-ಕೌಸ್ತುಭಾ ಭಾರತೀಪುರಂ,
ವಕೀಲರು, ಬೆಂಗಳೂರು
ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಚಂದನವಾಹಿನಿಯಲ್ಲಿ ಆಗ ಒಂದು ಜಾಹೀರಾತು ಬರುತ್ತಿತ್ತು. ಕೆಲವರಿಗೆ ನೆನಪಿರಲೂಬಹುದು.
Wake up kid,, ನಿನ್ನ Right ಇದು.
ಸಹಿಸಬೇಡ ಯಾರೇ ತೊಂದರೆ ಕೊಟ್ಟರೂ.
ಕಠಿಣ ಶಿಕ್ಷೆ ಅಥವಾ ತೊಂದರೆ ಕೊಟ್ಟರೆ
ತಪ್ಪು Touch ,ಕೆಟ್ಟ ಮಾತು ಆಡಿದರೆ,
ಪುಸಲಾಯಿಸಿ ಆಸೆ ತೋರಿಸಿದರೆ
Wake up
ಇದು ಅದರ ಸಾಲುಗಳಾಗಿತ್ತು. ಅದೆಷ್ಟು ಅರ್ಥಪೂರ್ಣವಾದ ಸಾಲುಗಳು. ಆಗಿನ ಮಕ್ಕಳಿಗೆ ಇದನ್ನು ಕೇಳಿ ಕೇಳಿ ಬಾಯಿಪಾಠವಾಗಿದ್ದುದಷ್ಟೇ ಅಲ್ಲ, ಎಚ್ಚರಿಕೆಯ ಗಂಟೆಯಂತಿತ್ತು.
ಭಾರತದಲ್ಲಿ ಆಗಿನ್ನೂ ಪೊಕ್ಸೊ ಕಾಯ್ದೆ ಜಾರಿಗೆ ಬಂದಿರಲಿಲ್ಲ.
ಏನಿದು ಪೋಕ್ಸೋ?
ಹದಿನೆಂಟು ವಯಸ್ಸಿಗಿಂತಲೂ ಕಡಿಮೆ ಇರುವ ಹೆಣ್ಣುಮಕ್ಕಳ ಮೇಲೆ ಜರುಗುವ ಲೈಂಗಿಕ ಮತ್ತು ಇನ್ನಿತರ ದೌರ್ಜನ್ಯಗಳನ್ನು ತಡೆಯಬಲ್ಲ ಕಾನೂನು ಈ ಪೋಕ್ಸೋ.
ಇದು ಜಾರಿಯಾದದ್ದು ಯಾವಾಗ?
ಸಂವಿಧಾನದ ೨೧ನೇ ಪರಿಚ್ಛೇದದ ಅಡಿಯಲ್ಲಿ ಮಕ್ಕಳ ಮೇಲೆ ಎಸಗಲ್ಪಡುವ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಮಸೂದೆಯನ್ನು ೨೨ ಮೇ ೨೦೧೨ರಂದು ಕಾಯಿದೆಯನ್ನಾಗಿ ಅಂಗೀಕರಿಸಲಾಯಿತು. ಇಂತಹ ಒಂದು ಕಾನೂನನ್ನು ವಿಶ್ವಸಂಸ್ಥೆಯು ೧೯೮೯ರಲ್ಲಿ ಜರುಗಿದ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿಯೇ ಅಂಗೀರಕರಿಸಿತ್ತು. ಅದು ಭಾರತದಲ್ಲಿ ಜಾರಿಗೆ ಬಂದದ್ದು ೨೦೧೨ ನೇ ಇಸವಿಯಲ್ಲಿ. ಮಕ್ಕಳನ್ನು ಪುಸಲಾಯಿಸಿಯೋ, ಬಲವಂತವಾಗಿಯೋ, ಗೋಗರೆದೋ ಲೈಂಗಿಕ ಚಟುವಟಿಕೆಗಳಲ್ಲಿ ಬಳಸಿಕೊಂಡರೆ ಅಥವಾ ಮಗುವಿನ ಅಸಹಜ/ಅಶ್ಲೀಲ ಭಂಗಿಯ ಚಿತ್ರ/ವಸ್ತುಗಳನ್ನು ನಾಶಮಾಡದೇ ಭಿತ್ತರಿಸುವುದು, ಅಂತಹ ಚಿತ್ರಗಳನ್ನು ಮತ್ತು ವಸ್ತುಗಳನ್ನು ಇತರರೊಡನೆ ಹಂಚಿಕೊಳ್ಳುವುದು. ಇಂತಹ ಚಟುವಟಿಕೆಳು ಪೋಕ್ಸೋ ಕಾಯ್ದೆ೨೦೧೨ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ.
ಈ ಕಾಯ್ದೆಯ ಪ್ರಕಾರ ‘ಮಗು’ ವೆಂದರೆ ೧೮ ವರ್ಷಕ್ಕಿಂತ ಕೆಳಗಿರುವ ವಯಸ್ಸಿನ ಯಾವುದೇ ವ್ಯಕ್ತಿ ಎಂದು. ಮಕ್ಕಳ ದೈಹಿಕ-ಮಾನಸಿಕ-ಬೌದ್ಧಿಕ-ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಗಳ ಹಿತಾಸಕ್ತಿಯ ದೃಷ್ಟಿಯಿಂದ ಸೆಕ್ಷನ್ ಪೋಕ್ಸೋ ಕಾಯ್ದೆಯ ಸೆಕ್ಷನ್ ೪,೫,೬,೯,೧೫ ಮತ್ತು ಸೆಕ್ಷನ್ ೪೨ಕ್ಕೆ ತಿದ್ದುಪಡಿಯನ್ನು ಕೂಡಾ ತರಲಾಗಿದೆ.
ಯಾರು ದೂರನ್ನು ದಾಖಲು ಮಾಡಬೇಕು?
ಮಗುವು ತಾನೇ , ಅಥವಾ ಪೋಷಕರು, ಸಂಬಂಧಿಕರ ಮುಖೇನ ದೂರನ್ನ ದಾಖಲಿಸಬಹುದು.. ಇದಕ್ಕೆ ಸಮಯದ ಮಿತಜ ಇರುವುದಿಲ್ಲ.
ಪೋಕ್ಸೋ ಕಾಯ್ದೆಯಲ್ಲಿ ಸಂಬಂಧಿಸಿದ ತನಿಖೆಯಾಗುವ ತನಿಖಾಧಿಕಾರಿ ಅಥವಾ ಸಹಾಯಕರು ಸಮವಸ್ತ್ರವನ್ನು ಧರಿಸುವಂತಿಲ್ಲ. ಮಗುವಿನ ಹೇಳಿಕೆಯನ್ನು ಪಡೆಯಲು ಮಗುವಿನ ವಾಸಸ್ಥಳಕ್ಕೆ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ನೇಮಿಸಲಾಗುವುದು. ಮುಖ್ಯವಾಗಿ ಪರೀಕ್ಷೆಯ ಸಮಯದಲ್ಲಿ ಆರೋಪಿಗಳು ಮಗುವಿನ ಸಂಪರ್ಕವನ್ನು ಸಾಧಿಸದಂತೆ ನೋಡಿಕೊಳ್ಬೇಕು.ಮಗುವಿನ ಗುರುತನ್ನು ಗೌಪ್ಯವಾಗಿರಸಬೇಕು. ರಾತ್ರಿಯ ವೇಳೆಯಲ್ಲಿ ಮಗುವನ್ನು ಠಾಣೆಯಲ್ಲಿ ಬಂಧಿಸಿಟ್ಟುಕೊಳ್ಳುವಂತಿಲ್ಲ. ಮಗುವಿನ ಹೇಳಿಕೆಯನ್ನು ಪಡೆದುಕೊಳ್ಳುವಾಗ ಮಗುವಿನ ನಂಬಿಕೆಯಿರುವರೊಬ್ಬರ ಉಪಸ್ಥಿತಿಯಿರಬೇಕು. ಹೇಳಿಕೆಯನ್ನು ಇ- ಮಾಧ್ಯಮಗಳ ಮೂಲಕ ಅಂದರೆ ಆಡಿಯೋ, ವಿಡಿಯೋದಂತಹ ಅಂದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ದಾಖಲಿಸಿಕೊಳ್ಳಬೇಕು. ಮಗುವಿನ ವಿಚಾರಣಾ ಅವಧಿಯಲ್ಲಿ ಸೂಕ್ತ ವಿರಾಮ ಹಾಗೂ ಅನುಕೂಲಕರ ವಾತಾವರಣವನ್ನು ಕಲ್ಪಿಸಿಕೊಡಬೇಕು.
ಈ ಕಾಯ್ದೆಯಲ್ಲಿ ಶಿಕ್ಷೆ ಹೇಗಿರುತ್ತದೆ?
16-18 ವಯಸ್ಸಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವಾದರೆ ಕನಿಷ್ಟ 10 ವರ್ಷ ಸೆರೆವಾಸ, ಜೀವಾವಧಿ ಶಿಕ್ಷೆ, ದಂಡ ಸಮೇತ ಜೀವಾವಧಿ ಶಿಕ್ಷೆ ಇರುತ್ತದೆ. 16 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಅಪರಾಧಕ್ಕೆ ಕನಿಷ್ಠ 2೦ ವರ್ಷಗಳ ಸೆರೆವಾಸ, ಜೀವನದ ಉಳಿದ ಆಯುಷ್ಯಕ್ಕೆ ಜೈಲುಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದು. ಭಾರತೀಯ ದಂಡಸAಹಿತೆ ೩೫೪ ಮತ್ತು ಪೋಕ್ಸೋ ಕಾಯ್ದೆ ಸೆಕ್ಷನ್ 8 ನ್ನು ಹೊರತುಪಡಿಸಿ ಉಳಿದೆಲ್ಲಾ ಸೆಕ್ಷನ್ಗಳ ಅಡಿಯಲ್ಲಿ ಜಾಮೀನು ಸಿಗಲು ಸಾಧ್ಯವಾದರೆ ರಾಜೀ ಆಧಾರದ ಮೇಲೆ ಈ ಕೇಸನ್ನು ನ್ನು ರದ್ದುಪಡಿಸಲು ಸಾಧ್ಯವೇ ಇಲ್ಲ. ಉಚ್ಛನ್ಯಾಯಾಲಯಕ್ಕಿರುವ ರದ್ದುಮಾಡುವ ಅಧಿಕಾರವಂತೂ ಇದ್ದೇ ಇರುತ್ತದೆ. ಅದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿರುವಂತದ್ದಾಗಿರುತ್ತದೆ.
ಪ್ರಭಾವೀ ಜನರ ಪ್ರಭಾವದಿಂದ ತಪ್ಪಿತಸ್ಥರು ನುಣುಚಿಕೊಳ್ಳದಂತೆ ನೋಡಿಕೊಳ್ಳಬೇಕಾದ ,ತನ್ಮೂಲಕ ಸಮಾಜಕ್ಕೆ ಪಾಠವನ್ನು ಹೇಳಿ ಹೆಣ್ಣುಮಗುವಿನ ರಕ್ಷಣೆಗೆ ಮುಂದಾಗಬೇಕಾಗಿರುವುದು ನ್ಯಾಯಾಂಗಕ್ಕೂ ನ್ಯಾಯಯುತ ಸಮಾಜಕ್ಕೂ ಇರಬೇಕಾದ ಜವಾಬ್ದಾರಿಯಾಗಿರುತ್ತದೆ. ಸಾಮಾನ್ಯ ಜನರ ಸಮಾಜದ ರಕ್ಷಣೆಗೆ ಒಕ್ಕೊರಳಿನ ಕರೆ ಇದ್ದೇ ಅವಶ್ಯವಾಗಿರುತ್ತದೆ.