- ಶ್ರೀ ಪ್ರದೀಪ, ಪ್ರಾಂತ ಪ್ರಚಾರ ಪ್ರಮುಖರು
M. M. ದಿನೇಶ್ ಪೈ ಅಂದರೆ ಹೆಚ್ಚಿನವರಿಗೆ ಗೊತ್ತಾಗುವುದಿಲ್ಲ. ಅವರು ಎಲ್ಲರಿಗೂ ಪೈ ಮಾಮ್. ಪ್ರೀತಿಯ ಪೈ ಮಾಮ್. George MacDonald ಹೇಳುತ್ತಾನೆ – It is a greater compliment to be trusted than to be loved (ವಿಶ್ವಾಸ ಪಾತ್ರನಾಗುವುದು ಪ್ರೀತಿ ಪಾತ್ರನಾಗುವುದಕ್ಕಿಂತ ದೊಡ್ಡ ಗೌರವ). ಪೈ ಮಾಮ್ ಎಲ್ಲರಿಗೂ ಪ್ರೀತಿ ಪಾತ್ರರೂ ಹೌದು, ವಿಶ್ವಾಸ ಪಾತ್ರರೂ ಹೌದು.
ಯಾವಾಗಲೂ ನಿಧಾನವಾದ, ಹದವಾದ ವೇಗದಲ್ಲಿ ಇರುತ್ತಿದ್ದ ಪೈಗಳು ಹೊರಡಲು ಅದೇಕೋ ಅವಸರಪಟ್ಟರು.
ದಿನೇಶ್ ಪೈ ಅವರ ಪೂರ್ವಿಕರು ಮೂಲತಃ ದಕ್ಷಿಣ ಕನ್ನಡದ ಮಿಜಾರಿನವರು. ಆದರೆ ಪೈಗಳು ಹುಟ್ಟಿ ಬೆಳೆದಿದ್ದೆಲ್ಲವೂ ಶಿವಮೊಗ್ಗದಲ್ಲಿ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬ. ಪತ್ನಿ ಶ್ರೀಮತಿ ದಿವ್ಯಾ, ಮಗ ರಾಮನಾಥ ಜೊತೆಗೆ ತಮ್ಮನ ಕುಟುಂಬ. ಒಟ್ಟಿಗೆ ಇದ್ದ ಮನೆ. ಮನೆಯಲ್ಲಿ ಸದಾಕಾಲವೂ ಸಹಜವಾದ, ಅಹ್ಲಾದಕರ ವಾತಾವರಣ.
ಪೈ ಮಾಮ್ ಬಾಲ್ಯದಲ್ಲೇ ಸಂಘದ ಸಂಪರ್ಕಕ್ಕೆ ಬಂದರವರು. ಅವರ ಸಂಘ ಜೀವನದ ಯಾತ್ರೆಯು ಮೊದಲುಗೊಂಡಿದ್ದು ನರೇಂದ್ರ ಶಾಖೆಯಿಂದ. ವಿದ್ಯಾಭ್ಯಾಸದ ನಂತರ LIC ಯಲ್ಲಿ ಉದ್ಯೋಗ ಸಿಕ್ಕಿತು. ಕೆಲವು ಸಮಯ ಅರಸೀಕೆರೆಯಲ್ಲಿ ಕೆಲಸ ಮಾಡಿ ಶಿವಮೊಗ್ಗಕ್ಕೆ ಮರಳಿದ ದಿನೇಶ ಪೈ ಮುಂದಿನ ಜೀವನವನ್ನು ಶಿವಮೊಗ್ಗದಲ್ಲೇ ಕಳೆದರು. ವಿವಿಧ ಹಂತಗಳಲ್ಲಿ ಸಂಘದ ಜವಾಬ್ದಾರಿ ಸ್ವೀಕರಿಸಿ ಯಶಸ್ವಿಯಾಗಿ ನಿರ್ವಹಿಸಿದರು.
ಶಿವಮೊಗ್ಗಕ್ಕೆ ಸುದೀರ್ಘ ಕಾಲ ನಗರ ಕಾರ್ಯವಾಹರಾಗಿದ್ದವರು ಪ್ರಾಯಶಃ ಪೈಗಳೇ ಇರಬಹುದು. ಇವರ ದೀರ್ಘ ಕಾಲದ ಒಡನಾಡಿ ಕೂ. ನಂ. ರವಿ. ಇವರಿಬ್ಬರೂ ಸೇರಿ ಶಿವಮೊಗ್ಗದಲ್ಲಿ ಸಂಘದ ತೇರನ್ನು ಎಳೆದ ಪರಿ ಅನನ್ಯ. ಸೂರ್ಯೋದಯದಲ್ಲಿ ದಿನೇಶ, ಸೂರ್ಯಾಸ್ತದಲ್ಲಿ ರವಿ ಸಂಘದ ರಥವನ್ನು ಎಳೆಯುತ್ತಾರೆ ಎಂಬುದು ಸಮಾನ್ಯವಾದ ಮಾತು. ಇವರಿಗೆ ಚಿತ್ರಗುಪ್ತನಂತೆ ಹೆಗೆಲೆಣೆಯಾಗಿ ನಿಂತಿದ್ದು ಮಹದೇವ್ ಶಾಖೆಯ ಶಿವಾನಂದ (ಶಿವಾನಂದರ ಅಕ್ಷರ ತುಂಬಾ ಸೊಗಸು), ವ್ಯವಸ್ಥೆಯ ಕೆಲಸ ನಿಭಾಯಿಸಲು ಸಚ್ಚಿ, ಮುದ್ರಣ ಕಾರ್ಯಕ್ಕೆ ಶ್ರೀನಿವಾಸರ ಚಿತ್ರಕೂಟ – ಇವು ಪೈ ಮಾಮ್ ನಿರ್ಮಿಸಿಕೊಂಡಿದ್ದ ಪುಟ್ಟ ಸೈನ್ಯ.
ಎಡಗಡೆಯ ಹೆಗಲಿಗೆ ಚೀಲ ಏರಿಸಿಕೊಂಡು ಬೆಳಿಗ್ಗೆ ಬೈಕ್ ಹತ್ತಿದರೆ ಮತ್ತೆ ಮನೆಗೆ ಹೋಗುವುದು ಸುಮಾರು 9:30 ಕ್ಕೆ. 10 ಗಂಟೆಗೆ ಆಫೀಸಿನಲ್ಲಿ ಇರಬೇಕು. ಪೈಗಳು ಧಾವಂತದಲ್ಲಿ ಇರುವ ಯಾವುದಾದರೂ ಸಮಯ ಅಂತ ಇದ್ದರೆ ಅದು ಬೆಳಿಗ್ಗೆ 9:30 – 10. ಇಲ್ಲವಾದರೆ ಅವರು ಅವರದ್ದೇ ಹದವಾದ ವೇಗದಲ್ಲಿ ಕೆಲಸ ಮಾಡುವವರು. ಸಂಜೆ ಆಫೀಸಿನ ನಂತರ ಹೊರಟರೆ ಮತ್ತೆ ಮನೆ ತಲುಪಲು ಇಂತಿಷ್ಟೇ ಸಮಯ ಎಂಬುದಿಲ್ಲ. ಈ ರೀತಿ ಸಮಯ ಕೊಟ್ಟು ಕೆಲಸ ಮಾಡಿದ್ದು ನಾಲ್ಕು ದಶಕಕ್ಕೂ ಮಿಕ್ಕ ಸಮಯ. ನಿರಂತರ, ಸತತ (Consistent).
ಪೈಮಾಮ್ ನನಗೆ ಮೊದಲು ಪರಿಚಯ ಆಗಿದ್ದು 1996 ನೇ ಇಸವಿಯ ಸಂಘ ಶಿಕ್ಷಾ ವರ್ಗದಲ್ಲಿ. ಆಲ್ಲಿ ಅವರು ರಸಪ್ರಶ್ನೆ ನಡೆಸಲು ಬಂದಿದ್ದರು. ಅಂಕಗಳನ್ನು ದಾಖಲಿಸಲು ನಾನು ಅವರ ಜೊತೆಗಿದ್ದೆ. ಅವರು ರಸಪ್ರಶ್ನೆಯನ್ನು ನಿರ್ವಹಿಸಿದ ರೀತಿ, ನಿಯಮಗಳನ್ನು ಹೊಸೆದಿದ್ದ ತಾಂತ್ರಿಕ ವಿವರಗಳು (Technical details) ‘ವಾಹ್’ ಎನ್ನುವಂತಿತ್ತು. ಈಗಿನ ಭಾಷೆಯಲ್ಲಿ ಹೇಳುವುದಾದರೆ ಅವರು ‘Pro’ level ನಲ್ಲಿ ಇದ್ದವರು.
ಪೈಗಳ ಕೆಲಸದ ಶೈಲಿಯಲ್ಲಿ ಗುಣಾತ್ಮಕತೆ, ನಿಖರತೆ ಮತ್ತು ವಿವರಗಳು ಕೇಂದ್ರ ಸ್ಥಾನ ಪಡೆದುಕೊಂಡಿದ್ದವು. ಅವರೇ ನಿಭಾಯಿಸುತ್ತಿದ್ದ ಯಾವುದೇ ಕೆಲಸದಲ್ಲೂ ಈ ಮೂರು ಸಂಗತಿಗಳು ಕಾಣಲು ಸಿಗುತ್ತಿತ್ತು. ಅವರ ಬೈಠಕ್ ಪುಸ್ತಕ ‘ವಿವರ’ ಎಂಬುದಕ್ಕೆ ಮಾದರಿ. ಅಷ್ಟು ವಿವರಗಳು ಅದರಲ್ಲಿ ಸಿಗುತ್ತವೆ.
LIC ಯಲ್ಲೂ ಅವರು ತಮ್ಮ ಕೆಲಸದ ಸೂಕ್ಷ್ಮತೆ ಮತ್ತು ಗುಣಾತ್ಮಕತೆಗೆ ಹೆಸರಾದವರು. ಹೌದು, ಹೆಸರಾದವರು. ಏಕೆಂದರೆ ಅವರಿಗೆ ಅತ್ಯುತ್ತಮ ನೌಕರ ಎಂಬ ಪ್ರಶಸ್ತಿಯೂ ಬಂದಿದೆ. LIC ಯ ಬೇರೆ ಬೇರೆ ಶಾಖೆಗಳಲ್ಲಿ ಕೆಲಸ ಮಾಡುವವರು ತಾಂತ್ರಿಕ ವಿವರಗಳು ಜಟಿಲವಾದಾಗ ಪರಿಹಾರಕ್ಕಾಗಿ ಪೈಗಳನ್ನು ಸಂಪರ್ಕಿಸುತ್ತಿದ್ದರು. He was a ‘Go to’ person. A problem solver. ಗೊಣಗಾಡುವುದು, ದೂರುವುದು ಅವರಿಗೆ ಗೊತ್ತಿಲ್ಲದ ವಿಷಯ.
ಕೆಲವೊಮ್ಮೆ ವಿನೋದದಿಂದ Pai is in the details ಎಂದರೆ ಅದನ್ನು ಅವರು ಆನಂದಿಸುತ್ತಿದ್ದರು. ಅದು ಅವರ ವ್ಯಕ್ತಿತ್ವದ ಮತ್ತೊಂದು ವಿಶೇಷ. ಎಲ್ಲವನ್ನೂ ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳುತ್ತಿದ್ದರು. ಎಂತಹ ಸಂದರ್ಭದಲ್ಲೂ ಆಯ ತಪ್ಪದ ತಿತೀಕ್ಷೆಯನ್ನು ದಕ್ಕಿಸಿಕೊಂಡಿದ್ದರು. ಹಾಗಾಗಿ ಪೈಮಾಮ್ ದುಡುಕಿದ್ದಾಗಲಿ, ಉದ್ವಿಗ್ನರಾಗಿ ವ್ಯವಹರಿಸಿದ್ದನ್ನು ಯಾರೂ ನೋಡಿರಲಿಕ್ಕಿಲ್ಲ.
ಹೊಸತನಕ್ಕೆ ಅವರದ್ದು ಸದಾ ತೆರೆದ ಮನಸ್ಸು. ಪ್ರಯೋಗಶೀಲತೆಗೆ ಉತ್ಸಾಹ ತೋರುತ್ತಿದ್ದ ಪೈಮಾಮ್ ಸ್ವತಃ ಹಲವು ಪ್ರಯೋಗಗಳನ್ನು ಮಾಡಿದವರು. ಕೊರತೆಯನ್ನು ಗುರುತಿಸಿ ಅದಕ್ಕೆ ತಮ್ಮದೇ ಶೈಲಿಯ ಪರಿಹಾರವನ್ನು ಹುಡುಕುತ್ತಿದ್ದರು. ಇತ್ತೀಚಿಗೆ ಬಿಡುಗಡೆಯಾದ ‘ಧ್ಯೇಯ ಕಾರಂಜಿ’ ಪುಸ್ತಕ ಇರಬಹುದು, ಹಾಡುಗಳಿಗೆ ಮೀಸಲಾದ website ಇರಬಹುದು – ಇದೆಲ್ಲದರಲ್ಲಿ ಅವರದ್ದು ಪ್ರಧಾನ ಪರಿಶ್ರಮ.
ಪ್ರಯೋಗಶೀಲ ಹೌದು. ಆದರೆ ಸಾಹಸಿಗ ಅಲ್ಲ (Creative, not adventurous). ಸಂಘಟನೆ ಕಟ್ಟಲು ಸಾಹಸಿಗ ಪ್ರವೃತ್ತಿ ಹೇಗೆ ಅಗತ್ಯವೋ ಹಾಗೆಯೇ ಸ್ಥಿರತೆಯೂ ಅಗತ್ಯವೇ. ಪೈ ಮಾಮ್ ಕಾರ್ಯಕ್ಕೆ ಸ್ಥಿರತೆಯನ್ನು ಖಾತ್ರಿಪಡಿಸುತ್ತಿದ್ದರು. (He ensured stability of the organization). ಕಾರ್ಯಕರ್ತರ ನಡುವಿನ ಬೆಸುಗೆಯಾಗಿ, ಪದ್ಧತಿಗಳನ್ನು ಕಲಿಸುವ ಮೇಷ್ರಾಗಿ ಪೈಗಳು ಹೆಚ್ಚು ಸಿಗುತ್ತಿದ್ದರು. ಅವರು ಒಂದು ಸಭೆಯಲ್ಲೋ, ಅನೌಪಚಾರಿಕ ಗುಂಪಿನಲ್ಲೋ ಇದ್ದಾರೆಂದರೆ ಅಲ್ಲಿ ಲವಲವಿಕೆಯ ವಾತಾವರಣ ಮೂಡುತ್ತಿದ್ದದ್ದು ಎಲ್ಲರ ಅನುಭವ. ಅವರಿದ್ದ ಕಡೆಯಲ್ಲಿ ಬಿಗುವಿನ ವಾತಾವರಣ ಇರುತ್ತಿರಲಿಲ್ಲ. His was ‘calming presence’.
ಪೈ ಮಾಮ್ ಗೆ ಹತ್ತಿರವಾದಷ್ಟೂ ಅವರು ತೆರೆದುಕೊಳ್ಳುತ್ತಿದ್ದ ರೀತಿ ಅಪ್ಯಾಯವಾದದ್ದು. ಪುಟ್ಟ ಮಗುವೇ ಆಗಿಬಿಡುತ್ತಿದ್ದರು. ಅಂತಹ ಪರಿಶುದ್ಧತೆ. 2003 ರಲ್ಲಿ ನಾನು ಶಿವಮೊಗ್ಗ ನಗರದ ಪ್ರಚಾರಕನಾಗಿದ್ದಾಗ, ಯಾವ ಸಿನಿಮಾ ನೋಡಿದ್ರಿ ಪೈ ಮಾಮ್? ಎಂದು ಕೇಳಿದ್ದಕ್ಕೆ, ಕಳೆದ ಸುಮಾರು ಹತ್ತು ವರ್ಷಗಳಿಂದ ಯಾವುದೇ ಸಿನಿಮಾ ನೋಡಿಲ್ಲ ಎಂದರು. ಅದಾದ ಕೆಲವೇ ದಿನಗಳಲ್ಲಿ “ಜಜಂತರಂ ಮಮಂತರಂ” ಎಂಬ ಮಕ್ಕಳ ಸಿನಿಮಾವನ್ನು ಕುಟುಂಬದ ಜೊತೆ ನೋಡಿ ಬಂದು ಅದರ ಕಥೆಯನ್ನು ಹೇಳಿದರು. ಮಧುಕೃಪಾದಲ್ಲಿ ಆರಂಭವಾಗಿರುವ ಪುಟ್ಟ ಗ್ರಂಥಾಲಯವನ್ನು ಬಂದವರಿಗೆಲ್ಲ ತೋರಿಸುವ ಅವರ ಮಗುವಿನಂತಹ ಉತ್ಸಾಹಕ್ಕೆ ಸಾಟಿಯಿಲ್ಲ. ಆ ಗ್ರಂಥಾಲಯವನ್ನು ರೂಪಿಸಿರುವ ರೀತಿ, ಪುಸ್ತಕಗಳ ಜೋಡಣೆ, indexing ಇದೆಲ್ಲವೂ ಅವರ ತಿತೀಕ್ಷೆ ಮತ್ತು ನಿಖರತೆಯ ಕಾರ್ಯಶೈಲಿಗೆ ಜೀವಂತ ಉದಾಹರಣೆ.
ಸೆಪ್ಟೆಂಬರ್ 28 ರಂದು ಅವರೇ ಕರೆ ಮಾಡಿ ಸುಮಾರು ಹೊತ್ತು ಮಾತಾಡಿದರು. ತಮ್ಮ ಅನಾರೋಗ್ಯದ ವಿವರಗಳನ್ನು ತಿಳಿಸಿದರು. ಅವರ ಆರೋಗ್ಯದ ಸ್ಥಿತಿ, ಸಂಘಟನೆಯ ಹೊಣೆಗಾರಿಕೆ ಇತ್ಯಾದಿಗಳನ್ನು ಚರ್ಚಿಸಿದರು. ಅವರ ಕುಟುಂಬದ ಗಣೇಶನ ಹಬ್ಬ ಅವರ ಮನೆಯಲ್ಲೇ ನಡೆಯುವುದು. ಈ ವರ್ಷದ ಹಬ್ಬ ಅವರಿಗೆ ತುಂಬಾ ಸಮಾಧಾನ ತಂದಿತ್ತು. ಅದನ್ನವರು ದೂರವಾಣಿಯಲ್ಲಿ ಹೇಳಿದರು – “ಪ್ರದೀಪೂ ಈ ವರ್ಷ ಹಬ್ಬ ಬಹಳ ಚನ್ನಾಗಿ ಆಯ್ತು. ಮನಸ್ಸಿಗೆ ಸಮಾಧಾನ ಆಯ್ತು” .. ಪೈಮಾಮ್ ತೃಪ್ತಭಾವದಲ್ಲಿದ್ದರು.
ಕೆಲವು ವರ್ಷಗಳ ಹಿಂದೆ ಮತ್ತೂರಿನಲ್ಲಿ ನಡೆದ ಪ್ರಾಥಮಿಕ ಶಿಕ್ಷಾ ವರ್ಗ ಮುಗಿಸಿ ಎಲ್ಲರೂ ಹೊರಡುವುದರಲ್ಲಿದ್ದಾಗ ಅವರೇ ಒಂದು ಕಪ್ಪು ಬೋರ್ಡ್ ಮೇಲೆ – “ಹೋಗಿಬನ್ನಿ, ಕ್ಷೇತ್ರದಲ್ಲಿ ಸಕ್ರಿಯರಾಗಿರಿ” ಎಂದು ಬರೆದಿದ್ದರು. ಇಂದು ಹೋಗಿಬನ್ನಿ ಪೈ ಮಾಮ್ ಎಂದು ಹೇಳಲು ಆಗುತ್ತಿಲ್ಲ. ಎಂದೂ ಇಲ್ಲದ ಧಾವಂತ ಇವತ್ತು ಯಾಕೆ?
ಪೈ ಮಾಮ್ ಅವರದ್ದು ಒಂದು ಮೌಲ್ಯಯುತ ಬದುಕು.
ಪೈ ಗೆ ಒಂದು ಬೆಲೆಯಿದೆ. ನಮ್ಮ ಪೈ ಮಾಮ್ – ಅಮೂಲ್ಯ.
Pai has a value. Pai mam is invaluable.