ಸಾವರ್ಕರ್ ಎಂಬ ಅತ್ಯದ್ಭುತ ಚೇತನ
ಲೇಖಕರು: ಮಂಜುನಾಥ ಅಜ್ಜಂಪುರ, ಲೇಖಕರು, ವಾಯ್ಸ್ ಆಫ್ ಇಂಡಿಯಾ ಹಾಗೂ ಅರುಣ್ ಶೌರಿ ಸರಣಿ ಸಂಪಾದಕರು, ಅಂಕಣಕಾರರು
“ವೀರ ಸಾವರ್ಕರ್” ಎಂದೇ ಖ್ಯಾತರಾದ, ವಿನಾಯಕ ದಾಮೋದರ ಸಾವರ್ಕರ್ ಅವರು ಆತ್ಮಾರ್ಪಣೆ ಮಾಡಿಕೊಂಡ (26.02.2021) ದಿನವಿದು. ಅವರು ಭೌತಿಕವಾಗಿ ಇನ್ನಿಲ್ಲವೆನಿಸಿ 55 ವರ್ಷಗಳೇ ಉರುಳಿಹೋಗಿವೆ. ಆ ಮಹಾನ್ ಜೀವ ತಿಂದ ನೋವಿಗೆ ಕೊನೆಮೊದಲಿಲ್ಲ. ಭಾರತೀಯ ಸಮಾಜವು ಅವರನ್ನು ತುಂಬ ತುಂಬ ಕೆಟ್ಟದಾಗಿ ನಡೆಸಿಕೊಂಡಿತು, ಎಂದೇ ವಿಷಾದಪೂರ್ವಕವಾಗಿ ದಾಖಲಿಸಬೇಕಾಗಿದೆ. ಏಕೆ ಹೀಗಾಯಿತು, ಎಂಬಂತಹ ನೋವಿನ ಆಕ್ರಂದನಗಳಿಗೆ ಇತಿಹಾಸವು ಸರಿಯಾಗಿ ಉತ್ತರಿಸುವುದಿಲ್ಲ. ಹಾಗೆ ನೋಡಿದರೆ, 20ನೆಯ ಶತಮಾನವೇ ಭಾರತಕ್ಕೆ – ಭಾರತದ ಇತಿಹಾಸಕ್ಕೆ – ಸಾವರ್ಕರ್ ಅವರಿಗೆ – ಸುಭಾಷ್ ಚಂದ್ರ ಬೋಸ್ ಅವರಿಗೆ – ಅಷ್ಟೇಕೆ, ಭಾರತದ ಅಸ್ಮಿತೆಗೇ ಅಪಾರ ಅನ್ಯಾಯವನ್ನೆಸಗಿದೆ. ಈ ನಾಡಿಗೆ ನಂಬಲಾಗದಂತಹ ಊಹಿಸಲಾಗದಂತಹ ಹಾನಿಯಾಗಿದೆ. 21ನೆಯ ಶತಮಾನದಲ್ಲಾದರೂ, ಸಾವರ್ಕರ್ ಅವರಿಗೆ – ಸುಭಾಷ್ ಚಂದ್ರ ಬೋಸ್ ಅವರಿಗೆ ಮತ್ತು ಅವರುಗಳ ಕೊಡುಗೆಗಳಿಗೆ ಕಿಂಚಿತ್ ನ್ಯಾಯ ದೊರಕುತ್ತಿರುವುದು ಸಮಾಧಾನಕಾರವೆನಿಸಿದೆ.
ಕಾಂಗ್ರೆಸ್, ಕಮ್ಯುನಿಸ್ಟ್, ಜಿಹಾದಿಗಳ ಪಡೆಯು ಸ್ವತಂತ್ರ ಭಾರತದ ಇತಿಹಾಸದ ಪಠ್ಯಗಳಲ್ಲಿ ಹಿಂದೂ-ದ್ವೇಷವನ್ನೇ ತುಂಬಿ ವಿಕೃತಗೊಳಿಸಿದೆ. ಭಾರತದ ಸಾವಿರಾರು ವಿಶ್ವವಿದ್ಯಾಲಯಗಳಲ್ಲಿ ಓದಿದ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಧರ್ಮ – ತಮ್ಮ ಪರಂಪರೆ – ಇತಿಹಾಸಗಳ ಬಗೆಗೆ ಅತ್ಯಂತ ಕೀಳು ಅಭಿಗಮನವನ್ನೇ ಇಟ್ಟುಕೊಂಡು ಹೊರಬೀಳುತ್ತಾರೆ. ಸ್ವಾತಂತ್ರ್ಯೋತ್ತರ ಭಾರತದ ಬಹುಪಾಲು ಶಿಕ್ಷಣ ಮಂತ್ರಿಗಳು ಜಿಹಾದಿಗಳೂ – ಕಮ್ಯೂನಿಸ್ಟರೂ ಆದರೆ ಇನ್ನೇನಾಗಲು ಸಾಧ್ಯ? ಇಸ್ಲಾಮೀ ಅಕ್ರಮಣಕಾರಿಗಳಿಂದ, ಬ್ರಿಟಿಷ್ ವಸಾಹತುಶಾಹಿಯಿಂದ ಆದ ಹಾನಿಗಿಂತ ಹೆಚ್ಚಿನ ಹಾನಿ ಇವರಿಂದ ಸಂಭವಿಸಿದೆ.
ಭಾರತದ ಸ್ವಾತಂತ್ರ್ಯಕ್ಕೆ – ಹಿಂದೂ ಅಸ್ಮಿತೆಗೆ ಸಾವರ್ಕರ್ ಅವರದ್ದು ಬಹಳ ದೊಡ್ಡ ಕೊಡುಗೆ. ಹಾಗೆಂದೇ, ಬ್ರಿಟಿಷ್ ಚೇಲಾಗಳಾಗಿದ್ದ ಕಾಂಗ್ರೆಸ್ಸಿಗರಿಗೆ ಸಾವರ್ಕರ್ ಬಗೆಗೆ ಇನ್ನಿಲ್ಲದ ದ್ವೇಷ. ಸಾವರ್ಕರ್ ಅವರು ತೀರಿಹೋಗಿ ಅರ್ಧ ಶತಮಾನವೇ ಸರಿದುಹೋಗಿದ್ದರೂ ಕಾಂಗ್ರೆಸ್ಸಿಗರದ್ದು ಮುಗಿಯಲಾರದ ದ್ವೇಷ. ಬ್ರಿಟಿಷರ ಜೊತೆ ಮೊದಲಿನಿಂದಲೂ “ಆಪ್ತ ಸಂಬಂಧ” ಇಟ್ಟುಕೊಂಡೇ ಬಂದ ಗಾಂಧೀ ನೆಹರೂ ಪಡೆ ಒಂದೇ ಒಂದು ಲಾಠಿ ಏಟು ತಿನ್ನಲಿಲ್ಲ. “ಸೆರೆಮನೆ”ಗಳ ಹೆಸರಿನಲ್ಲಿ ವೈಭವೋಪೇತ (19 ಎಕರೆ ವಿಸ್ತೀರ್ಣದ) ಆಗಾಖಾನ್ ಅರಮನೆಗಳಲ್ಲಿದ್ದರು, ರಾಷ್ಟ್ರಪಿತರೂ ಆದರು, 60 ವರ್ಷ ಒಂದೇ ಕುಟುಂಬದವರು ಇಡೀ ದೇಶವನ್ನೇ ಭೋಗಿಸಿಬಿಟ್ಟರು. ಆದರೂ ಇಂತಹ “ಸೆರೆವಾಸದ ಬಗೆಗೆ” ಕಾಂಗ್ರೆಸ್ಸಿಗರು “ರೋದಿಸುವುದುಂಟು”.
ಭಾರತದ ಸ್ವಾತಂತ್ರ್ಯಕ್ಕೆ ನೈಜ ಕಾರಣೀಭೂತರಾದ ಸುಭಾಷ್ ಚಂದ್ರ ಬೋಸ್ – ಸಾವರ್ಕರ್ ಅಂತಹವರ ಬಗೆಗೆ ಕಾಂಗ್ರೆಸ್ಸಿಗರಿಗೆ ಇಂದಿಗೂ – ಎಂದಿಗೂ ಮುಗಿಯದ ದ್ವೇಷ. ಕಾಂಗ್ರೆಸ್ಸಿಗರು ಬರೆಸಿದ ವಿಕೃತ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸ್ವಾತಂತ್ರ್ಯ ಪ್ರಾಪ್ತಿಗೆ ನಿಜವಾಗಿ ಕಾರಣರಾದವರ ಹೆಸರುಗಳೇ ಇಲ್ಲ.
ತಮಾಷೆ ನೋಡಿ. ಸಂಪೂರ್ಣ ಸ್ವಾತಂತ್ರ್ಯ ಬೇಕೆನ್ನುವ ನಿರ್ಣಯ ಅಂಗೀಕಾರವಾದುದು 1929ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ. ಆವರೆಗೆ ಅಂತಹ ಉಲ್ಲೇಖವೇ ಆಗಿರಲಿಲ್ಲ. ಈ ಅಧಿವೇಶನಕ್ಕೆ ಎರಡು ದಶಕಗಳಿಗಿಂತ ಮೊದಲೇ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ಅವರು ತಮ್ಮ ಸಶಸ್ತ್ರ – ಕ್ರಾಂತಿಕಾರಿ ಹೋರಾಟವನ್ನು ಆರಂಭಿಸಿಬಿಟ್ಟಿದ್ದರು. 1911ರಿಂದ ಹತ್ತು ವರ್ಷಗಳ ಕಾಲ ಅವರು ಅಂಡಮಾನ್ ಕಾರಾವಾಸದಲ್ಲಿ ಸರಿಯಾಗಿ ಆಹಾರ – ನೀರು ಇಲ್ಲದೆ ಅನುಭವಿಸಿದ ಚಿತ್ರಹಿಂಸೆ, ಕಠಿಣ ಶಿಕ್ಷೆ ಅನೂಹ್ಯ, ಅತಿ ಭೀಕರ. ವರ್ಷವಿರಲಿ, ತಿಂಗಳಿರಲಿ, ಒಂದೇ ಒಂದು ದಿನ ಅಂತಹ ಶಿಕ್ಷೆ ಅನುಭವಿಸಿದ್ದರೂ ಈ ಗಾಂಧೀ ನೆಹರೂ ಪಡೆ ದೇಶಾಂತರ ಓಡಿಹೋಗಿಬಿಡುತ್ತಿತ್ತು ಮತ್ತು ಎಂದೆಂದಿಗೂ ಹಿಂತಿರುಗಿ ಬರುತ್ತಿರಲಿಲ್ಲ. ಸ್ವತಃ ಚೇಲಾಗಳಾಗಿದ್ದ ದೇಶದ್ರೋಹಿಗಳು, ಸಾವರ್ಕರ್ ಅವರು ಕ್ಷಮಾಪಣೆ ಪತ್ರ ಬರೆದರು , ಕ್ಷಮಾಪಣೆ ಪತ್ರ ಬರೆದರು, ಎಂದುಇಂದಿಗೂ ಹುಯಿಲಿಡುವುದುಂಟು. ಸ್ವಾತಂತ್ರ್ಯ ಹೋರಾಟವೇ ಮುಖ್ಯ, ಸ್ವಾತಂತ್ರ್ಯ ಪ್ರಾಪ್ತಿಯೇ ಮುಖ್ಯ ಎನ್ನುವ ಹೋರಾಟಗಾರರು ಕ್ಷಮಾಪಣೆ ಪತ್ರ ಬರೆಯುವುದು ಮತ್ತು ಬಿಡುಗಡೆಗಾಗಿ ಕಾರ್ಯತಂತ್ರ ಹೂಡುವುದು ಸಹಜ.
ಪರಮನೀಚ ಔರಂಗಜೇಬನ ಸೆರೆಮನೆಯಿಂದ ತಪ್ಪಿಸಿಕೊಳ್ಳಲು ಶಿವಾಜಿ ಮಹಾರಾಜರು ತಂತ್ರಗಾರಿಕೆಯನ್ನೇ ಅವಲಂಬಿಸಿದರು. ಹಾಗೆಯೇ ತಪ್ಪಿಸಿಕೊಂಡೂ ಹೋದರು. ಹಾಗೆಂದು, ಅವರು ಮೋಸ ಮಾಡಿದರು, ಎನ್ನಲಾದೀತೇ ? ನಮ್ಮ ದೇಶದ್ರೋಹಿ ಕಮ್ಯುನಿಸ್ಟ್ ಇತಿಹಾಸಕಾರರ ಪ್ರಕಾರ, ಶಿವಾಜಿ ಮಹಾರಾಜರದ್ದೂ ಮೋಸವೇ ಇರಬಹುದು. ಸಾವರ್ಕರ್ ಅವರ ಕ್ಷಮಾಪಣೆ ಪತ್ರದ ಪ್ರಕರಣಗಳನ್ನು ಈ ಪರಿಪ್ರೇಕ್ಷ್ಯದಲ್ಲಿಯೇ ನಾವು ನೋಡಬೇಕು. ಅವರು ಬ್ರಿಟಿಷ್ ಸೆರೆಮನೆಗಳಲ್ಲಿ ಕೊಳೆಯಬೇಕಿತ್ತೇ, ಸಾಯಬೇಕಿತ್ತೇ? ಸಾವರ್ಕರ್ ಅವರು ಬ್ರಿಟಿಷರೊಂದಿಗೆ ಷಾಮೀಲಾಗಿದ್ದರು ಎನ್ನುವವರು ದ್ರೋಹಿಗಳಷ್ಟೇ, ಬೇರೇನಿಲ್ಲ. ಬ್ರಿಟಿಷರೊಂದಿಗೆ ಷಾಮೀಲಾಗಿದ್ದರೆ, ಈ ಮಾಫಿಯಾ ಪಡೆಯವರ ಬದಲಿಗೆ, ಸಾವರ್ಕರ್ ಅವರೇ ರಾಷ್ಟ್ರಪಿತ – ಪ್ರಧಾನಮಂತ್ರಿ ಆಗುತ್ತಿದ್ದರು!!
ಸಾವರ್ಕರ್ ಅವರಷ್ಟೇ ಅಲ್ಲ (ಅರವಿಂದರ ಸಹೋದರ) ಬರೀಂದ್ರ ಕುಮಾರ್ ಘೋಷ್, ರಾಮಪ್ರಸಾದ್ ಬಿಸ್ಮಿಲ್, ಶಚೀಂದ್ರನಾಥ ಸನ್ಯಾಲ್ , ಸತ್ಯೇಂದ್ರನಾಥ ಬೋಸ್ ಮುಂತಾದವರು ಕ್ಷಮಾಪಣೆ ಪತ್ರ ಬರೆದದ್ದಿದೆ. ಅದು ಕಾರ್ಯತಂತ್ರವೇ ಹೊರತು, ಶರಣಾಗತಿ ಅಲ್ಲ. ವಿಚಿತ್ರ, ನೋಡಿ. ಬ್ರಿಟಿಷರೊಂದಿಗೆ ಷಾಮೀಲಾದವರು, ಅನೈತಿಕ ಸಂಬಂಧವಿಟ್ಟುಕೊಂಡವರು, ಸ್ವಾತಂತ್ರ್ಯ ಪ್ರಾಪ್ತಿಗೆ ಕಾರಣರಲ್ಲದವರು ಮತ್ತು ಅವರ ಪಡೆ ಸಾವರ್ಕರ್ ಅವರ ಬಗೆಗೆ ಇಂದಿಗೂ ಅನುಚಿತ ಟೀಕೆ ಮಾಡುತ್ತಿದೆ.
ಸಾವರ್ಕರ್ ಅವರು ಕ್ವಿಟ್ ಇಂಡಿಯಾ ಚಳವಳಿಯನ್ನು ಬೆಂಬಲಿಸಲಿಲ್ಲ, ಎಂದು ಕೆಲವರು ಟೀಕಿಸುವುದುಂಟು. ಅಂಬೇಡ್ಕರ್ ಮತ್ತು ಕಮ್ಯೂನಿಸ್ಟರು ಸಹ ಬೆಂಬಲಿಸಿರಲಿಲ್ಲ. ಅಷ್ಟೇಕೆ, ಸ್ವತಃ ಗಾಂಧೀಜಿಯವರ ರಾಜಕೀಯ ಉತ್ತರಾಧಿಕಾರಿ – ಶಿಷ್ಯ “ಖ್ಯಾತಿಯ” ನೆಹರೂ ಅವರೂ ಮೊದಲು ಒಪ್ಪಿರಲಿಲ್ಲ. ತೀವ್ರವಾದ ಭಿನ್ನಾಭಿಪ್ರಾಯಗಳಿದ್ದರೂ, ಕೊನೆಗೆ ನೆಹರೂ ಅವರು, ಗಾಂಧೀಜಿಯವರ ಹಠಮಾರಿತನಕ್ಕೆ ಮಣಿದರು. ನೆಹರೂ ಅವರ ಬೆಂಬಲದೊಂದಿಗೆ, ದೇಶದ ಹಲವೆಡೆ ಅಸ್ತಿತ್ವಕ್ಕೆ ಬಂದಿದ್ದ ಕಿಸಾನ್ ಸಭಾಗಳು ಗಾಂಧೀಜಿಯವರ “ಕ್ವಿಟ್ ಇಂಡಿಯಾ” ಕರೆಯನ್ನು ತೀವ್ರವಾಗಿ ವಿರೋಧಿಸಿದ್ದವು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸದೇ ಇದ್ದವರೆಲ್ಲಾ ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದವರು ಎಂಬಂತಹ ಕಾಂಗ್ರೆಸ್ಸಿಗರ ಪ್ರಲಾಪವು ಅಸಂಬದ್ಧವಾದುದು, ಅನುಚಿತವಾದುದು.
ಸಾವರ್ಕರ್ ಅವರ ಪಾಲಿಗೆ ಎರಡನೇ ಮಹಾಯುದ್ಧವು ಹಿಂದೂ ಸಮಾಜವನ್ನು ಸೇನಾ ದೃಷ್ಟಿಯಿಂದ ಬಲಪಡಿಸಲು ಸಿಕ್ಕಿದ ಒಂದು ಅವಕಾಶವಾಯಿತು. ಇದು ಬಹಳ ಬಹಳ ಮುಖ್ಯವಾದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಸಾವರ್ಕರ್ ಅವರದ್ದು ಮಹತ್ತ್ವದ ಕೊಡುಗೆ. ದುರದೃಷ್ಟವಶಾತ್ ನಮ್ಮ ಇತಿಹಾಸದ ಪುಟಗಳಲ್ಲಿ ಇದು ದಾಖಲಾಗಿಲ್ಲ. ಪ್ರವಾಸ ಮಾಡಿ, ಜನರು ಸೈನ್ಯಕ್ಕೆ ಸೇರಲು ಅವರು ಪ್ರೇರೇಪಿಸಿದರು. ಇಲ್ಲವಾಗಿದ್ದರೆ, ದೇಶವಿಭಜನೆಯ ಸೂಕ್ಷ್ಮ ಸಂದರ್ಭದಲ್ಲಿ ಸೇನೆಯಲ್ಲಿ ಮುಸ್ಲಿಮರ ಸಂಖ್ಯೆಯೇ ಹೆಚ್ಚಾಗಿಬಿಡುತ್ತಿತ್ತು. ಅಂತಹುದರ ಸಂಭಾವ್ಯತೆ ಅಕಲ್ಪನೀಯ, ಅನೂಹ್ಯ, ಅತಿಘೋರ.
ಆ ಪುಟ್ಟ ಶರೀರದಲ್ಲಿ ಅದೆಂತಹ ಶಕ್ತಿ, ಅದೆಂತಹ ಕ್ಷಾತ್ರ, ಅದೆಂತಹ ವಿದ್ವತ್ತು. ಆದರೆ ಬೇರೆಯವರಿರಲಿ, ಅವರ ಅಭಿಮಾನಿಗಳೂ ಕೆಲವೊಮ್ಮೆ ದಿಗ್ಭ್ರಾಂತರಾಗುವಂತಹ ವಿಚಾರಗಳನ್ನು ಸಾವರ್ಕರ್ ಅನೇಕ ಬಾರಿ ನಿರ್ಭಿಡೆಯಿಂದ ವ್ಯಕ್ತಪಡಿಸುತ್ತಿದ್ದರು. ಸಾವರ್ಕರ್ ಅವರಿಗೆ ಸಾವರ್ಕರ್ ಅವರೇ ಸಾಟಿ.
1938ರಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು. “ಭಾರತೀಯ ಭಾಷೆಗಳನ್ನು ದೇವನಾಗರಿ ಲಿಪಿಯಲ್ಲಿ ಬರೆಯುವ ಬದಲು, ರೋಮನ್ ಲಿಪಿಯಲ್ಲಿ ಬರೆಯಬಹುದು” ಎಂದರು ಬೋಸ್. ಈ ಹೇಳಿಕೆಯನ್ನು ಸಾವರ್ಕರ್ ಟೀಕಿಸಿದರು. ಅದೇ ವರ್ಷ, ಮುಂಬಯಿಯಲ್ಲಿ ವಾರ್ಷಿಕ ಮರಾಠಿ ಸಾಹಿತ್ಯ ಸಮ್ಮೇಳನ ಏರ್ಪಾಟಾಯಿತು. ರಾಜಕಾರಣಿಯಷ್ಟೇ ಅಲ್ಲ, ಕ್ರಾಂತಿಕಾರಿಯಷ್ಟೇ ಅಲ್ಲ, ಸಾವರ್ಕರ್ ಬಹಳ ದೊಡ್ಡ ಲೇಖಕರು, ಕವಿ. ಸಮ್ಮೇಳನದ ಆಯೋಜಕರು ಸಾವರ್ಕರ್ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಬೇಕೆಂದು ಕೋರಿದರು. “ತುಂಬಾ ಸೂಕ್ಷ್ಮವಾದ ಭಾಷಾ ಶುದ್ದೀಕರಣದಂತಹ ವಿಷಯವನ್ನು ಪ್ರಸ್ತಾಪಿಸಬೇಡಿ, ಅದು ಹಿಂದುಗಳನ್ನು – ಮುಸ್ಲಿಮರನ್ನು ವಿಭಜಿಸುವಂತಹ ವಿಚಾರವಾಗಿದೆ” ಎಂದು ಸ್ನೇಹಿತರು ವಿನಂತಿಸಿದರು. ಸಾವರ್ಕರ್ ಕೇಳುತ್ತಾರೆಯೇ? ಸಮ್ಮೇಳನದಲ್ಲಿ ಅವರು ಮರಾಠಿ ಭಾಷೆಯಲ್ಲಿ ಸೇರಿಕೊಂಡಿರುವ ಉರ್ದು ಪದಗಳನ್ನು ಕೈಬಿಡುವ ತಮ್ಮ ಆಗ್ರಹವನ್ನು ಪುನರುಚ್ಚರಿಸಿದರು. ಸಂಸ್ಕೃತ ಭಾಷಾಧಾರಿತ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಪರಿಗಣಿಸುವಂತೆ ಆಗ್ರಹಿಸಿದರು. ಇಷ್ಟು ಮಾತ್ರ ಹೇಳಿ ಸುಮ್ಮನಾಗುವ ಜೀವವೇ? ತಮ್ಮ ಅಧ್ಯಕ್ಷ ಭಾಷಣದಲ್ಲಿ “ಭಾರತೀಯ ಯುವಕರು ಸಾಹಿತ್ಯವನ್ನು ಸದ್ಯಕ್ಕೆ ನಲವತ್ತು ವರ್ಷ ಮೀರಿರುವವರ ಪಾಲಿಗೆ ಬಿಡಬೇಕು. ಲೇಖನಿಯನ್ನು ಪಕ್ಕಕ್ಕಿಟ್ಟು ಬಂದೂಕನ್ನು ಕೈಗೆತ್ತಿಕೊಳ್ಳಬೇಕು” ಎಂದು ಕರೆಕೊಟ್ಟರು. ಇದು ಬಹಳ ದೊಡ್ಡ ಸುದ್ದಿಯಾಯಿತು. ಸಾಹಿತ್ಯ ಉಳಿಯಬೇಕಾದರೆ, ದೇಶದ ಆತ್ಮ ಉಳಿಯಬೇಕು, ಎನ್ನುವ ಅವರ ಪ್ರತಿಪಾದನೆ ಇಂದಿಗೂ ಪ್ರಸ್ತುತವೇ. ಸಾವರ್ಕರ್ ಈ ಮಾತುಗಳನ್ನಾಡಿ ಎಂಟು ದಶಕಗಳೇ ಉರುಳಿಹೋಗಿವೆ. ಒಂದೊಂದು ಮಾತು, ಒಂದೊಂದು ಪರಿಕಲ್ಪನೆಯೂ ಈಗ ಇನ್ನಷ್ಟು ಮಹತ್ತ್ವಪೂರ್ಣ ಎನ್ನಿಸುತ್ತವೆ.
ಉರ್ದು – ಪರ್ಷಿಯನ್ ಭಾಷೆಗಳ ಭಯಾನಕ ದಾಳಿಯಿಂದ, ದುಷ್ಪ್ರಭಾವದಿಂದ ಬಾಲಿವುಡ್ ಸೇರಿದಂತೆ, ನಮ್ಮ ಸಾಹಿತ್ಯಲೋಕ, ಸಂಗೀತಲೋಕ, ಎಲ್ಲವೂ ಕಲುಷಿತವಾಗಿಹೋಗಿವೆ. ಇಪ್ಪತ್ತು ಸಾವಿರ ವರ್ಷಗಳ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವ ಮತ್ತು ಉಳಿಸಿಕೊಳ್ಳಲೇಬೇಕಾದ ಸಂಕ್ರಮಣ ಸ್ಥಿತಿಯಲ್ಲಿ ನಾವಿದ್ದೇವೆ. ಸಾಮಾನ್ಯಯುಗಪೂರ್ವದ ಆಚಾರ್ಯ ಚಾಣಕ್ಯರ – ಚಂದ್ರಗುಪ್ತನ ಕಾಲದಲ್ಲಿ, ಉರ್ದು ಬಿಡಿ, ಪರ್ಷಿಯನ್ ಭಾಷೆಯೇ ಇರಲಿಲ್ಲ. ಮೂರು ದಶಕಗಳ ಹಿಂದೆ “ಚಾಣಕ್ಯ” ಕಿರುತೆರೆ ಧಾರಾವಾಹಿಯನ್ನು ಅತ್ಯದ್ಭುತವಾಗಿ ನಿರ್ಮಿಸಿದ ಚಂದ್ರಪ್ರಕಾಶ್ ದ್ವಿವೇದಿ ಅವರು ಸಂಸ್ಕೃತ – ಹಿಂದಿ – ಇಂಗ್ಲಿಷ್ ಭಾಷೆಗಳ ಬಹಳ ಒಳ್ಳೆಯ ವಿದ್ವಾಂಸರು. ನಮ್ಮ ಭಾರತೀಯ ಭಾಷೆಗಳ ಮೇಲೆ ಪರ್ಷಿಯನ್ ಭಾಷೆಯ ಅದೆಂತಹ ಭೀಕರ ಆಕ್ರಮಣವಾಗಿದೆ ಎಂದರೆ, ಈ “ಚಾಣಕ್ಯ” ಧಾರಾವಾಹಿಯ ಪಾತ್ರಗಳ ಬಾಯಲ್ಲೂ ಸಂಸ್ಕೃತ ಭೂಯಿಷ್ಠ ಹಿಂದಿಯ ನಡುವೆ, ಪರ್ಷಿಯನ್ ಪದಗಳು – ಪದಪ್ರಯೋಗಗಳು ನುಸುಳಿಬಿಟ್ಟಿವೆ (ಈ ಕುರಿತು ಕಳೆದ ವರ್ಷ ನಾನು ದೊಡ್ಡ ಲೇಖನವನ್ನೇ ಬರೆದೆ). ರಾಮಾಯಣ, ಮಹಾಭಾರತ, ಚಾಣಕ್ಯ ಚಿತ್ರನಾಟಕಗಳ ಪಾತ್ರಗಳು ಪರ್ಷಿಯನ್ ಪದಗಳನ್ನು ಬಳಸುವುದು ಎಂತಹ ಆಭಾಸವೆನಿಸಿಯಾವು!! ಹಾಗೆಂದೇ, ಸಾವರ್ಕರ್ ಅವರ ವಿಚಾರಗಳು ಮತ್ತಷ್ಟು ಮಹತ್ವಪೂರ್ಣ, ಇನ್ನಷ್ಟು ಪ್ರಸ್ತುತ ಎಂದದ್ದು.
ಪುಣ್ಯತಿಥಿಯ ಈ ಹೊತ್ತಿನಲ್ಲಿ, ಸಾವರ್ಕರ್ ಅವರ ಅತ್ಯದ್ಭುತ ಚೇತನಕ್ಕೆ ಮತ್ತೊಮ್ಮೆ ಪ್ರಣಾಮಗಳು.