ನನ್ನ ಪ್ರೀತಿಯ ದೇಶವಾಸಿಗಳೇ, ಇನ್ನು ಕೆಲವೇ ದಿನಗಳಲ್ಲಿ ನಾವು ವಿಜಯದಶಮಿ ಆಚರಿಸಲಿದ್ದೇವೆ. ಈ ಬಾರಿಯ ವಿಜಯದಶಮಿ ಮತ್ತೊಂದು ಕಾರಣದಿಂದ ಬಹಳ ವಿಶೇಷವೆನಿಸುತ್ತದೆ. ಇದೇ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನೆಯ ನೂರನೇ ವರ್ಷವೂ ಆಗಿದೆ. ಒಂದು ಶತಮಾನದ ಈ ಪ್ರಯಾಣವು ಎಷ್ಟು ಅದ್ಭುತವಾಗಿದೆ, ಅಭೂತಪೂರ್ವವಾಗಿದೆ ಮತ್ತು ಅಷ್ಟೇ ಸ್ಫೂರ್ತಿದಾಯಕವಾಗಿದೆ. 100 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯಾದಾಗ, ದೇಶ ಶತಮಾನಗಳ ಗುಲಾಮಗಿರಿಯ ಸರಪಣಿಯಲ್ಲಿ ಬಂಧಿಸಲ್ಪಟ್ಟಿತ್ತು. ಶತಮಾನಗಳ ಈ ಗುಲಾಮಗಿರಿಯು ನಮ್ಮ ಸ್ವಾಭಿಮಾನ ಮತ್ತು ಆತ್ಮವಿಶ್ವಾಸಕ್ಕೆ ಆಳವಾದ ಗಾಯವುಂಟು ಮಾಡಿತ್ತು. ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆಯ ಮುಂದೆ ಸ್ವಯಂ ಗುರುತು ಇಲ್ಲದಂತಹ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿತ್ತು. ದೇಶವಾಸಿಗಳು ಕೀಳರಿಮೆಯ ಬಲಿಪಶುಗಳಾಗುತ್ತಿದ್ದರು. ಆದ್ದರಿಂದಲೇ ದೇಶದ ಸ್ವಾತಂತ್ರ್ಯದೊಂದಿಗೆ ಸೈದ್ಧಾಂತಿಕ ಗುಲಾಮಗಿರಿಯಿಂದಲೂ ಮುಕ್ತವಾಗುವುದು ಅಗತ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಪರಮಪೂಜ್ಯ ಡಾ. ಹೆಗ್ಡೇವಾರ್ ಅವರು ಈ ವಿಷಯ ಕುರಿತು ಚಿಂತಿಸಲಾರಂಭಿಸಿದರು ಮತ್ತು ಈ ಭಗೀರಥ ಕಾರ್ಯಕ್ಕಾಗಿ ಅವರು 1925 ರಲ್ಲಿ ವಿಜಯದಶಮಿಯ ಪವಿತ್ರ ಸಂದರ್ಭದಲ್ಲಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ಸ್ಥಾಪಿಸಿದರು.

ಡಾಕ್ಟರ್ ಹೆಗ್ಡೇವಾರ್ ಅವರ ನಿಧನಾನಂತರ, ಪರಮಪೂಜ್ಯ ಗುರೂಜಿ ಅವರು ರಾಷ್ಟ್ರ ಸೇವೆಯ ಈ ಮಹಾಯಜ್ಞವನ್ನು ಮುನ್ನಡೆಸಿದರು. ಪರಮ ಪೂಜ್ಯ ಗುರೂಜಿಯವರು ಹೀಗೆನ್ನುತ್ತಿದ್ದರು – “ರಾಷ್ಟ್ರಾಯ ಸ್ವಾಹಾ, ರಾಷ್ಟ್ರಾಯ ಇದಂ ನ ಮಮ” ಅಂದರೆ, ಇದು ನನ್ನದಲ್ಲ, ಇದು ರಾಷ್ಟ್ರದ್ದು ಎಂದರ್ಥ. ಇದರಲ್ಲಿ ಸ್ವಾರ್ಥವನ್ನು ತೊರೆದು ರಾಷ್ಟ್ರಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುವಂತಹ ಪ್ರೇರಣೆ ಅಡಗಿದೆ. ಗುರೂಜಿ ಗೋಲ್ವರ್ ಕರ್ ಅವರ ಈ ವಾಕ್ಯವು ಲಕ್ಷಾಂತರ ಸ್ವಯಂ ಸೇವಕರಿಗೆ ತ್ಯಾಗ ಮತ್ತು ಸೇವೆಯ ಹಾದಿ ತೋರಿಸಿತು. ತ್ಯಾಗ ಮತ್ತು ಸೇವಾ ಭಾವನೆ ಹಾಗೂ ಶಿಸ್ತಿನ ಬೋಧನೆಯ ಸಂಘದ ನಿಜವಾದ ಶಕ್ತಿಯಾಗಿದೆ. ಇಂದು RSS ನೂರು ವರ್ಷಗಳಿಂದ ಅವಿಶ್ರಾಂತವಾಗಿ, ಅವಿರತವಾಗಿ ರಾಷ್ಟ್ರದ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದ್ದರಿಂದಲೇ ದೇಶದಲ್ಲಿ ಯಾವುದೇ ನೈಸರ್ಗಿಕ ವಿಕೋಪ ಎಲ್ಲಿಯೇ ಎದುರಾಗಲಿ, RSS ನ ಸ್ವಯಂಸೇವಕರು ಎಲ್ಲರಿಗಿಂತ ಮೊದಲು ಅಲ್ಲಿಗೆ ತಲುಪುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ಲಕ್ಷಾಂತರ ಸ್ವಯಂಸೇವಕರ ಪ್ರತಿಯೊಂದು ಕೆಲಸ, ಪ್ರತಿಯೊಂದು ಪ್ರಯತ್ನವೂ ದೇಶ ಮೊದಲು – nation first ಎಂಬ ಭಾವನೆಯನ್ನು ಸದಾಕಾಲ ಅತ್ಯುತ್ತಮವಾಗಿರಿಸುತ್ತದೆ. ರಾಷ್ಟ್ರಸೇವೆಯ ಮಹಾಯಜ್ಞದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿರುವ ಪ್ರತಿಯೊಬ್ಬ ಸ್ವಯಂಸೇವಕರಿಗೂ ನನ್ನ ಶುಭಹಾರೈಕೆಗಳನ್ನು ತಿಳಿಸುತ್ತಿದ್ದೇನೆ.

Leave a Reply

Your email address will not be published.

This site uses Akismet to reduce spam. Learn how your comment data is processed.