ನಿಂದಕರಿಗೂ ಸಂಘಟನೆಯ ಕಾರ್ಯದ ಅರಿವಿದೆ: ಆರ್ಎಸ್ಎಸ್ ಸರಸಂಘಚಾಲಕ ಡಾ||ಮೋಹನ್ ಭಾಗವತ್ ಉಪನ್ಯಾಸ
ಬೆಂಗಳೂರು, ನವೆಂಬರ್ 8, 2025: ಸಂಘವನ್ನು ಸಮಾಜವು ಸ್ವೀಕರಿಸಿದೆ. ಅನೇಕರು ಸಂಘವನ್ನು ನಿಂದಿಸುತ್ತಾರಾದರೂ ಅವರಿಗೂ ಸಂಘಟನೆಯ ಕಾರ್ಯದ ನಿಜವಾದ ಅರಿವಿದೆ, ಆದ್ದರಿಂದ ಅವರ ನಿಂದನೆಯು ಕೇವಲ ಬಾಯಿಮಾತಿಗೆ ಸೀಮಿತವಾಗಿದೆ. ಹಾಗಾಗಿ ಇಡೀ ಸಮಾಜದ ಹೃದಯ ಸಂಘದ ಪರವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ತಿಳಿಸಿದರು.
ಆರ್ಎಸ್ಎಸ್ ನೂರನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಎಂಬ ಶೀರ್ಷಿಕೆಯ ಎರಡು ದಿನದ ಉಪನ್ಯಾಸ ಮಾಲೆಯ ಮೊದಲ ದಿನದಂದು ಆಹ್ವಾನಿತ ಸಭಿಕರನ್ನುದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶದಲ್ಲಿದ್ದ ಕೆಲವು ಪರಿಸ್ಥಿತಿಗಳಿಗೆ ಪ್ರತಿಕ್ರಿಯೆಯಾಗಿ ಅಥವಾ ವಿರೋಧವಾಗಿ ರೂಪಿಸಿದ ಸಂಘಟನೆ ಎಂದು ಕೆಲವರು ತಿಳಿದಿದ್ದಾರೆ. ಆದರೆ ಅದು ಸತ್ಯವಲ್ಲ. ಸಂಘವು ಯಾವುದಕ್ಕೂ ಪ್ರತಿಕ್ರಿಯೆಯಾಗಿಯಾಗಲೀ, ವಿರೋಧವಾಗಿಯಾಗಲೀ ಜನ್ಮತಳೆದಿಲ್ಲ. ಇಡೀ ಸಮಾಜವನ್ನು ಸಂಘಟಿಸುವ ಒಂದು ಸಹಜಭಾವನೆಯನ್ನು ಸಂಘವು ಜನ್ಮ ತಾಳಿದೆ ಎಂದು ಆರಂಭದಲ್ಲೇ ಡಾ||ಮೋಹನ್ ಭಾಗವತ್ ಅವರು ಸ್ಪಷ್ಟಪಡಿಸಿದರು.

ಆರ್ಎಸ್ಎಸ್ನ ಸ್ಥಾಪನೆಯ ಹಿನ್ನೆಲೆಯನ್ನು ವಿವರಿಸಿದ ಅವರು, ಅನ್ನು ಸ್ಥಾಪಿಸಿದ ಡಾ. ಕೇಶವ ಬಲಿರಾಮ್ ಹೆಡಗೇವಾರರು, ದೇಶವನ್ನು ಸ್ವತಂತ್ರಗೊಳಿಸಲು ನಡೆದ ಎಲ್ಲ ರೀತಿಯ ಪ್ರಯತ್ನಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ವೈದ್ಯಕೀಯ ವೃತ್ತಿಯ ನಂತರ ದೊರಕಿದ ಉನ್ನತ ವೇತನದ ನೌಕರಿಯ ಜೊತೆಗೆ, ವಿವಾಹವಾಗುವ ಆಲೋಚನೆಯನ್ನೂ ಬದಿಗೊತ್ತಿ ದೇಶಕಾರ್ಯದಲ್ಲಿ ತೊಡಗಿಸಿಕೊಂಡರು. ಸಮಾಜವನ್ನು ಸಂಘಟಿಸಲು ನಮ್ಮ ಪೂರ್ವಜರು ಬಳಸಿದ ಮಾರ್ಗಗಳನ್ನೇ ಅನುಸರಿಸಿ, ಅವುಗಳಲ್ಲಿದ್ದ ನ್ಯೂನತೆಗಳನ್ನು ಹೊರತೆಗೆದ ನಂತರ ಮೂಡಿಬಂದ ಮಾರ್ಗವೇ ಸಂಘ. ಇಡೀ ಸಮಾಜವು ಸಂಘಟಿತವಾಗಬೇಕೆಂದರೆ ತಾನು ರಾಜಕೀಯದಿಂದ ಹೊರಬರಬೇಕು ಎಂದು ‘ರಾಜಕೀಯೇತರ ಸಮಾಜ ಸಂಘಟನೆಯಾಗಿ’ ಆರ್ಎಸ್ಎಸ್ ಅನ್ನು ರೂಪಿಸಿದರು. ಸಂಘವು ಈಗ ಪ್ರಬಲ ಸಂಘಟನೆಯಾಗಿದೆ. ಆದರೆ ಅದರಿಂದ ನಮಗೆ ಸಮಾಧಾನವಿಲ್ಲ. ಸಮಾಜದಲ್ಲಿ ಒಂದು ಸಂಘಟನೆಯಾಗಲ್ಲ, ಇಡೀ ಸಮಾಜವೇ ಪ್ರಬಲವಾಗಿ ಸಂಘಟಿತವಾಗಬೇಕು, ಇಡೀ ಸಮಾಜವೇ ಆರ್ಎಸ್ಎಸ್ ಆಗಬೇಕು ಎನ್ನುವುದು ಸಂಘದ ಉದ್ದೇಶ ಎಂದರು.
ವ್ಯಕ್ತಿಯು ಕೇವಲ ತನ್ನಷ್ಟಕ್ಕೆ ತಾನು ಉನ್ನತ ವ್ಯಕ್ತಿತ್ವ ಹೊಂದಿದ್ದರೆ ಪ್ರಯೋಜನವಿಲ್ಲ. ಸಂಘದ ಪ್ರಾರ್ಥನೆಯಲ್ಲಿ ಮೊದಲಿಗೆ ಹಾಗೂ ಕೊನೆಯಲ್ಲೂ ಸ್ಮರಿಸುವುದನ್ನು ಭಾರತಮಾತೆಯನ್ನೆ. ನಮ್ಮಲ್ಲಿರುವ ಎಲ್ಲಾ ಭಿನ್ನಭಾವ, ಕೊರತೆಗಳನ್ನೂ ಮರೆತು ರಾಷ್ಟ್ರಕ್ಕಾಗಿ ಒಮ್ಮನಸ್ಸಿನಿಂದ ಕೆಲಸ ಮಾಡುವುದನ್ನು ಶಾಖೆಯಲ್ಲಿ ಕಲಿಸಲಾಗುತ್ತದೆ. ಹೆಡಗೇವಾರರು ಭ್ರಮೆಗೆ ಒಳಗಾಗಿದ್ದಾರೆ ಎಂದು ಸಂಘವನ್ನು ಆರಂಭಿಸಿದಾಗ ಕೆಲವರು ತಿಳಿಸಿದರು. ಆದರೆ ಇಂದು ಸಂಘವು ಪ್ರಬಲ ಶಕ್ತಿಯಾಗಿದೆ ಎಂದು ಸಮಾಜವೇ ಹೇಳುತ್ತಿದೆ. ಕೆಲವರು ಸಂಘದ ವಿರೋಧವನ್ನೂ, ನಿಂದನೆಯನ್ನೂ ಮಾಡುತ್ತಾರೆ. ಆದರೆ ಅವರ ನಿಂದನೆಯು ಬಾಯಿಮಾತಿನಿಂದ ಬರುತ್ತಿದೆಯೇ ಹೊರತು ಹೃದಯದಿಂದಲ್ಲ. ಏಕೆಂದರೆ ನಮ್ಮ ವಿರೋಧಿಗಳಿಗೂ ಸಂಘವು ಏನೆಂದು ಗೊತ್ತಿದೆ. ಹಾಗಾಗಿ ಸಮಾಜದ ಹೃದಯ ನಮ್ಮೊಂದಿಗಿದೆ ಎಂದರು.
ಭಾರತದಲ್ಲಿ ಅಹಿಂದೂಗಳಿಲ್ಲ

ಭಾರತದಲ್ಲಿರುವವರೆಲ್ಲರೂ ತಮ್ಮ ಜಾತಿ, ಮತ, ಸಂಪ್ರದಾಯವನ್ನು ಮೀರಿ ಹಿಂದೂಗಳೇ ಎಂದು ಡಾ||ಮೋಹನ್ ಭಾಗವತ್ ಅವರು ಪ್ರತಿಪಾದಿಸಿದರು. ನಮ್ಮ ದೇಶದಲ್ಲಿ ನಾಲ್ಕು ರೀತಿಯ ಹಿಂದೂಗಳಿದ್ದಾರೆ. 1. ತಮ್ಮನ್ನು ತಾವು ಹೆಮ್ಮೆಯಿಂದ ಹಿಂದೂಗಳು ಎಂದು ಹೇಳಿಕೊಳ್ಳುವರು. 2. ತಾವು ಹಿಂದೂಗಳು, ಅದರಲ್ಲಿ ಹೆಮ್ಮೆ ಎನ್ನಿಸುವಂಥದ್ದು ಏನಿದೆ ಎಂದು ಹೇಳುವವರು. 3. ತಾವು ಹಿಂದೂಗಳು ಎನ್ನುವುದು ಗೊತ್ತಿದೆ, ಮನೆಯಲ್ಲಿ ಆಚರಣೆಯೂ ಇದೆ, ಆದರೆ ವಿಭಿನ್ನ ಕಾರಣಗಳಿಗಾಗಿ ಬಹಿರಂಗವಾಗಿ ಹೇಳುವುದಿಲ್ಲ ಎನ್ನುವವರು. 4. ತಾವು ಹಿಂದೂಗಳು ಎನ್ನುವುದನ್ನೇ ಮರೆತವರು. ಭಾರತದ ಎಲ್ಲ ಮುಸ್ಲಿಂ, ಕ್ರೈಸ್ತರ ಪೂರ್ವಜನರೂ ಹಿಂದೂಗಳೇ. ಇಂದಿಗೂ ಕೆಲವು ಕ್ರೈಸ್ತ, ಮುಸ್ಲಿಮರೂ ತಮ್ಮ ಗೋತ್ರವನ್ನು ಹೇಳುತ್ತಾರೆ. ಆದರೆ ಅವರು ಅದನ್ನು ಮರೆತಿದ್ದಾರೆ ಅಷ್ಟೆ. ಇವರು 4ನೇ ಗುಂಪಿಗೆ ಸೇರಿದವರು. ಹಾಗಾಗಿ ಇಡೀ ಭಾರತದಲ್ಲಿ ಅಹಿಂದೂ ಎನ್ನುವವರು ಯಾರೂ ಇಲ್ಲ. ಇದು ಹಿಂದೂ ರಾಷ್ಟ್ರ ಎನ್ನುವುದರಲ್ಲೂ ಅನುಮಾನವಿಲ್ಲ. ಇದನ್ನು ಎಲ್ಲರಿಗೂ ನೆನಪಿಸುವುದು ಸಮಾಜದ ಸಂಘಟನೆಯ ಕಾರ್ಯ. ಈ ಕಾರ್ಯವು ಇಂದಿನ ಯಾವುದೇ ಕಾರ್ಯಕ್ಕೆ ವಿರುದ್ಧವಲ್ಲ ಎಂದರು.
ಸಂಪೂರ್ಣ ಸ್ವಾವಲಂಬಿ ಸಂಘಟನೆ
ಆರ್ಎಸ್ಎಸ್ ಎದುರಿಸಿದಷ್ಟು ಸಾಮಾಜಿಕ ಪ್ರತಿರೋಧವನ್ನು ಇಡೀ ಪ್ರಪಂಚದ ಇತಿಹಾಸದಲ್ಲಿ ಇನ್ನೊಂದು ಸಂಘಟನೆ ಎದುರಿಸಿಲ್ಲ ಎಂದ ಮೋಹನ್ ಭಾಗವತ್ ಅವರು, ಮೂರು ಬಾರಿ ನಿಷೇಧ, ಸ್ವಯಂಸೇವಕರ ಕೊಲೆ, ವಿರೋಧ… ಎಲ್ಲವನ್ನೂ ಕಂಡ ಸ್ವಯಂಸೇವಕರು ಯಾವುದಕ್ಕೂ ನಕಾರಾತ್ಮಕವಾಗಿ ಪ್ರತಿಕ್ರಿಯಿಸದೆ ಮುಂದುವರಿದಿದ್ದರಿಂದ ಸಂಘಟನೆ ಬೆಳೆದಿದೆ. ಸಂಘವು ಹಣಕಾಸಿಗಾಗಿ ಹೊರಗಿನಿಂದ ಯಾರಿಂದಲೂ, ಒಂದು ರೂಪಾಯಿಯ ಸಹಾಯವನ್ನೂ ಪಡೆಯುವುದಿಲ್ಲ. ಸ್ವಯಂಸೇವಕರು ನೀಡುವ ಗುರುದಕ್ಷಿಣೆಯಿಂದಲೇ ಸಂಘಟನೆ ನಡೆಯುತ್ತದೆ. ನಮಗೆ ಬೇಕಾದ ಕಾರ್ಯಕರ್ತರನ್ನು ಹೊರಗಿನಿಂದ ಪಡೆಯದೆ, ನಾವೇ ಸಿದ್ಧಪಡಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಸಂಘವು ತನ್ನ ಕಾರ್ಯಚಟುವಟಿಕೆಯಲ್ಲಿ ಸ್ವಾವಲಂಬಿಯಾಗಿದೆ. ಇದೇ ಕಾರಣದಿಂದ ಸಂಘಕ್ಕೆ ಸರಿ ಎನ್ನಿಸಿದ್ದನ್ನು ಯಾವ ಹಂಗೂ ಇಲ್ಲದೆ ಮುಕ್ತವಾಗಿ ಮಾತನಾಡಬಲ್ಲೆವು ಎಂದರು.
ವ್ಯಕ್ತಿವಾದದಿಂದ ಅಪಾಯ ಹೆಚ್ಚಳ
ಇಂದು ಸಮಾಜದಲ್ಲಿ ವ್ಯಕ್ತಿವಾದದಿಂದ ಅನೇಕ ಸಮಸ್ಯೆಗಳು ತಲೆದೋರುತ್ತಿವೆ ಎಂದು ಮೋಹನ್ ಭಾಗವತ್ ಅವರು ಅಭಿಪ್ರಾಯಪಟ್ಟರು. ಇಂದು ವಿಜ್ಞಾನವು ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಒಂದೆಡೆ ಸೌರಮಂಡಲದಾಚೆಗೂ ಇನ್ನೊಂದೆಡೆ ಕಣದಾಚೆಗೂ ಮಾನವ ಹೋಗಬಲ್ಲ. ಆರೋಗ್ಯ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿದೆ, ಇದರಿಂದ ಜನರಿಗೆ ಅನುಕೂಲವಾಗುತ್ತಿದೆ. ಇಂತಹ ಕಾರ್ಯಗಳಿಂದ ಹಳೆಯ ಸಮಸ್ಯೆಗಳು ಬಗೆಹರಿದಿವೆಯಾದರೂ, ಹೊಸ ಸಮಸ್ಯೆಗಳೂ ತಲೆದೋರುತ್ತಿವೆ. ಮನುಷ್ಯನ ಎಲ್ಲ ಪ್ರಯತ್ನಗಳೂ, ಸುಖವನ್ನು ಹೆಚ್ಚಿಸುವ ಸಲುವಾಗಿದೆ. ಆದರೆ ಕಳೆದ ಎರಡು ಸಾವಿರ ವರ್ಷಗಳಲ್ಲಿ ಸುಖವನ್ನು ಹೆಚ್ಚಿಸಲು ನಡೆದ ಎಲ್ಲ ಪ್ರಯೋಗಗಳಿಂದಲೂ ಕೆಲವು ಪ್ರಯೋಜನಗಳಾಗಿವೆಯಾದರೂ ಸಂಪೂರ್ಣ ಸಫಲವಾಗಿಲ್ಲ. ಭೌತಿಕವಾದವು ಕೇವಲ ಕಾನೂನು ರೂಪಿಸಬಹುದೇ ಹೊರತು ಧರ್ಮ ಮಾರ್ಗದಲ್ಲಿ ಜೀವಿಸುವ ಸನ್ನಿವೇಶ ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಭಾರತವು ಮೊದಲಿಗೆ ತನ್ನನ್ನು ತಾನು ಧರ್ಮ ಮಾರ್ಗದಲ್ಲಿ ಪುನರುತ್ಥಾನಗೊಳಿಸುತ್ತ, ಇಡೀ ವಿಶ್ವದ ಎಲ್ಲ ದೇಶಗಳೂ ತಮ್ಮ ಧರ್ಮ ಮಾರ್ಗದಲ್ಲಿ ಪುನರುತ್ಥಾನಗೊಳ್ಳಲು ಬೆಳಕು ನೀಡಬೇಕಾಗಿದೆ ಎಂದರು.

ಶತಮಾನದ ವರ್ಷದ ಯೋಜನೆಗಳು
• ಸಮಾಜಕ್ಕಾಗಿ ಒಳಿತನ್ನು ಬಯಸುವ, ಅದಕ್ಕಾಗಿ ತಮ್ಮಿಂದ ಏನಾದರೂ ಮಾಡಬೇಕು ಎಂದು ಬಯಸುವ ಸಜ್ಜನ ಶಕ್ತಿಯ ಸಹಯೋಗ ಪಡೆಯುವುದು. ಸಮಾಜದಲ್ಲಿ ಧನಾತ್ಮಕತೆಯನ್ನು ಮೂಡಿಸಲು ಸಜ್ಜನಶಕ್ತಿಯ ಜಾಲವನ್ನು ರೂಪಿಸುವುದು.
• ಯಾವ ಬೆಳಕಿನಲ್ಲಿ ಭಾರತವು ಪುನರುತ್ಥಾನಗೊಳ್ಳಬೇಕು, ಅದಕ್ಕೆ ಅನುಸರಿಸಬೇಕಾದ ಮಾರ್ಗಗಳೇನು ಎನ್ನುವ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಸಂವಾದ, ಚರ್ಚೆಯ ಆಯೋಜನೆ. ವಸಾಹತುಶಾಹಿ ಮಾನಸಿಕತೆಯಿಂದ ಹೊರಬಂದು ಸಮಗ್ರವಾಗಿ ಆಲೋಚಿಸುವಂತೆ ಜಾಗೃತಿ ಮೂಡಿಸುವುದು.
• ಇಂದಿನ ಸಂದರ್ಭಕ್ಕೆ ಹೊಂದಿಕೆಯಾಘುವ, ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವಿಚಾರಗಳನ್ನು ಭಾರತದ ಪ್ರಾಚೀನ ಜ್ಞಾನಭಂಡಾರದಿಂದ ಹೊರತೆಗೆದು ಪ್ರಸ್ತುತಗೊಳಿಸುವುದು. ಭಾರತೀಯ ಜ್ಞಾನ ಪರಂಪರೆ ಚಟುವಟಿಕೆಗೆ ಪ್ರೋತ್ಸಾಹ.
• ಸಮಾಜದಲ್ಲಿ ವಿವಿಧ ಜಾತಿ ನಾಯಕರ ನಡುವೆ ಸದ್ಭಾವನೆಯನ್ನು ರೂಪಿಸಲು ಸದ್ಭಾವನಾ ಕಾರ್ಯದ ಆಯೋಜನೆ. ಪ್ರತಿ ತಿಂಗಳು ವಿವಿಧ ಜಾತಿ ಸಮುದಾಯದ ನಾಯಕರು ಒಂದೆಡೆ ಸೇರಿ, 1. ಸಮುದಾಯದ ಉನ್ನತೀಕರಣಕ್ಕೆ ನಡೆಯುತ್ತಿರುವ ಕ್ರಮಗಳೇನು ಎನ್ನುವುದನ್ನು ಇತರರಿಗೆ ತಿಳಿಸುವುದು. 2. ಸಮಾಜದಲ್ಲಿನ ಒಂದು ಸಮಸ್ಯೆಯನ್ನು ಪರಿಹರಿಸಲು ಅಥವಾ ಒಂದು ಅವಶ್ಯಕತೆಯನ್ನು ಪೂರೈಸಲು ಎಲ್ಲರೂ ಸೇರಿ ಏನು ಮಾಡಬಹುದು ಎಂದು ಆಲೋಚಿಸುವುದು. 3. ಎಲ್ಲರೂ ಒಟ್ಟಿಗೆ ಸೇರಿ, ನಮ್ಮ ಗುಂಪಿನಲ್ಲಿರುವ ದುರ್ಬಲ ಜಾತಿಯ ಒಳಿತಿಗೆ ಏನು ಮಾಡಬಹುದು ಎಂದು ಆಲೋಚಿಸುವುದು. ತಾಲೂಕು ಮಟ್ಟದಲ್ಲಿ ಈ ಕಾರ್ಯದ ಆಯೋಜನೆ.
• ಹಿಂದೂ ಮತ್ತು ಮುಸ್ಲಿಂ ಸಮಾಜದ ನಡುವೆ ಬ್ರಿಟಿಷರ ಕಾಲದಿಂದ ಹೆಚ್ಚಿದ ಕಂದಕವನ್ನು ಕಡಿಮೆಗೊಳಿಸಲು ಸಂವಾದ ನಡೆಸಲಾಗುತ್ತದೆ. ದೇವರ ಮೇಲಿನ ನಂಬಿಕೆಯಲ್ಲಿ ಭಿನ್ನತೆಯ ನಡುವೆಯೂ ರಾಷ್ಟ್ರವು ಎಲ್ಲರನ್ನೂ ಒಳಗೊಳ್ಳಬಹುದು ಎನ್ನುವ ವಿಚಾರವು ಸಮಾಜದ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡುವುದು.
• ಧರ್ಮದ ಮಾರ್ಗದಲ್ಲಿ ನಡೆದು ನಿರ್ಮಾಣವಾದ ಗ್ರಾಮ, ಕುಟುಂಬ, ಸಮಾಜದ ಮಾದರಿಗಳ ಸಂಖ್ಯೆಯನ್ನು ಹೆಚ್ಚಿಸುವುದು. ಇದಕ್ಕಾಗಿ ಸೇವಾ ಸಂಗಮಗಳನ್ನು ಆಯೋಜಿಸಿ, ಪರಸ್ಪರರ ಒಳ್ಳೆಯ ಕಾರ್ಯಗಳನ್ನು ಹಂಚಿಕೊಳ್ಳುವಂತೆ ಮಾಡುವುದು.
• ಭಾರತವು ತನ್ನೊಳಗಿನ ದೋಷಗಳನ್ನು ನಿವಾರಿಸಿಕೊಂಡು ಮೇಲೇಳಬೇಕು. ಅದರ ಮಾದರಿಯನ್ನು ವಿಶ್ವದ ಇತರೆ ದೇಶಗಳ ಮುಂದಿಟ್ಟು ಆ ದೇಶಗಳು ತಮ್ಮತನದ ಆಧಾರದಲ್ಲಿ ಮೇಲೇಳುವಂತೆ ಪ್ರೇರೇಪಿಸುವುದು. ಇದಕ್ಕಾಗಿ ಜಾಗತಿಕ ಸಂವಾದಗಳನ್ನು ನಡೆಸಲಾಗುತ್ತದೆ.
ಹಿಂದೂ ಭಾವನೆಯನ್ನು ಮರೆತಾಗಲೆಲ್ಲ ಭಾರತವು ಒಡೆದಿದೆ, ಕುಟುಂಬಗಳು ವಿಭಜನೆಯಾಗಿವೆ. ಹಿಂದೂ ಎಂದು ಕರೆಯಲು ಇಷ್ಟವಿಲ್ಲದಿದ್ದರೆ ಭಾರತ, ಇಂಡಿಕ್… ಯಾವ ಹೆಸರಿನಿಂದಲಾದರೂ ಕರೆಯಿರಿ. ಆದರೆ ಒಂದು ರಾಷ್ಟ್ರವಾಗಿ ಆಲೋಚಿಸಬೇಕಾಗಿದೆ. ಸಮಾಜದಲ್ಲಿ ವಿವಿಧ ಸೇವಾ ಚಟುವಟಿಕೆಗಳಲ್ಲಿ, ಸತ್ಕಾರ್ಯದಲ್ಲಿ ತೊಡಗಿರುವ ಸಜ್ಜನಶಕ್ತಿಯು ನಮ್ಮ ಜೊತೆಗೆ ಕೈಜೋಡಿಸಬಹುದು. ಪರೋಕ್ಷವಾಗಿಯೂ ನಮಗೆ ಸಹಕರಿಸಬಹುದು. ತಮ್ಮಷ್ಟಕ್ಕೆ ತಾವೇ ಸಮಾಜಕ್ಕೆ ಏನಾದರೂ ಒಳಿತನ್ನು ಮಾಡುತ್ತ ಮುಂದುವರಿಯಬಹುದು. ಸಮಾಜಕ್ಕೆ ಯಾವುದೇ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದಾದರೆ, ಅವರು ನಮ್ಮ ಜೊತೆಗೆ ಸೇರದೇ ಇದ್ದರೂ ನಮ್ಮ ಕೆಲಸದ ಭಾಗವೇ ಆಗಿದ್ದಾರೆ ಎಂದೇ ಅರ್ಥ. ಎಲ್ಲರೂ ಗಣವೇಶವನ್ನು ಧರಿಸಬೇಕು ಎಂದು ಸಂಘವು ಬಯಸುವುದಿಲ್ಲ. ದೇಶದಲ್ಲಿ ಒಂದು ಧನಾತ್ಮಕ ವಾತಾವರಣ ನಿರ್ಮಾಣ ಆಗಬೇಕೆಂಬುದು ನಿರೀಕ್ಷೆ. ಮುಂದಿನ ಕೆಲವು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಅಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತೇವೆ ಎಂಬ ಆಶಯವಿದೆ. ಸಂಘವು ಆರಂಭವಾಗಿ ನೂರು ವರ್ಷ ಪೂರೈಸಿದರೂ ಕೆಲವರಲ್ಲಿ ಪೂರ್ಣ ನಿಖರ ಮಾಹಿತಿ ಇಲ್ಲ. ಆ ರೀತಿಯಾಗಿ ಸರಿಯಾದ ಮಾಹಿತಿಯನ್ನು ನೀಡುವ ಸಲುವಾಗಿ ಈ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯಾರನ್ನೂ ನಮ್ಮ ಪರವಾಗಿ ಮನವೊಲಿಸುವುದು ನಮ್ಮ ಉದ್ದೇಶವಲ್ಲ. ಸರಿಯಾದ ಮಾಹಿತಿಯ ಆಧಾರದಲ್ಲಿ ಸಂಘದ ಕುರಿತು ಪರವಾದ ಅಥವಾ ವಿರುದ್ಧವಾದ ನಿಲುವನ್ನು ತಳೆಯಬಹುದು ಎಂದು ಭಾಗವತ್ ಹೇಳಿದರು.

ವೇದಿಕೆಯಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ಡಾ. ಪಿ. ವಾಮನ್ ಶೆಣೈ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಸರಕಾರ್ಯವಾಹ ಮುಕುಂದ ಸಿ.ಆರ್., ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಢೆ, ಅಖಿಲ ಭಾರತೀಯ ಸಂಪರ್ಕ ಪ್ರಮುಖ್ ರಾಮಲಾಲ್, ಸಹಸಂಪರ್ಕಪ್ರಮುಖರಾದ ರಮೇಶ್ ಪಪ್ಪಾ, ಭರತ್ ಭೂಷಣ್, ಸುನೀಲ್ ದೇಶಪಾಂಡೆ, ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಸಹಪ್ರಚಾರ ಪ್ರಮುಖರಾದ ಪ್ರದೀಪ್ ಜೋಷಿ, ನರೇಂದ್ರ ಕುಮಾರ್, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಸುಧೀರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
