ಮಕ್ಕಳಲ್ಲಿ ರಾಷ್ಟ್ರೀಯ ಭಾವವನ್ನು ಬಿತ್ತುವುದೇ ಪಠ್ಯಪುಸ್ತಕ ಪರಿಷ್ಕರಣೆಯ ಉದ್ದೇಶ. ಸಮಾಜದಲ್ಲಿ ಸಂಘರ್ಷ ಉಂಟುಮಾಡುವ ಉದ್ದೇಶವಿರುವವರಿಗೆ ಇದು ಮಾರಕ. ಅದಕ್ಕೇ ಇಂದು ಅಂತಹವರೆಲ್ಲ ಸೇರಿ ಮೊಸರಲ್ಲಿ ಕಲ್ಲು ಹುಡುಕುವಂತೆ ದೋಷಗಳನ್ನು ಹುಡುಕುತ್ತಿದ್ದಾರೆ, ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ‘ಪಠ್ಯಪುಸ್ತಕ ಪರಿಷ್ಕರಣೆ: ಸತ್ಯ-ಮಿಥ್ಯೆ’ ಎಂಬ ವಿಷಯದ ಬಗ್ಗೆ ಸಿಟಿಜನ್ಸ್ ಫಾರ್ ಡೆಮಾಕ್ರಸಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
ಆರ್ಯ-ದ್ರಾವಿಡ ಎಂಬ ಮಿಥ್ಯೆಯನ್ನು ಬ್ರಿಟಿಷರು ಸತ್ಯವೆಂಬಂತೆ ಬಿಂಬಿಸಿದರು. ಆದರೆ, ಸ್ವಾತಂತ್ರ್ಯ ಬಂದ ಮೇಲೆ ಕೂಡಾ ನಾವೇಕೆ ಸರಿ ಮಾಡಲಿಲ್ಲ? ನಮ್ಮ ದೇಶದ ವಾಮಪಂಥೀಯರೇ ಇದನ್ನು ನಮ್ಮ ಪಠ್ಯದಲ್ಲಿ ತುಂಬಿಸಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣ ನಾಶವಾದ ಜಪಾನ್ ದೇಶಭಕ್ತಿಯನ್ನು ಮಕ್ಕಳಲ್ಲಿ ಮೂಡಿಸಿದ್ದರ ಪರಿಣಾಮ ಮತ್ತೆ ಮೇಲೆದ್ದು ನಿಂತಿತು. ನಮ್ಮಲ್ಲೂ ಆ ಕೆಲಸ ಆಗಬೇಕು. ನಮ್ಮ ದೇಶದ ವಿಜ್ಞಾನ, ಶಿಲ್ಪಶಾಸ್ತ್ರ, ಲೋಹಶಾಸ್ತ್ರ, ಗಣಿತಶಾಸ್ತ್ರ, ಪಂಚಾಂಗಗಳ ಬಗ್ಗೆ ನಾವು ಯಾಕೆ ಹೇಳಿ ಕೊಡಲಿಲ್ಲ? ಇದನ್ನೆಲ್ಲ ಪಠ್ಯಪುಸ್ತಕದಲ್ಲಿ ತಂದರೆ, ಕೇಸರೀಕರಣ ಎಂಬ ನೆಪ ಹೇಳಿ ವಿರೋಧಿಸುತ್ತಾರೆ. ಭಾರತೀಯರು ಒಂದಾಗುವುದನ್ನು ಸಹಿಸದವರು ಇಂದು ಗಲಾಟೆ ಮಾಡುತ್ತಿದ್ದಾರೆ. ಹಾಗಾದರೆ, ಯಾರು ಅಸಹಿಷ್ಣುಗಳು?
ವಿಶ್ವವೇ ಒಂದು ಕುಟುಂಬ ಎಂದ ಭಾರತದ ಬಗ್ಗೆ ನಮ್ಮ ಮಕ್ಕಳಿಗೆ ಹೆಮ್ಮೆ ಮೂಡುವಂತಹ ಶಿಕ್ಷಣ ಅಗತ್ಯ. ಕಾಂಗ್ರೆಸ್, ಕಮ್ಯುನಿಸ್ಟ್, ಕನ್ವರ್ಷನ್ ಮಾಫಿಯಾ ಎಂಬ ಮೂರು ಸಿ ಗಳು ನಮ್ಮ ದೇಶವನ್ನು ಹಾಳು ಮಾಡುತ್ತಿದ್ದಾರೆ. ದೇಶ ಹಾಗೂ ಧರ್ಮದ ಬಗ್ಗೆ ಶ್ರದ್ಧೆ ಇದ್ದರೆ, ಮತಾಂತರ ಕಷ್ಟ. ಅದಕ್ಕೇ ಅದನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಿದರು ಮಿಷನರಿಗಳು ಹಾಗೂ ಬ್ರಿಟಿಷರು. ಅದನ್ನು ನಾವೇಕೆ ಮುಂದುವರಿಸಬೇಕು.
ಕಾಂಗ್ರೆಸ್ ತನ್ನ ಮೆದುಳನ್ನು ಎಡಪಂಥೀಯರಿಗೆ ಒಪ್ಪಿಸಿತು. ಅದರ ಪರಿಣಾಮವಾಗಿ ಸಾಮರಸ್ಯಪೂರ್ಣವಾಗಿದ್ದ ಭಾರತದಲ್ಲಿ ಸಂಘರ್ಷ ಪ್ರಾರಂಭವಾಯಿತು. ಜಾತಿ-ಭಾಷೆಗಳ ಹೆಸರಲ್ಲಿ ಒಡಕು ಪ್ರಾರಂಭವಾಯಿತು. ಈ ಒಡಕನ್ನು ಮರೆಸಿ ನಮ್ಮನ್ನು ಒಂದುಗೂಡಿಸುವ ಭಾರತೀಯತೆ ಇಂದು ಕಾಣಿಸುತ್ತಿದೆ. ಏಕತೆ ಬಂದರೆ ಸಂಘರ್ಷಕ್ಕೆ ಜಾಗವಿಲ್ಲ. ಭಾರತೀಯತೆಯ ಭಾವ ಬಿತ್ತುವ ಪಠ್ಯವನ್ನು ತರುವ ವಿರೋಧಿಸುವುದು ಅದಕ್ಕಾಗಿಯೇ.
ನಾರಾಯಣ ಗುರು, ಬಳಿಕ ಕುವೆಂಪು, ಆಮೇಲೆ ಬಸವಣ್ಣನ ಹೆಸರಲ್ಲಿ ವಿರೋಧ. ಹೀಗೆ ಇವೆಲ್ಲ ಕೇವಲ ನೆಪ ಮಾತ್ರ. ಅನುಭವ ಮಂಟಪದ ಪುನರುಜ್ಜೀವನಕ್ಕೆ 600 ಕೋಟಿ ಕೊಟ್ಟಿದ್ದು ಬಿಜೆಪಿ ಸರ್ಕಾರ. ಅದು ಹೇಗೆ ಬಿಜೆಪಿ ಅಂಬೇಡ್ಕರ್ ವಿರೋಧಿಯಾಗುತ್ತದೆ ಎಂದು ಪ್ರಶ್ನಿಸಿದರು. ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದು, ಅವರು ತೀರಿಕೊಂಡಾಗ ಅವರಿಗೆ ದೆಹಲಿಯಲ್ಲಿ ಶವಸಂಸ್ಕಾರಕ್ಕೆ ಜಾಗ ಕೊಡದವರು ಯಾರು? ಇದೇ ಕಾಂಗ್ರೆಸ್ ಅಲ್ಲವೇ ಎಂದು ಪ್ರಶ್ನಿಸಿದರು.
2017 ರಲ್ಲಿ ನಾಡಗೀತೆಗೆ ಅವಮಾನ ಆಗಿದೆ ಎನ್ನುವವರು ಅದರ ಬಗ್ಗೆ ತನಿಖೆ ಮಾಡಿ ಆಗಲೇ ಬಿ ರಿಪೋರ್ಟ್ ಕೊಟ್ಟಿದ್ದಾರೆ ಅಲ್ಲವೇ? ಆಗಿನ ಮುಖ್ಯಮಂತ್ರಿಗಳು, ಆಗಿನ ಗೃಹ ಸಚಿವರೇ ಇದಕ್ಕೆ ಉತ್ತರ ಕೊಡಬೇಕು. ಅದಕ್ಕೇ ಘಟನೆಯ ಪೂರ್ಣ ತನಿಖೆ ಮಾಡಲು ಸೈಬರ್ ಕ್ರೈಮ್ ಇಲಾಖೆಗೆ ಈಗಿನ ಸರ್ಕಾರ ಆದೇಶಿಸಿದೆ ಎಂದರು.
ಸೆಕ್ಯುಲರ್ ಎಂದು ಹೇಳಿಕೊಳ್ಳುವವರು ಇಂದು ಸಮಿತಿಯಲ್ಲಿ ಯಾವ ಜಾತಿಯವರು ಇದ್ದಾರೆ ಎಂದು ನೋಡುತ್ತಿದ್ದಾರೆ. ಇದು ಅವರ ಇಬ್ಬಂದಿತನವನ್ನು ತೋಯಿಸುತ್ತದೆ ಎಂದರು.
ಸಜ್ಜನರು ಮೌನವಾಗಿದ್ದರೆ ದುರ್ಜನರು ಗರ್ಜಿಸುತ್ತಾರೆ. ಅದಕ್ಕೆ ಸಜ್ಜನರು ಇಂದು ಜಾಗೃತರಾಗಿ ನಮ್ಮನ್ನು ಒಡೆಯುವ ಈ ಷಡ್ಯಂತ್ರದ ಬಗ್ಗೆ ದನಿಯೆತ್ತಬೇಕಾದ ಅಗತ್ಯವಿದೆ. ಒಳ್ಳೆಯ ಚಿಂತನೆ, ಒಳ್ಳೆಯ ಸಲಹೆ ಎಲ್ಲಿಂದಲಾದರೂ ಬರಲಿ. ನಾವದಕ್ಕೆ ತೆರೆದ ಮನಸ್ಸು ಹೊಂದಿದ್ದೇವೆ. ಅದಕ್ಕಾಗಿಯೇ, ಪ್ರೊ. ಮುಡಂಬಡಿತ್ತಾಯ ಸಮಿತಿ, ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಹಾಗೂ ರೋಹಿತ್ ಚಕ್ರತೀರ್ಥ ಅವರ ಸಮಿತಿಯ ಪುಸ್ತಕ ಎಲ್ಲವನ್ನೂ ಸಾರ್ವಜನಿಕರ ಮುಂದೆ ಇಡುತ್ತೇವೆ ಎಂದರು.
ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಗುರುಪ್ರಕಾಶ್ ಪಾಸ್ವಾನ್ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಡಾ. ಅಂಬೇಡ್ಕರ್ ಅವರನನ್ನು ಕಡೆಗಣಿಸಿದವರು ಯಾರು? ಅಂದು ಡಾ. ಅಂಬೇಡ್ಕರ್ ಅವರನ್ನು ತುಳಿದವರು ಇಂದು ದಲಿತರ ಪರ, ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿಯಿರುವವರಂತೆ ಮಾತನಾಡುತ್ತಿದ್ದಾರೆ ಎಂದರು. ನಮ್ಮ ದೇಶದ ಅಸ್ಮಿತೆ, ಗುರುತನ್ನು ಪುನಃ ನೆನಪಿಸುವುದೇ ಶಿಕ್ಷಣದ ಉದ್ದೇಶ.
ಶಿಕ್ಷಣ ತಜ್ಞ, ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲವದ ಕುಲಪತಿ ಡಾ. ತೇಜಸ್ವಿ ಕಟ್ಟಿಮನಿ ಅವರು ಮಾತನಾಡಿ
ಕೆಲವೊಮ್ಮೆ ನಮಗೆ ಅವಮಾನ, ಸಂಕಷ್ಟ ಆಗಬಹುದು. ಆದರೆ, ದೇಶ ನಮ್ಮದು. ಇಲ್ಲಿರುವವರು ನಮ್ಮವರೇ. ದೇಶವನ್ನು ನಾವು ಎಲ್ಲರೂ ಸೇರಿ ಉಳಿಸಿಕೊಳ್ಳಬೇಕು. ದೇಶದ ಪ್ರಶ್ನೆ ಬಂದಾಗ ಜಾತಿ ಭಾಷೆ ಯಾವುದೂ ನಮ್ಮ ನಡುವೆ ಬರಬಾರದು ಎಂದರು.
ನಮ್ಮ ದೇಶದ ನಿಜವಾದ ಇತಿಹಾಸ ಎಲ್ಲರಿಗೂ ತಿಳಿದಿಲ್ಲ. ಇದು ತಿಳಿಯಬೇಕಾದರೆ, ನಮ್ಮ ಜ್ಞಾನಶಾಖೆಗಳ ಪರಿಷ್ಕರಣೆ ಅಗತ್ಯ. ಬದಲಾವಣೆ ಸಹಜ. ನಾನು ಬರೆದಿದ್ದು ಬದಲಿಸಬೇಡಿ ಎನ್ನುವುದು ವೈಜ್ಞಾನಿಕವಲ್ಲ. ನಮಗಿಂತ ಬುದ್ಧಿವಂತರೂ, ಭಿನ್ನವಾಗಿ ಯೋಚಿಸುವವರೂ ಇರಬಹುದಲ್ಲವೇ? ಅದನ್ನು ಎಲ್ಲರೂ ತಿಳಿದುಕೊಳ್ಳಬೇಕು.
ನಮ್ಮ ಮಕ್ಕಳಿಗೆ ಸರಿಯಾದ ತಿಳುವಳಿಕೆ ಕೊಡುವುದು ಶಿಕ್ಷಣದ ಕೆಲಸ. ಬರೀ ಓದಿದರೆ ಪ್ರಯೋಜನವಿಲ್ಲ, ಅದರಿಂದ ತಿಳಿವು ಬರಬೇಕು. ನಾವೇ ನೆಟ್ಟು ನಾವೇ ಹಣ್ಣು ತಿನ್ನದಿರಬಹುದು. ಆದರೆ, ನಮ್ಮ ಪೂರ್ವಜರು ನೆಟ್ಟದ್ದರ ಫಲ ನಾವು ತಿನ್ನುತ್ತಿದ್ದೇವೆ. ಅದು ನಮಗೆ ಗೊತ್ತಿರಬೇಕು. ನಾವು ಹಣ್ಣಿನ ಗಿಡ ನೀಡಬೇಕು. ಜಾಲಿ ಗಿಡ ನೆಡಬಾರದು. ನಮ್ಮ ಪೂರ್ವಜರ ಬಗ್ಗೆ ಇತಿಹಾಸದ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಶಿಕ್ಷಣದಿಂದ ಈ ತಿಳುವಳಿಕೆ ಮಕ್ಕಳಿಗೆ ಬರಬೇಕು. ಶಿಕ್ಷಣವನ್ನು ಹಾಳು ಮಾಡಿದರೆ ದೇಶವನ್ನು ಹಾಳು ಮಾಡಿದಂತೆ. ಅದಕ್ಕೇ, ಅದು ಸರಿಯಾಗಿರುವಂತೆ ಕಾಳಜಿ ಮಾಡುವುದು ಅಗತ್ಯ. ತಾನು ಬದುಕುವ ಹಾಗೂ ಬೇರೆಯವರಿಗೆ ಬದುಕುವ ಅವಕಾಶ ಕೊಡುವುದನ್ನು ಕಲಿಸುವುದೇ ನಿಜವಾದ ಶಿಕ್ಷಣ.
ಶಿವಾಜಿಯ ಬಗ್ಗೆ ತಪ್ಪು ಇತಿಹಾಸ ಬರೆಯಲಾಗಿತ್ತು. ಒಬ್ಬ ರಾಷ್ಟ್ರೀಯ ಮಹಾಪುರುಷನ ಬಗ್ಗೆ ತಿಳಿದುಕೊಳ್ಳುವ ಭಾಗ್ಯ ಮಕ್ಕಳಿಗೆ ಇರಲಿಲ್ಲ. ಇದೆಲ್ಲ ಪರಿಷ್ಕರಣೆ ಆಗಬೇಕಾದ್ದು. ಈಗ ಅಂತಲ್ಲ. ಯಾವಾಗಲೂ ಇಂತಹ ಪರಿಷ್ಕರಣೆಗಳು ನಡೆಯುತ್ತಿರಬೇಕು. ನಾವೆಲ್ಲರೂ ಇದಕ್ಕೆ ತೆರೆದ ಮನಸ್ಸನ್ನು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.