ಇಂದು ಜಯಂತಿ
ಅನಂತ ಅರಿತ ಮನುಷ್ಯ ಎಂದೇ ಗುರುತಿಸಿಕೊಂಡಿದ್ದ ಶ್ರೀನಿವಾಸ ರಾಮಾನುಜನ್ ಅವರು ಖ್ಯಾತ ಭಾರತೀಯ ಗಣಿತಶಾಸ್ತ್ರಜ್ಞ. ಅವರು ಗಣಿತದಲ್ಲಿ ಕಡಿಮೆ ಔಪಚಾರಿಕ ತರಬೇತಿ ಹೊಂದಿದ್ದರೂ ಸಹ ಗಣಿತಶಾಸ್ತ್ರಕ್ಕೆ ನೀಡಿರುವ ಕೊಡುಗೆ ಗಣನೀಯ. ಗಣಿತಕ್ಕೆ ಇವರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ 2012ರಿಂದ ಇವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನವಾಗಿ ಆಚರಿಸಲಾಗುತ್ತದೆ. ದೇಶದ ಖ್ಯಾತಿಯನ್ನು ವಿಶ್ವದೆತ್ತರಕ್ಕೆ ಪಸರಿಸಿದ ಕೀರ್ತಿಗೆ ಭಾಜನರಾಗಿರುವ ರಾಮಾನುಜನ್ ತಮ್ಮ ಜೀವನ ಪ್ರೇರಣೀಯ. ಇಂದು ಅವರ ಜಯಂತಿ.
ಆರಂಭಿಕ ಜೀವನ
ಶ್ರೀನಿವಾಸ ರಾಮಾನುಜನ್ ಅವರು ಡಿಸೆಂಬರ್ 22, 1887 ರಂದು ತಮಿಳುನಾಡಿನ ಈರೋಡ್‌ನಲ್ಲಿ ಜನಿಸಿದವರು. ತಂದೆ ಕೆ. ಶ್ರೀನಿವಾಸ ಅಯ್ಯಂಗಾರ್, ತಾಯಿ ಕೋಮಲತಮ್ಮಾಳ್ . 1903ರಲ್ಲಿ ಕುಂಭಕೋಣಂ ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅವರು ಗಣಿತವಲ್ಲದ ವಿಷಯಗಳಿಗೆ ತೋರುತ್ತಿದ್ದ ನಿರ್ಲಕ್ಷ್ಯದಿಂದಾಗಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿದ್ದರು. ನಂತರ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿದರು.
ವೃತ್ತಿ
ಮುಂದಿನ ಕೆಲವು ವರ್ಷಗಳವರೆಗೆ ರಾಮಾನುಜನ್ ಗಣಿತಶಾಸ್ತ್ರದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಿದರು.1909ರಲ್ಲಿ ಅವರು ಜರ್ನಲ್ ಆಫ್ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯಲ್ಲಿ ಕೃತಿಗಳನ್ನು ಪ್ರಕಟಿಸಲು ಪ್ರಾರಂಭಿಸಿದರು. ಇದು ವಿಶ್ವವಿದ್ಯಾನಿಲಯದ ಶಿಕ್ಷಣದ ಕೊರತೆಯ ಹೊರತಾಗಿಯೂ ಅವರ ಕೆಲಸಕ್ಕೆ ಮನ್ನಣೆಯನ್ನು ಗಳಿಸಿತು. ಉದ್ಯೋಗದ ಅಗತ್ಯವಿದ್ದ ರಾಮಾನುಜನ್ 1912ರಲ್ಲಿ ಗುಮಾಸ್ತರಾದರು. ಜೊತೆಗೆ ಗಣಿತಶಾಸ್ತ್ರದ ಸಂಶೊಧನೆಯಲ್ಲೂ ತೊಡಗಿಕೊಂಡಿದ್ದರು. ಗಣಿತ ಕ್ಷೇತ್ರದ ಸಂಶೋಧನೆ ರಾಮಾನುಜನ್ ಅವರಿಗೆ ಹೆಚ್ಚು ಮನ್ನಣೆ ದೊರೆಯುವಂತೆ ಮಾಡಿತು.
ಶ್ರೀನಿವಾಸ ರಾಮಾನುಜನ್ ಜೀವನದ ಪ್ರಮುಖ ಘಟ್ಟಗಳು
ಭಾರತದ ಸಂಶೊಧನಾ ಪತ್ರಿಕೆಗಳಲ್ಲಿ ತಮ್ಮ ಸಂಶೊಧನೆಗಳನ್ನು ಪ್ರಕಟಿಸಿ ಯುರೋಪನ ಗಣಿತ ತಜ್ಞರ ಗಮನವನ್ನು ಸೆಳೆದರು. ನಂತರ ಅವರು ಶೇಷು ಅಯ್ಯರ್ ಎಂಬ ಹಿತೈಷಿ ಮೂಲಕ ಇಂಗ್ಲೆಂಡಿನ ಪ್ರಸಿದ್ಧ ಗಣಿತ ತಜ್ಞರಾದ ಜಿ.ಹೆಚ್ ಹಾರ್ಡಿಯವರಿಗೆ 1913ರಲ್ಲಿ ತಮ್ಮ ಸಿದ್ಧಾಂತಗಳನ್ನು ಮಂಡಿಸಿ ಪತ್ರ ಬರೆದರು. ಹಾರ್ಡಿ ಮೊದಲು ರಾಮಾನುಜನರ ಮೇಲೆ ಸಂಶಯ, ಅಪನಂಬಿಕೆ ತೋರಿದರೂ ಸಹ ಅವರ ಪ್ರತಿಭೆಗೆ ಮನಸೋತು ಅವರನ್ನು ಇಂಗ್ಲೆಂಡಿಗೆ ಆಹ್ವಾನ ನೀಡಿದ್ದರು. 1914ರಲ್ಲಿ ರಾಮಾನುಜರು ಇಂಗ್ಲೆಂಡ್ ಗೆ ಹೋಗುತ್ತಾರೆ. ಅಲ್ಲಿ ಅವರು ಹಾರ್ಡಿ ಅವರ ಸಹಾಯದಿಂದ ಸುಮಾರು 32 ಉತ್ತಮ ಲೇಖನಗಳನ್ನು ಪ್ರಕಟಿಸಿದರು. ರಾಮಾನುಜರ ಕೀರ್ತಿ ಇಂಗ್ಲೆಂಡಿನಲ್ಲೆಲ್ಲ ಹಬ್ಬಿ ಫೆಬ್ರವರಿ 28, 1918 ರಂದು ರಾಯಲ್ ಸೊಸೈಟಿಯ ಫೆಲೊಷಿಪ್ ಗೆ ಪಾತ್ರರಾದರು. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಭಾರತೀಯ ಪ್ರಜೆ ಎಂಬ ಹೆಗ್ಗಳಿಕೆಯನ್ನು ಗಳಿಸಿದವರು.
ರಾಮಾನುಜನ್ ಅವರು ಗಣಿತಜ್ಞ ಜಿ. ಎಚ್. ಹಾರ್ಡಿ ಸಹಯೋಗದಿಂದ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು. ಕೇಂಬ್ರಿಡ್ಜ್‌ನಲ್ಲಿದ್ದ ಸಮಯದಲ್ಲಿ ರಾಮಾನುಜನ್ “ಮಾಕ್ ಥೀಟಾ ಫಂಕ್ಷನ್ಸ್” ಎಂದು ಕರೆಯಲ್ಪಡುವ ಹೊಸ ವರ್ಗದ ಸಂಖ್ಯೆಗಳನ್ನು ಒಳಗೊಂಡಂತೆ ಹಲವಾರು ಪ್ರಮುಖ ಆವಿಷ್ಕಾರಗಳನ್ನು ಮಾಡಿದರು. ಹೈಪರ್ಜಿಯೊಮೆಟ್ರಿಕ್ ಸರಣಿಗಾಗಿ ಸುಧಾರಿತ ಸೂತ್ರಗಳನ್ನು ಅಭಿವೃದ್ಧಿಪಡಿಸಿದರು. ಜೊತೆಗೆ ವಿವಿಧ ಸರಣಿಗಳ ನಡುವಿನ ಸಂಬಂಧಗಳನ್ನು ಕಂಡುಹಿಡಿದರು.ರಾಮಾನುಜನ್ ಅವರ ಕೆಲಸವು ಗಣಿತದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದೆ.
ಪ್ರಶಸ್ತಿ
ರಾಮಾನುಜನ್ ಅವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. 1918ರಲ್ಲಿ ರಾಯಲ್ ಸೊಸೈಟಿಯ ಫೆಲೋ ಪ್ರಶಸ್ತಿ ಹಾಗೂ 1918ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನ ಫೆಲೋ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ವಿದೇಶದಲ್ಲಿ ರಾಮಾನುಜನರಿಗೆ ಆರೋಗ್ಯ ಕ್ಷೀಣಿಸಿತ್ತು. ಜೊತೆಗೆ ಜೀವಸತ್ವಗಳ ಕೊರತೆಯಿಂದ ಹಾಗೂ ಕ್ಷಯ ರೋಗದಿಂದ ಬಳಲುತ್ತಿದ್ದರು. ನಂತರ ರಾಮಾನುಜನರು ಅತೀವ ಅನಾರೋಗ್ಯದಿಂದ 1919ರಲ್ಲಿ ಭಾರತಕ್ಕೆ ವಾಪಸ್ ಆಗುತ್ತಾರೆ. ಕಾಲಾಂತರದಲ್ಲಿ ಕುಂಭಕೋಣಂನಲ್ಲಿ ಏಪ್ರಿಲ್ 26, 1920ರಲ್ಲಿ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅಸ್ತಂಗತರಾದರು.