ಇಂದು ಎಂ ಜಿ ವೈದ್ಯ ಅವರ ಪುಣ್ಯಸ್ಮರಣೆ
ಬೌದ್ಧಿಕ ಪಟು ಎಂದೇ ಗುರುತಿಸಿಕೊಂಡಿದ್ದ ಎಂ ಜಿ ವೈದ್ಯ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಆರ್ ಎಸ್ ಎಸ್ ನ ಹುಟ್ಟು ಬಲವರ್ಧನೆ ಮತ್ತು ವಿಕಾಸದ ಸಂಪೂರ್ಣ ಪ್ರಯಾಣವನ್ನು ವೈಯಕ್ತಿಕವಾಗಿ ನೋಡಿದ ಅಪರೂಪದ ರಾಷ್ಟ್ರೀಯವಾದಿಗಳಲ್ಲಿ ಒಬ್ಬರು. ಅಷ್ಟೇ ಅಲ್ಲದೇ ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ, ನುರಿತ ಪತ್ರಕರ್ತರಾಗಿ ತಮ್ಮದೇಯಾದ ಛಾಪು ಮೂಡಿಸಿದವರು. ಇಂದು ಅವರ ಪುಣ್ಯಸ್ಮರಣೆ .
ಪರಿಚಯ:
ಎಂ ಜಿ ವೈದ್ಯ ಎಂದೇ ಪ್ರಸಿದ್ಧರಾದ ಮಾಧವ ಗೋವಿಂದ ವೈದ್ಯ ಅವರು ಮಾರ್ಚ್ 11, 1923 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ತರೋಡಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಗೋವಿಂದ ತುಕಾರಾಂ ವೈದ್ಯ. ತಮ್ಮ ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪಡೆದು, ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಾಗ್ಪುರದಲ್ಲಿರುವ ಮೋರಿಸ್ ಕಾಲೇಜು ಸೇರಿದರು. ಅವರು 1939ರಲ್ಲಿ ತಮ್ಮ ಮೆಟ್ರಿಕ್ ವಿದ್ಯಾಭ್ಯಾಸವನ್ನು ಮತ್ತು 1941 ರಲ್ಲಿ ಮಧ್ಯಂತರ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. 1946 ರಲ್ಲಿ, ಅವರು ತಮ್ಮ ಎಂಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ದಾಜಿ ಹರಿ ವಾಡೆಗಾಂವ್ಕರ್ ಚಿನ್ನದ ಪದಕಕ್ಕೆ ಭಾಜನರಾದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಡನಾಟ:
ವೈದ್ಯ ಅವರಿಗೆ ಬಾಲ್ಯದಿಂದಲೂ ಸಂಘದ ಸಂಪರ್ಕದಲ್ಲಿದ್ದವರು. ವೈದ್ಯ ಅವರು ಆರಂಭದಲ್ಲಿ ಶಾಲೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದರು, ನಂತರ ಕಾಲೇಜು ಪ್ರಾಧ್ಯಾಪಾಕರಾಗಿ ಸೇವೆ ಸಲ್ಲಿಸಿದ್ದರು.1943ರಲ್ಲಿ ನಾಗಪುರದ ಮೋರಿಸ್ ಕಾಲೇಜಿನಲ್ಲಿದ್ದಾಗಲೇ ಆರ್ ಎಸ್ ಎಸ್ ಸಕ್ರಿಯ ಸದಸ್ಯರಾಗಿದ್ದರು. ಅವರು ಆರ್ ಎಸ್ ಎಸ್ ಆಗಿದ್ದರಿಂದ ಎಲ್ಲಾ ಆರು ಸರಸಂಘಚಾಲಕರುಗಳ ಜೊತೆಗೆ ನಿಕಟವಾಗಿ ಕೆಲಸ ಮಾಡುವ ಅಪರೂಪದ ಹಿರಿಮೆಯನ್ನು ಹೊಂದಿದ್ದವರು. ಎಂಟು ದಶಕಗಳಿಗೂ ಹೆಚ್ಚು ಕಾಲ ಸಂಘಟನೆಯ ವಕ್ತಾರರಾಗಿ ಆರ್ ಎಸ್ ಎಸ್ ನಲ್ಲಿ ಸೇವೆ ಸಲ್ಲಿಸಿದ್ದರು. ಸಂಘ ಪರಿವಾರದ ಮುಖವಾಣಿ ತರುಣ್ ಭಾರತ್ ನ ಮುಖ್ಯ ಸಂಪಾದಕರಾಗಿಯೂ ಅವರು ಕೆಲಸ ಮಾಡಿದ್ದರು.
ನಂತರ 1978 ರಿಂದ 1984 ರವರೆಗೆ, ವೈದ್ಯ ಅವರು ಮಹಾರಾಷ್ಟ್ರದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. 1977 ರಿಂದ 1999 ರವರೆಗೆ, ಅವರು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಆರ್ಎಸ್ಎಸ್ ಬೆಂಬಲಿತ ಸಂಸ್ಥೆಯಾದ ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷರಾಗಿದ್ದರು.
ಆರ್ಎಸ್ಎಸ್ನಲ್ಲಿ, ವೈದ್ಯ ಅವರಿಗೆ ‘ಅಖಿಲ ಭಾರತೀಯ ಬೌದ್ಧಿಕ್ ಪ್ರಮುಖ್’ (ಬೌದ್ಧಿಕ ಚಟುವಟಿಕೆಗಳ ಅಖಿಲ ಭಾರತ ಮುಖ್ಯಸ್ಥ), ‘ಅಖಿಲ ಭಾರತೀಯ ಪ್ರಚಾರ್ ಪ್ರಮುಖ್’ (ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಖಿಲ ಭಾರತ ಮುಖ್ಯಸ್ಥ) ಮತ್ತು ಆರ್ಎಸ್ಎಸ್ನ ರಾಷ್ಟ್ರೀಯ ವಕ್ತಾರರಂತಹ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. 2008ರವರೆಗೆ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸದಸ್ಯರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಈಗಿನ ಸಹಸರಕಾರ್ಯವಾಹರಾದ ಡಾ.ಮನಮೋಹನ್ ವೈದ್ಯ ಹಾಗೂ ವಿಶ್ವವಿಭಾಗ ಪ್ರಚಾರಕರಾದ ರಾಮ್ ವೈದ್ಯ ಇವರ ಪುತ್ರರು.
ಎಂ ಜಿ ವೈದ್ಯ ಅವರು ಡಿಸೆಂಬರ್ 19, 2019ರಂದು ತಮ್ಮ 97ನೇ ವಯಸ್ಸಿನಲ್ಲಿ ನಾಗ್ಪುರದಲ್ಲಿ ಅನಾರೋಗ್ಯದಿಂದ ನಿಧನರಾದರು.