ಕೃಷ್ಣದೇವರಾಯ ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಮಹಾನ್ ನಾಯಕ. ಅವರು 1509 ರಿಂದ 1529 ರವರೆಗೆ ರಾಜ್ಯಭಾರ ಮಾಡಿ ವಿಜಯನಗರ ಸಾಮ್ರಾಜ್ಯವನ್ನು ವಿಶ್ವವಿಖ್ಯಾತವಾಗುವಂತೆ ಮಾಡಿದವರು. ಹಿಂದೂ ಸಾಂಸ್ಕೃತಿಕ ಹಾಗೂ ರಾಜಕೀಯ ಪುನರುಜ್ಜೀವನಗೊಳಿಸಿದ ಕೃಷ್ಣದೇವರಾಯ ಅವರ ಜಯಂತಿ ಇಂದು.
ಪರಿಚಯ
ಕೃಷ್ಣದೇವರಾಯ ಅವರು ಜನವರಿ 17, 1471ರಂದು ಜನಿಸಿದರು. ಅವರ ತಂದೆ ತುಳುವ ನರಸ ನಾಯಕ , ತಾಯಿ ರಾಣಿ ನಾಗಮಾಂಬ. ಸಾಳುವ ನರಸಿಂಹದೇವ ರಾಯನ ಸೈನ್ಯವನ್ನು ತಂದೆ ತುಳುವ ನರಸ ನಾಯಕರು ಮುನ್ನಡೆಸಿದರು. ಅಂತಿಮವಾಗಿ ವಿಜಯನಗರ ಸಾಮ್ರಾಜ್ಯ ಪತನವಾಗದಂತೆ ತಡೆಯಲು ನಾಯಕತ್ವವನ್ನು ವಹಿಸಿ, ತುಳುವ ರಾಜವಂಶವನ್ನು ಸ್ಥಾಪಿಸಿದನು.
ನರಸನಾಯಕನ ನಂತರ ಕೃಷ್ಣಜನ್ಮಾಷ್ಟಮಿಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ ವಿಜಯನಗರದ ಉಪನಗರವಾಗಿ ನಾಗಲಾಪುರ ಎಂಬ ಸುಂದರ ನಗರವನ್ನು ಕಟ್ಟಿಸಿದನು. ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ತಿಮ್ಮರಸು ಅವರು ಪಟ್ಟವೇರಲು ಕಾರಣೀಭೂತರಾಗಿದ್ದರಷ್ಟೇ ಅಲ್ಲ, ಅವನ ರಾಜ್ಯಭಾರದ ಕಾಲದಲ್ಲಿ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದರು.
ಸಾಧನೆ
ಕೃಷ್ಣದೇವರಾಯ ಇಡೀ ಸಾಮ್ರಾಜ್ಯವನ್ನು ದಕ್ಷಿಣ ಭಾರತದ ಇತರ ರಾಜ್ಯಗಳ ನಡುವೆ ಹೆಚ್ಚು ಗುರುತಿಸುವಂತೆ ನಿರ್ಮಿಸುವ ಮಹತ್ವದ ವಿಧಾನದೊಂದಿಗೆ ರಚಿಸಿದರು. ಈ ಸಂದರ್ಭದಲ್ಲಿ, ಅವರು ವಿಜಯನಗರ ಸಾಮ್ರಾಜ್ಯವನ್ನು ಆಡಳಿತ, ಕಲೆ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪುನರ್ನಿರ್ಮಿಸಿದರು. ಅವರ ಆಳ್ವಿಕೆಯ ಅವಧಿಯಲ್ಲಿ, ಇಡೀ ಸಾಮ್ರಾಜ್ಯ ಸಮೃದ್ಧವಾಗಿತ್ತು. ಸೇನಾ ವಿಜಯಗಳ ಮೂಲಕ ವಿಜಯನಗರ ಸಾಮ್ರಾಜ್ಯದ ವಿಸ್ತರಣೆ, ಕಲೆ ಮತ್ತು ಸಾಹಿತ್ಯಕ್ಕೆ ವ್ಯಾಪಕತೆ ಸಿಕ್ಕಿತು.ಅಲ್ಲದೆ, ಅವರ ಆಳ್ವಿಕೆಯ ಉದ್ದಕ್ಕೂ ಹಲವಾರು ದೇವಾಲಯಗಳು, ನೀರಾವರಿ ವ್ಯವಸ್ಥೆಗಳು ಮತ್ತು ಕೋಟೆಗಳನ್ನು ನಿರ್ಮಿಸಿದರು. ಕವಿಗಳು ಮತ್ತು ವಿದ್ವಾಂಸರ ಪ್ರೋತ್ಸಾಹಕ್ಕಾಗಿ ಅವರು ಪ್ರಸಿದ್ಧರಾಗಿದ್ದರು. ಅಲ್ಲಸಾನಿ ಪೆದ್ದಣ್ಣ, ರಾಜಶೇಖರ, ಭಟ್ಟು ಮೂರ್ತಿ, ನಂದಿ ತಿಮ್ಮಣ್ಣ, ಮಾದಯ್ಯಗಾರಿ, ಪಿನಾಗಲಿ ಸುರಮ, ರಾಮಲಿಂಗ, ಧೂರ್ಜಟಿ ಮುಂತಾದ ಸಂಗೀತ ತಜ್ಞರಿಗೆ ಆಶ್ರಯ ನೀಡಿದ್ದರು.
ಕೃಷ್ಣದೇವರಾಯ ಕ್ರಿ.ಶ 1530 ರಲ್ಲಿ ಮರಣಹೊಂದಿದರು.