ಇಂದು ಪುಣ್ಯಸ್ಮರಣೆ
ಎಪಿಜೆ ಅಬ್ದುಲ್‌ ಕಲಾಂ ಭಾರತದ ವಿಜ್ಞಾನಿ, ರಾಜಕಾರಣಿಯಾಗಿ ಪ್ರಸಿದ್ಧಿ ಪಡೆದವರು.ಇವರು ಭಾರತದ ಕ್ಷಿಪಣಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಲಾಂ ಅವರು ರಾಷ್ಟ್ರಪತಿಯಾಗಿ ನೀಡಿರುವ ಕೊಡುಗೆ ಅಪಾರ. ಭಾರತದ 11ನೇಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅಕ್ಟೋಬರ್ 15, 1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಇವರ ತಂದೆ ಜೈನುಲಾಬ್ದೀನ್, ತಾಯಿ ಆಶಿಯಮ್ಮ. ಅವರ ಕುಟುಂಬ ಬಡತನದಿಂದ ಕೂಡಿದ್ದರಿಂದ ಅಬ್ದುಲ್‌ ಕಲಾಂ ಅವರು ತಮ್ಮ ತಂದೆಗೆ ಆರ್ಥಿಕ ಸಹಾಯ ಮಾಡುವ ಸಲುವಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಪ್ರಾರಂಭಿಸಿದರು. ಅವರು ಶಾಲೆಯ ನಂತರ ತಮ್ಮ ಸಂಶುದ್ದೀನ್ ಕಲಾಂ ಜೊತೆಗೆ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು.

ಅಬ್ದುಲ್ ಕಲಾಂ ಅವರು ಆರಂಭಿಕ ಶಿಕ್ಷಣವನ್ನು ರಾಮನಾಥಪುರಂನ ಶ್ವಾರ್ಟ್ಜ್‌ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಮುಗಿಸಿದರು. ನಂತರ ತಿರುಚಿರಾಪಳ್ಳಿಯಲ್ಲಿ ಕಲಾಂ ಸೇಂಟ್‌ ಜೋಸೆಫ್ಸ್‌ ಕಾಲೇಜಿನಲ್ಲಿ ಓದಿದ್ದರು. 1954ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಅವರಿಗೆ ಗಣಿತ ವಿಷಯದಲ್ಲಿ ತುಂಬಾ ಆಸಕ್ತಿ ಇತ್ತು. ಹೀಗಾಗಿ ಅವರು ಗಣಿತವನ್ನೇ ಅತೀ ಹೆಚ್ಚು ಸಮಯ ಅಧ್ಯಯನ ಮಾಡುತ್ತಿದ್ದರು.


ವೃತ್ತಿ ಜೀವನ
1960ರಲ್ಲಿ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಿಂದ ಪದವಿ ಪಡೆದ ನಂತರ ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) ನ ವಾಯುಯಾನವಿಜ್ಞಾನ ಅಭಿವೃದ್ಧಿ ವಿಭಾಗದಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಭಾರತದ ಭೂ ಸೇನೆಗೆ ಸಣ್ಣ ಹೆಲಿಕಾಪ್ಟರ್ ಗಳನ್ನು ವಿನ್ಯಾಸ ಮಾಡುತ್ತಿದ್ದರು.  ನಂತರ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಅಡಿಯಲ್ಲಿದ್ದ ಇನ್ಕೋಸ್ಪಾರ್ ಸಮಿತಿ ಕೆಲಸಕ್ಕೆ ಸೇರಿಕೊಂಡರು. 1969ರಲ್ಲಿ ಕಲಾಂ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ವರ್ಗಾಯಿಸಲಾಯಿತು. ಅಲ್ಲಿ ಅವರು ರೋಹಿಣಿ ಉಪಗ್ರಹವನ್ನು 1980ರಲ್ಲಿ ಭೂಮಿಯ ಕಕ್ಷೆಯನ್ನು ಸೇರಿಸಿದರು. ನಂತರ ಅವರು ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನ (ಎಸ್.ಎಲ್.ವಿ-III)ರ ಯೋಜನಾ ನಿರ್ದೇಶಕರಾದರು. 1980ರಲ್ಲಿ ಕಲಾಂ ಅವರು ಪೋಲಾರ್ ಉಪಗ್ರಹ ವಾಹನ (ಪಿ.ಎಸ್.ಎಲ್.ವಿ) ಮತ್ತು ಎಸ್.ಎಲ್.ವಿ-‌III ಯೋಜನೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಿದರು. ಕಲಾಂ ಅವರು ಜುಲೈ 1992 ರಿಂದ ಡಿಸೆಂಬರ್ 1999ರವರೆಗೆ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಯಾಗಿ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಜುಲೈ25, 2002 ರಂದು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.


ಸಾಹಿತ್ಯ ಕೊಡುಗೆ
ಎಪಿಜಿ ಅಬ್ದುಲ್‌ ಕಲಾಂ ಅವರು ಸಾಹಿತ್ಯದ ಕಡೆ ಹೆಚ್ಚು ಒಲವು ತೋರಿದ್ದರು. ಇವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ‘ವಿಂಗ್ಸ್‌ ಆಫ್ ಫೈರ್’ ಎಂಬ ಆತ್ಮಕಥೆಯನ್ನು ಬರೆದಿದ್ದಾರೆ. ‘ಇಂಡಿಯಾ ಮೈ ಡ್ರೀಮ್’, ‘ಮೈ ಜರ್ನಿ’, ‘ಟಾರ್ಗೆಟ್ 3 ಬಿಲಿಯನ್’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.


ಪ್ರಶಸ್ತಿ
1981ರಲ್ಲಿ ಭಾರತ ಸರ್ಕಾರದಿಂದ ಕಲಾಂ ಅವರಿಗೆ ಪದ್ಮಭೂಷಣ ಹಾಗೂ 1990ರಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 1997ರಲ್ಲಿ ಕಲಾಂ ಅವರಿಗೆ ಭಾರತ ಸರ್ಕಾರದಿಂದ ಭಾರತರತ್ನ ಪ್ರಶಸ್ತಿ ನೀಡಲಾಯಿತು. 1998ರಲ್ಲಿ ಭಾರತ ಸರ್ಕಾರದಿಂದ ವೀರ್ ಸಾವರ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ. 2014ರಲ್ಲಿ ಎಡಿನ್‌ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಎಂಬ ಗೌರವ ಪ್ರಶಸ್ತಿ ನೀಡಲಾಗಿದೆ.

ಎಪಿಜೆ ಅಬ್ದುಲ್‌ ಕಲಾಂ ಅವರು ಜುಲೈ 27,‌ 2015 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.