Report in Udayavani, by Vasanti Kedila.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಂಬ ಪುಟ್ಟ ಪೇಟೆಯ ಹೈಸ್ಕೂಲ್ ಮಕ್ಕಳು ನಮಗೆಲ್ಲ ಗೊತ್ತಿರುವ ಆದರೆ, ಮರೆತು ಹೋಗಿರುವ ಅಳಲೇ ಮರದ ಕಾಯಿಯಿಂದ ಶಾಯಿ ತಯಾರಿಸಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೊಯ್ದ ರೋಚಕ ವೃತ್ತಾಂತ ಇದು.
ಸಾಂಪ್ರದಾಯಿಕ ವರ್ಣದ್ರವ್ಯವಾಗಿರುವ ಅಳಲೇಕಾಯಿ ಶಾಯಿಯನ್ನು ಸಂಶೋಧನೆಯ ಮೂಲಕ ಆಧುನಿಕ ಲೇಖನಿ, ಕಂಪ್ಯೂಟರ್ ಪ್ರಿಂಟರ್‌ಗಳಲ್ಲಿ ಬಳಸಲು ಯೋಗ್ಯವಾಗುವಂತೆ ಸುಧಾರಿಸಿದ್ದು ಈ ವಿದ್ಯಾರ್ಥಿ ಸಂಶೋಧಕರ ಸಾಧನೆ.
ಅಂದು ಸೆಪ್ಟಂಬರ್ 6, 2009. ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ಮತ್ತು ವಿಜ್ಞಾನ ಸಂಘದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 40 ವಿಧದ ಸಸ್ಯಗಳ ವಿಶೇಷ ಗುಣಗಳ ಬಗ್ಗೆ “ಸಸ್ಯ ಶ್ಯಾಮಲ ವಿಟ್ಲ’ ಎಂದೇ ಪ್ರಸಿದ್ಧಿ ಪಡೆದಿರುವ ದಿನೇಶ್ ನಾಯಕ್ ಇವರಿಂದ ಪರಿಚಯ, ಮಾಹಿತಿ ಕಾರ್ಯಕ್ರಮ
ಈ ಮಾಹಿತಿ ಕಾರ್ಯಕ್ರಮದಲ್ಲಿ ಅಳಲೇಕಾಯಿಯ ಪರಿಚಯ ನಮಗಾಯಿತು. ಅಳಲೇಕಾಯಿ ನಮ್ಮೆಲ್ಲರ ಗಮನ ಸೆಳೆದು ತನ್ನ ಅಮೆರಿಕ ಪಯಣವನ್ನು ಪ್ರಾರಂಭಿಸಿದ್ದು ಹೀಗೆ.
ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಂಶೋಧನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಡೆಸುವ ಮಕ್ಕಳ ವಿಜ್ಞಾನ ಸಮಾವೇಶ(NCSC – National Children Science Congress)ಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಹಲವು ವರ್ಷಗಳಿಂದ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲೂ ಭಾಗವಹಿಸಿ ಎಲ್ಲರ ಗಮನ ಸೆಳೆದಿರುವುದು ಇಲ್ಲಿ ಉಲ್ಲೇಖನೀಯ.
ಈ ಸೃಜನಾತ್ಮಕ ಚಟುವಟಿಕೆಗಳಿಗೆ ಶಾಲಾ ಸಂಚಾಲಕರಾದ ಸವಣೂರು ಸೀತಾರಾಮ ರೈ, ಮುಖ್ಯೋಪಾಧ್ಯಾಯ ಎಚ್. ಶ್ರೀಧರ್ ರೈ ಅವರ ನಿರಂತರ ಪ್ರೋತ್ಸಾಹವಿದೆ, ವಿಜ್ಞಾನ ಶಿಕ್ಷಕಿ ಜಯಲಕ್ಷ್ಮೀ, ಶೋಭಾ ಮತ್ತು ತೃಪ್ತಿ ಹಾಗೂ ಇತರ ಶಿಕ್ಷಕ ವೃಂದದವರ ಸತತ ಸಹಕಾರವೂ ಇದೆ.
2009ರ ಸೆಪ್ಟಂಬರ್ ತಿಂಗಳಿನಲ್ಲಿ ಅಳಲೇಕಾಯಿಯ ಪರಿಚಯ ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳಾದ ಪ್ರಮೋದ್ ಎನ್. ವಿ., ಶರಣ್ ಪಿ., ಭಾರ್ಗವ ಸಿ. ಎಸ್., ಅನೀಶ್ ನಾರಾಯಣ ಮತ್ತು ಕೃಷ್ಣ ಇವರನ್ನೊಳಗೊಂಡ ತಂಡ “ಅಳಲೇ ಕಾಯಿ ಶಾಯಿ’ ತಯಾರಿಸಿತು.
ಜಿಲ್ಲಾ ಮಟ್ಟದಲ್ಲಿ ಅದರ ಯೋಜನಾ ವರದಿ ಮಂಡಿಸಿ ಆಯ್ಕೆಯಾಗಿ, ರಾಯಚೂರಿನಲ್ಲಿ ನಡೆದ ರಾಜ್ಯ ಮಟ್ಟದNCSC ಯಲ್ಲಿ ಭಾಗವಹಿಸುವ ಅವಕಾಶ ಪಡೆಯಿತು. ರಾಯಚೂರಿನಲ್ಲೂ ಅಳಲೇಕಾಯಿ ಶಾಯಿ ಎಲ್ಲರ ಗಮನ ಸೆಳೆಯಿತು.
ಆದರೆ, ತೀರ್ಪುಗಾರರ ಪ್ರಶಂಸೆಗೆ ಪಾತ್ರವಾಗಿಯೂ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲು ವಿಫಲವಾದಾಗ ಈ ಯೋಜನೆಯಲ್ಲಿ ಆರಂಭದಿಂದಲೂ ತೊಡಗಿಸಿಕೊಂಡಿದ್ದ ನನಗೂ ನನ್ನ ವಿದ್ಯಾರ್ಥಿಗಳಿಗೂ ತುಂಬಾ ನಿರಾಸೆಯಾಯಿತು. ಈ ನಿರಾಸೆಯೇ ನಮ್ಮ ಅಳಲೇಕಾಯಿ ಜಾಗತಿಕ ಮಟ್ಟಕ್ಕೇರಲು ನಾಂದಿ ಹಾಡಿತು ಎಂದರೆ ತಪ್ಪಲ್ಲ.
ಛಲವಂತ ಸೋಲನ್ನು ಮೆಟ್ಟಿನಿಂತು ಗೆಲುವಿನತ್ತ ಜಿಗಿಯು ತ್ತಾನಂತೆ. ನಾವೂ ಅದೇ ಮನೋಭಾವ ತಳೆದೆವು. ನಮ್ಮ ಅಳಲೇಕಾಯಿ ಶಾಯಿ ಯೋಜನೆ ಅದೇ ವರ್ಷ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆಯಿತು. ಕೋಲಾರದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ದಲ್ಲಿ ಭಾಗವಹಿಸುವ ಅವಕಾಶ ಪಡೆಯಿತು. ನಮಗೆ ಅಷ್ಟಕ್ಕೆ ಸಮಾಧಾನವಾಗಲಿಲ್ಲ.
ರಾಯಚೂರಿಗೆ ತೀರ್ಪುಗಾರರಾಗಿ ಬಂದಿದ್ದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ| ಹರೀಶ್ ಆರ್. ಭಟ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ, ನಮ್ಮ ಶಾಯಿ ತಯಾರಿಕೆಯ ಪ್ರಾಜೆಕ್ಟ್‌ನಲ್ಲಿರುವ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದೆವು. ಅನಂತರ ಅವರ ಮಾರ್ಗದರ್ಶನದಂತೆ ಅಳಲೇಕಾಯಿ ಶಾಯಿ ಯೋಜನೆಯನ್ನು 2010ರಲ್ಲಿ Initiative for Research and Innovation in Science (IRIS -ಐರಿಸ್)ನ ರಾಷ್ಟ್ರಮಟ್ಟದ ಸ್ಪರ್ಧೆಗೆ ನೋಂದಾಯಿಸಿದೆವು. ಪುಟಾಣಿ ಶಾಯಿ ತಯಾರಕರಾದ ಪ್ರಮೋದ ಮತ್ತು ಭಾರ್ಗವ ಐರಿಸ್‌ಗೆ ಆಯ್ಕೆಯಾದರು!
ಹೀಗೆ ಅಳಲೇಕಾಯಿ ಶಾಯಿ 2010ರ ನವೆಂಬರ್‌ನಲ್ಲಿ ಐರಿಸ್ ರಾಷ್ಟ್ರೀಯ ಮೇಳದಲ್ಲಿ ಭಾಗವಹಿಸಲು ಮುಂಬೈಗೆ ಹೊರಟಿತು. ನನ್ನ ಮಾರ್ಗದರ್ಶನದಲ್ಲಿ, Eco friendly Ink from Terminatia chebula ಎಂಬ (Terminatia chebula ಅಳಲೇಕಾಯಿಯ ಸಸ್ಯಶಾಸ್ತ್ರೀಯ ಹೆಸರು) ಶೀರ್ಷಿಕೆಯೊಂದಿಗೆ ವಿದ್ಯಾರ್ಥಿಗಳಾದ ಪ್ರಮೋದ್ ಮತ್ತು ಭಾರ್ಗವ (ಒಂದು ತಂಡದಲ್ಲಿ ಗರಿಷ್ಠ ಇಬ್ಬರಿಗೆ ಅವಕಾಶ) ರಾಷ್ಟ್ರಮಟ್ಟದಲ್ಲಿ ಪ್ರಾಜೆಕ್ಟ್ ಮಂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರ ರಾದರು.
ಕೆಲವೇ ಕ್ಷಣಗಳಲ್ಲಿ ನಮ್ಮ ತಂಡದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಗೊಂಡಿರುವುದು ಘೋಷಣೆಯಾದಾಗ ನಮಗೆ ಮಹದಾಶ್ಚರ್ಯ.
*
*
ಹಾಗೆ ನೋಡಿದರೆ ಅಳಲೇಕಾಯಿ ಶಾಯಿಯ ಬಳಕೆ ನಮಗೆ ಹೊಸದೇನಲ್ಲ. ಪೆನ್ನಿನ ಪರಿಚಯವಾಗುವುದಕ್ಕೆ ಮುನ್ನ ನಮ್ಮ ಹಿರಿಯರು ಅಳಲೇಕಾಯಿಯ ಶಾಯಿಯನ್ನು ಬಳಸಿ ಗರಿಯಿಂದಲೋ, ಕಡ್ಡಿಯಿಂದಲೋ ಬರೆಯುತ್ತಿದ್ದರು. ಆದರೆ ಆಧುನಿಕ ಜೀವನದ ಭರಾಟೆಯಲ್ಲಿ ಈ ನೈಸರ್ಗಿಕ ವರ್ಣಮೂಲ ಮೂಲೆಗುಂಪಾಗಿತ್ತು,
ಮರೆತೇ ಹೋಗಿತ್ತು. ನಮ್ಮ ಪ್ರಯೋಗವನ್ನು ಮೊದಲು ಪ್ರಾರಂಭಿಸಿದ್ದು ನಮ್ಮ ತಂಡದಲ್ಲೊಬ್ಬನಾದ ಪ್ರಮೋದನ ಅಜ್ಜಿಯೇ! ಆದರೆ ಅಳಲೇ ಕಾಯಿ ಶಾಯಿಯನ್ನು ಈಗಿನ ಪೆನ್ನು ನಿಬ್ಬಿನ ಮೂಲಕ ಪ್ರವಹಿಸು ವಂತೆ ಮಾಡುವುದು ಸವಾಲಾಗಿತ್ತು, ಅದಕ್ಕೆ ಸಂಶೋಧನೆ, ಪ್ರಯೋಗಗಳ ಅಗತ್ಯವಿತ್ತು. ಆ ಸವಾಲನ್ನು ಉತ್ತರಿಸುವಲ್ಲಿ ನಮ್ಮ ವಿದ್ಯಾರ್ಥಿ ಸಂಶೋಧಕರು ಸಫಲರಾದರು.
ಅಳಲೇಕಾಯಿಯನ್ನು ಪುಡಿ ಮಾಡಿ, ನೀರಿನಲ್ಲಿ ಒಂದು ತುಂಡು ಕಬ್ಬಿಣದೊಂದಿಗೆ ನೆನೆಸಿಡಬೇಕು. ಎಂಟು ದಿನಗಳ ಬಳಿಕ ಅದನ್ನು ಸೋಸಿ, ಲಭಿಸಿದ ದ್ರಾವಣವನ್ನು ಬಿಸಿ ಮಾಡಬೇಕು. ಅದು ಆರಿದ ಅನಂತರ ಗ್ಲಿಸರಿನ್ ಮತ್ತು ಎಸೆಟೋನ್ ಸೇರಿಸಿದರೆ ಕಪ್ಪು ಬಣ್ಣದ ಪರಿಸರ ಸ್ನೇಹಿ ಅಳಲೇಕಾಯಿ ಶಾಯಿ ರೆಡಿ!
ಹೀಗೆ ತಯಾರಿಸಿದ ಶಾಯಿಗೆ ಕುಂಕುಮ ಕಾಯಿ (Bixa orellana) ರಸವನ್ನು ಮಿಶ್ರ ಮಾಡಿ ಕೆಂಪುಮಿಶ್ರಿತ ಕಂದು ಬಣ್ಣದ ಶಾಯಿಯನ್ನೂ, ಶಂಖಪುಷ್ಪ (Clitoria ternatea)ದ ರಸ ಸೇರಿಸಿ ನೀಲಿ ಮಿಶ್ರಿತ ಶಾಯಿಯನ್ನೂ ನಮ್ಮ ವಿದ್ಯಾರ್ಥಿಗಳು ತಯಾರಿಸಿದರು.
ಅಲ್ಲದೇ ಈ ಶಾಯಿಯನ್ನು ಬರವಣಿಗೆಗೆ ಮಾತ್ರವಲ್ಲದೆ ಪೈಂಟಿಂಗ್, ಸ್ಕ್ರೀನ್ ಪ್ರಿಂಟಿಂಗ್ ಕಲರಿಂಗ್‌ಗೂ ಬಳಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲ, ಅಳಲೇಕಾಯಿಯ ಕಪ್ಪು ಶಾಯಿಯನ್ನು ಕಂಪ್ಯೂಟರ್ ಪ್ರಿಂಟಿಂಗ್ (Inkjet Printing) ನಲ್ಲೂ ಬಳಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ, ಪ್ರಸ್ತುತ ಪ್ರಸಿದ್ಧ ಶಾಯಿ ತಯಾರಕ ಕಂಪೆನಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದ್ದಾರೆ ಈ ನಮ್ಮ ಪುಟಾಣಿಗಳು.
ನಮ್ಮ ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗಲಿಲ್ಲ. ಅಳಲೇ ಕಾಯಿ ಶಾಯಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿ, ಕಳೆದ ಮೇ 8ರಿಂದ 13ರವರೆಗೆ ಲಾಸ್ ಏಂಜಲೀಸ್‌ನಲ್ಲಿ ನಡೆದ The Intel International Science and Engineering Fair2011 (Intel ISEF)ಸ್ಪರ್ಧೆಯಲ್ಲಿ ಎಲ್ಲರ ಮೆಚ್ಚುಗೆ ಪಡೆಯಿತು. 1,000 ಡಾಲರ್ ಬಹುಮಾನ ನಿಧಿಯೊಂದಿಗೆ ತೃತೀಯ ಬಹುಮಾನವನ್ನು ಪಡೆದು ದೇಶದ ಕೀರ್ತಿಯನ್ನು ಹೆಚ್ಚಿಸಿತು. ನಮ್ಮ ದೇಶದ ಪುಟ್ಟ ಅಳಲೇಕಾಯಿ ಈ ವಿದ್ಯಾರ್ಥಿ ಸಂಶೋಧಕರ ಮೂಲಕ ಇಂದು ಜಾಗತಿಕ ಮನ್ನಣೆ ಪಡೆಯಿತು.
*
*
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾನೆ#ಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಹಾಗೂ ಇಂಟೆಲ್ ಕಂಪೆನಿ ಗಳು ಜೊತೆಗೂಡಿ ನಡೆಸುವ ರಾಷ್ಟ್ರ ಮಟ್ಟದ ವಿಜ್ಞಾನ ಸಮಾವೇಶ “ಐರಿಶ್ ನ್ಯಾಷನಲ್ ಫೇರ್’ ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ನಡೆಯುತ್ತದೆ.
ಇದರಲ್ಲಿ ಎಂಟು ತಂಡಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಪ್ರತಿ ವಿದ್ಯಾರ್ಥಿ ಚಿನ್ನದ ಪದಕ ಮತ್ತು ಮಿನಿ ಲ್ಯಾಪ್‌ಟಾಪ್ ಪಡೆಯುತ್ತಾರೆ. ಈ ಎಂಟು ತಂಡಗಳಿಗೆ ಮೂರು ಹಂತಗಳಲ್ಲಿ ಪರಿಣತರಿಂದ ತರಬೇತಿ ನೀಡಲಾಗುತ್ತದೆ. ಎರಡನೇ ತರಬೇತಿಯ ಅನಂತರ ಉತ್ತಮ ಆರು ತಂಡಗಳನ್ನು ISEFಸ್ಪರ್ಧೆಗೆ ಆಯ್ಕೆ ಮಾಡಲಾಗು ತ್ತದೆ. ಈ ಆರು ತಂಡಗಳನ್ನು ಪ್ರತಿ ವರ್ಷ ಮೇ ತಿಂಗಳಲ್ಲಿ ಅಮೆರಿಕದಲ್ಲಿ ನಡೆಯುವ ಅಂತಾರಾಷ್ಟ್ರೀಯ ಐಖಉಊ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಲಾಗುತ್ತದೆ. ಉಳಿದ ಎರಡು ತಂಡಗಳನ್ನು ಈ ಸ್ಪರ್ಧೆಯಿಂದ ಕೈಬಿಡಲಾಗುತ್ತದೆ.
ಆದರೆ ಈ ತಂಡಗಳನ್ನು ಇನ್ನಿತರ ಖಾಸಗಿ ಸಂಸ್ಥೆಗಳು ವಿವಿಧ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಆಹ್ವಾನಿಸುತ್ತಾರೆ.
ಭಾರತದೊಳಗಿನ ಸ್ಪರ್ಧೆ, ತರಬೇತಿಗಳಿಗೆ ಮಾರ್ಗದರ್ಶಿ ಶಿಕ್ಷಕರಿಗೆ ಆಹ್ವಾನವಿರುತ್ತದೆ. ಆದರೆ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಮಾರ್ಗದರ್ಶಿ ಶಿಕ್ಷಕರು ಸ್ವ ಆಸಕ್ತಿಯಿಂದ ಪಾಲ್ಗೊಳ್ಳಬೇಕಾಗುತ್ತದೆ. ನನ್ನ ಪುತ್ರ ಇನ್ಫೋಸಿಸ್ ಉದ್ಯೋಗಿ ಯಾಗಿ ಅಮೆರಿಕದಲ್ಲಿರುವುದರಿಂದ ಅಳಲೇಕಾಯಿ ಶಾಯಿಯ ಜೊತೆ ನಾನೂ ಅಮೆರಿಕ ಯಾತ್ರೆ ಕೈಗೊಳ್ಳಲು ಸಾಧ್ಯವಾಯಿತು!
65 ದೇಶಗಳ 1,500ಕ್ಕಿಂತಲೂ ಹೆಚ್ಚು ಪದವಿಪೂರ್ವ ಮಟ್ಟದ ವಿದ್ಯಾರ್ಥಿಗಳಿದ್ದ ಈ ಐಖಉಊ ಸಮಾವೇಶದಲ್ಲಿ ಭಾಗಿ ಗಳಾಗಿ ನನ್ನ ವಿದ್ಯಾರ್ಥಿಗಳನ್ನು ನೋಡುವ ಸದವಕಾಶ ಹೀಗೆ ನನಗೆ ಒದಗಿ ಬಂತು. ಬೃಹದಾಕಾರದ ವೈಭವೋಪೇತ ಸಭಾಂಗಣದಲ್ಲಿ ಸಾವಿರಾರು ಮಂದಿ ವಿದೇಶೀಯರ ನಡುವೆ ಮಿಂಚಿದ ನಮ್ಮ ಕಣ್ಮಣಿಗಳನ್ನು ಕಂಡು ರೋಮಾಂಚನಗೊಂಡೆ! ಶಿಕ್ಷಕಿಯಾಗಿ ಸಾರ್ಥಕತೆಯ ಅನುಭವ ನನ್ನದಾಯಿತು.
*
ಹೀಗೆ ಅಮೆರಿಕದಲ್ಲಿ ಮಿಂಚಿದ ಅಳಲೇಕಾಯಿ ಶಾಯಿಯ ಯಾತ್ರೆ ನಿಂತಿಲ್ಲ. ಪ್ರಮೋದ ಮತ್ತು ಭಾರ್ಗವ ಅಳಲೇಕಾಯಿಯಿಂದ ಅಳಿಸಲಾಗದ ಶಾಯಿ ತಯಾರಿಸ ಹೊರಟಿದ್ದಾರೆ. ಅಲ್ಲದೆ, ಇನ್ನಿತರ ಸಸ್ಯ ಮೂಲಗಳಿಂದ ವಿವಿಧ ಬಣ್ಣಗಳನ್ನು ಪಡೆದು ಪರಿಸರ ಸ್ನೇಹಿ ಪೋಸ್ಟರ್ ಕಲರ್‌ಗಳನ್ನು ರೂಪಿಸಿದ್ದಾರೆ. ಅವು ಗಳನ್ನು ಇಂಕ್‌ಜೆಟ್ ಪ್ರಿಂಟರ್‌ಗಳಿಗೂ ಊಡಿಸುವ ಪ್ರಯತ್ನದಲ್ಲಿದ್ದಾರೆ!
ನಮ್ಮ ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಮಂಗಳೂರಿನ ಸೈಂಟ್ ಆ್ಯಗ್ನೆಸ್ ಕಾಲೇಜ್‌ನ ಪ್ರಾಧ್ಯಾಪಕ ಪ್ರೊ| ಜಯಂತ್, ಸುರತ್ಕಲ್ಲಿನ ಎನ್‌ಐಟಿಕೆಯ ಡಾ| ಅರುಣ್ ಇಸ್ಸೂಲ್, ಮಣಿಪಾಲದ ಎಂಐಟಿಯ ಡಾ| ಪ್ರಕಾಶ್ ಶೆಟ್ಟಿ, ಮಂಗಳಗಂಗೋತ್ರಿಯ ಡಾ| ಪ್ರಶಾಂತ್ ನಾಯಕ್, ಪುತ್ತೂರಿನ ಕು| ಜಯಾ ಪೈ, ಶ್ರೀಕೃಷ್ಣ, ಗಣರಾಜ್ ಭಟ್, ನರಸಿಂಹ ಭಟ್, ಕೃಷ್ಣ ಕಾರಂತ್, ಹರೀಶ್ ಶಾಸಿŒ ಮುಂತಾದ ಅನೇಕರ ಸಹಕಾರ ಇದೆ. ಅಳಲೇಕಾಯಿ ಶಾಯಿಯ ಆಳವಾದ ವೈಜ್ಞಾನಿಕ ವಿಶ್ಲೇಷಣೆಗೆ ಸಹಕರಿಸಿದ ಇವರೆಲ್ಲರಿಗೆ ನಾವು ತಲೆಬಾಗಲೇ ಬೇಕು.
ಅಳಲೇಕಾಯಿ ಶಾಯಿ ತಯಾರಿಸಿ ಜಾಗತಿಕ ಮಟ್ಟದಲ್ಲಿ ಅಳಿಸಲಾಗದ ಸುದ್ದಿ ಮಾಡಿದ ಪ್ರಮೋದ ಮತ್ತು ಭಾರ್ಗವ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಇಂಥ ಸಂಶೋಧನೆಗಳಲ್ಲಿ ತೊಡಗಲು ಪ್ರೇರಣೆಯಾಗಿದ್ದಾರೆ.
Source: UDAYAVANI