ಯೋಗ ಅಜ್ಜಿ ಎಂದೇ ಗುರುತಿಸಿಕೊಂಡಿದ್ದ ಭಾರತದ ಅತ್ಯಂತ ಹಿರಿಯ ಯೋಗ ಶಿಕ್ಷಕಿ, ಯೋಗಪಟು ಆಗಿ ಪ್ರಸಿದ್ಧಿ ಹೊಂದಿದವರು ವಿ. ನಾನಮ್ಮಾಳ್. ಅವರು ಲಕ್ಷಾಂತರ ಜನರಿಗೆ ಯೋಗ ಶಿಕ್ಷಣ ನೀಡುವ ಮೂಲಕ ಸದೃಢ ಆರೋಗ್ಯವಂತ ಜೀವನ ಮಾದರಿಯನ್ನು ಬೋಧಿಸಿದ್ದರು. ಇಂದು ಅವರ ಜಯಂತಿ.


ಪರಿಚಯ
ವಿ. ನಾನಮ್ಮಾಳ್ ಅವರು ಫೆಬ್ರವರಿ 24, 1920 ರಂದು ತಮಿಳುನಾಡಿನ ಕೊಯಮತ್ತೂರು ನಗರದ ಜಮೀನ್ ಕಲಿಯಪುರಂ ಎಂಬಲ್ಲಿ ಜನಿಸಿದರು. ಬಾಲ್ಯದಿಂದಲೇ ಯೋಗದ ಆಸಕ್ತಿ ಹೊಂದಿದ್ದ ಅವರು ಎಂಟು ವರ್ಷದವರಿದ್ದಾಗ ತಂದೆಯಿಂದ ಯೋಗವನ್ನು ಕಲಿತರು.ನಾನಮ್ಮಾಳ್‌ ಅವರಿಗೆ ಬೆನ್ನು ನೋವು ಇದ್ದಿದ್ದರಿಂದಲೂ ಅದರ ನಿವಾರಣೆಗಾಗಿ ಯೋಗಾಭ್ಯಾಸದಲ್ಲಿ ನಿರಂತರವಾಗಿ ತೊಡಗಿಕೊಂಡರು. ಮದುವೆಯ ನಂತರ ವಿ. ನಾನಮ್ಮಾಳ್ ಅವರು ಪ್ರಕೃತಿ ಚಿಕಿತ್ಸೆಯ ಕಡೆ ಹೆಚ್ಚು ಒಲವು ತೋರಿದ್ದರು.


ಸಾಧನೆ
ತಮ್ಮ ಜೀವನದುದ್ದಕ್ಕೂ ಯೋಗಾಭ್ಯಾಸದಲ್ಲಿ ತೊಡಗಿದ್ದ ನಾನಮ್ಮಾಳ್ ಅವರು ಕಳೆದ ಐವತ್ತು ವರ್ಷಗಳಲ್ಲಿ  ಒಂದು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿರುವ ಹೆಗ್ಗಳಿಗೆ ಪಾತ್ರರಾಗಿದ್ದಾರೆ. 1972ರಲ್ಲಿ ಕೊಯಮತ್ತೂರಿನಲ್ಲಿ ಓಝೋನ್ ಯೋಗ ಕೇಂದ್ರವನ್ನು ಸ್ಥಾಪಿಸಿದರು. ಇದರಿಂದ ಸುಮಾರು 1,00,000 ಕ್ಕೂ ಹೆಚ್ಚು ಜನರಿಗೆ ಯೋಗವನ್ನು ಕಲಿಸಿದರು. ‘ಓಝೋನ್ ಯೋಗ ಕೇಂದ್ರದಲ್ಲಿ’ ಪ್ರತಿದಿನ 100 ವಿದ್ಯಾರ್ಥಿಗಳಿಗೆ ಯೋಗಾ ಕಲಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ಕುಟುಂಬದ 36 ಸದಸ್ಯರು ಸೇರಿದಂತೆ ವಿಶ್ವದಾದ್ಯಂತದ ಸುಮಾರು 600 ವಿದ್ಯಾರ್ಥಿಗಳಿಗೆ ಯೋಗ ಕಲಿಸಿವ ‘ಯೋಗ ಬೋಧಕರು’ ಆಗಿದ್ದರು.

ಕೊಯಮತ್ತೂರಿನಲ್ಲಿ 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸುವ ಮೂಲಕ ನಾನಮ್ಮಾಳ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ನಲ್ಲಿ ಸ್ಥಾನಪಡೆದರು. ಆರೋಗ್ಯ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಯೋಗ ನೆರವಾಗುವುದರಿಂದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ಮೂಲಕ ಯೋಗದ ಬಗ್ಗೆ ಜಾಗೃತಿ ಮೂಡಿಸಿದ್ದರು. ಅವರು ಯೂಟ್ಯೂಬ್ ತರಗತಿಗಳ ಮೂಲಕವೂ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು.

ವಿ.ನಾನಮ್ಮಾಳ್ ಅವರ ಜೀವನೋತ್ಸಾಹ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಯೋಗವನ್ನು ಆರೋಗ್ಯ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ಮಾರ್ಗವಾಗಿ ಅಳವಡಿಸಿಕೊಳ್ಳಲು ಯುವಕರಿಗೆ ಪ್ರೋತ್ಸಾಹಿಸುತ್ತದೆ.

ಪ್ರಶಸ್ತಿ
ನಾನಮ್ಮಾಳ್ ಅವರು 2016 ನಾರಿ ಶಕ್ತಿ ಪುರಾಸ್ಕರ ಹಾಗೂ 2017 ರಲ್ಲಿ ಕರ್ನಾಟಕ ಸರ್ಕಾರದಿಂದ ಯೋಗ ರತ್ನ ಪ್ರಶಸ್ತಿಗಳನ್ನು ಸ್ವೀಕರಿಸಿದ್ದರು. ಇವರ ಯೋಗ ಪಾಂಡಿತ್ಯ, ಸಾಮಾಜಿಕ ಕಳಕಳಿಯ ಯೋಗ ಶಿಕ್ಷಣ ಸೇವೆಗೆ ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ನಾನಮ್ಮಾಳ್ ಅವರು ಅಕ್ಟೋಬರ್ 26, 2019 ರಂದು ತಮ್ಮ 99ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ತಮ್ಮ ನಿವಾಸದಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.