ನೇರನೋಟ by Du Gu Lakshman
ಸಾಮಾಜಿಕ ಜಾಗೃತಿ, ದೇಶ ಭಕ್ತಿಯ ಭಾವನೆ, ಸಾಮಾಜಿಕ ಸಾಮರಸ್ಯ ಮುಂತಾದ ಧನಾತ್ಮಕ ಅಂಶಗಳ ಮೂಲಕ ಸಮಾಜ ಕಟ್ಟುವ, ದೇಶದ ಅಖಂಡತೆ ಹಾಗೂ ಸಮಗ್ರತೆಯನ್ನು ಎತ್ತಿಹಿಡಿಯುವ, ಪ್ರಜಾತಂತ್ರದ ಮೌಲ್ಯಗಳನ್ನು ರಕ್ಷಿಸುವ ಗುರುತರ ಕಾರ್ಯ ನಿರ್ವಹಿಸಬೇಕಾದ ಮಾಧ್ಯಮರಂಗ ಇಂದು ಸಮಾಜವನ್ನು ಒಡೆಯುವ, ದೇಶದ್ರೋಹಿಗಳನ್ನು ವೈಭವೀಕರಿಸುವ, ದೇಶಪ್ರೇಮಿಗಳನ್ನು ತುಚ್ಛವಾಗಿ ಕಾಣುವ ವಿರೋಧಾಭಾಸದ ನಿಲುವಿಗೆ ಅಂಟಿಕೊಂಡಿರುವುದು ಮಾಧ್ಯಮ ರಂಗ ತಲುಪಿರುವ ಅಧಃಪತನಕ್ಕೆ ಸಂಕೇತ. ಮಾಧ್ಯಮ ಕ್ಷೇತ್ರ ಕುಲಗೆಟ್ಟು ಹೋಗಿದೆ ಎಂದು ಬಹುತೇಕ ಪ್ರಜ್ಞಾವಂತರು ಹಪಹಪಿಸುವುದು ಇದೇ ಕಾರಣಕ್ಕಾಗಿ.
ಜುಲೈ ೧ ಬಂತೆಂದರೆ ಅಂದು ಪತ್ರಿಕಾ ದಿನಾಚರಣೆಯ ಸಂಭ್ರಮ. ಫಾದರ್ಸ್ ಡೇ, ಮದರ್ಸ್ ಡೇ, ಲವರ್ಸ್ ಡೇ ಇರುವಂತೆ ಈ ಪತ್ರಿಕಾ ದಿನಾಚರಣೆಯೂ ನಡೆದು ಹೋಗುತ್ತಿದೆ. ಜುಲೈ ೧ರಂದೇ ಪತ್ರಿಕಾ ದಿನಾಚರಣೆ ಏರ್ಪಡಿಸುವುದಕ್ಕೆ ಕಾರಣ – ಕನ್ನಡದ ಮೊಟ್ಟಮೊದಲ ಪತ್ರಿಕೆ ಎಂಬ ಹೆಗ್ಗಳಿಕೆ ಹೊತ್ತಿರುವ ‘ಮಂಗಳೂರ ಸಮಾಚಾರ’ ಎಂಬ ಪತ್ರಿಕೆಯನ್ನು ಜರ್ಮನ್ ಪಾದ್ರಿ ರೆ.ಹರ್ಮನ್ ಮೋಗ್ಲಿಂಗ್ ಆರಂಭಿಸಿದ ಎಂಬುದು. ಆತ ಆ ಪತ್ರಿಕೆಯ ಸಂಪಾದಕನೂ ಆಗಿದ್ದ. ಹರ್ಮನ್ ಮೋಗ್ಲಿಂಗ್ ಪತ್ರಿಕೆ ಆರಂಭಿಸಿದ ದಿನವನ್ನೇ ಪತ್ರಿಕಾ ದಿನವಾಗಿ ಈಗಲೂ ಯಾಕೆ ಆಚರಿಸಬೇಕು? ಅಸಲಿಗೆ ಮೋಗ್ಲಿಂಗ್ ಕನ್ನಡದಲ್ಲಿ ಮೊಟ್ಟಮೊದಲು ಪತ್ರಿಕೆ ಆರಂಭಿಸಿದ್ದು ಕ್ರೈಸ್ತ ಮತ ಪ್ರಚಾರಕ್ಕಾಗಿ, ಮತಾಂತರ ಚಟುವಟಿಕೆ ರಭಸ ಪಡೆದುಕೊಳ್ಳುವುದಕ್ಕಾಗಿ. ಕನ್ನಡದ ಮೊಟ್ಟಮೊದಲ ಪತ್ರಿಕೆಯನ್ನು ಆರಂಭಿಸಿದ ಕೀರ್ತಿ ಮೋಗ್ಲಿಂಗ್‌ನದೇ ಆಗಿರಬಹುದು. ಇರಲಿ, ಅದಕ್ಕಾಗಿ ಆತನಿಗೊಂದು ಸೆಲ್ಯೂಟ್ ಹೊಡೆಯೋಣ. ಆದರೆ ಇದಕ್ಕಾಗಿ ಪ್ರತಿವರ್ಷವೂ ಆತನ ಹೆಸರಿನಲ್ಲೇ ಪತ್ರಿಕಾ ದಿನ ಆಚರಿಸಬೇಕೆ? ಭಾರತಕ್ಕೆ ಬ್ರಿಟಿಷರು ಸ್ವಾತಂತ್ರ್ಯ ಕರುಣಿಸಿದರೆಂದು ನಾವು ಸ್ವಾತಂತ್ರ್ಯ ದಿನದಂದು ಬ್ರಿಟನ್ನಿನ ಅಧಿದೇವತೆ ವಿಕ್ಟೋರಿಯಾ ರಾಣಿಗೆ ಕೃತಜ್ಞತೆ ಸಲ್ಲಿಸುತ್ತೇವೆಯೆ? ಅಂದು ನಾವು ಸ್ಮರಿಸುವುದು ವಿಕ್ಟೋರಿಯಾ ರಾಣಿಯನ್ನಲ್ಲ , ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತೀಯ ಧೀರ, ಶೂರ ಹುತಾತ್ಮರನ್ನು. ಅದೇ ರೀತಿ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಅದಕ್ಕೆ ನಮ್ಮದೇ ಛಾಪು ಕೊಡಲು ನಾವೇಕೆ ಸಿದ್ಧರಾಗಬಾರದು? ಮೋಗ್ಲಿಂಗ್ ಎಂಬ ಜರ್ಮನ್ ಪಾದ್ರಿಯನ್ನೇ ಇನ್ನೆಷ್ಟು ವರ್ಷ ಜುಲೈ ೧ರಂದು ಸ್ಮರಿಸುತ್ತಲೇ ಇರಬೇಕು?
ನಾರದ: ಮೊಟ್ಟಮೊದಲ ಪತ್ರಕರ್ತ
ವಾಸ್ತವವಾಗಿ ಜಗತ್ತಿನ ಮೊಟ್ಟ ಮೊದಲ ಪತ್ರಕರ್ತನೆಂದರೆ ನಾರದ ಮಹರ್ಷಿ. ಮೋಗ್ಲಿಂಗ್ ಎಂಬ ಕ್ರೈಸ್ತ ಪಾದ್ರಿ ಹುಟ್ಟುವುದಕ್ಕೆ ಅದೆಷ್ಟೋ ಸಾವಿರ ವರ್ಷಗಳ ಹಿಂದೆಯೇ ಜನಿಸಿದ ನಾರದನೇ ಮೊಟ್ಟಮೊದಲ ಜಗತ್ತಿನ ವರದಿಗಾರ. ಆತನೇ ನಿಜವಾದ ಮೊಟ್ಟಮೊದಲ ಸುದ್ದಿವಾಹಕ. ಒಂದೆಡೆಯ ಸುದ್ದಿಯನ್ನು ಇನ್ನೊಂದೆಡೆಗೆ ವಸ್ತು ನಿಷ್ಠತೆಯ ಜೊತೆಗೆ ಕೊಂಚ ಮಸಾಲೆಯನ್ನೂ ಬೆರೆಸಿ ರಂಜನೀಯವಾಗಿಸಿ ಮೊದಲು ತಲುಪಿಸಿದ ಕೀರ್ತಿ ನಾರದನದು. ಆತ ಇದನ್ನೆಲ್ಲ ಧರ್ಮ ಸ್ಥಾಪನೆಯ ದೃಷ್ಟಿಯಿಂದ, ಲೋಕ ಕಲ್ಯಾಣದ ಕಾಳಜಿಯಿಂದ ಮಾಡುತ್ತಿದ್ದ. ನಾರದನ ಪರವಾಗಿ ಹಾಗಂತ ವಕಾಲತ್ತು ಮಾಡುತ್ತಿರುವುದು ನಾನಲ್ಲ. ಕನ್ನಡ ಪತ್ರಿಕೋದ್ಯಮದ ಪಿತಾಮಹರೆನಿಸಿಕೊಂಡಿರುವ ಡಿವಿಜಿಯವರೇ ತಮ್ಮ ‘ವೃತ್ತ ಪತ್ರಿಕೆ’ ಎಂಬ ಕೃತಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಧರ್ಮ ಸ್ಥಾಪನೆಯನ್ನೇ ಜೀವಿತೋzಶವಾಗಿಟ್ಟುಕೊಂಡು ಸುದ್ದಿ, ಮಾಹಿತಿಗಳನ್ನು ರವಾನಿಸುತ್ತಿದ್ದ ನಾರದ ಜಯಂತಿ ಮೂಲಕ ಪತ್ರಿಕಾ ದಿನ ಆಚರಿಸಬೇಕೆಂದು ಅವರು ಸಲಹೆ ನೀಡಿದ್ದರು. ಆದರೆ ನಮಗೆ ಡಿವಿಜಿಯರಂತಹ ಹಿರಿಯರ ಸ್ವದೇಶಿ, ಸ್ವಾಭಿಮಾನಪೂರಿತ ಸಲಹೆಗಳು ಬೇಕಿಲ್ಲ. ಅಜ್ಜ ನೆಟ್ಟ ಆಲಕ್ಕೇ ಜೋತು ಬೀಳುವಂತೆ ನಾವಿನ್ನೂ ಹರ್ಮನ್ ಮೋಗ್ಲಿಂಗ್‌ಗೇ ಜೋತು ಬಿದ್ದಿzವೆ. ಕನ್ನಡ ಪತ್ರಿಕೋದ್ಯಮದಲ್ಲಿ ಕಲರವ ಎಬ್ಬಿಸಿದ, ಅದಕ್ಕೊಂದು ಹೊಸ ಛಾಪು ನೀಡಿದ ಡಿವಿಜಿ, ತಿರುಮಲೆ ತಾತಾಚಾರ್ಯ ಶರ್ಮ, ಮೊಹರೆ ಹಣಮಂತರಾವ್, ಬೆ.ಸು.ನಾ.ಮಲ್ಯ ಮೊದಲಾದ ಪತ್ರಿಕೋದ್ಯಮ ದಿಗ್ಗಜರು, ಪ್ರಾತಃಸ್ಮರಣೀಯ ಪತ್ರಕರ್ತರನ್ನು ನಾವು ಪತ್ರಿಕಾ ದಿನಾಚರಣೆ ಸಂದರ್ಭದಲ್ಲೂ ನೆನೆಸಿಕೊಳ್ಳುತ್ತಿಲ್ಲವೆಂದರೆ ನಾವೆಂಥ ಕನ್ನಡಾಭಿಮಾನಿಗಳು! ಸ್ವಾಭಿಮಾನಶೂನ್ಯರು! ನಾರದನೆಂದರೆ ಆತನೊಬ್ಬ ಜಗಳಗಂಟ, ಚಾಡಿಕೋರ ಎಂಬ ಲೇವಡಿ ಇದ್ದz. ಅದು ಹೋಗಲಿ, ಆದರೆ ಡಿವಿಜಿ, ತಿ.ತಾ.ಶರ್ಮ, ಸು.ನಾ.ಮಲ್ಯ ಮೊದಲಾದ ಮಹನೀಯರ ಹೆಸರಿನಲ್ಲಿ ಪತ್ರಿಕಾ ದಿನ ಆಚರಿಸುವ ಉಮೇದನ್ನು ನಾವೇಕೆ ತೋರುತ್ತಿಲ್ಲ? ನಮಗೆ ನಮ್ಮವರ ಬಗ್ಗೆಯೇ ಅದೇಕೆ ಇಷ್ಟೊಂದು ತಾತ್ಸಾರ?
ಮಾಧ್ಯಮ ಕ್ಷೇತ್ರ: ತ್ರಿಶಂಕು ಸ್ಥಿತಿಯಲ್ಲಿ
ಪ್ರಜಾಪ್ರಭುತ್ವದ ನಾಲ್ಕನೆಯ ಆಧಾರಸ್ತಂಭವೆನಿಸಿದ ಮಾಧ್ಯಮ ಕ್ಷೇತ್ರ ಇಂದು ತ್ರಿಶಂಕು ಸ್ಥಿತಿಯಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿಶ್ಚಿತ ಧ್ಯೇಯ, ಆದರ್ಶ, ಜನಜಾಗೃತಿಯ ಉzಶಗಳನ್ನಿಟ್ಟುಕೊಂಡು ವಸ್ತುನಿಷ್ಠಸುದ್ದಿ, ಬರಹಗಳ ಮೂಲಕ ವೃತ್ತಿಧರ್ಮಕ್ಕೆ ಬದ್ಧತೆ ಸಾರಿದ್ದ ಪತ್ರಿಕೋದ್ಯಮ, ಸ್ವಾತಂತ್ರ್ಯಾನಂತರ ಬೇರೆ ಉದ್ಯಮಗಳಂತೆ ಇದೂ ಒಂದು ಉದ್ಯಮವಾಗಿ ಬೆಳೆದು ಬೇರೆಯೇ ಹಾದಿ ತುಳಿಯಿತು. ಉದ್ಯಮದ ರೂಪ ಪಡೆದ ನಂತರ ಪತ್ರಿಕೆಯ ಕಚೇರಿಯೊಳಗಿನ ವ್ಯವಸ್ಥೆಗಳೂ ಬದಲಾದವು. ಜಾಹೀರಾತು ಮತ್ತು ಸಂಪಾದಕೀಯ ವಿಭಾಗಗಳ ನಡುವಿನ ಗೆರೆ ಅಳಿಸಿ ಹೋಗುವ ಮಟ್ಟಕ್ಕೆ ಮುಟ್ಟಿದೆ. ಜಾಹೀರಾತು ಯಾವುದು, ಸುದ್ದಿ ಯಾವುದು, ಲೇಖನ ಯಾವುದು ಎಂಬುದೇ ತಕ್ಷಣಕ್ಕೆ ಗೊತ್ತಾಗದಷ್ಟು ಪತ್ರಿಕೋದ್ಯಮ ಸ್ಥಿತ್ಯಂತರಗೊಂಡಿದೆ.
ಇದಕ್ಕೆ ಕಾರಣವೂ ಇದೆಯೆನ್ನಿ. ಹೆಚ್ಚುತ್ತಿರುವ ಮುದ್ರಣ ವೆಚ್ಚ, ಮುದ್ರಣ ಕಾಗದದ ದುಬಾರಿ ಬೆಲೆ, ಮಾರುಕಟ್ಟೆಯಲ್ಲಿನ ಪೈಪೋಟಿಗಳಿಂದಾಗಿ ಪತ್ರಿಕೆಯ ಮಾಲೀಕರು ಅನಿವಾರ್ಯವಾಗಿ ಜಾಹೀರಾತುದಾರರನ್ನು ಹೆಚ್ಚು ಹೆಚ್ಚು ಅವಲಂಬಿಸಬೇಕಾಗಿದೆ. ಪತ್ರಿಕೆಗಳ ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಪತ್ರಿಕೆಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಕೆಲವೊಮ್ಮೆ ಆ ಹಿಡಿತ ‘ಕಬಂಧ ಬಾಹು’ ಆಗುವುದೂ ಇದೆ. ಇದರಿಂದಾಗಿ ಪತ್ರಿಕಾರಂಗವನ್ನು ಸದಾ ಉದ್ಯಮಿಗಳು ಮತ್ತು ಸರ್ಕಾರದ ಹಂಗಿನಲ್ಲಿರುವಂತೆ ಮಾಡಿದೆ. ಇಂತಹ ಅನಾರೋಗ್ಯಕರ ವಾತಾವರಣ ಇರುವುದರಿಂದಲೇ ಕಾಸಿಗಾಗಿ ಸುದ್ದಿಯಂತಹ ಲಾಲಸೆ, ರಾಡಿಯಾ ಟೇಪ್‌ನಂತಹ ವೃತ್ತಿ ದ್ರೋಹಗಳು ಹುಟ್ಟಿಕೊಂಡಿರುವುದು.
ಪತ್ರಕರ್ತನೊಬ್ಬನನ್ನು ಇಂದು ನಾಲ್ಕು ದಿಕ್ಕುಗಳಿಂದಲೂ ಮೊನಚಾದ ಈಟಿಗಳು ಇರಿಯತೊಡಗಿವೆ. ‘ನೀನು ಭ್ರಷ್ಟ, ಸ್ವಾರ್ಥಿ, ಅಪ್ರಾಮಾಣಿಕ, ಲಂಪಟ…’ ಇತ್ಯಾದಿ ಟೀಕೆಗಳಿಗೆ ಆತ ಬಲಿಪಶುವಾಗಬೇಕಾಗಿದೆ. ಎಲ್ಲ ಪತ್ರಕರ್ತರೂ ಇಂತಹ ಟೀಕೆಗಳಿಗೆ ಕಾರಣಕರ್ತರಲ್ಲದಿದ್ದರೂ ಯಾರೋ ಕೆಲವರು ಪತ್ರಕರ್ತರು ನಡೆಸುವ ಬಾನಗಡಿ ವ್ಯವಹಾರಗಳಿಂದಾಗಿ ಇಡೀ ಮಾಧ್ಯಮರಂಗ ಕೇಳಬಾರದ ಟೀಕೆಯನ್ನು, ನಿಂದನೆಗಳನ್ನು ಸಹಿಸಿಕೊಳ್ಳಬೇಕಾದ ದುಃಸ್ಥಿತಿ ಬಂದೊದಗಿದೆ. ಹಾಗೆ ನೋಡಿದರೆ, ಎಲ್ಲ ವೃತ್ತಿಗಳಂತೆ ಪತ್ರಿಕಾ ವೃತ್ತಿಯಲ್ಲೂ ಒಂದಷ್ಟು ‘ಕಪ್ಪು ಕುರಿ’ಗಳು ಹಿಂದೆಯೂ ಇದ್ದರು. ಆದರೆ ಅಂಥವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಮೇರೆ ಮೀರುವಷ್ಟು ಬೆಳೆದಿದೆ. ಸಾಚಾ, ನಿಷ್ಠಾವಂತ, ಪ್ರಾಮಾಣಿಕ ಪತ್ರಕರ್ತರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ‘ಕಪ್ಪು ಕುರಿ’ಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಟಿವಿ ವಾಹಿನಿಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ ಬಳಿಕ ಈ ‘ಕಪ್ಪು ಕುರಿ’ಗಳ ಸಂಖ್ಯೆ ಇನ್ನಷ್ಟು ಅಪಾಯಕಾರಿಯಾಗಿ ಬೆಳೆಯತೊಡಗಿದೆ. ಮಂಗಳೂರಿನಲ್ಲಿ ಬಜರಂಗದಳದವರು ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಪಬ್ ಮೇಲೆ ದಾಳಿ ಮಾಡಿದರೆ ಅದೊಂದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಭಾರೀ ವಿವಾದದ ಸುದ್ದಿಯಾಗಿ ಮಂಗಳೂರಿಗೆ ಸೆಲೆಬ್ರಿಟಿ ಪತ್ರಕರ್ತರು, ವಿಚಾರವಾದಿಗಳ ದಂಡೇ ಬಂದು ಮುಗಿಬೀಳುತ್ತದೆ. ಆದರೆ ಅದೇ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೂ ಅದೊಂದು ಅಷ್ಟೇನೂ ಮಹತ್ವದ ಸುದ್ದಿಯೆನಿಸಿಕೊಳ್ಳುವುದಿಲ್ಲ. ದೆಹಲಿಯಲ್ಲಿ ಇದೇ ರೀತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಾಗ ಇಡೀ ಮಾಧ್ಯಮರಂಗ ಅಲ್ಲಿಗೆ ಧಾವಿಸಿತ್ತು. ಅದೊಂದು ಪ್ರಮುಖ ವಿದ್ಯಮಾನವಾಗಿ ಮಾಧ್ಯಮಗಳಲ್ಲಿ ರಾರಾಜಿಸಿತ್ತು. ಮಣಿಪಾಲದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಈಗ ಕಾವು ಕಳೆದುಕೊಂಡು ಒಳಪುಟದ ಯಾವುದೋ ಮೂಲೆಗೆ ಸೇರಿಬಿಟ್ಟಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದವರು ಬಿಜೆಪಿಗೆ ಸೇರಿದವರೆಂಬ ಗುಲ್ಲು ಕೂಡ ಹರಡಿತ್ತು. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರೆಂಬ ವರದಿಯೂ ಪ್ರಕಟವಾಗಿತ್ತು. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಡ್ರಗ್ಸ್ ಸೇವಿಸಿದ್ದಳು ಎಂಬ ವದಂತಿಯೂ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ ಉಡುಪಿ-ಮಣಿಪಾಲದಂತಹ ಸುಸಂಸ್ಕೃತ ನಗರಗಳಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಏಕೆ ನಡೆಯಿತು? ಅಲ್ಲಿನ ಜನರು ಅಷ್ಟೊಂದು ಕೆಟ್ಟವರೆ? ಎಂಬ ಬಗ್ಗೆ ಚರ್ಚೆಯೇ ನಡೆಯಲಿಲ್ಲ. ಮೂಲ ವಿಷಯವನ್ನು ಬದಿಗೆ ಸರಿಸಿ, ಕೇವಲ ರಾಜಕೀಯ ಲಾಭ ಪಡೆಯುವ ಪ್ರಯತ್ನಗಳೇ ನಡೆದವು. ಇಂತಹ ವರ್ತನೆ ಅತ್ಯಾಚಾರವೆಂಬ ಕ್ರೌರ್ಯದ ತೂಕವನ್ನು ಕಡಿಮೆಗೊಳಿಸುತ್ತಾ ಸಾಗುತ್ತದೆ ಎಂಬುದನ್ನು ಮಾಧ್ಯಮ ಮಿತ್ರರು ಮರೆತೇ ಬಿಟ್ಟಿದ್ದಾರೆ.
ಇತ್ತೀಚೆಗೆ ಸಂಭವಿಸಿದ ಉತ್ತರಾಖಂಡ ದುರಂತ ಘಟನೆ ಸಂದರ್ಭದಲ್ಲೂ ಮಾಧ್ಯಮಗಳ ಪಾತ್ರ ಹೇಳಿಕೊಳ್ಳುವಂತಹದಾಗಿರಲಿಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತನ್ನ ರಾಜ್ಯದ ಯಾತ್ರಿಕರನ್ನು ರಕ್ಷಿಸಿದ್ದು ದೊಡ್ಡ ವಿವಾದಕ್ಕೀಡಾಯಿತು, ಮೋದಿ ಹಾಗಿದ್ದರೆ ತನ್ನ ರಾಜ್ಯದ ಯಾತ್ರಿಕರನ್ನು ರಕ್ಷಿಸಬಾರದಿತ್ತೆ? ‘ಮೋದಿ ೧೫ ಸಾವಿರ ಗುಜರಾತಿಗಳನ್ನು ಒಂದೇ ದಿನ ಪ್ರವಾಹದಿಂದ ರಕ್ಷಿಸಿದರು’ ಎಂಬ ಸುದ್ದಿಯೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿz ತಡ, ಮೋದಿ ವಿರೋಧಿಗಳು ನಾನಾ ಬಗೆಯ ಟೀಕೆಗಳನ್ನು ಹರಿಯಬಿಟ್ಟರು. ಮೋದಿ ಏನು ರ‍್ಯಾಂಬೋ ಅವತಾರವೆ ಎಂಬ ಲೇವಡಿ ಕೂಡ ಕೇಳಿಬಂತು. ವಾಸ್ತವವಾಗಿ ತಾನು ೧೫ ಸಾವಿರ ಯಾತ್ರಿಕರನ್ನು ಬಚಾವ್ ಮಾಡಿದೆ ಎಂದು ಮೋದಿ ಎಲ್ಲೂ ಹೇಳಿರಲಿಲ್ಲ. ಮೋದಿ ಹಾಗೆ ಹೇಳಿದರೆಂದು ಮಾಧ್ಯಮಗಳು ಆಧಾರರಹಿತವಾಗಿ ಹೇಳಿದ್ದವು. ಭೀಕರ ದುರಂತವೊಂದು ನಡೆದಾಗ ಇಂತಹ ಅಗ್ಗದ, ವಿವಾದಕ್ಕೆಡೆ ಮಾಡಿಕೊಡುವ ಅಪಪ್ರಚಾರದ ಅಗತ್ಯವಿತ್ತೆ?
ಬಯಲಾಗದ ತೀಸ್ತಾ ಸಂಚು!
ಗುಜರಾತ್‌ನಲ್ಲಿ ೨೦೦೨ರಲ್ಲಿ ಸಂಭವಿಸಿದ ಹಿಂಸಾಚಾರಗಳ ವಕಾಲತ್ತು ವಹಿಸಿದ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಮೋದಿ ವಿರುದ್ಧ ಖಡ್ಗ ಹಿರಿದು ನಿಂತಾಗ ಮಾಧ್ಯಮಗಳು ಆಕೆಯನ್ನು ಒಬ್ಬ ದೊಡ್ಡ ಹೀರೋಯಿನ್‌ಳಂತೆ ಚಿತ್ರಿಸಿದ್ದವು. ಮುಸಲ್ಮಾನರಂತೂ ತಮ್ಮ ಪರ ವಹಿಸಿರುವ ಆಕೆಯನ್ನು ‘ನ್ಯಾಯದೇವತೆ’ಯೆಂದೇ ಭಾವಿಸಿದ್ದರು. ಆದರೀಗ ಆಕೆಯ ಹೋರಾಟದ ವಿಶ್ವಾಸಾರ್ಹತೆಯ ಬಗ್ಗೆಯೇ ಶಂಕೆಯುಂಟಾಗಿದೆ. ಇಂತಹ ಶಂಕೆ ವ್ಯಕ್ತಪಡಿಸಿದ್ದು ಬೇರಾರೂ ಅಲ್ಲ , ಹಿಂಸಾಚಾರದಿಂದ ನಲುಗಿದ ಅಹಮದಾಬಾದಿನ ಗುಲ್ಬರ್ಗ್ ಸೊಸೈಟಿಯ ಬಲಿಪಶುಗಳು. ತೀಸ್ತಾ ಹಿಂಸಾಚಾರದಲ್ಲಿ ನೊಂದವರಿಗೆ ನ್ಯಾಯ ಕೊಡಿಸುತ್ತೇನೆಂದು ಸಾರಿ ತನ್ನ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮೂಲಕ ಕೋಟಿ ಕೋಟಿ ಹಣ ಸಂಪಾದಿಸಿದ್ದರು. ತೀಸ್ತಾ, ಆಕೆಯ ಪತಿ ಜಾವೇದ್ ಆನಂದ್ ಹಾಗೂ ಆಕೆಯ ಸೋದರಿ ಅಮಿಲಿ ಸೆಟಲ್‌ವಾಡ್ – ಹೀಗೆ ಒಂದೇ ಕುಟುಂಬಕ್ಕೆ ಸೇರಿದ ಕೇವಲ ಮೂರೇ ಟ್ರಸ್ಟಿಗಳನ್ನು ಹೊಂದಿರುವ ಸಬ್‌ರಂಗ್ ಟ್ರಸ್ಟ್ ೨೦೦೭ರ ಏಪ್ರಿಲ್‌ನಿಂದ ೨೦೧೩ ಏಪ್ರಿಲ್‌ವರೆಗೆ ೧.೩೭ ಕೋಟಿ ರೂ. ಸಂಗ್ರಹಿಸಿದ್ದು ಇವೆಲ್ಲವೂ ವಿದೇಶಿ ದಾನಿಗಳು ನೀಡಿದ ದೇಣಿಗೆ ಹಣ. ಈ ಹಣದಲ್ಲಿ ಗುಜರಾತ್ ಸಂತ್ರಸ್ತರಿಗೆ ಒಂದಿಷ್ಟಾದರೂ ಪರಿಹಾರ ನೀಡಿದ್ದರೆ ಯಾರೂ ಪ್ರಶ್ನಿಸಬೇಕಾದ ಅಗತ್ಯವಿರಲಿಲ್ಲ. ಆದರೆ ಈ ಹಣ ಪೂರ್ತಿ ಬಳಕೆಯಾದದ್ದು ತೀಸ್ತಾ ಸೆಟಲ್‌ವಾಡ್ ಮತ್ತವರ ಕುಟುಂಬವರ್ಗದ ಮೋಜುವಾನಿಗೆ ಮಾತ್ರ. ಕಳೆದ ೧೧ ವರ್ಷಗಳಲ್ಲಿ ತೀಸ್ತಾ ಮತ್ತು ಜಾವೇದ್ ದಂಪತಿ ಐಡಿಬಿಐ ಹಾಗೂ ಯೂನಿಯನ್ ಬ್ಯಾಂಕ್‌ಗಳಲ್ಲಿನ ತಮ್ಮ ಉಳಿತಾಯ ಖಾತೆಗಳಲ್ಲಿ ಕ್ರಮವಾಗಿ ಸುಮಾರು ೨.೧೧ ಕೋಟಿ ರೂ. ಮತ್ತು ೧.೨೮ ಕೋಟಿ ರೂ. ಹೊಂದಿದ್ದಾರೆ ಎಂಬುದು ನಿಕಟ ಮೂಲಗಳ ಹೇಳಿಕೆ. ೨೦೦೨ರಲ್ಲಿ ಗುಜರಾತ್ ಹಿಂಸಾಚಾರ ನಡೆಯುವುದಕ್ಕೂ ಮುಂಚೆ ಆಕೆಯ ಆರ್ಥಿಕ ಸ್ಥಿತಿಗತಿ ಚೆನ್ನಾಗಿರಲಿಲ್ಲ. ಹಿಂಸಾಚಾರದ ನಂತರ ಆಕೆ ಹುಟ್ಟು ಹಾಕಿದ ಸಿಜೆಪಿ ಹಾಗೂ ಸಬ್‌ರಂಗ್ ಟ್ರಸ್ಟ್‌ಗಳ ಮೂಲಕ ಆಕೆಯ ಜೀವನ ಶೈಲಿಯೇ ಹಠಾತ್ ಬದಲಾಯಿತು ಎಂದು ತೀಸ್ತಾ ಜೊತೆಗೆ ಗುರುತಿಸಿಕೊಂಡಿದ್ದ ರೈಸ್ ಖಾನ್ ಪಠಾಣ್ ಎಂಬುವವರು ದೂರುತ್ತಾರೆ. ಇಷ್ಟೆಲ್ಲ ಅಪಸವ್ಯಗಳನ್ನು ನಡೆಸಿದ ತೀಸ್ತಾ ಸೆಟಲ್‌ವಾಡ್ ಬಗ್ಗೆ ಮಾಧ್ಯಮಗಳೇಕೆ ಮೌನವಾಗಿವೆ? ಯಡಿಯೂರಪ್ಪ ಭ್ರಷ್ಟಾಚಾರವೆಸಗಿದರೆಂದು, ನಿತಿನ್ ಗಡ್ಕರಿ ಅಕ್ರಮ, ಅವ್ಯವಹಾರ ನಡೆಸಿದರೆಂದು ದಿನವಿಡೀ ಬೊಬ್ಬೆ ಹೊಡೆಯುವ ಮಾಧ್ಯಮಗಳು ತೀಸ್ತಾ ಸೆಟಲ್‌ವಾಡ್ ಸಂತ್ರಸ್ತರ ಹೆಸರಿನಲ್ಲಿ ಅಪಾರ ಮೊತ್ತದ ಹಣ ಸಂಗ್ರಹಿಸಿ ಅದನ್ನು ಸಂತ್ರಸ್ತರಿಗೆ ನೀಡದೆ ಸ್ವಂತಕ್ಕೆ ಬಳಸಿಕೊಂಡ ಬಗ್ಗೆ ಏಕೆ ಸೊಲ್ಲೆತ್ತಲಿಲ್ಲ? ಮಾಧ್ಯಮಗಳ ನಾಲಿಗೆಗೆ ಜಡ್ಡು ಹಿಡಿದಿತ್ತೆ? ಒಂದು ಸಣ್ಣ ಅವಕಾಶ ಸಿಕ್ಕರೂ ಸಾಕು, ಮೋದಿಯನ್ನು ಸದಕಾಲ ಹೀನಾಮಾನವಾಗಿ ಜರೆಯುವ, ಮೋದಿ ನಿಂತರೆ, ಕೂತರೆ, ಸೀನಿದರೆ ತಪ್ಪು ಕಂಡುಹಿಡಿಯಲು ಹಾತೊರೆಯುವ ಮಾಧ್ಯಮಗಳಿಗೆ ತೀಸ್ತಾ ಸೆಟಲ್‌ವಾಡ್ ಅವರ ಈ ವಂಚನೆಯನ್ನು ಬಯಲು ಮಾಡಬೇಕೆಂದು ಅನಿಸದಿರುವುದು ಎಂತಹ ಸೋಜಿಗ! ಇದೆಂತಹ ಪತ್ರಿಕೋದ್ಯಮ?
ಮಾಧ್ಯಮ ರಂಗದಲ್ಲಿರುವ ಬಹುತೇಕ ಮಂದಿಗೆ ತಾವು ಬರೆದಿz ಸರಿ, ತಮ್ಮ ಚಿಂತನೆಯೇ ಸರಿ ಎಂಬ ದುರಹಂಕಾರ ಅಡರಿಕೊಳ್ಳುತ್ತಿರುವುದು ಇನ್ನೊಂದು ಆಘಾತಕಾರಿ ಬೆಳವಣಿಗೆ. ನಿನ್ನೆ ಮೊನ್ನೆ ಪತ್ರಿಕೋದ್ಯಮ ರಂಗಕ್ಕೆ ಅಡಿಯಿಟ್ಟ ಎಳೆ ಲಿಂಬೆಗಳೂ ತಮಗಿಂತ ಹಿರಿದಾದವರನ್ನು , ಸಾಮಾಜಿಕ ಗಣ್ಯರನ್ನು , ಅನುಭವೀ ಪತ್ರಕರ್ತರನ್ನು ಏಕವಚನದಲ್ಲಿ ಸಂಬೋಧಿಸುವ ವಿದ್ಯಮಾನ ಇದಕ್ಕೊಂದು ನಿದರ್ಶನ. ಪತ್ರಿಕಾಗೋಷ್ಠಿಗಳಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತು ತಾವು ಗಂಧರ್ವ ಲೋಕದಿಂದ ಇಳಿದು ಬಂದವರಂತೆ ಭ್ರಮಿಸುವ ಪತ್ರಕರ್ತರು ಪತ್ರಿಕೋದ್ಯಮದ ಸಭ್ಯತೆ, ಸದಾಚಾರಗಳನ್ನೇ ಗಾಳಿಗೆ ತೂರಿರುವುದು ವಿಷಾದನೀಯ ಸಂಗತಿ.
ಪತ್ರಿಕೋದ್ಯಮ ಇಂದು ಅತ್ತ ಪೂರ್ಣ ಪ್ರಮಾಣದ ಉದ್ಯಮವಾಗಿಯೂ ಬೆಳೆಯದೆ, ಇತ್ತ ಆದರ್ಶ ವೃತ್ತಿಯಾಗಿಯೂ ಉಳಿಯದೆ ತ್ರಿಶಂಕು ಸ್ಥಿತಿಯಲ್ಲಿದೆ. ಅದನ್ನು ಓದುಗರಿಗೆ ಮನವರಿಕೆ ಮಾಡಿಕೊಡಲು ಪತ್ರಿಕೆಯ ಮಾಲಿಕರಿಗೂ ಸಾಧ್ಯವಾಗುತ್ತಿಲ್ಲ. ಕ್ರೀಡಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸ್ಥಾನ ರಾಜಕಾರಣಿಗಳ ಪಾಲಾದಂತೆ, ಸಕ್ಕರೆ, ಸಿಮೆಂಟ್, ಶಾಲಾ-ಕಾಲೇಜುಗಳ ಆಡಳಿತ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಹದ್ದು ಮೀರಿ ಪ್ರವೇಶಿಸುತ್ತಿರುವಂತೆ, ಮಾಧ್ಯಮ ಕ್ಷೇತ್ರಕ್ಕೂ ರಾಜಕಾರಣಿಗಳು ಲಗ್ಗೆ ಇಟ್ಟಿದ್ದಾರೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳು ನಾಡು, ಕೇರಳ, ಮಹಾರಾಷ್ಟ್ರಗಳ ಬಹುತೇಕ ಟಿವಿ ಚಾನೆಲ್‌ಗಳು ರಾಜಕಾರಣಿಗಳ ಒಡೆತನದಲ್ಲಿವೆ. ಪತ್ರಿಕೆಗಳು ಕೂಡ ಇದಕ್ಕೆ ಹೊರತಲ್ಲ. ಉದ್ಯಮಿಗಳು ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರೆ ಅದರಿಂದ ಅಪಾಯವೇನಿಲ್ಲ. ಆದರೆ ರಾಜಕಾರಣಿಗಳು ಕಾಲಿಟ್ಟರೆ ಅದು ಅತ್ಯಂತ ಅಪಾಯಕಾರಿ ಬೆಳವಣಿಗೆ. ರಾಜಕಾರಣಿಗಳ ಒಡೆತನದಲ್ಲಿರುವ ಮಾಧ್ಯಮಗಳು ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿರುವ ಜನಾಭಿಪ್ರಾಯವನ್ನೇ ಹೊಸಗಿ ಹಾಕುವ ಅಥವಾ ತಮಗೆ ಅನುಕೂಲವಾಗುವ ರೀತಿಯಲ್ಲಿ ಜನಾಭಿಪ್ರಾಯವನ್ನು ತಿರುಚುವ ಹುನ್ನಾರದಲ್ಲಿ ನಿರತವಾಗಿರುವುದು ಈಗ ಮಾಮೂಲೆನಿಸುವಷ್ಟರಮಟ್ಟಿಗೆ ತಲುಪಿದೆ. ಸಾಮಾಜಿಕ ಜಾಗೃತಿ, ದೇಶ ಭಕ್ತಿಯ ಭಾವನೆ, ಸಾಮಾಜಿಕ ಸಾಮರಸ್ಯ ಮುಂತಾದ ಧನಾತ್ಮಕ ಅಂಶಗಳ ಮೂಲಕ ಸಮಾಜ ಕಟ್ಟುವ, ದೇಶದ ಅಖಂಡತೆ ಹಾಗೂ ಸಮಗ್ರತೆಯನ್ನು ಎತ್ತಿಹಿಡಿಯುವ, ಪ್ರಜಾತಂತ್ರದ ಮೌಲ್ಯಗಳನ್ನು ರಕ್ಷಿಸುವ ಗುರುತರ ಕಾರ್ಯ ನಿರ್ವಹಿಸಬೇಕಾದ ಮಾಧ್ಯಮರಂಗ ಇಂದು ಸಮಾಜವನ್ನು ಒಡೆಯುವ, ದೇಶದ್ರೋಹಿಗಳನ್ನು ವೈಭವೀಕರಿಸುವ, ದೇಶಪ್ರೇಮಿಗಳನ್ನು ತುಚ್ಛವಾಗಿ ಕಾಣುವ ವಿರೋಧಾಭಾಸದ ನಿಲುವಿಗೆ ಅಂಟಿಕೊಂಡಿರುವುದು ಮಾಧ್ಯಮ ರಂಗ ತಲುಪಿರುವ ಅಧಃಪತನಕ್ಕೆ ಸಂಕೇತ. ಮಾಧ್ಯಮ ಕ್ಷೇತ್ರ ಕುಲಗೆಟ್ಟು ಹೋಗಿದೆ ಎಂದು ಬಹುತೇಕ ಪ್ರಜ್ಞಾವಂತರು ಹಪಹಪಿಸುವುದು ಇದೇ ಕಾರಣಕ್ಕಾಗಿ. ಮಾಧ್ಯಮ ರಂಗದಲ್ಲಿ ಬೇರುಬಿಟ್ಟಿರುವ ಹಳವಂಡತನ, ಅಪಸವ್ಯಗಳು, ಕಾಸಿನಾಸೆಗಾಗಿ ವೃತ್ತಿ ಧರ್ಮಕ್ಕೇ ಅಪಚಾವೆಸಗುವ ಸೆಲೆಬ್ರಿಟಿ ಪತ್ರಕರ್ತರು… ಇವನ್ನೆಲ್ಲ ನೋಡಿದಾಗ ಪ್ರಾಮಾಣಿಕ, ಸಂವೇದನಾಶೀಲ ಪತ್ರಕರ್ತರಿಗೆ ಈ ವೃತ್ತಿ ಸಾಕಪ್ಪಾ ಸಾಕು ಎನಿಸುವುದು ಸಹಜ.
ಆದರೆ ಸಮಾಜ ಎಷ್ಟೇ ಕೆಟ್ಟು ಹೋದರೂ ಪ್ರಾಮಾಣಿಕರಿಗೆ, ಮಾನವಂತರಿಗೆ ಅದನ್ನು ಸರಿಪಡಿಸಲು ಕಾರಣವಾಗುವ ಒಂದಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಪ್ರಾಮಾಣಿಕ ಪತ್ರಿಕೋದ್ಯಮದ ಕಾಲ ಮುಗಿದೇ ಹೋಯಿತು ಎಂದು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದ ಅಗತ್ಯ ಕಾಣುವುದಿಲ್ಲ. ಮಾಧ್ಯಮಗಳಲ್ಲಿ ಮಾನವೀಯತೆಗೆ ಸಂಬಂಧಿಸಿದ ಮನಕಲಕುವ ಸುದ್ದಿ , ಲೇಖನಗಳು ಪ್ರಕಟವಾದಾಗ, ಸಮಾಜಕ್ಕೆ ಶಕ್ತಿ ತುಂಬುವ ಬರಹಗಳು ಮೂಡಿದಾಗ ಓದುಗರು ತಪ್ಪದೇ ಅದನ್ನೋದಿ ಈಗಲೂ ಸಂಭ್ರಮಿಸುವುದುಂಟು. ಇಂತಹ ಬರಹಗಳು, ಸುದ್ದಿಗಳು ಬರುತ್ತಿರಲೆಂದು ಹಾರೈಸುವುದೂ ಇದೆ. ಅಸಡ್ಡಾಳ ವಿಷಯಗಳು ಪತ್ರಿಕೆಯಲ್ಲಿ ಎಷ್ಟೇ ತುಂಬಿದ್ದರೂ ಪ್ರಜ್ಞಾವಂತ ಓದುಗರು ಅದರಿಂದ ಪ್ರಭಾವಿತರಾಗದೆ, ಧನಾತ್ಮಕ ಸುದ್ದಿಗಳಿಗಾಗಿ ಹುಡುಕಾಡುತ್ತಿರುವುದು ಒಂದು ಆಶಾಕಿರಣವೇ ಸರಿ.
ಇಂತಹ ಧನಾತ್ಮಕ ಪತ್ರಿಕೋದ್ಯಮದ ಬೆಳವಣಿಗೆಗೆ ಶ್ರಮಿಸಬೇಕಾದವರು ಮಾತ್ರ ಪತ್ರಕರ್ತರು. ಓದುಗರಲ್ಲ !