Jaffer Shareeff

By Du Gu Lakshman

ರಾಜಕೀಯ ಕ್ಷೇತ್ರದ ಅಡಿಗಲ್ಲುಗಳಾಗಿ ಪ್ರಜಾಪ್ರಭುತ್ವದ ಸೌಧಕ್ಕೆ ಭದ್ರ ತಳಪಾಯವಾಗಬೇಕಾದವರು ಅದನ್ನೊಲ್ಲದೆ, ತಾವು ಗೋಪುರಗಳಾಗಿಯೇ ಇರುತ್ತೇವೆ ಎಂದರೆ ಅದೆಂತಹ ವೈರುಧ್ಯ? ಅಡಿಗಲ್ಲುಗಳಾಗಬೇಕಾದವರೆಲ್ಲ ಗೋಪುರಗಳಾಗಲು ಹೊರಟರೆ ಪ್ರಜಾಪ್ರಭುತ್ವದ ಕಟ್ಟಡ ಕುಸಿಯದೆ ಇದ್ದೀತೆ?

Jaffer Shareeff
Jaffer Shareeff

ಇನ್ನು ಎರಡೂವರೆ ತಿಂಗಳು ದೇಶಕ್ಕೆ ಚುನಾವಣಾ ಜ್ವರ. ಮುಂದಿನ ಮೇ ೧೬ರಂದು ಹೊಸ ಸರ್ಕಾರದ ನೊಗಕ್ಕೆ ಯಾರು ಹೆಗಲು ಕೊಡುತ್ತಾರೆ ಎಂಬುದು ಗೊತ್ತಾಗುವವರೆಗೆ ಈ ಜ್ವರಕ್ಕೆ ಪರಿಹಾರವಿಲ್ಲ. ಅದಾದ ಬಳಿಕ ಹೊಸ ಸರ್ಕಾರ ರಚನೆಯ ಇನ್ನೊಂದು ಕಸರತ್ತು ಆರಂಭ. ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ಅಥವಾ ಒಕ್ಕೂಟಕ್ಕೆ ಪೂರ್ಣ ಬಹುಮತ ಪ್ರಾಪ್ತವಾಗದಿದ್ದರೆ ಆ ಕಸರತ್ತು ನಾನಾ ಆಯಾಮಗಳನ್ನು ಪಡೆಯುವುದೂ ಎಲ್ಲರಿಗೂ ತಿಳಿದಿರುವ ಸಂಗತಿಯೇ. ಹೀಗಾಗಿ ಹೆಚ್ಚುಕಮ್ಮಿ ಇನ್ನು ಮೂರು ತಿಂಗಳು ದೇಶದೆಲ್ಲೆಡೆ ರಾಜಕೀಯz ಕಾರುಬಾರು.

ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವವರ ಸಂಖ್ಯೆಯೇ ಸುಮಾರು ೮೧ ಕೋಟಿ. ಇಡೀ ಯುರೋಪ್ ಖಂಡದ ೫೦ ದೇಶಗಳ ಒಟ್ಟು ಜನಸಂಖ್ಯೆ ಎಷ್ಟಾಗುತ್ತದೆಯೋ ಅದಕ್ಕಿಂತ ಹೆಚ್ಚು ಜನರು ಈ ಬಾರಿ ಭಾರತದಲ್ಲಿ ಮತದಾನ ಮಾಡಲಿದ್ದಾರೆ. ಇವರಲ್ಲಿ ಶೇ. ೫೦ಕ್ಕಿಂತ ಹೆಚ್ಚಿನವರು ೨೫ ವರ್ಷದ ಒಳಗಿನವರು. ಕಳೆದ ಬಾರಿಗಿಂತ ೧೦ ಕೋಟಿ ಹೆಚ್ಚು ಜನ ಈ ಬಾರಿ ಮತ ಚಲಾಯಿಸಲಿದ್ದಾರೆ. ಒಂದರ್ಥದಲ್ಲಿ ಈ ಸಲದ ಚುನಾವಣೆಯಲ್ಲಿ ಯುವಕರೇ ನಿರ್ಣಾಯಕ ಶಕ್ತಿ. ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ ಎಂಬ ನಂಬಿಕೆಗೆ ಈ ಚುನಾವಣೆ ಸಾಕ್ಷಿಯಾಗಲಿದೆ.

ಚುನಾವಣೆಯ ರಣಾಂಗಣಕ್ಕೆ ಈ ಬಾರಿ ಧುಮುಕುವವರು ಯಾರ‍್ಯಾರು ಎನ್ನುವ ಸ್ಪಷ್ಟ ಚಿತ್ರಣ ಇನ್ನು ಕೆಲವೇ ದಿನಗಳಲ್ಲಿ ತಿಳಿಯಬಹುದು. ಆದರೂ ಕೆಲವು ವ್ಯಕ್ತಿಗಳ ಸ್ಪರ್ಧೆ ಈಗಾಗಲೇ ಖಾತರಿಯಾಗಿರುವ ಸಂಗತಿ. ಈ ಸಲದ ಚುನಾವಣೆಯಲ್ಲಿ ಯುವಕರೇ ನಿರ್ಣಾಯಕ ಶಕ್ತಿ ಆಗಿದ್ದರೂ ಕೆಲವು ವಯೋವೃದ್ಧರು ಮತ್ತೆ ಸ್ಪರ್ಧೆಗಿಳಿಯುತ್ತಿರುವುದು ಮಾತ್ರ ವಿಪರ್ಯಾಸ. ಅವರೆಲ್ಲ ಯುವಕರಿಗೆ ದಾರಿ ಮಾಡಿಕೊಟ್ಟು ತಾವು ಮಾರ್ಗದರ್ಶಕರಾಗಿ ಬದಿಗೆ ಸರಿಯಬೇಕಾಗಿತ್ತು. ಗೋಪುರವಾಗದೆ ಅಡಿಗಲ್ಲುಗಳಾಗುವ ಹಿರಿತನ ಮೆರೆಯಬೇಕಾಗಿತ್ತು. ಹಾಗಾಗಿಲ್ಲ ಎನ್ನುವುದು ಸದ್ಯದ ಕ್ರೂರ ವ್ಯಂಗ್ಯ.

ಬಿಜೆಪಿಯ ಅತೀ ಹಿರಿಯ ಮುಖಂಡ, ವಯೋವೃದ್ಧ ಲಾಲ್‌ಕೃಷ್ಣ ಆಡ್ವಾಣಿ ಈ ಬಾರಿಯೂ ಲೋಕಸಭೆಗೆ ಸ್ಪರ್ಧಿಸುವುದಾಗಿ ಖಡಕ್ ಆಗಿ ಹೇಳಿದ್ದಾರೆ. ಗುಜರಾತಿನ ಗಾಂಧಿ ನಗರದಿಂದಲೇ ತನ್ನ ಸ್ಪರ್ಧೆ ಎಂಬುದನ್ನೂ ಒತ್ತಿ ಹೇಳಿದ್ದಾರೆ. ಆಡ್ವಾಣಿಯವರಿಗೆ ಈಗ ಬರೋಬ್ಬರಿ ೮೭ ವರ್ಷ (ಹುಟ್ಟಿದ್ದು ನವೆಂಬರ್ ೮, ೧೯೨೭). ಈ ವಯಸ್ಸಿನಲ್ಲೂ ಅವರ ಆರೋಗ್ಯ ಚೆನ್ನಾಗಿದೆ (ದೇವರು ಅವರನ್ನು ಹೀಗೆಯೇ ಚೆನ್ನಾಗಿಟ್ಟಿರಲಿ). ಆದರೆ ಆರೋಗ್ಯ ಚೆನ್ನಾಗಿದೆ ಎಂದ ಮಾತ್ರಕ್ಕೆ ಈ ಇಳಿವಯಸ್ಸಿನಲ್ಲೂ ಅವರು ಸ್ಪರ್ಧಿಸುವ ಅಗತ್ಯವಿತ್ತೆ? ೫ ಬಾರಿ ಲೋಕಸಭಾ ಸದಸ್ಯ, ೪ ಬಾರಿ ರಾಜ್ಯಸಭಾ ಸದಸ್ಯ, ಕೇಂದ್ರದಲ್ಲಿ ವಾರ್ತಾ ಸಚಿವ, ಗೃಹ ಸಚಿವ ಹಾಗೂ ಉಪ ಪ್ರಧಾನಿಯಾಗಿ, ಅನೇಕ ಸರ್ಕಾರಿ ಸಮಿತಿಗಳ ಅಧ್ಯಕ್ಷರಾಗಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ… ಹೀಗೆ ಹಲವಾರು ಸರ್ಕಾರಿ ಹುದ್ದೆಗಳನ್ನು ಯಥೇಚ್ಛವಾಗಿ ಅನುಭವಿಸಿದವರು. ಈ ಎಲ್ಲಾ ಹುದ್ದೆಗಳನ್ನು ಅವರು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಅದೇನೋ ಸರಿ. ಆದರೆ ೮೭ರ ಈ ಇಳಿ ವಯಸ್ಸಿನಲ್ಲೂ ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಬಯಕೆ ಏಕೆ? ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ಆಡ್ವಾಣಿ ಗರಂ ಆಗಿದ್ದು ನಿಮಗೆ ಗೊತ್ತೇ ಇದೆ. ಆಗ ತಮ್ಮ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿ ಪ್ರತಿಭಟಿಸಿದ್ದರು. ಅವರ ಪ್ರತಿಭಟನೆಯ ಹಿಂದಿನ ಉzಶವಾದರೂ ಏನಿತ್ತು? ಈ ಬಾರಿ ಎನ್‌ಡಿಎ ಗದ್ದುಗೆ ಹಿಡಿದರೆ ಪ್ರಧಾನಿ ತಾನೇ ಆಗಬೇಕು ಎಂಬ ಬಯಕೆಯಲ್ಲದೆ ಮತ್ತೇನು? ಆಡ್ವಾಣಿ ಇಷ್ಟೆಲ್ಲ ಅಧಿಕಾರ, ಹುದ್ದೆಗಳನ್ನು ಅನುಭವಿಸಿದ ಬಳಿಕ ತಾವಾಗಿಯೇ ಹಿಂದೆ ಸರಿದು ಪಕ್ಷದಲ್ಲಿನ ಉತ್ಸಾಹೀ ಯುವಕರಿಗೆ ದಾರಿ ಮಾಡಿಕೊಡಬೇಕಾಗಿತ್ತು. ಮಾರ್ಗದರ್ಶಕರಾಗಿ ನೇಪಥ್ಯದಲ್ಲಿದ್ದು ಪಕ್ಷವನ್ನು ಮುನ್ನಡೆಸಬೇಕಾಗಿತ್ತು. ಆದರೆ..?

ನಮ್ಮ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಈಗ ೮೧ ವರ್ಷ (ಹುಟ್ಟಿದ್ದು ೧೮.೦೫.೧೯೩೩). ದೇವೇಗೌಡರ ರಾಜಕೀಯ ಬದುಕು ಕೂಡ ವರ್ಣರಂಜಿತ. ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಅನಂತರ ರಾಜ್ಯಸಭಾ ಸದಸ್ಯರಾಗಿ, ಕೊನೆಗೊಮ್ಮೆ ಪ್ರಧಾನಿಯೂ ಆಗಿ (೧೯೯೬-೯೭) ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದವರು. ದೇಶದ ೧೧ನೇ ಪ್ರಧಾನಿಯಾಗಿ ಗೌಡರು ಆಯ್ಕೆಯಾಗಿದ್ದಂತೂ ಅವರ ಬದುಕಿನ ಬಲುದೊಡ್ಡ ರಾಜಕೀಯ ಅದೃಷ್ಟವೇ ಸರಿ. ೫ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರೂ ಮತ್ತೆ ಈ ಬಾರಿ ಹಾಸನದಿಂದ ಸ್ಪರ್ಧಿಸುತ್ತಿರುವುದು ಏನನ್ನು ಸೂಚಿಸುತ್ತದೆ? ದೇಶದ ಪ್ರಧಾನಿಯೇ ಆದ ಬಳಿಕ ಮತ್ತೆ ಲೋಕಸಭೆಯಲ್ಲಿ ಹಿಂಬದಿಯ ಸೀಟಿನಲ್ಲಿ ಕುಳಿತು ಇವರು ಕಡಿದು ಕಟ್ಟೆ ಹಾಕುವುದಾದರೂ ಏನು? ಆರೋಗ್ಯ ಕೂಡ ಅಷ್ಟಕ್ಕಷ್ಟೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ‘ಇದೇ ನನ್ನ ಕೊನೆಯ ಚುನಾವಣೆ’ ಎಂದು ಹೇಳುತ್ತಲೇ ಇರುತ್ತಾರೆ.  ಬದುಕಿದ್ದರೆ ಬಹುಶಃ ೨೦೧೯ರ ಚುನಾವಣೆಯಲ್ಲೂ ಅವರು ಇದೇ ಡೈಲಾಗ್ ಹೇಳುತ್ತಾ ಮತ್ತೆ ಕಣಕ್ಕೆ ಇಳಿಯಬಹುದು! ಈ ಬಾರಿ ಸ್ಪರ್ಧಿಸದೆ, ಅವರು ಇನ್ನೊಬ್ಬ ಯುವ ಸ್ಪರ್ಧಿಗೆ ಅವಕಾಶ ಒದಗಿಸಬಹುದಿತ್ತು (ಕುಮಾರ ಸ್ವಾಮಿ, ಅನಿತಾ ಅಥವಾ ರೇವಣ್ಣ ಅವರನ್ನು ಹೊರತುಪಡಿಸಿ!).

S.M. Krishna
S.M. Krishna

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಸಚಿವರಾಗಿ ಮೆರೆದ ಕಾಂಗ್ರೆಸ್‌ನ ಜಾಫರ್ ಷರೀಫ್ ಈ ಬಾರಿ ಮತ್ತೆ ಸ್ಪರ್ಧಿಸುತ್ತಿದ್ದಾರಂತೆ. ಅವರಿಗೂ ಈಗ ೮೧ ವರ್ಷ (ಹುಟ್ಟಿದ್ದು ೧೯೩೩). ನಿಜಲಿಂಗಪ್ಪನವರ ಕಾಲದಲ್ಲೇ  ರಾಜ್ಯ ವಿಧಾನಸಭೆಯಲ್ಲಿ ಸಚಿವರಾಗಿ ಅನಂತರ ಕೇಂದ್ರದಲ್ಲಿ ಸಚಿವರಾಗಿ, ರೈಲ್ವೇ ಸಚಿವರಾಗಿ ಅಧಿಕಾರ ಚಲಾಯಿಸಿದವರು. ಈಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಸಮಕಾಲೀನ ರಾಜಕೀಯ ನಡೆಸಿದವರು. ೮ ಬಾರಿ ಲೋಕಸಭೆಗೆ ಆಯ್ಕೆಯಾದ ಖ್ಯಾತಿ. ಹೀಗಿದ್ದರೂ ಷರೀಫರಿಗೆ ಮತ್ತೆ ಸ್ಪರ್ಧಿಸುವ ಉಮೇದು. ಯಾಕೆಂದು ಕಾಂಗ್ರೆಸ್‌ನಲ್ಲಿ ಯಾರಿಗೂ ಕೇಳುವ ಧೈರ್ಯವಿಲ್ಲ.

ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಮಾನವಸಂಪನ್ಮೂಲ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಡಾ.ಮುರಳಿ ಮನೋಹರ ಜೋಶಿ ಅವರಿಗೀಗ ೮೦ ವರ್ಷ (ಹುಟ್ಟಿದ್ದು ೧೯೩೪). ಒಟ್ಟು ೪ ಬಾರಿ ಲೋಕಸಭಾ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯರಾಗಿಯೂ ಅಧಿಕಾರ ಅನುಭವಿಸಿದವರು. ಈ ಬಾರಿ ಮತ್ತೆ ವಾರಾಣಸಿಯಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ನರೇಂದ್ರ ಮೋದಿಯವರಿಗೆ ಆ ಕ್ಷೇತ್ರವನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಮೋದಿ ಅದೇ ಕ್ಷೇತ್ರದಿಂದಲೇ ಸ್ಪರ್ಧಿಸಲು ಬಯಸಿದ್ದಾರೋ ಇಲ್ಲವೋ ಇನ್ನೂ ನಿಕ್ಕಿಯಾಗಿಲ್ಲ. ಆದರೆ ಡಾ. ಜೋಶಿ ಮಾತ್ರ ಈ ಬಾರಿ ಸ್ಪರ್ಧಿಸದಿರುವ ಮಾತು ಆಡಿಯೇ ಇಲ್ಲ. ರಾಜಕೀಯಕ್ಕೆ ಬರುವ ಮುನ್ನ ಅವರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟಿದ್ದರು. ಈಗಲೂ ಬಿಜೆಪಿಯ ಯುವ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗುವ ಅವಕಾಶ ಅವರಿಗಿತ್ತು. ಆದರೆ ಆ ಅವಕಾಶವನ್ನು ಅವರಾಗಿಯೇ ದೂರ ತಳ್ಳಿದ್ದಾರೆ.

mallikarjun_kharge_
mallikarjun_kharge_

ಯುಪಿಎ – ೨ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ನಮ್ಮವರೇ ಆದ ಎಸ್.ಎಂ.ಕೃಷ್ಣ ಅವರು ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಾರೋ ಇಲ್ಲವೋ ಇನ್ನೂ ತಿಳಿದಿಲ್ಲ. ಅವರಿಗೂ ಕೂಡ ೮೨ ವರ್ಷ (ಹುಟ್ಟಿದ್ದು ೧೯೩೨). ೪ ಬಾರಿ ಸಂಸದರಾಗಿದ್ದರು. ಕೇಂದ್ರದಲ್ಲಿ ಸಚಿವರೂ ಆಗಿದ್ದರು. ೨ ಬಾರಿ ರಾಜ್ಯಸಭಾ ಸದಸ್ಯರು ಅಲ್ಲದೆ ರಾಜ್ಯ ವಿಧಾನಸಭೆಯಲ್ಲಿ ಸ್ಪೀಕರ್, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸಿದವರು. ಅದಾದ ಮೇಲೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದರು. ಈ ಬಾರಿ ಪಕ್ಷವೇ ಅವರಿಗೆ ಬಹುಶಃ ಸೀಟು ನೀಡುವುದಿಲ್ಲ ಎನಿಸುತ್ತದೆ. ಆದರೆ ಅವರಾಗಿಯೇ ತಾನು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದಿದ್ದರೆ ಅವರ ಕಿಮ್ಮತ್ತು ಇನ್ನಷ್ಟು ಹೆಚ್ಚುತ್ತಿತ್ತು.

Mulayam-Singh
Mulayam-Singh

ಉತ್ತರ ಪ್ರದೇಶದಲ್ಲಿ ೩ ಬಾರಿ ಮುಖ್ಯ ಮಂತ್ರಿಯಾಗಿ, ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ಚಲಾಯಿಸಿದ ಮುಲಾಯಂ ಸಿಂಗ್ ಯಾದವ್ ಅವರಿಗೀಗ ೭೫ (ಹುಟ್ಟಿದ್ದು ೨೨.೧೧.೧೯೩೯). ಈ ಬಾರಿಯೂ ಮತ್ತೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ವರ್ಷ ಉ.ಪ್ರ. ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷ ಮತ್ತೆ ಬಹುಮತ ಪಡೆದಾಗ ತಾವೇ ಮುಖ್ಯಮಂತ್ರಿಯಾಗಬೇಕೆಂಬ ಹಂಬಲವಿತ್ತು. ಆದರೆ ಪಕ್ಷದ ಪ್ರಮುಖರ ಒತ್ತಾಸೆಯಿಂದಾಗಿ ತನ್ನ ಮಗ ಅಖಿಲೇಶ್‌ಗೆ ಆ ಸ್ಥಾನವನ್ನು ದಾನವಾಗಿತ್ತರು. ಒಮ್ಮೆ ಈ ದೇಶದ ಪ್ರಧಾನಿ ಪಟ್ಟಕ್ಕೇರಬೇಕೆಂಬ ಹಂಬಲವಂತೂ ಮುಲಾಯಂ ಅವರಿಗಿದೆ. ಈ ಬಾರಿ ತೃತೀಯ ರಂಗಕ್ಕೇನಾದರೂ ಬಹುಮತ ಬಂದರೆ ತನ್ನ ಕನಸು ನನಸಾಗಬಹುದೆಂಬ ದೂರದ ಆಸೆ. ಆದರೆ ತೃತೀಯ ರಂಗ ದಿನಗಳೆದಂತೆ ದಿಕ್ಕೆಟ್ಟು ಚಿತ್ರಾನ್ನವಾಗುತ್ತಿರುವಾಗ ಮುಲಾಯಂ ಅವರ ಕನಸು ಕನಸಾಗಿಯೇ ಉಳಿಯಬಹುದು.

ಯುಪಿಎ – ೨ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದ , ನಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆ ಇವರಿಗೆ ಈಗ ೭೨ (ಹುಟ್ಟಿದ್ದು ೧೯೪೨). ಬೇರೆ ಹಿರಿಯ ರಾಜಕಾರಣಿಗಳಿಗೆ ಹೋಲಿಸಿದರೆ ಖರ್ಗೆಯವರದು ಅಂತಹ ವಯಸ್ಸೇನಲ್ಲ! ೯ ಬಾರಿ ನಿರಂತರ ಶಾಸಕರಾಗಿದ್ದರು. ಸಚಿವರೂ ಆಗಿದ್ದರು. ಕಳೆದ ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ರೈಲ್ವೇ ಖಾತೆಯಂತಹ ಪ್ರಮುಖ ಖಾತೆಯ ಸಚಿವರೂ ಆಗಿದ್ದರು. ದಕ್ಷ ರಾಜಕಾರಣಿ ಎಂದು ಹೆಸರಾಗಿರುವ ಖರ್ಗೆಯವರಿಗೆ ಅವರ ಶರೀರದ ವಿಪರೀತ ಭಾರಕ್ಕೋ ಏನೋ ನಿಂತರೆ ತಕ್ಷಣ ಕುಂತುಕೊಳ್ಳಲಾಗುತ್ತಿಲ್ಲ. ಕುಂತರೆ ತಕ್ಷಣ ಮೇಲೆದ್ದು ನಿಂತುಕೊಳ್ಳಲಾಗುತ್ತಿಲ್ಲ. ಅತ್ತಿತ್ತ ಓಡಾಡಬೇಕಾದರೆ ಅಕ್ಕಪಕ್ಕ ಹೆಗಲು ಕೊಡುವ ಇಬ್ಬರು ಸಾಥಿಗಳು ಬೇಕೇ ಬೇಕು. ಬುದ್ಧಾಯ ನಮೋ ನಮಃ ಎಂದು ಮನೆಯಲ್ಲಿ ಹಾಯಾಗಿರಬಾರದೆ? ಇಂಥವರು ಮತ್ತೆ ಲೋಕಸಭೆಗೆ ಸ್ಪರ್ಧಿಸುವುದು ಪಕ್ಷದ ಒಬ್ಬ ಯುವ ಅಭ್ಯರ್ಥಿಗೆ ವಂಚಿಸಿದಂತೆ ಆಗುವುದಿಲ್ಲವೆ?

Murli-Manohar-Joshi
Murli-Manohar-Joshi

ಇವೆಲ್ಲ ಕೆಲವು ಸ್ಯಾಂಪಲ್‌ಗಳಷ್ಟೆ. ಇಳಿ ವಯಸ್ಸಿನ, ಈಗಲೂ ಅಧಿಕಾರ ರಾಜಕೀಯದ ಗೀಳು ಬಿಡದ ಇನ್ನೂ ಕೆಲವು ಹಿರಿಯ ರಾಜಕಾರಣಿಗಳು ಇದ್ದಾರೆ. ಅವರನ್ನಿಲ್ಲಿ ಪಟ್ಟಿ ಮಾಡಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಹಿರಿಯ ಅನುಭವಸ್ಥರು ಬೇಕು, ನಿಜ. ಆದರೆ ಓಡಾಡಲಾಗದ, ವೃದ್ಧಾಪ್ಯ ಕಾಡುವ ರಾಜಕಾರಣಿಗಳು ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕೆ? ಅಂಥವರು ಸ್ಪರ್ಧಿಸಿ ಗೆಲ್ಲಬಹುದು, ಗೆಲ್ಲುತ್ತಾರೆ ಎಂಬುದು ಬೇರೆ ವಿಚಾರ. ಆದರೆ ಹಾಗೆ ಗೆದ್ದ ಬಳಿಕ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಅವರಿಂದ ಸಾಧ್ಯವೆ ಎಂಬುದು ಇನ್ನೊಂದು ಪ್ರಶ್ನೆ. ಸರ್ಕಾರಿ ನೌಕರರಿಗೆ ೫೮ ಅಥವಾ ೬೦ ವರ್ಷಗಳಾದ ಬಳಿಕ ಕಡ್ಡಾಯವಾಗಿ ನಿವೃತ್ತಿ ಇದೆ. ರಾಜಕಾರಣಿಗಳಿಗೆ ಮಾತ್ರ ಈ ನಿಯಮ ಯಾಕಿಲ್ಲ ಎಂದು ಅನೇಕ ಯುವಕ-ಯುವತಿಯರು ಆಗಾಗ ಪ್ರಶ್ನಿಸುತ್ತಲೇ ಇರುತ್ತಾರೆ. ರಾಜಕೀಯ ಕ್ಷೇತ್ರದ ಅಡಿಗಲ್ಲುಗಳಾಗಿ ಪ್ರಜಾಪ್ರಭುತ್ವದ ಸೌಧಕ್ಕೆ ಭದ್ರ ತಳಪಾಯವಾಗಬೇಕಾದವರು ಅದನ್ನೊಲ್ಲದೆ, ತಾವು ಗೋಪುರಗಳಾಗಿಯೇ ಇರುತ್ತೇವೆ ಎಂದರೆ ಅದೆಂತಹ ವೈರುಧ್ಯ? ಅಡಿಗಲ್ಲುಗಳಾಗಬೇಕಾದವರೆಲ್ಲ ಗೋಪುರಗಳಾಗಲು ಹೊರಟರೆ ಪ್ರಜಾಪ್ರಭುತ್ವದ ಕಟ್ಟಡ ಕುಸಿಯದೆ ಇದ್ದೀತೆ?

LK Advani-
LK Advani-

ರಾಜಕೀಯ ಕ್ಷೇತ್ರದ ಅಡಿಗಲ್ಲುಗಳಾಗಿ ಪ್ರಜಾಪ್ರಭುತ್ವದ ಸೌಧಕ್ಕೆ ಭದ್ರ ತಳಪಾಯವಾಗಬೇಕಾದವರು ಅದನ್ನೊಲ್ಲದೆ, ತಾವು ಗೋಪುರಗಳಾಗಿಯೇ ಇರುತ್ತೇವೆ ಎಂದರೆ ಅದೆಂತಹ ವೈರುಧ್ಯ? ಅಡಿಗಲ್ಲುಗಳಾಗಬೇಕಾದವರೆಲ್ಲ ಗೋಪುರಗಳಾಗಲು ಹೊರಟರೆ ಪ್ರಜಾಪ್ರಭುತ್ವದ ಕಟ್ಟಡ ಕುಸಿಯದೆ ಇದ್ದೀತೆ?

Leave a Reply

Your email address will not be published.

This site uses Akismet to reduce spam. Learn how your comment data is processed.