
ಕುದ್ಮುಲ್ ರಂಗರಾವ್ ಅವರು ಶಿಕ್ಷಣ ಪ್ರೇಮಿ, ಸಮಾಜ ಸುಧಾರಕರಾಗಿ ಗುರುತಿಸಿಕೊಂಡವರು.ಅವರು ದಲಿತರ ಉದ್ಧಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರು. ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯ ವಿರುದ್ಧ ಹೋರಾಡಿದ ಮಹಾನ್ ನಾಯಕ. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಕುದ್ಮುಲ್ ರಂಗರಾವ್ ಅವರು ಜೂನ್ 29 , 1859 ರಲ್ಲಿ ದಕ್ಷಿಣ ಕನ್ನಡದ ಕಾಸರಗೋಡಿನ ಕುದ್ಮಲ್ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ದೇವಪ್ಪಯ್ಯ, ತಾಯಿ ಗೌರಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುದ್ಮಲ್ ನಲ್ಲಿ ಮುಗಿಸಿದರು. ವಿವಿಧ ಕೌಟುಂಬಿಕ ಕಷ್ಟಗಳ ನಡುವೆಯೂ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದ ಅವರು ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು.
ನಂತರ ಕುದ್ಮುಲ್ ರಂಗರಾವ್ ಅವರು ಸಮಾಜದಲ್ಲಿ ಅಸಮಾನತೆಯನ್ನು ಕಂಡು ಸಮಾಜದ ಸುಧಾರಣೆಗಾಗಿ ತಮ್ಮ ಶಿಕ್ಷಕ ವೃತ್ತಿ ಬಿಟ್ಟು ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ಸತ್ಯ, ನ್ಯಾಯಕ್ಕಾಗಿ ದುಡಿದು, ದೀನ ದಲಿತರ ವಕಾಲತ್ತುಗಳನ್ನು ತಾವೇ ವಹಿಸುವ ಮೂಲಕ ಬಡವರ ಬಂಧುವಾಗಿ ‘ಬಡವರ ವಕೀಲರು’ ಎಂದೇ ಹೆಸರುವಾಸಿಯಾಗಿದ್ದರು.
19 ನೇ ಶತಮಾನದಲ್ಲಿ ದಲಿತರಿಗೆಂದು ಯಾವುದೇ ಶಾಲೆ, ಸಂಸ್ಥೆಗಳು ಇರಲಿಲ್ಲ. ಹೀಗಾಗಿ ಅವರು ನಂದಿಗುಡ್ಡೆ ಬಳಿ ಶೋಷಿತ ಸಮಾಜದ ಮಕ್ಕಳಿಗಾಗಿ ಒಂದು ಶಾಲೆಯನ್ನು ತೆರೆದರು. ನಂತರ 1892 ರಲ್ಲಿ ದಲಿತರ ವಿದ್ಯಾಭ್ಯಾಸಕ್ಕಾಗಿ ಸ್ವಂತ ಹಣದಿಂದಲೇ ಚಿಲಿಂಬಿಯಲ್ಲಿ ಮನೆಯೊಂದು ಬಾಡಿಗೆ ಪಡೆದು ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿದರು. ಶೋಷಿತ ಸಮುದಾಯದ ಸರ್ವೋನ್ನತಿಗಾಗಿ 1897ರಲ್ಲಿ ಡಿಪ್ರೆಸ್ಡ್ ಕ್ಲಾಸ್ ಮಿಶನ್ ಅನ್ನು ಪ್ರಾರಂಭಿಸಿದರು.
ದಲಿತರು ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ನಿಟ್ಟಿನಲ್ಲಿ ಶೇಡಿಗುಡ್ಡೆಯ ಕಟ್ಟಡದಲ್ಲಿ ದಲಿತರಿಗಾಗಿ ಕೈಗಾರಿಕಾ ತರಬೇತಿಯನ್ನು ಆರಂಭಿಸಿದರು. ಅಷ್ಟೇ ಅಲ್ಲದೆ ದೂರದಿಂದ ಬರುವ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿನಿಲಯವನ್ನು ಶೇಡಿಗುಡ್ಡೆಯಲ್ಲಿ ಸ್ಥಾಪಿಸಿದರು. ನಂತರ ಅವರು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶಿಕ್ಷಕ ತರಬೇತಿ ನೀಡಿ ಅಧ್ಯಾಪಕರನ್ನು ನೇಮಕ ಮಾಡಿಕೊಂಡು ಅನೇಕರಿಗೆ ದಾರಿ ದೀಪವಾದರು.
ಕುದ್ಮುಲ್ ರಂಗರಾಯರ ಪ್ರಖ್ಯಾತ ಹೇಳಿಕೆ
“ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ”

ಕುದ್ಮುಲ್ ರಂಗರಾವ್ ಅವರು ಜನವರಿ 30, 1928 ರಲ್ಲಿ ತಮ್ಮ 68ನೇ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನಿಧನರಾದರು.