ಹಿಂದುತ್ವ , ಹಿಂದು ದೇವ-ದೇವತೆಗಳು, ಹಿಂದು ಧರ್ಮಗಳ ಮೇಲಾದಷ್ಟು ಅವ್ಯಾಹತ ಆಕ್ರಮಣ, ಟೀಕೆ, ನಿಂದನೆ, ಭರ್ತ್ಸನೆಗಳು ಜಗತ್ತಿನ ಇನ್ನಾವುದೇ ಧರ್ಮದ ಮೇಲೂ ಖಂಡಿತ ಆಗಿರಲಿಕ್ಕಿಲ್ಲ. ಈಗಲೂ ಈ ಅಪಸವ್ಯ ಮುಂದುವರಿಯುತ್ತಲೇ ಇದೆ. ಸ್ವಯಂಘೋಷಿತ ಬುದ್ಧಿಜೀವಿಗಳೆನಿಸಿಕೊಂಡ ಕೆಲವು ಎಡಪಂಥೀಯ ವಿಚಾರವಾದಿಗಳು ಆಗಾಗ, ಬೇರೆ ಏನೂ ವಿಷಯ ಹೊಳೆಯದಿದ್ದಾಗ ಹಿಂದು ಧರ್ಮ ಟೀಕಿಸುವ ಕಾಯಕಕ್ಕೆ ಕೈ ಹಚ್ಚುತ್ತಾರೆ. ತನ್ಮೂಲಕ ಸಾಕಷ್ಟು ಪ್ರಸಿದ್ಧಿ, ಪ್ರಚಾರವನ್ನು ಗಿಟ್ಟಿಸುತ್ತಾರೆ. ಅವರ ಜಾಯಮಾನವೇ ಅಂತಹುದು.
ಇಲ್ಲಷ್ಟೇ ಅಲ್ಲ, ವಿದೇಶಗಳ ಕೆಲವು ಬುದ್ಧಿಜೀವಿಗಳೆನಿಸಿಕೊಂಡವರಿಗೂ ಟೀಕಿಸಲು ಸುಲಭವಾಗಿ ಸಿಗುವ ಅಗ್ಗದ ವಸ್ತುವೆಂದರೆ ಹಿಂದು ಧರ್ಮ, ಅದಕ್ಕೆ ಸಂಬಂಧಿಸಿದ ವಿಚಾರಗಳು. ಅಧ್ಯಯನದ ಹೆಸರಲ್ಲಿ ಹಿಂದು ಧರ್ಮಗಳ ವಿರುದ್ಧ ಟೀಕೆ ಟಿಪ್ಪಣಿಗಳ ಪ್ರವಾಹವನ್ನೇ ಈ ವಿದೇಶೀ ಲೇಖಕ-ಲೇಖಕಿಯರು ಹರಿಸಿದ್ದಾರೆ. ಇದೇ ಪರಿಯಾಗಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಮತಗಳ ವಿರುದ್ಧ ಟೀಕೆ ಹರಿದಿದ್ದರೆ ಈ ಲೇಖಕರು ಜೀವಂತವಾಗಿರುತ್ತಿದ್ದರೋ ಅಥವಾ ಬೇರೆಲ್ಲಾದರೂ ನಾಪತ್ತೆಯಾಗಿರುತ್ತಿದ್ದರೋ ಹೇಳುವುದು ಕಷ್ಟ. ಆದರೆ ಹಿಂದು ಧರ್ಮವನ್ನು ಟೀಕಿಸಿದವರಿಗೆ ಅಂತಹ ಯಾವುದೇ ಪ್ರಾಣಾಪಾಯ ಅಥವಾ ಇನ್ನಿತರ ಭೀತಿ ತಟ್ಟುವುದೇ ಇಲ್ಲ ಎನ್ನುವುದೇ ವಿಶೇಷ. ಹಿಂದು ಧರ್ಮವನ್ನು ಟೀಕಿಸಿದ ಯಾರೊಬ್ಬರೂ ಇದುವರೆಗೆ ನೇಣುಗಂಬಕ್ಕೇರಿಲ್ಲ ಅಥವಾ ಕೊಲೆಯಾಗಿಲ್ಲ. ಆದರೆ ಮುಸ್ಲಿಂ ಧರ್ಮವನ್ನು ಟೀಕಿಸಿದವರು, ಪೈಗಂಬರ್, ಅಲ್ಲಾಹು ವಿರುದ್ಧ ಮಾತನಾಡಿದ ಹಲವರು ಜೀವಂತವಾಗಿ ಉಳಿದಿಲ್ಲ. ಇನ್ನು ಕೆಲವರು ಜೀವಂತವಾಗಿದ್ದರೂ ತಲೆತಪ್ಪಿಸಿಕೊಂಡು ಓಡಾಡಬೇಕಾದ ದುಃಸ್ಥಿತಿ.
ಅಮೆರಿಕದ ಲೇಖಕಿ ವೆಂಡಿ ಡೊನಿಗರ್ ಹಿಂದು ಧರ್ಮವನ್ನು, ಹಿಂದು ಪುರಾಣ, ಉಪನಿಷತ್ತುಗಳನ್ನು ಟೀಕಿಸುವವರ ಪಟ್ಟಿಗೆ ಈಗ ತನ್ನ ಹೆಸರನ್ನೂ ಸೇರ್ಪಡೆ ಮಾಡಿಕೊಂಡಿದ್ದಾಳೆ. ವೆಂಡಿಯ ‘ಖಿhe ಊiಟಿಜus: ಂಟಿ ಂಟಣeಡಿಟಿಚಿಣive ಊisಣoಡಿಥಿ’ ಎಂಬ ವಿವಾದಾತ್ಮಕ ಪುಸ್ತಕವನ್ನು ಪ್ರಕಟಿಸಿದ ಪೆಂಗ್ವಿನ್ ಇಂಡಿಯಾ ಸಂಸ್ಥೆ ತಾನಾಗಿಯೇ ಅದನ್ನು ಹಿಂದೆ ಪಡೆಯುವುದಾಗಿ ನ್ಯಾಯಾಲಯದಲ್ಲಿ ಹೇಳಬೇಕಾಗಿ ಬಂದಿದ್ದು ಸರ್ವವೇದ್ಯ. ಈ ಪುಸ್ತಕದಲ್ಲಿ ವೆಂಡಿ ಹಿಂದು ಧರ್ಮ, ಹಿಂದು ದೇವ-ದೇವತೆಗಳ ವಿರುದ್ಧ ತಳಬುಡವಿಲ್ಲದ, ಆಧಾರರಹಿತ ಟೀಕೆಗಳನ್ನು ಮಾಡಿದ್ದಳು. ‘ಹರಪ್ಪ ಸಂಸ್ಕೃತಿ ಹರಡಿದ್ದ ಕಾಲದಲ್ಲಿ ಒಟ್ಟು ಅಸ್ತಿತ್ವದಲ್ಲಿದ್ದ ಜನಸಂಖ್ಯೆ ೪೦ ಸಾವಿರ’ ಎಂದು ಆಕೆ ಆ ಪುಸ್ತಕದಲ್ಲಿ ಪ್ರತಿಪಾದಿಸಿದ್ದಳು. (ಪುಟ ೬೭). ಆದರೆ ಈ ಸಂಖ್ಯೆ ಮೊಹೆಂಜೋದಾರೋ ಒಂದರ ಜನಸಂಖ್ಯೆ. ಮೊಹೆಂಜೋದಾರೋ-ಹರಪ್ಪ ಒಟ್ಟಿಗೆ ಸೇರಿದ ಜನಸಂಖ್ಯೆ ಸುಮಾರು ೫ ಲಕ್ಷವೆನ್ನುವುದು ವಾಸ್ತವ.
ಋಗ್ವೇದ ಕಾಲದಲ್ಲಿ ಗೋಧಿಯನ್ನು ಆಹಾರ ಪದಾರ್ಥವೆಂದು ವಿವರಿಸಲಾಗಿದೆ (ಪುಟ ೧೧೨) ಎನ್ನುವುದು ವೆಂಡಿಯ ಇನ್ನೊಂದು ವಾದ. ಆದರೆ ಋಗ್ವೇದದಲ್ಲಿ ಎಲ್ಲೂ ಕೂಡ ಗೋಧಿಯ ಬಗ್ಗೆ ಉಲ್ಲೇಖವೇ ಇಲ್ಲ. ಗೋಧಿಯ ಕುರಿತು ಮೊದಲು ಉಲ್ಲೇಖವಾದದ್ದು ಯಜುರ್ವೇದದ ಮೈತ್ರಾಯಿಣಿ ಸಂಹಿತದಲ್ಲಿ. ವೇದಗಳಲ್ಲಿ ಶೂದ್ರ ದೇವತೆಗಳೇ ಇಲ್ಲ (ಪುಟ ೧೩೦) ಎಂದು ವೆಂಡಿಯ ಪ್ರತಿಪಾದನೆ. ಆದರೆ ವೇದಗಳಲ್ಲಿ ಅಂತಹ ಕಲ್ಪನೆಯೇ ಇರಲಿಲ್ಲ.
ಋಗ್ವೇದದಲ್ಲಿ (೧೦.೬೨) ಮಹಿಳೆಯೊಬ್ಬಳು ತನ್ನ ಹಾಸಿಗೆಯ ಮೇಲೆ ಸ್ವಂತ ಸಹೋದರನನ್ನು ಕೂರಿಸಿಕೊಳ್ಳಬಹುದು ಎಂಬ ಉಲ್ಲೇಖವಿದೆ ಎಂದು ವೆಂಡಿ ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾಳೆ. ಆದರೆ ವಾಸ್ತವವಾಗಿ ಇಂತಹ ಅರ್ಥಬರುವ ಯಾವುದೇ ಶ್ಲೋಕ ಅಥವಾ ಮಂತ್ರ ಋಗ್ವೇದದಲ್ಲಿಲ್ಲ. ಹಿಂದುಗಳ ಪವಿತ್ರ ಗ್ರಂಥಗಳಲ್ಲಿ ಕಾಮಕ್ಕೆ ಸಂಬಂಧಿಸಿದ ವಿಚಾರಗಳೇ ಇವೆ ಎಂದು ಪ್ರತಿಪಾದಿಸುವುದು ವೆಂಡಿಯ ಧೂರ್ತ ತಂತ್ರಗಳಲ್ಲೊಂದು.
ವೆಂಡಿ ಡೊನಿಗರ್ ಬರೆದ ಈ ಪುಸ್ತಕವನ್ನು ಈಗ ಅದನ್ನು ಪ್ರಕಟಿಸಿದ ಪೆಂಗ್ವಿನ್ ಸಂಸ್ಥೆಯೇ ಹಿಂದೆ ಪಡೆದಿದೆ. ಹೀಗೆ ಪಡೆದಿದ್ದು ನ್ಯಾಯಾಲಯದ ತೀರ್ಪಿನಿಂದಾಗಿ, ಹಿಂದುಗಳ ಅಥವಾ ಯಾವುದೇ ಹಿಂದು ಸಂಘಟನೆಗಳು ಹೇರಿದ ಒತ್ತಡದಿಂದಾಗಿ ಅಲ್ಲ ಎಂಬುದು ಇಲ್ಲಿ ಸ್ಪಷ್ಟ. ವೆಂಡಿಯ ಪುಸ್ತಕಕ್ಕೆ ನಿಷೇಧ ಹೇರಿಲ್ಲ. ಪ್ರಕಾಶಕರೇ ತಾವಾಗಿ ಪುಸ್ತಕವನ್ನು ಹಿಂದೆ ಪಡೆದಿದ್ದಾರೆ. ಈ ವಿದ್ಯಮಾನ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಂತೂ ಖಂಡಿತ ಅಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಾನೂನಿನ ಲಕ್ಷ್ಮಣ ರೇಖೆಯನ್ನು ಪೆಂಗ್ವಿನ್ ಸಂಸ್ಥೆಯಾಗಲೀ ಅಥವಾ ವೆಂಡಿಯ ವಿವಾದಾತ್ಮಕ ಪುಸ್ತಕದ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ ಶಿಕ್ಷಾ ಬಚಾವೋ ಆಂದೋಲನ ಸಂಘಟನೆಯಾಗಲಿ ಮೀರಿದ್ದಿಲ್ಲ. ಹೀಗಿದ್ದರೂ ಕೆಲವು ಬುದ್ಧಿಜೀವಿಗಳು ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹೊಡೆಯುತ್ತಿರುವುದು ಅವರ ಬೌದ್ಧಿಕ ದಿವಾಳಿತನವನ್ನಷ್ಟೇ ಎತ್ತಿ ತೋರಿಸುತ್ತದೆ.
ವೆಂಡಿಯ ಈ ವಿವಾದಾತ್ಮಕ ಪುಸ್ತಕದ ಕುರಿತು ನ್ಯಾಯಾಲಯ ನೀಡಿದ ತೀರ್ಪು ಭಾರತ ದೇಶದ ಅಸ್ಮಿತೆ, ಹೆಮ್ಮೆಯ ಮರುಸ್ಥಾಪನೆ ಹಾಗೂ ವಿಕೃತಿಗಳನ್ನು ಸರಿಪಡಿಸುವ ಹಾದಿಯಲ್ಲಿ ಒಂದು ಮಹತ್ತರ ಮೈಲಿಗಲ್ಲೇ ಸರಿ. ಇಷ್ಟೆಲ್ಲ ಅವಮಾನಕ್ಕೆ ಒಳಗಾಗಿದ್ದರೂ ವೆಂಡಿ ಡೊನಿಗರ್ ಹಿಂದು ಧರ್ಮವನ್ನು, ಅದಕ್ಕೆ ಸಂಬಂಧಿಸಿದ ಇನ್ನಿತರ ಸಂಗತಿಗಳನ್ನು ತನಗೆ ತೋಚಿದಂತೆ ಗೀಚದೇ ಉಳಿದಿಲ್ಲವೆನ್ನುವುದು ಮಾತ್ರ ಇನ್ನಷ್ಟು ವಿಷಾದದ ಸಂಗತಿ. ನಾಯಿಬಾಲ ಎಂದಿದ್ದರೂ ಡೊಂಕು ಎಂಬ ಗಾದೆಯ ಮಾತನ್ನು ಇದು ನೆನಪಿಸುತ್ತದೆ. ಹಿಂದು ಧರ್ಮದ ಕುರಿತ ವೆಂಡಿಯ ಇತ್ತೀಚಿಗಿನ ‘ಔಟಿ ಊiಟಿಜuism’ ಎಂಬ ಇನ್ನೊಂದು ಪುಸ್ತಕವೇ ಇದಕ್ಕೊಂದು ಪುರಾವೆ. ತನ್ನ ಮೊದಲ ಪುಸ್ತಕಕ್ಕಿಂತ ವೆಂಡಿಯ ಈ ಪುಸ್ತಕ ಇನ್ನಷ್ಟು ವಿವಾದದ ತರಂಗಗಳನ್ನೆಬ್ಬಿಸಿದೆ. ಹಿಂದುಗಳನ್ನು ನಿಂದಿಸಲು ಹಾಗೂ ಅವರಿಗೆ ಸಲ್ಲದ ಕಳಂಕ ಹಚ್ಚಲು ಈ ಪುಸ್ತಕದಲ್ಲಿ ಬಳಸಿರುವ ಭಾಷೆ ಅತ್ಯಂತ ಅಸಹ್ಯಕರ ಹಾಗೂ ಆಕ್ಷೇಪಾರ್ಹ. ಕೆಲವು ಉದಾಹರಣೆಗಳು ಹೀಗಿವೆ: ‘ವಿವೇಕಾನಂದರು ಎಲ್ಲ ಬಗೆಯ ಜಾತಿ ಹಣೆಪಟ್ಟಿಗಳ ವಿರುದ್ಧವಾಗಿದ್ದರು. ಅವರು ಗೋಮಾಂಸ ತಿನ್ನುವಂತೆ ಜನರಿಗೆ ಪ್ರೇರಣೆ ನೀಡುತ್ತಿದ್ದರು’. ವಿವೇಕಾನಂದರು ಗೋಮಾಂಸ ತಿನ್ನುವಂತೆ ಜನರಿಗೆ ಪ್ರೇರಣೆ ಕೊಟ್ಟದ್ದಕ್ಕೆ ದಾಖಲೆಗಳನ್ನು ಮಾತ್ರ ವೆಂಡಿ ಒದಗಿಸಿಲ್ಲ. ವಿವೇಕಾನಂದರ ಯಾವ ಭಾಷಣದಲ್ಲಿ ಅಥವಾ ಅವರು ಬರೆದ ಯಾವ ಗ್ರಂಥದ ಯಾವ ಪುಟದಲ್ಲಿ ಇಂತಹ ಸಂಗತಿಯ ಉಲ್ಲೇಖವಿದೆ ಎಂಬುದನ್ನು ಸ್ಪಷ್ಟಪಡಿಸುವ ಕಷ್ಟವನ್ನೂ ವೆಂಡಿ ತೆಗೆದುಕೊಂಡಿಲ್ಲ! ಆಕೆಯದೇನಿದ್ದರೂ ಊiಣ ಚಿಟಿಜ ಖuಟಿ ಅಚಿse! ಶ್ರೀರಾಮನ ವನವಾಸಕ್ಕೆ ಸಂಬಂಧಿಸಿ ಈ ಪುಸ್ತಕದಲ್ಲಿ ವೆಂಡಿ ಬರೆದಿರುವುದು ಹೀಗೆ: ‘ರಾಮನ ತಾಯಿ, ಬಳಿಕ ಲಕ್ಷ್ಮಣ ಹೀಗೆ ಹೇಳುತ್ತಾರೆ – ನನಗಿದು ಇಷ್ಟವಿಲ್ಲ. ರಾಜ ವಿಕಾರಕ್ಕೆ ಒಳಗಾಗಿದ್ದಾನೆ. ವೃದ್ಧನೂ ಇಂದ್ರಿಯಗಳ ದಾಸನಾಗಿ ಭ್ರಷ್ಟನೂ ಆಗಿದ್ದಾನೆ. ಒತ್ತಡಕ್ಕೆ ಸಿಲುಕಿದಾಗ ಹಾಗೂ ಮೋಹದಿಂದ ಹುಚ್ಚನಾದಾಗ ಆತ ಏನು ತಾನೆ ಹೇಳದಿರಲು ಸಾಧ್ಯ?’ ತನ್ನ ಈ ವಾದಕ್ಕೂ ವೆಂಡಿ ಯಾವುದೇ ಸಮರ್ಥನೆಯನ್ನು ಒದಗಿಸಿಲ್ಲ.
ಔಟಿ ಊiಟಿಜuism ಕೃತಿಯಲ್ಲಿ ವೆಂಡಿ ಕೇವಲ ಹಿಂದು ಧರ್ಮ ಗ್ರಂಥಗಳ ಮೇಲಷ್ಟೇ ಸವಾರಿ ಮಾಡಿಲ್ಲ. ಹಿಂದುತ್ವವನ್ನು ಪೋಷಿಸುವ ಆರೆಸ್ಸೆಸ್ ಬಗ್ಗೆಯೂ ಕಿಡಿಕಾರಿದ್ದಾಳೆ. ‘ಭಾರತದ ಭೂಭಾಗ ಹಿಂದುಗಳಿಗೇ ಸೇರತಕ್ಕದ್ದು. ಆದ್ದರಿಂದ ಸಹನೆ ಕಡಿಮೆ ಇರುವ ಮುಸ್ಲಿಮರನ್ನು ಹೊರದಬ್ಬಬೇಕು’ ಎಂದು ಆರೆಸ್ಸೆಸ್ ಕರೆ ಕೊಟ್ಟಿದೆಯಂತೆ. ಮಹಾತ್ಮಾ ಗಾಂಧಿಯನ್ನು ಕೊಂದವನು ಒಬ್ಬ ಆರೆಸ್ಸೆಸ್ ಸದಸ್ಯ ಎಂದೂ ವೆಂಡಿ ತೀರ್ಪು ನೀಡಿದ್ದಾಳೆ. ಭಾರತದ ನ್ಯಾಯಾಲಯ ಗಾಂಧಿ ಕೊಲೆಗೂ ಆರೆಸ್ಸೆಸ್ಗೂ ಯಾವುದೇ ಸಂಬಂಧವಿಲ್ಲ ಎಂದು ನಿಚ್ಚಳವಾಗಿ ನೀಡಿರುವ ತೀರ್ಪು ಪಾಪ, ವೆಂಡಿಗೆ ಗೊತ್ತೇ ಇಲ್ಲವೆಂದು ಕಾಣುತ್ತದೆ. ನಮ್ಮ ಸಲ್ಮಾನ್ ಖುರ್ಷಿದ್, ರಾಹುಲ್ ಗಾಂಧಿ ಮೊದಲಾದ ಕಾಂಗ್ರೆಸ್ ನಾಯಕಮಣಿಗಳು ಈಗ ಚುನಾವಣಾ ಪ್ರಚಾರ ಭಾಷಣದಲ್ಲಿ ಆರೆಸ್ಸೆಸ್ ವಿರುದ್ಧ ಮಾಡುತ್ತಿರುವುದೂ ಇದೇ ಆರೋಪವನ್ನು. ಬಿಡಿ, ಸಲ್ಮಾನ್ ಖುರ್ಷಿದ್, ರಾಹುಲ್ ಗಾಂಧಿ, ಸುಶೀಲ್ ಕುಮಾರ್ ಶಿಂದೆ, ದಿಗ್ವಿಜಯ ಸಿಂಗ್ ಮೊದಲಾದವರು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಇಂತಹ ಆಧಾರರಹಿತ ಟೀಕೆ ಮಾಡಿದರೆ ಅದು ಯಾರಿಗಾದರೂ ಅರ್ಥವಾಗುವ ಸಂಗತಿ. ಆದರೆ ವೆಂಡಿ ಡೊನಿಗರ್ ರಾಜಕಾರಣಿಯೇನಲ್ಲ. ಆಕೆ ಒಬ್ಬ ಪ್ರಬುದ್ಧ ಲೇಖಕಿ ಎನಿಸಿಕೊಂಡವಳು. ಯಾವುದೇ ಲೇಖನ ಅಥವಾ ಗ್ರಂಥವನ್ನು ಆಧಾರವಿಲ್ಲದೆ ಹೀಗೆ ಬೇಕಾಬಿಟ್ಟಿ ಬರೆದರೆ ಆಕೆಯನ್ನು ಪ್ರಬುದ್ಧ ಲೇಖಕಿ ಎಂದು ಯಾರೂ ಹೇಳಲಾರರು. ಆಕೆ ಬರೆದಿದ್ದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಕೂಡ ಇರುವುದಿಲ್ಲ. ಈಗ ಆಗಿರುವುದೂ ಹಾಗೆಯೇ.
ವೆಂಡಿಯ ಔಟಿ ಊiಟಿಜuism ಎಂಬ ಕೃತಿಯಲ್ಲಿ ಹಲವಾರು ಅಶ್ಲೀಲಕರ ಪದ್ಯಗಳೂ ಇವೆ. ಹಿಂದುವನ್ನು ಟೀಕಿಸುವ, ತೇಜೋವಧೆ ಮಾಡುವ ಈ ಪದ್ಯಗಳು ಇಲ್ಲಿ ಉಲ್ಲೇಖಕ್ಕೂ ಅನರ್ಹವಾಗಿವೆ. (ಬೇಕಿದ್ದರೆ ನೀವೇ ಈ ಪುಸ್ತಕದ ಪುಟ ೫೮೦ರಲ್ಲಿ ಪ್ರಕಟವಾಗಿರುವ ಪದ್ಯವನ್ನು ಓದಿ ಇದು ನಿಜವೇ ಸುಳ್ಳೇ ಎಂಬುದನ್ನು ಪರೀಕ್ಷಿಸಬಹುದು.)
ವೆಂಡಿಯ ಮೊದಲ ಪುಸ್ತಕದ ವಿರುದ್ಧ ಖಟ್ಲೆ ಹೂಡಿ ಅದನ್ನು ಪ್ರಕಾಶನ ಸಂಸ್ಥೆ ಹಿಂತೆಗೆದುಕೊಳ್ಳುವಂತೆ ಮಾಡಿದ ಶಿಕ್ಷಾ ಬಚಾವೋ ಆಂದೋಲನ ಸಮಿತಿ ಈಗ ಆಕೆಯ ಈ ಎರಡನೆಯ ಪುಸ್ತಕದ ವಿರುದ್ಧವೂ ಸಮರ ಸಾರಿದೆ. ಇದನ್ನು ಪ್ರಕಟಿಸಿದ ಅಲೆಫ್ ಬುಕ್ ಕಂಪೆನಿಗೆ ಎಚ್ಚರಿಕೆಯ ನೊಟೀಸು ನೀಡಿವೆ. ಈ ಪುಸ್ತಕದ ಎಲ್ಲ ಪ್ರತಿಗಳನ್ನೂ ಮಾರಾಟದಿಂದ ವಾಪಸ್ ಪಡೆಯಬೇಕು. ಮಾರಾಟವನ್ನು ತಕ್ಷಣ ನಿಲ್ಲಿಸಬೇಕು. ಅಷ್ಟೇ ಅಲ್ಲ , ಈ ವಿವಾದಾತ್ಮಕ ಪುಸ್ತಕವನ್ನು ಮುಂದೆ ಯಾವುದೇ ರೂಪದಲ್ಲಿ ಪ್ರಕಟಿಸುವುದಿಲ್ಲವೆಂದು ಲಿಖಿತ ಹೇಳಿಕೆಯನ್ನು ನೀಡಬೇಕೆಂದೂ ಅದು ಆಗ್ರಹಿಸಿದೆ. ಇದನ್ನು ಪಾಲಿಸದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೋರಾಟದ ನೇತೃತ್ವವಹಿಸಿರುವ ದೀನನಾಥ ಬಾತ್ರಾ ಎಚ್ಚರಿಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲ , ಅಮೆರಿಕದಲ್ಲಿ ಕೂಡ ವೆಂಡಿಯ ಈ ಪುಸ್ತಕದ ವಿರುದ್ಧ ಪ್ರತಿಭಟನೆಗಳು ಶುರುವಾಗಿವೆ. ಅಮೆರಿಕ ಅಕಾಡೆಮಿಯಲ್ಲಿ ಹಿಂದು ಧಾರ್ಮಿಕ ಅಧ್ಯಯನಗಳ ಕುರಿತು ತನಿಖೆ ನಡೆಸುವ ಬಗ್ಗೆ ಆಯೋಗವೊಂದನ್ನು ರಚಿಸಬೇಕೆಂದು ಅಮೆರಿಕದಲ್ಲಿರುವ ಭಾರತೀಯರು ಒಬಾಮಾ ಸರ್ಕಾರಕ್ಕೆ ಆನ್ಲೈನ್ ಮನವಿ ಸಲ್ಲಿಸಿದ್ದಾರೆ. ತಿತಿತಿ.ತಿhiಣehouse.govನಲ್ಲಿರುವ ಆ ಮನವಿಗೆ ಜಗತ್ತಿನಾದ್ಯಂತ ಅನೇಕ ಹಿಂದು ಪ್ರೇಮಿಗಳು ಸಹಿ ಹಾಕುತ್ತಿದ್ದಾರೆ.
ಹಿಂದು ಧರ್ಮದ ಕುರಿತು ಹೀಗೆ ತೇಜೋವಧೆ ಮಾಡುವ ಪುಸ್ತಕಗಳು ಪ್ರಕಟವಾಗುತ್ತಿರುವುದು ಇದೇ ಮೊದಲೇನಲ್ಲ. ಬಹುಶಃ ಕೊನೆಯೂ ಇದಾಗಿರಲಿಕ್ಕಿಲ್ಲ. ಲಾಗಾಯ್ತಿನಿಂದಲೂ ಹಿಂದು ಧರ್ಮದ ವಿರುದ್ಧ ಆಕ್ರಮಣ, ಟೀಕೆ, ಭರ್ತ್ಸನೆ ನಡೆಯುತ್ತಲೇ ಇದೆ. ವಿದೇಶಗಳಲ್ಲಂತೂ ರಾಮ, ಸೀತೆ, ಈಶ್ವರ, ಗಣಪತಿ ಮೊದಲಾದ ಹಿಂದುಗಳು ಪೂಜಿಸುವ ದೇವತೆಗಳ ಚಿತ್ರವನ್ನು ಮಹಿಳೆಯರ ಒಳ ಉಡುಪು, ಶೌಚಾಲಯ, ಕಾಲಿಗೆ ಧರಿಸುವ ಚಪ್ಪಲಿ, ಬೂಟುಗಳ ಮೇಲೆಲ್ಲ ಮುದ್ರಿಸಿ ಅವಮಾನಿಸಲಾಗುತ್ತಿದೆ. ಈ ಎಲ್ಲ ಅವಮಾನ, ಟೀಕೆಗಳ ಹಿಂದಿರುವುದು ಕೇವಲ ದ್ವೇಷವೇ ಹೊರತು ಮತ್ತೇನೂ ಅಲ್ಲ. ಹಿಂದುಗಳು ಹೇಗಿದ್ದರೂ ಸಹನೆಯಿಂದಿರುತ್ತಾರೆ. ಹಿಂದು ಧರ್ಮದ ವಿರುದ್ಧ ಎಷ್ಟೇ ಕಟುವಾಗಿ ಟೀಕಿಸಿದರೂ ಅವರಿಂದ ಪ್ರಬಲ ಪ್ರತಿಭಟನೆ ಸಿಡಿಯುವುದಿಲ್ಲ ಎಂಬ ಉದ್ದಟತನವೇ ಇಂತಹ ಟೀಕೆಗಳು ಮತ್ತಷ್ಟು ಹೆಚ್ಚುತ್ತಿರುವುದಕ್ಕೆ ಕಾರಣ. ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೋಗಿದ್ದಾಗಲೂ ಅವರೆದುರಲ್ಲೇ ಹಿಂದು ಧರ್ಮದ ವಿರುದ್ಧ ಇಂತಹ ಟೀಕೆಗಳು ವ್ಯಕ್ತವಾಗಿದ್ದುಂಟು. ಒಮ್ಮೆ ಒಬ್ಬ ಕ್ರೈಸ್ತ ಪಾದ್ರಿ ಆ ಸಮ್ಮೇಳನದಲ್ಲಿ ಎಲ್ಲ ಜನಾಂಗಗಳ ಧರ್ಮಗ್ರಂಥಗಳನ್ನು ಒಂದರ ಮೇಲೊಂದು ಜೋಡಿಸಿ, ತೀರಾ ಕೆಳ ಭಾಗದಲ್ಲಿ ಹಿಂದುಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಇಟ್ಟಿದ್ದ. ವಿವೇಕಾನಂದರಿಗೆ ಇದನ್ನು ಆತ ತೋರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಲೇವಡಿ ಮಾಡಿದ್ದ. ವಿವೇಕಾನಂದರು ಜೋಡಿಸಿಟ್ಟ ಆ ಧರ್ಮ ಗ್ರಂಥಗಳ ಅಡಿಭಾಗದಲ್ಲಿ ಭಗವದ್ಗೀತೆ ಇರುವುದನ್ನು ಗಮನಿಸಿ, ಶಾಂತವಾಗಿ ಹೇಳಿದರಂತೆ: ‘ಙes, ಊiಟಿಜu ಆhಚಿಡಿmಚಿ is ಣhe ಜಿouಟಿಜಚಿಣioಟಿ oಜಿ ಚಿಟಟ oಣheಡಿ ಡಿeಟigioಟಿs’! ಪಾಪ, ವಿವೇಕಾನಂದರನ್ನು ಲೇವಡಿ ಮಾಡಿದ್ದ ಆ ಕ್ರೈಸ್ತ ಪಾದ್ರಿಗೆ ಹೇಗಾಗಿರಬಹುದೆಂಬುದನ್ನು ನೀವೇ ಊಹಿಸಿ!
ಹಿಂದು ಧರ್ಮವನ್ನು, ಹಿಂದು ಧರ್ಮ ಗ್ರಂಥಗಳನ್ನು ಆಧಾರರಹಿತವಾಗಿ, ದುರುzಶಪೂರ್ವಕವಾಗಿ ಟೀಕಿಸುವವರಿಗೆ, ಲೇವಡಿ ಮಾಡುವವರಿಗೆ ವಿವೇಕಾನಂದರಂತೆ ದಿಟ್ಟ ಉತ್ತರ ನೀಡುವ ಗಂಡೆದೆಯವರು ಹೆಚ್ಚಾಗಬೇಕು. ಆಗ ಮಾತ್ರ ವೆಂಡಿ ಡೊನಿಗರ್ಳಂತಹ ಅಪ್ರಬುದ್ಧ, ಅಪಲಾಪದ ಲೇಖಕರಿಗೆ ಬುದ್ಧಿ ಕಲಿಸಬಹುದೇನೋ.