
ಬೆಂಗಳೂರು: ಭಾರತೀಯ ಕಿಸಾನ್ ಸಂಘ – ಕರ್ನಾಟಕ ಪ್ರದೇಶ (ರಿ.) ವತಿಯಿಂದ ದಲಿತ, ಶೋಷಿತ, ರೈತರ, ಸಾರ್ವಜನಿಕರ ಭೂಮಿಯನ್ನು ಉಳಿಸಲು ಆಯೋಜಿಸಲಾದ ‘ರೈತ ಘರ್ಜನಾ ರ‍್ಯಾಲಿ’ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯಿತು.




ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ವಕ್ಫ್ ಮಂಡಳಿಯ ಹೆಸರಿನಲ್ಲಿ ಈ ದೇಶದ ಅನ್ನದಾತ ರೈತನಿಗೆ ಮೋಸ ಮಾಡಲಾಗುತ್ತಿದೆ. ವಕ್ಫ್ ಮೂಲಕ ಈ ರಾಷ್ಟ್ರದ ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಈ ನಾಡಿನ ಕಾನೂನನ್ನು ಗೌರವಿಸದವರಿಗೆ ಇಲ್ಲಿನ ಮತದಾನದ ಹಕ್ಕನ್ನೂ ನೀಡಬಾರದು. ಎಲ್ಲರನ್ನೂ ಪ್ರೀತಿ, ಗೌರವದಿಂದಲೇ ನೋಡುವ ಶಾಂತಿಪ್ರಿಯ ಸಮಾಜ ನಮ್ಮದು. ಆದರೆ ನಮ್ಮ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಇದು ಧರ್ಮವಲ್ಲ. ನಾವು ಒಗ್ಗಟ್ಟಿನಿಂದ ಭಗವಂತನನ್ನು ನಂಬಿ ನಮ್ಮ ಹೋರಾಟವನ್ನು ಮುಂದುವರೆಸಿದರೆ ಜಯ ಸಿಗುತ್ತದೆ ಎಂದರು.




ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರೈತ ಈ ದೇಶದ ಬೆನ್ನೆಲುಬು ಎಂದು ಮಾತನಾಡುತ್ತೇವೆ. ದೇವರ ಸಮಾನವಾಗಿ ಕಾಣುತ್ತೇವೆ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ರೈತರ ಹೊಟ್ಟೆಯ ಮೇಲೆ ಹೊಡೆಯುವಂತಹ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ವತಿಯಿಂದ ಹಾಗೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಜಾರಿಗೆ ತಂದ ರೈತಪರ ಮತ್ತು ರೈತರ ಮಕ್ಕಳಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ. ಈವ ವಕ್ಫ್ ಹೆಸರಿನಲ್ಲಿ ಈ ನಾಡಿನ ರೈತರ ಜಮೀನನ್ನು ಕಬಳಿಸುತ್ತಿದ್ದಾರೆ. ಆದಷ್ಟು ಬೇಗ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈ ಅನ್ಯಾಯವನ್ನು ನಿಲ್ಲಿಸದೇ ಇದ್ದರೆ ಅವನತಿ ಕಟ್ಟಿಟ್ಟ ಬುತ್ತಿ ಎಂದು ನುಡಿದರು.

ಬೇಲಿ ಮಠದ ಪೂಜ್ಯ ಶ್ರೀ ಶಿವರುದ್ರ ಸ್ವಾಮಿಗಳು ಮಾತನಾಡಿ ಪ್ರಪಂಚದಲ್ಲಿ ಎಲ್ಲೂ ಇರದ ಕಾಯ್ದೆ ಭಾರತದಲ್ಲಿದೆ. ಅಂತಹ ಕಾನೂನಿನ ಅವ್ಯವಸ್ಥೆಯನ್ನು ಮಾಡಿದ್ದು ನಾವು ಚುನಾಯಿಸಿದ ಸರ್ಕಾರಗಳೇ. ಇಂದು ಈ ಕಾನೂನಿಗೆ ತಿದ್ದುಪಡಿ ತರುವ ಪ್ರಯತ್ನವಾಗುತ್ತಿದೆ. ಅದಕ್ಕೆ ಬೆಂಬಲಿಸಿ ನಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲೇ ಇದೆ ಎಂದು ಅಭಿಪ್ರಾಯಪಟ್ಟರು.








ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ದೇವರು, ಅರಸೀಕೆರೆಯ ಕಾಳಿ ಮಠದ ರಿಷಿಕುಮಾರ್ ಸ್ವಾಮೀಜಿ, ಕೋಲಾರ ಜಿಲ್ಲೆಯ ಮಾಲೂರಿನ ಬೆಳ್ಳಾವಿ ಸಂಸ್ಥಾನದ ಶ್ರೀ ಮಹಂತ ಶಿವಾಚಾರ್ಯ ಸ್ವಾಮೀಜಿ, ನಾಗಲಾಪುರ ಮಹಾಸಂಸ್ಥಾನದ ಶ್ರೀ ತೇಜಲಿಂಗೇಶ್ವರ ಸ್ವಾಮೀಜಿ, ಜಯನಗರದ ಶ್ರೀ ನರಸಿಂಹ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಭೀಮ್ ಸೇನಾ ಕೊಕರೆ, ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ರಾಮೋಜಿ, ಪ್ರಾಂತ ಅಧ್ಯಕ್ಷ ರಮೇಶ್ ರಾಜ್, ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಅಖಿಲ ಭಾರತೀಯ ನಿಕಟಪೂರ್ವ ಅಧ್ಯಕ್ಷ ಅಯ್ಯನ್ ಬಸವೇಗೌಡ, ಅಖಿಲ ಭಾರತೀಯ ಕಾರ್ಯದರ್ಶಿ ವೀಣಾ ಸತೀಶ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.




