳು ಸಾಕ್ಷ್ಯಗಳು. ನ್ಯಾಯಾಲಯದಲ್ಲಿ ವಿಚಾರಣೆಯ ಪ್ರಕ್ರಿಯೆ ಶುರುವಾದಾಗ ಇವೆಲ್ಲ ಒಂದೊಂದಾಗಿ ಬಯಲಾಗುತ್ತಾ ಹೋಯಿತು. ಕೊನೆಗೆ ನ್ಯಾಯಾಲಯ ಗುಜರಾತ್ ಗಲಭೆಗಳಲ್ಲಿ ಮುಖ್ಯಮಂತ್ರಿ ಮೋದಿಯ ಪಾತ್ರ ಏನೇನೂ ಇಲ್ಲ ಎಂದು ಕ್ಲೀನ್ಚಿಟ್ ನೀಡಿದಾಗ ತೀಸ್ತಾಳ ಮುಖ ಇಂಗು ತಿಂದ ಮಂಗನಂತಾಗಿತ್ತು. ಆದರೇನು, ಮೋದಿ ವಿರುದ್ಧ ಒಂದಲ್ಲ ಒಂದು ಕೇಸ್ ಹಾಕಲು ಆಕೆ ಹುನ್ನಾರ ನಡೆಸುತ್ತಲೇ ಇದ್ದಾಳೆ.
ಇದೀಗ ಅಹಮದಾಬಾದ್ನ ಕ್ರೈಂ ಬ್ರಾಂಚ್ ಆಕೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ ಅಧಿಕಾರಿಗಳಿಗೆ ಆದೇಶ ನೀಡಿದೆ. ತೀಸ್ತಾ ಮತ್ತು ಆಕೆಯ ಪತಿಯ ಬಂಧನಕ್ಕೂ ನ್ಯಾಯಾಲಯ ಆದೇಶ ನೀಡಿತ್ತು. ಹಣ ದುರ್ಬಳಕೆಯ ವಿರುದ್ಧ ಅಹಮದಾಬಾದ್ನ ಕ್ರೈಂ ಬ್ರಾಂಚ್ ತೀಸ್ತಾ, ಜಾವೇದ್ ಆನಂದ್ ಮತ್ತು ಇತರ ಮೂವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದೆ. ಗುಜರಾತ್ನ ಗುಲ್ಬರ್ಗ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಗಲಭೆ ಸಂದರ್ಭದಲ್ಲಿ ಅಗ್ನಿಗಾಹುತಿಯಾಗಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಮೃತರಿಗೆ ಪರಿಹಾರ ನೀಡಲು ಧಾವಿಸಿದ ತೀಸ್ತಾ ಸಾಕಷ್ಟು ವಿದೇಶಿ ದೇಣಿಗೆ ಸಂಗ್ರಹಿಸಿದ್ದರು. ಸಂತ್ರಸ್ತ ಕುಟುಂಬಗಳಿಗೆ ಆ ಹಣ ವಿತರಿಸಬೇಕಾಗಿತ್ತು. ಆದರೆ ಆ ಕುಟುಂಬಗಳಿಗೆ ಇದುವರೆಗೆ ಒಂದೇ ಒಂದು ಚಿಕ್ಕಾಸು ಹಣ ಕೂಡ ತೀಸ್ತಾಳ ಕಡೆಯಿಂದ ಬಂದಿಲ್ಲ. ಇದನ್ನು ವಿರೋಧಿಸಿ ಗುಲ್ಬರ್ಗ್ ಸೊಸೈಟಿಯ ಪ್ರಮುಖರು ತೀಸ್ತಾ ವಿರುದ್ಧ ತಿರುಗಿ ಬಿದ್ದು ಕ್ರೈಂ ಬ್ರಾಂಚ್ಗೆ ಹಣ ದುರುಪಯೋಗದ ದೂರು ನೀಡಿದ್ದರು. ತೀಸ್ತಾ ಈಗ ಜಾಮೀನು ಪಡೆದು ಸದ್ಯಕ್ಕೆ ಬಚಾವ್ ಆಗಿದ್ದಾಳೆ. ಆದರೆ ತಾನು ಸಂಗ್ರಹಿಸಿದ ಕೋಟಿ ಕೋಟಿ ಹಣದ ಬಳಕೆ ಹೇಗಾಯಿತು ಎಂಬುದನ್ನು ಆಕೆ ಸಾರ್ವಜನಿಕರಿಗೆ ವಿವರಿಸಲೇಬೇಕಾಗಿದೆ.
ಇಷ್ಟಕ್ಕೂ ತೀಸ್ತಾ ಸೆಟಲ್ವಾಡ್ ಯಾರು? ಆಕೆಯ ಹಿನ್ನೆಲೆ ಏನು? ಆಕೆ ಹಿಂದುವೇ ಅಥವಾ ಮುಸ್ಲಿಮಳೆ ಎಂಬ ಕುತೂಹಲ ನಿಮಗಿರಬಹುದು. ತೀಸ್ತಾ ಹುಟ್ಟಿದ್ದು ೧೯೬೨ರಲ್ಲಿ. ಮುಂಬೈ ಮೂಲದ ವಕೀಲರಾದ ಅತುಲ್ ಮತ್ತು ಸೀತಾ ಸೆಟಲ್ವಾಡ್ ದಂಪತಿಯ ಪುತ್ರಿ. ಆಕೆಯ ತಂದೆ ಅತುಲ್ ಭಾರತದ ಮೊದಲ ಅಟಾರ್ನಿ ಜನರಲ್ ಎಂ.ಸಿ.ಸೆಟಲ್ವಾಡ್ ಅವರ ಪುತ್ರ. ತೀಸ್ತಾ ಮದುವೆಯಾಗಿದ್ದು ಪತ್ರಕರ್ತ ಜಾವೇದ್ ಆನಂದ್ ಅವರನ್ನು. ಆಕೆಗೆ ಇಬ್ಬರು ಮಕ್ಕಳು – ಪುತ್ರಿ ತಮಾರ ಹಾಗೂ ಪುತ್ರ ಜಿಬ್ರಾನ್.
೧೯೮೩ರಲ್ಲಿ ಬಾಂಬೆ ಯೂನಿವರ್ಸಿಟಿಯಲ್ಲಿ ತತ್ತ್ವಶಾಸ್ತ್ರದಲ್ಲಿ ಪದವಿ ಪಡೆದ ಬಳಿಕ ಆಕೆ ಪ್ರವೇಶಿಸಿದ್ದು ಪತ್ರಿಕೋದ್ಯಮ ಕ್ಷೇತ್ರಕ್ಕೆ. ಮುಂಬೈನ ‘ದಿ ಡೈಲಿ’ ಹಾಗೂ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಗಳಿಗೆ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು. ಸ್ವಲ್ಪ ಕಾಲ ‘ಬ್ಯುಸಿನೆಸ್ ಇಂಡಿಯಾ’ ಪತ್ರಿಕೆಗೂ ವರದಿಗಾರ್ತಿಯಾಗಿದ್ದಳು. ಅನಂತರ ಆಕೆ ಹಾಗೂ ಆಕೆಯ ಪತಿ ಇಬ್ಬರೂ ಆ ಉದ್ಯೋಗ ತೊರೆದು ತಮ್ಮದೇ ಆದ ‘ಕಮ್ಯೂನಲಿಸಂ ಕಂಬ್ಯಾಟ್’ ಎಂಬ ಪತ್ರಿಕೆಯನ್ನು ಹೊರತಂದರು. ಅದಾದಮೇಲೆ ‘ಸಿಟಿಜನ್ಸ್ ಫಾರ್ ಜಸ್ಟೀಸ್ ಆಂಡ್ ಪೀಸ್’ (ಸಿಜೆಪಿ) ಎಂಬ ಎನ್ಜಿಓ ಸಂಸ್ಥೆ ಹುಟ್ಟು ಹಾಕಿದರು. ಈ ಎನ್ಜಿಓ ಮಾತ್ರ ಯಾರಿಗೂ ನ್ಯಾಯವನ್ನಾಗಲಿ, ಶಾಂತಿಯನ್ನಾಗಲಿ ಕರುಣಿಸುವ ಗೋಜಿಗೇ ಹೋಗಲಿಲ್ಲ ಎನ್ನುವುದು ಒಂದು ಕ್ರೂರ ವ್ಯಂಗ್ಯ. ತೀಸ್ತಾ ಸೆಟಲ್ವಾಡ್ ಗಲಭೆಗೆ ಸಂಬಂಧಿಸಿ ಮೊಕದ್ದಮೆಗಳನ್ನು ತಿರುಚಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಗುಜರಾತ್ ಸರ್ಕಾರವನ್ನು ಹಣಿಯಲು ಷಡ್ಯಂತ್ರ ಹೂಡಿದ್ದು ಕೊನೆಗೂ ಸುಪ್ರೀಂಕೋರ್ಟ್ ತನಿಖೆಯ ಮೂಲಕ ಬಯಲಾಯಿತು. ಸುಪ್ರೀಂಕೋರ್ಟ್ ಹಲವಾರು ಬಾರಿ ತೀಸ್ತಾಳಿಗೆ ಛೀಮಾರಿ ಹಾಕಿದ ಪ್ರಸಂಗಗಳೂ ನಡೆದಿವೆ. ಆದರೂ ಆಕೆಗೆ ಬುದ್ಧಿ ಬಂದಿಲ್ಲ. ಈಗ ಮಾತ್ರ ಸಾರ್ವಜನಿಕ ದೇಣಿಗೆ ಹಣವನ್ನು ಸ್ವಂತದ ಖಾತೆಗೆ ವರ್ಗಾಯಿಸುವ ಮೂಲಕ ತೀಸ್ತಾಳ ಮುಖವಾಡ ಕಳಚಿಬಿದ್ದಿದೆ.
ತೀಸ್ತಾ ಸೆಟಲ್ವಾಡ್ಗೆ ಗುಜರಾತ್ ಗಲಭೆ ಸಂತ್ರಸ್ತರ ಕುರಿತು ನಿಜವಾದ ಕಾಳಜಿ ಇದ್ದಿz ಆಗಿದ್ದರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಹಣವನ್ನು ಅವರಿಗೆ ತಲುಪಿಸಬೇಕಾಗಿತ್ತು. ಅವರಿಗೊಂದು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗಬೇಕಿತ್ತು. ಆದರೆ ಅದಾವುದನ್ನೂ ಆಕೆ ಮಾಡಲಿಲ್ಲ. ಸಂತ್ರಸ್ತರನ್ನು ಎತ್ತಿಕಟ್ಟಿ , ಅವರ ಮೂಲಕ ಮೋದಿ ಸರ್ಕಾರದ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿಸಿದ್ದು ಬಿಟ್ಟರೆ ಬೇರೆ ಏನನ್ನೂ ಮಾಡಲಿಲ್ಲ. ಇಷ್ಟಾದರೂ ಆಕೆಯನ್ನು ಕೇಂದ್ರದ ಯುಪಿಎ ಸರ್ಕಾರ ಹಾಡಿ ಹೊಗಳಿದ್ದು, ಸೋನಿಯಾ ಅಧ್ಯಕ್ಷತೆಯ ರಾಷ್ಟ್ರೀಯ ಸಲಹಾ ಸಮಿತಿಗೆ ಆಕೆಯನ್ನು ಸದಸ್ಯೆಯನ್ನಾಗಿ ಮಾಡಿದ್ದು, ಅಷ್ಟೇ ಅಲ್ಲದೆ ೨೦೦೨ರಲ್ಲಿ ಆಕೆಗೆ ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿದ್ದು ಎಂತಹ ಸೋಜಿಗ! ತೀಸ್ತಾ ಮೋದಿಯ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾಳೆ ಎಂಬುದೊಂದೇ ಅದಕ್ಕೆ ಅರ್ಹತೆಯಾಗಿರಬಹುದು!
ತೀಸ್ತಾ ಸೆಟಲ್ವಾಡ್ ಥರದ ಇನ್ನೂ ಅನೇಕ ಮುಖವಾಡ ತೊಟ್ಟ ಎಡಬಿಡಂಗಿಗಳಿದ್ದಾರೆ. ಅವರೆಲ್ಲರಿಗೂ ಮೋದಿಯನ್ನು ಹಣಿಯುವುದೇ ಬದುಕಿನ ಮುಖ್ಯ ಗುರಿ. ಈ ನೆಲದ ಕಾನೂನು, ಸುವ್ಯವಸ್ಥೆ, ಪ್ರಜಾತಂತ್ರ ಯಾವುದರಲ್ಲೂ ಈ ಮಂದಿಗೆ ನಂಬಿಕೆಯಿಲ್ಲ. ಮೋದಿಗೆ ಮಾತ್ರ ಇವೆಲ್ಲದರಲ್ಲೂ ನಂಬಿಕೆಯಿದೆ. ಹಾಗಾಗಿಯೇ ಜನರು ಮೋದಿ ಹೋದಲ್ಲೆಲ್ಲ ಇರುವೆಯಂತೆ ಮುತ್ತುತ್ತಾರೆ. ನಿಜವಾದ ಖಳನಾಯಕರು ಯಾರು ಎಂಬುದನ್ನು ಜನರೇ ತೀರ್ಮಾನಿಸಬೇಕು. ಮುಖವಾಡ ತೊಟ್ಟ ತೀಸ್ತಾಳಂಥ ವಂಚಕಿಗೆ ಯಾವುದರಿಂದ, ಎಲ್ಲಿ ಹೊಡೆಯಬೇಕು ಎಂಬುದನ್ನೂ ಅವರೇ ನಿರ್ಧರಿಸಬೇಕು!