ಬೆಂಗಳೂರು, ಅಕ್ಟೋಬರ್ 11, 2021: ರಾಷ್ಟ್ರೋತ್ಥಾನ ಪರಿಷತ್, ಯುನಿಸಿಸ್ ಇಂಡಿಯಾ ಸಹಭಾಗಿತ್ವದಲ್ಲಿ 8 ಹಾಸಿಗೆಯ ಐಸಿಯು ಘಟಕವನ್ನು ಮಹಾರಾಜ ಅಗ್ರಸೇನ ಹಾಸ್ಪಿಟಲ್‍ಗೆ ಹಸ್ತಾಂತರಿಸಿದೆ.
ಆರೋಗ್ಯಪೂರ್ಣ ಕರ್ನಾಟಕ ನಿರ್ಮಾಣ ಹಾಗೂ ರಾಜ್ಯದಲ್ಲಿ ಕೊರೋನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಐಸಿಯು ವಾರ್ಡ್ ತೆರೆಯಲು ನೆರವಾಗುತ್ತಿದೆ. ಬೆಂಗಳೂರಿನ ಮಹಾರಾಜ ಅಗ್ರಸೇನ ಹಾಸ್ಪಿಟಲ್‍ನಲ್ಲಿ ಐಸಿಯು ವಾರ್ಡ್ ತೆರೆಯಲು ಅಗತ್ಯ 8 ಹಾಸಿಗೆಯ ಐಸಿಯು ಘಟಕವನ್ನು ಯುನಿಸಿಸ್ ಇಂಡಿಯಾದ ಸಹಭಾಗಿತ್ವದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಒದಗಿಸಿದೆ ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ ತಿಳಿಸಿದ್ದಾರೆ.
ಇಂದು ಮಹಾರಾಜ ಅಗ್ರಸೇನ ಹಾಸ್ಪಿಟಲ್‍ನಲ್ಲಿ ನಡೆದ ಐಸಿಯು ಘಟಕದ ಹಸ್ತಾಂತರ ಕಾರ್ಯಕ್ರಮದಲ್ಲಿ ಯುನಿಸಿಸ್ ಇಂಡಿಯಾದ ಸಿಎಸ್‍ಆರ್ ಕಮಿಟಿಯ ಹಿರಿಯ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಶ್ರೀಕಾಂತ್ ರಾಘವನ್, ಸಿಎಸ್‍ಆರ್ ಮುಖ್ಯಸ್ಥರಾದ ಸುಮಿತಾ ದತ್ತ್, ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷರಾದ ಎ.ಆರ್. ದ್ವಾರಕಾನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ, ಅಗರ್ವಾಲ್ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಸತೀಶ್ ಜೈನ್ ಹಾಗೂ ಹಾಲಿ ಅಧ್ಯಕ್ಷರಾದ ರಾಜಕುಮಾರ್ ಕಂಡೊಯ್ ಅವರ ಉಪಸ್ಥಿತರಿದ್ದರು.
ಈ ಸಮಯದಲ್ಲಿ ಶ್ರೀಕಾಂತ್ ರಾಘವನ್ ಅವರು ಮಾತನಾಡಿ “ಸಮಾಜವನ್ನು ಸಶಕ್ತಗೊಳಿಸುವ ಕೆಲಸವನ್ನು ಯುನಿಸಿಸ್‍ನ ತನ್ನ ಆದ್ಯತೆಯ ಕಾರ್ಯವಾಗಿದೆ. ರಾಷ್ಟೋತ್ಥಾನನ ಜೊತೆಗೂಡಿ ಮಹಾರಾಜ ಅಗ್ರಸೇನ ಹಾಸ್ಪಿಟಲ್‍ಗೆ 8 ಹಾಸಿಗೆಯ ತೀವ್ರ ನಿಗಾ ಘಟಕವನ್ನು ಒದಗಿಸಲು ನಮಗೆ ಸಂತೋಷವಾಗುತ್ತಿದೆ. ಭಾರತೀಯರಿಗೆ ಗುಣಮಟ್ಟದ ಆರೋಗ್ಯ ಒದಗಿಸಲು ರಾಷ್ಟ್ರೋತ್ಥಾನ ಪರಿಷತ್ತಿನಂತಹ ಸ್ವಯಂಸೇವಾ ಸಂಸ್ಥೆಗಳಿಗೆ ಹಾಗೂ ಆಸ್ಪತ್ರೆಗಳಿಗೆ ನಮ್ಮ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷರಾದ ಎ.ಆರ್. ದ್ವಾರಕಾನಾಥ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ವೈದ್ಯಕೀಯ ಮೂಲ ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಕಳೆದ 4 ತಿಂಗಳಿನಿಂದ ಹಲವು ಕಾರ್ಪೊರೇಟ್ ಕಂಪೆನಿಗಳ ಹಾಗೂ ನಾಸ್ಕಾಂ ಫೌಂಡೇಶನ್‍ನ ಸಹಭಾಗಿತ್ವದಲ್ಲಿ ಬೆಂಗಳೂರಿನ 5 ಆಸ್ಪತ್ರೆಗಳಿಗೆ ಬೇಕಾದ ವೈದ್ಯಕೀಯ ಉಪಕರಣಗಳನ್ನು ಹಾಗೂ ಐಸಿಯು ವಾರ್ಡಗಳನ್ನು ಒದಗಿಸಲಾಗಿದೆ ಎಂದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆಯವರು ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯದೇ ಆದಂತಹ 150 ಹಾಸಿಗೆಯ ಆಸ್ಪತ್ರೆಯನ್ನು ‘ಜಯದೇವ್ ಮೆಮೋರಿಯಲ್ ರಾಷ್ಟ್ರೋತ್ಥಾನ ಹಾಸ್ಪಿಟಲ್’ ಹೆಸರಿನಲ್ಲಿ ಪ್ರಾರಂಭಮಾಡಲಿದ್ದೇವೆ. ಇದು ಕೋವಿಡ್ ವಿರುದ್ಧ ಹೋರಾಡಲು ನಮ್ಮ ಸಿದ್ಧತೆಯಾಗಿದೆ ಎಂದರು.