ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಆಯೋಜಿಸಲಾಗುತ್ತಿರುವ 4ನೇ ವರ್ಷದ ‘ಕನ್ನಡ ಪುಸ್ತಕ ಹಬ್ಬ’ ಅಕ್ಟೋಬರ್ 26, 2024ರಿಂದ ಡಿಸೆಂಬರ್ 1ರ ವರೆಗೆ 37 ದಿನಗಳ ಕಾಲ ನಡೆಯಲಿದೆ. ಈ ನಿಮಿತ್ತ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಪತ್ರಿಕಾಗೋಷ್ಟಿ ನಡೆಯಿತು. ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕ ವಿಘ್ನೇಶ್ವರ ಭಟ್ ಉಪಸ್ಥಿತರಿದ್ದರು.

ಪತ್ರಿಕಾ ಪ್ರಕಟಣೆಯ ಸಾರಾಂಶ

1965ರಲ್ಲಿ ಪ್ರಾರಂಭವಾದ ರಾಷ್ಟ್ರೋತ್ಥಾನ ಪರಿಷತ್ತಿನ ಮೊದಲ ಚಟುವಟಿಕೆಯಾದ ‘ರಾಷ್ಟ್ರೋತ್ಥಾನ ಸಾಹಿತ್ಯ’ ಕಳೆದ 56 ವರ್ಷಗಳ ನಿರಂತರ ಕಾರ್ಯನಿರ್ವಹಣೆಯಲ್ಲಿ ಇದುವರೆಗೂ 300 ಪುಸ್ತಕಗಳನ್ನು ಪ್ರಕಟಿಸಿದೆ. ಇತಿಹಾಸ, ರಾಷ್ಟ್ರೀಯತೆ , ಸಂಸ್ಕೃತಿ, ವ್ಯಕ್ತಿತ್ವವಿಕಾಸ, ಜೀವನಚರಿತ್ರೆಗಳು, ವ್ಯಕ್ತಿಚಿತ್ರಗಳು, ಪರಿಸರ, ಯೋಗ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಆರ್ಥಿಕತೆ — ಹೀಗೆ ಹಲವು ವಿಷಯ-ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಪ್ರಕಟಣೆಗಳನ್ನು ತರಲಾಗಿದೆ. ಇವುಗಳಲ್ಲದೆ, ಭಾರತದ ಇತಿಹಾಸ-ಪರಂಪರೆ-ಮಹಾಕಾವ್ಯಗಳು- ಪುರಾಣಗಳು-ಕಲೆ-ಸಾಹಿತ್ಯ ಸೇರಿದಂತೆ ಎಲ್ಲ ಜೀವನಕ್ಷೇತ್ರಗಳಿಗೆ ಸಂಬಂಧಿಸಿದ ಮಹಾಪುರುಷರನ್ನು ಮಕ್ಕಳಿಗೆ ಪರಿಚಯಿಸುವುದಕ್ಕಾಗಿ ರೂಪಿಸಲಾದ ‘ಭಾರತ-ಭಾರತಿ ಪುಸ್ತಕ ಸಂಪದ’ ಯೋಜನೆಯಲ್ಲಿ, ಮೊದಲ ಹಂತದಲ್ಲಿ, ಪ್ರೊ|| ಎಲ್. ಎಸ್. ಶೇಷಗಿರಿರಾಯರ ಸಂಪಾದಕತ್ವದಲ್ಲಿ 510 ಪುಸ್ತಕಗಳನ್ನು ಪ್ರಕಟಿಸಲಾಗಿತ್ತು. ಹತ್ತು ವರ್ಷಗಳ ಹಿಂದೆ, ಹಿರಿಯ ಪತ್ರಕರ್ತ ಶ್ರೀ ಚಿರಂಜೀವಿ ಅವರ ಸಂಪಾದಕತ್ವದಲ್ಲಿ ಮತ್ತೆ 100 ಪುಸ್ತಕಗಳನ್ನು ಸೇರಿಸಲಾಗಿದೆ. ಈ 610 ಪುಸ್ತಕಗಳಲ್ಲಿ 225 ಪುಸ್ತಕಗಳು ಇಂಗ್ಲಿಷಿಗೂ ಅನುವಾದಗೊಂಡಿವೆ.
ಮೊದಲ ಪುಸ್ತಕ ‘ರಣವೀಳ್ಯ’ವೂ ಸೇರಿದಂತೆ ನಮ್ಮ ಹಲವು ಪ್ರಕಟಣೆಗಳು ಕಳೆದ ಐದಾರು ದಶಕಗಳಿಂದ ನಿರಂತರ ಬೇಡಿಕೆಯಲ್ಲಿವೆ. ಚಂದ್ರಶೇಖರ ಆಜಾದರ ಜೀವನ ಆಧಾರಿತ ಕಾದಂಬರಿ ‘ಅಜೇಯ’ (ಲೇ. ಬಾಬು ಕೃಷ್ಣಮೂರ್ತಿ) ಪ್ರಕಟವಾಗಿ ಐವತ್ತು ವರ್ಷಗಳ ನಂತರವೂ ಜನಪ್ರಿಯ ಕೃತಿಯಾಗಿ, ಇಂದಿಗೂ ವರ್ಷದಲ್ಲಿ ಎರಡು ಮೂರು ಬಾರಿ ಮರುಮುದ್ರಣಗೊಳ್ಳುತ್ತಿದೆ. ‘ಅದಮ್ಯ’, ‘ಕೋಲ್ಮಿಂಚು’, ‘ಮನಸ್ಸೇ ರಿಲ್ಯಾಕ್ಸ್ ಪ್ಲೀಸ್’, ‘ಭಾರತದರ್ಶನ’, ‘ಭಾರತೀಯ ಕ್ಷಾತ್ರಪರಂಪರೆ’, ‘ಸ್ವಾತಂತ್ರ್ಯ ವೀರ ಸಾವರಕರ್’, ‘ಕೃತಿರೂಪ ಸಂಘದರ್ಶನ’ — ಹೀಗೆ ನಮ್ಮ ಹಲವು ಪ್ರಕಟನೆಗಳು ನಿರಂತರವಾಗಿ ಓದುಗರನ್ನು ತಲಪುತ್ತಿವೆ. ಪ್ರಸಿದ್ಧ ಗಾಂಧಿವಾದಿ, ಚಿಂತಕ ಧರ್ಮಪಾಲ್ ಅವರ ಮಹತ್ತ್ವದ ಕೃತಿಗಳನ್ನು ನಾವು ಪ್ರಕಟಿಸುತ್ತಿದ್ದು, ವ್ಯಾಪಕ ಮೆಚ್ಚುಗೆ ಪಡೆದಿವೆ.
ನಮ್ಮ ಹಲವು ಪ್ರಕಟನೆಗಳು ವಿವಿಧ ಅಕಾಡೆಮಿ-ಸಂಘಸಂಸ್ಥೆಗಳ ಬಹುಮಾನ-ಪ್ರಶಸ್ತಿಗಳಿಗೂ ಪಾತ್ರವಾಗಿವೆ. ‘ತೋರ್‌ಬೆರಳು’, ‘ಅಜೇಯ’, ‘ಅದಮ್ಯ’, ‘ಶತಮಾನದ ತಿರುವಿನಲ್ಲಿ ಭಾರತ’, ‘ಗಾಂಧೀಯ ಅರ್ಥಶಾಸ್ತ್ರ’, ‘ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ ಅಂಬೇಡ್ಕರ್’ — ಮೊದಲಾದ ಕೃತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರಗಳು ಗೌರವಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಅಂಕಿತ ದತ್ತಿ ಪ್ರಶಸ್ತಿ’ಯೂ ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಲಭಿಸಿದೆ.


ಪುಸ್ತಕ ಪ್ರಕಟನೆಯಲ್ಲದೆ, ಸದಭಿರುಚಿಯ ಸಾಹಿತ್ಯ ಪ್ರಸಾರವೂ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಮುಖ ಚಟುವಟಿಕೆ. ಈ ಉದ್ದೇಶಕ್ಕಾಗಿ ಬೆಂಗಳೂರಿನಲ್ಲಿ ೩ ಮಳಿಗೆಗಳಿವೆ. ರಾಜ್ಯದಾದ್ಯಂತ ಇರುವ ಪುಸ್ತಕ ಮಾರಾಟಗಾರರು, ಪರಿಚಾರಕರ ಮೂಲಕ ಓದುಗರನ್ನು ತಲಪಲಾಗುತ್ತಿದೆ. ಇದರ ಜೊತೆಗೆ, ೨೦೨೧ರಿಂದ ನಾವು ವಿಶೇಷವಾಗಿ ‘ಕನ್ನಡ ಪುಸ್ತಕ ಹಬ್ಬ’ ಹೆಸರಿನಲ್ಲಿ ಬೆಂಗಳೂರಿನಲ್ಲಿ, ‘ಕೇಶವಶಿಲ್ಪ’ ಸಭಾಂಗಣದಲ್ಲಿ ಕನಿಷ್ಟ ೧ ತಿಂಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸುತ್ತಿದ್ದೇವೆ. ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿಯೂ ಈ ಪುಸ್ತಕ ಹಬ್ಬಗಳನ್ನು ನಡೆಸುತ್ತಿದ್ದೇವೆ. ಈ ಹಬ್ಬಗಳಲ್ಲಿ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸಗಳು, ಪುಸ್ತಕಗಳ ಲೋಕಾರ್ಪಣೆ, ಸಾಹಿತಿಗಳೊಂದಿಗೆ ಸಂವಾದ, ಮೊದಲಾದ ಕಾರ್ಯಕ್ರಮಗಳೂ ನಡೆದಿವೆ.


ಈ ಬಾರಿ ‘ಕನ್ನಡ ಪುಸ್ತಕ ಹಬ್ಬ’ದ ನಾಲ್ಕನೆಯ ಆವೃತ್ತಿ ಅಕ್ಟೋಬರ್ 26 ರಿಂದ ಡಿಸೆಂಬರ್ 1ರ ವರೆಗೆ ಒಟ್ಟು 37 ದಿನಗಳ ಕಾಲ ‘ಕೇಶವಶಿಲ್ಪ’ ಸಭಾಂಗಣದಲ್ಲಿ ನಡೆಯಲಿದೆ. 26ರಂದು ಬೆಳಗ್ಗೆ 11 ಗಂಟೆಗೆ, ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಪುಸ್ತಕ ಹಬ್ಬವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ನಾಡೋಜ ಡಾ. ಚಂದ್ರಶೇಖರ ಕಂಬಾರರು ಮತ್ತು ನಾಡೋಜ ಡಾ. ಮಹೇಶ್ ಜೋಶಿ ಅವರು ಆಗಮಿಸುವರು. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಅಂದು, ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಷ್ಟ್ರೋತ್ಥಾನ ಪರಿಷತ್ತಿನ ವರೆಗೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.

ಪುಸ್ತಕ ಹಬ್ಬದ ವೈಶಿಷ್ಟ್ಯಗಳು
ಈ ಬಾರಿಯ 37 ದಿನಗಳ ಪುಸ್ತಕ ಹಬ್ಬದಲ್ಲಿ ಹಲವು ರೀತಿಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
• 37 ದಿನವೂ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 9:00ರ ವರೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ನಮ್ಮ ಪ್ರಕಟಣೆಗಳಲ್ಲದೆ, ಬೇರೆ ಬೇರೆ ಪ್ರಕಾಶಕರ ಪ್ರಮುಖ ಸಾಹಿತಿ-ಲೇಖಕರ ಪುಸ್ತಕಗಳೂ ಶೇ.10ರಿಂದ ಶೇ.50ರ ವರೆಗಿನ ರಿಯಾಯಿತಿಯಲ್ಲಿ ದೊರೆಯಲಿವೆ.
• ಪ್ರತಿದಿನ ಸಾಯಂಕಾಲ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ನೃತ್ಯ, ಜಾನಪದ, ಏಕವ್ಯಕ್ತಿ ತಾಳಮದ್ದಲೆ, ಯಕ್ಷಗಾನ, ಹಾಸ್ಯ, ಮ್ಯಾಜಿಕ್, ವಿವಿಧ ವಾದ್ಯಗೋಷ್ಠಿಗಳು, ಹರಿಕಥೆ, ಗಮಕ, ಬೊಂಬೆಯಾಟ, ಅಷ್ಟಾವಧಾನ, ತಾಳವಾದ್ಯ ಕಛೇರಿ — ಹೀಗೆ ನಾಡಿನ ನುರಿತ ಹೆಸರಾಂತ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
• ನವೆಂಬರ್ 16 ಮತ್ತು 23ರಂದು ‘ಪುಸ್ತಕ ಲೋಕಾರ್ಪಣೆ’ ಕಾರ್ಯಕ್ರಮಗಳನ್ನು ನಡೆಸಲಾಗುವುದು.
• ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚರ್ಚಾಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪರಿಚಯ ಮತ್ತು ಲೇಖನ ಸ್ಪರ್ಧೆಗಳನ್ನು ಯೋಜಿಸಲಾಗಿದೆ. ಈ ಸ್ಪರ್ಧೆಗಳ ಅಂತಿಮ ಹಂತ ನವೆಂಬರ್ 17ರಂದು ನಡೆಯಲಿದ್ದು, ಅಂದೇ ಬಹುಮಾನ ವಿತರಣೆ ಮಾಡಲಾಗುವುದು.
• ಸಾಮಾಜಿಕ ಜಾಲತಾಣಗಳಲ್ಲಿನ ಉತ್ಸಾಹಿಗಳಿಗಾಗಿ ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಸಂಬಂಧಿಸಿದಂತೆ ‘ವಿಡಿಯೊ ಮಾಡಿ! ಬಹುಮಾನ ಗೆಲ್ಲಿ!!’ — ಎಂಬ ವಿಶಿಷ್ಟ ಸ್ಪರ್ಧೆಯನ್ನು ಈಗಾಗಲೇ ಘೋಷಿಸಲಾಗಿದೆ.
• ಈ ಬಾರಿ ಕನ್ನಡ ಪುಸ್ತಕ ಹಬ್ಬದ ದಿನಗಳಲ್ಲೇ ದೀಪಾವಳಿ ಹಬ್ಬವೂ ಬರುವುದರಿಂದ ಬರುವ ಭಾನುವಾರ, ಅಕ್ಟೋಬರ್ 27ರಂದು ಮಕ್ಕಳಿಗಾಗಿ ಪರಿಸರಸ್ನೇಹಿ ಹಣತೆ ತಯಾರಿಸುವ ಕಾರ್ಯಾಗಾರ ನಡೆಯಲಿದೆ. ದೀಪಾವಳಿ ಹಬ್ಬದ ದಿನಗಳಲ್ಲಿ ಮಕ್ಕಳಿಗಾಗಿ ‘ಕೃಷ್ಣನ ಕಥೆ ಹೇಳುವ ಸ್ಪರ್ಧೆ’, ‘ಚಿತ್ರ ಬಿಡಿಸುವ ಸ್ಪರ್ಧೆ’, ‘ಮಂಕುತಿಮ್ಮನ ಕಗ್ಗ ಹೇಳುವ ಸ್ಪರ್ಧೆ’ ಹಾಗೂ ‘ಆಶುಭಾಷಣ ಸ್ಪರ್ಧೆ’ಗಳು ನಡೆಯಲಿವೆ. ಇವುಗಳಿಗೆ ಉಚಿತ ಪ್ರವೇಶ ಇರುತ್ತದೆ.
• ದೀಪಾವಳಿ ಹಬ್ಬದ ದಿನಗಳಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 3ರ ವರೆಗೆ ನಾಲ್ಕು ದಿನ ದೇಸೀ ಗೋ ತಳಿಗಳ ದರ್ಶನಕ್ಕೆ-ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. 9 ದೇಸೀ ತಳಿಗಳ ಹಸು ಮತ್ತು ಕರುಗಳನ್ನು ನೋಡಲು, ಆಯಾ ತಳಿಗಳ ವೈಶಿಷ್ಟ್ಯವನ್ನು ತಿಳಿದುಕೊಳ್ಳಲು ಮತ್ತು ಆಸಕ್ತ ಆಸ್ತಿಕರು ಗೋಪೂಜೆ ನಡೆಸಲು ಅವಕಾಶ ಇರುತ್ತದೆ.
• ಪುಸ್ತಕ ಹಬ್ಬದ 37 ದಿನಗಳೂ ಪ್ರತಿದಿನ ಸಾಯಂಕಾಲ 4ರಿಂದ 8 ಗಂಟೆಯವರೆಗೆ, ಉಚಿತ ಆಯುರ್ವೇದ ವೈದ್ಯಕೀಯ ಚಿಕಿತ್ಸಾಕೇಂದ್ರ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಈ ಅವಧಿಯಲ್ಲಿ ನುರಿತ ವೈದ್ಯರನ್ನು ಕಂಡು, ಉಚಿತವಾಗಿ ವೈದ್ಯಕೀಯ ಸಲಹೆ-ಮಾರ್ಗದರ್ಶನ ಪಡೆಯಬಹುದು.
• ಪುಸ್ತಕ ಹಬ್ಬಕ್ಕೆ ಭೇಟಿ ನೀಡುವವರಲ್ಲಿ ರಕ್ತದಾನವನ್ನು ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಒಂದು ಮಳಿಗೆ ಕಾರ್ಯನಿರ್ವಹಿಸಲಿದ್ದು, ಆಸಕ್ತರು ಸ್ಥಳದಲ್ಲೇ ರಕ್ತದಾನ ಮಾಡಲೂ ಅವಕಾಶ ಇರುತ್ತದೆ.
• ನಮ್ಮ ಮಹತ್ತ್ವದ ಯೋಜನೆಗಳಲ್ಲೊಂದಾದ ‘ಸಂವಿತ್’(ಸಿಬಿಎಸ್‌ಸಿ ಶಾಲೆಗಳ ಪಾಠ್ಯಪುಸ್ತಕ ರಚನಾ ಯೋಜನೆ)ನ ಪ್ರಕಟನೆಗಳನ್ನೂ ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು.
• ದೊಡ್ಡಬಳ್ಳಾಪುರಕ್ಕೆ ಸಮೀಪದಲ್ಲಿ ನಾವು ನಡೆಸುತ್ತಿರುವ ‘ಮಾಧವ ಸೃಷ್ಟಿ’ ಗೋಶಾಲೆ ಒಂದು ವಿನೂತನ ಉಪಕ್ರಮವಾಗಿದ್ದು, ಗೋಸಂವರ್ಧನೆ-ರಕ್ಷಣೆಯ ಜೊತೆಯಲ್ಲಿ ಅರಣ್ಯ ನಿರ್ಮಾಣ, ಸಾವಯವ ಕೃಷಿ, ಗೋ-ಉತ್ಪನ್ನಗಳ ತಯಾರಿಕೆ, ರೈತರಿಗೆ ಮಾರ್ಗದರ್ಶನ ಸೇರಿದಂತೆ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿಯ ಗೋಉತ್ಪನ್ನಗಳ ಮಾರಾಟಕ್ಕಾಗಿ ಪುಸ್ತಕ ಹಬ್ಬದಲ್ಲಿ ಒಂದು ಮಳಿಗೆಯನ್ನು ತೆರೆಯಲಾಗುವುದು. ಇಲ್ಲಿ ದೇಸೀ ಗೋತಳಿಗಳನ್ನು ಕುರಿತು ಪ್ರದರ್ಶಿನಿಯೂ ಇರಲಿದೆ.
ಹೀಗೆ ವೈವಿಧ್ಯಮಯ ಸಾಹಿತ್ಯಕ-ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ನಡೆಯಲಿರುವ ಈ ಬಾರಿಯ ಪುಸ್ತಕ ಹಬ್ಬದಲ್ಲಿ ನಮ್ಮ ಪ್ರಕಟನೆಗಳಲ್ಲದೆ, ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳೂ ಪ್ರದರ್ಶನಗೊಳ್ಳಲಿದ್ದು, ಶೇ.10ರಿಂದ ಶೇ. 50ರ ವರೆಗೂ ರಿಯಾಯಿತಿ ಇರಲಿದೆ. ನಾಡಿನ ಪ್ರಸಿದ್ಧ ಬರಹಗಾರರ ಪುಸ್ತಕಗಳೆಲ್ಲವೂ ಒಂದೇ ಕಡೆ ಓದುಗರಿಗೆ ಲಭ್ಯವಾಗಲಿವೆ. ಶಾಲಾ-ಕಾಲೇಜುಗಳು, ಗ್ರಂಥಾಲಯಗಳು ಕೂಡ ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬಹುದು.

Leave a Reply

Your email address will not be published.

This site uses Akismet to reduce spam. Learn how your comment data is processed.