ಖಿಲಾಫತ್ ಚಳುವಳಿಗೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ!?
ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ, ದೇಶದ ಸ್ವಾತಂತ್ರ್ಯ ಗಳಿಕೆಗಾಗಿ ಮಹಾತ್ಮಾ ಗಾಂಧೀಜಿಯವರು ಹೂಡಿದ ಹೋರಾಟಗಳಲ್ಲಿ 1919ರ ಖಿಲಾಫತ್ ಚಳುವಳಿ ಮತ್ತು 1920-21ರ ಅಸಹಕಾರ ಆಂದೋಳನವನ್ನು, ಬ್ರಿಟಿಷರ ವಿರುದ್ಧ ಹೂಡಿದ ಪ್ರಥಮ ಹೋರಾಟ ಎಂದು ತಿಳಿಸಲಾಗಿದೆ. ಪಟ್ಟಾಭಿ ಸೀತಾರಾಮಯ್ಯನವರು ಬರೆದಿರುವ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿಕೃತ ಇತಿಹಾಸದಲ್ಲೂ ಅಸಹಕಾರ ಆಂದೋಳನವನ್ನು ಸ್ವಾತಂತ್ರ್ಯಕ್ಕಾಗಿ ಹೂಡಿದ ಚಳುವಳಿ ಎಂದೇ ದಾಖಲಿಸಲಾಗಿದೆ. ಆದರೆ, ಖಿಲಾಫತ್ ಚಳುವಳಿ ಮತ್ತು ಅದರ ಬೆಂಬಲಕ್ಕಾಗಿ ನಡೆದ ಅಸಹಕಾರ ಆಂದೋಳನಕ್ಕೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಯಾವ ಸಂಬಂಧವೂ ಇರಲಿಲ್ಲವೆಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. ಸ್ವಾತಂತ್ರ್ಯ ಹೋರಾಟಕ್ಕಿರಲಿ, ಭಾರತಕ್ಕೆ ಯಾವ ರೀತಿಯಲ್ಲೂ ಸಂಬಂಧಿಸದ ಚಳುವಳಿಯಾಗಿತ್ತು ಖಿಲಾಫತ್. ಇಂತಹ ಚಳುವಳಿಗೆ ಗಾಂಧೀಜಿಯವರು ಬೆಂಬಲ ನೀಡಿದ್ದು ದೊಡ್ಡ ದುರಂತವೇ ಸೈ ಮತ್ತು ಅದನ್ನು ದೇಶದ ಸ್ವಾತಂತ್ರ್ಯ ಹೋರಾಟದ ಭಾಗವೆಂದು ಬಿಂಬಿಸಿದ್ದು ಸತ್ಯಕ್ಕೆ ಎಸಗಿದ ಘೋರ ಅಪಚಾರವಲ್ಲದೆ ಮತ್ತೇನೂ ಅಲ್ಲ! ಖಿಲಾಫತ್ ಚಳುವಳಿ ನಡೆದು ಇದೀಗ ಒಂದು ನೂರು ವರ್ಷಗಳು ಕಳೆದಿವೆ. ಇನ್ನಾದರೂ ಭ್ರಮೆಯ ಪರದೆಯನ್ನು ಕಿತ್ತೊಗೆಯುವ ಮತ್ತು ಸತ್ಯವನ್ನು ಒಪ್ಪಿಕೊಳ್ಳೋಣ.
ಖಿಲಾಫತ್ ಚಳುವಳಿ ನಡೆದದ್ದು ಟರ್ಕಿ ದೇಶದ ಖಲೀಫನನ್ನು ಮತ್ತೊಮ್ಮೆ ಆತನ ಸ್ಥಾನದಲ್ಲಿ ಪ್ರತಿಷ್ಠಾಪಿಸುವುದಕ್ಕಾಗಿ. ಅಲ್ಲಾಹುವಿನ ಪ್ರತಿನಿಧಿ ಎಂದೇ ಪರಿಗಣಿಸಲ್ಪಡುವ ಖಲೀಫನೇ ತುರ್ಕಿಯ ಸುಲ್ತಾನ, ಸಕಲ ಮುಸ್ಲಿಂ ಲೋಕದ ಮತೀಯಗುರು. ಜಗತ್ತಿನ ಎಲ್ಲ ಮುಸಲ್ಮಾನರೂ ತುರ್ಕಿಸ್ಥಾನದ ಖಲೀಫನನ್ನೇ ತಮ್ಮ ಸಾಮ್ರಾಟನೆಂದು ಒಪ್ಪಿಕೊಳ್ಳಬೇಕೆಂದು ವಿಧಿಸಲಾಗಿದ್ದರೂ, ಒಂದೇ ಕಾಲದಲ್ಲಿ ಅನೇಕ ಖಲೀಫರಿದ್ದದ್ದು ವಾಸ್ತವ. ಜಗತ್ತಿನ ಎಲ್ಲ ಮುಸಲ್ಮಾನರೂ ತುರ್ಕಿಸ್ಥಾನದ ಖಲೀಫನನ್ನೇ ತಮ್ಮ ಮುಖ್ಯಸ್ಥನೆಂದು ಒಪ್ಪಿಕೊಳ್ಳದಿದ್ದರೂ, ಭಾರತದ ಮುಸಲ್ಮಾನರು ಆತನನ್ನೇ ತಮ್ಮ ಮುಖ್ಯಸ್ಥನೆಂದು ಒಪ್ಪಿಕೊಂಡಿದ್ದರು. ಭಾರತೀಯ ಮುಸಲ್ಮಾನರು ಪಠಿಸುವ ಖುತ್ಬಾ (ಶುಕ್ರವಾರ ಮಧ್ಯಾಹ್ನದ ಸಮಯದಲ್ಲಿ ಮಾಡುವ ಪ್ರಾರ್ಥನೆ) ದಲ್ಲಿ, ಖಿಲಾಫತ್-ಅಲ್-ಇಸ್ಲಾಂ ಅಥವಾ ಖಲೀಫನಿಗೆ ಧೀರ್ಘಾಯುಷ್ಯ, ಸಂಪತ್ತು ಮತ್ತು ವಿಜಯಗಳನ್ನು ದಯಪಾಲಿಸುವಂತೆ ಪ್ರಾರ್ಥಿಸುತ್ತಾರೆ. ಭಾರತದಲ್ಲಿ ಶಿಯಾ ಮತ್ತು ಸುನ್ನಿ ಪಂಥದವರಿಬ್ಬರೂ ಒಟ್ಟೋಮನ್ ಸಾಮ್ರಾಜ್ಯದ ಖಿಲಾಫತ್ ಅನ್ನು ಸರ್ವಮಾನ್ಯವೆಂದು ಒಪ್ಪಿದ್ದರು.
ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ 1857ರಲ್ಲಿ ದೇಶಾದ್ಯಂತ ವಿಸ್ಫೋಟಗೊಂಡ ಹೋರಾಟದಲ್ಲೂ ಮುಸಲ್ಮಾನರು ಕೆಲಸ ಮಾಡಿದ್ದು ಜಿಹಾದಿ ಮಾನಸಿಕತೆಯ ಕಾರಣದಿಂದಾಗಿಯೇ ಎನ್ನುವುದನ್ನು ಅರಿಯುವ ಅಗತ್ಯವಿದೆ. ಇದರ ಕುರಿತಾಗಿ ಡಾ||ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ “ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ” ಪುಸ್ತಕದಲ್ಲಿ ಈ ರೀತಿ ಹೇಳುತ್ತಾರೆ: “1857ರ ಹೋರಾಟವನ್ನು ವಿಶ್ಲೇಷಿಸಿದರೆ ತಿಳಿದುಬರುವ ಸಂಗತಿಯೆಂದರೆ, ಅದು ಮುಸಲ್ಮಾನರು ಬ್ರಿಟಿಷರ ವಿರುದ್ಧ ಹೂಡಿದ್ದ ಜಿಹಾದ್. ಬ್ರಿಟಿಷರು ಆಳುತ್ತಿದ್ದ ಭಾರತವು ಮುಸಲ್ಮಾನರ ದೃಷ್ಟಿಯಲ್ಲಿ ದಾರ್-ಉಲ್-ಹರಬ್ ಆಗಿದ್ದಿತು. ಇದನ್ನು ದಾರ್-ಉಲ್-ಇಸ್ಲಾಂ ಮಾಡಲೆಂದೇ ಮುಸಲ್ಮಾನರು ಹೋರಾಟಕ್ಕೆ ಬೆಂಬಲ ನೀಡಿದ್ದರು. ಅವರ ಮಾನಸಿಕತೆಯನ್ನು ಅರ್ಥ ಮಾಡಿಕೊಳ್ಳಲು ತೀರಾ ಇತ್ತೀಚಿನ, ಅಂದರೆ 1919ರಲ್ಲಿ ಭಾರತದ ಮೇಲೆ ನಡೆದ ಆಫ್ಘಾನಿಸ್ತಾನದ ಆಕ್ರಮಣವನ್ನು ನೋಡಬಹುದು. ಬ್ರಿಟಿಷರನ್ನು ಧ್ವೇಷಿಸುತ್ತಿದ್ದ ಖಿಲಾಫತೀಯರು ಈ ಆಕ್ರಮಣದ ರೂವಾರಿಗಳಾಗಿದ್ದರು”.
ಇದನ್ನೆಲ್ಲ ಓದಿದ ನಂತರ ಅರ್ಥವಾಗುವ ಸಂಗತಿಯೆಂದರೆ, ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವೆಂದು ಪ್ರಚಾರಗೊಂಡಿರುವ ಖಿಲಾಫತ್ ಇಸ್ಲಾಮಿನ ಮತಕ್ಕೆ ಮಾತ್ರ ಸಂಬಂಧಿಸಿದ ಸಂಗತಿಯಾಗಿದ್ದಿತು ಮತ್ತು ಅದೇನೂ 1919ರಲ್ಲಿ ಇದ್ದಕ್ಕಿದ್ದಂತೆ ಪ್ರಾರಂಭವಾದದ್ದೇನಲ್ಲ. ದ್ವಿತೀಯ ಮಹಾಯುದ್ಧದ ಸಮಾಪ್ತಿಯ ನಂತರ ಇದು ಚಳುವಳಿಯ ರೂಪವನ್ನು ಪಡೆಯಿತು. 1914ರಲ್ಲಿ ತುರ್ಕಿಯು ಜರ್ಮನಿಯೊಡನೆ ಕೈಜೋಡಿಸಿತು. 1914 ರಿಂದ 1918ರವರೆಗೆ ನಡೆದ ದ್ವಿತೀಯ ಮಹಾಯುದ್ಧದಲ್ಲಿ ತುರ್ಕಿ ಮತ್ತು ಬ್ರಿಟನ್ ದೇಶಗಳೆರಡೂ ಪರಸ್ಪರ ವಿರೋಧಿ ಪಾಳಯಗಳಲ್ಲಿದ್ದವು. ಅಲ್ಲಿಯವರೆಗೂ ಬ್ರಿಟಿಷರನ್ನು ತಮ್ಮ ಹಿತಚಿಂತಕರೆಂದು ಕಾಣುತ್ತಿದ್ದ ಭಾರತೀಯ ಮುಸಲ್ಮಾನರು ಬ್ರಿಟಿಷರಿಂದ ದೂರ ಸರಿಯತೊಡಗಿದರು. ಮಹಾಯುದ್ಧದಲ್ಲಿ ಬ್ರಿಟನ್ ಗೆದ್ದಿತು; ಬ್ರಿಟಿಷರು ತುರುಕ್ಕರ ಒಟ್ಟೊಮಾನ್ ಸಾಮ್ರಾಜ್ಯವನ್ನು ಛಿದ್ರಗೊಳಿಸಿದರು. ಅಲ್ಲಿಯವರೆಗೂ ತುರ್ಕಿ ಸಾಮ್ರಾಜ್ಯದ ಭಾಗವಾಗಿದ್ದ ಅರೇಬಿಯಾಕ್ಕೆ ಪ್ರತ್ಯೇಕವಾದ ಸ್ವತಂತ್ರ ರಾಷ್ಟ್ರವಾಗಿ ಮಾನ್ಯತೆ ನೀಡಲಾಯಿತು. ಜೋರ್ಡಾನ್, ಸಿರಿಯಾ, ಇರಾಕ್, ಲೆಬನಾನ್ ಮತ್ತು ಪ್ಯಾಲೆಸ್ಟೈನ್ಗಳೂ ತುರ್ಕಿ ಸಾಮ್ರಾಜ್ಯದಿಂದ ಸಿಡಿದೆದ್ದು ಸ್ವತಂತ್ರ ರಾಷ್ಟ್ರಗಳಾದವು. 1299ರಲ್ಲಿ ಸ್ಥಾಪಿತಗೊಂಡ ಒಟ್ಟೋಮಾನ್ ಸಾಮ್ರಾಜ್ಯವು 1520-1566ರ ಅವಧಿಯಲ್ಲಿ ತನ್ನ ಅಸ್ತಿತ್ವದ ಶಿಖರವನ್ನೇರಿತು. ಆ ಸಮಯದಲ್ಲಿ ಮಧ್ಯಪ್ರಾಚ್ಯದ ಭಾಗಗಳಾದ ಅರೇಬಿಯಾ, ಸಿರಿಯಾ, ಲೆಬನಾನ್, ಪ್ಯಾಲೆಸ್ಟೈನ್, ಜೋರ್ಡಾನ್ ಹಾಗೂ ಈಜಿಪ್ಟ್, ಪೂರ್ವ ಯೂರೋಪಿನ ತುರ್ಕಿ, ಗ್ರೀಸ್, ಬಲ್ಗೇರಿಯಾ, ಹಂಗೇರಿ, ಮೆಸಿಡೋನಿಯಾ ಹಾಗೂ ರೊಮಾನಿಯಾ ಮತ್ತು ಉತ್ತರ ಆಫ್ರಿಕಾದ ಭಾಗಗಳನ್ನು ಒಳಗೊಂಡ ವಿಶಾಲ ಸಾಮ್ರಾಜ್ಯವಾಗಿದ್ದಿತು. 1600ರಲ್ಲಿ ಯೂರೋಪಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಮತ್ತು ನವೋದಯ ಯುಗದಿಂದ ಒಟ್ಟೋಮಾನ್ ಸಾಮ್ರಾಜ್ಯದ ಅವಸಾನ ಪ್ರಾರಂಭವಾಯಿತು. ಮುಂದಿನ ನೂರು ವರ್ಷಗಳಲ್ಲಿ ತನ್ನ ಪ್ರಮುಖ ಭಾಗಗಳಾದ ಗ್ರೀಸ್, ರೊಮಾನಿಯಾ, ಸರ್ಬಿಯಾ, ಬಲ್ಗೇರಿಯಾ, ಟ್ರಿಪೋಲಿಟಾನಿಯಾ ವಿಲಾಯತ್ ಮತ್ತು ಯೂರೋಪಿನ ದಕ್ಷಿಣ-ಪೂರ್ವದ ಭಾಗಗಳನ್ನೆಲ್ಲಾ ಕಳೆದುಕೊಂಡಿತು. 1914ರ ಪ್ರಥಮ ಮಹಾಯುದ್ಧದ ಸಮಯಕ್ಕೆ ಒಟ್ಟೋಮನ್ ಸಾಮ್ರಾಜ್ಯ ದುರವಸ್ಥೆಯ ಹಂತವನ್ನು ತಲುಪಿತ್ತು. ಆರ್ಥಿಕವಾಗಿಯೂ ಅದು ಕಂಗೆಟ್ಟಿತ್ತು. ಮಹಾಯುದ್ಧದಲ್ಲಿ ತನಗೆ ಸಹಾಯ ಮಾಡುವ ವಾಗ್ದಾನ ನೀಡಿದರೆ ಆರ್ಥಿಕ ಸಹಾಯ ನೀಡುವುದಾಗಿ ಜರ್ಮನಿ ತಿಳಿಸಿದ್ದರಿಂದ ತುರ್ಕಿ ಜರ್ಮನಿಯೊಡನೆ ಸೇರಿತು. ಆದರೆ, ಯುದ್ಧದಲ್ಲಿ ಜರ್ಮನಿ ಸೋತಿತು ಮತ್ತು ತುರ್ಕಿಯು ಮತ್ತಷ್ಟು ದುರ್ಬಲವಾಯಿತು ಮತ್ತು ಛಿದ್ರಗೊಂಡಿತು. ಅದೇ ಸಮಯಕ್ಕೆ ತುರ್ಕಿಯಲ್ಲಿ ಕ್ರಾಂತಿಕಾರಿ ರಾಷ್ಟ್ರನಾಯಕನೊಬ್ಬ ರೂಪುಗೊಂಡಿದ್ದ. ಆತನೇ ಅತಾತುರ್ಕ್ ಮುಸ್ತಾಫಾ ಕಮಾಲ್ ಪಾಷಾ. ಖಲೀಫನ ಭ್ರಷ್ಟ ಅರಸೊತ್ತಿಗೆಯನ್ನು ಮೂಲೆಗೊತ್ತುವ ಪಣತೊಟ್ಟಿದ್ದ ಆತನಿಗೆ ಬ್ರಿಟಿಷರು ಬೆಂಬಲ ನೀಡಿದರು. ತನ್ನನ್ನು ವಿರೋಧಿಸಿದ ಇಸ್ಲಾಮೀ ಮತಾಂಧರು ಮತ್ತು ಮುಲ್ಲಾಮೌಲವಿಗಳ ಪ್ರಬಲ ವಿರೋಧವನ್ನು ಕಮಾಲ್ ಪಾಷಾ ಉಕ್ಕಿನ ಹಸ್ತದಿಂದ ಹತ್ತಿಕ್ಕಿದ. ಈ ರೀತಿಯಲ್ಲಿ ತುರ್ಕಿಯ ಸಾಮ್ರಾಜ್ಯ ಛಿದ್ರಗೊಂಡದ್ದು ಮತ್ತು ಖಲೀಫನು ಮೂಲೆಗುಂಪಾದದ್ದು ಭಾರತೀಯ ಮುಸಲ್ಮಾನರ ಮನಸ್ಸಿಗೆ ಸಹಿಸಲಾಗದ ಪೆಟ್ಟಾಯಿತು. ಇದೆಲ್ಲಕ್ಕೂ ಕಾರಣರಾಗಿದ್ದ ಬ್ರಿಟಿಷರ ಮೇಲೆ ಇವರ ಕೋಪ ಉಕ್ಕಿ ಹರಿಯಿತು.
ತುರ್ಕಿಯು ಬಾಲ್ಕನ್ ಮತ್ತು ಟ್ರಿಪೋಲಿ ಯುದ್ಧಗಳಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಭಾರತೀಯ ಮುಸಲ್ಮಾನರು ಮೌಲಾನಾ ಮೊಹಮ್ಮದ್ ಆಲಿ ಅವರ ನೇತೃತ್ವದಲ್ಲಿ ತುರ್ಕಿಯ ಸಹಾಯಕ್ಕಾಗಿ ಹಣ ಸಂಗ್ರಹ ಮಾಡತೊಡಗಿದರು. 1911ರಿಂದಲೇ ಇವರ ಈ ಹಣಸಂಗ್ರಹದ ಕಾರ್ಯ ಆರಂಭವಾಯಿತು. ತುರ್ಕಿಗೆ ಧನ ಸಹಾಯದ ಜೊತೆಗೆ ವೈದ್ಯಕೀಯ ನೆರವನ್ನೂ ಕಳುಹಿಸಿಕೊಡಲಾಯಿತು. ಅದೇ ಸಮಯದಲ್ಲಿ ಜಗತ್ತಿನಲ್ಲೆಲ್ಲಾ ಪ್ಲೇಗ್ ಹರಡಿದ್ದು, ಭಾರತದಲ್ಲೂ ಸಹಸ್ರಾರು ಜನರು ಸಾವಿಗೀಡಾಗಿದ್ದರು. ಭಾರತದಲ್ಲಿ ತೊಂದರೆಗೊಳಗಾಗಿದ್ದವರಿಗೆ ಮೌಲಾನಾ ಮೊಹಮ್ಮದ್ ಆಲಿಯವರಿಂದ ಯಾವ ಸಹಾಯವೂ ದೊರಕಲಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ. ಇದರಿಂದ ಅರ್ಥವಾಗುವ ಸಂಗತಿಯೆಂದರೆ, ಭಾರತೀಯ ಮುಸಲ್ಮಾನರ ಹೃದಯವು ಯಾವುದಕ್ಕಾಗಿ ತುಡಿಯುತ್ತಿತ್ತು ಎನ್ನುವುದು. ಹೀಗಿರುವಾಗ, ಅವರು ಪ್ರಾರಂಭಿಸಿದ ಖಿಲಾಫತ್ ಚಳುವಳಿಯು ತುರ್ಕಿಯ ಖಲೀಫನ ಉಳಿವಿಗಾಗಿ ಅಲ್ಲದೆ, ಸ್ವಾತಂತ್ರ್ಯ ಹೋರಾಟಕ್ಕಾಗಿ ಆಗಿರಲು ಹೇಗೆ ತಾನೇ ಸಾಧ್ಯ!? 1919ರ ಮಾರ್ಚ್ 19ರಂದು ಬಾಂಬೆಯ ಕೆಲವು ಶ್ರೀಮಂತ ಮುಸಲ್ಮಾನರು ಬಾಂಬೆ ಖಿಲಾಫತ್ ಸಮಿತಿಯನ್ನು ಪ್ರಾರಂಭಿಸಿದರು. 1919 ರ ಸೆಪ್ಟೆಂಬರ್ನಲ್ಲಿ ಲಕ್ನೌ ನಗರದಲ್ಲಿ ಮುಸಲ್ಮಾನರ ಅಖಿಲ ಭಾರತ ಸಮ್ಮೇಳನ ನಡೆಯಿತು. ಇದರಲ್ಲಿ 1000 ಪ್ರಮುಖ ಮುಸಲ್ಮಾನ ನಾಯಕರು ಭಾಗವಹಿಸಿದ್ದರು. ಅಲ್ಲಿ ತೆಗೆದುಕೊಂಡ ಎರಡು ಪ್ರಮುಖ ನಿರ್ಣಯಗಳೆಂದರೆ, ಖಿಲಾಫತ್ನ ಕೇಂದ್ರೀಯ ಸಮಿತಿಯನ್ನು ರಚಿಸುವುದು ಮತ್ತು 1919ರ ಅಕ್ಟೋಬರ್ 17ನೇ ತಾರೀಖಿನಂದು “ಖಿಲಾಫತ್ ದಿನ”ವನ್ನು ದೇಶಾದ್ಯಂತ ಆಚರಿಸುವುದು. ಹೀಗೆ ಅಖಿಲ ಭಾರತ ಮಟ್ಟದಲ್ಲಿ ಸಮಿತಿಯು ರಚನೆಯಾಗಿ ದೇಶಾದ್ಯಂತ ಚಳುವಳಿ ಆರಂಭವಾಯಿತು. ಚಳುವಳಿಯ ಉದ್ದೇಶ ಸ್ಪಷ್ಟವಿತ್ತು – ತುರ್ಕಿಯಲ್ಲಿ ಖಲೀಫನನ್ನು ಮತ್ತೆ ಪ್ರತಿಷ್ಠಾಪಿಸುವುದಕ್ಕಾಗಿ ಬ್ರಿಟಿಷರ ಮೇಲೆ ಒತ್ತಡ ಹೇರುವುದು. 1920ರ ಫೆಬ್ರವರಿ 28-29ರಂದು ಕಲ್ಕತ್ತಾದಲ್ಲಿ ನಡೆದ ಖಿಲಾಫತ್ ಸಮ್ಮೇಳನದ ಅಧ್ಯಕ್ಷರಾಗಿದ್ದವರು, ಮುಂದೆ ಕಾಂಗ್ರೆಸ್ಸಿನ ಮುಸಲ್ಮಾನ ಮುಖವಾಗಿ ಪ್ರಖ್ಯಾತವಾದ ಮೌಲಾನಾ ಅಬುಲ್ ಕಲಂ ಅಜಾದ್ ಅವರು. ಮುಸಲ್ಮಾನರಲ್ಲದವರೊಡನೆ ವ್ಯವಹರಿಸುವುದು ಪಾಪ ಎಂಬುದಾಗಿ ಅವರು ಘೋಷಿಸಿದರು.
ಅದೇ ಸಮಯದಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದ್ದವರು ಮಹಾತ್ಮಾ ಗಾಂಧೀಜಿಯವರು. ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ್ದ ಹೋರಾಟಗಳಿಂದ ಅವರು ಪ್ರಸಿದ್ಧಿಗೆ ಬಂದಿದ್ದರು. ಅಲ್ಲಿಂದ ವಾಪಸ್ಸಾದ ನಂತರ ಭಾರತದಲ್ಲೂ ಅವರ ನಾಯಕತ್ವಕ್ಕೆ ಮಾನ್ಯತೆ ಸಿಕ್ಕಿತ್ತು. “ಬ್ರಿಟಿಷರನ್ನು ದೇಶದಿಂದ ಓಡಿಸಲು ಕೇವಲ ಹಿಂದುಗಳ ಕೈಯ್ಯಲ್ಲಿ ಸಾಧ್ಯವಿಲ್ಲ; ಮುಸಲ್ಮಾನರನ್ನೂ ಜೊತೆಗೆ ಸೇರಿಸಿಕೊಂಡರೆ ಮಾತ್ರ ಹೋರಾಟಕ್ಕೆ ಬಲ ಬರುತ್ತದೆ” ಎನ್ನುವುದು ಗಾಂಧೀಜಿಯವರ ಚಿಂತನೆಯಾಗಿತ್ತು. ಹೀಗಾಗಿ, ಅವರು “ಹಿಂದು-ಮುಸಲ್ಮಾನ ಏಕತೆ”ಯ ಮಂತ್ರವನ್ನು ಜಪಿಸತೊಡಗಿದರು. ಇದಕ್ಕಾಗಿ ಅವರು ಖಿಲಾಫತ್ ಚಳುವಳಿಗೆ ಬೆಂಬಲ ಘೋಷಿಸಿ, ತಾವೇ ಹೋರಾಟದ ನಾಯಕರಾಗಿ ನಿಂತರು. ಖಿಲಾಫತ್ ವಿಷಯದ ಮೇಲೆಯೇ ಕಾಂಗ್ರೆಸ್ ಅಸಹಕಾರ ಚಳುವಳಿ ಹೂಡುವುದೆಂಬ ನಿರ್ಣಯವನ್ನು ಸ್ವತಃ ಗಾಂಧೀಜಿಯವರೇ 1920ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಮಂಡಿಸಿದರು. ಸಮ್ಮೇಳನದ ವಿಷಯಸೂಚಿಯಲ್ಲಿ ಇದ್ದದ್ದು ಖಿಲಾಫತ್ ಬಗೆಗಿನ ಏಕೈಕ ವಿಷಯವಾದರೂ, ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ವಿಜಯರಾಘವಾಚಾರಿ ಮುಂತಾದವರ ಒತ್ತಾಯದ ಮೇರೆಗೆ ಸ್ವರಾಜ್ಯದ ಬೇಡಿಕೆ, ಕುಖ್ಯಾತ ರೌಲತ್ ಖಾಯ್ದೆಯ ಖಂಡನೆ ಮತ್ತು ಜಲಿಯನ್ವಾಲಾಬಾಗಿನ ಹತ್ಯಾಕಾಂಡದ ಖಂಡನೆಯ ನಿರ್ಣಯಗಳನ್ನೂ ಅದರ ಜೊತೆಗೆ ಸೇರಿಸಬೇಕಾಯಿತು. ಕಲ್ಕತ್ತಾ ಅಧಿವೇಶನಕ್ಕೆ ಮುಂಚಿತವಾಗಿಯೇ, ಖಿಲಾಫತ್ ಆಂದೋಳನದ ಮುಂದಾಳುತನವನ್ನು ಔಪಚಾರಿಕವಾಗಿ ಒಪ್ಪಿಕೊಳ್ಳುವ ಮುನ್ನವೇ, ಗಾಂಧೀಜಿಯವರು ಸ್ವತಂತ್ರವಾಗಿ ಖಿಲಾಫತ್ ನಿರ್ಣಯವನ್ನು ತೆಗೆದುಕೊಂಡಿದ್ದರು, ಎನ್ನುವ ಮಾತು ಇಲ್ಲಿ ಗಮನಾರ್ಹ. ಆದರೆ, ರಾಷ್ಟ್ರೀಯ ಹೋರಾಟದ ವೇದಿಕೆಯಾದ ಕಾಂಗ್ರೆಸ್ಸು, ಖಿಲಾಫತ್ನಂತಹ ಉನ್ಮತ್ತ ಮತೀಯ ವಿಚಾರಕ್ಕೆ ಸಂಬಂಧಿಸಿದ ವಿಷಯವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟಕ್ಕೆ ಧುಮುಕುವುದು ಅಪಾಯಕಾರಿ ಎನ್ನುವ ಭಿನ್ನ ಧ್ವನಿ ಕಾಂಗ್ರೆಸ್ಸಿನೊಳಗೆ ಇಲ್ಲದೆ ಇರಲಿಲ್ಲ. ಅಂತಹವರಲ್ಲಿ ಸ್ವತಃ ಕಾಂಗ್ರೆಸ್ ಅಧ್ಯಕ್ಷ ವಿಜಯರಾಘವಾಚಾರಿಯವರೂ ಒಬ್ಬರು. ಗಾಂಧೀಜಿಯವರ ಪ್ರಸ್ತಾಪವನ್ನು ಕಟುವಾಗಿ ವಿರೋಧಿಸಿದವರಲ್ಲಿ, ಚಿತ್ತರಂಜನ್ ದಾಸ್, ಬಿಪಿನ್ ಚಂದ್ರ ಪಾಲ್, ಆನಿಬೆಸೆಂಟ್, ಸಿ.ಎಫ್.ಆಂಡ್ರೂಸ್, ರವೀಂದ್ರನಾಥ ಟಾಗೂರ್, ಮಹಮ್ಮದ್ ಆಲಿ ಜಿನ್ನಾ, ಮತ್ತಿತರರು ಸೇರಿದ್ದರು. ಆದರೆ, ಗಾಂಧೀಜಿಯವರ ಪ್ರಸ್ತಾಪಕ್ಕೆ ಬಹುಮತ ಸಿಕ್ಕಿದ್ದರಿಂದ ಅದನ್ನು ನಿರ್ಣಯವನ್ನಾಗಿ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ, ತಮಗೆ ಬ್ರಿಟಿಷ್ ಸರ್ಕಾರ ನೀಡಿದ್ದ ಕೈಸರ್-ಎ-ಹಿಂದ್ ಪದಕವನ್ನೂ, ಜೂಲೂ, ಬೋಯರ್ ಯುದ್ಧ ಪದಕಗಳನ್ನೂ ಹಿಂತಿರುಗಿಸಿದ ಗಾಂಧೀಜಿ, “ಮುಸಲ್ಮಾನರ ಮತೀಯ ಭಾವನೆಗಳಿಗೆ ಪೆಟ್ಟು ಬಿದ್ದಿರುವಾಗ ಬೆಲೆ ಬಾಳುವ ಈ ಪದಕಗಳನ್ನು ಧರಿಸಲು ನನ್ನ ಆತ್ಮ ಸಮ್ಮತಿಸದು. ಖಿಲಾಫತ್ ಚಳುವಳಿಗೆ ಬೆಂಬಲವಾಗಿ ಇಂದು ಹೂಡಿರುವ ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಅವುಗಳನ್ನು ನಾನು ಹಿಂತಿರುಗಿಸಿರುವೆ” ಎಂದು ಘೋಷಿಸಿದರು. “ಖಿಲಾಫತ್ನ ಗೆಲುವಿಗಾಗಿ ಸ್ವರಾಜ್ಯದ ಪ್ರಶ್ನೆಯನ್ನು ಮುಂದೂಡಲೂ ನಾನು ಸಿದ್ಧ” ಎಂದೂ ಗಾಂಧೀಜಿಯವರು ಘೋಷಿಸಿದರು.
ವಿಶ್ವದೆಲ್ಲೆಡೆಯೂ ಖಿಲಾಫತ್ ಪ್ರತಿಕ್ರಿಯೆ ಮರಳಿನ ಗೋಪುರದಂತೆ ಕುಸಿದುಬಿದ್ದರೂ ಭಾರತದಲ್ಲಿ ಮಾತ್ರ ಖಿಲಾಫತ್ ನಾಯಕರ ಕೋಪತಾಪ ಆರಲಿಲ್ಲ. ಇಲ್ಲಿನ ಮತಾಂಧ ಮುಲ್ಲಾ ಮೌಲವಿಗಳು ಅಜ್ಞ ಮುಸಲ್ಮಾನರಿಗೆ ಭಾರತವು ದಾರ್-ಉಲ್-ಹರಬ್ ಎಂಬ ಪ್ರಚಾರ ಕೈಗೊಂಡು ಖುರಾನಿನ ಆಜ್ಞೆ ಪಾಲಿಸುವ ಮುಸಲ್ಮಾನರು ಅರೆಕ್ಷಣವೂ ಇಲ್ಲಿ ನಿಲ್ಲದೆ ಹಿಜರತ್ (ದಾರ್-ಉಲ್-ಇಸ್ಲಾಂ ರಾಜ್ಯಕ್ಕೆ ವಲಸೆ) ಕೈಗೊಳ್ಳಬೇಕೆಂದು ಕರೆ ನೀಡಿದರು. ಮಹಾತ್ಮಾ ಗಾಂಧಿಯವರ ಬಲಗೈ ಎನಿಸಿದ್ದ ಮಹಮದ್ ಆಲಿಯವರು ಭಾರತವನ್ನು ದಾರ್-ಉಲ್-ಹರಬ್ ಎಂದು ಘೋಷಿಸಿದವರಲ್ಲಿ ಸೇರಿದ್ದರೆ, ಮೌಲಾನಾ ಅಬ್ದುಲ್ ಬಾರಿ ಅವರಂತೂ ಹಿಜರತ್ ಕೈಗೊಳ್ಳಲು ಫತ್ವಾ (ಮತೀಯ ಆದೇಶ) ಹೊರಡಿಸಿದರು. ಇವರ ಮಾತುಗಳಿಗೆ ಓಗೊಟ್ಟು 20,000 ಬಡ, ಅಜ್ಞಾನಿ ಮುಸಲ್ಮಾನರು ತಮ್ಮ ಮನೆಮಠಗಳನ್ನು ತೊರೆದು ದಾರ್-ಉಲ್-ಇಸ್ಲಾಂ ಎಂದು ತಾವು ಕನಸುಕಂಡಿದ್ದ ಆಫ್ಘಾನಿಸ್ತಾನದತ್ತ ಯಾತ್ರೆ ಹೊರಟರು. ಆದರೆ, ಅವರಿಗೆ ‘ಹಿಜರತ್’ ಒಂದು ಘೋರ ದುಃಸ್ವಪ್ನವಾಗಿ ಪರಿಣಮಿಸಿತು. ಆಫ್ಘನ್ನರು ಅವರನ್ನು ತಮ್ಮ ದೇಶದ ಗಡಿಗಳಲ್ಲೇ ತಡೆದರು, ಅವರನ್ನು ಕೊಳ್ಳೆಹೊಡೆದು ಬೇಡವಾದ ಅತಿಥಿಗಳಾಗಿ ಹೊರದೂಡಿದರು. ಅವರಲ್ಲನೇಕ ಅಸಹಾಯಕರು ದಾರಿಯಲ್ಲೇ ಸತ್ತರೆ, ಆಶಾಭಂಗ ಹೊಂದಿ ದುಃಖ ನೋವುಗಳಿಗೆ ತುತ್ತಾಗಿ ದಾರ್-ಉಲ್-ಹರಬ್ ಭಾರತಕ್ಕೆ ಸುರಕ್ಷೆ-ಶಾಂತಿ ಬಯಸಿ ಮರಳಿ ಬಂದವರ ಪಾಡಂತೂ ಹೇಳತೀರದಾಯಿತು. ಅಷ್ಟು ಹಿತ್ತಿಗೆ, ಅವರ ಮನೆಮಠಗಳೆಲ್ಲಾ ಹರಾಜಾಗಿಬಿಟ್ಟಿದ್ದರು. ಕೈಯಲ್ಲಿ ಚಿಕ್ಕಾಸಿಲ್ಲದೆ ಘೋರ ಬಡತನದಲ್ಲಿ ನರಳುತ್ತಾ ಅವರು ಕಾಲತಳ್ಳಬೇಕಾಯಿತು.
ಮೇಲೆ ತಿಳಿಸಿರುವ ಸಂಗತಿಗಳಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ಖಿಲಾಫತ್ ಚಳುವಳಿಗೂ ಭಾರತಕ್ಕೂ ಯಾವ ಸಂಬಂಧವೂ ಇರಲಿಲ್ಲ ಮತ್ತು ಅಸಹಕಾರ ಆಂದೋಳನವನ್ನು ಹೂಡಿದ್ದು ಸಹ ಖಿಲಾಫತ್ ಚಳುವಳಿಯ ಬೆಂಬಲಕ್ಕಾಗಿಯೇ ಹೊರತು ಸ್ವಾತಂತ್ರ್ಯ ಗಳಿಕೆಗಾಗಿ ಅಲ್ಲ. ಸ್ವತಃ ಮಹಾತ್ಮಾ ಗಾಂಧೀಜಿಯವರ ಮಾತುಗಳೇ ಇದನ್ನು ಸ್ಪಷ್ಟ ಪಡಿಸುತ್ತವೆ. ಆದರೆ, ಇತಿಹಾಸವನ್ನು ತಿರುಚುವುದಕ್ಕೆ ಸ್ವಲ್ಪವೂ ಹಿಂದೆ ಮುಂದೆ ನೋಡದ ಕಾಂಗ್ರೆಸ್ ನಾಯಕರು, ಖಿಲಾಫತ್ ಚಳುವಳಿಗೆ ಸ್ವಾತಂತ್ರ್ಯ ಹೋರಾಟದ ಬಣ್ಣ ಬಳಿದಿರುವುದು ನಾಚಿಕೆಗೇಡಿನ ಸಂಗತಿ. ಈ ಲೇಖನದ ಉದ್ದೇಶ, ಸತ್ಯದ ಮೇಲೆ ಮುಸುಕು ಹಾಕಲಾಗಿರುವ ಪರದೆಯನ್ನು ಸರಿಸುವುದು. ಖಿಲಾಫತ್ ಚಳುವಳಿಗೆ ಸಂಬಂಧಿಸಿದ ಸತ್ಯ ಸಂಗತಿಯನ್ನು ಜನರು ಅರಿಯಲಿ. ಮತ್ತು ಸತ್ಯವನ್ನು ಮುಚ್ಚಿಟ್ಟವರ ಬಣ್ಣವೂ ಬಹಿರಂಗವಾಗಲಿ. ಮುಂದೆ ಹೋರಾಟ ಯಾವ ಸ್ವರೂಪವನ್ನು ತೆಗೆದುಕೊಂಡಿದು, ತುರ್ಕಿಗೆ ನಿಯೋಗ ತೆಗೆದುಕೊಂದು ಹೋದ ಭಾರತದ ಖಿಲಾಫತ್ ನಾಯಕರಿಗೆ ಯಾವ ರೀತಿ ಮುಖಭಂಗವಾಯಿತು, ಚಳುವಳಿಯು ವಿಫಲವಾಗಿ ಧಂಗೆಯ ರೂಪ ಧರಿಸಿ ಹಿಂದುಗಳ ಮೇಲೆ ತಿರುಗಿ ಸಹಸ್ರಾರು ಹಿಂದುಗಳ ನರಮೇಧ ಅತ್ಯಾಚಾರಗಳು ನಡೆದವು, ಮುಸಲ್ಮಾನರು ನಡೆಸಿದ ಧಂಗೆಯನ್ನು ಸ್ವತಃ ಮಹಾತ್ಮಾ ಗಾಂಧೀಜಿಯವರು ಯಾವ ರೀತಿ ಸಮರ್ಥಿಸಿಕೊಂಡರು, ಮುಂತಾದವೆಲ್ಲ ಚರಿತ್ರೆಯಲ್ಲಿ ದಾಖಲಾದ ವಿಷಾದದ ಸಂಗತಿಗಳಾಗಿವೆ. ಅವುಗಳನ್ನು ಈ ಲೇಖನದಲ್ಲಿ ವಿವರಿಸಲು ಪ್ರಯತ್ನಿಸುವುದಿಲ್ಲ.