ಎಲ್ಲ ಪ್ರಜೆಗಳೂ ರಾಷ್ಟ್ರಭಕ್ತಿಯನ್ನು ಅಂತರ್ಗತ ಹಾಗೂ ಅಭಿವ್ಯಕ್ತಗೊಳಿಸಬೇಕು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

ಅಕ್ಟೊಬರ್ 25, ಬೆಂಗಳೂರು: ರಾಷ್ಟ್ರಭಕ್ತಿಯನ್ನು ತಮ್ಮ ಜೀವನದಲ್ಲಿ ಅಂತರ್ಗತಗೊಳಿಸಿಕೊಳ್ಳುವ ಜತೆಗೆ ಅದನ್ನು ಅಭಿವ್ಯಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶೇಷಾದ್ರಿಪುರ ನಗರದ ಸದಾಶಿವನಗರ ವಸತಿಯಿಂದ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ 1925ರಲ್ಲಿ ಬಹಳ ದೂರದೃಷ್ಟಿಯಿಂದ ಆರಂಭವಾಯಿತು. ಎಂದಾದರೂ ಸ್ವಾತಂತ್ರ್ಯ ಬರುತ್ತದೆ, ಅದಕ್ಕೆ ದೇಶವನ್ನು ಸಜ್ಜುಗೊಳಿಸಬೇಕೆಂದು ಡಾ. ಹೆಡಗೇವಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಆರಂಭಿಸಿದರು. ಅವರ ಪ್ರಯತ್ನದಿಂದಾಗಿ ಇಂದು ಲಕ್ಷಾಂತರ ಸ್ವಯಂಸೇವಕರು ಸೃಷ್ಟಿಯಾಗಿದ್ದಾರೆ. ಆರೆಸ್ಸೆಸ್ ಒಂದು ರಾಜಕೀಯ ಸಂಸ್ಥೆ ಅಲ್ಲ. ದೇಶದ ಶಾಶ್ವತ ಮೌಲ್ಯಗಳಾದ ಧರ್ಮ, ಸಂಸ್ಕೃತಿಗಳ ಆಧಾರದಲ್ಲಿ ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದೆ. ಈ ದೃಷ್ಟಿಯಲ್ಲಿ ಕಾರ್ಯನಡೆಸಲು ವಿಶ್ವಕ್ಕೆ ಕರೆ ನೀಡಿದ ಸಂಘ ಸ್ಥಾಪಕರಿಗೆ ಕೋಟಿ ಕೋಟಿ ನಮನ.

ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಪಾತ್ರ ವಹಿಸಿದ್ದೇನೆ. ಆರೆಸ್ಸೆಸ್ ಅಗತ್ಯ ಈ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ನಂಬಿರುವವರಲ್ಲಿ ನಾನೂ ಒಬ್ಬ. ರಾಮಕೃಷ್ಣಾಶ್ರಮದ ನಾಲ್ಕು ಗೋಡೆಗಳ ನಡುವೆ ಬೆಳೆದು ಪರಮಹಂಸರ, ವಿವೇಕಾನಂದರ ಉಪದೇಶದಿಂದ ಪ್ರೇರೇಪಿತನಾದವನು. ಆರೆಸ್ಸೆಸ್‌ಗೆ ನನ್ನ ಗೌರವ ಅರ್ಪಣೆ ಮಾಡಲು ಇಲ್ಲಿ ಬಂದಿದ್ದೇನೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

ಪ್ರತಿ ಪ್ರಜೆಯೂ ದೇಶಕ್ಕೆ ಎರಡು ವರ್ಷ ನೀಡಬೇಕು ಎಂಬ ನಿಯಮ ಅಮೆರಿಕದಲ್ಲಿದೆ. ಟ್ರಂಪ್ ತನ್ನ ಎರಡು ವರ್ಷಗಳನ್ನು ನೀಡದೆ ತಪ್ಪಿಸಿಕೊಂಡ ಎಂಬುದು ಇಂದು ಅಲ್ಲಿನ ಚುನಾವಣಾ ವಿಷಯವಾಗಿದೆ. ರಾಷ್ಟ್ರಾಭಿಮಾನ ನಮ್ಮಲ್ಲಿ ಅಂತರ್ಗತ ಆಗಬೇಕು ಹಾಗೂ ಆ ಭಾವನೆ ಅಭಿವ್ಯಕ್ತ ಆಗಬೇಕು. ನಮ್ಮ ಪ್ರಜಾಪ್ರಭುತ್ವವನ್ನು ಸದೃಢವಾಗಿ ರೂಪಿಸಲಾಗಿದೆ. ಪ್ರಜಾಪ್ರಭುತ್ವ ಉಳಿಸಲು ಚುನಾವಣಾ ಆಯೋಗದಂತಹ ಸಂಸ್ಥೆಗಳು ಕಟಿಬದ್ಧವಾಗಿವೆ. ಅಧಿಕಾರ ಕಳೆದುಕೊಂಡಾಗ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೇಟು ಹಾಕದೆ ನಗುನಗುತ್ತ ಅಧಿಕಾರ ತ್ಯಜಿಸಿದರು. ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬ ಈ ಮನಸ್ಥಿತಿ ಹಿಂದು ಧರ್ಮದ ಹಾಸುಹೊಕ್ಕಾದ ಅಂಶ. ಅಲ್ಲಿಂದಲೇ ಇಂತಹ ಪ್ರೇರಣೆ ದೊರಕುತ್ತದೆ. ನಮ್ಮ ಕುಟುಂಬಕ್ಕೆ, ನಮ್ಮ ವ್ಯಕ್ತಿಗತ ಉನ್ನತಿಗೆ ಸಮಯ ನೀಡುತ್ತೇವೆ. ಆದರೆ ದೇಶಕ್ಕೆ ಎಷ್ಟು ಸಮಯ ನೀಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಈ ದೇಶದಲ್ಲಿರುವ ಹಿಂದು, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನರಾದಿಯಾಗಿ ಎಲ್ಲರೂ ಕೇಳಿಕೊಳ್ಳಬೇಕು. ನಮ್ಮ ಸಮಾಜವನ್ನು ಉತ್ತಮವಾಗಿ ರೂಪಿಸಲು ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ಆಗಬೇಕು. ಆಂಗ್ಲ ಪದ್ಧತಿಯಲ್ಲೆ ನಡೆಯುತ್ತಿದೆ. ದುರದೃಷ್ಟಕರವಾಗಿ ಶಿಕ್ಷಣ ಎಂಬುದು ರಾಜ್ಯದ ವಿಷಯವಾಗಿದೆ. ಕೇಂದ್ರ ಸರ್ಕಾರ ಸಾಕಷ್ಟು ಮಧ್ಯಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಆರೆಸ್ಸೆಸ್‌ನಲ್ಲಿ ಲಕ್ಷಾಂತರ ಜನರು ತಮ್ಮನ್ನು ತಾವು ಅರ್ಪಿಸುಕೊಂಡಿದ್ದಾರೆ. ಇದು ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ.‌ ಇದನ್ನು ನಮ್ಮ ಇಳಿ ವಯಸ್ಸಿನಲ್ಲಿ ನೋಡುತ್ತಿದ್ದೇವೆ. ಇದನ್ನು ಎಳೆ ವಯಸ್ಸಿನಲ್ಲೆ ಮನಸ್ಸಿನಲ್ಲಿ ಮೂಡಿಸಿದರೆ ದೇಶದ ಆಳ ಅಗಲ ಅರಿಯಲು ಸಹಾಯಕವಾಗುತ್ತದೆ. ನಾನು ಸಂಸತ್‌ನಲ್ಲಿ ಅನೇಕ ಗಣ್ಯರ ಜತೆಗೆ ಕೆಲಸ ಮಾಡುವ ಅವಕಾಶವನ್ನು ಮಂಡ್ಯದ ಜನರು ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷರೊಬ್ಬರು ಈ ಸಮಯದಲ್ಲಿ ನಿಧನರಾದ ಸುದ್ದಿ ಕೇಳಿದೆ. ಅವರು ವಿಮಾನದಲ್ಲಲ್ಲದೆ, ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರಂತೆ. ತಮ್ಮನ್ನು ತಾವೇ ಉದಾಹರಣೆ ಮಾಡಿಕೊಂಡು ಸರಳ ಜೀವನ ನಡೆಸಿದವರು. ಅಂತಹ ಎತ್ತರ ಮುಟ್ಟುವ ಪ್ರಯತ್ನ ನಾವು ಮಾಡಬೇಕಿದೆ.

ದೇಶ ನಿನಗೇನು ಕೊಟ್ಟಿದೆ ಎಂಬುದಕ್ಕಿಂತಲೂ ನೀನು ದೇಶಕ್ಕೆ ಏನು ಕೊಟ್ಟಿದ್ದೀಯ ಎಂಬುದನ್ನು ಕೇಳಬೇಕು ಎಂದು ಕೆನಡಿಯವರ ಮಾತನ್ನು ಭಾರತದ ಎಲ್ಲ ಪ್ರಜೆಗಳೂ ಕೇಳಿಕೊಂಡು ಅವರೇ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಕ್ರೀಡಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕರಾದ ಚಂದ್ರಶೇಖರ ಜಹಗೀರದಾರ್ ಅವರು ಮಾತನಾಡಿ, ವಿಜಯದಶಮಿ ದಿನ ಯಾವುದೇ ಕೆಲಸ ಆರಂಭಿಸಿದರೂ ಯಶಸ್ವಿಯಾಗುತ್ತದೆ. ಸಂಘದ ಸ್ವಯಂಸೇವಕರಿಗೆ ಮತ್ತೂ ಮಹತ್ವದ ಸಂಗತಿ ಎಂದರೆ ಅದೇ ದಿನದಂದು ಸಂಘ ಆರಂಭವಾಯಿತು. ಹಿಂದು ಸಂಘಟನೆ ಮೂಲಕ ದೇಶದ ಸ್ವಾತಂತ್ರ್ಯವನ್ನು ಸ್ಥಾಪನೆಗೊಳಿಸಬೇಕು ಎಂಬುದು ಉದ್ದೇಶವಾಗಿತ್ತು. ದೇಶದ ಮೂಲ ಚಿಂತನೆಯೇ ಧರ್ಮ ಎಂದು ವಿವೇಕಾನಂದರಾದಿಯಾಗಿ ಎಲ್ಲ ಮಹಾ ಪುರುಷರೂ ಹೇಳಿದ್ದರು. ರಾಷ್ಟ್ರದ ಏಳುಬೀಳುಗಳ ಜತೆಗೆ ಹಿಂದು ಧರ್ಮದ ಏಳುಬೀಳು ಬೆಸೆದುಕೊಂಡಿದೆ, ಅದನ್ನು ಬೇರೆ ಮಾಡಲು ಸಾಧ್ಯವಿಲ್ಲ. ಹಿಂದು ಧರ್ಮದ ಸಂರಕ್ಷಣೆ ಮೂಲಕ ರಾಷ್ಟ್ರವನ್ನು ಪುನರ್ವೈಭವ ಸ್ಥಿತಿಗೆ ಕೊಂಡೊಯ್ಯುವತ್ತ ಸಂಘ ಕೆಲಸ ಮಾಡುತ್ತಿದೆ.
ಸಂಘ ಪ್ರಾರಂಭವಾಗಿ 95 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಸಂಘ ಏನು ಮಾಡಿತು ಎಂದು ಪ್ರಶ್ನಿಸಬಹುದು. ಸಂಘದ ಸ್ವಯಂಸೇವಕರು ಇಬ್ಬರು ಪ್ರಧಾನಿಯಾಗಿದ್ದಾರೆ, ಉಪರಾಷ್ಟ್ರಪತಿಯಾಗಿದ್ದಾರೆ, ಲೋಕಸಭೆ ಸ್ಪೀಕರ್‌ಗಳಾಗಿದ್ದಾರೆ ಎಂಬುದು ಹೊರಗಿನವರಿಗೆ ಕಾಣುವ ಸಾಧನೆ. ಆದರೆ ಸಂಘದ ಸ್ವಯಂಸೇವಕರಿಗೆ ಇದು ಮುಖ್ಯವೇ ಅಲ್ಲ. ಸಂಘದ ಕಾರ್ಯದಲ್ಲಿ ಇದೊಂದು ಸಣ್ಣ ಭಾಗ ಮಾತ್ರ.


ಈ ದೇಶದ ಹಿಂದುವಿಗೆ ತಾನು ಯಾರು ಎಂಬ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಪುತ್ತೂರಿನ ಕಾರ್ಯಕರ್ತರು ಇದನ್ನು ವಿವರಿಸಿದ್ದರು. 40 ವರ್ಷದ ಹಿಂದೆ ಪೇಟೆಯಿಂದ ಬಂದ ಯುವಕನೊಬ್ಬ ಮೈದಾನಕ್ಕೆ ಆಡಲು ಕರೆದ. ಒಂದು ದಿನ ಪ್ರಚಾರಕರು ಆಗಮಿಸಿ, ಸಂಘ ಹಿಂದು ಸಂಘಟನೆ ಕೆಲಸ ಮಾಡುತ್ತದೆ ಎಂದ. ಜೀವನದಲ್ಲಿ ಮೊಟ್ಟಮೊದಲಬಾರಿಗೆ ಹಿಂದು ಎಂಬ ಶಬ್ದವನ್ನು ಆತ ಕೇಳಿದ್ದ. ತಂದೆಯನ್ನು ಪ್ರಶ್ನಿಸಿದ, ಹಿಂದು ಎಂದರೆ ಏನು? ಎಂದ. ನಾಳಿದ್ದು ಪೂಜೆಗೆ ಭಟ್ಟರು ಬರುತ್ತಾರೆ, ಅವರನ್ನು ಕೇಳು ಎಂದರು. ಹಿಂದು ಎಂದರೆ ಪ್ರಾಯಶಃ ಉತ್ತರ ಭಾರತದಲ್ಲಿ ಯಾವುದೋ ಜಾತಿ ಹೆಸರು ಇರಬೇಕು ಎಂದರು ಭಟ್ಟರು. ಅವರ ಬಾಲ್ಯದಲ್ಲಿ ಈ ಘಟನೆ ನಡೆಯಿತು, ಇಂದು ಮಂಗಳೂರಿನಲ್ಲಿ ಲಕ್ಷಾಂತರ ಯುವಕರು ‘ಗರ್ವದಿಂದ ಗರ್ಜಿಸು ನಾನೊಬ್ಬ ಹಿಂದು’ ಎನ್ನುವಾಗ, ಸಂಘ ಇಷ್ಟು ವರ್ಷಗಳಲ್ಲಿ ಏನು ಮಾಡಿದೆ ಎಂಬುದು ತಿಳಿಯುತ್ತದೆ ಎಂದು ವಿವರಿಸಿದರು.
ಹಿಂದು ಸಮಾಜಕ್ಕೆ ಧಕ್ಕೆಯಾಗುವ ಯಾವುಕೇ ಕಾರ್ಯಕ್ಕೆ ಆಸ್ಪದ ನೀಡಬಾರದು ಎಂಬುದು ಸ್ವಯಂಸೇವಕನ ಪ್ರಯತ್ನ. ಹಿಂದು ಸ್ವಾಭಿಮಾನವನ್ನು ತುಳಿದು, ಶ್ರದ್ಧಾಕೇಂದ್ರವನ್ನು ಒಡೆದು ಮಸೀದಿ ಕಟ್ಟುತ್ತೇವೆ ಏನು ಮಾಡುತ್ತೀರ ಎಂಬ ದುಷ್ಟ ಸವಾಲಿಗೆ ಉತ್ತರ ನೀಡುವ ಮಟ್ಟಕ್ಕೆ ಹಿಂದು ಸಮಾಜ ಬಂದಿದೆ. ಹಿಂದು ಸಮಾಜವನ್ನು ಕೆಟ್ಟ ಕಣ್ಣಿನಿಂದ ನೋಡದಂತೆ ಮಾಡುವ ಶಕ್ತಿಯನ್ನು ಸಂಘ ನಿರ್ಮಿಸಿದೆ. ಹಿಂದು ಸ್ವಾಭಿಮಾನ ಜಾಗೃತವಾಗಿದ್ದು ಸಂಘದ ಸಾಧನೆ ಎನ್ನಬಹುದು. ಸ್ವಂತವನ್ನು ಮರೆತು ಸಮಾಜಕ್ಕೆ ತುಡಿಯುವ ಸ್ವಯಂಸೇವಕರನ್ನು ಸಂಘ ನಿರ್ಮಿಸಿದೆ.


ಜಯಪ್ರಕಾಶ ನಾರಾಯಣರು ಇಸ್ರೇಲ್‌ನಲ್ಲಿ ಕೃಷಿ ಸಾಧನೆಯನ್ನು ಕಂಡು ಮೆಚ್ಚಿದ್ದರು. ಚಿಕ್ಕ ದೇಶದ ಸುತ್ತ ಶತೃಗಳೇ ತುಂಬಿದ್ದಾರೆ, ಆದರೂ ಸಾಧನೆ ಮಾಡಿದೆ ಆ ದೇಶ. ನಿಮ್ಮ ದೇಶದಲ್ಲಿ ದೇಶಕ್ಕೋಸ್ಕರವೇ ಬದುಕುವ ಹಾಗೂ ಸಾಯುವವರು ಎಷ್ಟಿರಬಹುದು ಎಂದು ಆ ದೇಶದವರು ಕೇಳಿದರು. 30-40 ಕೋಟಿ ಭಾರತದ ಜನರಲ್ಲಿ ದೇಶಕ್ಕಾಗಿ ಕೇವಲ 10 ಲಕ್ಷ ಜನರು ಬದುಕುತ್ತಾರೆ ಎಂದರು ಜೆಪಿ. ನಮ್ಮ ದೇಶದಲ್ಲಿ ಎಲ್ಲ ಪ್ರಜೆಗಳೂ ದೇಶಕ್ಕಾಗಿಯೇ ಜೀವಿಸುತ್ತಾರೆ ಎಂದು ಇಸ್ರೇಲಿನವರು ಹೇಳಿದ್ದರು. ಈ ವಿಷಯವನ್ನು ಅನುಭವಿಸಿದ್ದ ಜೆಪಿ, ಆರೆಸ್ಸೆಸ್ ಕೋಮುವಾದಿಯಾದರೆ ನಾನೂ ಕೋಮುವಾದಿ ಎಂದಿದ್ದರು.


ದೇಶಕ್ಕೋಸ್ಕರ ಮಡಿಯುವುದು ಬಹುದು ಕಷ್ಟದ ಕೆಲಸ. ಆದರೂ ಆ ಕಾರ್ಯಕ್ಕಾಗಿ ದೇಶದ ಸೈನಿಕರಿಂದ ಪೊಲೀಸರವರೆಗೆ ಲಕ್ಷಾಂತರ ಜನರಿದ್ದಾರೆ. ಸಂಘವು, ದೇಶಕ್ಕಾಗಿ ಬದುಕುವ ಲಕ್ಷಾಂತರ ಜನರನ್ನು ಸಂಘ ರೂಪಿಸಿದೆ. ಇಂದು ವಿದ್ಯಾರ್ಥಿ, ಕಾರ್ಮಿಕ, ರಾಜಕೀಯ, ಧಾರ್ಮಿಕ ಸೇರಿ 58 ಕ್ಷೇತ್ರಗಳಲ್ಲಿ ಸಂಘದ ಕಾರ್ಯ ನಡೆಯುತ್ತದೆ. ಉದಾಹರಣೆಗೆ, ಕಾರ್ಮಿಕ ಸಂಘಟನೆಗಳ ಘೋಷಣೆ ಹೇಗಿತ್ತು? ಕೆಲಸ ಅರ್ಧ ಮಾಡಿದರೂ ಪೂರಾ ವೇತನ ಎನ್ನುತ್ತಿದ್ದರು. ಆದರೆ, ದೇಶಕ್ಕಾಗಿ ಕೆಲಸ ಮಾಡುತ್ತೇವೆ, ಪೂರ್ಣ ಕೆಲಸಕ್ಕೆ ಪೂರ್ಣ ವೇತನ ಎಂದು ಭಾರತೀಯ ಮಜ್ದೂರ್ ಸಂಘ ಸಂಘಟನೆ ಮಾಡಿತು.


ನಮ್ಮ ಸಮಾಜದ ಏಳಿಗೆ, ಅವನತಿಗೆ ಬೇರೆಯವರು ಕಾರಣರಲ್ಲ ಎಂದು ನಾವು ತಿಳಿಯಬೇಕು. ನಮ್ಮ ಸಮಾಜದ ದೋಷಗಳನ್ನು ತೆಗೆದುಹಾಕಬೇಕು. ನಾವು ಸೃಷ್ಟಿಯ ಎಲ್ಲ ಕಣದಲ್ಲೂ ನಾವು ದೈವತ್ವವನ್ನು ಕಾಣುತ್ತೇವೆ. ಆದರೆ ನಮ್ಮದೇ ಸಮಾಜದವರನ್ನು ಅಸ್ಪಶ್ಯತೆ ಎಂಬ ಹೆಸರಿನಲ್ಲಿ ದೂರ ಇಡುತ್ತಿದ್ದೇವೆ. ಇದಕ್ಕೆ ಹೊರಗಿನವರು ಕಾರಣರಲ್ಲ, ನಮ್ಮದೇ ಸಮಾಜದಲ್ಲಿ ಮೂಡಿಬಂದ ಅನಿಷ್ಠ ಪದ್ಧತಿ.


ಅಂತಿಮ ದಿನಗಳಲ್ಲಿ ಪಂಡರಾಪುರದ ದೇವರ ದರ್ಶನ ಮಾಡಬೇಕು ಎಂದು ಅಂಬೇಡ್ಕರ್ ಅವರ ಪತ್ನಿ ಕೇಳಿದ್ದರು. ಆದರೆ ಅಂದಿನ ದಿನಗಳಲ್ಲಿ ಅಂಬೇಡ್ಕರರೂ ಅಸಹಾಯಕರಾದರು, ಪತ್ನಿ ನಿಧನರಾದರು. ನಾಸಿಕದ ಕಾಳಾರಾಮ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನೀಡುವುದಿಲ್ಲ ಎಂದು ಅಂಬೇಡ್ಕರರನ್ನು ಅಲ್ಲಿನ ಅರ್ಚಕರು, ಸ್ಥಳೀಯರು ತಡೆದಿದ್ದರು. ಆದರೆ ಅದೇ ಅರ್ಚಕರ ಮೊಮ್ಮಗ ಸಂಘದ ಸ್ವಯಂಸೇವಕರಾದರು, ಇಂದು ದೇವಸ್ಥಾನಕ್ಕೆ ಎಲ್ಲರಿಗೂ ಪ್ರವೇಶ ನೀಡುವುದರ ಜತೆಗೆ ದಲಿತರ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ. ಚಂಡಾಲ ಎಂದು ಕರೆದವರ ಮನೆಯಲ್ಲಿ ಸಾಧುಸಂತರು ಊಟ ಮಾಡುವಂತಹ ಪ್ರಯತ್ನ ವಿಶ್ವ ಹಿಂದು ಪರಿಷತ್ ಮಾಡುತ್ತಿದೆ.
ಪ್ರತಿ ಹಿಂದು ಮನೆಯಲ್ಲಿ, ಮನದಲ್ಲಿ ಈ ಭಾವನೆಗಳನ್ನು ಕಿತ್ತೊಗೆಯುವವರೆಗೆ ಸಂಘದ ಕೆಲಸ ಪೂರ್ಣವಾಗುವುದಿಲ್ಲ.

ಈ 95 ವರ್ಷಗಳಲ್ಲಿ ನಾಡಿನ ಎಲ್ಲ ಅಂಗಗಳನ್ನೂ ಪರಿವರ್ತನೆ ಮಾಡುವತ್ತ ಕೆಲಸ ಮಾಡುತ್ತಿದೆ.
ದಿನದ ಒಂದು ಗಂಟೆ ಮಾತ್ರ ಸಂಘಕ್ಕೆ ಸಮಯ ನೀಡ ಎಂದು ಸಂಸ್ಥಾಪಕ ಡಾ. ಹೆಡಗೇವಾರರು ಹೇಳಿದ್ದರು. ಇಂದು ಸಾವಿರಾರು ಜನರು ತಮ್ಮ ಯೌವನದ ಸಮಯವನ್ನು ಸಮಾಜದ ಕೆಲಸಕ್ಕೆ ಮುಡುಪಾಗಿಟ್ಟಿದ್ದಾರೆ. ಬರುವ ಐದು ವರ್ಷದಲ್ಲಿ ಸಂಘದ ಕೆಲಸ ತೀವ್ರವಾಗಬೇಕು. ಸಮಾಜದ ಎಲ್ಲರೂ ತಮ್ಮ ಶಕ್ತ್ಯಾನುಸಾರ ಕೆಲಸದಲ್ಲಿ ತೊಡಗಿಸಬೇಕು ಎಂದು ವಿನಂತಿಸುತ್ತೇನೆ ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.