ಸಂಘದ ಕೆಲಸ ನಮ್ಮ ಜವಾಬ್ದಾರಿ ಎಂಬ ಭಾವನೆ ಸಮಾಜದ ಜನರಲ್ಲಿ ಮೂಡಬೇಕು: ದಾ.ಮ.ರವೀಂದ್ರ
ಹಿಂದೂಗಳಲ್ಲೇ ಸಂಘಟನೆ ಆಗಬೇಕು, ಸಂಘಶಕ್ತಿ ಮತ್ತು ಸಜ್ಜನ ಶಕ್ತಿಗಾಗಿ ವೃದ್ಧಿಸಬೇಕು ಎಂಬ ಕಾರಣಕ್ಕಾಗಿ ಸಂಘ ಗತಿವಿಧಿಗಳ ಮೂಲಕ ಸಮಾಜವನ್ನು ತಲುಪುತ್ತಿದೆ. ದೇಶದ ಪ್ರತಿ ಮನೆಯೂ ಸಂಘದ ಮನೆಯಾಗಬೇಕು, ಸ್ವಯಂಸೇವಕನ ನಡವಳಿಕೆ ಮತ್ತು ವ್ಯವಹಾರದಿಂದ ಸ್ವಯಂಸೇವಕತ್ವ ಹೊರ ಜಗತ್ತಿಗೆ ಪರಿಚಯವಾಗಬೇಕು ಎಂಬ ಸಂಘದ ಧ್ಯೇಯಕ್ಕೆ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಬೇಕು. ಸಂಘ ಮಾಡುವ ಕೆಲಸ ನಮ್ಮ ಜವಾಬ್ದಾರಿ ಎಂದು ಅರಿತು ಸಮಾಜ ಮುಂದೆ ಬರೆಬೇಕು. ಸಂತರ ನೇತೃತ್ವದಲ್ಲಿ, ಸ್ವಯಂಸೇವಕರ ಬೆಂಬಲದಲ್ಲಿ ಸಮಾಜವನ್ನು ಮುನ್ನಡೆಸಬೇಕು ಎಂದು ರಾಷ್ಟ್ರೀಯ ಸ್ವಯಂಸ್ವೇವಕ ಸಂಘದ ಜ್ಯೇಷ್ಠ ಪ್ರಚಾರಕ ದಾ.ಮ.ರವೀಂದ್ರ ಹೇಳಿದರು.
ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲೆಯ ನೂತನ ಕಾರ್ಯಾಲಯದ ಭೂಮಿ ಪೂಜನಾ ಕಾರ್ಯಕ್ರಮ ಮತ್ತು ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡು ಶುಕ್ರವಾರ ಮಾತನಾಡಿದರು. ಸಮಾಜದ ಅಭಿವೃದ್ಧಿಗಾಗಿ ಸಮಯ ಕೊಡುವವರು, ಜೀವನವನ್ನು ಮುಡಿಪಾಗಿಡುವವರು ಅದರ ಉನ್ನತಿಯನ್ನು ಕಾಣದೆ ಮರೆಯಾಗಿದ್ದಾರೆ. ಮುಂದಿನ ಪೀಳಿಗೆ ಹಿಂದಿನವರ ಸಮರ್ಪಣೆಯ ಫಲವನ್ನು ಪಡೆಯುತ್ತಾರೆ. ಸಂಘದ ಸ್ವಯಂಸೇವಕರೂ ತಮ್ಮ ಸಮರ್ಪಣೆಯ ಗುಣದ ಕಾರಣಕ್ಕಾಗಿ ಸಮಾಜದಲ್ಲಿ ಧನಾತ್ಮಕವಾಗಿ ಗುರುತಿಸಿಕೊಂಡಿದ್ದಾರೆ. ಸಮಾಜವನ್ನು ವಿಸ್ತಾರವಾಗಿ ನೋಡಿದಾಗ ಸಂಘ ಕಾರ್ಯದ ಅನಿವಾರ್ಯತೆ ಅರಿವಾಗುತ್ತದೆ ಎಂದು ನುಡಿದರು.
ಸಂಘ ಸ್ಥಾಪನೆಯಾಗಿ ನೂರು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಸಂಘ ಪ್ರಾರಂಭವಾಗಿದ್ಯಾಕೆ? ಸಂಘ ಎಷ್ಟು ಜನರನ್ನು ತಲುಪಿದೆ? ಎಂಬಿತ್ಯಾದಿ ಪ್ರಶ್ನೆ ಇಂದು ಹಲವರಲ್ಲಿದೆ. ಯಾವುದೇ ಅನುಕೂಲಗಳಿಲ್ಲದೆ, ವಿದೇಶಿಗರ ಆಳ್ವಿಕೆಯ ಸಂದರ್ಭದಲ್ಲಿ, ವಿರೋಧವಿದ್ದಾಗ ಸಂಘಕಾರ್ಯವನ್ನು ಸಂಘದ ಸಂಸ್ಥಾಪಕ ಪ.ಪೂ.ಡಾಕ್ಟರ್ ಕೇಶವ ಬಲಿರಾಮ ಹೆಡಗೇವಾರರು ಪ್ರಾರಂಭ ಮಾಡಿದರು. ನಾನಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ ಉನ್ನತ ಸ್ಥಾನದಲ್ಲಿದ್ದರೂ ಅವರು ಸಾಮಾನ್ಯ ವ್ಯಕ್ತಿ ದೇಶಭಕ್ತನಾಗಿ ಬದಲಾದಾಗ ದೇಶ ಬದಲಾಗುತ್ತದೆ ಎಂಬ ಗುರಿಯನ್ನಿಟ್ಟುಕೊಂಡು ಸಂಘಟನೆಯ ಕಾರ್ಯ ಪ್ರಾರಂಭ ಮಾಡಿದರು ಎಂದು ಅವರು ಅಭಿಪ್ರಾಯಪಟ್ಟರು.
ಸ್ವಯಂಸೇವಕತ್ವದ ಬಗ್ಗೆ ಡಾಕ್ಟರ್ ಜಿ ಹೆಚ್ಚು ಗಮನವಹಿಸಿದ್ದರು. ದೇಶ, ಸಮಾಜ, ಧರ್ಮ, ಸಂಸ್ಕೃತಿಯ ಕೆಲಸವನ್ನು ಯಾರು ಆದ್ಯತೆ ನೀಡಿ ಮಾಡುತ್ತಾರೋ ಅವರು ಸ್ವಯಂಸೇವಕರು. ಸಂಘಸ್ಥಾನದಿಂದಾಗಿ ಅರಳುವ ಭಾವ, ಅದು ಕಲಿಸಿದ ಸದ್ಗುಣ ಸಂಸ್ಕಾರದಿಂದ ವ್ಯಕ್ತಿ ನಿರ್ಮಾಣವಾಗುತ್ತದೆ. ಹೀಗೆ ನಿರ್ಮಾಣಗೊಂಡ ಸ್ವಯಂಸೇವಕರು ಸಮಾಜದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟು ಸಮಾಜಕ್ಕೆ ಸಮರ್ಪಿತ ವ್ಯಕ್ತಿಯಾಗಿ ಕಾಣಿಸಿಕೊಂಡ ಹಲವಾರು ನಿದರ್ಶನಗಳಿವೆ. ದೇಶದ ಸಾಮಾನ್ಯ ದಿನಗಳಲ್ಲಿ ಮಾತ್ರವಲ್ಲದೆ, ಇಕ್ಕಟ್ಟು-ಬಿಕ್ಕಟ್ಟಿನ ಸಂದರ್ಭದಲ್ಲೂ ಸ್ವಯಂಸೇವಕರ ಸ್ವಯಂಸೇವಕತ್ವ ಪ್ರಕಟವಾಗಿದೆ ಎಂದು ನುಡಿದರು.
ಸಂಘಸ್ಥಾನದಲ್ಲಿ ದೊರೆತ ಸಂಸ್ಕಾರವನ್ನು ನಮ್ಮ ಜೀವನದಲ್ಲಿ ನಾವು ಎಷ್ಟು ಅಳವಡಿಸಿಕೊಂಡಿದ್ದೇವೆ ಎನ್ನುವುದರ ಕುರಿತು ಗಮನವಹಿಸಿದಾಗಲೇ ಸಂಘದ ಸಾಮರ್ಥ್ಯ ಅರಿವಾಗುತ್ತದೆ. ಹೆಸರು, ಕೀರ್ತಿ, ಪ್ರಸಿದ್ಧಿ, ಸ್ಥಾನಮಾನ, ಅಧಿಕಾರ, ಹಣವನ್ನು ಬಯಸದೆ ಸ್ವಯಂಸೇವಕ ಕಾರ್ಯನಿರತನಾಗಬೇಕು. ಸಮಾಜಕ್ಕಾಗಿ ಸಮಯ ಸಮರ್ಪಣೆಯಲ್ಲಿ ನನ್ನ ಪಾತ್ರ ಎಷ್ಟು ಎಂದು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು. ಸಂಘದ ಸ್ವಯಂಸೇವಕನನ್ನು ಅರ್ಥ ಮಾಡಿಕೊಂಡರೆ ಸಂಘವನ್ನು ಅರ್ಥ ಮಾಡಿಕೊಂಡಂತೆ. ಆದ್ದರಿಂದ ಕೇವಲ ಹೊರ ರೂಪದ ಸ್ವಯಂಸೇವಕರಾಗದೆ ಅಂತಃ ರಂಗದ ಸ್ವಯಂಸೇವಕರಾಗಬೇಕು ಎಂದರು
ಮಂಗಳೂರು ವಿಭಾಗದಲ್ಲಿ ಸಂಘ ಕಾರ್ಯ ಪ್ರಾರಂಭವಾಗಿ ಸುಮಾರು ೮೦ ವರ್ಷಗಳಾಗಿವೆ. ತುರ್ತು ಪರಿಸ್ಥತಿಯ ಸಂದರ್ಭದಲ್ಲಿ ಸರಸಂಘಚಾಲಕರ ಗಮನವನ್ನು ಸೆಳೆಯುವಲ್ಲಿ ಮಂಗಳೂರು ವಿಭಾಗ ತಮ್ಮ ಉತ್ಸಾಹದ ಮೂಲಕ ಯಶಸ್ವಿಯಾಗಿತ್ತು. ಅಯೋಧ್ಯೆಯ ಕರಸೇವೆಗಾಗಿ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟ ಅನೇಕರು, ವಿಶೇಷವಾಗಿ ಇಲ್ಲಿನ ಮಹಿಳೆಯರು ಕೆಚ್ಚೆದೆಯ ಭಾವ ತೋರ್ಪಡಿಸಿದ್ದರು. ಇಲ್ಲಿನ ಸಂಘದ ಇತಿಹಾಸದಲ್ಲಿ ಪುತ್ತೂರು ಜಿಲ್ಲೆಯ ಸ್ವಯಂಸೇವಕರ ಪಾತ್ರ ಮುಖ್ಯವಾಗಿದೆ ಎಂದು ನುಡಿದರು.
ಮಂಗಳೂರು ವಿಭಾಗದಲ್ಲಿ ಸಂಘ ಶುರುವಾದಾಗಿನಿಂದ ಪುತ್ತೂರು ಜಿಲ್ಲೆಯ ಸ್ವಯಂಸೇವಕರು ಗುರುತರವಾದ ಕಾರ್ಯಗಳ ಮೂಲಕ ಮುಂಚೂಣಿಯಲ್ಲಿದ್ದಾರೆ. ಈಗ ಮತ್ತೆ ಪುತ್ತೂರಿನ ಸ್ವಯಂಸೇವಕರು ಜಿಲ್ಲೆಯ ಎಲ್ಲಾ ಮನೆಗಳನ್ನು ತಲುಪುವ ಮೂಲಕ ಉಪವಸತಿಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಸಮಾಜಕ್ಕೆ ಸಮಯ ಕೊಡುವವರ ಬಲ ಜಾಸ್ತಿಯಾಗಬೇಕು. ಇಲ್ಲಿನ ಸಂಘ ಕಾರ್ಯಕ್ಕೆ ಬಲ ತುಂಬುವುದಕ್ಕಾಗಿಯೇ ಇಂದು ವಿಜಯದಶಮಿಯಂದು ‘ಪಂಚವಟಿ’ ಜಿಲ್ಲಾ ಕಾರ್ಯಾಲಯದ ಜೀರ್ಣೋದ್ದಾರಕ್ಕೆ ಭೂಮಿಪೂಜನಾ ಕಾರ್ಯಕ್ರಮ ನಡೆದಿದೆ. ಸ್ವಯಂಸೇವಕರಿಂದಲೇ ಇದು ಸಂಪೂರ್ಣಗೊಳ್ಳಲಿದೆ ಎಂಬ ಭರವಸೆ ಇದೆ. ಮುಂದೆಯೂ ಪುತ್ತೂರು ಜಿಲ್ಲೆಯ ಸ್ವಯಂಸೇವಕರು ತಮ್ಮ ಸಮಯ ಸಮರ್ಪಣೆಯಿಂದ ದೇಶಕ್ಕೆ ಆದರ್ಶಪ್ರಾಯರಾಗಿ ಸ್ಪಂದಿಸಿ ಮೇಲ್ಪಂಕ್ತಿ ಆಗುತ್ತಾರೆ ಎಂಬ ಆಶಯವಿದೆ ಎಂದು ಹೇಳಿದರು.
ನೂತನ ಕಾರ್ಯಾಲಯದ ಭೂಮಿಪೂಜನ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಟೋಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ ರಾಷ್ಟçಕ್ಕೆ ಅಧರ್ಮಿಗಳ ದಾಳಿಗಳಾದಾಗ ಅದನ್ನು ಎದುರಿಸಲು ದೇವಿ ಅನೇಕ ಅವತಾರಗಳನ್ನು ತಳೆದಳು ಎಂಬ ನಂಬಿಕೆ ನಮ್ಮಲ್ಲಿದೆ. ದುರ್ಗಾಸಪ್ತಶತಿಯನ್ನು ಅಧ್ಯಯನ ಮಾಡಿದಾಗ ಎಲ್ಲರ ಶಕ್ತಿ ಒಟ್ಟುಗೂಡಿ ದೇವಿ ನಿರ್ಮಾಣವಾಗಿದ್ದು ಎಂದು ತಿಳಿಯುತ್ತದೆ. ಸಂಘಟನೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಇದು ತಿಳಿಸುತ್ತದೆ. ಇದನ್ನು ಮನಗಂಡ ಪ.ಪೂ. ಡಾ.ಕೇಶವ ಬಲಿರಾಮ ಹೆಡಗೇವಾರರು ಈ ರಾಷ್ಟçದ ಸತ್ ಶಕ್ತಿಗಳೊಂದಾಗಿ, ಇಲ್ಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಣುವಂತಾಗಬೇಕು ಎಂದು ಕನಸುಕಂಡರು ಎಂದರು.
ಅಂದು ಡಾಕ್ಟರ್ಜಿ ಕಂಡ ಕನಸು, ಅನೇಕರಿಗೆ ಕನಸು ಮಾತ್ರ ಎಂದೆನಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಘಟಿತ ಶಕ್ತಿಗಳೊಂದಾದಾಗ ಅದ್ಭುತಗಳನ್ನು ಸಾಧಿಸಬಹುದು ಎನ್ನುವುದು ಎಲ್ಲರ ಅನುಭವಕ್ಕೆ ಬರುತ್ತಿದೆ. ಇಂತಹ ಸಂಘಟಿತ ಕೆಲಸಕ್ಕೆ ಶಕ್ತಿ ಕೊಡುವಲ್ಲಿ ಪುತ್ತೂರು ಅದರದ್ದೇ ಆದ ಕೊಡುಗೆಯನ್ನು ಕೊಟ್ಟಿದೆ. ಈ ಕಾರ್ಯಕ್ಕೆ ವೇಗ ದೊರಕಲು ಸುಂದರ ಕಾರ್ಯಾಲಯದ ಭೂಮಿಪೂಜೆ ಇಂದು ನಡೆದಿದೆ. ಎಲ್ಲಾ ಬಂಧುಗಳ ಒಮ್ಮನಸಿನ ಪ್ರಯತ್ನದ ಫಲವಾಗಿ ಹಿಂದಿಗಿಂತ ಹೆಚ್ಚು ಸಶಕ್ತವಾಗಿ ರಾಷ್ಟ್ರಸೇವೆ ಮಾಡುವಂತಾಗಬೇಕು ಎಂಬ ಅಪೇಕ್ಷೆ ಇದೆ. ಪ್ರತಿ ಮನೆಯ ಸ್ವಯಂಸೇವಕನಿಗೂ ಈ ಕಾರ್ಯಲಯ ಪ್ರೇರಣೆಯನ್ನು ಒದಗಿಸುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜ್ಯೇಷ್ಠ ಪ್ರಚಾರಕ ಸೀತಾರಾಮ ಕೆದಿಲಾಯ, ಪ್ರಾಂತ ಸಂಘಚಾಲಕ ಡಾ.ವಾಮನ್ ಶೆಣೈ, ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್, ಹೊಸದಿಗಂತ ಪತ್ರಿಕೆಯ ನಿರ್ವಾಹಕ ನಿರ್ದೇಶಕ ಪ್ರಕಾಶ್ ಪಿ.ಎಸ್, ದಕ್ಷಿಣ ಪ್ರಾಂತದ ಸಹ ಪ್ರಾಂತ ಪ್ರಚಾರಕ ನಂದೀಶ್, ಪ್ರಾಂತ ಸಹ ಸೇವಾಪ್ರಮುಖ್ ನಾ.ಸೀತಾರಾಮ, ಪ್ರಾಂತ ಗೋಸೇವಾ ಪ್ರಮುಖ್ ಪ್ರವೀಣ್ ಸರಳಾಯ, ಸಚಿವ ಎಸ್.ಅಂಗಾರ, ಪುತ್ತೂರಿನ ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಮತ್ತು ಸಂಘದ ಅನೇಕ ಹಿರಿಯ ಕಾರ್ಯಕರ್ತರು ಭಾಗಿಯಾಗಿದ್ದರು. ವಿಜಯದಶಮಿಯ ಪ್ರಯುಕ್ತ ಆಕರ್ಷಕ ಪಥಸಂಚಲನ ಜರುಗಿತು.
ಭೂಮಿ ಪೂಜೆಗೆ ಪುತ್ತೂರಿನ ಪವಿತ್ರ ನದಿಗಳ ಜಲ ಮತ್ತು ಹಲವು ದೇವಸ್ಥಾನಗಳ ತೀರ್ಥ ಸಮರ್ಪಣೆ
ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಜಲ, ಸುವರ್ಣ ನದಿಯ ಜಲ, ಬೆಟ್ಟಂಪಾಡಿಯ ಕ್ಷೀರ ಹೊಳೆಯ ಜಲ, ಮೈತ್ರೇಯಿ ಗುರುಕುಲದ ತಟದಲ್ಲಿರುವ ಪಂಚಗಾಮಿನಿ ನದಿಯ ಜಲ, ಅಳದಂಗಡಿಯ ಫಲ್ಗುಣಿ ನದಿಯ ತೀರ್ಥ, ಕಪಿಲ ತೀರ್ಥ, ವಿಟ್ಲ ಪಂಚಲಿಂಗೇಶ್ವರ ಕ್ಷೇತ್ರದ ತೀರ್ಥ, ಸೂರ್ಯನಾರಾಯಣ ದೇವಸ್ಥಾನದ ತೀರ್ಥ, ವಿಟ್ಲದ ನರಹರಿ ಸದಾಶಿವ ದೇವಸ್ಥಾನದ ಶಂಖ, ಚಕ್ರ, ಗದಾ, ಪದ್ಮಾ ಕೆರೆಗಳ ತೀರ್ಥ, ವಿಟ್ಲದ ಕೊಡಂಗಾಯಿ ಅಲ್ಲಿನ ತೀರ್ಥವನ್ನು ಭೂಮಿ ಪೂಜೆಯ ಸಮಯದಲ್ಲಿ ಸಮರ್ಪಿಸಲಾಯಿತು.