ಹಗರಿಬೊಮ್ಮನಹಳ್ಳಿ: ಹಿಂದೂ ಸಮಾಜದ ಸಂಘಟನೆ ಮಾತ್ರದಿಂದಲೇ ಎಲ್ಲ ಸವಾಲುಗಳಿಗೆ ಪರಿಹಾರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಬೌದ್ಧಿಕ್ ಪ್ರಮುಖ ಕೃಷ್ಣ ಜೋಶಿ ಹೇಳಿದರು.

ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ಸಂಘ ಶಿಕ್ಷಾ ವರ್ಗ ಹಾಗೂ ಪ್ರೌಢ ಪ್ರಾಥಮಿಕ ಶಿಕ್ಷಾ ವರ್ಗದ ಸಾಮರೋಪದಲ್ಲಿ ಅವರು ಮಾತನಾಡಿದರು.
ಸಂಘದ ಆರಂಭ ಸಹಜವಲ್ಲ. ಆಗಿನ ಹಿಂದುಗಳಲ್ಲಿನ ಅಸಂಘಟನೆ, ಹಿಂದೂ ಎಂದು ಹೇಳಿಕೊಳ್ಳಲು ಅಭಿಮಾನ ಶೂನ್ಯತೆ, ಸಮಾಜದಲ್ಲಿನ ತಾರತಮ್ಯ ಎಲ್ಲವನ್ನು ಅವಲೋಕಿಸಿದ ಕೇಶವ ಹೆಡಗೇವಾರರು 1925ರಲ್ಲಿ ಸಂಘ ಆರಂಭಿಸಿದರು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಈಗ ಶತಮಾನದ ಹೊಸ್ತಿಲಲ್ಲಿದೆ. ಅನೇಕ ಸವಾಲು, ಪ್ರತಿರೋಧ, ನಿರ್ಬಂಧಗಳನ್ನು ದಾಟಿ ಹೊಸ ಮೈಲಿಗಲ್ಲನ್ನು ತಲುಪುತ್ತಿದೆ. ದೇಶದಲ್ಲಿ ಯಾವುದೇ ಕಂಟಕ ಎದುರಾದರೂ ಮೊದಲು ನೆರವಿಗೆ ಸಂಘ ಬರುತ್ತದೆ. ಇದಕ್ಕೆ ಇತ್ತೀಚೆಗೆ ನಡೆದ ಓಡಿಸ್ಸಾ ರೈಲು ದುರಂತದಲ್ಲಿ ಸಂಘ ಹಾಗೂ ಹಿಂದೂ ಸಮಾಜ ಸಹಾಯ ಹಸ್ತ ಚಾಚಿರುವುದು ಉತ್ತಮ ಉದಾಹರಣೆ. ಸಂಘ ಸಾಧಿಸಿದ್ದು ಅಪಾರ ಆದರೆ ಬಗೆಹರಿಯದ ಸವಾಲುಗಳು ಇನ್ನೂ ಅನೇಕ. ಭಯೋತ್ಪಾದನೆ, ಮತಾಂತರ, ಶಿಕ್ಷಣ-ಆರೋಗ್ಯ ಕ್ಷೇತ್ರಗಳ ಕೊರತೆ ಮುಂತಾದ ಸವಾಲುಗಳನ್ನು ಹಿಂದೂ ಸಮಾಜದ ಸಂಘಟನೆ ಮೂಲಕ ಪರಿಹರಿಸಲು ಸಂಘ ಪಣತೊಟ್ಟಿದೆ ಎಂದು ಹೇಳಿದರು.
ಮಸ್ಕಿಯ ಖ್ಯಾತ ವೈದ್ಯ ಡಾ. ಶಿವಶರಣಪ್ಪ ಇತ್ಲಿ ಕಾರ್ಯಕ್ರಮದ ಆತಿಥ್ಯವಹಿಸಿ ಮಾತನಾಡಿ, ಸಮಾಜದಲ್ಲಿ ದೇಶಭಕ್ತಿಯ ಜಾಗೃತಿ, ಯುವಪೀಳಿಗೆಗೆ ಸರಿಯಾದ ಮಾರ್ಗದರ್ಶನ ನೀಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವರ್ಗದ ಶಿಕ್ಷಾರ್ಥಿಗಳಿಂದ ಘೋಷ್, ದಂಡ, ನಿಯುದ್ಧ, ಯಷ್ಟಿ, ದಂಡಯುದ್ಧ, ಆಟ ಮುಂತಾದ ಶಾರೀರಿಕ ಪ್ರದರ್ಶನ ನಡೆಯಿತು. ಪ್ರಾಥಮಿಕ ಶಿಕ್ಷಾ ವರ್ಗದ ವರ್ಗಾಧಿಕಾರಿ ರಾಮಸಿಂಗ್ ಹಜಾರೆ ಸ್ವಾಗತಿಸಿದರು. ಪ್ರಥಮ ಸಂಘಶಿಕ್ಷಾ ವರ್ಗದ ವರ್ಗಾಧಿಕಾರಿ ನಾಗರಾಜ ಗುತ್ತೇದಾರ ವರದಿ ವಾಚಿಸಿದರು. ಪ್ರಾಂತ ಸಂಘಚಾಲಕ ಖಗೇಶನ್ ಪಟ್ಟಣಶೆಟ್ಟಿ, ಸಹ ಸಂಘಚಾಲಕ ಅರವಿಂದರಾವ್ ದೇಶಪಾಂಡೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.