29 ಆಗಸ್ಟ್ 2018, ಚಿಕ್ಕಮಗಳೂರು: ಆರೆಸ್ಸೆಸ್ಸಿನ ಹಿರಿಯ ಪ್ರಚಾರಕ ದಿ|| ನ. ಕೃಷ್ಣಪ್ಪನವರ ಕುರಿತಾದ , ಹಿರಿಯ ಪ್ರಚಾರಕರಾದ ಶ್ರೀ ಚಂದ್ರಶೇಖರ ಭಂಡಾರಿ ರಚಿತ ‘ನಿರ್ಮಾಲ್ಯ’ ಗ್ರಂಥದ ಲೋಕಾರ್ಪಣ ಸಮಾರಂಭ ಚಿಕ್ಕಮಗಳೂರು ನಗರದ ‘ಸಮರ್ಪಣಾ’ದಲ್ಲಿ ಜರುಗಿತು. ಗ್ರಂಥದ ಲೋಕಾರ್ಪಣೆಯನ್ನು ಶ್ರೀಯುತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ನೆರವೇರಿಸಿದರು. ಶ್ರೀಮತಿ ಗಿರಿಜಾ ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಯುತ ಹಿರೇಮಗಳೂರು ಕಣ್ಣನ್ ಗ್ರಂಥದ ಪರಿಚಯ ಮಾಡಿದರು.
ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸಿನ ಶ್ರೀ ಅಶೋಕ್, ಸಮರ್ಪಣಾ ಟ್ರಸ್ಟ್‌ನ ಶ್ರೀ ನರೇಂದ್ರ ಪೈ ಹಾಗೂ ಪ್ರಜ್ಞಾದ ಶ್ರೀ ನಾಗೇಶ್ ಉಪಸ್ಥಿತರಿದ್ದರು.
ಚಿಕ್ಕಮಗಳೂರು: ಸ್ವಂತಕ್ಕಾಗಿ ಏನನ್ನೂ ಬಯಸದ ಆರ್‌ಎಸ್‌ಎಸ್ ಹಿರಿಯ ಪ್ರಚಾರಕರಾದ ದಿ| ನ.ಕೃಷ್ಣಪ್ಪ ಅವರ ಬದುಕು ಎಲ್ಲರಿಗೂ ಪ್ರೇರಣಾದಾಯಕವಾದದ್ದು ಎಂದು ಪರಿವಾರ ಪ್ರಬೋಧಿನಿಯ ಅಖಿಲ ಭಾರತೀಯ ಸಂಯೋಜಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ನಗರದ ಸಮರ್ಪಣಾ ಸಭಾಂಗಣದಲ್ಲಿ ನಗರದ ಪ್ರಜ್ಞಾ ವೇದಿಕೆ ಹಾಗೂ ಸಮರ್ಪಣಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ. ನ.ಕೃಷ್ಣಪ್ಪ ಅವರ ಜೀವನದ ಕುರಿತಾದ ’ನಿರ್ಮಾಲ್ಯ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹುಟ್ಟಿದವರು ಸಾಯಲೇ ಬೇಕು. ಆದರೆ ಯಾರಿಂದಾಗಿ ವಂಶಕ್ಕೊಂದು ಹೆಸರು ಬರುತ್ತದೊ ಅಂತಹವರು ಸಾಯುವುದಿಲ್ಲ. ನ.ಕೃಷ್ಣಪ್ಪ ಅವರ ಬದುಕೂ ಇದೇ ರೀತಿ ಇತ್ತು. ಅವರಿಗೆ ಹೊಸ ಆಲೋಚನೆ ಬಂದಾಗ ಅದನ್ನು ಕಾರ್ಯಗತಗೊಳಿಸಲು ಶಕ್ತರಾದವರನ್ನು ಹುಡುಕಿ ಜವಾಬ್ದಾರಿಯನ್ನು ನೀಡುತ್ತಿದ್ದರು. ಮತ್ತು ಅವರ ಬೆನ್ನ ಹಿಂದೆ ನಿಂತು ಎಲ್ಲ ಶಕ್ತಿ ತುಂಬುತ್ತಿದ್ದರು. ನಂತರ ಅದನ್ನು ಮಾದರಿಯಾಗಿ ಇತರರಿಗೂ ಪರಿಚಯಿಸುತ್ತಿದ್ದರು. ಈ ಮೂಲಕ ಎಲ್ಲರಿಗೂ ಪ್ರೇರಣೆ ಆಗುವ ಕೆಲಸವನ್ನು ಅವರು ಮಾಡುತ್ತಿದ್ದರು ಎಂದರು.
ಕೃಷ್ಣಪ್ಪ ಅವರ ಗುರುಕುಲ ಕಲ್ಪನೆಯೇ ವಿಶಿಷ್ಠವಾದದ್ದು. ವಿದ್ಯೆ, ಅನ್ನ ಮತ್ತು ಔಷಧವನ್ನು ಮಾರಾಟಕ್ಕಿರುವ ವಸ್ತುಗಳಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆದರೆ ಜಗತ್ತು ಇಂದು ನಡೆಯುತ್ತಿರುವುದು ಈ ಮೂರನ್ನು ಮಾಡಿಯೇ, ಆದರೂ ಈ ಕಲ್ಪನೆಯನ್ನು ಸಾಕಾರಗೊಳಿಸಬೇಕು. ವಿದ್ಯೆ ಮಾರಟಕ್ಕಿಲ್ಲ ಎಂಬುದನ್ನು ಮಾಡಿ ತೋರಿಸಬೇಕೆಂಬ ಕಾರಣಕ್ಕೆ ೨೪ ವರ್ಷಗಳ ಹಿಂದೆ ಗುರುಕುಲ ಆರಂಭಿಸಿದರು. ಅಲ್ಲಿ ವಿದ್ಯೆ, ಅನ್ನ, ಔಷಧಿ ಎಲ್ಲವೂ ಉಚಿತವಾಗಿದೆ. ಈ ಮೂಲಕ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಅವರು ಮಾಡಿದ್ದರು ಎಂದರು.
ಕೃಷ್ಣಪ್ಪ ಅವರು ಮನೆ ಬಿಟ್ಟು ಬಂದವರಾಗಿದ್ದರೂ ಯಾರದ್ದೇ ಮನೆ ಕಳಪೆಯಾಗಿರಬಾರದು ಎನ್ನುವ ಅಭಿಲಾಷೆ ಹೊಂದಿದ್ದರು. ಇದಕ್ಕಾಗಿ ಶ್ರೀಮಾತಾ ಹೆಸರಿನಲ್ಲಿ ಕುಟುಂಬ ಪ್ರಭೋದನಕ್ಕೆ ಚಾಲನೆ ನೀಡಿದರು. ನೋಡ ನೋಡುತ್ತಿದ್ದಂತೆ ಅದಕ್ಕೆ ಅಖಿಲ ಭಾರತ ಸ್ವರೂಪ ಬಂತು. ಇದು ಎಲ್ಲರಿಗೂ ಬೇಕಾದ್ದು ಎಂದು ಸಾಮಾನ್ಯರಿಗೆ ಅನ್ನಿಸತೊಡಿಗಿತು.
ರಾಮಾಯಣ ಮತ್ತು ಭಗವದ್ಗೀತೆಯ ಯಾವುದೇ ಪುಟ ತೆರೆದರೂ ಅದರಲ್ಲಿ ಯಾವುದಾದರೊಂದು ಪ್ರೇರಣಾದಾಯಕವಾದ ವಿಷಯ ಸಿಗುತ್ತದೆ ಅದೇ ರೀತಿ ಕೃಷ್ಣಪ್ಪ ಅವರ ಕುರಿತಾದ ನಿರ್ಮಾಲ್ಯ ಗ್ರಂಥ ಸಹ. ಅದು ಸಂಘದ ಸ್ವಯಂ ಸೇವಕರಿಗೆ ಪಠ್ಯ ಪುಸ್ತಕ ಇದ್ದಹಾಗೆ: ಕಜಂಪಾಡಿ ಸುಬ್ರಹ್ಮಣ್ಯ ಭಟ್.
ನಿರ್ಮಾಲ್ಯ ಎಂದರೆ ದೇವರ ಮೇಲಿರುವ ಪುಷ್ಪವಿದ್ದಂತೆ. ಅದನ್ನು ನಾವು ಧಾರಣೆ ಮಾಡಿದರೆ ಸಾಕು ನಮಗೆ ಶಕ್ತಿ ಸಿಗುತ್ತದೆ. ಇನ್ನೊಂದು ನಿರ್ಮಲ ಎಂದರ್ಥ ಅದರಲ್ಲಿ ಕಲ್ಮಶವೇ ಇರುವುದಿಲ್ಲ ಎಂದು ಹೇಳಿದರು.
ಗ್ರಂಥದ ಪರಿಚಯ ಮಾಡಿದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ನ. ಕೃಷ್ಣಪ್ಪನವರು ಕೇವಲ ಸಂಘದ ಪ್ರಚಾರಕರಾಗಿರದೇ ಸಮಾಜದ ಉನ್ನತಿಗೆ ಶ್ರಮಿಸಿದರು. ಅವರನ್ನು ಒಮ್ಮೆ ಭೇಟಿಯಾದ ವ್ಯಕ್ತಿ ಜೀವಮಾನದಲ್ಲಿ ಅವರನ್ನ ಮರೆಯದಂತಹ ವ್ಯಕ್ತಿತ್ವ ಅವರದ್ದಾಗಿತ್ತು. ಆರೆಸ್ಸೆಸ್ಸಿನ ಸ್ವಯಂಸೇವಕರಿಗೆ ಈ ಗ್ರಂಥ ಅತ್ಯಂತ ಪ್ರೇರಣೆಯನ್ನ ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾಶ್ರಮ ಶಾಲೆ ಅಧ್ಯಕ್ಷೆ ಗಿರಿಜಾ ರಾಮಸ್ವಾಮಿ ಮಾತನಾಡಿ, ವಿಶೇಷವಾಗಿ ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು ಜಿಲ್ಲೆಗಳಲ್ಲಿ ಸಂಘದ ಕಾರ್ಯ ಬೆಳೆಯುವಲ್ಲಿ ನ. ಕೃಷ್ಣಪ್ಪನವರ ಪಾತ್ರ ಮಹತ್ವದ್ದಾಗಿದೆ. ಸಂಘವನ್ನು ಸಮಾಜ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರದ ಕಾಲದಲ್ಲಿ ಕೃಷ್ಣಪ್ಪನವರು ಸಂಘವನ್ನ ಕಟ್ಟಿಬೆಳೆಸಿದ ರೀತಿ ಅದ್ಭುತವಾದುದು ಎಂದರು.
ವೇದಿಕೆಯಲ್ಲಿ ಆರೆಸ್ಸೆಸ್ಸಿನ ಜಿಲ್ಲಾ ಕಾರ್ಯವಾಹ ಅಶೋಕ್, ಸಮರ್ಪಣಾ ಟ್ರಸ್ಟ್ನ ಅಧ್ಯಕ್ಷ ನರೇಂದ್ರ ಪೈ, ಪ್ರಜ್ಞಾ ವೇದಿಕೆಯ ಸಂಚಾಲಕ ನಾಗೇಶ್ ಉಪಸ್ಥಿತರಿದ್ದರು.
ರಮೇಶ್ ಸ್ವಾಗತಿಸಿ, ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ ಶರ್ಮ ವೇದಘೋಷ ಮಾಡಿದರು. ಸುಮಾ ಪ್ರಸಾದ್ ಪ್ರೇರಣಾ ಗೀತೆ ಹಾಡಿದರು. ಸುಮಂತ್ ನೆಮ್ಮಾರ್ ವಂದಿಸಿದರು.
ವರದಿ : ಸುಮಂತ್ ನೆಮ್ಮಾರ್