ನೇರನೋಟ ೨೦.೧೦.೨೦೧೪
ಹಾಗಿದ್ದರೆ ಇವರೆಲ್ಲ ಕಾನೂನಿಗೆ ಅತೀತರೆ?
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ೪ ವರ್ಷ ಶಿಕ್ಷೆ ಮತ್ತು ೧೦೦ ಕೋಟಿ ರೂ. ದಂಡ ತೆರಬೇಕಾಗಿ ಬಂದು ಜೈಲು ಪಾಲಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕೊನೆಗೂ ಸುಪ್ರಿಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಇನ್ನೆರಡು ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆ ಸಲ್ಲಿಸಬೇಕು. ೩ ತಿಂಗಳಲ್ಲಿ ಮೇಲ್ಮನವಿ ಪ್ರಕರಣ ಇತ್ಯರ್ಥವಾಗಬೇಕು ಎಂಬುದು ಜಾಮೀನು ಕರುಣಿಸಿದ ಸುಪ್ರಿಂಕೋರ್ಟ್ ಪೀಠದ ಷರತ್ತು. ಜಯಾಗೆ ಜಾಮೀನು ದೊರಕಿದ್ದರೂ ಬೆಂಗಳೂರಿನ ವಿಶೇಷ ನ್ಯಾಯಾಲಯ ಪ್ರಕಟಿಸಿದ್ದ ಶಿಕ್ಷೆ ರದ್ದಾಗಿಲ್ಲ. ಆ ಶಿಕ್ಷೆಯನ್ನು ಕೋರ್ಟ್ ಅಮಾನತಿನಲ್ಲಿಟ್ಟಿದೆ, ಅಷ್ಟೇ. ಹಾಗಾಗಿ ಪ್ರಕರಣ ಇತ್ಯರ್ಥ ಆಗುವವರೆಗೆ ಆಕೆ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರುವಂತಿಲ್ಲ.
ಜಯಲಲಿತಾಗೆ ದೊರಕಿದ ಈ ಜಾಮೀನನ್ನೇ ಶಿಕ್ಷೆ ರದ್ದತಿ ಎಂದು ತಮಿಳುನಾಡು ಜಯಾ ಅಭಿಮಾನಿಗಳು ಹಾಗೂ ಆಕೆಯ ಸಂಪುಟದ ಸಚಿವರು ತಪ್ಪಾಗಿ ಭಾವಿಸಿದಂತಿದೆ. ಜಾಮೀನು ದೊರಕಿದ ಶುಕ್ರವಾರದಂದು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೀದಿಬೀದಿಯಲ್ಲಿ ಯದ್ವಾತದ್ವಾ ನೃತ್ಯ ಮಾಡಿದ್ದು ಇದಕ್ಕೆ ನಿದರ್ಶನ. ತಮಿಳು ಜನತೆಯ ವಿವೇಚನಾ ಶಕ್ತಿ, ಪ್ರಜ್ಞಾವಂತಿಕೆ, ಜಿಜ್ಞಾಸಾ ಪ್ರವೃತ್ತಿ ಸತ್ತು ಹೋಯಿತೇ ಎಂಬ ಪ್ರಶ್ನೆ ಇಂತಹ ಸಂದರ್ಭ ಎದುರಾದಾಗಲೆಲ್ಲ ಕಾಡುತ್ತಲೇ ಇರುತ್ತದೆ. ಜಯಲಲಿತಾಗೆ ವಿಶೇಷ ನ್ಯಾಯಾಲಯ ಶಿಕ್ಷೆ ಘೋಷಿಸಿದಾಗ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೇ ೧೭ಕ್ಕಿಂತ ಹೆಚ್ಚು. ಶಿಕ್ಷೆಯ ಸುದ್ದಿ ಕೇಳಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನತ್ತ ತಮಿಳುನಾಡಿನಿಂದ ಸಿಕ್ಕಿದ ಬಸ್ಸನ್ನೇರಿ ಬಂದವರ ‘ಅಭಿಮಾನಿ ದೇವ-ದೇವತೆ’ ಗಳ ಸಂಖ್ಯೆಗಂತೂ ಲೆಕ್ಕವೇ ಇಲ್ಲ. ಅವರನ್ನೆಲ್ಲ ಹಿಂದಕ್ಕಟ್ಟುವುದೇ ಕರ್ನಾಟಕ ಪೊಲೀಸರ ಪಾಲಿಗೆ ಸಾಹಸದ ಕೆಲಸವಾಗಿತ್ತು. ಜಯಾ ಬದಲಿಗೆ ಈಗ ಮುಖ್ಯಮಂತ್ರಿ ಗಾದಿಗೇರಿದ ಪನ್ನೀರ್ ಸೆಲ್ವಂ ಅವರ ಭಕ್ತಿಯ ಪರಾಕಾಷ್ಠೆ ವರ್ಣನೆಗೂ ನಿಲುಕದ್ದು. ಜಯಾ ಬಿಡುಗಡೆ ಆಗುವವರೆಗೆ ಗಡ್ಡ ಬೋಳಿಸುವುದಿಲ್ಲ, ಮಾಂಸಾಹಾರ ಸೇವಿಸುವುದಿಲ್ಲ ಎಂದು ಆತ ಭಯಂಕರ ಶಪಥಗೈದಿದ್ದರಂತೆ. ಸದ್ಯ ೨೧ ದಿನಗಳಲ್ಲೇ ಜಯಾ ಬಿಡುಗಡೆ ಆಗಿರುವುದರಿಂದ ಪನ್ನೀರ್ ಸೆಲ್ವಂ ಶಪಥಕ್ಕೆ ಮುಕ್ತಿ ದೊರಕಿದೆ! ಇನ್ನು ಜಯಾ ಜೈಲಿಗೆ ಹೋದಾಗ ತಲೆ ಬೋಳಿಸಿಕೊಂಡ ತಮಿಳು ಗಂಡಸರು, ಹೆಂಗಸರ ಸಂಖ್ಯೆ ಎಷ್ಟೆಂದು ನನಗಂತೂ ಗೊತ್ತಿಲ್ಲ. ಜಯಲಲಿತಾ ಬಗ್ಗೆ ಅವರ ಅಭಿಮಾನಿಗಳ ‘ಘೋರ ಶ್ರದ್ಧೆ , ನಿಷ್ಠೆ’ಗಳಿಗೆ ಇವೆಲ್ಲ ಕೆಲವು ಸ್ಯಾಂಪಲ್‌ಗಳು!
ಇದೆಂತಹ ಕುರುಡು ಅಭಿಮಾನ? ಜಯಲಲಿತಾ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ವಿಶೇಷ ನ್ಯಾಯಾಲಯವೇ ಸ್ಪಷ್ಟ ತೀರ್ಪು ನೀಡಿರುವಾಗ ಅದನ್ನೊಪ್ಪಿಕೊಳ್ಳದ, ನ್ಯಾಯಾಲಯದ ತೀರ್ಪಿಗೆ ಗೌರವ ಸಲ್ಲಿಸದ ಅಭಿಮಾನಿಗಳು ಅದೆಂತಹ ಪ್ರಜೆಗಳು! ಆ ಅಭಿಮಾನಿಗಳಿಗೆ ನ್ಯಾಯಾಲಯ, ಪ್ರಜಾತಂತ್ರಕ್ಕಿಂತ ಅಮ್ಮನೇ ಹೆಚ್ಚಾಗಿ ಬಿಟ್ಟರೆ? ಅಂದರೆ ಅಮ್ಮ ಈ ನೆಲದ ಕಾನೂನು, ನಿಯಮಗಳಿಗೆ ಅತೀತರು. ಆಕೆ ಒಬ್ಬ ದೇವತೆ ಎಂಬ ಭ್ರಮೆ ಅಭಿಮಾನಿಗಳಲ್ಲಿ ಆವರಿಸಿರುವ ಕೆಟ್ಟ ಪರಿಣಾಮ ಇದಲ್ಲದೆ ಮತ್ತೇನು? ಅವರ ಈ ಅಭಿಮಾನಕ್ಕೆ ಇನ್ನೂ ಒಂದಷ್ಟು ಕಾರಣಗಳಿರುವುದನ್ನು ಮರೆಯುವಂತಿಲ್ಲ. ‘ಅಮ್ಮ’ ಅಧಿಕಾರಕ್ಕೆ ಬಂದ ಮೇಲೆ ತಮಿಳುನಾಡಿನ ಬಡ ಜನತೆಯ ಮನೆಮನೆಗಳಲ್ಲಿ ಉಚಿತ ಟಿ.ವಿ., ಫ್ರಿಜ್, ವಾಶಿಂಗ್ ಮೆಶೀನ್‌ನಂತಹ ವಿಲಾಸಿ ವಸ್ತುಗಳು ಬಂದು ಕುಳಿತಿವೆ. ಒಂದು ರೂ.ಗೆ ಒಂದು ಕೆ.ಜಿ. ಅಕ್ಕಿ , ಒಂದು ರೂ.ಗೆ ಕಾಫಿ, ಟೀ, ಇಡ್ಲಿ, ವಡೆ ಅಮ್ಮ ಕ್ಯಾಂಟಿನ್‌ನಲ್ಲಿ ಸುಲಭವಾಗಿ ಸಿಗುತ್ತದೆ. ಪ್ರತಿನಿತ್ಯ ಬೆವರು ಸುರಿಸಿ ದುಡಿಯಬೇಕೆಂದೇನಿಲ್ಲ. ಮೈ ಕೈ ಹಣ್ಣು ಮಾಡಿಕೊಳ್ಳುವ ಪ್ರಮೇಯವೂ ಇಲ್ಲ. ಇಂತಹ ಭಾಗ್ಯ ಯಾರಿಗುಂಟು ಯಾರಿಗಿಲ್ಲ! ಅಮ್ಮನನ್ನು ತಮಿಳು ಜನತೆ ಏಕೆ ಅಷ್ಟೊಂದು ಹಚ್ಚಿಕೊಂಡಿದ್ದಾರೆಂಬುದಕ್ಕೆ ಇವೆಲ್ಲ ದಿವ್ಯ ಸಾಕ್ಷಿಗಳು!
ಜನರ ಬಡತನವನ್ನು ನೀಗಿಸುವುದು ಆಡಳಿತ ಚುಕ್ಕಾಣಿ ಹಿಡಿದವರ ಕರ್ತವ್ಯ. ಆದರೆ ಜನರಿಗೆ ಒಂದಿಷ್ಟು ಉಚಿತ ಸಾಧನ ಸಲಕರಣೆಗಳನ್ನು ಕೊಟ್ಟು, ಅಗ್ಗದ ದರಕ್ಕೆ ಕಾಫಿ, ತಿಂಡಿ, ಆಹಾರಧಾನ್ಯ ಒದಗಿಸುವುದು ಬಡತನ ನಿವಾರಣೆ ಎನಿಸಿಕೊಳ್ಳುತ್ತದೆಯೆ? ಜಯಲಲಿತಾ ಅಧಿಕಾರಲ್ಲಿರುವ ತನಕ ಇವೆಲ್ಲ ನಡೆಯಬಹುದು. ಆದರೆ ಮುಂದೆ? ಅದೂ ಅಲ್ಲದೆ, ಜನರಿಗೆ ಶ್ರಮಪಡದೇ, ಬೆವರು ಹರಿಸದೇ ಜೀವನಾವಶ್ಯಕ ವಸ್ತುಗಳು ಮನೆಯ ಬಾಗಿಲಿಗೇ ಬಂದು ಬೀಳುವ ವ್ಯವಸ್ಥೆಯ ದುಷ್ಪರಿಣಾಮ ಮುಂದೇನಾಗಬಹುದು ಎಂಬ ಚಿಂತೆ ಯಾರಿಗಾದರೂ ಇದೆಯೇ? ಬದಲಿಗೆ ಪ್ರತಿಯೊಂದು ದುಡಿಯುವ ಕೈಗೆ ಉದ್ಯೋಗ ಒದಗಿಸಿ, ಅವರವರ ಅನ್ನವನ್ನು ಅವರವರೇ ದುಡಿದುಕೊಳ್ಳುವಂತೆ ಮಾಡುವುದು ಪ್ರಜಾತಾಂತ್ರಿಕ ವ್ಯವಸ್ಥೆಯ ಅತ್ಯುತ್ತಮ ಮಾರ್ಗವಲ್ಲವೆ? ದುಡಿದು ಸಂಪಾದಿಸಿದ ಅನ್ನದ ರುಚಿ ಸರ್ಕಾರ ಎಸೆದ ಎಂಜಲು ಅನ್ನಕ್ಕೆ ಇರಲು ಸಾಧ್ಯವೆ? ತಮಿಳುನಾಡಿನ ಜನತೆ ಸ್ವಾಭಿಮಾನಿಗಳಾಗಿ ಬದುಕಬೇಕೆ? ಅಥವಾ ಸರ್ಕಾರಿ ಕೃಪಾಪೋಷಿತರಾಗಿ ಭಿಕ್ಷಾನ್ನವನ್ನೇ ಸದಾಕಾಲ ತಿನ್ನಬೇಕೆ? ಜನತೆಗೆ ಉಪಕಾರ ಮಾಡುವ ಸೋಗಿನಲ್ಲಿ ಅಧಿಕಾರಸ್ಥರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೂಡುವ ಹುನ್ನಾರ ಇದೆಂದು ತಮಿಳುನಾಡಿನ ಬೋಳೆ ಸ್ವಭಾವದ ಜನತೆಗೆ ಏಕೆ ಅರ್ಥವಾಗುತ್ತಿಲ್ಲ?
ಇರಲಿ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಜಯಾಗೆ ಇಷ್ಟು ಸುಲಭವಾಗಿ ಜಾಮೀನು ಸಿಕ್ಕಿದ್ದು ಹೇಗೆ? ಜಯಾ ಪ್ರಭಾವಿ ರಾಜಕೀಯ ನಾಯಕಿ ಆಗಿರದಿದ್ದಲ್ಲಿ ಇಷ್ಟು ಬೇಗ ಜಾಮೀನು ಸಿಗುತ್ತಿತ್ತೇ? ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರ, ಕೊಲೆ ಆರೋಪ, ಲೈಂಗಿಕ ಅತ್ಯಾಚಾರ ಮೊದಲಾದ ಪ್ರಕರಣಗಳು ಅತ್ಯಂತ ಗಂಭೀರವಾದದ್ದು. ಜಯಲಲಿತಾ ಮೇಲೆ ಬಂದೆರಗಿದ್ದು ಕೇವಲ ಆರೋಪವಷ್ಟೇ ಅಲ್ಲ, ಆ ಆರೋಪದ ಕುರಿತು ೧೮ ವರ್ಷಗಳ ಕಾಲ ವಿಚಾರಣೆ ನಡೆದು ಕೊನೆಗೆ ಅವೆಲ್ಲ ಸಾಬೀತಾಗಿ ಶಿಕ್ಷೆ ಪ್ರಕಟವಾಗಿತ್ತು. ನ್ಯಾಯಾಧೀಶರು ೪ ವರ್ಷ ಶಿಕ್ಷೆ ಹಾಗೂ ೧೦೦ ಕೋಟಿ ರೂ. ದಂಡ ವಿಧಿಸಿದ್ದರು. ಇಷ್ಟೊಂದು ದೊಡ್ಡ ಮೊತ್ತದ ದಂಡವನ್ನು ಇದುವರೆಗೆ ಯಾವ ನ್ಯಾಯಾಧೀಶರೂ ಯಾರಿಗೂ ವಿಧಿಸಿರಲಿಲ್ಲವೆನಿಸುತ್ತದೆ. ಹಾಗಿದ್ದರೂ ಆಕೆಗೆ ಸುಲಭವಾಗಿ ಜಾಮೀನು ಸಿಕ್ಕಿತಲ್ಲ , ಅದೇ ಸೋಜಿಗ! ಮೇವು ಹಗರಣದಲ್ಲಿ ಶಿಕ್ಷೆಗೊಳಗಾದ ಲಾಲೂ ಪ್ರಸಾದ್ ಯಾದವ್‌ಗೂ ಪೆರೋಲ್ ಮೇಲೆ ಬಿಡುಗಡೆ ಆಗಿತ್ತು. ಆಕ್ರಮ ಶಸ್ತ್ರಾಸ್ತ್ರ ಮನೆಯಲ್ಲಿಟ್ಟುಕೊಂಡ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಚಿತ್ರನಟ ಸಂಜಯ್‌ದತ್‌ಗೂ ಪೆರೋಲ್ ದೊರಕಿತ್ತು. ಆತನ ಪತ್ನಿ ಮಾನ್ಯತಾಳಿಗೆ ಅನಾರೋಗ್ಯವೆಂಬುದು ಇದಕ್ಕೆ ಪಿಳ್ಳೆ ನೆಪ. ಪತ್ನಿ ಮಾನ್ಯತಾಳಿಗೆ ಹೇಳಿಕೊಳ್ಳುವಂತಹ ಅನಾರೋಗ್ಯವೇನೂ ಕಾಡಿರಲಿಲ್ಲ. ಏಕೆಂದರೆ ಸಂಜಯ್‌ದತ್ ಪೆರೋಲ್‌ಗೆ ಅರ್ಜಿ ಹಾಕಿದ್ದ ವೇಳೆಯಲ್ಲೇ ಮಾನ್ಯತಾ ಮುಂಬಯಿನ ಕೆಲವು ಹೊಟೇಲ್‌ಗಳಲ್ಲಿ ನಡೆದ ಡ್ಯಾನ್ಸ್ ಪಾರ್ಟಿಯಲ್ಲಿ ಕುಣಿದಿದ್ದಳೆಂದು ಪತ್ರಿಕಾ ವರದಿ. ತೀವ್ರ ಅನಾರೋಗ್ಯ ಕಾಡಿದ್ದರೆ ಡ್ಯಾನ್ಸ್ ಪಾರ್ಟಿಗೆ ಹೋಗಲು ಸಾಧ್ಯವಿತ್ತೆ? ಕೊಯಮತ್ತೂರು ಸರಣಿಸ್ಫೋಟದ ಆರೋಪಿ ಸಯ್ಯದ್ ಮದನಿಗೂ ಅನಾರೋಗ್ಯ ಮತ್ತಿತರ ಕಾರಣಗಳಿಗಾಗಿ ಜೈಲಿನಿಂದ ಆಗಾಗ ಬಿಡುಗಡೆಯ ಭಾಗ್ಯ! ಅಷ್ಟೇ ಅಲ್ಲ , ಜೈಲಿನಲ್ಲಿದ್ದಾಗಲೂ ಆತನಿಗೆ ಬಿರಿಯಾನಿ, ಕಬಾಬ್‌ಗಳ ರಾಜೋಪಚಾರ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತನಿಗೆ ದುಬಾರಿ ವೆಚ್ಚದ ಅಯುರ್ವೇದ ಮಸಾಜ್ ಚಿಕಿತ್ಸೆ! ಮುಂಬಯಿ ಮೇಲೆ ದಾಳಿ ಎಸಗಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ನೂರಾರು ಜನರನ್ನು ಸಾಯಿಸಿದ ಉಗ್ರ ಕಸಬ್‌ಗೆ, ಪಾರ್ಲಿಮೆಂಟ್ ಭವನದ ದಾಳಿ ಸಂಚು ರೂಪಿಸಿದ ಅಫ್ಜಲ್ ಗುರುವಿಗೂ ಜೈಲಿನಲ್ಲಿ ಇಂತಹದೇ ರಾಜೋಪಚಾರ!
ಆದರೆ ಸಣ್ಣಪುಟ್ಟ ಆರೋಪ ಹೊತ್ತು ಜೈಲು ಸೇರಿದ ಸಾಮಾನ್ಯ ಆರೋಪಿಗಳಿಗೆ ಮಾತ್ರ ಇಂತಹ ರಾಜೋಪಚಾರದ ಮಾತಿರಲಿ, ದಿನಕ್ಕೆ ಎರಡು ಹೊತ್ತು ಸ್ವಚ್ಛವಾದ ಆಹಾರವಾದರೂ ಸಿಗುತ್ತದೆಯೆ? ಹುಳಹಪ್ಪಟೆ ಬೆರೆತ ಕೊಳಕು ಆಹಾರ, ಜಡ್ಡುಜಾಪತ್ತುಗಳಾದರೆ ಸೂಕ್ತ ಚಿಕಿತ್ಸೆಗೆ ನಿರಾಕರಣೆ. ಕೆಲವು ಆರೋಪಿಗಳಂತೂ ತಾವೆಸಗದ ತಪ್ಪಿಗಾಗಿ ಅಥವಾ ಯಾರಾದೋ ಕುಮ್ಮಕ್ಕಿನಿಂದ ಜೈಲು ಸೇರಿ ಕೊರಗಿಕೊರಗಿ ಕೊನೆಗೆ ಅಲ್ಲೇ ಕೊನೆಯುಸಿರು ಎಳೆದ ನಿದರ್ಶನಗಳು ಅದೆಷ್ಟೋ. ಸಣ್ಣಪುಟ್ಟ ಆರೋಪ ಹೊತ್ತು ಜೈಲು ಸೇರಿದವರನ್ನೂ ಯಾವುದೇ ಹಿಂಸೆ ನೀಡದೆ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಕಾನೂನು ಎಲ್ಲರಿಗೂ ಸಮಾನ ಎಂದು ನಮ್ಮ ಸಂವಿಧಾನ ಉಲಿಯುತ್ತದೆ. ಆದರೆ ವಾಸ್ತವ ಮಾತ್ರ ಬೇರೆಯೇ. ಂಟಟ ಚಿಡಿe equಚಿಟ. ಃuಣ some ಚಿಡಿe moಡಿe equಚಿಟ!
೨೦೦೮ರ ಮಾಲೆಗಾಂವ್ ಬಾಂಬ್‌ಸ್ಫೋಟ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿ ಜೈಲು ಸೇರಿರುವ ಸಾಧ್ವಿ ಪ್ರಜ್ಞಾಸಿಂಗ್ ಠಾಕುರ್ ಎಂಬ ಮಹಿಳೆಗೆ ೬ ವರ್ಷಗಳ ಬಳಿಕವೂ ಇನ್ನೂ ಜಾಮೀನು ದೊರಕಿಲ್ಲ. ಆಕೆಯ ಮೇಲೆ ರಾಷ್ಟ್ರೀಯ ತನಿಖಾದಳ ಹೊರಿಸಿದ ಯಾವುದೇ ಆರೋಪಗಳು ಇದುವರೆಗೂ ಸಾಬೀತಾಗಿಲ್ಲ. ಆದರೆ ಆಕೆಯನ್ನು ಉzಶಪೂರ್ವಕವಾಗಿಯೇ ಈ ಮೊಕದ್ದಮೆಯಲ್ಲಿ ಫಿಟ್ ಮಾಡಬೇಕೆಂಬುದು ಹಿಂದಿನ ಯುಪಿಎ ಸರ್ಕಾರದ ಹುನ್ನಾರವಾಗಿತ್ತು. ಆಕೆಯೊಬ್ಬ ಮಹಿಳೆ ಎಂದು ಗೊತ್ತಿದ್ದರೂ ಮಹಿಳಾ ಆರೋಪಿಗೆ ತಕ್ಕಂತೆ ಆಕೆಯನ್ನು ಜೈಲು ಸಿಬ್ಬಂದಿ ಮಾನವೀಯವಾಗಿ ನಡೆಸಿಕೊಂಡಿರಲಿಲ್ಲ. ಪೊಲೀಸರ ತೀವ್ರ ಶಾರೀರಿಕ, ಮಾನಸಿಕ ಹಿಂಸಾಚಾರಗಳು ಸಾಧ್ವಿಯನ್ನು ಜರ್ಜರಿತಳನ್ನಾಗಿ ಮಾಡಿದೆ. ೨೦೦೮ರಲ್ಲಿ ಬಂಧನಕ್ಕೆ ಮುನ್ನ ಉತ್ಸಾಹದ ಬುಗ್ಗೆಯಂತಿದ್ದ ಆರೋಗ್ಯವಂತ ಸಾಧ್ವಿ ಈಗ ನಡೆಯಲಾರರು. ಗಾಲಿ ಕುರ್ಚಿಯಲ್ಲೇ ಓಡಾಟ. ಜೊತೆಗೆ ಕ್ಯಾನ್ಸರ್ ರೋಗ ಬೇರೆ ಕಾಡುತ್ತಿದೆ. ತನ್ನ ಪಾಡಿಗೆ ತಾನು ಕುಳಿತುಕೊಳ್ಳಲಾಗುತ್ತಿಲ್ಲ. ನ್ಯಾಯಾಲಯ ಆಕೆಗೆ ಚಿಕಿತ್ಸೆ ನೀಡಬೇಕೆಂದು ಆದೇಶಿಸಿದ್ದರೂ ಎಟಿಎಸ್ ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ. ಚಿಕಿತ್ಸೆ ಕೊಡಿಸುವ ನಾಟಕವನ್ನು ಮಾತ್ರ ಯಶಸ್ವಿಯಾಗಿ ನಡೆಸಿ ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿದೆ. ಆಕೆಯ ತಂದೆ ಚಂದ್ರಪಾಲ್ ಸಿಂಗ್ ತೀರಿಕೊಂಡಾಗಲೂ ಸಾಧ್ವಿ ಮನೆಗೆ ಹೋಗಿ ಅಂತಿಮ ಕರ್ತವ್ಯ ನೇರವೇರಿಸಲು ನ್ಯಾಯಾಲಯ ಅವಕಾಶ ಕೊಡಲಿಲ್ಲ. ಶಿಕ್ಷೆಗೊಳಗಾದ ಜಯಲಲಿತಾ, ಸಂಜಯ್‌ದತ್, ಲಾಲೂ ಪ್ರಸಾದ್ ಮೊದಲಾದ ವಿಐಪಿ ಗಣ್ಯರಿಗೆ ಸಿಕ್ಕ ‘ಬಿಡುಗಡೆಯ ಭಾಗ್ಯ’ ಸಾಧ್ವಿಗೆ ಲಭಿಸಲೇ ಇಲ್ಲ. ಕಾನೂನು, ನ್ಯಾಯ ಎಲ್ಲರಿಗೂ ಒಂದೇ ಎಂದು ಪದೇ ಪದೇ ಹೇಳಲಾಗುವ ಮಾತಿಗೆ ಅರ್ಥವಿರಲು ಸಾಧ್ಯವೆ?
ಜಯಲಲಿತಾ ಪರವಾಗಿ ವಾದಿಸಿ ಜಾಮೀನು ದೊರಕಿಸಿಕೊಡಲು ೯೧ ವರ್ಷದ ಜೇಠ್‌ಮಲಾನಿ ಲಂಡನ್‌ನಿಂದ ಬೆಂಗಳೂರಿಗೆ ಧಾವಿಸಿ ಬರುತ್ತಾರೆ. ಸುಪ್ರಿಂ ಕೋರ್ಟ್‌ನಲ್ಲಿ ಜಯಾ ಪರವಾಗಿ ಸಮರ್ಥ ವಾದ ಮಂಡಿಸಲು ಎಫ್.ಎಸ್. ನಾರೀಮನ್ ಎಂಬ ೮೧ ವರ್ಷದ ನುರಿತ ಹಿರಿಯ ವಕೀಲರು ತಯಾರಾಗುತ್ತಾರೆ. ಜಯಾ ಮಾಡಿದ್ದು ಅನ್ಯಾಯ ಎಂಬುದು ಗೊತ್ತಿದ್ದರೂ ಜಯಲಲಿತಾ ಎಸೆಯುವ ಕೋಟಿಕೋಟಿ ಹಣದ ಎಂಜಲು ಅವರನ್ನು ಅವಳ ಪರವಾಗಿ ವಾದಿಸುವಂತೆ ಮಾಡುತ್ತದೆ.
ಆದರೆ ಸಾಧ್ವಿಗೆ ತನ್ನ ಪರವಾಗಿ ಜೇಠ್‌ಮಲಾನಿ, ನಾರೀಮನ್‌ರಂತಹ ಘಟಾನುಘಟಿ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯವಿಲ್ಲ. ಇಷ್ಟಕ್ಕೂ ಆಕೆ ಅಂತಹ ಪ್ರಭಾವಿ ವಿಐಪಿ ಕೂಡ ಅಲ್ಲ! ಆದರೆ ಒಬ್ಬ ಪ್ರಾಮಾಣಿಕ ದೇಶಭಕ್ತೆ , ಸಾಮಾಜಿಕ ಕಾರ್ಯಕರ್ತೆ. ರಾಷ್ಟ್ರೀಯ ವಿಚಾರಗಳಿಗೇ ಸದಾ ಬದ್ಧತೆ. ಜೊತೆಗೆ ಓರ್ವ ಸಂನ್ಯಾಸಿನಿ. ಆಕೆಯ ಬಿಡುಗಡೆಯಿಂದ ಯಾರಿಗೆ ಆಗಬೇಕಾದುದಾದರೂ ಏನು? ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ ೯ ಮಂದಿಯನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಬಿಡುಗಡೆ ಮಾಡಲಾಗಿದೆ. ಸಾಧ್ವಿಗೆ ಮಾತ್ರ ಬಿಡುಗಡೆ ಇಲ್ಲ. ಮುಂದೆ ಎಂದಾದರೊಂದು ದಿನ ಆಕೆಯ ಬಿಡುಗಡೆಯಾಗಬಹುದು. ಆದರೆ ಆಗ ಜೈಲಿನಿಂದ ಹೊರಬರುವುದು ಸಾಧ್ವಿಯಲ್ಲ , ಬಹುಶಃ ಆಕೆಯ ಪಾರ್ಥಿವ ಶರೀರ!