ಆರ್ ಎಸ್ ಎಸ್ ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ ಅವರ ಪತ್ರಿಕಾಗೋಷ್ಠಿ.

ಮಥುರಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ನ ಸಮಾರೋಪ ಸಮಾರಂಭದ ದಿನ ಆರ್ ಎಸ್ ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಸಂಘವು ಪ್ರಸಕ್ತ ವರ್ಷ ಶತಮಾನೋತ್ಸವ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಮುಂದಿನ ವರ್ಷದ ವಿಜಯದಶಮಿ ನಂತರ ದೇಶಾದ್ಯಂತ ಶತಮಾನೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ದೇಶಾದ್ಯಂತ ಸಂಘದ ಶಾಖೆಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಸುಮಾರು 3626 ಹೆಚ್ಚಳವಾಗಿದ್ದು , 45411 ಸ್ಥಾನಗಳಲ್ಲಿ ಸುಮಾರು 72354 ಸಂಘದ ಶಾಖೆಗಳು ನಡೆಯುತ್ತಿವೆ. ಈ ವರ್ಷ ದೇಶಾದ್ಯಂತ ಸರಿ ಸುಮಾರು 6600ಕ್ಕೂ ಹೆಚ್ಚು ಶಾಖೆಗಳ ಹೆಚ್ಚಳವಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಪರಿವಾರದೊಂದಿಗೆ, ನೆರೆಹೊರೆಯವರೊಂದಿಗೆ ಕೈಗೂಡಿಸಿದಾಗ ಮಾತ್ರ ಸಮಾಜ ಪರಿವರ್ತನೆ ಸಾಧ್ಯ. ಯಾವುದೇ ನೈಸರ್ಗಿಕ ವಿಕೋಪವಿರಲಿ, ಸಂಕಷ್ಟದ ಸಮಯದಲ್ಲಿ ಸಂಘದ ಕಾರ್ಯಕರ್ತರು ಸದಾ ಕಾರ್ಯನಿರತರಾಗಿದ್ದು ತೊಂದರೆಗೀಡಾದ ಪ್ರದೇಶಗಳ ಜನರಿಗೆ ನೆರವಿನ ಹಸ್ತ ಚಾಚುತ್ತಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ತಾರಕೇಶ್ವರ ನದಿಯಲ್ಲಿ ಪ್ರವಾಹದಿಂದ ತೊಂದರೆಗೀಡಾದ 25 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕಾರ್ಯವನ್ನು ಸಂಘದ ಕಾರ್ಯಕರ್ತರು ಮಾಡಿದ್ದಾರೆ. ಹಾಗೆಯೇ, ಒಡಿಶಾದ ಚಂಡಮಾರುತ, ಕೇರಳದ ವಯನಾಡ್ ನಲ್ಲಿ ಭೂಕುಸಿತ ಉಂಟಾದಾಗ ಸರಿಸುಮಾರು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಹಾರ ವ್ಯವಸ್ಥೆ, ಆರೋಗ್ಯ ತಪಾಸಣೆಯಂತಹ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹಿಂದೂ ಮುಸ್ಲಿಂ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜವನ್ನು ಒಂದುಗೂಡಿಸಿ, ಸುರಕ್ಷಿತವಾಗಿಸುವಲ್ಲಿ ಸಂಘದ ಪಾತ್ರವು ಅಧಿಕವಾಗಿದೆ. ಯುವಜನರಲ್ಲಿ ಮಾದಕ ವಸ್ತು ಸೇವನೆ ಅಧಿಕವಾಗಿದ್ದು, ಮಾದಕ ವಸ್ತುಗಳನ್ನು ತಡೆಗಟ್ಟುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಯುವಜನರು ಅದರತ್ತ ಆಕರ್ಷಿತವಾಗದಂತೆ ನೋಡಿಕೊಳ್ಳುವುದು ಪ್ರತಿಯೊಂದು ಕುಟುಂಬದವರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಹಿಂದುಳಿದವರನ್ನು ಮೇಲೆತ್ತುವುದು, ಅವರಿಗೆ ಶಿಕ್ಷಣ, ಉದ್ಯೋಗ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಸಮಾಜದಲ್ಲಿ ಸಾಮರಸ್ಯತೆ, ಭಾವೈಕ್ಯತೆಯನ್ನು ಉಂಟುಮಾಡುವಲ್ಲಿ ಸಂಘವು ಪ್ರಮುಖ ಪಾತ್ರ ವಹಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ತೊಡಗಿಸಿಕೊಂಡಿದ್ಧು ಅದರಿಂದ ಅರಿವಿನ ಜತೆ ಜತೆಗೆ, ಮನದ ಸ್ವಾಸ್ಥ್ಯವನ್ನು ಹದಗೆಡಿಸುವ ಕಾರ್ಯಗಳೂ ಆಗುತ್ತಿದ್ದು ಇದರ ನಿಯಂತ್ರಣ ಅಗತ್ಯ. ಇದರ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಾರ್ಯನಿರತವಾಗಿದೆ ಎಂದು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ತಿಳಿಸಿದರು.

ದೇಶದಲ್ಲಿ ಗಣೇಶ ಮತ್ತು ದುರ್ಗಾಪೂಜೆಯ ಸಂದರ್ಭದಲ್ಲಿ ಹಲ್ಲೆಗಳಾಗುತ್ತಿದ್ದು, ಹಿಂದೂ ಸಮಾಜವು ತಮ್ಮ ರಕ್ಷಣೆಯ ಜತೆಜತೆಗೆ ಸ್ವಾಭಿಮಾನಿ ಸಮಾಜವಾಗಿ ನಿರ್ಮಾಣವಾಗುವುದಕ್ಕೆ, ಶಾಂತಿಯುತ ಸಮಾಜವಾಗಿ ನಿರ್ಮಾಣವಾಗುವುದಕ್ಕೆ ಸಂಘವು ತೊಡಗಿಸಿಕೊಂಡಿದೆ. ಸಮಾಜದಲ್ಲಿನ ಸವಾಲುಗಳನ್ನು ಎದುರಿಸಿ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಸಂಘವು ಕಾರ್ಯ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದರು.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸರಕಾರ್ಯವಾಹರು, ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ಸಮಾಜದ ಹಿತವನ್ನು ಗಮನದಲ್ಲಿರಿಸಿಕೊಂಡು ಕಾನೂನು ತರುವ ಅವಶ್ಯಕತೆ ಇದೆ. ಸಮಾಜದ ಪ್ರತಿಯೊಬ್ಬರೂ ತಮ್ಮ ಮುಂದಿನ ಪೀಳಿಗೆ ಉತ್ತಮವಾಗಿ ಜೀವನ ನಿರ್ವಹಿಸಬೇಕು, ಮಾದಕ ವಸ್ತುವಿನ ಸೇವನೆಯಿಂದ ದೂರವಿರಬೇಕು ಎಂಬ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಬಾಂಗ್ಲಾ ದಂಗೆಯ ಸಂದರ್ಭದಲ್ಲಿ ಭಾರತ ಸರ್ಕಾರವು ಹಿಂದೂ ಸಮಾಜದ ಜತೆಜತೆಗೆ ಅಲ್ಪಸಂಖ್ಯಾತರನ್ನೂ ರಕ್ಷಿಸುವ ಕಾರ್ಯ ಮಾಡಿದೆ. ವಿಶ್ವದ ಎಲ್ಲೇ ಆದರೂ ಹಿಂದೂ ಸಮಾಜಕ್ಕೆ ಧಕ್ಕೆಯಾದರೆ ಅವರ ರಕ್ಷಣೆಗೆ ಭಾರತ ಬದ್ಧವಾಗಿದೆ ಎಂದು ತಿಳಿಸಿದರು.
ಹಿಂದೂ ಸಮಾಜವು ಸದಾ ಒಂದಾಗಿರಬೇಕು, ಜಾತಿ, ಭಾಷೆ, ಪ್ರದೇಶದ ಭೇದ ಮಾಡಿದರೆ ನಾವು ಒಂದಾಗಿರಲು ಸಾಧ್ಯವಿಲ್ಲ. ಏಕತೆಯಿಂದ ಇದ್ದರಷ್ಟೆ ಬಲಿಷ್ಠವಾಗಿರಲು ಸಾಧ್ಯ. ಹಿಂದೂಗಳನ್ನು ವಿಭಜಿಸುವವರ ವಿರುದ್ಧ ಎಲ್ಲರೂ ಎಚ್ಚರದಿಂದ ಇರಬೇಕು ಎಂದೂ ಅವರು ಹೇಳಿದರು.

ಲವ್ ಜಿಹಾದ್ ವಿಷಯದ ಬಗ್ಗೆ ಮಾತನಾಡಿದ ದತ್ತಾತ್ರೇಯ ಹೊಸಬಾಳೆ ಅವರು, ಇದರಿಂದ ಸಮಾಜದಲ್ಲಿ ಸಮಸ್ಯೆ ಉಂಟಾಗಿದೆ. ಯುವತಿಯರಲ್ಲಿ ಲವ್ ಜಿಹಾದ್ ವಿಷಯದ ಬಗ್ಗೆ ಜಾಗರೂಕತೆ ಮೂಡಿಸಬೇಕು. ನಮ್ಮ ಸಮಾಜದ ಹೆಣ್ಣುಮಕ್ಕಳ ರಕ್ಷಣೆ ನಮ್ಮ ಗುರಿಯಾಗಬೇಕು, ಲವ್ ಜಿಹಾದ್ ಗೆ ಯುವತಿಯರು ಬಲಿಯಾಗದಂತೆ ಅವರಲ್ಲಿ ಜಾಗೃತಿ ಮೂಡಿಸಬೇಕು. ಕೇರಳದಲ್ಲಿ ಸುಮಾರು 200 ಯುವತಿಯರನ್ನು ರಕ್ಷಿಸಲಾಗಿದೆ. ರಕ್ಷಿಸಲಾದ ಯುವತಿಯರ ಪುನರ್ವಾಸಕ್ಕಾಗಿ ಸಂಘವು ಕಾರ್ಯನಿರ್ವಹಿಸುತ್ತಿದೆ. ಮತಾಂತರದ ವಿಷಯದಲ್ಲಿ ಮಹಾತ್ಮಾಗಾಂಧಿ ಹಾಗೂ ವಿವೇಕಾನಂದರು ಹಿಂದೂ ಸಮಾಜವನ್ನು ಎಚ್ಚರಿಸಿದ್ದಾರೆ. ಸಮಾಜದಲ್ಲಿ ಬಡತನ, ಅಸ್ಪೃಷ್ಯತೆಯು ಮತಾಂತರಕ್ಕೆ ಕಾರಣವಾಗುತ್ತಿದ್ದು, ಅವರುಗಳಿಗೆ ಶಿಕ್ಷಣ, ಸಮಾನತೆ, ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಅವರೊಂದಿಗೆ ತಾವಿದ್ದೇವೆ ಎಂದು ಅರಿವು ಮೂಡಿಸುವ ಮೂಲಕ ಮತಾಂತರವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ನಮ್ಮ ಭಾಷೆ, ಸಂಸ್ಕೃತಿ, ನಮ್ಮ ವೇಷ ಭೂಷಣ, ಆಧುನಿಕತೆಯ ಹೆಸರಿನಲ್ಲಿ ನಮ್ಮನ್ನು ನಾವು ಮರೆಯಬಾರದು. ಸ್ವದೇಶಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಭಾರತೀಯ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ ಹೊಸಬಾಳೆ ಅವರು, ಭಾರತದ ಜ್ಞಾನ ಪರಂಪರೆಯ ಬಗ್ಗೆ ಸಾವಿರಾರು ಸಂಶೋಧನೆಗಳು ನಡೆಯುತ್ತಿವೆ. ಇದು ಕೂಡಾ ನಮ್ಮತನದ ಬಗ್ಗೆಯೇ ತಿಳಿಸುತ್ತದೆ. ವಿವೇಕಾನಂದರು, ನಿವೇದಿತಾ ಅವರು, ರವೀಂದ್ರನಾಥ್ ಟಾಗೋರ್ ಅವರೂ ಕೂಡಾ ಈ “ಸ್ವ” ವಿಷಯದ ಬಗ್ಗೆ ಯಾವ ಯಾವ ವಿಷಯದಲ್ಲಿ ನಮ್ಮ” ಸ್ವ” ಅಭಿಮಾನ ಮೂಡಬಲ್ಲದು ಎಂಬುದನ್ನು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ವಕ್ಫ್ ಭೂಮಿಯ ವಿಷಯದ ಬಗ್ಗೆ ಮಾತನಾಡಿದ ಅವರು, ಬಹುತೇಕ ಮುಸ್ಲಿಂ ಸಮುದಾಯದವರೂ ಕೂಡಾ ಈ ವಕ್ಫ್ ಮಂಡಳಿಯಿಂದ ತೊಂದರೆ ಅನುಭವಿಸಿದ್ದು, ಜಂಟೀ ಸಂಸದೀಯ ಮಂಡಳಿಯು ಈ ವಿಷಯದ ಬಗ್ಗೆ ತನ್ನ ವರದಿ ನೀಡಲಿದ್ದು ದೇಶದ ಜನರ ಆಶಯಗಳಿಗೆ ಅನುಗುಣವಾಗಿ ಕಾನೂನಿನಲ್ಲಿ ಸಂಶೋಧನೆ ತರುವ ಬಗ್ಗೆ ಮುಂಬರುವ ಸಂಸತ್ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬಹುದು ಎಂದು ತಿಳಿಸಿದರು.

2025ರ ಮಾರ್ಚನಲ್ಲಿ ಬೆಂಗಳೂರಿನಲ್ಲಿ ಪ್ರತಿನಿಧಿ ಸಭೆಯ ಬೈಠಕ್ ಆಯೋಜನೆಯಾಗಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ದತ್ತಾತ್ರೇಯ ಹೊಸಬಾಳೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ದೇಶದ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ಕೋರಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.