ಸಂತೋಷ್ ಜಿ ಆರ್
ರಾಜ್ಯಾದ್ಯಂತ ಗ್ರಾಮಪಂಚಾಯಿತಿ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಹಳ್ಳಿಹಳ್ಳಿಗಳಲ್ಲಿ ಸಡಗರ ಮುಗಿಲು ಮುಟ್ಟಿದೆ. ಗೆದ್ದ ಅಭ್ಯರ್ಥಿಗಳ ಸಂಭ್ರಮಾಚರಣೆ. ಮೆರವಣಿಗೆ, ಸಿಹಿ ಹಂಚುವಿಕೆಯ ಭರಾಟೆ ಕಣ್ಣಿಗೆ ರಾಚುತ್ತಿದೆ. ಇದು ಅಗತ್ಯವೇ? ಎಂಬುದು ಬೇರೆ ಪ್ರಶ್ನೆಯೂ ತೋರದಿರುವುದಿಲ್ಲ. ಒಂದು ಅವಿಭಕ್ತ ಕುಟುಂಬದಲ್ಲಿ ಜವಾಬ್ದಾರಿಯೊಂದಕ್ಕೆ ಸದಸ್ಯನೊಬ್ಬನ ಆಯ್ಕೆ ನಡೆಯುವಷ್ಟು ಸೌಹಾರ್ದ ವಾತಾವರಣದಲ್ಲಿ ಚುನಾವಣೆಗಳು ನಡೆಯಬೇಕಿತ್ತು. ಆದರೆ ಈ ಚುನಾವಣೆಗಳಲ್ಲೂ ಹಣ, ಆಮೀಷ, ರಾಜಕೀಯ ಜಿದ್ದಾಜಿದ್ದಿಗಳು ಕೆಲಸ ಮಾಡಿದ್ದು ಸುಳ್ಳಲ್ಲ.
ಇದಕ್ಕಿಂತಲೂ ಅಪಾಯಕಾರಿ ಬೆಳವಣಿಗೆ ಎಂದರೆ ಗ್ರಾಮ ಪಂಚಾಯಿತಿಗಳಲ್ಲಿ ದೇಶವಿರೋಧಿ ಶಕ್ತಿಗಳು ಸಹ ಗೆದ್ದು ಬಂದಿರುವುದು. ಎಸ್ ಡಿ ಪಿ ಐ ಅನ್ನು ಗ್ರಾಮಮಟ್ಟದಿಂದಲೂ ಬೆಳೆಸಲು ಅದರ ನಾಯಕರು ಮಾಡುತ್ತಿರುವ ಪ್ರಯತ್ನ ಈಗ ಗೋಚರವಾಗುತ್ತಿದೆ. ದೇಶವಿರೋಧಿ ಚಟುವಟಿಕೆಗಳಲ್ಲೇ ತನ್ನನ್ನು ತೊಡಗಿಸಿಕೊಂಡಿರುವ ಪಕ್ಷವೊಂದು ಕೊಲೆ, ದೊಂಬಿಗಳು ನಡೆಸುವವರನ್ನೇ ಕಾರ್ಯಕರ್ತರನ್ನಾಗಿ ಗುರುತಿಸುವುದು ಸಹಜ. ಇಂತಹ ಸಂಘಟನೆ ಭಾರತದ ಕಾನೂನು, ಪ್ರಜಾಪ್ರಭುತ್ವವನ್ನು ದುರುಪಯೋಗ ಪಡಿಸಿಕೊಂಡು ಮುಂದುವರೆಯುತ್ತಿರುವುದು ಆಘಾತಕಾರಿ.
ಉಜಿರೆಯಲ್ಲಿನ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಇಬ್ಬರು ಎಸ್ ಡಿ ಪಿ ಐ ಹುರಿಯಾಳುಗಳು ವಿಜಯೋತ್ಸವ ನಡೆಸಿದ್ದಾರೆ. ಆಗ ಕೇಳಿಬಂದದ್ದು ‘ಪಾಕಿಸ್ತಾನ್ ಜಿಂದಾಬಾದ್ ಘೋಷಣೆ’. ರಾಜಕೀಯ, ಸಾಮಾಜಿಕ ಸಂಘಟನೆಗಳು ವಿಭಿನ್ನ ವಿಚಾರಧಾರೆಗಳನ್ನು ಹೊಂದಿರುವುದು ತಪ್ಪೇನಲ್ಲ. ಅದು ಅಭಿವ್ಯಕ್ತಿ ಮತ್ತು ಅಭಿಪ್ರಾಯ ಸ್ವಾತಂತ್ರ್ಯದ ಪ್ರತೀಕವೂ ಹೌದು. ಇದೇ ನಮ್ಮ ದೇಶದ ಪ್ರಜಾಪ್ರಭುತ್ವದ ಸೊಗಸು. ಇದಕ್ಕೆ ಸಂವಿಧಾನದ ರಕ್ಷಣೆಯೂ ಇದೆ. ಆದರೆ ಈ ಸ್ವಾತಂತ್ರ್ಯ ದೇಶಕ್ಕೆ ಮಾರಕವಾದರೆ? ಮುಲಾಜಿಲ್ಲದೆ ಇದನ್ನು ಕಠಿಣ ಕ್ರಮಗಳಿಂದ ದಮನಿಸಲೇ ಬೇಕು.
ದೈಹಿಕ ಹಲ್ಲೆ, ಕೊಲೆ ಹಾಗೂ ಗಲಭೆಗಳನ್ನು ಮಾಡುವುದರ ಮೂಲಕ ಹಿಂದುಗಳಲ್ಲಿ ಹೆದರಿಕೆಯನ್ನು ಮುಸಲ್ಮಾನರಲ್ಲಿ ಮತೀಯ ಉನ್ಮಾದವನ್ನೂ ಹೆಚ್ಚಿಸಲು ಎಸ್.ಡಿ.ಪಿ.ಐ ಪಕ್ಷ ಪ್ರಯತ್ನಿಸುತ್ತಿರುವುದು ಹಿಂದೆಯೂ ಬಹು ಬಾರಿ ಸಾಬೀತಾಗಿದೆ. ಇದನ್ನು ನಿಷೇಧಿಸದೇ ಬಿಟ್ಟಿರುವುದಕ್ಕೆ ಯಾವ ಕಾರಣವೋ ಗೊತ್ತಿಲ್ಲ. ಹಿಂದಿನ ಸಿಮಿಯಂತಹ ಕ್ರಿಮಿನಲ್ ಕೂಟಗಳೇ ಈಗ ಕೆ ಎಫ್ ಡಿ, ಪಿ ಎಫ್ ಐ ಗಳಾಗಿವೆ. ಇಂತಹವುಗಳ ರಾಜಕೀಯ ಮುಖ ಎಸ್ ಡಿ ಪಿ ಐ. ಸಿದ್ಧರಾಮಯ್ಯನವರು ತಮ್ಮ ಆಡಳಿತ ಕಾಲದಲ್ಲಿ ಈ ದುಷ್ಟಕೂಟಗಳನ್ನು ತಮ್ಮ ಮಡಿಲಲ್ಲಿಟ್ಟುಕೊಂಡೇ ಸಲಹಿದರು. ರಾಜ್ಯಾದ್ಯಂತ ಅನೇಕ ದುಷ್ಕೃತ್ಯಗಳಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದ ಈ ಸಂಘಟನೆಗಳ ಗೂಂಡಾಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದರು, ಕೇಸುಗಳನ್ನು ತೆಗೆದು ಹಾಕಿದರು. ದೇಶದ, ರಾಜ್ಯದ ಹಿತಕ್ಕಿಂತ ಪಕ್ಷಸ್ವಾರ್ಥವೇ ಪ್ರಮುಖವೆಂದು ಭಾವಿಸುವ ವ್ಯಕ್ತಿ ಮಾತ್ರ ಇಂತಹ ನಾಡದ್ರೋಹದ ಕಾರ್ಯ ಮಾಡಲು ಸಾಧ್ಯ.
ಎಲ್ಲೆಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಆಗಿದೆಯೋ ಅಲ್ಲೆಲ್ಲಾ ಈ ಮುಸ್ಲಿಂ ಸಂಘಟನೆಗಳ ಹೆಸರೇ ಪ್ರಮುಖವಾಗಿ ಕೇಳಿಬರುತ್ತದೆ. ದೊಂಬಿ, ಹಿಂಸೆಗಳ ಘಟನೆಗಳಂತೂ ಅಸಂಖ್ಯ. ತಾವು ಪ್ರಗತಿಪರ ಎಂದುಕೊಳ್ಳುವ ಏಕತೆಯ ವಿರೋಧಿ ಸಂಘಟನೆಗಳು, ನಗರ ನಕ್ಸಲರು, ಕೆಲ ಅಂಡೆಪಿರ್ಕಿ ಸಾಹಿತಿ, ಕವಿ, ಪತ್ರಕರ್ತರು ಇವರ ವೇದಿಕೆಗಳಲ್ಲಿ, ಪ್ರದರ್ಶನಗಳಲ್ಲಿ ಕಾಣಿಸಿಕೊಳ್ಳುವುದು ಇವರ ಮಾರ್ಕೆಂಟಿಗ್ ತಂತ್ರದ ಭಾಗ. ಹೆಸರಿನಲ್ಲಿ ಮತೀಯತೆ ಇಲ್ಲ ಆದರೆ ಅಜೆಂಡಾದಲ್ಲಿ ಸಂಪೂರ್ಣ ಹಿಂದೂದ್ವೇಷ. ಇಂತಹ ಗುಂಪುಗಳನ್ನು ನಿಷೇಧಿಸದಿದ್ದರೆ ಹೋಗಲಿ ಇವರು ನಡೆಸುತ್ತಿರುವ ಕ್ರಿಮಿನಲ್ ಹಾಗೂ ದೇಶವಿರೋಧಿ ಕೃತ್ಯಗಳನ್ನು ಅದು ಆದಾಗಲೇ, ಬಿಡಿ ಬಿಡಿ ಪ್ರಕರಣಗಳಾಗಿ ಆದರೂ ಸರಿ ಉಗ್ರವಾಗಿ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟರಮಟ್ಟಿಗೆ ಆತಂಕ ಎದುರಾಗುತ್ತಿರಲಿಲ್ಲ. ತಿಂಗಳ ಹಿಂದೆಯಷ್ಟೇ ಮಂಗಳೂರಿನ ಕದ್ರಿಯಲ್ಲಿ ಅದರಲ್ಲೂ ನ್ಯಾಯಾಲಯದ ಆವರಣದಲ್ಲೇ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೋಯ್ಬಾ ಪರ ಗೋಡೆ ಬರಹಗಳು ಕಂಡು ಬಂದಿದ್ದವು.
ಹನುಮಜಯಂತಿಗೆ ತಡೆ, ಗಣೇಶನ ಮೆರವಣಿಗೆ ಮೇಲೆ ಕಲ್ಲೆಸೆತ, ಗೋ ಕಳ್ಳತನ, ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ, ಕರೋನಾ ವಿರುದ್ಧ ಕಾರ್ಯ ನಿರ್ವಹಿಸುತ್ತಿದ್ದ ಆರೋಗ್ಯ ಕಾರ್ಯಕರ್ತೆಯರು, ಪೊಲೀಸರ ಮೇಲೆ ಹಲ್ಲೆ ಮತ್ತು ಹಿಂದೂ ಹುಡುಗಿಯರನ್ನು ಹಾರಿಸಿಕೊಂಡು ಹೊಗುವ ಲವ್ ಜಿಹಾದ್, ದೇವಾಯಗಳಲ್ಲಿ ವಿಗ್ರಹ ಭಂಜನ ಈ ಎಲ್ಲ ಪ್ರಕರಣಗಳಲ್ಲೂ ತಪ್ಪದೇ ಕೇಳಿ ಬರುವ ಹೆಸರು ಇವೇ ಸಂಘಟನೆಗಳ ಹಿಂಬಾಲಕರೇ. ಅನೇಕ ಮಸೀದಿಗಳು, ಮೌಲ್ವಿಗಳು ಸಹ ಗೂಂಡಾಗಳ ಪೋಷಕರಾಗಿದ್ದಾರೆ.
ಇಂತಹ ದುಷ್ಟತನದ ವಿರುದ್ಧ ಪೊಲೀಸರು ಮತ್ತು ಸರ್ಕಾರದ ಗೃಹ ಇಲಾಖೆ ಬರೀ ಹೇಳಿಕೆಗಳಿಗೆ ಸೀಮಿತರಾಗದೇ ತೀವ್ರಕ್ರಮ ಕೈಗೊಂಡರೇ ಮಾತ್ರ ರಾಜ್ಯ ನೆಮ್ಮದಿಯ ಬೀಡಾದೀತು ಇಲ್ಲದೆ ಹೋದರೇ ಹಿಂದೂ ವಿರೋಧಿ, ರಾಷ್ಟ್ರವಿರೋಧಿ ಮೊಟ್ಟೆಗಳಿಗೆ ಕಾವುಕೊಟ್ಟು ಮರಿಮಾಡುವ ಗೂಡಾದೀತು.