By Pratap Simha (article published in Kannada Prabha dated March 08, 2014)

ಆಕೆ ಮೂಲತಃ ಉಡುಪಿಯಾಕೆ. ಸಂಸ್ಕೃತ ಹಾಗೂ ವೇದಾಧ್ಯಯನ ಮಾಡುತ್ತಿದ್ದಳು. ನನ್ನ ಕಾಲಂನ ಕಾಯಂ ಓದುಗಳು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಿಯಲು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಮೈಲಾಪುರಿಗೆ ಹೋಗಿದ್ದಳು. ಅದು 2006. ಅಲ್ಲಿಗೆ ಹೋದ ಹೊಸದರಲ್ಲೂ ಪ್ರತಿ ಶನಿವಾರ ನನಗೆ ಕರೆ ಮಾಡಿ, ಲೇಖನದ ಪಿಡಿಎಫ್ ತರಿಸಿಕೊಂಡು ಓದುತ್ತಿದ್ದಳು. ಹೀಗೇ ವರ್ಷ ಕಳೆಯಿತು. ಅಚಾನಕ್ ಅವಳಿಂದ ಕರೆ ಬರುವುದೇ ನಿಂತುಬಿಟ್ಟಿತು. ಎರಡೂವರೆ ವರ್ಷ ನಾಪತ್ತೆ. “ಕೂಡಲೇ ನಿನ್ನ ನಂಬರ್ ಕಳುಹಿಸು” ಎಂದು ಮತ್ತೆ ಅವಳಿಂದ ಈ-ಮೇಲ್ ಬಂದಿದ್ದು 2009ರಲ್ಲಿ. ಕಳುಹಿಸಿದ ಕೂಡಲೇ ಕರೆಯೂ ಬಂತು, ಅವಳ ಕಥೆಯೂ ತೆರೆದುಕೊಳ್ಳುತ್ತಾ ಹೋಯಿತು.

8-Edi1

ಆಕೆ ಹಿಂದೂಸ್ಥಾನಿ ಸಂಗೀತ ಕಲಿಯಲು ಹೋಗಿದ್ದ ಗುರುಗಳ ಬಳಿ ಕೇರಳದ ಒಬ್ಬ ಯುವಕನಿದ್ದ. ಅವನು ಕ್ರಿಶ್ಚಿಯನ್. ಸಮಾನ ಆಸಕ್ತಿ, ಅಭಿರುಚಿ ಎರಡೂ ಮನಸ್ಸುಗಳನ್ನು ಒಂದಾಗಿಸಿದ್ದವು. ಸಂಗೀತ ಕಲಿಕೆಯ ನಡುವೆಯೇ ಪ್ರೇಮಾಂಕುರವಾಗಿ ವಿವಾಹವೂ ಆಗಿದ್ದರು. ಕೇರಳಕ್ಕೆ ಸ್ಥಳಾಂತರಗೊಂಡಿದ್ದರು. ನನಗೆ ಕರೆ ಮಾಡಿದಾಗ ಅವಳಿಗೆ 2 ವರ್ಷದ ಮಗಳಿದ್ದಳು. ಬೆಂಗಳೂರಿನಲ್ಲಿರುವ ಸೋದರತ್ತೆಯ ಮನೆಯಲ್ಲಿದ್ದಳು. ಇನ್ನೆಷ್ಟು ದಿನ ಇಲ್ಲೇ ಇರ್ತೀಯಾ ಎಂದು ಕೇಳಿದರೆ ಗೊತ್ತಿಲ್ಲ ಎಂದಳು. ಅಂದ್ರೇ… ಎಂದು ಮರುಪ್ರಶ್ನೆ ಹಾಕಿದಾಗ ಪ್ರೇಮ ಹಾಗೂ ವಿವಾಹದ ನಂತರದ ಅಧ್ಯಾಯದ ಪುಟಗಳು ತೆರೆದುಕೊಂಡವು. “ಗಂಡ ಒಳ್ಳೆಯವನೇ, ಆದರೆ ಮನೆಯ ವಾತಾವರಣಕ್ಕೆ ಹೊಂದಿಕೋ ಎನ್ನುತ್ತಾನೆ. ನನ್ನ ಅತ್ತೆ ಮಾವ ಭಾನುವಾರ ಬಂತೆಂದರೆ ಚರ್ಚಿಗೆ ಬಾ ಎಂದು ನನ್ನ ಮೇಲೆ ಒತ್ತಡ ಹೇರುತ್ತಾರೆ. ಒಂದು ವೇಳೆ ನಿರಾಕರಿಸಿದರೆ ಮುಂದಿನ ಭಾನುವಾರ ಬರುವವರೆಗೂ ಮನೆಯಲ್ಲಿ ಬೈಗುಳಗಳಿಗೆ ತುತ್ತಾಗಬೇಕು. ನನ್ನನ್ನು ಬೈಯಲು ನೆಪ ಹುಡುಕುತ್ತಿರುತ್ತಾರೆ. ನನ್ನ ಮಗಳಿಗೆ ಎರಡು ವರ್ಷ. ಅವಳಿಗೆ ನಾನ್ವೆಜ್ ತಿನ್ನಿಸಬೇಡಿ ಎಂದು ಗೋಗರೆದರೂ ಹಠಹಿಡಿದು ತಿನ್ನಿಸುತ್ತಾರೆ. ಮನೆಯಲ್ಲಿ ನಾನ್ವೆಜ್ ಮಾಡಿದಾಗ ನಾನು ಪ್ರತ್ಯೇಕವಾಗಿ ಅಡುಗೆ ಮಾಡಿಕೊಂಡರೆ ಅದಕ್ಕೂ ಕೊಂಕು ಮಾತು ಕೇಳಬೇಕು. ನಾನೂ ಎಷ್ಟು ಅಂತ ಸಹಿಸಿಕೊಳ್ಳಲಿ? ನನ್ನ ಗಂಡನನ್ನು ಪ್ರೀತಿಸಿದ ಮಾತ್ರಕ್ಕೆ ಅವನ ಧರ್ಮ, ಆಹಾರಪದ್ಧತಿಯನ್ನೂ ನಾನು ಅಳವಡಿಸಿಕೊಳ್ಳಬೇಕಾ? ನನ್ನ ಮಗಳು ತುಂಬಾ ಚಿಕ್ಕವಳಾದರೂ ಅವಳಲ್ಲಿ ಸಂಗೀತದ ಆಸಕ್ತಿ ಬಹಳವಾಗಿರುವುದು ಕಾಣಿಸುತ್ತದೆ. ಅವಳಿಗೆ ನಮ್ಮ ಸಂಸ್ಕಾರ ಕೊಟ್ಟು ಬೆಳೆಸುವ ಆಸೆ ನನ್ನದು. ನನ್ನ ಮಗಳಿಗೆ ನಾನ್ವೆಜ್ ತಿನ್ನಿಸುವುದು ನನಗಿಷ್ಟವಿಲ್ಲ. ನನ್ನ ಮಗಳನ್ನು ನನಗಿಷ್ಟ ಬಂದಂತೆ ಬೆಳೆಸುವ ಹಕ್ಕು ತಾಯಿಯಾದ ನನಗಿಲ್ಲವೆ? ಅದಕ್ಕೇ ಮಗಳನ್ನು ಕರೆದುಕೊಂಡು ಬೆಂಗಳೂರಿನಲ್ಲಿರುವ ಅತ್ತೆ ಮನೆಗೆ ಬಂದಿದ್ದೇನೆ. ವಾಪಸ್ ಹೋಗುವ ಮನಸ್ಸಿಲ್ಲ” ಎಂದಳು. ಮುಂದುವರಿದು, “ಇಷ್ಟೇ ಅಲ್ಲ, ಕೇರಳದಲ್ಲಿ ಎಂಥಾ ಮೋಸ ನಡೆಯುತ್ತಿದೆ ಗೊತ್ತಾ,  ‘ಕ್ರಿಶ್ಚಿಯನ್ ಕ್ಲಾಸಿಕಲ್ ಮ್ಯೂಸಿಕ್‌’  ಎಂಬ ಸ್ಪರ್ಧೆ ನಡೆಸುತ್ತಿದ್ದಾರೆ! ನಮ್ಮ ಧರ್ಮ, ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಶಾಸ್ತ್ರೀಯ ಸಂಗೀತವನ್ನು ತಮ್ಮದಾಗಿ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸ್ಪರ್ಧೆಗಳಿಗೆ ನನ್ನನ್ನೇ ಜಡ್ಜ್ ಆಗಿ ಕೂರಿಸಿದ್ದರು. ದಯವಿಟ್ಟು ಈ ವಿಚಾರವಾಗಿ ಬರೀ…” ಎಂದಳು.

ಏಕೆ ಸುಮಾರು ಐದು ವರ್ಷಗಳ ಬಳಿಕ ಈ ವಿಚಾರವನ್ನು ಪ್ರಸ್ತಾಪಿಸಲಾಗುತ್ತಿದೆಯೆಂದರೆ…..

ಕಳೆದ ಶನಿವಾರ(ಮಾರ್ಚ್ 1) ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಬಿಶಪ್ ಕಾಟನ್ ಶಾಲೆಯಲ್ಲಿ ಸಂಜೆ 6 ಗಂಟೆಗೆ ಖ್ಯಾತ ಭರತನಾಟ್ಯ ಕಲಾವಿದೆ ಡಾ. ಕೆ.ಎಸ್. ಪವಿತ್ರಾ ಅವರ ಕಾರ್ಯಕ್ರಮವಿತ್ತು. ಅದನ್ನು ಆಯೋಜಿಸಿದ್ದು “ಕ್ರಿಸ್ತಕಾವ್ಯ ‘ಭರತನಾಟ್ಯ’ ಬಳಗ”!! ಡಾ. ಪವಿತ್ರಾ ಹಾಗೂ 20 ಸಹ ಕಲಾವಿದೆಯರು ಕ್ರಿಸ್ತನ ಜೀವನವನ್ನು ಭರತನಾಟ್ಯದ ಮೂಲಕ ಬಿಂಬಿಸುವ ಕಾರ್ಯಕ್ರಮ ಅದಾಗಿತ್ತು! ಈ ಕಾರ್ಯಕ್ರಮ ಈಗಾಗಲೇ ರಾಜ್ಯದ ಇತರೆಡೆಗಳಲ್ಲಿ ಪ್ರದರ್ಶನ ಕಂಡಿದೆ ಹಾಗೂ ಇನ್ನೂ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇರಾದೆ ಇವರಿಗಿದೆ. ಈ ಕಲಾವಿದರು ದುಡ್ಡಿಗಾಗಿ ಏನೂ ಮಾಡಬಹುದು, ಭರತನಾಟ್ಯದ ಹಿನ್ನೆಲೆ ಮರೆತು ಆತ್ಮಸಾಕ್ಷಿಯ ಜತೆ ರಾಜೀ ಮಾಡಿಕೊಳ್ಳಬಹುದು. ಆದರೆ ಪ್ರಶ್ನೆಯೇನೆಂದರೆ…

ಎಲ್ಲಿಯ ಕ್ರಿಸ್ತ, ಎಲ್ಲಿಯ ಭರತನಾಟ್ಯ?!

ನಕಲು ಮಾಡಲು ಭರತನಾಟ್ಯವೆಂಬುದು ಕೇವಲ ಒಂದು ನೃತ್ಯ ಪ್ರಾಕಾರವಲ್ಲ. ಅದಕ್ಕೊಂದು ಹಿನ್ನೆಲೆಯಿದೆ, ಅಲ್ಲೊಂದು ಶ್ರದ್ಧೆಯಿದೆ, ಅದು ಹಿಂದು ಸಂಸ್ಕೃತಿ ಮಾತ್ರವಲ್ಲ, ಹಿಂದು ಧರ್ಮವೆಂಬ ವಿಶ್ವಾಸದ, ದೈವತ್ವದ ಒಂದು ಭಾಗ. ನಮ್ಮ ಧರ್ಮದಿಂದ ಭರತನಾಟ್ಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಭರತನಾಟ್ಯದ ರಚನೆ ಮತ್ತು ಬೆಳವಣಿಗೆಯ ಕುರಿತು ತಿಳಿದುಕೊಳ್ಳಬೇಕಾದರೆ, ಭರತ ಮುನಿಗಳು ರಚಿಸಿದ ನಾಟ್ಯಶಾಸ್ತ್ರದತ್ತ ಕಣ್ಣು ಹಾಯಿಸಬೇಕಾಗುತ್ತದೆ. ಏಕೆಂದರೆ ಭರತ ನಾಟ್ಯದ ಅನೇಕ ಕಲ್ಪನೆಗಳ ಕುರುಹು ನಾಟ್ಯಶಾಸ್ತ್ರದಲ್ಲಿ ಸಿಗುತ್ತದೆ. ಶಿವನನ್ನು ಈ ನೃತ್ಯರೂಪದ ದೇವನೆಂದು ಪರಿಗಣಿಸಲಾಗುತ್ತದೆ.

ಇಂದು ಭರತನಾಟ್ಯವನ್ನು ಕೇವಲ ಹಿಂದುಗಳಷ್ಟೇ ಅಲ್ಲದೆ, ಅನೇಕ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಕಲಿಯುತ್ತಿದ್ದಾರೆ. ಈ ಮೂಲಕ ಅದರ ವ್ಯಾಪ್ತಿ ಧಾರ್ಮಿಕ ರೇಖೆಯ ಹೊರಗೆ ವ್ಯಾಪಿಸುವಂತೆ ಮಾಡಿದ್ದಾರೆ. ಆದರೆ ನಿಜವಾಗಿಯೂ ಭರತನಾಟ್ಯವನ್ನು ಆಧ್ಯಾತ್ಮಿಕತೆ ಮತ್ತು ಹಿಂದು ಧರ್ಮದಿಂದ ಬೇರ್ಪಡಿಸಲು ಸಾಧ್ಯವೇ? ಏಕೆಂದರೆ ಸಾಮಾನ್ಯವಾಗಿ ಈ ನೃತ್ಯ ಪ್ರದರ್ಶನ ಆರಂಭವಾಗುವುದು, ವಿಘ್ನನಿವಾರಕ ಗಣೇಶನಿಗೆ ನಮಿಸುವ ‘ಕೌಟುವಂ’ ಎನ್ನುವ ಪ್ರಾಚೀನ ನೃತ್ಯ ಪ್ರಕಾರದೊಂದಿಗೆ ಮತ್ತು ಪುಷ್ಪಾಂಜಲಿಯೊಂದಿಗೆ.

ಮದ್ರಾಸ್‌ನ ಹೊರವಲಯದಲ್ಲಿ ‘ಕಲಾಕ್ಷೇತ್ರ’ ನೃತ್ಯ ಶಾಲೆಯನ್ನು ಆರಂಭಿಸಿದ ರುಕ್ಮಿಣಿ ದೇವಿ ಆರುಂಡಳೆಯವರು ಭರತನಾಟ್ಯ ನೃತ್ಯ ಶಾಸ್ತ್ರದ ಪುನರುಜ್ಜೀವಕರಲ್ಲಿ ಅತ್ಯಂತ ಪ್ರಮುಖರು. “ನಾವು ನರ್ತಿಸುವ ಎಲ್ಲಾ ಹಾಡುಗಳೂ ದೇವತೆಗಳಿಗೇ ಸಂಬಂಧಪಟ್ಟದ್ದಾಗಿರುತ್ತದೆ. ‘ಏಕೆ ಅಷ್ಟೊಂದು ದೇವತೆಗಳು ಬೇಕು?’ ಎಂದು ನೀವು ಕೇಳಬಹುದು. ಅದಕ್ಕೆ ನನ್ನ ಪ್ರತಿಕ್ರಿಯೆ ಇಷ್ಟೆ- ಏಕೆ ಅಷ್ಟೊಂದು ದೇವತೆಗಳು ಇರಬಾರದು?” ಎಂದವರು ಹೇಳುತ್ತಿದ್ದರು.

ಈಗ ಅದೇ ಕಲಾಕ್ಷೇತ್ರದ ಮುಖ್ಯಸ್ಥರಾಗಿರುವುದು ರುಕ್ಮಿಣಿ ದೇವಿಯವರ ವಿದ್ಯಾರ್ಥಿಯೇ ಲೀಲಾ ಸ್ಯಾಮ್‌ಸನ್. ಇವರು ರೋಮನ್ ಕ್ಯಾಥೋಲಿಕ್ಕರಾದ ಲೈಲಾ ಮತ್ತು ನಿವೃತ್ತ ವೈಸ್ ಅಡ್ಮಿರಲ್ ಬೆಂಜಮಿನ್ ಅಬ್ರಹಾಂ ಸ್ಯಾಮ್‌ಸನ್ ಅವರ ಮಗಳು. 2006ರಲ್ಲಿ ಈ ಲೀಲಾ ಭರತನಾಟ್ಯದಿಂದ ಆಧ್ಯಾತ್ಮಿಕ ಬೇರುಗಳನ್ನೂ, ಮೂರ್ತಿ ಪೂಜೆಯನ್ನೂ ಕಿತ್ತುಹಾಕಿದ್ದಷ್ಟೇ ಅಲ್ಲದೆ, ಹಿಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮ ವಿದ್ಯಾರ್ಥಿಗಳು ಭಾಗವಹಿಸದಂತೆ ತಡೆದು ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡಿದ್ದರು. ಕಲಾಕ್ಷೇತ್ರದ ಸಂಸ್ಥಾಪಕರಾದ ರುಕ್ಮಿಣಿ ದೇವಿಯವರು ವಿನ್ಯಾಸಗೊಳಿಸಿದ್ದ ಪ್ರಮಾಣಪತ್ರದ ಮೇಲೆ ಮೊದಲೆಲ್ಲ ಶಿವನ ಲಾಂಛನವಿರುತ್ತಿತ್ತು. ಆದರೆ ಈಗ ಅಲ್ಲಿ ಕೊಡುವ ಪ್ರಮಾಣ ಪತ್ರವನ್ನು ಸಂಪೂರ್ಣವಾಗಿ ಬದಲಿಸಿ ಅದರ ಮೇಲೆ ಯಾವುದೇ ರೀತಿಯ ಹಿಂದು ಸಂಕೇತಗಳು ಇರದಂತೆ ಮಾಡಲಾಗಿದೆ!

ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ‘ಕಲೈರಾಣಿ ನಾಟ್ಯ ಶಾಲೆ’ಯ ಸ್ಥಾಪಕಿ ರಾಣಿ ಡೇವಿಡ್ ಕೂಡ ನಿರ್ಲಜ್ಜವಾಗಿ ಭರತನಾಟ್ಯವನ್ನು ಕ್ರಿಸ್ತೀಕರಣಗೊಳಿಸುತ್ತಿದ್ದಾರೆ. ಹಿಂದು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಈ ನಾಟ್ಯಶಾಸ್ತ್ರದಲ್ಲಿ ಜೊತೆಯಾಗಿ ಇರಿಸುವುದರ ಸಮಸ್ಯೆಯನ್ನು ವಿವರಿಸುತ್ತಾರವರು. “ಹಿಂದು ಧರ್ಮ ‘ಉದಾರವಾದಿ’ಯಾಗಿದ್ದು ಉತ್ತಮವಾದದ್ದನ್ನು ‘ಪವಿತ್ರ’ವೆಂದು ಪರಿಗಣಿಸುತ್ತದೆ. ಆದರೆ ಇನ್ನೊಂದೆಡೆ ಕ್ರೈಸ್ತ ಧರ್ಮದಲ್ಲಿನ ದೇವರು, ತನ್ನನ್ನು ಬಿಟ್ಟು ಮತ್ತ್ಯಾರನ್ನೂ ಪೂಜಿಸಬಾರದು ಎಂದು ಆದೇಶಿಸುತ್ತಾನೆ” ಎನ್ನುವುದನ್ನಂತೂ ಅವರು ಒಪ್ಪಿಕೊಳ್ಳುತ್ತಾರೆ. ‘ಕಲೆ’ ಮತ್ತು ‘ಹಿಂದು’ ಧರ್ಮದ ನಡುವೆ ವಿಭಜನೆಯಿದ್ದರೆ, ಅದು ‘ಜಾತ್ಯತೀತವಾಗುತ್ತದೆ’, ಆಗ ಅದನ್ನು ಸುಲಭವಾಗಿ ಕ್ರಿಸ್ತೀಕರಣಗೊಳಿಸಬಹುದು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು.

ಈ ಕ್ರಿಸ್ತ ಕಾವ್ಯ ಭರತನಾಟ್ಯ ಬಳಗ ಹಾಗೂ ಡಾ. ಪವಿತ್ರಾ ಮಾಡಲು ಹೊರಟಿರುವುದೂ ಇಂಥಾ ಕೆಲಸವನ್ನೇ!

ಇದು ಕ್ರಿಸ್ತನ ಜೀವನವನ್ನು ಭರತನಾಟ್ಯದ ಮೂಲಕ ಬಿಂಬಿಸುವ ಕಾರ್ಯಕ್ರಮ ಹಾಗೂ ಅದರಲ್ಲೇನು ತಪ್ಪಿಲ್ಲ ಎಂದು ಬಹಳ ಸರಳವಾಗಿ ಭಾವಿಸಬೇಡಿ. ನಮ್ಮ ಸಂಸ್ಕೃತಿಯನ್ನು ಅನುಕರಿಸುವುದಕ್ಕೂ ಲಪಟಾಯಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಇವತ್ತು ಚರ್ಚ್‌ಗಳ ಇಂಡಿಯನೈಜೇಶನ್(ಭಾರತೀಕರಣ) ಹೆಸರಿನಲ್ಲಿ ನಡೆಯುತ್ತಿರುವುದು ಲಪಟಾಯಿಸುವ ಕೆಲಸವೇ. ನಮ್ಮ ಜನರನ್ನು ಮೋಸಗೊಳಿಸಿ ಮತಾಂತರಗೊಳಿಸಿದರೆ ಸಾಲದು, ನಮ್ಮ ಸಂಸ್ಕೃತಿಯನ್ನೂ ಕ್ರಿಸ್ತೀಕರಣಗೊಳಿಸಬೇಕು ಎಂದು ಇವರು ಹೊರಟಿದ್ದಾರೆ. ಮಧ್ಯಪ್ರದೇಶದ ಜುಬುವಾದಲ್ಲಿ ನಡೆದ ಪ್ರಕರಣವೊಂದನ್ನು ಕೇಳಿ. ಈ ಇವ್ಯಾಂಜೆಲಿಸ್ಟ್‌ಗಳು ನಮ್ಮ ಜನರಿಗೆ ಆಮಿಷ ಒಡ್ಡಿ, ಮೋಸ ಮಾಡಿ ಮೊದಮೊದಲಿಗೆ ಮತಾಂತರಗೊಳಿಸಿದರು. ಆದರೆ ಅವರ ಹೆಸರುಗಳು, ಧರ್ಮ ಬದಲಾದರೂ ಮೂಲ ಹಿಂದು ಮನಸ್ಥಿತಿಯನ್ನು ಅಳಿಸಲು ಚರ್ಚ್‌ಗಳಿಂದಾಗಲಿಲ್ಲ! ನೋಡಿ… ನಾವು ದೇವಸ್ಥಾನಕ್ಕೆ ಹೋಗುವಾಗ ಸ್ನಾನ ಮಾಡಿ, ಮಡಿಯುಟ್ಟು, ಜತೆಗೆ ಹೂವು ಹಣ್ಣು ಕಾಯಿ ತೆಗೆದುಕೊಂಡು ಹೋಗುತ್ತೇವೆ. ಪಾದರಕ್ಷೆಗಳನ್ನು ಹೊರ ಬಿಟ್ಟು ಗುಡಿ ಪ್ರವೇಶ ಮಾಡುತ್ತೇವೆ. ಮೊದಲಿಗೆ ಗರುಡಗಂಬ ಎದುರಾಗುತ್ತದೆ. ಅದಕ್ಕೆ ನಮಸ್ಕರಿಸುತ್ತೇವೆ. ನಂತರ ಗರ್ಭಗುಡಿ. ದೇವರ ಮುಂದೆ ನಿಂತು ಪ್ರಾರ್ಥಿಸುತ್ತೇವೆ. ಬಳಿಕ ನಾವು ತೆಗೆದುಕೊಂಡ ಹೋದ ಹೂವು ಹಣ್ಣು ಕಾಯಿಯನ್ನು ಪೂಜಾರಿ ದೇವರಿಗೆ ಸುಳಿದು ಕೊಡುತ್ತಾನೆ. ನಂತರ ತೀರ್ಥ ಪ್ರಸಾದ ಸ್ವೀಕರಿಸುತ್ತೇವೆ. ಅಂದರೆ ನಮ್ಮಲ್ಲಿ ಗುಡಿ ಅಂದ ಕೂಡಲೇ ಅದರದ್ದೇ ಆದ ರೀತಿ ರಿವಾಜುಗಳಿವೆ. ಇವು ನಮ್ಮ ಮನದೊಳಗೆ ಹುಟ್ಟಿನಿಂದಲೇ ಮಿಳಿತಗೊಂಡಿರುತ್ತವೆ. ನಮ್ಮ ಜನರನ್ನು ಮತಾಂತರಗೊಳಿಸಿದ ಕ್ರೈಸ್ತ ಮಿಷನರಿಗಳಿಗೆ ಇದನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಚಪ್ಪಲಿಯೊಂದಿಗೆ ಚರ್ಚ್ ಪ್ರವೇಶಿಸಿ ಮಂಡಿಯೂರಿ ಪ್ರಾರ್ಥಿಸಿ ಬರಿಗೈಲಿ ಬರುವಾಗ ಮತಾಂತರಗೊಂಡ ಹಿಂದು ಮನಸ್ಸಲ್ಲಿ ಒಂಥರಾ ಅತೃಪ್ತ, ಅಪೂರ್ಣ, ಖಾಲಿ ಖಾಲಿ ಭಾವನೆ. ಅದನ್ನು ಅರ್ಥಮಾಡಿಕೊಂಡ ಠಕ್ಕ ಇವ್ಯಾಂಜೆಲಿಸ್ಟ್‌ಗಳು, ಮತಾಂತರಗೊಂಡವರು ಎಲ್ಲಿ ಹಿಂದು ಧರ್ಮಕ್ಕೆ ವಾಪಸ್ ಹೋಗುತ್ತಾರೋ ಎಂಬ ಭಯದಿಂದ ಇಂಡಿಯನೈಜೇಷನ್ ಹೆಸರಿನಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನೇ ಲಪಟಾಯಿಸಲು ಮುಂದಾದರು. ಇವತ್ತು ಕೇರಳದ ಚರ್ಚ್‌ಗಳಲ್ಲಿ ಗರುಡಗಂಬಗಳು ನಿರ್ಮಾಣಗೊಂಡಿವೆ! ಚಪ್ಪಲಿಯನ್ನು ಹೊರಗಿಡುತ್ತಾರೆ, ಪ್ರಾರ್ಥನೆ ನಂತರ ಪ್ರಸಾದ ಕೊಡುತ್ತಾರೆ, ತೀರ್ಥ ಕೊಡುತ್ತಾರೆ!ನಮ್ಮ ಮಾರಮ್ಮ, ಅಣ್ಣಮ್ಮ, ಪುರದಮ್ಮ, ಚೌಡಮ್ಮನ ಜಾತ್ರೆಯಂತೆ ‘ಮೇರಿಯಮ್ಮನ ಜಾತ್ರೆ’ಗಳು ಆರಂಭವಾಗಿವೆ. ನಮ್ಮ ಯೋಗಾಸನವನ್ನೂ “ಕ್ರಿಶ್ಚಿಯನ್ ಯೋಗ”ವನ್ನಾಗಿಸಿದ್ದಾರೆ ಕೇರಳದ ಮಲ್ಲು ಕ್ರೈಸ್ತರು! ನಮ್ಮ ಸೂರ್ಯ ನಮಸ್ಕಾರವನ್ನು “ಯೇಸು ನಮಸ್ಕಾರ”ವಾಗಿಸಿದ್ದಾರೆ! ಇದು ಭಾರತೀಕರಣರದ ಹೆಸರಿನಲ್ಲಿ ನಡೆಯುತ್ತಿರುವ ಹಿಂದು ಧರ್ಮದ ಹರಣ, ನಮ್ಮ ಸಂಸ್ಕೃತಿಯ ಅಪಹರಣವಲ್ಲದೇ ಮತ್ತೇನು?

ಮುಸ್ಲಿಮರದ್ದು ಮಸೀದಿ

ಜೈನರದ್ದು ಬಸದಿ

ಬೌದ್ಧರದ್ದು ವಿಹಾರ

ಯಹೂದಿಗಳದ್ದು ಶುಲ್

ಹಿಂದುಗಳದ್ದು ದೇವಾಲಯ

ಹಾಗಾದರೆ…

ಕ್ರೈಸ್ತರದ್ದು… ಚರ್ಚ್ ತಾನೇ?! ಅಂದಮೇಲೆ, “ಬಾಲ ಯೇಸುವಿನ ದೇವಾಲಯ”, “ಕ್ರಿಸ್ತ ದೇವಾಲಯ”, “ಮಾತೆ ಮೇರಿ ದೇವಾಲಯ”, “ಶ್ರೀ ಕ್ರಿಸ್ತ ದೇವಾಲಯ” ಎಲ್ಲಿಂದ ಬಂದವು? ದೇವಾಲಯ, ಅಮ್ಮ, ಮಾತೆ, ದೇವಿ ಇವು ಹಿಂದು ಧರ್ಮದಲ್ಲಿ ಬರುವಂಥವು. ಹಾಗಿದ್ದರೂ ಚರ್ಚ್‌ಗಳ ಮೇಲೆ ಮಾತೆ, ದೇವಿ, ದೇವಾಲಯ ಎಂಬ ಬೋರ್ಡು ಹಾಕಿಕೊಳ್ಳುತ್ತಿರುವುದೇಕೆ? ಇನ್ನೊಂದು ಮಜಾ ಕೇಳಿ, ಸಾಗರದ ಸಮೀಪ “ಕ್ರಿಸ್ತ ಗೋಕುಲಾಶ್ರಮ”ವಿದೆ! ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ನೀವು “ಸತ್ಯ ವೇದ ಸದನ” ಎಂಬ ಬೋರ್ಡು ಹಾಕಿಕೊಂಡಿರುವ ಪುರಾತನ ಕಟ್ಟಡವನ್ನು ಕಾಣಬಹುದು! ನಮಗೆ ನಮ್ಮ ವೇದಗಳು ಪರಮ. “ಸತ್ಯ ವೇದ”ವೆಂದರೆ ಬೈಬಲ್ಲೇ ವೇದಕ್ಕಿಂತ ಮಿಗಿಲು, ಬೈಬಲ್ಲೇ ಸತ್ಯ ಎಂಬ ಕೊಂಕು ಅದರಲ್ಲಿದೆ.

ಇಲ್ಲಿ ವಿನಾಕಾರಣ ಅನುಮಾನ ಸೃಷ್ಟಿಸಲಾಗುತ್ತಿದೆ ಎಂದು ಭಾವಿಸಬೇಡಿ. 1994ರಲ್ಲಿ ಆಗಿನ ಪೋಪ್ ಎರಡನೇ ಜಾನ್ ಪಾಲ್ ಏನಂತ ಹೇಳಿಕೆ ನೀಡಿದ್ದರು ಗೊತ್ತೆ-”ಬುದ್ಧಿಸಂ, ಹಿಂದುಯಿಸಂನಂತಹ ಪುರಾತನ ಧರ್ಮಗಳು ಕ್ರೈಸ್ತ ಮತ ಪ್ರತಿಪಾದನೆಗೆ ಎಸೆದಿರುವ ಸವಾಲನ್ನು ಹೇಗೆ ನಿಭಾಯಿಸಬೇಕೆಂದರೆ ಈ ಧರ್ಮಗಳಲ್ಲಿರುವ ಸತ್ಯಾಸತ್ಯತೆಗೆ ಬಾಯಿ ಮಾತಲ್ಲಿ ಗೌರವ ವ್ಯಕ್ತಪಡಿಸುತ್ತಲೇ ದೇವರು ಹಾಗೂ ಮನುಷ್ಯನ ನಡುವಿನ ಏಕೈಕ ಸಂಧಾನಕಾರನೆಂದರೆ ಜೀಸಸ್, ಆತನೊಬ್ಬನೇ ಮಾನವತೆಯ ಉದ್ಧಾರಕ ಎಂಬುದನ್ನು ಚರ್ಚ್ ಮನವರಿಕೆ ಮಾಡಿಕೊಡಬೇಕು” ಎಂದಿದ್ದರು! ಇದರರ್ಥವೇನು? ಅವರ ಅಂತಿಮ ಗುರಿಯಾವುದು? ಕ್ರಿಸ್ತೀಕರಣವೇ ಅಲ್ಲವೆ?

ಇಂದು ಮಿಷನರಿ ಕೆಲಸವೆಂಬುದು ದೊಡ್ಡ ಬ್ಯುಸಿನೆಸ್. ಬಹುಶಃ ಜಗತ್ತಿನ ಅತಿದೊಡ್ಡ ವ್ಯಾಪಾರ! ಬರೀ ಕ್ಯಾಥೋಲಿಕ್ ಚರ್ಚ್‌ಗಳಷ್ಟೇ ಅಲ್ಲ, ಹಲವಾರು ಪ್ರೊಟೆಸ್ಟೆಂಟ್ ಸಂಘಟನೆಗಳೂ ಕೂಡ ಅನ್ಯಧರ್ಮೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಕೋಟ್ಯಂತರ ಡಾಲರ್‌ಗಳನ್ನು ಮೀಸಲಿಟ್ಟಿವೆ. ಮತ ಪ್ರಚಾರ ಕೆಲಸಕ್ಕಾಗಿ ಲಕ್ಷಾಂತರ ಕಾರ್ಯಕರ್ತರನ್ನು ಸಜ್ಜುಗೊಳಿಸಿವೆ, ಹಲವಾರು ಯೋಜನೆಗಳನ್ನು ರೂಪಿಸಿವೆ, ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿವೆ. ಇಂತಹ ಬಹುರಾಷ್ಟ್ರೀಯ ಮತಾಂತರ ಬ್ಯುಸಿನೆಸ್ ಇದೆಯಲ್ಲಾ, ಅದು ಬಹುರಾಷ್ಟ್ರೀಯ ಆರ್ಥಿಕ ವಹಿವಾಟಿನಂತಲ್ಲ. ಇಲ್ಲಿ ನ್ಯಾಯವೂ ಇಲ್ಲ, ಒಳತಂತ್ರ ಬಹಿರಂಗವಾಗಿ ಕಾಣುವುದೂ ಇಲ್ಲ. ಮಾತುಕತೆಯೂ ಇಲ್ಲ, ಚರ್ಚೆಗೂ ಜಾಗವಿಲ್ಲ. ಇದು, ಒಂದು ಧರ್ಮ ತಾನೊಂದೇ ಶ್ರೇಷ್ಠವೆಂದು ಇತರ ಎಲ್ಲ ಧರ್ಮಗಳನ್ನೂ ಅವಹೇಳನ ಮಾಡುವುದಾಗಿದೆ, ಇತರ ಧರ್ಮಗಳಿಗೆ ಮಸಿ ಬಳಿಯುವ ಕಾರ್ಯವಾಗಿದೆ. ಇಂತಹ ಮತಾಂತರ ವಹಿವಾಟು ಭಾರತದಲ್ಲಿ ಬಹುವಾಗಿದೆ. ಏಕೆಂದರೆ ಮಿಷನರಿಗಳು ಯಾವ ಅಡ್ಡಿ ಆತಂಕಗಳೂ ಇಲ್ಲದೆ ಸ್ವತಂತ್ರವಾಗಿ ಮತಾಂತರ ಮಾಡಬಹುದಾದ ವಿಶ್ವದ ಅತಿ ದೊಡ್ಡ ಕ್ರೈಸ್ತೇತರ ರಾಷ್ಟ್ರವೆಂದರೆ ಭಾರತವೊಂದೇ. ಪಾಕಿಸ್ತಾನ, ಬಾಂಗ್ಲಾದೇಶಗಳಂತಹ ಮುಸ್ಲಿಂ ರಾಷ್ಟ್ರಗಳು ಕ್ರೈಸ್ತ ಮಿಷನರಿ ಚಟುವಟಿಕೆಗಳಿಗೆ ಅವಕಾಶವನ್ನೇ ನೀಡುವುದಿಲ್ಲ. ಸೌದಿ ಅರೇಬಿಯಾದಲ್ಲಿ ಬೈಬಲ್ ಅಥವಾ ಜೀಸಸ್‌ನ ಸಣ್ಣ ಚಿತ್ರವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವೂ ಇಲ್ಲ. ಚೀನಾ ಕೂಡ ಮಿಷನರಿಗೆ ಬಾಗಿಲು ಮುಚ್ಚಿದೆ.

ಇಂದು ಹಲವಾರು ಕ್ರೈಸ್ತ ಮತಪ್ರತಿಪಾದಕ ಸಂಘಟನೆಗಳು ಹುಟ್ಟಿಕೊಂಡಿವೆ. ವರ್ಲ್ಡ್ ವಿಶನ್, ದಿ ಕ್ರಿಶ್ಚಿಯನ್ ಕೋಯುಲೀಶನ್, ಜೆನೋವ್ಹಾಸ್ ವಿಟ್ನೆಸ್, ಮಾರ್ಮೋನ್ಸ್, ಬ್ಯಾಪ್ಟಿಸ್ಟ್ ಮುಂತಾದ ಸಂಘಟನೆಗಳು ಭಾರತದಲ್ಲಿರುವ ಹಿಂದುಗಳನ್ನು ಮತಾಂತರ ಮಾಡುವ ಸಲುವಾಗಿ ಅಮೆರಿಕದಲ್ಲಿ ಚಂದಾ ಎತ್ತುತ್ತಿವೆ. ಕ್ರೈಸ್ತ ಟಿವಿ ಚಾನೆಲ್‌ಗಳಲ್ಲಿ ಅಂತಹ ಮನವಿಗಳನ್ನು ನಿತ್ಯವೂ ಕಾಣಬಹುದು. ಪ್ಯಾಟ್ ರಾಬರ್ಟ್‌ಸನ್ ಎಂಬಾತ “ಹಿಂದುಯಿಸಂ ಎಂಬುದು ಭೂತಪ್ರೇತಗಳ ಧರ್ಮ” ಎಂದು ಕ್ರೈಸ್ತ ಚಾನೆಲ್‌ನಲ್ಲಿ ಬಹಿರಂಗವಾಗಿ ಹೇಳಿದ್ದಾನೆ. ಪ್ರಾಣಿಗಳ ಶಿರವನ್ನು ಹೊಂದಿರುವ ಹಿಂದು ದೇವ, ದೇವತೆಗಳನ್ನು ತೋರಿಸಿ “ಓಹ್, ಈ ಜನರು ಅದೆಷ್ಟು ಹಿಂದುಳಿದಿದ್ದಾರೆ ನೋಡಿ” ಎಂದು ವಿಡಂಬನೆ ಮಾಡುತ್ತಾರೆ, ಭಾರತದಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳತ್ತ ಬೊಟ್ಟು ಮಾಡಿ, “ಈ ಎಲ್ಲ ಸಮಸ್ಯೆಗಳಿಗೆ ಹಿಂದು ಧರ್ಮವೇ ಕಾರಣ. ಇಂತಹ ಭಯಾನಕ ಧರ್ಮದಿಂದ ಜನರನ್ನು ರಕ್ಷಿಸಲು ದೇಣಿಗೆ ನೀಡಿ” ಎಂದು ಕರೆ ನೀಡುತ್ತಾರೆ.

ಮೊದಲಿಗೆ ಇಸ್ಲಾಂ, ತದನಂತರ ಕ್ರಿಶ್ಚಿಯಾನಿಟಿ. ಭಾರತ ಹಲವು ಶತಮಾನಗಳಿಂದಲೂ ಈ ಎರಡು ಮತಗಳ ಆಕ್ರಮಣವನ್ನು ಎದುರಿಸುತ್ತಾ ಬಂದಿದೆ. ಇಂಥದ್ದೊಂದು ಅಪಾಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಧ್ವನಿಯೆತ್ತಿದವರಲ್ಲಿ ಇಬ್ಬರು ಪ್ರಮುಖರು. ಮೊದಲನೆಯವರು ಸ್ವಾಮಿ ವಿವೇಕಾನಂದ, ಎರಡನೆಯವರು ಮಹಾತ್ಮ ಗಾಂಧೀಜಿ! “Hindus need to be saved from spiritual darkness’  ಇದು ಕ್ರೈಸ್ತ ಮಿಷನರಿಗಳ ಘೋಷವಾಕ್ಯವಾಗಿದ್ದ ಕಾಲದಲ್ಲಿ ಹಿಂದು ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುವ, ಎತ್ತಿ ಹಿಡಿಯುವ ಕೆಲಸಕ್ಕೆ ಕೈಹಾಕಿದ ಸ್ವಾಮಿ ವಿವೇಕಾನಂದರು ಅಕಾಲಿಕ ಮರಣವನ್ನಪ್ಪಿದ ನಂತರ ನಮ್ಮ ಧರ್ಮದ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ “ಗ್ಲೋಬಲ್ ವಾಯ್ಸ್‌”  ಆಗಿ ಹೊರಹೊಮ್ಮಿದವರು ಗಾಂಧೀಜಿ. ಕ್ರೈಸ್ತ ಮಿಷನರಿಗಳನ್ನು Vendors of goods ಎಂದು ಟೀಕಿಸಿದರು. “ಈ ಮಿಷನರಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುವುದೆಂದರೆ ನಮ್ಮ ಕುಟುಂಬದ ಅವನತಿಯಾದಂತೆ. ನಮ್ಮ ಆಚಾರ, ವಿಚಾರ, ಊಟ, ಉಡುಪು, ನಡತೆ ಎಲ್ಲವನ್ನೂ ಹಾಳುಗೆಡವುತ್ತಾರೆ” ಎಂದು ಗಾಂಧೀಜಿ ಎಚ್ಚರಿಸುತ್ತಾರೆ.

1. ನಾನೊಬ್ಬ ಸನಾತನಿ ಹಿಂದು ಎಂದೇಕೆ ಕರೆದುಕೊಳ್ಳುತ್ತೇನೆ?

2. ನಾನೇಕೆ ಮತಾಂತರಗೊಳ್ಳಲಿಲ್ಲ?

3. ಮತಾಂತರದಲ್ಲಿ ನನಗೇಕೆ ನಂಬಿಕೆಯಿಲ್ಲ?

4. ಮತಾಂತರವೆಂಬುದು ಶಾಂತಿಗೆ ಒಂದು ತೊಡಕು ಹೇಗೆ?

5. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹಾರುವ ಕ್ರಮವೇಕೆ ಸರಿಯಲ್ಲ?

6. ಅನ್ಯಧರ್ಮೀಯನೊಬ್ಬನನ್ನು ಹಿಂದುವಾಗಿ ಮತಾಂತರ ಮಾಡುವುದನ್ನೂ ನಾನೇಕೆ ಒಪ್ಪುವುದಿಲ್ಲ?

7. ಬಹುತೇಕ ಭಾರತೀಯ ಕ್ರೈಸ್ತರೇಕೆ ತಮ್ಮ ಮೂಲದ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತ ಅಮೆರಿಕನ್ನರು ಮತ್ತು ಯುರೋಪಿಯನ್ನರ ಅಂಧಾನುಕರಣೆಗೆ ಮುಂದಾಗಿದ್ದಾರೆ?

8. ಹಿಂದು ಧರ್ಮವನ್ನು ಬುಡಮೇಲು ಮಾಡುವ ಮಿಷನರಿಗಳ ಹುನ್ನಾರ, ಉದ್ದೇಶವೆಂಥದ್ದು?

9. ಒಬ್ಬ ಹಿಂದು ಹಿಂದುವಾಗಿ ಉಳಿದರೆ ಇವರಿಗೇನು ನೋವು?

10. ಈ ಮಿಷನರಿಗಳು ಧರ್ಮದ ವ್ಯಾಪಾರಿಗಳು ಹೇಗಾಗುತ್ತಾರೆ?

11. ನಮ್ಮ ಹರಿಜನರನ್ನು ಮತಾಂತರ ಮಾಡುವುದನ್ನು ಏಕೆ ನಾನು ವಿರೋಧಿಸುತ್ತೇನೆ?

12. ಮತಾಂತರವೆಂದರೆ ಅತ್ಮ ಶುದ್ಧೀಕರಣವೇ ಹೊರತು ಮತ ಬದಲಾವಣೆಯಲ್ಲ!

13. ಕ್ರಿಶ್ಚಿಯಾನಿಟಿ ಮತ್ತು ಅದರ ಸಾಮ್ರಾಜ್ಯಶಾಹಿ ಮನಸ್ಥಿತಿ

14. ಈ ಮಿಷನರಿಗಳು ಬಡವರನ್ನು, ಬಡತನವನ್ನೇ ಏಕೆ ಗುರಿಯಾಗಿಸಿಕೊಳ್ಳುತ್ತಾರೆ?

15. ಇಷ್ಟಕ್ಕೂ ನಾನೇಕೆ ನನ್ನ ಧರ್ಮವನ್ನು ಬದಲಾಯಿಸಲಿ?

1921ರಿಂದ 1937ರವರೆಗೂ ಇಂತಹ ಒಂದೊಂದು ಪ್ರಶ್ನೆಗಳನ್ನೆತ್ತಿಕೊಂಡು ತಮ್ಮ “ಯಂಗ್ ಇಂಡಿಯಾ” ಮತ್ತು “ಹರಿಜನ” ಪತ್ರಿಕೆಗಳಲ್ಲಿ ಮಹಾತ್ಮ ಗಾಂಧೀಜಿಯವರು ಮತಾಂತರವನ್ನು ಖಂಡಿಸಿ, ಮಿಷನರಿಗಳ ನೈಜ ಉದ್ದೇಶದ ಮೇಲೆ ಬೆಳಕು ಚೆಲ್ಲಿ ಸತತವಾಗಿ ಬರೆಯುತ್ತಾರೆ. ಇವತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಜೀಸಸ್‌ನ ಯಾವ ತತ್ವವನ್ನು ಪಾಲಿಸುತ್ತಿವೆ ಎಂದು ಪ್ರಶ್ನಿಸುತ್ತಾರೆ, ಉದಾಹರಣೆ ಸಮೇತ ಅವುಗಳ ಇಬ್ಬಂದಿ ನಿಲುವನ್ನು ಖಂಡಿಸುತ್ತಾರೆ. 1937, ಜೂನ್ 3ರ “ಹರಿಜನ”ದಲ್ಲಿ, “ಜೀಸಸ್‌ನೊಬ್ಬ ಮಾನವೀಯತೆಯ ಮಹಾನ್ ಬೋಧಕ. ಆದರೆ ಅವನೊಬ್ಬನೇ ದೈವೀ ಪುತ್ರನೆಂಬುದನ್ನು ನಾನು ಒಪ್ಪುವುದಿಲ್ಲ. ನಾವೆಲ್ಲರೂ ದೇವರ ಮಕ್ಕಳೇ. ದೇವರು ಯಾರೋ ಒಬ್ಬನಿಗೆ ಮಾತ್ರ ಪಿತೃವಾಗಲು ಸಾಧ್ಯವಿಲ್ಲ” ಎಂದು ಬರೆಯುತ್ತಾರೆ. ಬೈಬಲ್ಲನ್ನು ಚೆನ್ನಾಗಿ ಓದಿಕೊಂಡಿದ್ದ, ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಮೆಚ್ಚಿಕೊಂಡಿದ್ದ, ಜೀಸಸ್‌ನಿಂದ ಪ್ರೇರಿತರಾಗಿಯೇ ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನು ತೋರಿ ಎನ್ನುತ್ತಿದ್ದ ಗಾಂಧೀಜಿ, ಮತಾಂತರವನ್ನು ಮಾತ್ರ ಸುತರಾಂ ಒಪ್ಪುತ್ತಿರಲಿಲ್ಲ. ಅದರ ಬಗ್ಗೆ ಎಷ್ಟು ಕುಪಿತರಾಗಿದ್ದರೆಂದರೆ “ಒಂದು ವೇಳೆ ನನ್ನ ಬಳಿ ಅಧಿಕಾರವಿದ್ದರೆ, ಕಾನೂನು ತರುವ ಸಾಮರ್ಥ್ಯ ನನಗಿದ್ದಿದ್ದರೆ, ನಾನು ಮಾಡುತ್ತಿದ್ದ ಮೊದಲ ಕೆಲಸ ಮತಾಂತರದ ನಿಷೇಧ” ಎಂದಿದ್ದರು ಬಾಪೂಜಿ.

ಮತ್ತೊಂದು ವಿಷಯ ಕೇಳಿ: 1999ರಲ್ಲಿ ಮತ್ತೆ ಭಾರತಕ್ಕೆ ಭೇಟಿ ನೀಡಿದ್ದ ಪೋಪ್ ಜಾನ್‌ಪಾಲ್,”The people of Asia need Jesus Christ and his gospel. Asia is thirsting for the living water that Jesus alone can give’ ಎಂದು ಸಾರ್ವಜನಿಕವಾಗಿ ಘೋಷಣೆಯನ್ನು ಮಾಡುವ ಮೂಲಕ ಮತಾಂತರ ಮಾಡುವ ತಮ್ಮ ಉದ್ದೇಶವನ್ನು ಬಹಿರಂಗಗೊಳಿಸಿದ್ದರು.  ಹಾಗೆಯೇ, “1.3 billion people have been seeking spiritual fulfillment’ ಎನ್ನುವ ಮೂಲಕ ಜಗತ್ತಿನ ಅತ್ಯಂತ ಜನಭರಿತ ರಾಷ್ಟ್ರವಾದ ಚೀನಾಕ್ಕೆ ಭೇಟಿ ನೀಡುವ ತಮ್ಮ ಮನದ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆದರೆ ಚೀನಾ ಸೊಪ್ಪುಹಾಕಲಿಲ್ಲ. ಅಷ್ಟೇಕೆ, ಇಂದಿಗೂ ವ್ಯಾಟಿಕನ್ ಜತೆ ರಾಜತಾಂತ್ರಿಕ ಸಂಬಂಧವನ್ನೇ ಹೊಂದಿರದ ಏಕಮಾತ್ರ ಬಲಿಷ್ಠ ರಾಷ್ಟ್ರವೆಂದರೆ ಚೀನಾವೊಂದೇ! ಅಷ್ಟೇ ಅಲ್ಲ, ಕ್ಯಾಥೋಲಿಕ್ ಚರ್ಚ್‌ಗಳು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಅವುಗಳು ವ್ಯಾಟಿಕನ್‌ನ ನೇರ ನಿಯಂತ್ರಣಕ್ಕೊಳಪಟ್ಟಿವೆ. ಆದರೆ ಚೀನಾದಲ್ಲಿ 1.2 ಕೋಟಿ ಕ್ಯಾಥೋಲಿಕ್ಕರಿದ್ದರೂ ಅವರು ನಡೆಸುತ್ತಿರುವ ಚರ್ಚ್‌ಗಳು ಚೀನಿ ಸರಕಾರದ ನಿಯಂತ್ರಣದಲ್ಲಿವೆ! ಇಂದಿಗೂ ವ್ಯಾಟಿಕನ್‌ನ ಮಹದಾಸೆಯೆಂದರೆ ಚೀನಾದಲ್ಲಿ ಮತಾಂತರ ಕಾರ್ಯ ನಡೆಸುವುದು. ಅದಕ್ಕಾಗಿ ತನ್ನೆಲ್ಲಾ ಪ್ರಭಾವವನ್ನು ಬಳಸಿ ಪೋಪ್ ಜಾನ್‌ಪಾಲ್‌ಅವರ ಚೀನಾ ಭೇಟಿಗೆ ಅವಕಾಶ ಪಡೆದುಕೊಳ್ಳಲು ಯತ್ನಿಸಿತು. ಆದರೆ ಚೀನಾ ವ್ಯಾಟಿಕನ್‌ಗೆ ಕಿಮ್ಮತ್ತು ಕೊಡಲಿಲ್ಲ. ಹಾಗಾಗಿ ಪೋಪ್ ಜಾನ್ ಆಸೆಯೊಂದಿಗೇ ಅಸುನೀಗಬೇಕಾಯಿತು. ಅವರ ನಂತರ ಪೋಪ್ ಆಗಿ ಬಂದ ಬೆನೆಡಿಕ್ಟ್ ಅವರಿಗೆ,”Please come to China to bring us love and democracy’ಎಂದು ಹಾಂಕಾಂಗ್‌ನ ಪ್ರಭಾವಿ ಮಾಧ್ಯಮ ದೊರೆ ಜಿಮ್ಮಿ ಲಾ ಕರೆ ನೀಡಿದಾಗ, “I will come’ ಎಂದು ಬೆನೆಡಿಕ್ಟ್ ಕೂಡ ಹೇಳಿದರು. ಆದರೆ ‘ಯಾವಾಗ’ ಭೇಟಿ ನೀಡುತ್ತೀರಿ ಎಂಬ ಪ್ರಶ್ನೆಗೆ  The timing depends on “God’s wish’ಎನ್ನಬೇಕಾಯಿತು! ಪಾಪ, ಪೋಪ್ ಬೆನೆಡಿಕ್ಟ್ ಅವರ ಅಸಹಾಯಕತೆಯನ್ನು ನೋಡಿ, “ಯಾವಾಗ ಬರುತ್ತೀರಿ” ಅಂತ ಕೇಳಿದರೆ “ದೇವರು ಇಚ್ಛಿಸಿದಾಗ’ ಎನ್ನಬೇಕಾಗಿ ಬಂತು. ಅಂದರೆ ಅವರ ಮಾತಿನ ಒಳಾರ್ಥ ಚೀನಾಕ್ಕೆ ಭೇಟಿ ನೀಡಲು ಜೀಸಸ್‌ಗಿಂತ ಚೀನಾ ಅಧ್ಯಕ್ಷರ ಅನುಮತಿ ಮುಖ್ಯ ಹಾಗೂ ಅದು ಯಾವತ್ತೂ ಸಿಗುವುದಿಲ್ಲ!

ಆದರೆ ಭಾರತವನ್ನಾಳುತ್ತಿರುವವರನ್ನು ನೋಡಿ… ಪೋಪ್‌ಗೇಕೆ, ಮಾಟಗಾರ ಬೆನ್ನಿಹಿನ್ ಭೇಟಿಗೇ ಅನುಮತಿ ಕೊಡುವುದಲ್ಲದೆ, ಸ್ವತಃ ಹಾರತುರಾಯಿ ಹಿಡಿದುಕೊಂಡು ಸ್ವಾಗತಕ್ಕೆ ನಿಲ್ಲುತ್ತಾರೆ!

“ಒಂದು ವೇಳೆ, ಭಾರತವೇನಾದರೂ ಹಿಂದು ಧರ್ಮವನ್ನು ತ್ಯಜಿಸಿ ಕ್ರೈಸ್ತ ಅಥವಾ ಇಸ್ಲಾಮಿಕ್ ರಾಷ್ಟ್ರವಾದರೆ ಅದೊಂದು ದೊಡ್ಡ ನಷ್ಟವೆನ್ನದೆ ಬೇರೆ ದಾರಿಯಿಲ್ಲ. ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳನ್ನು ಜಗತ್ತು ಸಾಕಷ್ಟು ನೋಡಿದೆ, ಅನುಭವಿಸಿದೆ. ಪಾಶ್ಚಿಮಾತ್ಯರೇಕೆ ಭಾರತಕ್ಕೆ ಹೋಗುತ್ತಾರೆ? ಭಾರತದ ಆಧ್ಯಾತ್ಮಿಕ ಜ್ಞಾನ, ಆಧ್ಮಾತ್ಮಿಕ ಸಂಪ್ರದಾಯದ ಸಂಪತ್ತಿಗಾಗಿ ಬರುತ್ತಾರೆ. ನಿಜ ಹೇಳಬೇಕೆಂದರೆ ರಫ್ತು ಮಾಡುವಷ್ಟು ಆಧ್ಯಾತ್ಮಿಕ ಸಂಪತ್ತನ್ನು ಭಾರತ ಹೊಂದಿದೆ.”

ಹಾಗಂತ ಹೇಳಿದ್ದು ಯಾವ ಭಜರಂಗಿಯೂ ಅಲ್ಲ!

ಯಾರೋ ಕೋಮುವಾದಿ ಇರಬೇಕು ಎನ್ನಲು ಆತ ಆರೆಸ್ಸೆಸ್ಸಿಗನೂ ಅಲ್ಲ. ಹಿಂದುತ್ವವಾದಿ ಎಂದು ಕರೆಯಲು ಆತ ವಿಎಚ್‌ಪಿ ನಾಯಕನೂ ಅಲ್ಲ, ಮನುವಾದಿ ಎನ್ನಲು ಬ್ರಾಹ್ಮಣನೂ ಅಲ್ಲ. ಒಬ್ಬ ಕ್ಯಾಥೋಲಿಕ್ ಕ್ರೈಸ್ತನಾಗಿ ಮಿಷನರಿಗಳ ಕುಟುಂಬದಲ್ಲಿ ಹುಟ್ಟಿ, ಮನೆಯಲ್ಲೇ ಮಿಷನರಿಗಳ ನಗ್ನದರ್ಶನ ಮಾಡಿಕೊಂಡಂತಹ ಡಾ. ಡೆವಿಡ್ ಫ್ರಾಲಿ!! ಅಮೆರಿಕದ ಫ್ರಾಲಿ, “Christians Under Siege: A Missionary Ploy” ಎಂಬ ಪುಸ್ತಕದಲ್ಲಿ ಮತಾಂತರಿಗಳನ್ನು ಬೆತ್ತಲು ಮಾಡಿದ್ದಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ನಮ್ಮ ಭರತನಾಟ್ಯ ಹಾಗೂ ಯೋಗಾಸನದ ಕ್ರಿಸ್ತೀಕರಣದ ಬಗ್ಗೆ ನಾವು ಎಚ್ಚೆತ್ತುಕೊಳ್ಳಲೇಬೇಕು. ಇಲ್ಲವಾದರೆ ಇಂಡಿಯನೈಜೇಶನ್ ಹೆಸರಿನಲ್ಲಿ ನಡೆಯುವುದು ಹಿಂದು ಸಂಸ್ಕೃತಿಯ ಬಡಮೇಲು ಮಾಡುವ ಕಾರ್ಯವಷ್ಟೇ. ಜತೆಗೆ “ಒಬ್ಬ ಹಿಂದು ಮತಾಂತರಗೊಂಡರೆ ಒಂದು ಸಂಖ್ಯೆ ಕಡಿಮೆಯಾಗುವುದು ಮಾತ್ರವಲ್ಲ, ಹಿಂದು ಧರ್ಮಕ್ಕೆ ಶತ್ರುವೂ ಹುಟ್ಟಿಕೊಂಡಂತೆ” ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ನೆನಪು ಮಾಡಿಕೊಳ್ಳಿ!

ಇಷ್ಟಕ್ಕೂ ‘ಧರ್ಮೋರಕ್ಷತಿ ರಕ್ಷಿತಃ’ ಎಂಬುದು ಬರೀ ಬಾಯಿಮಾತಿಗಷ್ಟೇ ಸೀಮಿತವಾಗಬಾರದು, ಅಲ್ಲವೇ?

Leave a Reply

Your email address will not be published.

This site uses Akismet to reduce spam. Learn how your comment data is processed.