ಆರೆಸ್ಸೆಸ್ ವಾರ್ಷಿಕ ಮಹಾಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ-2026 ಪ್ರಾರಂಭ
ಮಾರ್ಚ್ 13, 2026 ಸಮಾಲ್ಖಾ ಹರಿಯಾಣ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ನೀತಿ ನಿರೂಪಕ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾವನ್ನು ಆರೆಸ್ಸೆಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.


ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಗಣ್ಯರಿಗೆ ಶ್ರದ್ಧಾಂಜಲಿ ಸಂತಾಪ: ಪ್ರತಿವರ್ಷ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ರಾಷ್ಟ್ರಕ್ಕೆ ಮತ್ತು ಸಮಾಜಕ್ಕೆ ಕೊಡುಗೆಯನ್ನು ನೀಡಿ ನಮ್ಮನ್ನಗಲಿದ ನಾಡಿನ ಪ್ರಮುಖರಿಗೆ, ಆರೆಸ್ಸೆಸ್ ಹಿರಿಯ ಕಾರ್ಯಕರ್ತರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗುತ್ತದೆ. ಈ ಬಾರಿ ವಿದರ್ಭದ ಸದ್ಗುರುದಾಸ ಮಹಾರಾಜ್, ರಾಷ್ಟ್ರದ ಮಾಜಿ ಗೃಹಮಂತ್ರಿ ಶಿವರಾಜ್ ಪಾಟೀಲ್, ಪುರಾತತ್ವ ಇಲಾಖೆಯ ಅಧ್ಯಕ್ಷರಾಗಿದ್ದ ಪದ್ಮಭೂಷಣ ಕೆ ಎನ್ ದೀಕ್ಷಿತ್, ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್, ನಟ ಧರ್ಮೇಂದ್ರ, ನಿರ್ಮಾಪಕ ಎವಿಎನ್ ಸರವಣನ್, ಕೇರಳದ ಸಿನೆಮಾ ನಟ ಶ್ರೀನಿವಾಸನ್, ಮಿಜೋರಂ ನ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್, ಒಡಿಶಾದ ಭಾಷಾತಜ್ಞೆ ಮಾಲತಿ ಮುರ್ಮು, ಅಸ್ಸಾಂ ನ ಕಲಾವಿದ ಸಮರ್ ಹಜಾರಿಕಾ, ಬಂಗಾಲದ ಸಾಹಿತಿ ಮಣಿಶಂಕರ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಕರ್ನಾಟಕದ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ವಿಜ್ಞಾನಿ ಡಾ. ಮಾಧವ ಗಾಡ್ಗೀಲ್, ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ ಭೀಮಣ್ಣ ಖಂಡ್ರೆ, ಶಿಕ್ಷಣತಜ್ಞ ಮತ್ತು ಉದ್ಯಮಿ ಡಾ.ಎನ್. ವಿನಯ ಹೆಗ್ಡೆ, ಹಿರಿಯ ರಾಜಕಾರಣಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಪತ್ರಿಕಾಗೋಷ್ಠಿಯ ಸಾರಾಂಶ: ಅಖಿಲ ಭಾರತೀಯ ಪ್ರತಿನಿಧಿ ಸಭಾದ ಉದ್ಘಾಟನಾ ದಿನದಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್ ಮಾತನಾಡಿದರು. ಶತಾಬ್ದಿ ವರ್ಷವಾದ ಕಾರಣ ಈ ಬಾರಿಯ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಮಹತ್ವಪೂರ್ಣವಾದದ್ದು. ಸಂಪೂರ್ಣ ದೇಶದಲ್ಲಿ ಸಂಘದ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಸಂಘಕಾರ್ಯದ ವಿಸ್ತಾರ ಮತ್ತು ಸಮಾಜದ ಸಂಪರ್ಕ ಮತ್ತು ಜಾಗರಣದಲ್ಲಿ ಭಾಗಿಯಾಗಿದ್ದರು. ಅದರ ಸಂಪೂರ್ಣ ಮಾಹಿತಿಯನ್ನು ಪಡೆಯುವುದಕ್ಕೆ ಅವರಲ್ಲಿ ಕೆಲವರು ಈ ಪ್ರತಿನಿಧಿ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸುಮಾರು 1400ಕ್ಕೂ ಅಧಿಕ ಮಂದಿ ಈ ಸಭೆಗೆ ಅಪೇಕ್ಷಿತರಿದ್ದಾರೆ ಎಂದರು.


ಆರೆಸ್ಸೆಸ್ ರಾಷ್ಟ್ರೀಯ ಶಾಖಾ ದತ್ತಾಂಶ 2026: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯ ರಾಷ್ಟ್ರೀಯ ದತ್ತಾಂಶದ ಕುರಿತು ತಿಳಿಸಿದ ಸಹಸರಕಾರ್ಯವಾಹರು, ಒಟ್ಟು 55,683 ಸ್ಥಾನಗಳಲ್ಲಿ 88,949 ಶಾಖೆಗಳು ನಡೆಯುತ್ತಿದ್ದು ಕಳೆದ ವರ್ಷಕ್ಕಿಂತ 5820 ಶಾಖೆಗಳು ಹೆಚ್ಚಾಗಿವೆ. ವಾರಕ್ಕೊಮ್ಮೆ ನಡೆಯುವ ಮಿಲನ್ ಸಂಖ್ಯೆ ಕಳೆದ ಬಾರಿಗಿಂತ 459 ಹೆಚ್ಚಾಗಿದ್ದು, ಪ್ರಸ್ತುತ ದೇಶವ್ಯಾಪಿ 32606 ಮಿಲನ್ ಗಳು ಜರುಗುತ್ತಿವೆ. ತಿಂಗಳಿಗೊಮ್ಮೆ ನಡೆಯುವ ಮಂಡಲಿಗಳು ಒಟ್ಟು 13211 ಇವೆ. ಒಟ್ಟು 1,34,766 ಶಾಖೆ, ಮಿಲನ್ ಮತ್ತು ಮಂಡಲಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.


ಶತಾಬ್ದಿ ಕಾರ್ಯಕ್ರಮಗಳು: ಅಕ್ಟೋಬರ್ 2ರ ವಿಜಯದಶಮಿಯಲ್ಲಿ ಸರಸಂಘಚಾಲಕರ ಭಾಷಣದೊಂದಿಗೆ ಶತಾಬ್ದಿ ವರ್ಷದ ಕಾರ್ಯಕ್ರಮಗಳು ಪ್ರಾರಂಭಗೊಂಡವು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಗವಹಿಸಿದರು. ಅದಕ್ಕಿಂತ ಒಂದು ದಿನ ಮೊದಲು ಸಂಘ ಶತಾಬ್ದಿಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯರು ನಾಣ್ಯ ಹಾಗೂ ಅಂಚೆಯನ್ನು ಬಿಡುಗಡೆ ಮಾಡಿದರು ಎಂದು ತಿಳಿಸಿದರು.
ಶತಾಬ್ದಿ ವರ್ಷದ ಪ್ರಯತ್ನಗಳಲ್ಲಿ ಪ್ರಮುಖವಾಗಿ ಎರಡು ಆಯಾಮಗಳಲ್ಲಿ ಕಾರ್ಯವನ್ನು ನಿರ್ವಹಿಸಲಾಗಿತ್ತು. ಮೊದಲನೇಯದ್ದು ಶಾಖೆಗಳ ಮೂಲಕ ಸಂಘಟನಾತ್ಮಕ ವಿಸ್ತಾರ, ಎರಡನೇಯದ್ದು ಸಮಾಜದ ಸಂಪರ್ಕಕ್ಕಾಗಿ, ಸಮಾಜದಲ್ಲಿ ಸದ್ಭಾವ ನಿರ್ಮಾಣಕ್ಕಾಗಿ, ಎಲ್ಲಾ ಸಜ್ಜನ ಶಕ್ತಿಯನ್ನು ಜತೆಯಲ್ಲಿರಿಸಿಕೊಂಡು ಸಮಾಜದ ಸಂಘಟನೆ, ಪರಿವರ್ತನೆ ಮತ್ತು ಜಾಗರಣದ ಕಾರ್ಯವನ್ನು ಮಾಡುವುದು ನಮ್ಮ ಪ್ರಯತ್ನವಾಗಿದೆ ಎಂದರು.

ಪ್ರಮುಖ ನಾಗರಿಕ ಗೋಷ್ಠಿ ಮತ್ತು ಸದ್ಭಾವಗೋಷ್ಠಿಗಳ ಕುರಿತು ಚರ್ಚೆ: ಪ್ರತಿ ಸ್ಥಾನದ ಪ್ರಮುಖ ನಾಗರಿಕರನ್ನು ತಲುಪುವ ದೃಷ್ಟಿಯಿಂದ ಪ್ರಮುಖ ನಾಗರಿಕ ಗೋಷ್ಠಿ, ಸಮಾಜದಲ್ಲಿ ಸದ್ಭಾವನೆಯನ್ನು ಮೂಡಿಸುವ ಸಲುವಾಗಿ ಸ್ಥಾನೀಯ ಸ್ತರದಲ್ಲಿ ಜಾತಿ ಸಮುದಾಯಗಳ ಪ್ರಮುಖರು, ಆಧ್ಯಾತ್ಮಿಕ ಸಂಸ್ಥೆಗಳ ಪ್ರಮುಖರು, ಧಾರ್ಮಿಕ ಕೇಂದ್ರಗಳ ಪ್ರಮುಖರು ಸೇರಿದಂತೆ ಸರ್ವರನ್ನೂ ಒಟ್ಟಿಗೆ ಕೊಂಡೊಯ್ಯುವ ಮೂಲಕ ಸಮಾಜದಲ್ಲಿ ಸುಧಾರಣೆ ತರುವ ಪ್ರಯತ್ನಗಳ ಕುರಿತು ಚರ್ಚೆ ಸದ್ಭಾವನ ಗೋಷ್ಠಿಗಳಲ್ಲಿ ನಡೆಯಲಿದೆ ಎಂದು ನುಡಿದರು.
ಮುಖ್ಯವಾಗಿ ಪಂಚಪರಿವರ್ತನೆಯ (ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಭಾವ ಜಾಗರಣ ಮತ್ತು ನಾಗರಿಕ ಶಿಷ್ಟಚಾರ) ವಿಷಯವನ್ನು ವಸತಿ ಅಥವಾ ಮಂಡಲ ಸ್ತರದಲ್ಲಿ ಎಲ್ಲರಿಗೂ ತಲುಪಬೇಕು ಎಂಬ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ವಿಷಯದ ಕುರಿತು ಸ್ಥಾನೀಯ ಪ್ರಮುಖರು, ವೈಚಾರಿಕ ವಲಯದ ಪ್ರಮುಖರ ಜೊತೆಗೆ ಚರ್ಚಿಸಿ, ಸಮಾಜದಲ್ಲಿ ಪಂಚಪರಿವರ್ತನೆಗೆ ಪೂರಕ ಮಾನಸಿಕತೆಯ ನಿರ್ಮಾಣಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಪ್ರಮುಖ ನಾಗರಿಕ ಗೋಷ್ಠಿ ಮತ್ತು ಸದ್ಭಾವ ಗೋಷ್ಠಿಗಳು ಸಹಕಾರಿ ಆಗಲಿವೆ ಎಂದು ಅಭಿಪ್ರಾಯಪಟ್ಟರು.
10ಕೋಟಿ ಗೃಹಸಂಪರ್ಕ: ಸಮಾಜದ ಸಂಪರ್ಕಕ್ಕಾಗಿ ಅನೇಕ ಪ್ರಯತ್ನಗಳನ್ನು ಶತಾಬ್ದಿ ಸಂದರ್ಭದಲ್ಲಿ ನಾವು ಮಾಡಿದ್ದೇವೆ. ಪ್ರಮುಖವಾಗಿ ಪ್ರತಿ ಗ್ರಾಮದ ಪ್ರತಿ ಮನೆಯನ್ನೂ ಸಂಪರ್ಕಿಸುವ ಪ್ರಯತ್ನವನ್ನು ನಾವು ಮಾಡಿದ್ದು ಇಲ್ಲಿಯವರೆಗೆ 3ಲಕ್ಷದ 90ಸಾವಿರ ಗ್ರಾಮಗಳ 10 ಕೋಟಿ ಮನೆಗಳನ್ನು ನಾವು ತಲುಪಿದ್ದೇವೆ. ಈ ಪ್ರಯತ್ನ ಇನ್ನೂ ಜಾರಿಯಲಿರಲಿದೆ. ಶತಾಬ್ದಿ ವರ್ಷ 2026ರ ಅಕ್ಟೋಬರ್ ವರೆಗೆ ಇರಲಿದ್ದು ಕೆಲವು ಪ್ರಾಂತಗಳಲ್ಲಿ ಈ ಪ್ರಯತ್ನ ಪೂರ್ಣಗೊಂಡಿದೆ, ಕೆಲವು ಪ್ರಾಂತಗಳಲ್ಲಿ ನಡೆಯುತ್ತಿದೆ,ಇನ್ನು ಮೂರು ಅಥವಾ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಗೃಹಸಂಪರ್ಕದ ಅನುಭವ ಬಹಳ ವಿಶೇಷವಾಗಿತ್ತು. ಸಮಾಜದ ಸರ್ವರನ್ನೂ ತಲುಪುವ ಪ್ರಯತ್ನ ನಮ್ಮದು. ಅದರ ಹಿನ್ನೆಲೆಯಲ್ಲಿ ಉಲ್ಲೇಖಿಸಬಹುದಾದ ಅಂಶವೆಂದರೆ ಕೇರಳಂ ನಲ್ಲಿ ಕಮ್ಯುನಿಷ್ಠ್ ವಿಚಾರಧಾರೆಯ ವ್ಯಕ್ತಿಗಳ ಮನೆಗಳು, ಪೂಜಾ ಪದ್ಧತಿಯ ದೃಷ್ಟಿಯಿಂದ ಮುಸ್ಲಿಂ ಮತ್ತು ಕ್ರೈಸ್ತ ಮನೆಗಳನ್ನು ಸಂಪರ್ಕಿಸಲಾಗಿತ್ತು. ಕೇರಳಂ ನ ಒಂದು ಪ್ರದೇಶದಲ್ಲೇ 55,000 ಮುಸ್ಲಿಂ ಮನೆಗಳನ್ನು, 54000 ಕ್ರೈಸ್ತರ ಮನೆಗಳನ್ನು ಸಂಪರ್ಕಿಸಲಾಗಿದ್ದು ಗಮನಾರ್ಹ ಸಂಗತಿ. ಎಲ್ಲಾ ಮನೆಗಳಲ್ಲಿ ಪಂಚಪರಿವರ್ತನೆ ವಿಷಯದ ಕುರಿತು ಚರ್ಚೆ ಮಾಡಿದೆವು.
36000 ಹಿಂದು ಸಮ್ಮೇಳನಗಳು: ದೇಶದಲ್ಲಿ ಶತಾಬ್ದಿ ವರ್ಷದ ನಿಮಿತ್ತ ಇಲ್ಲಿಯವರೆಗೆ 37048ಕ್ಕೂ ಅಧಿಕ ಹಿಂದು ಸಮ್ಮೇಳನಗಳು ನಡೆದಿವೆ. ಇನ್ನೂ ಕೆಲವು ಕಡೆಗಳಲ್ಲಿ ನಡೆಯಲಿವೆ. ನಗರ ಪ್ರದೇಶಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ ಮತ್ತು ಕುಗ್ರಾಮಗಳಲ್ಲೂ ಎಲ್ಲರೂ ಜೊತೆಯಾಘಿ ಹಿಂದು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ದೇಶದಲ್ಲಿದ್ದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಸಹಜವಾಗುತ್ತಿದ್ದು, ಸರ್ಕಾರದ ಈ ಪ್ರಯತ್ನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಾಗತಿಸುತ್ತದೆ. ಮತ್ತು ಮಣಿಪುರದಲ್ಲಿ ಇದುವರೆಗೂ ಬಿಗಡಾಯಿಸಿದ್ದ ಪರಿಸ್ಥಿತಿ ಈಗ ಸುಧಾರಿಸುತ್ತಿದೆ. ರಾಜಕೀಯ ಸ್ಥಿರತೆಯ ಜೊತೆಗೆ ಅದಕ್ಕಿಂತಲೂ ಮಿಗಿಲು ಅಲ್ಲಿನ ಸಮಾಜದ ಸಂಪೂರ್ಣ ಬುಡಕಟ್ಟುಗ ಜನಾಂಗಗಳ ಪ್ರಮುಖರು ಒಟ್ಟಾಗಿ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸಂಘದ ಭೂಮಿಕೆಯೂ ಈ ಪ್ರಯತ್ನಗಳ ಪರಿಣಾಮ ಲಭಿಸುತ್ತಿದ್ದು ಸಂಘ ಅದನ್ನೂ ಸ್ವಾಗತಿಸುತ್ತದೆ. ಹಾಗೆಯೇ ನಮ್ಮ ಪಕ್ಕದ ದೇಶ ಬಾಂಗ್ಲಾದೇಶದಲ್ಲಿ ಹಿಂದುಗಳಿಗೆ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರಗಳು ಹಿಂದುಗಳ ಮಾನ ಸಂರಕ್ಷಣೆ, ಹಕ್ಕು ಮತ್ತು ಆಸಕ್ತಿಗಳ ಸಂರಕ್ಷಿಸುವುದಕ್ಕೆ ಪ್ರಯತ್ನಮಾಡಬೇಕೆಂದು ಸಂಘ ಆಗ್ರಹಿಸುತ್ತದೆ ಎಂದರು.
4 ಮಹಾನಗರಗಳಲ್ಲಿ ಸರಸಂಘಚಾಲಕರ ಸಂವಾದ ಕಾರ್ಯಕ್ರಮ: ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಸರಸಂಘಚಾಲಕರಾದ ಡಾ|| ಮೋಹನ್ ಭಾಗವತ್ ಅವರ ವ್ಯಾಖ್ಯಾನಮಾಲೆ ಕಾರ್ಯಕ್ರಮಗಳು ನಡೆದವು. ದೆಹಲಿ, ಮುಂಬೈ, ಕಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅದರ ಜೊತೆಗೆ ಸರಸಂಘಚಾಲಕರು ರಾಷ್ಟ್ರದ ಎಲ್ಲಾ ರಾಜ್ಯಗಳ ರಾಜಧಾನಿಗೆ ಭೇಟಿ ನೀಡಿ ಸಂವಾದದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮಗಳಲ್ಲಿ ಸರಸಂಘಚಾಲಕರ ಭಾಗವಹಿಸುವಿಕೆ ಮತ್ತು ಮಾರ್ಗದರ್ಶನ ಉತ್ತಮ ಪರಿಣಾಮವನ್ನು ಬೀರಿದೆ. ಎಲ್ಲಾ ಸಂವಾದಗಳಲ್ಲಿ ಹಲವು ರೀತಿಯ ಪ್ರಶ್ನೆಗಳಿಗೆ ಸರಸಂಘಚಾಲಕರು ನಮಗೆಲ್ಲರಿಗೂ ಮಾರ್ಗದರ್ಶನ ನೀಡುವಂತಹ ಉತ್ತರಗಳನ್ನು ನೀಡಿದ್ದಾರೆ. ಕೇವಲ 4 ಮಹಾನಗರಗಳಲ್ಲಿ ನಡೆದ ವ್ಯಾಖ್ಯಾನಮಾಲಾ ಕಾರ್ಯಕ್ರಮಗಳಲ್ಲಿ ಸರಸಂಘಚಾಲಕರು 1000ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ, 20 ಗಂಟೆಗಳಿಗೂ ಅಧಿಕ ಸಮಯವನ್ನು ಪ್ರಶ್ನೋತ್ತರಕ್ಕಾಗಿಯೇ ನೀಡಿದ್ದಾರೆ. ಎಲ್ಲಾ ರೀತಿಯ ಅಭಿಪ್ರಾಯಗಳನ್ನು ಒಟ್ಟಿಗೆ ಇರಿಸಿ, ಸಮಾಜದಲ್ಲಿ ಸಮ್ಮತಿಯ ನಿರ್ಮಿಸುವ ಮೂಲಕ, ದು ನಾಗರಿಕತೆಯ ಭವಿಷ್ಯದ ದೃಷ್ಟಿಯಿಂದ ಹಿಂದು ಸಮಾಜ ಏನು ಮಾಡಬೇಕು ಎನ್ನುವುದನ್ನು ಅವರು ತಿಳಿಸಿದರು.
ಮಣಿಪುರದಲ್ಲಿ ಸಂಘಕಾರ್ಯ ಹೇಗೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಹಸರಕಾರ್ಯವಾಹ ಮುಕುಂದ ಸಿ ಆರ್ ಅವರು ಸುಮಾರು 15 ವರ್ಷಗಳಿಂದ ಸಂಘದ ಕಾರ್ಯ ಮಣಿಪುರಲ್ಲಿದೆ. ಮೈಥೇಯಿ, ಕುಕಿ, ನಾಗಿ ಸೇರಿದಂತೆ ಎಲ್ಲಾ ಬುಡಕ್ಕಟು ಜನಾಂಗಗಳೊಡನೆ ನಮ್ಮ ಸಂಪರ್ಕವೂ ಇದೆ, ಆ ಸಮುದಾಯಗಳಲ್ಲಿ ಸ್ವಯಂಸೇವಕ, ಕಾರ್ಯಕರ್ತರು ಇದ್ದಾರೆ. ಅಲ್ಲಿನ ಸಂಘದ ಅಸ್ತಿತ್ವವನ್ನು ಆಧಾರವನ್ನಾಗಿಸಿಕೊಂಡು ಕೇವಲ ಈಗ ಸಮಸ್ಯೆಗಳು ಉಂಟಾದಾಗ ಮಾತ್ರವಲ್ಲದೇ ಉಳಿದ ಸಂದರ್ಭಗಳಲ್ಲೂ ಎಲ್ಲರ ನಡುವೆ ಉತ್ತಮ ಬಾಂಧವ್ಯ ಮೂಡುವಂತೆ ಮಾಡುವ ಪ್ರಯತ್ನಗಳಾಗಿತ್ತು ಮತ್ತು ಅದು ಜಾರಿಯಲ್ಲಿತ್ತು. ಸಂಘದ ನಮ್ಮ ಕಾರ್ಯಕರ್ತರು ಅಲ್ಲಿನ ಜನಜಾತಿ ಬಂಧುಗಳ ಪ್ರಮುಖರ ನಡುವೆ ಮಾತುಕಥೆ ನಡೆಸಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ನಾವೆಲ್ಲರೂ ಭಾರತ ಮಾತೆಯ ಸಂತಾನ ಎನ್ನುವ ಭಾವವನ್ನು ಮೂಡಿಸುವಲ್ಲಿ ಶ್ರಮವಹಿಸಿದರು. ನಾವೆಲ್ಲರೂ ಸೇರಿ ಭಾರತೀಯ ಸಮಾಜದ, ಸ್ವಧರ್ಮದ ಸಂರಕ್ಷಣೆ ಮಾಡುವುದಕ್ಕೆ ನಾವೆಲ್ಲರೂ ಒಂದಾಗಿರಬೇಕು ಎಂಬ ಭಾವ ನಿರ್ಮಾಣ ಮಾಡುವುದು ನಮ್ಮ ಪ್ರಯತ್ನವಾಗಿತ್ತು. ರಾಜಕೀಯ ಸ್ತಿರತೆ ತರುವ ಪ್ರಯತ್ನವನ್ನು ಸರ್ಕಾರ ಮಾಡಿತು. ನಾವು ಎಲ್ಲರನ್ನು ಒಂದುಗೂಡಿಸುವ ಪ್ರಯತ್ನ ಮಾಡಿದೆವು. ಕಳೆದ ಎರಡು ವರ್ಷಗಳಲ್ಲಿ ನಮ್ಮ ಪ್ರಯತ್ನ ತ್ತಮ ಪರಿಣಾಮವನ್ನುಂಟುಮಾಡಿದೆ ಎಂದರು.
ಪಶ್ಚಿಮ ಏಷ್ಯದಲ್ಲಿ ಉಂಟಾಗಿರುವ ಯುದ್ಧದ ಸಂದರ್ಭದಲ್ಲಿ ಭಾರತದ ನಿಲುವು ಏನಿರಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಭಾರತ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತಿದೆ. ಅದನ್ನು ಮಾಧ್ಯಮಗಳಲ್ಲಿ ನಾವು ಕೇಳಿದ್ದೇವೆ, ಓದಿದ್ದೇವೆ. ನಮ್ಮ ದೇಶದ ಪ್ರಧಾನಮಂತ್ರಿ, ವಿದೇಶಾಂಗ ಮಂತ್ರಿಗಳು ವಿವಿಧ ದೇಶಗಳ ಪ್ರಮುಖರೊಂದಿಗೆ ಸಂವಾದದಲ್ಲಿ ನಿರತರಾಗಿದ್ದಾರೆ. ಭಾರತದ ನಿಲುವು ಏನಾಗಿರಬೇಕು ಎನ್ನುವುದನ್ನು ನಮ್ಮ ರಾಷ್ಟ್ರದ ಸರ್ಕಾರ ಹೇಳಿದೆ. ಸರ್ಕಾರದ ನಿಲುವೇ ನಮ್ಮ ನಿಲುವು. ಆದಷ್ಟು ಬೇಗ ಈ ಪರಿಸ್ಥಿತಿ ಸರಿಯಾಗಬೇಕು ಎನ್ನುವುದು ನಮ್ಮ ಅಪೇಕ್ಷೆ. ಸಂಘ ಎಲ್ಲಾ ಅಂತರಾಷ್ಟ್ರೀಯ ವಿಷಯಗಳಿಗೂ ತನ್ನ ಅಭಿಪ್ರಾಯ ಹೇಳುವುದಿಲ್ಲ. ಆದರೆ ಆಯಾ ದೇಶಗಳ ಸ್ಥಾನೀಯ ಸಮಾಜ ಮತ್ತು ನಮ್ಮ ಭಾರತೀಯ ಸಮಾಜದ ಎಲ್ಲರ ಹಿತರಕ್ಷಣೆಯಿಂದ ಒಳ್ಳೆಯದೇ ಆಗಬೇಕು ಎನ್ನುವುದು ನಮ್ಮ ಆದ್ಯತೆ. ವಿವಿಧ ದೇಶಗಳಲ್ಲಿನ ಹಿಂದು ಸಂಘಟನೆಗಳ ಜೊತೆಗೆ ಸಂಘದ ಸಂಪರ್ಕವಿದೆ. ಇಲ್ಲಿಯವರೆಗೆ ಭಾರತೀಯ ಸಮಾಜದ ಜನರಿಗೆ ಬಹುದೊಡ್ಡ ಆತಂಕ ಅಲ್ಲಿ ಎದುರಾಗಿಲ್ಲ. ಎಲ್ಲರೊಂದಿಗೆ ಎಲ್ಲಾ ರೀತಿಯಲ್ಲೂ ಸಂಪರ್ಕ, ಸಂಬಂಧವನ್ನು ಹೊಂದುವ ಎಲ್ಲ ಪ್ರಯತ್ನವನ್ನು ಮಾಡುತ್ತೇವೆ ಎಂದು ನುಡಿದರು.
ಸಂಘದ ಸಂರಚನೆಯ ಕುರಿತಾದ ಪ್ರಶ್ನೆಗೆ ಉತ್ತರ ನೀಡಿದ ಸಹ ಸರಕಾರ್ಯವಾಹರು ಸಮಯ ಸಮಯಕ್ಕೆ ಕೆಲವು ಬದಲಾವಣೆಗಳಾಗುತ್ತಿರುತ್ತವೆ. ಅದು ವಿಶೇಷ ಸಂಗತಿಯೇನಲ್ಲ. ಈಗಲೂ ಕೆಲವು ಬದಲಾವಣೆಗಳ ಕುರಿತು ಚರ್ಚೆ ಜಾರಿಯಲ್ಲಿದೆ. ನಿರ್ಣಯದ ನಂತರ ತಿಳಿಸಲಾಗುತ್ತದೆ. ಇನ್ನು ಭೌಗೋಳಿಕ ರಚನೆಯ ಕುರಿತು ಸಮಯಕ್ಕೆ ಸರಿಯಾದ, ಸಂಘಟನಾತ್ಮಕ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ ಎಂದು ಹೇಳಿದರು.
ಯುಜಿಸಿ ವಿಷಯದ ಕುರಿತಾದ ಪ್ರಶ್ನೆಗೆ ಉತ್ತರ ನೀಡಿ ಮಾತನಾಡಿದ ಮುಕುಂದ ಅವರು ಹಿಂದು ಸಮಾಜದ ಸಂಘಟನೆಗಾಗಿ, ಹಿಂದು ಸಮಾಜದಲ್ಲಿನ ಬೇಧಭಾವವನ್ನು ದೂರಗೊಳಿಸುವುದಕ್ಕಾಗಿಯೇ ಸಂಘದ ನಿರ್ಮಾಣವಾಗಿದೆ. ಸಮಾಜದ ಎಲ್ಲಾ ವರ್ಗಗಳ ಬಂಧುಗಳು ಒಂದು ಕಡೆ ಸೇರಿ ಇಂತಹ ವಿಷಯಗಳ ಕುರಿತು ಯೋಚಿಸಬೇಕು ಎಂದೇ ಹೇಳುತ್ತದೆ. ಹಾಗೆಯೇ ಈಗ ಎದ್ದಿರುವ ಯುಜಿಸಿ ವಿವಾದದ ಕುರಿತು ನ್ಯಾಯಾಲಯ ಮತ್ತು ಸರ್ಕಾರದ ಮಟ್ಟದಲ್ಲಿ ಅನೇಕ ಪ್ರಯತ್ನಗಳಾಗುತ್ತಿವೆ. ಆದರೆ ಸಂಘದ ಪ್ರಯತ್ನ ಕೇವಲ ಈ ಸಮಯದಲ್ಲಿ ಮಾತ್ರವಲ್ಲದೇ ಸಮಾಜದ ಸರ್ವವರ್ಗಗಳ ಸರ್ವಬಂಧುಗಳನ್ನು ಸಂಘಟಿಸುವುದಾಗಿದೆ. ಸಮಾಜದ ಏಕತೆ, ರಾಷ್ಟ್ರದ ಏಕತೆ ಎನ್ನುವುದು ನಮ್ಮ ನಿಲುವು. ಸಂಘದ ಜನ್ಮವಾದದ್ದೆ ಹಿಂದು ಸಮಾಜದಲ್ಲಿನ ಶ್ರೇಷ್ಠ-ಕನಿಷ್ಠ ಬೇಧಭಾವಗಳನ್ನು ದೂರಗೊಳಿಸುತ್ತಾ ಸಮರಸತೆಯ ಸುಸಂಘಟಿತ ಸಮಾಜವನ್ನು ನಿರ್ಮಾಣ ಮಾಡುವುದಕ್ಕಾಗಿಯೇ ಎಂದು ತಿಳಿಸಿದರು.
ಪತ್ರಿಕಾಗೋಷ್ಠ್ರಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಸಹ ಪ್ರಚಾರ ಪ್ರಮುಖರಾದ ನರೇಂದ್ರ ಠಾಕೂರ್ ಮತ್ತು ಪ್ರದೀಪ್ ಜೋಶಿ ಉಪಸ್ಥಿತರಿದ್ದರು.