ಉಡುಪಿ ಶ್ರೀಕೃಷ್ಣನ ಆರಾಧಕರಾದ ಅಷ್ಟಮಠಗಳ ಯತಿಗಳಲ್ಲೇ ಹಿರಿಯರಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀಕೃಷ್ಣ ಪೂಜೆಯ 2 ವರ್ಷಗಳ ಪರ್ಯಾಯದ ಅತ್ಯಪೂರ್ವ ಅವಕಾಶವನ್ನು 5 ಬಾರಿ ಪಡೆದ ಪುಣ್ಯವಂತರು. ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬರಾದ ಶ್ರೀ ಅಧ್ಯೋಕ್ಷಜ ತೀರ್ಥರಿಂದ ಪ್ರಾರಂಭಿಸಿ ಪೇಜಾವರ ಮಠದ ಪರಂಪರೆಯಲ್ಲಿ ಅವರು 34ನೇಯವರು. ನಾಡಿನ ಹಿರಿಯ ವಿದ್ವಾಂಸರಾಗಿ , ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರಾಗಿ ನಾಡಿನ ಮಹಾಯತಿಯೆಂದೇ ಪ್ರಸಿದ್ಧರಾಗಿದ್ದರು. ಇಂದು ಅವರ ಪುಣ್ಯಸ್ಮರಣೆ.

ಪರಿಚಯ
ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ(ಪೂರ್ವಾಶ್ರಮದ ಹೆಸರು ವೆಂಕಟರಮಣ) 1931, ಏ. 27ರಂದು, ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜ ಎಂಬ ಪುಟ್ಟಗ್ರಾಮದಲ್ಲಿ ಜನಿಸಿದವರು. ಅವರ ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ.1938ರಲ್ಲಿ ಅವರ 8ನೇ ವಯಸ್ಸಿನಲ್ಲಿಯೇ ಪೇಜಾವರ ಮಠದ ಆಗಿನ ಸ್ವಾಮೀಜಿಯವರಾಗಿದ್ದ ಶ್ರೀವಿಶ್ವಮಾನ್ಯ ತೀರ್ಥರು, ಅತ್ಯಂತ ಸಾತ್ವಿಕ ಸ್ವಭಾವದ ಬಾಲಕ ವೆಂಕಟರಮಣನಿಗೆ ಹಂಪಿಯ ಚಕ್ರತೀರ್ಥದಲ್ಲಿ ಸನ್ಯಾಸಾಶ್ರಮ ನೀಡಿ ಶ್ರೀವಿಶ್ವೇಶ ತೀರ್ಥ ಎಂದು ನಾಮಕರಣ ಮಾಡಿದರು.


ಉಡುಪಿಯ ಕೊಡವೂರು ಬಳಿ ನೀಲಾವರದಲ್ಲಿ 2000 ಗೋವುಗಳಿರುವ ಗೋಶಾಲೆ ಸ್ಥಾಪಿಸಿದ್ದಾರೆ. ನಂತರ 1952ರಲ್ಲಿ ಪೇಜಾವರ ಶ್ರೀಗಳು ಪ್ರಥಮ ಬಾರಿಗೆ 2 ವರ್ಷಗಳ ಕೃಷ್ಣನ ಪೂಜೆಯ ಪ್ರರ್ಯಾಯ ಪೀಠಾರೋಹಣ ಮಾಡಿದರು. ಆಗ ಶ್ರೀಗಳಿಗೆ ಕೇವಲ 21 ವರ್ಷ ವಯಸ್ಸು. ತತ್ವಜ್ಞಾನ ಲೋಕದಲ್ಲಿ ತಮ್ಮ ಪಾಂಡಿತ್ಯದಿಂದ ಹೆಸರು ಮಾಡಿದ್ದ ಶ್ರೀಗಳು, ತಮ್ಮ ಪ್ರಥಮ ಪರ್ಯಾಯೋತ್ಸವದಲ್ಲಿಯೇ ಅಖಿಲ ಭಾರತ ಮಾಧ್ವ ಮಹಾಮಂಡಲವನ್ನು ಸ್ಥಾಪಿಸಿ, ಅದರ ಮೂಲಕ ಅಖಿಲ ಭಾರತ ಮಾಧ್ವ ಸಮ್ಮೇಳನವನ್ನು ಆಯೋಜಿಸಿದ್ದರು. ಮೈಸೂರಿನ ಮಹಾರಾಜರು ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.

1968 – 70ರಲ್ಲಿ ತಮ್ಮ ದ್ವಿತೀಯ ಪರ್ಯಾಯೋತ್ಸವನ್ನು ವೈಭವದಿಂದ ನೆರವೇರಿಸಿದ ಶ್ರೀಗಳು, ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ವಿಶ್ವಹಿಂದೂ ಪರಿಷತ್ತಿನ ಕರ್ನಾಟಕ ಪ್ರಾಂತೀಯ ಸಮ್ಮೇಳನವನ್ನು ಉಡುಪಿಯಲ್ಲಿ ಆಯೋಜಿಸಿದರು. ಇದರಲ್ಲಿ ದೇಶದ 60 ಮಂದಿ ಪ್ರಮುಖ ಸಂತರು, ಉದಯಪುರ ರಾಜಾ ಮಹಾರಾಣಾ, ಗ್ವಾಲಿಯರ್ನ ರಾಜಮಾತೆ ವಿಜಯರಾಜೇ ಸಿಂಧಿಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮುಂತಾದವರು ಉಡುಪಿಗೆ ಬಂದಿದ್ದರು.

ರಾಷ್ಟ್ರದ ಪ್ರಜಾಪ್ರಭುತ್ವದ ವಿರುದ್ಧವಾಗಿ ತಂದಂತಹ ತುರ್ತು ಪರಿಸ್ಥಿತಿಯನ್ನು ಅತ್ಯಂತ ಕಟುವಾಗಿ ಟೀಕಿಸಿದವರು ಪೇಜಾವರ ಶ್ರೀಗಳು. ನನ್ನ ಧಾರ್ಮಿಕ ಅನುಷ್ಠಾನಗಳಿಗೆ ಅಡೆಚಣೆಯಾದರೆ ಸೆರೆಮನೆ ಸೇರಲೂ ಸಿದ್ಧ ಎಂದು ಸಂವಿಧಾನ ವಿರೋಧಿ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದರು.

ಈ ಸಮ್ಮೇಳನದಲ್ಲಿ ಶ್ರೀಗಳು ನೀಡಿದ “ಹಿಂದವಃ ಸೋದರಾ ಸರ್ವೇ ನ ಹಿಂದು ಪತಿತೋ ಭವೇತ್” ಎಂಬ ಕರೆ ಮುಂದೆ ವಿಶ್ವ ಹಿಂದೂ ಪರಿಷತ್ತಿನ ಸಾರ್ವಕಾಲಿಕ ಮಂತ್ರವಾಯಿತು. 1984 – 86ರಲ್ಲಿ 3ನೇ ಪರ್ಯಾಯೋತ್ಸವವನ್ನು ನಡೆಸಿದ ಶ್ರೀಗಳು, ವಿಶ್ವ ಹಿಂದೂ ಪರಿಷತ್ತಿನ 2ನೇ ಅಖಿಲ ಭಾರತ ಧರ್ಮ ಸಂಸದ್ ಅಧಿವೇಶವನ್ನು ಉಡುಪಿಯಲ್ಲಿ ಆಯೋಜಿಸಿ, ಹಿಂದೂ ಧರ್ಮದ ರಾಷ್ಟ್ರೀಯ ಸಂತರಾಗಿ ದೇಶದ ಗಮನ ಸೆಳೆದರು.

ಈ ಅಧಿವೇಶನದಲ್ಲಿಯೇ ಆಯೋಧ್ಯೆಯ ರಾಮಮಂದಿರದ ಬೀಗವನ್ನು ಸರ್ಕಾರವೇ ತೆರೆಯಬೇಕು ಇಲ್ಲಾ ಭಕ್ತರು ಒಡೆಯಬೇಕು ಎಂಬ ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳಲಾಯಿತು. ಇದು ರಾಮಮಂದಿರ ಹೋರಾಟದ ಬಹುದೊಡ್ಡ ಮೈಲಿಗಲ್ಲಾಯಿತು.

2000 – 2002ರಲ್ಲಿ ತಮ್ಮ 4ನೇ ಪರ್ಯಾಯೋತ್ಸವವನ್ನು ಕೈಗೊಂಡ ಶ್ರೀಗಳು ಕೃಷ್ಣಮಠದ ಎಲ್ಲಾ ಸಭೆ ಸಮಾರಂಭಗಳನ್ನು ನಡೆಸುವುದಕ್ಕೆ ಅನುಕೂಲವಾಗುವಂತೆ ಸಾವಿರ ಮಂದಿ ಕೂರುವ ರಾಜಾಂಗಣವನ್ನು ನಿರ್ಮಿಸಿದರು. ಮಾತ್ರವಲ್ಲ ಈ ರಾಜಾಂಗಣದಲ್ಲಿ ಒಂದು ದಿನವೂ ಬಿಡದಂತೆ ಪ್ರತಿನಿತ್ಯವೂ ರಾಜ್ಯ – ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ವಾಂಸರ ಪ್ರವಚನಗಳು, ಆಧ್ಯಾತ್ಮಿಕ ಚರ್ಚೆಗಳು, ಸಭೆ ಸಮಾರಂಭಗಳು ನಡೆಯುವುದಕ್ಕೆ ಮೇಲ್ಪಂಕ್ತಿ ಹಾಕಿದರು.

2016 – 18ರಲ್ಲಿ ತಮ್ಮ 5ನೇ ಪರ್ಯಾಯೋತ್ಸವವನ್ನು ತಮ್ಮ 87ನೇ ವಯಸ್ಸಿನಲ್ಲಿ ಅತ್ಯಂತ ವೈಭವದಿಂದ ಪೂರೈಸಿದ ಪೇಜಾವರ ಶ್ರೀಗಳು ಆ ಮೂಲಕ ಅತೀ ಹೆಚ್ಚು ಪರ್ಯಾಯೋತ್ಸಗಳನ್ನು ನಡೆಸಿದ ಐತಿಹಾಸಿಕ ದಾಖಲೆಯನ್ನು ಬರೆದರು. ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಡಿಸೆಂಬರ್ 29, 2019 ರಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.