ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ
- ಲೇಖಕರು: ಗಣೇಶ್ ವಂದಗದ್ದೆ, ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳು
ಗೋಪಾಲಕೃಷ್ಣ ಅಡಿಗರು ಜನಿಸಿದ್ದು ದಿನಾಂಕ 18/02/1918ರಂದು ದಕ್ಷಿಣಕನ್ನಡ ಜಿಲ್ಲೆಯ ಮೊಗೇರಿ ಎಂಬ ಸಣ್ಣ ಹಳ್ಳಿಯಲ್ಲಿ. ಅಡಿಗರದ್ದು ಪುರೋಹಿತರ ಮನೆತನ. ತಂದೆ ರಾಮಪ್ಪ ಅಡಿಗರು ಮತ್ತು ತಾಯಿ ಗೌರಮ್ಮ. ಜ್ಯೋತಿಷ್ಯ ಹೇಳುವುದು, ಪೌರೋಹಿತ್ಯ ಮತ್ತು ವ್ಯವಸಾಯ ಈ ಕುಟುಂಬದ ಮುಖ್ಯ ಉದ್ಯೋಗಗಳಾಗಿದ್ದವು. ಜೊತೆಜೊತೆಯಲ್ಲಿ ಅಡಿಗರ ಕುಟುಂಬದವರು ಪಂಚಾಂಗವನ್ನು ಕೂಡಾ ರಚನೆ ಮಾಡುತ್ತಾರೆ. ಇಂದಿಗೂ ಮೊಗೇರಿ ಪಂಚಾಂಗವೆಂದರೆ ಆ ಭಾಗದ ಜನಕ್ಕೆ ತುಂಬಾ ಅಚ್ಚುಮೆಚ್ಚಿನ ಪಂಚಾಂಗ. ರಾಮಪ್ಪ ಅಡಿಗರೇ ಈ ಮೊಗೇರಿ ಪಂಚಾಂಗದ ಸಂಸ್ಥಾಪಕರು. ಅಡಿಗರ ತಂದೆಯವರು ಕನ್ನಡ ಹಾಗೂ ಸಂಸ್ಕೃತ ಎರಡರಲ್ಲೂ ಪದ್ಯಗಳನ್ನು ರಚಿಸಬಲ್ಲವರಾಗಿದ್ದರು. ಅವರ ಚಿಕ್ಕಪ್ಪ ಪದ್ಮನಾಭ ಅಡಿಗರೂ ಕೂಡಾ ಕಾವ್ಯದಲ್ಲಿ ಆಸಕ್ತಿಯುಳ್ಳವರಾಗಿದ್ದರು. ಅಡಿಗರ ಅಜ್ಜಿ ಹೊಸಕೋಟೆಯ ಹೆಬ್ಬಾರರ ಮನೆತನದವರು. ಆ ಅಜ್ಜಿಯ ತಮ್ಮಂದಿರಾದ ವೆಂಕಟರಮಣ ಹೆಬ್ಬಾರ್, ಹಿರಿಯಣ್ಣ ಹೆಬ್ಬಾರ್ ಮತ್ತು ಸೀತಾರಾಮ ಹೆಬ್ಬಾರ್ ಎಲ್ಲರೂ ಪದ್ಯ ರಚನೆಯಯಲ್ಲಿ ತುಂಬಾ ಆಸಕ್ತಿ ಹೊಂದಿದವ ರಾಗಿದ್ದರು. ಅಂತೆಯೇ ಆ ಅಜ್ಜಿಯ ತಂಗಿ ಸರಸ್ವತಮ್ಮ ಎನ್ನುವವರು ಅನೇಕ ಹಾಡುಗಳನ್ನು ರಚಿಸಿದ್ದರಂತೆ. ಸರಸ್ವತಮ್ಮನ ಮಗಳು ಮೂಕಮ್ಮ ಎಂಬುವವರು ಕೂಡಾ ಅನೇಕ ಹಾಡು ನುಡಿಗಳನ್ನು ರಚಿಸಿದ್ದಾರೆ ಹಾಗೂ ಆ ಹಾಡುಗಳು ’ಮೂಕಜ್ಜಿಯ ಹಾಡುಗಳು’ಎಂಬ ಪುಸ್ತಕದ ರೂಪದಲ್ಲಿ ಹೊರಬಂದಿದೆ. ಇಂತಹ ವಾತಾವರಣದಲ್ಲಿ ಬೆಳೆದ ಅಡಿಗರಿಗೆ ಸಹಜವಾಗಿ ಪದ್ಯ ರಚನೆ ಮಾಡುವ ಪ್ರೇರಣೆ ವಂಶಪಾರಂಪರ್ಯವಾಗಿ ಬಂದಿರಬೇಕು ಎನಿಸುತ್ತದೆ.
ಅಡಿಗರು ಕುಂದಾಪುರ ಮತ್ತು ಬೈಂದೂರುಗಳಲ್ಲಿ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸಗಳನ್ನು ಮುಗಿಸಿದರು. ಮುಂದೆ ಮೈಸೂರಿಗೆ ಬಂದು ತಮ್ಮ ಆನರ್ಸ್ ಪದವಿಯನ್ನು ಮುಗಿಸಿದರು. ನಂತರ ಇವರು ಶಿಕ್ಷಕರಾಗಿ ಕೆಲಕಾಲ ಕೆಲಸಮಾಡಿದರು. ಸರ್ಕಾರಿ ಸೇವೆಗೆ ಆಯ್ಕೆಯಾದರೂ ಅದನ್ನು ಒಪ್ಪಿಕೊಳ್ಳದೆ ಶಿಕ್ಷಕ ವೃತಿಯಲ್ಲೇ ಮುಂದುವರಿದರು.
ಅಡಿಗರು ಬರೆಯುವ ಹವ್ಯಾಸವನ್ನು ತಮ್ಮ ಪ್ರಾಥಮಿಕ ಹಂತದಲ್ಲೇ ಪ್ರಾರಂಭಿಸಿದ್ದರು. ಆರಂಭದಲ್ಲಿ ಇವರು ಕಡೆಂಗೋಡ್ಲು ಶಂಕರಭಟ್ಟರ ಕವನಗಳನ್ನು ಹಾಗೂ ಮಾಸ್ತಿಯವರ ಕತೆಗಳನ್ನು ಓದಲು ಪ್ರಾರಂಭಿಸಿದರು. ಈ ಗದ್ಯಪದ್ಯಗಳಿಂದ ತಾವು ಪ್ರಭಾವಿತರಾದವರೆಂದು ಅವರೇ ಹೇಳಿಕೊಂಡಿದ್ದಾರೆ. ಅದರ ಜೊತೆಯಲ್ಲಿ ಅವರ ಮನೆಯ ವಾತಾವರಣವೂ ಕೂಡಾ ಅವರನ್ನು ಕವನ ಬರೆಯುವಂತೆ ಪ್ರೇರೇಪಿಸಿರ ಬಹುದು.
ಅಷ್ಟೇ ಅಲ್ಲದೆ ಅಡಿಗರ ಆತ್ಮಕತೆಯನ್ನು ನಾವು ಓದುತ್ತಾ ಹೋದರೆ ಮೊಗೇರಿಯ ಹಾಗೂ ಅದರ ಸುತ್ತಮುತ್ತಲಿನ ವಾತಾವರಣ, ಪ್ರಕೃತಿಯ ಸೊಬಗು, ಗದ್ದೆಯಂಚಿನ ಓಡಾಟ, ಸಮುದ್ರದ ಉಬ್ಬರವಿಳಿತ ಕಣ್ಣಿಗೆ ಕಾಣಿಸಿದರೂ ಕೈಗೆ ಸಿಕ್ಕದ, ಅರಿವಿಗೆ ಸಂಪೂರ್ಣವಾಗಿ ಇಳಿಯದ, ಹೊಸಹೊಸ ಲೋಕಗಳು ಅನೇಕ ಘಟನೆಗಳು ಅವರ ಬದುಕಿನುದ್ದಕ್ಕೂ ಅಂತರಂಗದಲ್ಲಿ ನೆಲಸಿ ಕಾವ್ಯಕ್ಕೆ ಹಿನ್ನೆಲೆಯನ್ನು ಒದಗಿಸಿರಬಹುದು. ಇದರ ಜೊತೆಯಲ್ಲಿ ಕರಾವಳಿಯ ಅತ್ಯಂತ ಜನಪ್ರಿಯ ಸಾಂಸ್ಕೃತಿಕ ಮಾಧ್ಯಮವಾದ ಯಕ್ಷಗಾನ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಎಲ್ಲೇ ಯಕ್ಷಗಾನ ಬಯಲಾಟವಿರಲಿ ಅಡಿಗರು ತಮ್ಮ ಮನೆಯವರೊಂದಿಗೆ ಹೋಗಿ ನೋಡಿಕೊಂಡು ಬರುತ್ತಿದ್ದರು. ಅವರ ಆಸಕ್ತಿಗೆ ತಕ್ಕ ಪ್ರೋತ್ಸಾಹವೂ ಕೂಡಾ ಮನೆಯಲ್ಲಿ ಸಿಗುತ್ತಿತ್ತು. ತಾಳಮದ್ದಳೆ ಯಕ್ಷಗಾನದಂತಹ ಇನ್ನೊಂದು ಕಾರ್ಯಕ್ರಮ. ಇಲ್ಲಿ ಪಾತ್ರಗಳು ಕುಳಿತುಕೊಂಡು ಅರ್ಥ ಹೇಳುತ್ತಾರೆ ವೇಷ ಹಾಕುವುದಿಲ್ಲ, ಕುಣಿಯುವುದಿಲ್ಲ. ಕಲಾವಿದರು ಮಾತಿನ ಮೂಲಕ ಪಾತ್ರಗಳನ್ನು ಕಡೆಯುತ್ತಾರೆ. ಅದರಲ್ಲಿ ಅಡಿಗರಿಗೆ ಕೇವಲ ಆಸಕ್ತಿ ಮಾತ್ರವಲ್ಲ ಅಗಾಗ್ಗೆ ಕಲಾಪದಲ್ಲಿ ಭಾಗವಹಿಸುತ್ತಲೂ ಇದ್ದರಂತೆ.
ಮೈಸೂರಿಗೆ ಬಂದಮೇಲೆ ಅಡಿಗರ ಬರವಣಿಗೆ ಅವಿರತವಾಗಿ ಮುಂದುವರಿಯುತ್ತಲೇ ಹೋಯಿತು. ಬೇಂದ್ರೆಯವರ ಕವನಗಳು ಅಡಿಗರ ಮೇಲೆ ಹೆಚ್ಚಿನ ಪ್ರಭಾವನ್ನು ಬೀರುತ್ತಾ ಹೋದವು. ಅದು ಎಷ್ಟೊಂದು ಪ್ರಭಾವಯುತವಾಗಿತ್ತೆಂದರೆ ಅವರಿಗೆ ಅದರಿಂದ ಬಿಡಿಸಿಕೊಂಡು ತನ್ನ ತನವನ್ನು ಉಳಿಸಿಕೊಳ್ಳುವುದು ಅಸಾಧ್ಯವೆಂದು ತೋರತೊಡಗಿತು.ಅದು ಅವರು ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಮಾಡುತ್ತಿದ್ದ ಕಾಲ. ಹಾಗಾಗಿ ಬೇಂದ್ರೆಯವರಿಂದ ಎಷ್ಟೇ ಪ್ರಭಾವಿತರಾದರೂ, ಎಷ್ಟೇ ಆನಂದವನ್ನು ಅನುಭವಿಸಿದರೂ, ಅದೇ ಮಾರ್ಗದಲ್ಲಿ ಮುಂದುವರಿಯಲು ಅವರಿಗೆ ಅಸಾಧ್ಯವೆನಿಸಿ ತೊಡಗಿತು. ಹಾಗಾಗಿ ಅವರು ಕೆಲವು ತಿಂಗಳುಗಳ ಕಾಲ ಕವಿತೆಗಳನ್ನು ಬರೆಯುವುದನ್ನೇ ನಿಲ್ಲಿಸಿಬಿಟ್ಟರು. ಹಾಗಾಗಿ ಅವರು ಹೇಳುತ್ತಾರೆ,
ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಭಿನ್ನವಾಗಿದೆ ಮನವು: ಬಗೆಯೊಳಗನೇ ತೆರೆದು
ನನ್ನ ನುಡಿಯಲಿ ಬಣ್ಣಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ
ಹಾಗಾಗಿ ಅದೇ ಹುರುಪಿನಲ್ಲೇ ಅವರು ಮುಂದುವರಿದು ತಮ್ಮ ಕವನ ಸಂಕಲನ ‘ ಭಾವ ತರಂಗ’ವನ್ನು ಪ್ರಕಟಿಸಿದರು. ಅದಕ್ಕೆ ಬೇಂದ್ರೆಯವರೇ ಮುನ್ನುಡಿ ಬರೆಯುತ್ತ ಅಡಿಗರ ನುಡಿಯಲ್ಲಿ ಕೆಚ್ಚಿದೆ, ಲಾಲಿತ್ಯವಿದೆ, ವಿಧಿಗೆ ಇದಿರಾಗುವ ಅನಿರ್ವಿಣ್ಣ ಉತ್ಸಾಹವಿದೆ ಎಂದು ಆಶೀರ್ವದಿಸಿದುದು ಅವರ ಕಿರೀಟಕ್ಕೊಂದು ಗರಿಯನ್ನು ಏರಿಸಿದಂತಾಯಿತು. ಹೀಗೆ ಬೇಂದ್ರೆಯವರ ಆಶೀರ್ವಾದವನ್ನು ಹೊತ್ತ ‘ಭಾವತರಂಗ’ ಹೊಸ ಮಾರ್ಗದಲ್ಲಿ ಅಡಿಗರ ಮೊದಲ ಹೆಜ್ಜೆಯಾಯಿತು. ಅಲ್ಲಿಂದ ಮುಂದೆ ಅವರು ಹಿಂತಿರುಗಿ ನೋಡಲೇ ಇಲ್ಲ. ಒಂದಾದ ಮೇಲೆ ಒಂದರಂತೆ ಅನನ್ಯವಾದ ಕವನ ಸಂಕಲನಗಳಾದ “ನಡೆದುಬಂದ ದಾರಿಯಲ್ಲಿ”, “ಚಂಡೆಮದ್ದಳೆ”, “ಭೂಮಿಗೀತ”, “ವರ್ಧಮಾನ”, “ಬತ್ತಲಾರದ ಗಂಗೆ”, “ಇದನ್ನು ಬಯಸಿರಲಿಲ್ಲ”,” ಮೂಲಕ ಮಹಾಶಯರು”, “ಚಿಂತಾಮಣಿಯಲ್ಲಿ ಕಂಡ ಮುಖ”, “ಸುವರ್ಣ ಪುತ್ತಳಿ” ಮುಂತಾದ ಕುಸುಮಗಳು ಅವರ ಲೇಖನಿಯಿಂದ ಹೊರಚಿಮ್ಮಿದವು. ಈ ಎಲ್ಲಾ ಸಂಕಲನಗಳು ಸಾಹಿತ್ಯ ಲೋಕದಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿದವು ಎಂದು ಹೇಳಬಹುದು.
ಅಡಿಗರ ಸಾಹಿತ್ಯ ಅರ್ಥವಾಗುವುದಿಲ್ಲ ಎಂಬ ಒಂದು ಮಾತಿದೆ. ಅದಕ್ಕೆ ಅಡಿಗರು ಒಂದು ಕಡೆ ಅರ್ಥವಾಗುವ ಹಾಗೆ ಅಲ್ಲ, ಅರ್ಥವಿರುವ ಹಾಗೆ ಬರೆಯಬೇಕು ಎನ್ನುತ್ತಾರೆ. ಅವರು ಒಮ್ಮೆ ಅನಂತಮೂರ್ತಿಯವರ ಜೊತೆಯ ಸಂವಾದದಲ್ಲಿ, ‘ಸಾರ್, ನೀವು ನನ್ನನ್ನೇಕೆ ಈ ಕೃತಿ “ಭೂಮಿಗೀತ”ಕ್ಕೆ ಮುನ್ನುಡಿ ಬರೆಯಲು ಆರಿಸಿದರಿ?’ ಎಂದು ಕೆಳುತ್ತಾರೆ, ಅದಕ್ಕೆ ಅಡಿಗರು. ’ಇಡೀ ಕರ್ನಾಟಕದಲ್ಲಿ ಈ ನನ್ನ ಕವನಗಳು ಅರ್ಥವಾಗಿರುವುದು ಕೇವಲ ಅರ್ಧ ಡಜನ್ ಮಂದಿಗೆ ಮಾತ್ರ. ಅದರಲ್ಲಿ ನೀವೂ ಒಬ್ಬರು ಅದಕ್ಕಾಗಿ ನಿಮ್ಮನ್ನೇ ಆರಿಸಿದೆ’ ಎನ್ನುತ್ತ ಹಾಸ್ಯ ಚಟಾಕಿಯನ್ನು ಹಾರಿಸುತ್ತಾರೆ.
ಅವರು ಕಾವ್ಯಗಳ ಬಗ್ಗೆ ಬರೆಯುತ್ತ ಬಿ.ವಿ.ಕೆದಿಲಾಯರವರು ಹೀಗೆ ಹೇಳುತ್ತಾರೆ.”ಅಡಿಗರ ಕಾವ್ಯಗಳು ರಂಜಿಸುವ ಅಮಲು ಬರಿಸುವ ಕಾವ್ಯಗಳಲ್ಲ. ಅದು ಓದುಗನ ಮನಸ್ಸನ್ನು ಕೆಣಕುವ, ಕಾಡುವ ದಿಗ್ಭ್ರಮೆಗೊಳಿಸುವ, ಸವಾಲು ಹಾಕುವ ಚಿಂತನೆಗೆ ಒಳಪಡಿಸುವ, ಅಂತರಂಗವನ್ನು ಅಲುಗಾಡಿಸುವ ಕಾವ್ಯ. ಅವುಗಳನ್ನು ಓದುವಾಗ ಓದುಗನೂ ಸಾಕಷ್ಟು ತಯಾರಿ ನಡೆಸಿರಬೇಕು. ಒಂದೇ ಓದಿಗೆ ಅವು ದಕ್ಕುವಂತಹ ಕಾವ್ಯಗಳಲ್ಲ. ಮತ್ತೆ ಮತ್ತೆ ಓದಿದಾಗ, ಯೋಚಿಸಿದಾಗ ಮಾತ್ರ ಅರ್ಥವಾಗಲು ಸಾಧ್ಯ. ಬೇರೆ ಕಾಲಗಳಲ್ಲಿ ಓದಿದಾಗ ಅವೇ ಸಾಲುಗಳು ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ. ಅಡಿಗರ ಕಾವ್ಯಗಳು ಅಡಾಲಸಂಟ್ ಕಾವ್ಯವಲ್ಲ, ಅವು ಪ್ರೌಢ, ಪ್ರಬುದ್ಧ, ಪರಿಪಕ್ವ ಮನಸ್ಸಿನ ಕಾವ್ಯಗಳು. ಅವನ್ನು ಆಸ್ವಾದಿಸಲು ಸಾಕಷ್ಟು ಸಂವೇದನೆಯ ಪ್ರೌಢತೆ, ಅನುಭವದ ಹಿನ್ನೆಲ ಅಗತ್ಯ. ’ಕೂಪ ಮಂಡೂಕ’ದಂಥ ಕವನವನ್ನು ಆಸ್ವಾದಿಸಲು ಬಹುಶಃ ಓದುಗನೂ ಪ್ರೌಢ ವಯಸ್ಸಿನವನಾಗಬೇಕಾಗುತ್ತದೆ. ಕೆಲವು ಬಾರಿ ಓದಿದಾಗಲೂ ಕವನ ಸಂಪೂರ್ಣವಾಗಿ ಕೈಗೆ ದಕ್ಕುವುದಿಲ್ಲ. ಹಾಗೆಂದ ಮಾತ್ರಕ್ಕೆ ಅದು ಸಾಮಾನ್ಯರ ಪಾಲಿಗೆ ಮೀರಿದ ಕಾವ್ಯ ಎಂದರ್ಥವಲ್ಲ.ಅದಕ್ಕೆ ಸ್ವಲ್ಪಮಟ್ಟಿನ ಸಿದ್ಧತೆ ಹಾಗೂ ಪ್ರಯತ್ನ ಅನಿವಾರ್ಯ. ಇದು ಎಲ್ಲಾ ಕಾವ್ಯಗಳಿಗೂ ಅನ್ವಯಿಸುವ ಮಾತು. ಅದು ಕಾವ್ಯದ ತಪ್ಪಲ್ಲ. ಗೌರೀಶಂಕರವನ್ನೇರಲು ಎಲ್ಲರಿಗೂ ಸಾಧ್ಯವಾಗದು. ಅದರೆ ಅದು ಆ ಶಿಖರದ ತಪ್ಪಲ್ಲ.”
ಅಡಿಗರು ಸಾಹಿತ್ಯ ಲೋಕದ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಚಾಪನ್ನು ಮೂಡಿಸಿದ್ದಾರೆ. ಅದು ವಿಮರ್ಶಾರಂಗವಿರಬಹುದು ಗದ್ಯಮಾರ್ಗವಿರಬಹುದು, ಅನುವಾದಿತ ಕೃತಿಗಳಿರಬಹುದು ಅಥವಾ ಕಾದಂಬರಿ ಕ್ಷೇತ್ರಗಳಿರಬಹುದು. ಅವರ ಅನುವಾದಿತ ಕೃತಿಗಳನ್ನು ಓದುತ್ತಾ ಹೋದರೆ ಅವುಗಳು ಅನುವಾದಿತ ಕೃತಿಗಳು ಎನಿಸುವುದೇ ಇಲ್ಲ, ಮೂಲ ಕೃತಿಗಳನ್ನೇ ಓದುತ್ತಿದ್ದೇವೆಯೋ ಏನೋ ಅನಿಸುತ್ತದೆ. ಅವರ ಗದ್ಯಗಳನ್ನು ಓದುತ್ತಾ ಹೋದರೆ ಅವುಗಳು ಕೂಡಾ ಅವರ ಕಾವ್ಯಗಳಷ್ಟೇ ಆಳವಾಗಿ ಓದುಗನನ್ನು ಚಿಂತಿಸುವಂತೆ ಮಾಡುತ್ತವೆ.
ಅಡಿಗರು ಬರೆದಿರುವುದು ಎರಡೇ ಕಾದಂಬರಿಗಳಾದರೂ ಆ ಕಾದಬಂರಿಗಳು ಅವರನ್ನು ಒಬ್ಬ ಶ್ರೇಷ್ಠ ಕಾದಂಬರಿಕಾರರನ್ನಾಗಿ ಮಾಡಿವೆ ಎಂದರೆ ಅತಿಶಯೋಕ್ತಿ ಯಾಗಲಿಕ್ಕಿಲ್ಲ. “ಅನಾಥೆ” ಕಾದಂಬರಿಯಲ್ಲಿ ಅಡಿಗರು ತಾವು ಬದುಕಿ ಬೆಳೆದು ಬಂದ ಆ ಕುಂದಾಪುರದ ಆಜುಬಾಜುಗಳನ್ನು ಅತ್ಯಂತ ಜೀವಂತವಾಗಿ ಚಿತ್ರಿಸುತ್ತಾರೆ. “ಅನಾಥೆ” ಎಂಬ ಶೀರ್ಷಿಕೆ ಅದಕ್ಕೆ ಎಷ್ಟು ಅರ್ಥಪೂರ್ಣವಾಗಿದೆ ಎಂದರೆ, ಕಾದಂಬರಿಯ ನಾಯಕಿ ಕೊನೆಯಲ್ಲಿ ಅನಾಥಳಾಗುತ್ತಾಳೆ, ಅವಳನ್ನು ಕಳೆದುಕೊಂಡ ಶೀನಪ್ಪ ಅನಾಥನಾಗುತ್ತಾನೆ, ಮಗಳನ್ನೂ, ಗಂಡನನ್ನೂ ಕಳೆದುಕೊಂಡ ಸೀತಮ್ಮ ಅನಾಥಳಾಗುತ್ತಾಳೆ, ಎಲ್ಲವನ್ನೂ ಕಳೆದುಕೊಂಡ ಸುಬ್ಬ ಅನಾಥನಾಗುತ್ತಾನೆ. ಶಾರದೆಯನ್ನು ಕಳೆದುಕೊಂಡ ಶಾಸ್ತ್ರಿಯೂ ಅನಾಥಾಗುತ್ತಾನೆ. ಕಾದಂಬರಿಯನ್ನು ಓದಿಮುಗಿಸಿದ ಮೇಲೆ ಅಡಿಗರನ್ನು ಕಳೆದುಕೊಂಡ ನಾವೂ ಒಂದು ರೀತಿಯಲ್ಲಿ ಅನಾಥರಾಗುತ್ತೇವೆ.
ಕೆ.ಜಿ.ಒಡೆಯರ್‌ರವರ ನೇತೃತ್ವದಲ್ಲಿನ ಸಾಗರದ ಮಲೆನಾಡು ಪ್ರತಿಷ್ಠಾನದ ಆಡಳಿತಮಂಡಳಿ ಅಡಿಗರನ್ನು ಒಪ್ಪಿಸಿ ಸಾಗರದ ಕಾಲೇಜಿಗೆ ಪ್ರಾಂಶುಪಾಲರಾಗಿ ತರುವುದರಲ್ಲಿ ಯಶಸ್ವಿಯಾಯಿತು. ಅಡಿಗರು ಯಾವ ಕೆಲಸವನ್ನೇ ಮಾಡಲಿ ಅದರಲ್ಲಿ ಶಿಸ್ತು, ಪ್ರಾಮಾಣಿಕತೆ, ನಿಷ್ಠೆ, ಸೃಜನಶೀಲತೆ ಮುಂತಾದ ಗುಣಗಳು ಎದ್ದು ಕಾಣುತ್ತಿದ್ದವು. ಹಾಗಾಗಿ ಅವರು ಬರುವಾಗಲೇ ಚಂದ್ರಶೇಖರ ಕಂಬಾರ, ಜಿ.ಕೆ.ಗೋವಿಂದ ರಾವ್, ಶಾಂತಾರಾಮ್, ರೇಣುಕಪ್ಪ ಗೌಡ, ಶ್ರೀನಿವಾಸ್ ಮುಂತಾದ ನುರಿತ ಪ್ರಾಧ್ಯಾಪಕರುಗಳನ್ನು ತಮ್ಮ ಜೊತೆಯಲ್ಲಿಯೇ ಕರೆತಂದರು. ವಿದ್ಯಾರ್ಥಿಗಳಾಗಿ ನಾವು ಕಾಲೇಜನ್ನು ಪ್ರವೇಶಿಸಿದಾಗ ಅತ್ಮೀಯ ವಾತಾವಾರಣದ ಜೊತೆಗೆ ಈ ನುರಿತ ಅಧ್ಯಾಪಕರ ಬೋಧನೆಯ ರಸದೌತಣವನ್ನು ಸವಿಯತೊಡಗಿದೆವು. ಅಡಿಗರು ವಿದ್ಯಾರ್ಥಿಗಳ ಮನಸೆಳೆದದ್ದು ಒಬ್ಬ ಅತ್ಯುತ್ತಮ ಶಿಕ್ಷಕರಾಗಿ. ಅವರ ತರಗತಿಗಳೆಂದರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಆಸಕ್ತಿ. ವಾರದಲ್ಲಿ ಸಿಗುವ ಅವರ ಒಂದೋ ಎರಡೋ ಪೀರಿಯಡ್‌ಗಳಿಗಾಗಿ ವಿದ್ಯಾರ್ಥಿಗಳು ತುಂಬಾ ಕಾತುರತೆಯಿಂದ ಕಾದು ಕುಳಿತಿರುತ್ತಿದ್ದರು. ಅವರ ಬಗ್ಗೆ ಭಯವಿದ್ದರೂ ಅಷ್ಟೇ ಪ್ರೀತಿಯಿರುತ್ತಿತ್ತು. ಸ್ವಾಮಿ ವಿವೇಕಾನಂದರು ಹೇಳುವಂತೆ, Love is the only medium through which Education can be taught. ಎನ್ನುವುದು ಅವರ ಧ್ಯೇಯವಾಗಿತ್ತು. ಅವರು ಬೋಧಿಸುತ್ತಿದ್ದ ಮಾಧ್ಯಮ ಖಂಡಿತವಾಗಿಯೂ ಪ್ರೀತಿಯ ಮಾಧ್ಯಮವಾಗಿತ್ತು. ವಿದ್ಯಾರ್ಥಿಗಳ ಹಾಗೂ ಅವರ ನಡುವೆ ಒಂದು ಅವ್ಯಕ್ತವಾದ ಬಾಂಧವ್ಯವಿತ್ತು ಪ್ರೀತಿಯಿತ್ತು. ಅವರು ಅಷ್ಟೊಂದು ಆಸಕ್ತಿಯಿಂದ ಬೋಧಿಸುತ್ತಿದ್ದುದರಿಂದ ಇಂಗ್ಲೀಷ್‌ನಂತಹ ವಿಷಯವೂ ಕೂಡಾ ನೀರು ಕುಡಿದಷ್ಟು ಸುಲಭವಾಗಿ ಅರ್ಥವಾಗುತ್ತಿತ್ತು. ತರಗತಿಗಳಲ್ಲಾಗಲೀ ವರಾಂಡದಲ್ಲಾಗಲೀ ಅಥವಾ ಸಭೆ ಸಮಾರಂಭಗಳಲ್ಲಾಗಲೀ ಅಡಿಗರಿದ್ದಾರೆ ಎಂದರೆ ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ವರ್ತಿಸುತ್ತಿದ್ದರು.
ಅವರೆಂದೂ ವಿದ್ಯಾರ್ಥಿಗಳ ಅವಿಧೇಯತೆಯನ್ನಾಗಲೀ ಅಥವಾ ಅಸಭ್ಯ ವರ್ತನೆಯನ್ನಾಗಲೀ ಸಹಿಸುತ್ತಿರಲಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಿಯೇ ಬಿಡುತ್ತಿದ್ದರು. ಹೀಗೆ ಒಬ್ಬ ವಿದ್ಯಾರ್ಥಿಯನ್ನು ಹೊರಹಾಕಿದಾಗ ಅವನು ಎಷ್ಟೇ ಬಂದು ಬೇಡಿಕೊಂಡರೂ ಅವನನ್ನು ಪುನಃ ಕಾಲೇಜಿಗೆ ಸೇರಿಸಲೇ ಇಲ್ಲ. ಅದರಲ್ಲಿ ರಾಜಿಯ ಪ್ರಶ್ನೆಯೇ ಇರಲಿಲ್ಲ. ಹೊರಗಿನಿಂದಾಗಲೀ ಅಥವಾ ಆಡಳಿತ ಮಂಡಳಿಯಿಂದಾಗಲೀ ಎಂತಹ ಒತ್ತಡವನ್ನು ತಂದರೂ ಅವರೆಂದೂ ಅದಕ್ಕೆ ಮಣಿಯುತ್ತಿರಲಿಲ್ಲ. ಅಂದರೆ ಅವರ ಮನಸ್ಸು ಹೂವಿನಂತೆ ಮೃದುವಾಗಿಯೂ ಹಾಗೇ ವಜ್ರದಂತೆ ಕಠೋರವಾಗಿಯೂ ಇತ್ತು.
ಅಡಿಗರದ್ದು ನೇರವಾದ ನಿಷ್ಠುರವಾದ ನುಡಿಗಳು. ಆದರೆ ಅಷ್ಟೇ ಸ್ನೇಹಪ್ರಿಯರು. ಅವರನ್ನು ಯಾವುದೇ ಸಮಾರಂಭಗಳಿಗೆ ಕರೆಯಲಿ ಅದು ವ್ಯವಸ್ಥಿತವಾಗಿರಬೇಕು. ಇಲ್ಲದಿದ್ದಲ್ಲಿ ಅಡಿಗರು ಅದನ್ನು ನೇರವಾಗಿ ಹೇಳಿಬಿಡುತ್ತಿದ್ದರು. ಒಮ್ಮೆ ಅವರನ್ನು ಸಾಗರದ ಕಾನ್ವೆಂಟ್ ಶಾಲೆಯೊಂದಕ್ಕೆ ಅತಿಥಿಗಳನ್ನಾಗಿ ಅಹ್ವಾನಿಸಿದ್ದರು. ಅಡಿಗರು ಭಾಷಣ ಮಾಡುತ್ತಾರೆ ಎಂದರೆ ಕೇಳಬೇಕೇ? ಆ ಪುಟ್ಟ ಸಭಾಂಗಣದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಸ್ಥಳಾಭಾವವಾದುದರಿಂದ ಸುತ್ತಲೂ ಇರುವ ಕಾಂಪೌಂಡ್ ಮೇಲೇ ನಿಂತುಕೊಂಡು ಕೆಲವರು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಆ ಅವ್ಯವಸ್ಥೆಯನ್ನು ಗಮನಿಸಿದ ಅಡಿಗರು ಅಲ್ಲಿನ ಉಪಾಧ್ಯಾಯ ವರ್ಗದವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.
“ನೀವು ಯಾವುದೇ ಕಾರ್ಯಕ್ರಮವನ್ನು ಮಾಡಬೇಕಾದರೆ ಅದಕ್ಕನುಗುಣವಾಗಿ ಆಸನ ವ್ಯವಸ್ಥೆ, ಮೈಕ್‌ಸೆಟ್ ವ್ಯವಸ್ಥೆ, ಲೈಟಿನ ವ್ಯವಸ್ಥೆಯನ್ನು ಮಾಡಿರಬೇಕು. ಇಲ್ಲದಿದ್ದರೆ ಕಾರ್ಯಕ್ರಮವನ್ನೇ ನಡೆಸಲೇಬಾರದು. ಇಲ್ಲಿ ನೋಡಿ ಎಷ್ಟೊಂದು ಜನ ತಾಯಂದಿರು ತಮ್ಮ ಮಕ್ಕಳೊಂದಿಗೆ ಆಸನಗಳಿಲ್ಲದೆ ಒದ್ದಾಡುತ್ತಿದ್ದಾರೆ. ಆಸನಗಳಿಗಾಗಿ ಎಷ್ಟೊಂದು ಗದ್ದಲ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕಾರ್ಯಕ್ರಮ ಶಾಂತವಾಗಿ ನಡೆಯಲು ಸಾಧ್ಯವೇ? ಹೋಗಿ ಏನಾದರೂ ವ್ಯವಸ್ಥೆಮಾಡಿ“ ಎಂದು ನೇರವಾಗಿ ಜಾಡಿಸಿಯೇಬಿಟ್ಟರು. ಅವರ ದೃಷ್ಟಿಯಲ್ಲಿ ವೇದಿಕೆಯಲ್ಲಿರುವವರಿಗೆ ಕೊಟ್ಟಷ್ಟು ಗೌರವವನ್ನು ಸಭಿಕರಿಗೂ ಕೊಡಬೇಕು. ಎಲ್ಲರೂ ಸಮಾನರು.
ಯಾವುದೇ ಒಂದು ಸಂಸ್ಥೆ ಪ್ರಾರಂಭವಾಗುವಾಗ ಅದರ ಧ್ಯೇಯೋದ್ಧೇಶಗಳೇನೋ ಆದರ್ಶವಾಗಿಯೇ ಇರುತ್ತವೆ. ತಾವು ಪ್ರಾರಂಭಿಸುವ ಸಂಸ್ಥೆಗೆ ಸಕಲಸೌಲಭ್ಯಗಳ ಜೊತೆಗೆ ನುರಿತ ಬೋಧಕ ವರ್ಗ, ಅತ್ಯುತ್ತಮವಾದ ಪ್ರಯೋಗಾಲಯ, ಸುಸಜ್ಜಿತವಾದ ಕಟ್ಟಡ ಮುಂತಾದವುಗಳ ಕಡೆಗೆ ಹೆಚ್ಚಿನ ಗಮನಕೊಡುತ್ತಾರೆ. ಬೇರೆ ಬೇರೆ ಕಡೆಗಳಲ್ಲಿ ಒಳ್ಳೆಯ ಹೆಸರುಗಳನ್ನುಗಳಿಸಿದ ಉತ್ತಮವಾದ ಉಪನ್ಯಾಸಕರನ್ನು ಒತ್ತಾಯ ಪೂರ್ವಕವಾಗಿ ಕರೆತಂದು ಸಂಸ್ಥೆ ಬೆಳೆದು ಒಳ್ಳೆಯ ಹೆಸರು ಗಳಿಸುವಂತೆ ನೋಡಿಕೊಳ್ಳುತ್ತಾರೆ. ಆದರೆ ಆ ಸಂಸ್ಥೆ ಒಂದು ಹಂತವನ್ನು ತಲುಪಿದ ಮೇಲೆ ಸ್ವಾರ್ಥತೆ, ಸ್ವಜನ ಪಕ್ಷಪಾತ, ಅಧಿಕಾರದ ದರ್ಪ ಮುಂತಾದ ಅಂಶಗಳು ಒಳಕ್ಕೆ ನುಸುಳುತ್ತಾ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಮುತ್ಸದ್ದಿಗಳನ್ನು ಉಂಡೆಸೆಯುವ ಬಾಳೆಯೆಲೆಯಂತೆ ಕಿತ್ತೆಸೆಯುತ್ತಾರೆ.
ಅಡಿಗರ ವಿಷಯದಲ್ಲಿ ಆದದ್ದೂ ಹಾಗೆಯೇ. ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ರೀಡರ್ ಆಗಿ ಹೆಸರು ಗಳಿಸಿ ಸೇವೆ ಸಲ್ಲಿಸುತ್ತಿದ್ದ ಅಡಿಗರನ್ನು ಅವರ ಶಿಷ್ಯವರ್ಗವೇ ಕಾಡಿಬೇಡಿ ಕರೆತಂದರು. ಅಡಿಗರು ಅದನ್ನು ತಮ್ಮದೇ ಸಂಸ್ಥೆಯೆಂದು ಭಾವಿಸಿ ಅತ್ತ್ಯುತ್ತಮವಾದ ಬೋಧಕ ವರ್ಗವನ್ನು ತಂದು ಹಾಗೂ ಇತರ ರೂಪರೇಖೆಗಳನ್ನು ಕೊಟ್ಟು ನಾಡಿನಲ್ಲೇ ಅದು ಹೆಸರುವಾಸಿಯಾದ ಸಂಸ್ಥೆಗಳಲ್ಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿದರು. ಲಾಲ್‌ಬಹಾದುರ್ ಕಾಲೇಜ್ ಎನ್ನುವುದಕ್ಕೆ ಬದಲಾಗಿ ಎಲ್ಲಕಡೆಯಲ್ಲೂ ಅದು ಅಡಿಗರ ಕಾಲೇಜ್ ಎಂದು ಹೆಸರು ಮಾಡಿತ್ತು. ಅಡಿಗರೇನಾದರೂ ಅಲ್ಲೇ ಮುಂದುವರಿದಿದ್ದರೆ ಇಂದು ಅದು ಮೆಡಿಕಲ್ ಕಾಲೇಜು ಹಾಗೂ ಇಂಜನೀಯರ್ ಕಾಲೇಜುಗಳನ್ನೊಳಗೊಂಡು ನಾಡಿನಲ್ಲೇ ಒಂದು ಮಾದರಿಯ ವಿಶ್ವವಿದ್ಯಾಲಯವೇ ಆಗಿಬಿಡುತ್ತಿತ್ತು. ಆದರೆ ಏನು ಮಾಡುವುದು ಪಟ್ಟಬದ್ಧ ಹಿತಾಸಕ್ತಿಗಳು ಅದಕ್ಕೆ ಅವಕಾಶ ಕೊಡಲಿಲ್ಲ. ಸಾಗರದಲ್ಲಿ ನಾಲ್ಕು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಅಡಿಗರು ಅನಿವಾರ್ಯವಾಗಿ ರಾಜೀನಾಮೆಯನ್ನು ಕೊಟ್ಟು ಹೊರಡಬೇಕಾಯಿತು.
ಶಿಕ್ಷಣ ಕ್ಷೇತ್ರದ ಅವರ ನಂಟು ಇಲ್ಲಿಗೇ ನಿಲ್ಲಲಿಲ್ಲ. ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಇವರನ್ನು ಕೈ ಬೀಸಿ ಕರೆಯಿತು. ಜೊತೆಯಲ್ಲಿ ಮೂಸೆಯಲ್ಲಿ ಬೆಂದ ಸುವರ್ಣದಂತೆ ಇವರ ಬರವಣಿಗೆಯ ಮೊನೆಚು ಬೆಳೆಯುತ್ತಾ ಹೋಯಿತು. ಈ ಅವಧಿಯಲ್ಲಿ ಇವರ ನಾಲ್ಕು ಕೃತಿಗಳು ಬೆಳಕು ಕಂಡವು. ಅಲ್ಲಿಂದ ಮುಂದೆ ಇವರು 1971ರ ಚುನಾವಣೆಯಲ್ಲಿ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಅತ್ತ ಉದ್ಯೋಗವೂ ಇಲ್ಲ ಇತ್ತ ರಾಜಕೀಯ ಸೇವೆಯೂ ಇಲ್ಲದಂತೆ ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟರು. ಒಂದು ರೀತಿಯಲ್ಲಿ ಉದ್ಯೋಗ ಮತ್ತು ರಾಜಕೀಯ ಎರಡರಲ್ಲೂ ಅವರು ಸೋಲನ್ನು ಅನುಭವಿಸಿದರು. ಹಾಗಾಗಿ ದೈಹಿಕ ಅನಾರೋಗ್ಯದ ಜೊತೆಗೆ ಮಾನಸಿಕ ತೊಳಲಾಟವೂ ಅವರನ್ನು ಕೊನೆ ಗಾಲದಲ್ಲಿ ಕಾಡಿಸಿರಬೇಕು.
ಅಡಿಗರನ್ನು ’ಕಬೀರ್ ಸನ್ಮಾನ್ ಪ್ರಶಸ್ತಿ, ’ಕುಮಾರ ಆಸಾನ್ ಪ್ರಶಸ್ತಿ’ಮುಂತಾದ ಪ್ರಶಸ್ತಿಗಳು ಹುಡುಕಿಕೊಂಡು ಬಂದರೂ ಬರಲೇಬೇಕಾದ ಜ್ಞಾನಪೀಠ ಪ್ರಶಸ್ತಿ ಮಾತ್ರಾ ಲಭಿಸಲೇ ಇಲ್ಲ. ಅವರು ಗತಿಸಿದಾಗ ಖ್ಯಾತ ವಿಮರ್ಶಕ, ಟಿ.ಪಿ.ಅಶೋಕ್‌ರವರ ಬಳಿ ನಾನು ಮಾತನಾಡುತ್ತಾ “ಅಡಿಗರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಾಗಿತ್ತು” ಎಂದಾಗ, “ಜ್ಞಾನ ಪೀಠವಲ್ಲ ಅವರಿಗೆ ನೋಬೆಲ್ ಪ್ರಶಸ್ತಿಯೇ ಬರಬೇಕಾಗಿತ್ತು!” ಎಂದು ಹೇಳಿದ ಮಾತು ಇನ್ನೂ ನನ್ನ ಕಿವಿಯಲ್ಲಿ ಇನ್ನೂ ಗುನುಗುಟ್ಟುತ್ತಿದೆ.
ಆದರೆ 1979ರಲ್ಲಿ ಅವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಸಾಹಿತ್ಯಪರಿಷತ್ತು ಅವರಿಗೆ ಸೂಕ್ತ ಗೌರವವನ್ನು ಕೊಟ್ಟಿತು. ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸುತ್ತಾ “ಸಾಹಿತ್ಯ ಪರಿಷತ್ತನ್ನು ಮತ್ತೆ ಮತ್ತೆ ಟೀಕಿಸುತ್ತ ಬಂದಿರುವ, ಈಗಲೂ ಟೀಕಿಸಿರುವ, ಬಹುಶಃ ಇನ್ನು ಮುಂದೆಯೂ ಟೀಕಿಸಬಹುದಾದ ನನ್ನನ್ನು ಈ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡಿ ಗೌರವಿಸಿದ್ದೀರಿ” ಎನ್ನುತ್ತಾ ಇದ್ದುದ್ದನ್ನು ಇದ್ದಂತೇ ಹೇಳುವ ತಮ್ಮತನವನ್ನು ಅವರು ಮುಂದುವರಿಸಿಕೊಂಡೇ ಹೋದರು.
ಕೊನೆಗಾಲದಲ್ಲಿ ಅಡಿಗರು ಪಾರ್ಶ್ವವಾಯು ಪೀಡಿತರಾಗಿ ಸಾಕಷ್ಟು ಬಳಲಿದರು. ಎಂದೂ ಯಾವುದಕ್ಕೂ ಹೆದರದ ಅಡಿಗರು, ತಮ್ಮ ಪ್ರೀತಿಯ ಮಡದಿಯ ಆರೋಗ್ಯ ಕೆಟ್ಟಾಗ ಮಾತ್ರ ಒಂದು ರೀತಿಯಲ್ಲಿ ಕಂಗಾಲಾದರೆಂದೇ ಹೇಳಬೇಕು. ಅವರ ಕೊನೆಯ ಕವನ ಸಂಕಲನ “ಸುವರ್ಣಪುತ್ತಳಿ”ಯ ಬಹುತೇಕ ಕವನಗಳು ಮಡದಿಯ ಕುರಿತೇ ಬರೆದ ವೈಯುಕ್ತಿಕ ಕವನಗಳಾಗಿವೆ. ತನ್ನ”ಸುವರ್ಣ ಪುತ್ತಳಿ”ಯ ಬಗ್ಗೆ ಬರೆಯುತ್ತ,
ವಾತ್ಸಲ್ಯ ಮಯಿ ತಾಯಿ
ಮೈತೊಳೆಸಿ ಉಣಬಡಿಸಿ ಎಲ್ಲವನ್ನನುಗೊಳಿಸಿ
ಕೈಹಿಡಿದು ನಡಸುತ್ತಿರುವ ಊರುಗೋಲೇ
ನಿನ್ನಂತರಂಗದ ಮೃದುತ್ವ ಕಾರುಣ್ಯ ಅನುಕಂಪ
ಎಲ್ಲವೂ ಪ್ರತ್ಯಕ್ಷ ಕೃತಿರೂಪದಲ್ಲ
ಆ ನೋವಿನಿಂದ ಚೇತರಸಿಕೊಳ್ಳಲಾಗದೆ ಅಡಿಗರು 1992ರ, ನವೆಂಬರ್ 4ರಂದು ಇಹಲೋಕ ಯಾತ್ರೆಯನ್ನು ಮುಗಿಸಿಯೇಬಿಟ್ಟರು. ಅವರು ಕಾಲವಾಗುವ ಸ್ವಲ್ಪ ಮೊದಲು ತಮ್ಮ ಸಾವನ್ನು ಊಹಿಸಿದ್ದರೋ ಏನೋ ಹಾಗಾಗಿ ತಮ್ಮ ತೀರ್ಥರೂಪರನ್ನು ಆ ಸಮಯದಲ್ಲಿ ಜ್ಞಾಪಿಸಿಕೊಳ್ಳುತ್ತಾರೆ,
ಅಪ್ಪಯ್ಯಾ ಕೇಳಿ, ಕೇಳಿ
ನಾನೇ ಬರಲಿದ್ದೇನೆ ನಿಮ್ಮ ಕಡೆಗೆ
ಅದಕ್ಕೆಲ್ಲ ಸಿದ್ಧತೆ ನಡೆಸುತ್ತಲಿದ್ದೇನೆ
ಎಲ್ಲವುದೂ ಮುಗಿಯುವುದು ಇಷ್ಟರಲ್ಲೇ
ಎಲ್ಲೇ ಇದ್ದರೂ, ನೀವು ನಿಮ್ಮ ಸಹವಾಸವೇ
ಗುರಿ ನನಗೆ. ಸೆಳೆದುಕೊಳ್ಳಿರಿ ನಿಮ್ಮ ತೆಕ್ಕೆಗೇ ನನ್ನ
ಅದೇನೇ ಅಂತಿಮ ಹಕ್ಕೆ ನನಗೆ.
ಇಂದು ಅವರು ನಮ್ಮನ್ನು ಅಗಲಿರಬಹುದು, ಆದರೆ ಅವರ ಸಾಹಿತ್ಯ ಕೃಷಿ ಮಾತ್ರಾ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಧೃವತಾರೆಯಂತೆ ಶಾಶ್ವತವಾಗಿರುತ್ತದೆ. ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಚಿತೆಯುರಿಯುತ್ತಿದ್ದಾಗ “ಯಾವ ಮೋಹನ ಮುರಳಿ ಕರೆಯಿತು ದೂರತೀರಕೆ ನಿನ್ನನು..” ಎಂದು ಹಾಡಿದಾಗ ಅಲ್ಲಿ ನೆರೆದಿದ್ದ ನೂರಾರು ಮಂದಿ ಅಭಿಮಾನಿಗಳ ಕಣ್ಣುಗಳಿಂದ ಅಶ್ರುಧಾರೆಗಳು ಉದುರುತ್ತಿದ್ದವು. ಅವರೇ ಬರೆದಂತೆ, “ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ” ಯಾರೂ ಕಾಣದ ದೂರ ದೂರದ ತೀರಕ್ಕೆ ನಮ್ಮನ್ನೆಲ್ಲಾ ಅನಾಥರನ್ನಾಗಿ ಮಾಡಿ ಹೋಗಿಯೇ ಬಿಟ್ಟರು. ಆಂಗ್ಲ ಲೇಖಕರೊಬ್ಬರು ಅಡಿಗರನ್ನು 20ನೇ ಶತಮಾನದ ಶ್ರೇಷ್ಠ ಕವಿ ಎಂದು ಬರೆದಾಗ ನಮ್ಮವರೊಬ್ಬರು “20ನೇ ಶತಮಾನ ಇನ್ನೂ ಮುಗಿದಿಲ್ಲ” ಎಂದಿದ್ದರಂತೆ. ಅದರೆ ಈಗ ಇಪ್ಪತ್ತನೇ ಶತಮಾನ ಮುಗಿದು ಇಪ್ಪತ್ತೊಂದನೇ ಶತಮಾನದ ಕಾಲು ಭಾಗದತ್ತ ದಾಪುಗಾಲು ಹಾಕುತ್ತಿದೆ. ಆದರೆ ಯಾರೂ ಉದಯಿಸಿಲ್ಲ.
ಅವರ ಅಭಿಮಾನಿಯೊಬ್ಬರು ಬರೆಯುವಂತೆ, ”ಇಪ್ಪತ್ತನೇ ಶತಮಾನದ ಈ ಶ್ರೇಷ್ಠಕವಿಯನ್ನು ಮೀರಿಸುವವರಿರಲಿ ಸರಿಗಟ್ಟುವವರೂ ಕೂಡಾ ಉದಯಿಸದೇ ಇರುವುದು ಇವರ ಗಟ್ಟಿ ಸಾಹಿತ್ಯದ ಪ್ರತಿಭೆಗೆ ಸಾಕ್ಷಿ” ಎಂಬುದು ಖಂಡಿತವಾಗಿಯೂ ಉತ್ಪ್ರೇಕ್ಷೆಯ ಮಾತಲ್ಲ. ಶೇಕ್ಸ್‌ಪಿಯರ ಹೇಳುವಂತೆ, “As long as eyes can see or ears can hear, So long lives this and this gives live to Thee”
ಈ ಮಾತು ಅಡಿಗರ ವಿಷಯದಲ್ಲಿ ಮಾತ್ರ ನೂರಕ್ಕೆ ನೂರರಷ್ಟು ನಿಜ. ಈ ಜಗತ್ತು ಇರುವತನಕ ಅಡಿಗರ ಸಾಹಿತ್ಯ ಹಸಿರಾಗಿರುತ್ತದೆ. ಅದರ ಮೂಲಕ ಅವರ ನೆನಪು ಮಾಸದೇ ಶಾಶ್ವತವಾಗಿ ಉಳಿಯುತ್ತದೆ ಎಂದು ಖಡಾಖಂಡಿತವಾಗಿ ಹೇಳಬಹುದು.
ಇತ್ತೀಚೆಗೆ ಸಾಗರದ ಸಾಹಿತಿ ವಿ.ಗಣೇಶ್ ಎಂಬುವವರು ಅಡಿಗರ ಕುರಿತು “ನವ್ಯಕಾವ್ಯ ಪ್ರವರ್ತಕ ಗೋಪಾಲಕೃಷ್ಣ ಅಡಿಗ” ಹಾಗೂ “ಮೊಗೇರಿಯ ಮಂದಾರ” ಎಂಬ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಅಡಿಗರ ಬಗ್ಗೆ ಹೆಚ್ಚಾಗಿ ಅರಿಯಬೇಕೆಂದರೆ ಆ ಕೃತಿಗಳನ್ನು ಓದಿದರೆ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ.
nandaskori@gmail.com