ಇಂದು ಜಯಂತಿ
ಲೇಖನ: ವರುಣಕೃಷ್ಣ. ಬಿ., ಪತ್ರಿಕೋದ್ಯಮ ವಿದ್ಯಾರ್ಥಿ, ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ರಾಮ ಮನೋಹರ್ ಲೋಹಿಯಾ ಅವರು ಭಾರತದ ಪ್ರಮುಖ ಸಮಾಜವಾದಿ ಚಿಂತಕ, ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿಯಾಗಿದ್ದರು. ಅವರು 1910 ಮಾರ್ಚ್ 23ರಂದು ಉತ್ತರ ಪ್ರದೇಶದ ಅಕ್ಬರ್‌ಪುರದಲ್ಲಿ ಜನಿಸಿದರು. ಬಾಲ್ಯದಿಂದಲೇ ದೇಶಭಕ್ತಿ ಮತ್ತು ಸಮಾಜದ ಸಮಸ್ಯೆಗಳ ಬಗ್ಗೆ ಯೋಚಿಸುತ್ತಿದ್ದ ಲೋಹಿಯಾ ಅವರು ತಮ್ಮ ಶಿಕ್ಷಣವನ್ನು ಕಲ್ಕತ್ತಾ, ವಾರಣಾಸಿ ಮತ್ತು ಜರ್ಮನಿಯ ಬೆರ್ಲಿನ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಅಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದರು.
ಲೋಹಿಯಾ ಅವರು ಮಹಾತ್ಮ ಗಾಂಧೀಜಿ ಅವರ ಅಹಿಂಸಾ ತತ್ವದಿಂದ ಪ್ರಭಾವಿತರಾಗಿದ್ದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದದಲ್ಲಿ ಭಾಗವಹಿಸಿದರು. ವಿಶೇಷವಾಗಿ “ಕ್ವಿಟ್ ಇಂಡಿಯಾ” ಚಳವಳಿಯಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು. ಅವರು ಅನೇಕ ಬಾರಿ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿದರು.
ಸ್ವಾತಂತ್ರ್ಯಾನಂತರ ಲೋಹಿಯಾ ಅವರು ಸಮಾಜವಾದದ ಪರವಾಗಿ ಹೋರಾಡಿದರು. ಅವರು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ದಲಿತರ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಶ್ರಮಿಸಿದರು. ಅವರ ಸಮಾಜವಾದವು ಮಾರ್ಕ್ಸಿಸಂನ ನಕಲು ಅಲ್ಲ. ಅದು ಭಾರತೀಯ ಪರಿಸ್ಥಿತಿಗೆ ತಕ್ಕಂತೆ ರೂಪುಗೊಂಡಿದ್ದಾಗಿತ್ತು. ಕೇಂದ್ರೀಕರಣ ವಿರೋಧಿಸಿ ವಿಕೇಂದ್ರೀಕರಣ ಮತ್ತು ಜನರ ಪಾಲ್ಗೊಳ್ಳುವಿಕೆಗೆ ಒತ್ತನ್ನು ನೀಡಿದರು . ಗ್ರಾಮೀಣಾಭಿವೃದ್ಧಿಯು ತುಂಬಾ ಅಗತ್ಯ ಇದರಿಂದ ಉದ್ಯೋಗಾವಕಾಶ ಹೆಚ್ಚುತ್ತದೆ ಎಂದು ಅವರು ನಂಬಿದ್ದರು. ಮಾನವೀಯ ಮೌಲ್ಯಗಳ ಬಗ್ಗೆ ಒಲವನ್ನು ಹೊಂದಿದ್ದರು. ಅವರ “ಸಪ್ತ ಕ್ರಾಂತಿ” ತತ್ವವು ಬಹಳ ವಿಶಿಷ್ಟವಾದದ್ದು. ಆ ಏಳು ತತ್ವಗಳು ಹೀಗಿವೆ…
- ಜಾತಿ ವ್ಯವಸ್ಥೆ ವಿರುದ್ಧ ಹೋರಾಟ .
- ಲಿಂಗ ಅಸಮಾನತೆ ವಿರುದ್ಧ ಹೋರಾಟ.
- ವರ್ಣಭೇದ ವಿರುದ್ಧ ಹೋರಾಟ .
- ಆರ್ಥಿಕ ಅಸಮಾನತೆಯ ವಿರುದ್ಧ ಹೋರಾಟ.
- ವಿದೇಶಿ ಆಳ್ವಿಕೆ ವಿರುದ್ಧ ಹೋರಾಟ .
- ಖಾಸಗಿ ಸಂಪತ್ತಿನ ಅತಿಯಾದ ಕೇಂದ್ರೀಕರಣದ ವಿರುದ್ಧ ಹೋರಾಟ.
- ಅನ್ಯಾಯ ಮತ್ತು ಶೋಷಣೆ ವಿರುದ್ಧ ಹೋರಾಟ
ಸಮಾಜದಲ್ಲಿ ಅಸಮಾನತೆಯನ್ನು ನಿವಾರಿಸಲು ಈ ತತ್ವಗಳು ಮಾರ್ಗದರ್ಶಕವಾಗಿತ್ತು.
ಲೋಹಿಯಾ ಅವರು ಭಾರತದಲ್ಲಿ ಆಂಗ್ಲ (ಇಂಗ್ಲಿಷ್) ಭಾಷೆಯ ಅತಿಯಾದ ಪ್ರಭಾವಕ್ಕೆ ವಿರೋಧ ವ್ಯಕ್ತಪಡಿಸಿ, ಸ್ಥಳೀಯ ಭಾಷೆಗಳ ಉತ್ತೇಜನಕ್ಕೆ ಮಹತ್ವ ನೀಡಿದರು. ಅವರು ಸರಳ ಜೀವನ ನಡೆಸುತ್ತಾ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಅವರ ರಾಜಕೀಯ ಚಿಂತನೆಗಳು ಭಾರತದ ರಾಜಕೀಯ ವ್ಯವಸ್ಥೆಯ ಮೇಲೆ ದೀರ್ಘಕಾಲದ ಪ್ರಭಾವವನ್ನು ಬೀರಿದೆ.
1967ರಲ್ಲಿ ಲೋಹಿಯಾ ಅವರು ನಿಧನರಾದರೂ, ಅವರ ಚಿಂತನೆಗಳು ಮತ್ತು ತತ್ವಗಳು ಇಂದಿಗೂ ಜೀವಂತವಾಗಿವೆ. ಅವರು ನ್ಯಾಯಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣದ ಕನಸನ್ನು ಕಂಡ ಮಹಾನ್ ನಾಯಕ. ರಾಮ ಮನೋಹರ್ ಲೋಹಿಯಾ ಅವರ ಜೀವನ ಮತ್ತು ಸಾಧನೆಗಳು ನಮ್ಮ ಸಮಾಜಕ್ಕೆ ಹೊಸ ದಿಕ್ಕು ತೋರಿಸುವ ಪ್ರೇರಣಾ ದೀಪವಾಗಿ ಉಳಿದಿವೆ.