ಬಾಲಿವುಡ್ ಶೋ ಮ್ಯಾನ್ ಎಂದೇ ಖ್ಯಾತಿಯಾಗಿರುವ ರಾಜ್ ಕಪೂರ್ ಅವರು ಭಾರತೀಯ ಚಲನಚಿತ್ರದ ನಟ, ನಿರ್ಮಾಪಕ, ನಿರ್ದೇಶಕರಾಗಿ ಪ್ರಸಿದ್ಧಿ ಪಡೆದವರು. ಅವರು ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಬಹುಮುಖ ಪ್ರತಿಭೆಯ ಕಲಾವಿದರಾದ ಅವರು ಅಭಿನಯಿಸಿದ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ರಾಜ್ ಕಪೂರ್ ಅವರು ಡಿಸೆಂಬರ್ 14, 1924 ರಂದು ಪೇಶಾವರದಲ್ಲಿ ಜನಿಸಿದರು. ಇವರ ತಂದೆ ಪೃಥ್ವಿರಾಜ್ ಕಪೂರ್ ಹಾಗೂ ತಾಯಿ ದೇವಿ ಕಪೂರ್. ರಾಜ್ ಕಪೂರ್ ಡೆಹ್ರಾಡೂನ್ನ ಕರ್ನಲ್ ಬ್ರೌನ್ ಕೇಂಬ್ರಿಡ್ಜ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮುಗಿಸಿದರು. ನಂತರ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಕೊಲ್ಕತ್ತಾದ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು. ರಾಜ್ ಕಪೂರ್ ಅವರು ಫಿಲ್ಮ್ ಸ್ಟುಡಿಯೋದಲ್ಲಿ ಕಿದರ್ ಶರ್ಮಾ ಅವರಿಗೆ ಸಹಾಯ ಮಾಡುವ ಕ್ಲಾಪರ್ ಬಾಯ್ ಆಗಿ ವೃತ್ತಿ ಜೀವನವನ್ನು ಶುರು ಮಾಡಿದರು. 1935ರಲ್ಲಿ ಕಪೂರ್ ಅವರು ತಮ್ಮ 11ನೇ ವಯಸ್ಸಿನಲ್ಲಿ ಇಂಕ್ವಿಲಾಬ್ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದರು. ನಂತರ ಅವರು 12ನೇ ವಯಸ್ಸಿನಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, 1947 ರಲ್ಲಿ ನೀಲ್ ಕಮಾಲ್ ಚಿತ್ರದಲ್ಲಿ ಮಧುಬಾಲಾ ಅವರೊಂದಿಗೆ ನಾಯಕ ನಟನಾಗಿ ಮೊದಲ ಚಿತ್ರದಲ್ಲಿ ಅಭಿನಯಿಸಿದರು. ಈ ಸಿನಿಮಾ ಅವರಿಗೆ ಭಾರೀ ಯಶಸ್ಸು ತಂದುಕೊಟ್ಟಿತ್ತು. ನಂತರ ಅವರು 1948ರಲ್ಲಿ ತಮ್ಮದೇ ಆದ ಸ್ಟುಡಿಯೋ ಆರ್ ಕೆ ಫಿಲ್ಮ್ಸಂ ಅನ್ನು ಸ್ಥಾಪಿಸಿದರು. ತದನಂತರ ರಾಜ್ ಕಪೂರ್ ಅವರು ಅತ್ಯಂತ ಕಿರಿಯ ನಿರ್ದೇಶಕರಾಗಿ ಹೊರಹೊಮ್ಮಿದರು.
ಅವರು ಸ್ವಂತ ನಿರ್ಮಾಣ, ನಿರ್ದೇಶನ, ನಟನಾಗಿ ʼಆಗ್ʼ ಎಂಬ ಮೊದಲ ಸಿನಿಮಾದಲ್ಲಿ ನಟಿ ನರ್ಗೀಸ್ ಜೊತೆ ಬಣ್ಣ ಹಚ್ಚಿದರು. ಆ ಚಿತ್ರದಲ್ಲಿ ಮೊದಲ ಬಾರಿ ನಿರ್ದೇಶನ ಮಾಡಿದರೂ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸುದ್ದಿ ಮಾಡಿತ್ತು.
1949ರಲ್ಲಿ ಬರ್ಸಾತ್, 1955ರಲ್ಲಿ ಶ್ರೀ 420, 1956ರಲ್ಲಿ ಚೋರಿ ಚೋರಿ, 1960ರಲ್ಲಿ ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ ಇತ್ಯಾದಿ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿ, ನಟನೆ ಈ ಮೂರು ಜವಾಬ್ದಾರಿಗಳ ನಿಭಾಯಿಸಿಕೊಂಡು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆಯನ್ನೂ ಕಾಣುವಂತೆ ಮಾಡಿದರು. 1964ರಲ್ಲಿ ಅವರು ಸಂಗಮದಲ್ಲಿ ನಿರ್ಮಿಸಿ, ನಿರ್ದೇಶಿಸಿದರು ಮತ್ತು ನಟಿಸಿದರು. 1970ರಲ್ಲಿ ಮೇರಾ ನಾಮ್ ಜೋಕರ್ ಸಿನಿಮಾವನ್ನು ನಿರ್ದೇಶಿಸಿದರು.
ತಮ್ಮ ಹಿರಿಯ ಮಗ ರಣಧೀರ್ ಕಪೂರ್ ನಟನಾಗಿ ಮತ್ತು ನಿರ್ದೇಶಕನಾಗಿ ಪ್ರಥಮ ಬಾರಿಗೆ ಕಲ್ ಆಜ್ ಔರ್ ಕಲ್ ಎಂಬ ಸಿನಿಮಾದಲ್ಲಿ ರಾಜ್ ಕಪೂರ್ ಕೂಡ ನಟನಾಗಿ ಕಾಣಿಸಿಕೊಂಡಿದ್ದರು. 1971ರಲ್ಲಿ ಎರಡನೇ ಪುತ್ರ ರಿಷಿ ಕಪೂರ್ ಅವರನ್ನು ಬಾಬ್ಬಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು. ಅವರು ಮಹಿಳಾ ಪ್ರಧಾನ ಚಲನಚಿತ್ರಗಳನ್ನು ನಿರ್ದೇಶಿಸಲು ಬಯಸಿದ್ದರು. ಜೀನತ್ ಅಮನ್ ಅವರೊಂದಿಗೆ 1978ರಲ್ಲಿ ಸತ್ಯಂ ಶಿವಂ ಸುಂದರಂ, ಪದ್ಮಿನಿ ಕೊಲ್ಹಾಪುರೆ ಅವರೊಂದಿಗೆ 1982 ಪ್ರೇಮ್ ರೋಗ್ ಸಿನಿಮಾಗಳಿಗೆ ನಿರ್ಮಾಪಕರಾಗಿದ್ದರು.
ಪ್ರಶಸ್ತಿ
ರಾಜ್ ಕಪೂರ್ ಅವರು ತಮ್ಮ ಸಿನಿ ಪಯಣದಲ್ಲಿ 3 ರಾಷ್ಟ್ರ ಪ್ರಶಸ್ತಿ,11 ಫಿಲ್ಮ್ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಇವರು ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ 1971ರಲ್ಲಿ ಪದ್ಮಭೂಷಣವನ್ನು ನೀಡಿ ಗೌರವಿಸಿತು. ರಾಜ್ ಕಪೂರ್ ಅವರಿಗೆ 1987ರಲ್ಲಿ ಸಿನೆಮಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದವರಿಗೆ ನೀಡಲಾಗುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಲಭಿಸಿದೆ.
ರಾಜ್ ಕಪೂರ್ ಅವರು ಜೂನ್ 2, 1988 ರಂದು 63ನೇ ವಯಸ್ಸಿನಲ್ಲಿ ನಿಧನರಾದರು.