ಚಂದನವನದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಎಂದೇ ಹೆಸರಾಗಿದ್ದ ವಿಷ್ಣುವರ್ಧನ್ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದವರು. ಅವರು ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ನಟಿಸಿ ಜನಮನ್ನಣೆ ಗಳಿಸಿದವರು. ವಿಷ್ಣು ಅವರ ಸೃಜನಶೀಲ ನಡೆ , ಕನ್ನಡ ಸಿನಿರಂಗಕ್ಕೆ ಅವರ ನೀಡಿದ ಕೊಡುಗೆ ಅಪಾರ. ಅವರು ನಟಿಸಿದಂತಹ ಎಲ್ಲ ಸಿನಿಮಾಗಳು ಸಿನಿಲೋಕದಲ್ಲಿ ಹೊಸದೊಂದು ಅಲೆಯನ್ನೇ ಸೃಷ್ಟಿ ಮಾಡಿತ್ತು. ಇಂದು ಅವರು ಪುಣ್ಯಸ್ಮರಣೆ.


ವಿಷ್ಣುವರ್ಧನ್ ಪರಿಚಯ
ಡಾ. ವಿಷ್ಣುವರ್ಧನ್ ಅವರು ಸೆಪ್ಟೆಂಬರ್ 18, 1950 ರಲ್ಲಿ ಮೈಸೂರಿನಲ್ಲಿ ಜನಿಸಿದವರು. ಅವರ ತಂದೆ ಹೆಸರು ಹೆಚ್.ಎಲ್.ನಾರಾಯಣರಾವ್, ತಾಯಿ ಕಾಮಾಕ್ಷಮ್ಮ. ಇವರ ತಂದೆ ಹೆಚ್.ಎಲ್.ನಾರಾಯಣರಾವ್ ಅವರು ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಪಡೆದರು. ನಂತರ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿ ವ್ಯಾಸಂಗವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ  ಮಾಡಿದರು.


ವೃತ್ತಿ ಜೀವನ
ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ವಿಷ್ಣುವರ್ಧನ್ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಕನ್ನಡ ಚಿತ್ರರಂಗದಲ್ಲಿ ನಟಿಸಲು ಪ್ರಾರಂಭಿಸಿದಾಗ ಇವರಿಗೆ ವಿಷ್ಣುವರ್ಧನ್ ಎಂದು ಕರೆಯಲಾಯಿತು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಒಟ್ಟು 200 ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿದ್ದಾರೆ.


ಸಿನಿಮಾರಂಗದಲ್ಲಿ ವಿಷ್ಣುವರ್ಧನ್ ನಡೆದು ಬಂದ ಹಾದಿ

ವಿಷ್ಣು 1955ರಲ್ಲಿ “ಶಿವಶರಣ ನಂಬೆಯಕ್ಕ” ಎಂಬ ಸಿನಿಮಾದಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಚಿತ್ರ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.ಶಂಕರ್ ಸಿಂಗ್ ಸಿದ್ಧಪಡಿಸಿದ ಈ ಸಿನಿಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು. ಮುಂದೆ 1956ರಲ್ಲಿ “ಕೋಕಿಲವಾಣಿ” ಎಂಬ ಮತ್ತೊಂದು ಚಿತ್ರದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ ಸಿನೆಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರು.

1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರಹಾವು” ಈ ಚಿತ್ರದಲ್ಲಿ ಮೊದಲು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ್ ತಮ್ಮ ಮನೋಜ್ಞ ನಟನೆಯ ಮೂಲಕ ಜನಪ್ರಿಯರಾದರು.1980 ರಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ “ಮಾಲ್ಗುಡಿ ಡೇಸ್” ಎಂಬ ಕಿರುತೆರೆಯಲ್ಲಿ ನಟಿಸಿದರು .


ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸಿ ಇಡೀ ಚಿತ್ರರಂಗದಲ್ಲಿಯೇ ಸುಪ್ರಸಿದ್ಧ ನಟರಾಗಿ ಹೊರಹೊಮ್ಮಿದ್ದರು.  ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.
ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವಿಷ್ಣುವರ್ದನ್ ಅವರು ಡಿಸೆಂಬರ್ 30 2009 ರಲ್ಲಿ ವಿಧಿವಶರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.