ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಒಂದು ವಿಶಿಷ್ಟ ಅಧ್ಯಾಯ. ಕ್ವಿಟ್ ಇಂಡಿಯಾ ಚಳುವಳಿ ಎಂದೂ ಕರೆಯಲ್ಪಡುವ ಈ ಹೋರಾಟದಲ್ಲಿ ಭಾರತೀಯರು ಬ್ರಿಟಿಷರನ್ನು ಭಾರತದಿಂದ ತೊಲಗಿಸಲೇಬೇಕೆಂದು ಪಣತೊಟ್ಟು ನಡೆಸಿದಂತಹ ಚಳವಳಿ. ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬಾಂಬೆ ಅಧಿವೇಶನದಲ್ಲಿ ಭಾರತ್ ಛೋಡೋ ಆಂದೋಲನ್ ಅಥವಾ ಕ್ವಿಟ್ ಇಂಡಿಯಾ ಚಳುವಳಿಯನ್ನು ಆಗಸ್ಟ್ 8, 1942ರಂದು ಪ್ರಾರಂಭಿಸಿದರು. ಇದರ ಸ್ಮರಣಾರ್ಥವಾಗಿ ಆಗಸ್ಟ್ 8 ರಂದು ಕ್ವಿಟ್ ಇಂಡಿಯಾ ಚಳವಳಿ ದಿನವನ್ನಾಗಿ ಆಚರಿಸಲಾಗುತ್ತಿದೆ.
ದಶಕಗಳ ಕಾಲ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಅಸಂಖ್ಯಾತ ಭಾರತೀಯರು, ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ ಮತ್ತು ಪ್ರಯತ್ನಗಳನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಇತಿಹಾಸ
ಆಗಸ್ಟ್ 8, 1942 ರಂದು, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಬಾಂಬೆಯಲ್ಲಿ ನಡೆದ ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ನಿರ್ಣಯವನ್ನು ಅಂಗೀಕರಿಸಿತು. ಮರುದಿನ ಅಂದರೆ ಆಗಸ್ಟ್ 9, ಕ್ವಿಟ್ ಇಂಡಿಯಾ ಚಳವಳಿಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಮಹಾತ್ಮ ಗಾಂಧಿಯವರು ಭಾರತೀಯರಿಗೆ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಒಗ್ಗೂಡಲು “ಮಾಡು ಇಲ್ಲವೇ ಮಡಿ” ಎಂಬ ಅಪ್ರತಿಮ ಕರೆಯನ್ನು ನೀಡಿದರು.
ಕ್ವಿಟ್ ಇಂಡಿಯಾ ಚಳವಳಿಯು ಬ್ರಿಟಿಷ್ ಆಡಳಿತದ ವಿರುದ್ಧ ಸಾಮೂಹಿಕ ಪ್ರತಿಭಟನೆಯಾಗಿದ್ದು, ಅಹಿಂಸಾತ್ಮಕ ಅಸಹಕಾರ ಮತ್ತು ನಾಗರಿಕ ಅಸಹಕಾರವನ್ನು ಗುರಿಯಾಗಿಸಿಕೊಂಡಿತ್ತು. ಈ ಚಳವಳಿಯಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸಮಾಜದ ವಿವಿಧ ವರ್ಗಗಳು ಸೇರಿದಂತೆ ಭಾರತದಾದ್ಯಂತ ಜನರು ವ್ಯಾಪಕವಾಗಿ ಭಾಗವಹಿಸಿದ್ದರು. ಇದು ದೊಡ್ಡ ಪ್ರಮಾಣದ ಮುಷ್ಕರಗಳು ಮತ್ತು ನಾಗರಿಕ ಅಸಹಕಾರದ ಕೃತ್ಯಗಳಿಗೆ ಕಾರಣವಾಯಿತು. ಇದರ ಪರಿಣಾಮವಾಗಿ ಬ್ರಿಟಿಷ್ ಆಡಳಿತ ಮತ್ತು ಆರ್ಥಿಕತೆಗೆ ಗಮನಾರ್ಹ ಅಡಚಣೆ ಉಂಟಾಗಿತ್ತು. ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ಅಧಿಕಾರಿಗಳು ಮಹಾತ್ಮಾ ಗಾಂಧಿ ಸೇರಿದಂತೆ ಹಲವಾರು ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿದರು. ಈ ಚಳವಳಿಯ ತೀವ್ರತೆ ಹಿಂಸೆಯ ರೂಪುಪಡೆದು ಬ್ರಿಟಿಷರ ದಬ್ಬಾಳಿಕೆಯನ್ನು ಎದುರಿಸಿತು. ಅದಾಗ್ಯೂ ಈ ಚಳುವಳಿ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ಭಾರತೀಯ ಜನರ ಏಕತೆ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿತು.
ಕ್ವಿಟ್ ಇಂಡಿಯಾ ಚಳವಳಿಯು ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸುವ ಉದ್ದೇಶಕ್ಕಾಗಿ ಅಂತರಾಷ್ಟ್ರೀಯ ಬೆಂಬಲವನ್ನು ಗಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿತು. ಇದ್ದರಿಂದಾಗಿ ವಸಾಹತುಶಾಹಿಯ ವಿರುದ್ಧದ ಭಾರತದ ಹೋರಾಟದಲ್ಲಿ ಒಂದು ಮಹತ್ತರವಾದ ತಿರುವು ಪಡೆದುಕೊಂಡಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಆಡಳಿತ ವಿರುದ್ಧ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಈ ವೇಳೆ ಬ್ರಿಟಿಷರು ಸಾವಿರಾರು ನಾಯಕರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು. ನಂತರ 1945ರಲ್ಲಿ ಜೈಲಿನಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಬಿಡುಗಡೆ ಮಾಡಿದ ನಂತರ ಚಳುವಳಿ ಕೊನೆಗೊಂಡಿತು. ಈ ಚಳವಳಿಯಲ್ಲಿ ಸುಮಾರು 1,000 ಜನರು ಹುತಾತ್ಮರಾದರು.
1992ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ವಿಟ್ ಇಂಡಿಯಾ ಚಳವಳಿಯ 50ನೇ ವಾರ್ಷಿಕೋತ್ಸವವನ್ನು ಆಚರಿಸಲು ವಿಶೇಷ 1 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿತು. ಆಗಸ್ಟ್ 9, 1942ರಂದು ಬಾಂಬೆಯ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಮಹಾತ್ಮ ಗಾಂಧಿಯವರು ಪ್ರಾರಂಭಿಸಿದ ಕ್ವಿಟ್ ಇಂಡಿಯಾ ಚಳುವಳಿಯು ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಮಹತ್ವದ ಪಾತ್ರವನ್ನು ಪಡೆಯಿತು.
ಮಹತ್ವ
ಕ್ವಿಟ್ ಇಂಡಿಯಾ ಚಳವಳಿಯ ದಿನವು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ದಿನಗಳಲ್ಲೊಂದು. ಇದು ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ನ್ಯಾಯದ ಆದರ್ಶಗಳಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನವಾಗಿದೆ. ಭಾರತೀಯರ ಏಕತೆ ಮತ್ತು ಶಕ್ತಿಯನ್ನು ಆಚರಿಸುವ ದಿನ. ಭಾರತೀಯ ಪರಂಪರೆ ಮತ್ತು ಮೌಲ್ಯಗಳನ್ನು ಉತ್ತೇಜಿಸುವ ಸಲುವಾಗಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಮೈಲಿಗಲ್ಲುಗಳನ್ನು ಸ್ಮರಿಸುವ ಕರ್ತವ್ಯ ನಮ್ಮದು.