BIRSA MUNDA, (1875–1900) was an Indian tribal freedom fighter and a folk hero, who belonged to the Munda tribe, and was behind the Millenarian movement that rose in the tribal belt of modern day Bihar, and Jharkhand during the British Raj, in the late 19th century, thereby making him an important figure in the history of the Indian independence movement.

ನವೆಂಬರ 15 “ಗಿರಿಜನ ಸ್ವಾಭಿಮಾನ ದಿವಸ ” – ಅವಶ್ಯಕತೆ
ಹಿನ್ನೆಲೆ:
ಭಾರತ ಜಗತ್ತಿನಲ್ಲೇ ಅತ್ಯಂತ ಪುರಾತನವಾದ ದೇಶ.ಹಾಗಾಗಿ ಇಲ್ಲಿನ ಸಂಸ್ಕೃತಿಯೂ ಪುರಾತನವಾದದ್ದು.ಇಲ್ಲಿನ ಸಂಸ್ಕೃತಿಯನ್ನು ಅರಣ್ಯ ಸಂಸ್ಕೃತಿ ಎಂದೂ ಕರೆಯುತ್ತಾರೆ. ವೇದ ಪುರಾಣಗಳು ರಚನೆಯಾದದ್ದು ಅರಣ್ಯದಲ್ಲಿ. ಜ್ಞಾನಿಗಳು, ತಪಸ್ವೀಗಳೂ ಆದ ಋಷಿ ಮುನಿಗಳು ವಾಸಮಾಡುತ್ತಿದ್ದುದು ಅಡವಿಯಲ್ಲಿ.ಅವರ ಜೊತೆಯಲ್ಲೇ ವಾಸಿಸುತ್ತಿದ್ದವರು ಗಿರಿಜನರು,ಬುಡಕಟ್ಟು ಜನರು ಅಥವಾ ವನವಾಸಿಗಳು.ಆದಿ ಕಾವ್ಯ ರಾಮಾಯಣ ರಚಿಸಿದ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿಗಳು ವನವಾಸಿಗಳ ಮೂಲ ಪುರುಷರಲ್ಲಿ ಒಬ್ಬರು.ಗಿರಿಜನರು ಸಂಸ್ಕಾರ, ಸಂಸ್ಕೃತಿಯುಳ್ಳವರು.


ಜೀವನದ ಶ್ರೇಷ್ಠ ಮೌಲ್ಯಗಳು :
ವನವಾಸಿಗಳು ಪ್ರಕೃತಿ ಪೂಜಕರು.ಗಿಡಮರ, ಕಲ್ಲು,ನೀರು,ಪ್ರಾಣಿ ಪಕ್ಷಿಗಳಲ್ಲಿ ದೇವರನ್ನು ಕಂಡು ಅರ್ಚಿಸುವವರು. ತೀರಿಕೊಂಡವರಲ್ಲಿ ದೇವರನ್ನು ಕಾಣುತ್ತಾರೆ.ಪರಿವಾರದಲ್ಲಿ ತುಂಬಾ ಕಷ್ಟ ಬಂದಾಗ ಆ ಹಿರಿಯರನ್ನು ಪೂಜೆಮಾಡಿ ಅವರ ಆತ್ಮವನ್ನು ಆಹ್ವಾನ ಮಾಡುತ್ತಾರೆ.ಆ ಆತ್ಮ ಅತ್ಯಂತ ಪ್ರೀತಿ ಪಾತ್ರರಲ್ಲಿ ಬಂದು ಅವರ ಕಷ್ಟಗಳಿಗೆ ಪರಿಹಾರ ಹೇಳುತ್ತದೆ.ಮನೆಯಲ್ಲಿ ಹಿರಿಯರು ಸಮಸ್ಯೆಗಳಿಗೆ ಪರಿಹಾರ ಹೇಳಿದಂತೆ.ಮೈಸೂರು,ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಇದನ್ನು ನೆರಳು ಕರೆಯುವುದು ಎಂದು ಹೇಳುತ್ತಾರೆ.ಎಂತಹ ಸುಂದರ ಕಲ್ಪನೆ.ದೇವರು ಎಂದು ಕಲ್ಪಿಸಿದಾಗ ಭಯವಿಲ್ಲ. ವಿಶ್ವಾಸ ವೃದ್ಧಿಸುತ್ತದೆ.ಮನಸ್ಸಿಗೆ ಬಲ ಬರುತ್ತದೆ.ನಂಬಿಕೆ ಗಟ್ಟಿಯಾಗುತ್ತದೆ. ಆತ್ಮೀಯತೆ,ಬಂಧುತ್ವ,ಸ್ವಾಭಿಮಾನ ಮತ್ತು ಸ್ವತಂತ್ರ ಬದುಕು ಅವರ ಹುಟ್ಟುಗುಣ. ಸರಳ ಜೀವನ ಅವರ ಜೀವಾಳ.ಮಹಾತ್ವಾಕಾಂಕ್ಷಿಗಳಲ್ಲ.ಇದ್ದುದರಲ್ಲೇ ಸಂತೃಪ್ತಿಯಿಂದ ಇರುವವರು.ಹಾಗಾಗಿ ಹಾಡು,ಕುಣಿತ ಅವರ ಖುಷೀ ಜೀವನದ ಅಡಿಪಾಯ. ನೃತ್ಯ, ಹಾಡುಗಳು ಭಗವಂತನಿಗೆ ಸಮರ್ಪಿತ ಆದ್ದರಿಂದ ಗಂಡು ಹೆಣ್ಣು ಎಲ್ಲರೂ ಸೇರಿ ನೃತ್ಯ ಮಾಡಿದರೂ ಅಶ್ಲೀಲತೆ ಇಲ್ಲ.ವನವಾಸಿಗಳು ಸ್ವಾಭಿಮಾನಿಗಳು ಅವರಲ್ಲಿ ಆತ್ಮ ಹತ್ಯೆ ಇಲ್ಲವೇ ಇಲ್ಲ. ಇಂದಿನ ಶಿಕ್ಷಿತರು ಮರಗಳಲ್ಲಿ ಟಿಂಬರ್ ಕಂಡರೆ ಅಶಿಕ್ಷಿತರಾದ ವನವಾಸಿಗಳು ಮರಗಳಲ್ಲಿ ದೇವರನ್ನು ಕಂಡು ಅದನ್ನು ರಕ್ಷಿಸುತ್ತಾರೆ. ವನವಾಸಿಗಳು ಹುಟ್ಟಿನಿಂದ ಅರಣ್ಯ ರಕ್ಷಕರು.ಅವರು ವಾಸವಿದ್ದಲ್ಲಿ ಅರಣ್ಯ ಗಿಡಮರಗಳಿಂದ ತುಂಬಿರುತ್ತದೆ. ಅರಣ್ಯ ಇಲಾಖೆಯ ರಕ್ಷಕರಿದ್ದಕಡೆ ಕಾಡಿನ ಮರಗಳೇ ಇರುವುದಿಲ್ಲ.ಹೂವು,ಹಣ್ಣುಗಳನ್ನು ಬಿಡದ ನೆಡು ತೋಪುಗಳಿರುತ್ತವೆ.ಜೀವವೈವಿದ್ಯತೆಯ ನಾಶಕ್ಕೆ ಅರಣ್ಯ ಇಲಾಖೆಯ ಕೊಡುಗೆ ಸಾಕಷ್ಟು.ವನವಾಸಿಗಳು ನಾವು ಬದುಕೋಣ, ಪ್ರಾಣಿಪಕ್ಷಿಗಳು, ಜೀವಜಂತುಗಳು ಮತ್ತು ಗಿಡಮರಗಳೂ ಬದುಕಬೇಕು ಎಂದು ಬಯಸುತ್ತಾರೆ.ಅದರಂತೆ ನಡೆದುಕೊಳ್ಳುತ್ತಾರೆ. ಒಂದೆರಡು ಉದಾಹರಣೆಗಳು:

(1)ಒಂದು ಊರಿಗೆ ಹೋದಾಗ ತಿನ್ನಲು ಮಾವಿನ ಹಣ್ಣು ಕೊಟ್ಟರು ತುಂಬಾ ರುಚಿಯಾಗಿತ್ತು, ಬೇಕೆಂದು ಕೇಳಿದೆವು,ಮನೆಯಲ್ಲಿ ಖಾಲಿಯಾಗಿತ್ತು,ಮನೆಯ ಎದುರಿಗೇ ಮಾವಿನ ಮರವಿತ್ತು, ಅದರಲ್ಲಿದೆಯಲ್ಲಾ ಎಂದಾಗ ಆ ಮನೆಯ ತಾಯಿ ಹೇಳಿದರು ಅದು ಪ್ರಾಣಿ,ಪಕ್ಷಿಗಳಿಗೆ ಎಂದು.

(2) ಒಂದು ಸಾರಿ ಕುಮಟಾ ತಾಲ್ಲೂಕಿನ ಬಂಗಣೆಯಲ್ಲಿ ವಸತಿಮಾಡಿದ್ದೆ.ಬೇಸಿಗೆಯ ಸಮಯ ರಾತ್ರಿಯೂ ಸ್ನಾನ ಮಾಡುತ್ತಾರೆ.ಅಘನಾಶಿನಿ ನದಿ ಪಕ್ಕದಲ್ಲೆ ಹರಿಯುತ್ತದೆ.ನಾನು ಸ್ನಾನಕ್ಕೆ ಹೋಗಲು ಸಿದ್ಧನಾಗುತ್ತಿದ್ದಾಗ, ಆ ಮನೆಯ ಯಜಮಾನರು ನದಿಯಲ್ಲಿ ಸ್ನಾನ ಮಾಡಬೇಡಿ ಗಲೀಜಾಗುತ್ತದೆ.ಕೇಳಗಿನ ಊರುಗಳಲ್ಲಿ ಈ ನೀರನ್ನು ಪೂಜೆಗೆ,ಅಡಿಗೆಗೆ, ಕುಡಿಯಲು ಬಳಸುತ್ತಾರೆ.ಎಂದು ಎಚ್ಚರಿಸಿದರು.ಇದು ಅವರು ಪ್ರತ್ಯಕ್ಷ ನಡೆದು ಕೊಳ್ಳುವ ರೀತಿ.


ಅಗಣಿತ ಮಹಾಪುರುಷರು :
ವನವಾಸಿಗಳಲ್ಲಿ ಪುರಾಣಕಾಲದಿಂದ ಹಿಡಿದು ಇಂದಿನವರೆಗೂ ತ್ಯಾಗ ಬಲಿದಾನಗಳಿಂದ ಕೂಡಿದ ಶ್ರೇಷ್ಠ ಮಹಾಪುರುಷರ ಪರಂಪರೆಯನ್ನು ಕಾಣುತ್ತೇವೆ.ರುಕ್ಮಿಣಿದೇವಿ,ಸೋಲಿಗರ ಪುಸುಮಾಲೆ,ಚೆಂಚು ಜನಾಂಗದ ಚೆಂಚುಲಕ್ಷ್ಮೀ ಇವರೆಲ್ಲರೂ ದೇವರುಗಳಾದರೆ,ಮಹರ್ಷಿ ವಾಲ್ಮೀಕಿ,ತಾಯಿ ಶಬರಿ ಮತ್ತು ಬೇಡರ ಕಣ್ಣಪ್ಪ ದೈವಾಂಶ ಸಂಭೂತರು.


ದೇಶ ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡಿದವರು – ಕೇರಳದ ತಲಕಲ್ ಚಂದು,ಸೋಲಿಗರ ಕಾರಯ್ಯ ,ಬಿಲ್ಲಯ್ಯ, ಸಿದ್ದಿಗಳ ರಾಮಾ ಹಬ್ಸಿ,ಬೇಡರ ರಾಜಾ ವೆಂಕಟಪ್ಪ ನಾಯಕ, ವೀರ ಕುಮಾರರಾಮ, ರಾಮಜೀ ಗೊಂಡ, ಕುವರಂ ಭೀಮ,ಅಲ್ಲೂರಿ ಸೀತಾರಾಮುಡು, ಕೊಂಡ ದೊರಾ,ಮಲ್ಲ ದೊರಾ, ಕೊರುಕೊಂಡಾ ಸುಬ್ಬಾರೆಡ್ಡಿ,ರಾಣಿ ದುರ್ಗಾವತಿದೇವಿ, ಜಾದೊನಾಂಗ,ರಾಣಿ ಗೈಡಿಲಿನ್ಯೂ,ಸಿದ್ದು,ಖಾನೋ…..ಅಗಣಿತ ಜನರಿದ್ದಾರೆ.
“ಭಗವಾನ ಬಿರಸಾ ಮುಂಡಾ” – [ಜನನ ನವೆಂಬರ 15,1875,ಮರಣ ಜೂನ್ 9,1900]
ಭಗವಾನ ಬಿರಸಾ ಮುಂಡಾ ಹುಟ್ಟಿದ್ದು ಝಾರ್ಖಂಡರಾಜ್ಯದ ರಾಂಚಿ ಜಿಲ್ಲೆಯ ಉಲಿಹಾತು ಊರಿನಲ್ಲಿ.ಹುಟ್ಟಿನಿಂದಲೇ ಮನೆಯ ಕಷ್ಟಗಳು ಪರಿಹಾರವಾದವು. ಬಡತನದಿಂದಾಗಿ ಪರಿವಾರದವರೆಲ್ಲರೂ ಕ್ರೈಸ್ತರಾಗಿ ಮತಾಂತರಗೊಂಡಿದ್ದರು.ಅವರ ವಿದ್ಯಾಭ್ಯಾಸ ಮಿಶನರಿ ಶಾಲೆಯಲ್ಲಿ ನಡೆಯಿತು.ಬಿರಸಾ ಬುದ್ದಿವಂತ, ಕಲಿಕೆಯಲ್ಲಿ ಮುಂದೆ,ಚುರುಕು ಮತ್ತು ಜಾಣ.ತನ್ನ ವಿದ್ಯಾರ್ಥಿ ಜೀವನದ 14 ನೇಯ ವಯಸ್ಸಿನಲ್ಲಿ ಕ್ರೈಸ್ತ ಪಾದ್ರಿಗಳ ದೌರ್ಜನ್ಯವನ್ನು, ಮೋಸದ ಮತಾಂತರವನ್ನು ಪ್ರಶ್ನಿಸಿ, ಪ್ರತಿಭಟಿಸಿ ಶಾಲೆಯಿಂದ ಹೊರಬಂದ ಧೀರ ವ್ಯಕ್ತಿ.ಧಾರ್ಮಿಕ ಒಲುವುಳ್ಳವರಾದ್ದರಿಂದ ಶ್ರೀ ಆನಂದ ಪಾಂಡೆಯವರಲ್ಲಿ ಭಗವದ್ಗೀತೆ,ಉಪನಿಷತ್ತು ಗಳ ಭೋಧನೆ ದೊರೆಯಿತು.ವೈಷ್ಣವ ದೀಕ್ಷೆ ಪಡೆದು ಸಂತಜೀವನ ಪ್ರಾರಂಭಮಾಡಿ, ಅಧ್ಯಾತ್ಮ ಸಾಧನೆಮಾಡಿ ” ಬಿರಸಾಯತ್” ಪಂಥ ಪ್ರಾರಂಭ ಮಾಡಿದವರು.ಜನರಿಗೆ ಹತ್ತು ಅಂಶಗಳನ್ನು ಪಾಲನೆ ಮಾಡುವಂತೆ ಹೇಳಿದರು.ಅದರಲ್ಲಿ ಪ್ರಮುಖವಾದದ್ದು -[ ಈಶ್ವರ ಒಬ್ಬನೇ[ಸಿಂಗಬೋಂಗಾ]ಗೋವನ್ನು ಪೂಜೆಮಾಡಿ,ಪ್ರಾಣಿ ಹಿಂಸೆ ಮಾಡಬೇಡಿ,ಹಿರಿಯರನ್ನು ಗೌರವಿಸಿ,ದುಶ್ಚಟಗಳಿಂದ ದೂರವಿರಿ,ಸ್ವಚ್ಛವಾಗಿರಿ,ಸ್ವಧರ್ಮದಲ್ಲಿ ನಂಬಿಕೆ ಇಡಿ,ಸಂಘಟಿತರಾಗಿರಿ,ಗುರುವಾರ ಪವಿತ್ರವಾದ ದಿನ ಅಂದು ಭೂಮಿಯನ್ನು ಊಳಬೇಡಿ ಸಿಂಗಬೋಂಗನನ್ನು ಪೂಜಿಸಿ ಮತ್ತು ನಮ್ಮ ಧರ್ಮ ಸಂಸ್ಕೃತಿಯೇ ನಮ್ಮ ಗುರುತು,ವಿದೇಶಿ ಮಿಷನರಿಗಳನ್ನು ನಂಬಬೇಡಿ]ಲಕ್ಷಾಂತರ ಜನರ ಮನದಲ್ಲಿ ದೇವರಾಗಿ ಪ್ರತಿಷ್ಠಾಪನೆ ಗೊಂಡರು.ಆದರೆ ಈ ದೈವತ್ವದ ಪಟ್ಟವನ್ನು ದೇಶ,ಧರ್ಮ ಮತ್ತು ಸಮಾಜಕ್ಕಾಗಿ ಮುಡಿಪಾಗಿಟ್ಟು ,ಅಬಾಲ ವೃದ್ದರನ್ನೆಲ್ಲಾ ಸ್ವಾತಂತ್ರ್ಯದ ಹೋರಾಟದ ಸೈನಿಕರನ್ನಾಗಿ ಸಜ್ಜುಗೊಳಿಸಿದರು. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಬದುಕಿದವರು.ಬ್ರಿಟೀಷರ ವಿರುದ್ಧ ಹೋರಾಡುತ್ತಿರುವಾಗ ಮೋಸದ ಬಲೆಗೆ ಸಿಲುಕಿ ಸೆರೆಯಾಳಾದರು.ಬ್ರಿಟೀಷರು ಆಹಾರದಲ್ಲಿ ವಿಷವುಣಿಸಿ ಸಾಯಿಸಿದರು.ಬಿರಸಾ ಮುಂಡಾ ವೀರಮರಣವನ್ನಪ್ಪುವಾಗ ಕೇವಲ 25ವರುಷ ವಯಸ್ಸು.


ಇಂದಿನ ಭಾರತ
ಭಾರತದ ಇಂದಿನ ಪರಿಸ್ಥಿತಿಯಲ್ಲಿ ಜನರು ಜಾಗೃತಗೊಂಡು ದೇಶ ಧರ್ಮಗಳ ಬಗ್ಗೆ ಭಕ್ತಿಯಿಂದ ಒಗ್ಗೂಡುತ್ತಿದ್ದರೆ, ಇನ್ನೊಂದೆಡೆ ದೇಶದರ್ಮದ ವಿರೋಧಿ ಶಕ್ತಿಗಳು ಆರ್ಭಟಿಸುತ್ತಿದ್ದಾರೆ. ಮುಸ್ಲಿಂ ಭಯೋತ್ಪಾದನೆ,ಕ್ರೈಸ್ತ ಮಿಷನರಿಗಳ ಮತಾಂತರದ ಹಾವಳಿ,ಜಾತಿ,ಪಂಥದ ಹೇಸರಿನಲ್ಲಿ ವಿಭಜಕ ಶಕ್ತಿಗಳ ನಡೆ,ನಾವು ವನವಾಸಿಗಳು ಹಿಂದುಗಳಲ್ಲ ಎಂಬ ಕೂಗು,ಸಾಲದೆಂಬಂತೆ ನೆರೆಯ ಬಾಂಗ್ಲದೇಶ, ಪಾಕಿಸ್ತಾನ ಮತ್ತು ಚೀನಾ ದೇಶಗಳ ಕಾಟ ಈ ರೀತಿಯ ಮನುಕುಲದ ನಾಶಮಾಡುವ ಶಕ್ತಿಗಳು ಸಜ್ಜಾಗಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿ ನಿಂತಿವೆ.ಆದರೆ ನಾವು ಭಯಪಡ ಬೇಕಾಗಿಲ್ಲ.ಒಮ್ಮೆ ನಮ್ಮ ಪೂರ್ವಜರ ಹೋರಾಟ ಬಲಿದಾನ ಪರಾಕ್ರಮಗಳನ್ನು ನೆನಪಿಸಿಕೊಂಡು ಆ ಮಹಾನ ಶಕ್ತಿಗಳನ್ನು ಆಹ್ವಾನಿಸಿಕೊಂಡರೆ,ನಮ್ಮ ಬದುಕಿನಲ್ಲಿಯೂ ಮಹಾನತೆಯನ್ನು ಸಾಧಿಸ ಬಹುದು.ಸಮಾಜವು ಸ್ವಾಭಿಮಾನ ಭರಿತವಾಗಿ ಸಂಘಟಿತವಾಗಿ ನಿಲ್ಲಬೇಕಾಗಿದೆ.


ಲೇಖನದ ವಿರಾಮಕ್ಕೆ ಮುನ್ನ
ಯುವಕರ ಕಣ್ಮಣಿಯಾದ ಬಿರಸಾ ಮುಂಡಾ ಕುಶಲ ಸಂಘಟಕನಾಗಿ,ಸಮಾಜ ಸುಧಾರಕನಾಗಿ,ಧಾರ್ಮಿಕ ನಾಯಕನಾಗಿ,ಇದೆಲ್ಲದರ ಜೊತೆಯಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಯಾಗಿ ಬದುಕಿದ್ದಾಗಲೇ ” ಬಿರಸಾ ಭಗವಾನ ” ಆದವರು.ಇಂತಹ ಶ್ರೇಷ್ಠ ಮಹಾಪುರುಷನ ಹುಟ್ಟಿದ ದಿನವನ್ನು “ಗಿರಿಜನ ಸ್ವಾಭಿಮಾನ ದಿವಸ ” ಆಚರಿಸಿ ಸ್ವಾಭಿಮಾನದಿಂದ ಬದುಕಿದಾಗ ಅವರ ಆಶಯ ಸಾರ್ಥಕವಾಗುತ್ತದೆ. 11 ಕೋಟಿಗೂ ಹೆಚ್ಚಿನ ಜನಸಂಖ್ಯೆ ಇರುವ ಭಾರತದ ಸಂಸ್ಕೃತಿ,ಪರಂಪರೆ ಹಾಗೂ ಶ್ರೇಷ್ಠ ಜೀವನಮೌಲ್ಯಗಳ ಭದ್ರ ಅಡಿಪಾಯವಿರುವ ಗಿರಿಜನರು ಸ್ವಾಭಿಮಾನದಿಂದ ಬದುಕುವಂತಾದಾಗ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ.ವನವಾಸಿಗಳು ಅವಕಾಶ ವಂಚಿತರು, ಅವರ ಕಷ್ಟ ಸುಖದಲ್ಲಿ ಇಡೀ ಸಮಾಜ ಒಂದಾಗಿ ನಿಂತಾಗ ” ಸಬಲ ವನವಾಸಿ,ಸಮರ್ಥ,ಸ್ವಾಭಿಮಾನಿ ಭಾರತ”ಎದ್ದು ನಿಲ್ಲುತ್ತದೆ.” ವನವಾಸಿ,ಗ್ರಾಮವಾಸಿ,ನಗರವಾಸಿ ನಾವೆಲ್ಲ ಭಾರತವಾಸಿ” ಎಂದು ಸಮನ್ವಯದಿಂದ ಈ ದಿನವನ್ನು ಆಚರಣೆ ಮಾಡೋಣ.


” ಜೈ ಭಗವಾನ ಬಿರಸಾ ಮುಂಡಾ”

Leave a Reply

Your email address will not be published.

This site uses Akismet to reduce spam. Learn how your comment data is processed.