ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳಲ್ಲಿ ಒಂದಾದ ಕಾಕೋರಿ ಸಂಚು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದು ಅಗಸ್ಟ್ 9, 1925ರಲ್ಲಿ ನಡೆದಂತಹ ಘಟನೆ. ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಅವರ ನೇತೃತ್ವದ ಯೋಜನೆ ಇದಾಗಿತ್ತು. ಭಾರತವನ್ನು ತಮ್ಮ ಆಡಳಿತದ ಅಡಿಯಲ್ಲಿ ಇಟ್ಟುಕೊಂಡು, ನಮ್ಮ ನಾಡಿನ ಹಣವನ್ನು ಲೂಟಿ ಮಾಡುತ್ತಿದ್ದ ಆಂಗ್ಲರ ವಿರುದ್ಧ ಕ್ರಾಂತಿಕಾರಿ ಮಾರ್ಗದಲ್ಲಿ ಹೋರಾಟ ನಡೆಸಬೇಕೆಂದು ನಿರ್ಧರಿಸಿದ್ದವರಲ್ಲಿ ಹಿಂದುಸ್ಥಾನ್ ರಿಪಬ್ಲಿಕನ್ ಆರ್ಮಿಯ ಸದಸ್ಯರು ಪ್ರಮುಖರು. ಹಣ ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಸಾಧಿಸಲು ಉಪಯೋಗವಾಗಬೇಕು ಎನ್ನುವ ನಿರ್ಧಾರದಿಂದ ಕಾಕೋರಿ ಬಳಿ ರೈಲಿನಿಂದ ಕೊಂಡೊಯ್ಯಲಾಗುತ್ತಿದ್ದ ಖಜಾನೆಯನ್ನು ಬರಿದಾಗಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಗಲ್ಲುಶಿಕ್ಷೆಗೆ ಗುರಿಯಾಗಿ ಪ್ರಾಣಾರ್ಪಣೆ ಮಾಡಿದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ರೋಶನ್ ಸಿಂಗ್ ಅವರ ಬಲಿದಾನದ ದಿನ ಇಂದು.
ಕಾಕೋರಿ ಪಿತೂರಿ ಪ್ರಕರಣ ಹಿನ್ನೆಲೆ
91 ವರ್ಷಗಳ ಹಿಂದೆ ಶಹಜಹಾನ್ ಪುರದಿಂದ ಲಕ್ನೋಗೆ ತೆರಳುತ್ತಿದ್ದ ರೈಲನ್ನು ಕ್ರಾಂತಿಕಾರಿಯೊಬ್ಬರು ಸರಪಳಿ ಎಳೆದು ನಿಲ್ಲಿಸಿ ಲೂಟಿ ಮಾಡಿದ್ದರು. ಏಕೆಂದರೆ ಸರ್ಕಾರದ ಪಾಲಾಗಿದ್ದ ನಮ್ಮದೇ ಹಣವನ್ನು ಬಳಸಿಕೊಂಡು ನಮ್ಮ ನಾಡಿನ ವಿರುದ್ಧವೇ ಆಡಳಿತ ಮಾಡುತ್ತಿದ್ದ ಬ್ರಿಟಿಷರಿಗೆ ನಮ್ಮ ಹಣವನ್ನು ನಮ್ಮದಾಗಿಸಿಕೊಂಡು ಅವುಗಳ ಮೂಲಕ ಬ್ರಿಟಿಷರಿಗೆ ತಕ್ಕ ಉತ್ತರ ನೀಡಬೇಕೆಂಬ ಉತ್ಸಾಹ. ಈ ನಿಟ್ಟಿನಲ್ಲಿ ಕಾಕೋರಿ ಬಳಿ ರೈಲನ್ನು ತಡೆದು ನಿಲ್ಲಿಸಿ ಒಂದು ಲಕ್ಷಕ್ಕೂ ಹೆಚ್ಚು ಹಣವಿದ್ದ ಚೀಲವನ್ನು ಕ್ರಾಂತಿಕಾರಿಗಳು ಲಕ್ನೋದತ್ತ ಕೊಂಡೊಯ್ದರು.
ಈ ಘಟನೆಗೆ ಸಂಬಂಧಿಸಿ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ರಾಜೇಂದ್ರ ಲಾಹಿರಿ, ಸಚೀಂದ್ರ ಬಕ್ಷಿ, ಕೇಶಬ್ ಚಕ್ರವರ್ತಿ, ಮನ್ಮಥನಾಥ್ ಗುಪ್ತಾ, ಮುರಾರಿ ಲಾಲ್, ಮುಕುಂಡಿ ಲಾಲ್ ಮತ್ತು ಬನ್ವಾರಿ ಲಾಲ್ ಎಂಬಾತರನ್ನು ಬಂಧಿಸಿದ್ದರು.
ರಾಮ್ ಪ್ರಸಾದ್ ಬಿಸ್ಮಿಲ್ ಸೇರಿದಂತೆ ಕೆಲವರ ಮೇಲೆ ದರೋಡೆ ಹಾಗೂ ಕೊಲೆ, ವಿವಿಧ ಅಪರಾಧಗಳ ಆರೋಪ ಹೊರಿಸಲಾಗಿತ್ತು.ಈ ದಾಳಿ ನಡೆದು ಒಂದು ತಿಂಗಳೊಳಗೆ, ಹೆಚ್ ಆರ್ ಎ ( ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ) 40 ಕ್ಕೂ ಹೆಚ್ಚು ಸದಸ್ಯರನ್ನು ಬಂಧಿಸಲಾಗಿತ್ತು. ಅದರಲ್ಲಿ ಸುಮಾರು 30 ವ್ಯಕ್ತಿಗಳನ್ನು ಲಕ್ನೋದ ವಿಶೇಷ ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಹದಿನೈದು ಜನರನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಇನ್ನೂ ಐದು ಜನರು ತಪ್ಪಿಸಿಕೊಂಡರು. ಅವರಲ್ಲಿ ಅಶ್ಫಾಕುಲ್ಲಾ ಖಾನ್ ಮತ್ತು ಸಚೀಂದ್ರ ಬಕ್ಷಿ ಎಂಬ ಇಬ್ಬರನ್ನು ವಿಚಾರಣೆಯ ನಂತರ ಸೆರೆಹಿಡಿಯಲಾಯಿತು.ಈ ಘಟನೆಯ ಅಂತಿಮ ತೀರ್ಪುಗಳನ್ನು ಏಪ್ರಿಲ್ 6, 1927 ರಂದು ಘೋಷಿಸಲಾಯಿತು.
ಈ ಶಿಕ್ಷೆಗಳು ಭಾರತೀಯ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನುಳಿದವರನ್ನು ರಾಮ್ ಪ್ರಸಾದ್ ಬಿಸ್ಮಿಲ್, ಠಾಕೂರ್ ರೋಶನ್ ಸಿಂಗ್, ರಾಜೇಂದ್ರ ನಾಥ್ ಲಾಹಿರಿ ಮತ್ತು ಅಶ್ಫಾಕುಲ್ಲಾ ಖಾನ್ ಅವರನ್ನು ಉಳಿಸಲು ಹಲವಾರು ಪ್ರಯತ್ನಗಳ ಹೊರತಾಗಿಯೂ ಈ ನಾಲ್ವರು ಎಚ್ಆರ್ ಎ ಸದಸ್ಯರನ್ನು ಡಿಸೆಂಬರ್ 19, 1927 ರಲ್ಲಿ ಗಲ್ಲಿಗೇರಿಸಲಾಯಿತು.
ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಈ ಮಹಾನ್ ಪುರುಷರಿಗೆ ಶತಶತಪ್ರಣಾಮಗಳು.