ಇಂದು ಪುಣ್ಯಸ್ಮರಣೆ
ಮಹಾತ್ಮ ಗಾಂಧಿ ಎಂದೇ ಜನಮನ್ನಣೆ ಪಡೆದ ಮೋಹನ್ ದಾಸ್ ಕರಮಚಂದ ಗಾಂಧಿ ಅವರು ಭಾರತದ ಸ್ವಾತಂತ್ರ್ಯ ಚಳವಳಿಯ ಅಗ್ರಣಿ. ತಮ್ಮ ಸರಳ ವ್ಯಕ್ತಿತ್ವ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ಸಾಮಾನ್ಯ ಜನರನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದ್ದಲ್ಲದೇ ಬಹುದೊಡ್ಡ ಜನಾಂದೋಲನವನ್ನು ಮುನ್ನಡೆಸಿದವರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಮಹಾತ್ಮ ಗಾಂಧಿ ಅವರು ಅಕ್ಟೋಬರ್ 2, 1869 ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಜನಿಸಿದರು. ಅವರ ತಂದೆ ಕರಮಚಂದ ಗಾಂಧಿ, ತಾಯಿ ಪುತ್ಲಿಬಾಯಿ. ಇವರ ತಾಯಿ ಗಾಂಧೀಜಿಯವರ ವ್ಯಕ್ತಿತ್ವದ ಮೇಲೆ ಹೆಚ್ಚಿನ ಪ್ರಭಾವ ಬೀರಿದರು. 1887ರಲ್ಲಿ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ 1888ರಲ್ಲಿ ಅವರು ಭಾವನಗರದ ಸಮಲ್ದಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು.
1894 ರಲ್ಲಿ ಗಾಂಧೀಜಿ ಕಾನೂನು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾಕ್ಕೆ ಹೋದರು. ಅಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿ ಯಶಸ್ವಿಯಾದರು. ನಂತರ ಗಾಂಧಿ ಅವರು ಜನವರಿ 9, 1915ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದರು.
ಸ್ವಾತಂತ್ರ್ಯ ಚಳವಳಿ
ಭಾರತಕ್ಕೆ ಬಂದ ನಂತರ ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. 1918 ರಲ್ಲಿ ಅವರು ಬಿಹಾರ ಮತ್ತು ಗುಜರಾತ್ ನ ಚಂಪಾರಣ್ಯ ಮತ್ತು ಖೇಡಾ ಆಂದೋಲನಗಳನ್ನು ಮುನ್ನಡೆಸಿದರು. 1920 ರಲ್ಲಿ ಕಾಂಗ್ರೆಸ್ ನಾಯಕ ಬಾಲಗಂಗಾಧರ ತಿಲಕ್ ಅವರ ಮರಣದ ನಂತರ, ಗಾಂಧೀಜಿ ಕಾಂಗ್ರೆಸ್ಸಿನ ಮಾರ್ಗದರ್ಶಕರಾಗಿದ್ದರು. ನಂತರದ ದಿನಗಳಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ, ಕಾನೂನು ಭಂಗ ಚಳುವಳಿ, ಸ್ವದೇಶಿ ಆಂದೋಲನ, ದಂಡಿ ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಯ ನೇತೃತ್ವ ವಹಿಸಿದ್ದರು.
ಸಾಮಾಜಿಕ ಕೊಡುಗೆ
ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ಮಾರ್ಗದಲ್ಲಿ ಜನರನ್ನು ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಗಾಂಧೀಜಿಯವರು ಪೂರ್ಣ ಸ್ವರಾಜ್ಯದ ಸ್ಥಾಪನೆಗೆ ರಾಜಕೀಯ ಸ್ವಾತಂತ್ರ್ಯ ಮೊದಲ ಮೆಟ್ಟಲೆಂದು ಮಾತ್ರ ಭಾವಿಸಿದ್ದರು. ಅವರು ಪರಿಪೂರ್ಣವಾದ ಪ್ರಜಾರಾಜ್ಯದಲ್ಲಿ ಸತ್ಯ, ಅಹಿಂಸೆ, ಸ್ವಾತಂತ್ರ್ಯ, ಸಮಾನತೆ ಮೌಲ್ಯಗಳ ಸಾಕ್ಷಾತ್ಕಾರವೇ ಪ್ರಜೆಗಳ ಗುರಿಯಾಗಿರುತ್ತದೆ. ಈ ಮೌಲ್ಯಗಳ ಅನುಷ್ಠಾನ ಹೆಚ್ಚಾದಂತೆ ವ್ಯಕ್ತಿತ್ವದ ವಿಕಾಸ, ಗ್ರಾಮೋದ್ಧಾರ ಸಾಧ್ಯ ಎಂದು ನಂಬಿದ್ದರು. ಅಂಥ ಪ್ರಜಾರಾಜ್ಯ ಶೋಷಣೆರಹಿತ ವರ್ಗರಹಿತ ರಾಜ್ಯವಾಗಿರುತ್ತದೆ. ಪೂರ್ಣ ಸ್ವರಾಜ್ಯ ಏರ್ಪಟ್ಟಾಗ ಯಾವುದೇ ರೀತಿಯ ಸರ್ಕಾರಿ ಅಂಕುಶವಿರುವುದಿಲ್ಲ. ಈ ವ್ಯವಸ್ಥೆಯಲ್ಲಿ ಜನೆತೆಗೆ ಸಾಮಾಜಿಕ ನ್ಯಾಯ, ಆರ್ಥಿಕ ನೆಮ್ಮದಿ ಹಾಗೂ ವ್ಯಕ್ತಿಸ್ವಾತಂತ್ರ್ಯ ಇರುತ್ತವೆ. ಇಂಥ ಪ್ರಜಾರಾಜ್ಯವನ್ನು ಗಾಂಧಿಯವರು ರಾಮರಾಜ್ಯವೆಂದು ಕರೆದರು.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರೂಢವಾಗಿರುವ ಪ್ರಭುತ್ವಗಳೆಲ್ಲವೂ ಸಾಮ್ರಾಜ್ಯವಾದ, ಹಿಂಸೆ, ಶೋಷಣೆ ಇವುಗಳ ಮೇಲೆ ನಿಂತಿರುವಂಥವು. ಆದ್ದರಿಂದ ಸ್ವತಂತ್ರ ಭಾರತಕ್ಕೆ ಅವುಗಳು ಅನಗತ್ಯ ಎಂಬುದು ಗಾಂಧಿಯವರ ಮತ. ಸ್ವಾವಲಂಬಿ ಗ್ರಾಮಗಳಾಧಾರಿತ ರಾಷ್ಟ್ರ ನಿರ್ಮಾಣದ ಕನಸು ಅವರದ್ದಾಗಿತ್ತು.
ಸಮಾಜದಲ್ಲಿ ಹರಡಿರುವ ಅಸ್ಪೃಶ್ಯತೆಯ ಭಾವನೆಯನ್ನು ಹೋಗಲಾಡಿಸಲು ಗಾಂಧೀಜಿ ಸಾಕಷ್ಟು ಪ್ರಯತ್ನಿಸಿದರು. ದೇವರ ಹೆಸರಿನಲ್ಲಿ ಹಿಂದುಳಿದ ಜಾತಿಗಳಿಗೆ ‘ಹರಿ-ಜನ’ ಎಂದು ಹೆಸರಿಟ್ಟು ಬದುಕಿನ ಕೊನೆಯವರೆಗೂ ಅವರ ಅಭ್ಯುದಯಕ್ಕೆ ಶ್ರಮಿಸಿದರು.
ಮಹಾತ್ಮ ಗಾಂಧೀಜಿ ಅವರು ಜನವರಿ 30, 1948 ರಂದು ನಾಥುರಾಮ್ ಗೋಡ್ಸೆಯ ಗುಂಡೇಟಿಗೆ ನಿಧನರಾದರು. ಮಹಾತ್ಮ ಗಾಂಧಿ ಅವರು ಭಾರತಕ್ಕೆ ಮರಳಿದ ದಿನವಾದ ಜನವರಿ 9 ನ್ನು ಪ್ರವಾಸಿ ಭಾರತೀಯ ದಿನ ಎಂದೂ, ಅವರು ನಿಧನರಾದ ದಿನವನ್ನು ಹುತಾತ್ಮ ದಿನವೆಂದೂ ಭಾರತದಲ್ಲಿ ಆಚರಿಸಲಾಗುತ್ತದೆ. ಅವರ ಜನ್ಮದಿನವನ್ನು ಅಂತರಾಷ್ಟ್ರೀಯ ಶಾಂತಿಯ ದಿನ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.