ಪುಣ್ಯಸ್ಮರಣೆ
ಗಾನಯೋಗಿ ಪಂಡಿತ್‌ ಪಂಚಾಕ್ಷರ ಗವಾಯಿ ಕರ್ನಾಟಕದ ಶ್ರೇಷ್ಠ ಹಿಂದೂಸ್ತಾನಿ ಸಂಗೀತಗಾರರಾಗಿ ಪ್ರಸಿದ್ಧಿ ಹೊಂದಿದವರು. ಇವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸಂಗೀತದ ಜೊತೆಗೆ ವಾದ್ಯಗಳನ್ನು ಸಹ ನುಡಿಸುತ್ತಿದ್ದರು. ಇವರು ತಮ್ಮ ಇಡೀ ಜೀವನವನ್ನೇ ಸಂಗೀತಕ್ಕಾಗಿ ಮುಡಿಪಾಗಿಟ್ಟವರು. ಇಂದು ಅವರ ಪಣ್ಯಸ್ಮರಣೆ .


ಪರಿಚಯ
ಶ್ರೀ ಪಂಚಾಕ್ಷರಿ ಗವಾಯಿ ಅವರು ಫೆಬ್ರುವರಿ 2, 1892ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಗುರುಪಾದಯ್ಯ ಚಿರಂತಿಮಠ, ತಾಯಿ ನೀಲಮ್ಮ. ಪಂಚಾಕ್ಷರ ಗವಾಯಿ ಅವರ ಹುಟ್ಟು ಹೆಸರು ಗದಿಗೆಯ್ಯ. ಇವರು ಮತ್ತು ಅವರ ಸಹೋದರ ಗುರುಬಸಯ್ಯ ಇಬ್ಬರೂ ಅಂಧರು. ಹುಟ್ಟು ಕರುಡರಾಗಿದ್ದ ಇವರು ಅನೇಕ ಗುರುಗಳಿಂದ ಶಿಕ್ಷಣವನ್ನು ಪಡೆದರು. ಒಮ್ಮೆ ಶ್ರೀ ಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಇವರಿಬ್ಬರೂ ಹಾಡುತ್ತಿದ್ದರು. ಇದನ್ನ ಕೇಳಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು ತಮ್ಮ ಆಸ್ಥಾನದಲ್ಲಿ ಜಾಗ ನೀಡಿದರು. ನಂತರ ಶ್ರೀ ಕುಮಾರಸ್ವಾಮಿಗಳು ಹಳ್ಳಿಹಳ್ಳಿಗಳಲ್ಲಿ ದೇಣಿಗೆ ಪಡೆದು ನೆಲವಿಗಿಯಲ್ಲೊಂದು ಶಿವಯೋಗ ಮಂದಿರ ಸ್ಥಾಪಿಸಿದ್ದರು. ಅಲ್ಲಿ ಇತರೆ ಹುಡುಗರ ಜೊತೆಗೆ ಈ ಹುಡುಗರೂ ಸಹ ಸಂಗೀತಾಭ್ಯಾಸ ಮಾಡುತ್ತಿದ್ದರು. ತದನಂತರದಲ್ಲಿ ಅಣ್ಣ ಗುರುಬಸಯ್ಯ ಕಾಲರಾ ರೋಗದಿಂದ ನಿಧನರಾದರು.


ಗದಿಗೆಯ್ಯ ಅವರು ತಮ್ಮ ಹದಿನೆಂಟು ವರ್ಷವಿದ್ದಾಗಲೇ ಮೈಸೂರಿನಲ್ಲಿ ಗೌರಿಶಂಕರ ಸ್ವಾಮಿಗಳಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ನಡೆಸಿದರು. ನಂತರ ಅವರು ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ನಂತರ ಬಾಗಲಕೋಟೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಅಧಿವೇಶನ ನಡೆದಿತ್ತು. ಈ ವೇಳೆ ಗದಿಗೆಯ್ಯ ಅವರು ಹಾಡುವುದಕ್ಕಾಗಿ ಅಲ್ಲಿ ಭಾಗವಹಿಸಿದ್ದರು. ಇದ್ದರಿಂದ ಮನಸೋತ ಶ್ರೀ ಕುಮಾರಸ್ವಾಮಿ ಅವರು ಪಂಚಾಕ್ಷರ ಗವಾಯಿಗಳು ಎಂದು ಹೆಸರು ಬದಲಾಯಿಸಿದರು. ಬಳಿಕ ಅವರು ನಾಲ್ಕು ವರ್ಷ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ನಡೆಸಿ ಉಭಯ ಸಂಗೀತದಲ್ಲಿ ಪಂಡಿತರಾದರು. ಪಂಚಾಕ್ಷರಿ ಗವಾಯಿಗಳು ಸಂಗೀತದ ಮೂಲಕವೇ ಸಮಾಜಸೇವೆ ಮಾಡಲು ಪ್ರಾರಂಭಿಸಿದರು.ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಆಧ್ಯಾತ್ಮಮಾರ್ಗದಲ್ಲಿ ಮುನ್ನಡೆದರು.

ಸಂಗೀತ ಕ್ಷೇತ್ರಕ್ಕೆ ಕೊಡುಗೆ
ಪಂಚಾಕ್ಷರ ಗವಾಯಿಗಳು ನಾಡಿನೆಲ್ಲೆಡೆ ಸಂಗೀತ ಪ್ರಚಾರ ಮಾಡುತ್ತಿದ್ದರು. 1914ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಕೊಪ್ಪದ ಶಿವಯೋಗ ಮಂದಿರದಲ್ಲಿ ಸಂಗೀತ ಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಹೇಳಿಕೊಡಲಾಗುತ್ತಿತ್ತು. ಇವರು ಸಂಗೀತ ಶಾಲೆಯನ್ನು ನಡೆಸುವುದಕ್ಕಾಗಿ ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿದ್ದರು. ಈ ನಡುವೆ 1930ರಲ್ಲಿ ಪಂಚಾಕ್ಷರ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದರು. ಇದೇ ಸಮಯದಲ್ಲಿ ಅವರಿಗೆ ಭೀಕರ ಬರಗಾಲ ಸಂಭವಿಸಿತ್ತು. ಹೀಗಾಗಿ ಅವರು ತಮ್ಮ ಶಿಷ್ಯರಿಗಾಗಿ ಸಾಕಷ್ಟು ಕಷ್ಟಪಡುತ್ತಿರುವಾಗ ವೀರಪ್ಪ ಎಂಬುವರು ಸಹಾಯಕ್ಕೆ ಮುಂದಾದರು. ಇವರು ಗವಾಯಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ನೀಡಿದರು. ಈ ಸಂಗೀತಶಾಲೆಗೆ ಗವಾಯಿಗಳು ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ ಎಂದೇ ಹೆಸರಿಟ್ಟರು. ಈ ಪುಣ್ಯಾಶ್ರಮದಲ್ಲಿ ಸಾವಿರಾರು ಅಂಧ, ಬಡ ಹುಡುಗರು ಸಂಗೀತ ಕಲಿತು ದೇಶಾದ್ಯಂತ ಸಂಗೀತಕ್ಕೆ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ. ಇವರು ಕೊನೆಯವರೆಗೂ ಸಮಾಜ, ಸಂಗೀತ ಮತ್ತು ದೀನದಲಿತರ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು.


ಬಿರುದು
ಪಂಚಾಕ್ಷರ ಗವಾಯಿಗಳಿಗೆ ‘ಗಾನ ವಿಶಾರದ’, ‘ಗಾನ ಕಲಾನಿಧಿ’, ಸಂಗೀತ ಸಾಗರ’, ‘ಸಂಗೀತ ಸಾಮ್ರಾಟ್’, ‘ಉಭಯ ಗಾಯನಾಚಾರ್ಯ ಎಂಬ ಇತ್ಯಾದಿ ಬಿರುದುಗಳನ್ನು ನೀಡಿ ಗೌರವಿಸಿದ್ದರು.


ಪಂಚಾಕ್ಷರ ಗವಾಯಿಗಳು ಜೂನ್‌ 11, 1944 ರಂದು ತಮ್ಮ 52ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

Leave a Reply

Your email address will not be published.

This site uses Akismet to reduce spam. Learn how your comment data is processed.