ಇಂದು ಜಯಂತಿ
ಆರ್.ಎಸ್‌ ಸುಬ್ಬಲಕ್ಷ್ಮಿ ಅವರು ಭಾರತದಲ್ಲಿ ಸಮಾಜ ಸುಧಾರಕರು ಮತ್ತು ಶಿಕ್ಷಣತಜ್ಞರಾಗಿದ್ದರು. ಇವರು ಸಮಾಜಸೇವೆಗೆ ನೀಡಿರುವ ಕೊಡುಗೆ ಅಪಾರ. ಆ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೆ ಹೋರಾಡಿದಂತಹ ದಿಟ್ಟ ಮಹಿಳೆಯಾದ ಇವರು ಮಕ್ಕಳಿಗಾಗಿ ಸಮಾಜ ಕಲ್ಯಾಣ ಕೇಂದ್ರವನ್ನು ಸ್ಥಾಪಿಸುವಲ್ಲಿ ನಿರತರಾಗಿದ್ದರು. ಇಂದು ಅವರ ಜಯಂತಿ.


ಪರಿಚಯ
ಆರ್.‌ ಎಸ್‌ ಸುಬ್ಬಲಕ್ಷ್ಮಿ ಅವರು ಆಗಸ್ಟ್ 18, 1886 ರಂದು ಮದ್ರಾಸ್‌ ನ ತಂಜಾವೂರು ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಆರ್.ವಿ. ಸುಬ್ರಮಣ್ಯ ಅಯ್ಯರ್ ಹಾಗೂ ತಾಯಿ ವಿಶಾಲಾಕ್ಷಿ. ಸುಬ್ಬಲಕ್ಷ್ಮಿ ಅವರು ಒಂಬತ್ತನೇ ವಯಸ್ಸಿನಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ನಾಲ್ಕನೇ ತರಗತಿಗೆ ಚಿಂಗಲ್‌ಪುಟ್ ಜಿಲ್ಲೆಯಲ್ಲಿ ಸಾರ್ವಜನಿಕ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದರು. ಏಪ್ರಿಲ್ 1911ರಲ್ಲಿ ಅವರು ಮದ್ರಾಸ್ ಪ್ರೆಸಿಡೆನ್ಸಿಯಿಂದ ಪದವಿ ಪಡೆದ ಮೊದಲ ಹಿಂದೂ ಮಹಿಳೆಯಾದರು. ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು.


ವೃತ್ತಿ
1912ರಲ್ಲಿ ಅವರು ಗೃಹಿಣಿಯರು ಮತ್ತು ಇತರೆ ಮಹಿಳೆಯರಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳಿಸಿದರು. ಗೃಹಿಣಿಯರಿಗೆ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಮತ್ತು ಅವರ ಭಾಗವಹಿಸುವಿಕೆಗೆ ಅಗತ್ಯವಾದ ಸಭೆ ನಡೆಸಲು ಅವಕಾಶವನ್ನು ಕಲ್ಪಿಸುವುದಕ್ಕಾಗಿ  ಶಾರದಾ ಲೇಡೀಸ್ ಯೂನಿಯನ್ ಅನ್ನು ಸ್ಥಾಪಿಸಿದರು.  ಇದರ ಮೂಲಕ ಬಾಲ ವಿಧವೆಯರಿಗೆ ಪುನರ್ವಸತಿ ಮತ್ತು  ಶಿಕ್ಷಣ ನೀಡಿದರು. 1921ರಲ್ಲಿ ಅವರು ಶಾರದಾ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಶಾರದ ವಿದ್ಯಾಲಯವನ್ನು ಸ್ಥಾಪಿಸಿದರು. 1922ರಲ್ಲಿ ಅವರು ಲೇಡಿ ವಿಲಿಂಗ್ಡನ್ ತರಬೇತಿ ಕಾಲೇಜು ಮತ್ತು ಅಭ್ಯಾಸ ಶಾಲೆಯನ್ನು ಉದ್ಘಾಟಿಸಿ  ಆ ಕಾಲೇಜಿಗೆ ಮೊದಲ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಅವರು 1942 ರಲ್ಲಿ ಮೈಲಾಪುರ್‌ನಲ್ಲಿ ವಯಸ್ಕ ಮಹಿಳೆಯರಿಗಾಗಿ ಶ್ರೀವಿದ್ಯಾ ಕಲಾನಿಲಯಂ ಅನ್ನು ಸ್ಥಾಪಿಸಿದರು. ಅವರು ಮೈಲಾಪುರ ಲೇಡೀಸ್ ಕ್ಲಬ್‌ನ ಅಧ್ಯಕ್ಷರಾಗಿದ್ದಾಗ, ಅವರು ಮೈಲಾಪುರ ಲೇಡೀಸ್ ಕ್ಲಬ್ ಸ್ಕೂಲ್ ಸೊಸೈಟಿಯನ್ನು 1956ರಲ್ಲಿ ಸ್ಥಾಪಿಸಿದರು. ಅದಕ್ಕೀಗ ಮೈಲಾಪುರದ ವಿದ್ಯಾ ಮಂದಿರ ಶಾಲೆ ಎಂದು ಮರುನಾಮಕರಣ ಮಾಡಲಾಗಿದೆ. ಜೊತೆಗೆ ಅವರು ಮಡಂಬಾಕ್ಕಂ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಸಮಾಜ ಕಲ್ಯಾಣ ಕೇಂದ್ರವನ್ನು ಸ್ಥಾಪಿಸಿದರು.


ಅವರು ಬಾಲ್ಯ ವಿವಾಹವನ್ನು ತೊಡೆದುಹಾಕಲು ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಪ್ರಯತ್ನಿಸಿದರು. 1927ರ ಜನವರಿ ದಿನದಂದು ಪೂನಾದ ಫರ್ಗುಸನ್ ಕಾಲೇಜಿನಲ್ಲಿ “ಅಖಿಲ ಭಾರತ ಮಹಿಳಾ ಸಮ್ಮೇಳನ” ನಡೆಸಲಾಯಿತು. ಈ ಸಮ್ಮೇಳನದಲ್ಲಿ ಆರ್ ಎಸ್‌ ಸುಬ್ಬಲಕ್ಷ್ಮಿ ಅವರು ಕೂಡ ಭಾಗವಹಿಸಿದ್ದರು. ಅವರು 1930ರಲ್ಲಿ ಜಾರಿಗೆ ತಂದ ಬಾಲ್ಯ ವಿವಾಹ ತಡೆ ಕಾಯಿದೆಯನ್ನು ಸಕ್ರಿಯವಾಗಿ ಬೆಂಬಲಿಸಿದರು. ಈ ಕಾಯಿದೆ ಆ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳು ಮದುವೆ ವಯಸ್ಸು 14 ಮತ್ತು ಹುಡುಗರ ಮದುವೆ ವಯಸ್ಸು 16ಕ್ಕೆ ಏರಿಸುವ ಪ್ರಮುಖ ಬದಲಾವಣೆಯನ್ನು ತಂದಿತು.


ಸುಬ್ಬಲಕ್ಷ್ಮಿ ಅವರು ತಮ್ಮ ನಿವೃತ್ತಿಯ ನಂತರ ಮಹಿಳಾ ಭಾರತೀಯ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು, ಆ ಮೂಲಕ ಅವರು ಅನ್ನಿಬೆಸೆಂಟ್‌ ಇತರರೊಂದಿಗೆ ಸ್ನೇಹ ಬೆಳೆಸಿದರು. ಅವರು 1952 ರಿಂದ 1956 ರವರೆಗೆ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್‌ನ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದರು.


ಪ್ರಶಸ್ತಿ
ಬ್ರಿಟಿಷ್‌ ಸರ್ಕಾರವು 1920ರಲ್ಲಿ ಸುಬ್ಬಲಕ್ಷ್ಮಿ ಅವರ ಸಮಾಜ ಸೇವೆಗಾಗಿ ಕೈಸರ್‌ -ಇ-ಹಿಂದ್‌ ಚಿನ್ನದ ಪದಕವನ್ನು ನೀಡಿ ಗೌರವಿಸಿತು. ಭಾರತ ಸರ್ಕಾರ 1958ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.


ಆರ್.‌ ಎಸ್‌ ಸುಬ್ಬಲಕ್ಷ್ಮಿ ಅವರು ಡಿಸೆಂಬರ್‌ 20, 1969 ರಂದು ಏಕಾದಶಿ ದಿನದಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.