
ಇತ್ತೀಚಿಗೆ ಸಂವಾದ ಚ್ಯಾನಲ್ನ ಪತ್ರಕರ್ತ ಶ್ರೀ ತೇಜ ತಿಮ್ಮಪ್ಪ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಗುರುವಾರ ಸಂಜೆ ಸಾಮರಸ್ಯ ವೇದಿಕೆ ಕರ್ನಾಟಕ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪತ್ರಕರ್ತೆ ಶ್ರೀಲಕ್ಷ್ಮೀ ರಾಜ್ಕುಮಾರ್ ಅವರು “ಪತ್ರಕರ್ತರು ಮುಕ್ತವಾಗಿ ತಮ್ಮ ವೃತ್ತಿಯನ್ನು ಮಾಡುವ ವಾತಾವರಣವನ್ನು ಕಲ್ಪಿಸುವುದು ಒಂದು ಸಮಾಜದ ಆರೋಗ್ಯಕರ ಲಕ್ಷಣ,ಆದರೆ ಇಲ್ಲಿ ಪತ್ರಕರ್ತರ ಮೇಲೆ ಹಲ್ಲೆಯಾಗುತ್ತಿದೆ,ಇದರಿಂದ ಮಾಧ್ಯಮ ಕ್ಷೇತ್ರಕ್ಕೆ ಹೊಸದಾಗಿ ಬರುವವರ ಮನಸ್ಸಿನಲ್ಲಿ ಭಯವನ್ನು ಬಿತ್ತಿದಂತಾಗುತ್ತದೆ.ಈ ಘಟನೆಯಿಂದ ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಎಷ್ಟು ಮರೀಚಿಕೆಯಾಗುತ್ತಿದೆ ಎನ್ನುವುದು ಕಂಡುಬರುತ್ತದೆ.
ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮನಮ್ಮಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಇದ್ದರೂ ಇಂತಹ ದೌರ್ಜನ್ಯದ ವಿರುದ್ಧ ಒಕ್ಕೊರಲಿನ ದನಿಯಾಗಿ ಪರಸ್ಪರ ರಕ್ಷಣೆಗೆ ಮುಂದಾಗಬೇಕು.ಇದು ನಮ್ಮ ಹಕ್ಕುಗಳ ಪ್ರಶ್ನೆಯಾಗಿದೆ” ಎಂದರು.
ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಿವೇಕ್ ಸುಬ್ಬಾರೆಡ್ಡಿಯವರು ಮಾತನಾಡಿ ” ವಿಚಾರಗಳನ್ನು ತಲುಪಿಸುವ ದನಿಯಿರುವ ಪತ್ರಕರ್ತರ ಮೇಲೆ ಹೀಗೆ ಹಲ್ಲೆ ಮಾಡಿರುವುದು ನಿಜಕ್ಕೂ ಆಘಾತಕಾರಿಯಾಗಿದ್ದು, ಹೀಗೆ ಹಲ್ಲೆ ಮಾಡಿರುವುದು ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಉಲ್ಲಂಘನೆಯಾಗಿದೆ.ಇದು ಸಂವಿಧಾನಕ್ಕೆ ಮಾಡಿರುವ ಅಪಚಾರ.ಹಲ್ಲೆ ಮಾಡಿರುವ ಗೂಂಡಾಗಳನ್ನು ತಕ್ಷಣವೇ ಬಂಧಿಸಬೇಕು ಎನ್ನುವುದು ನಮ್ಮ ಆಗ್ರಹ” ಎಂದರು.
ಎಸ್ಸಿ.ಎಸ್ಟಿ ಮೀಸಲಾತಿ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಫಟಾಫಟ್ ಶ್ರೀನಿವಾಸ್ ಅವರು ಮಾತನಾಡಿ ” ಅತ್ಯಂತ ಕಷ್ಟಪಟ್ಟು ಪತ್ರಕರ್ತರಾಗಿ ಜನರಿಗೆ ಸತ್ಯ ಹೇಳುವವರನ್ನು ಕೇವಲ ಹೊಡಿಯುವ ಬಡಿಯುವ ಮೂಲಕ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ.ಸತ್ಯಕ್ಕೆ ಯಾವತ್ತೂ ಸಾವಿಲ್ಲ.ಈ ಘಟನೆಯಿಂದ ಜವಾಬ್ದಾರಿಯುತ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ” ಎಂದರು.
ಪ್ರತಿಭಟನೆಯಲ್ಲಿ ಶಿಕ್ಷಣ ತಜ್ಙರಾದ ಶ್ರೀ ಅಶೋಕ ಗೌಡ, ಅಖಿಲ ಭಾರತೀಯ ದಲಿತ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಚಿ.ನಾ.ರಾಮು ,sc/st ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಉಪಾಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಸುಡುಗಾಡು ಸಿದ್ದರ ಸಮಿತಿಯ ರಾಜ್ಯಾಧ್ಯಕ್ಷರಾದ ಲೋಹಿತ್, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ.ಸಂದೀಪ ಕುಮಾರ್ ,ಸಾಮಾಜಿಕ ಕಾರ್ಯಕರ್ತೆ ತನ್ಮಯೀ ಪ್ರೇಮಕುಮಾರ್,ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀ ಪ್ರಶಾಂತ್ ಸಂಬರಗಿ ಮಾತನಾಡಿದರು.
ಸಾಮರಸ್ಯ ವೇದಿಕೆಯ ಶ್ರೀ ವಾದಿರಾಜ್,ಶ್ರೀ ಬಸವರಾಜ,ಸಾಮಾಜಿಕ ಕಾರ್ಯಕರ್ತರು,ಆಹಾರ ತಜ್ಞೆ ಡಾ.ಪ್ರೇಮಾ,ಹಿಂದು ಜಾಗರಣ ವೇದಿಕೆಯ ಶ್ರೀ ಉಲ್ಲಾಸ್ ಅವರು ಉಪಸ್ಥಿತರಿದ್ದರು.